ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ಆಗಸ್ಟ್ 21, 2010

ಸೇವಾ ಪುರಾಣ -೧೫: ಸರಳುಗಳ ಹಿಂದಿನ ಲೋಕ -೮: ಕ್ರಿಮಿನಲ್ ಗಳು ತಯಾರಾಗುವ ಕಾರ್ಖಾನೆ

ತಂದೆಯ ನೌಕರಿಗೂ ಬಂದಿದ್ದ ಕುತ್ತು
     ನಮ್ಮನ್ನು ಆರೋಪಗಳಿಂದ ಮುಕ್ತಗೊಳಿಸಿ ಆದೇಶಿಸಿದ್ದ ಪ್ರಥಮ ದರ್ಜೆ ಮುಖ್ಯನ್ಯಾಯಿಕ ದಂಡಾಧಿಕಾರಿಯವರಾಗಿದ್ದ ಶ್ರೀ ಎಸ್.ಆರ್.ಪುರಾಣಿಕ್ ರವರು ವರ್ಗಾವಣೆ ಹೊಂದಿ ಅವರ ಸ್ಥಾನಕ್ಕೆ ಬೇರೊಬ್ಬರು ನ್ಯಾಯಾಧೀಶರಾಗಿ ಬಂದಿದ್ದರು.ಅವರು ನನ್ನ ಮೇಲಿದ್ದ ಹಲವಾರು ಪ್ರಕರಣಗಳನ್ನು ಗಮನಿಸಿ ನನ್ನ ತಂದೆಯವರು ಕೋರ್ಟಿನ ಶಿರಸ್ತೇದಾರರೆಂದು ತಿಳಿದು 'ಮನೆಯಲ್ಲಿ ನಿಷೇಧಿತ ಆರೆಸ್ಸೆಸ್ಸಿನ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆಂದೂ, ಆ ಕಾರಣಕ್ಕಾಗಿ ನನ್ನ ತಂದೆಯವರನ್ನು ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಬೇಕೆಂದೂ' ಶಿಫಾರಸು ಮಾಡಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ಪತ್ರ ಬರೆದಿದ್ದರಂತೆ. ಆಗ ಜಿಲ್ಲಾ ನ್ಯಾಯಾಧೀಶರಾಗಿ ಶ್ರೀ ಕೋ.ಚನ್ನಬಸಪ್ಪನವರು ಇದ್ದು ನನ್ನ ತಂದೆಯವರನ್ನು ಬಲ್ಲವರಾಗಿದ್ದರು.ಅವರು ನನ್ನ ತಂದೆಯವರನ್ನು ಕರೆಸಿ ವಿಷಯ ತಿಳಿಸಿ ಎಚ್ಚರಿಕೆ ನೀಡಿ ವರದಿಯನ್ನು ಹರಿದು ಹಾಕಿದ್ದರಂತೆ.ಅಂತಹ ವರದಿ ತಮ್ಮ ವಿರುದ್ಧ ಹೋಗಿದ್ದ ಬಗ್ಗೆ ಅವರು ವಿಚಾರಿಸಿದ ಮೇಲೆಯೇ ನನ್ನ ತಂದೆಗೆ ಗೊತ್ತಾಗಿದ್ದಂತೆ! ಶ್ರೀ ಕೋ.ಚನ್ನಬಸಪ್ಪನವರು ಬರೆದಿರುವ 'ನ್ಯಾಯಾಲಯದ ಸತ್ಯಕಥೆಗಳು' ಎಂಬ ಪುಸ್ತಕದಲ್ಲಿ ನಮಗೆ ಸಂಬಂಧಿಸಿದ ಎರಡು ಘಟನೆಗಳು ಕಥೆಯಾಗಿ ಉಲ್ಲೇಖಿತಗೊಂಡಿವೆ!
ಶಹಭಾಷ್ ಎಂದಿದ್ದ ಜಿಲ್ಲಾಧಿಕಾರಿ!
     ನಾನೊಬ್ಬ ಭಯಂಕರ ಅಪರಾಧಿಯೆಂದೂ, ನನ್ನಿಂದ ಕಾಯದೆ ಹಾಗೂ ಶಾಂತಿಭಂಗವಾಗುತ್ತದೆಂದೂ ನನ್ನನ್ನು 'ಮೀಸಾ' ಕಾಯದೆಯಡಿ ಬಂಧಿಸಿ ಬಳ್ಳಾರಿ ಜೈಲಿಗೆ ಕಳುಹಿಸಲು ಶಿಫಾರಸು ಮಾಡಿ ಜಿಲ್ಲಾ ಆರಕ್ಷಕ ಅಧಿಕಾರಿಯವರು ಶಿಫಾರಸು ಮಾಡಿ ಜಿಲ್ಲಾಧಿಕಾರಿಯವರ ಅನುಮೋದನೆಗೆ ಕಳುಹಿಸಿದ್ದರು. ಮೊದಲಿನ ಜಿಲ್ಲಾಧಿಕಾರಿಯವರೇ ಇದ್ದಿದ್ದರೆ ಆ ಶಿಫಾರಸನ್ನು ಖಂಡಿತಾ ಅನುಮೋದಿಸಿ ಕಳುಹಿಸುತ್ತಿದ್ದರು. ಆಗ ಹೊಸ ಜಿಲ್ಲಾಧಿಕಾರಿಯವರಾಗಿ ಶ್ರೀ ಧೀರೇಂದ್ರ ಸಿಂಗ್ ಎಂಬುವವರು ಬಂದಿದ್ದರು. ಅವರು ತಮ್ಮ ಕಛೇರಿಯ ನೌಕರನಾಗಿದ್ದ ನನ್ನ ಬಗ್ಗೆ ಆಸಕ್ತಿ ವಹಿಸಿ ಕಛೇರಿಯ ಇತರ ನೌಕರರುಗಳಿಂದ ವಿಚಾರಿಸಿ ಮಾಹಿತಿ ಪಡೆದರು. ನಾನು ನೇರ ನಡೆನುಡಿಯವನೆಂದೂ, ನನಗೆ ಅನ್ಯಾಯವಾಗಿದೆಯೆಂದೂ, ಪೋಲಿಸರು ತಿಳಿಸಿದಂತಹ ವ್ಯಕ್ತಿತ್ವದವನಲ್ಲವೆಂದು ನನ್ನ ಸಹೋದ್ಯೋಗಿಗಳು ಕೊಟ್ಟ ಮಾಹಿತಿ ಪಡೆದ ಅವರು ಹಾಸನದ ಜೈಲಿಗೂ ತಪಾಸಣೆಯ ನೆಪದಲ್ಲಿ ಭೇಟಿ ನೀಡಿದರು. ನನ್ನನ್ನು ಕರೆಯಿಸಿ ಮಾತನಾಡಿದರು. ನನ್ನ ಮಾತುಗಳನ್ನೆಲ್ಲಾ ಸಾವಧಾನವಾಗಿ ಕೇಳಿದ ಅವರು ನನ್ನನ್ನು ಬೆನ್ನು ತಟ್ಟಿ 'ಐ ಆಮ್ ಪ್ರೌಡ್ ಆಫ್ ಯು, ಮೈ ಬಾಯ್' ಎಂದರು. ಜೈಲರರಿಗೆ ನನಗೆ ತೊಂದರೆಯಾಗದಂತೆ ಸರಿಯಾಗಿ ನೋಡಿಕೊಳ್ಳಲು ಸೂಚನೆ ಕೊಟ್ಟರು. ಅವರು ತಪಾಸಣೆಯ ನೆಪದಲ್ಲಿ ಕಾರಾಗೃಹಕ್ಕೆ ಬಂದಿದ್ದು ನನ್ನನ್ನು 'ಮೀಸಾ'ಗೆ ಒಳಪಡಿಸಬೇಕೇ, ಬೇಡವೇ ಎಂದು ನಿರ್ಧರಿಸುವ ಸಲುವಾಗಿತ್ತೆಂದು ನನಗೆ ನಂತರ ಗೊತ್ತಾಯಿತು.ಎಸ್.ಪಿ.ಯವರ ಶಿಫಾರಸನ್ನು ಅವರು ಮಾನ್ಯ ಮಾಡಲಿಲ್ಲ. ಹಾಗಾಗಿ ನಾನು ಬಳ್ಳಾರಿ ಜೈಲು ನೋಡುವುದು ತಪ್ಪಿತ್ತು.
ಕ್ರಿಮಿನಲ್ ಗಳು ತಯಾರಾಗುವ ಕಾರ್ಖಾನೆ
     ಸಾಮಾನ್ಯವಾಗಿ ತಪ್ಪು ಮಾಡಿದವರು ತಮಗೆ ಒದಗಬಹುದಾದ ಶಿಕ್ಷೆಗೆ ಮಾನಸಿಕವಾಗಿ ಸಿದ್ಧರಿರುತ್ತಾರೆ. ಆದರೆ ಅಗತ್ಯಕ್ಕಿಂತ ಹೆಚ್ಚು ಶಿಕ್ಷೆ ಸಿಕ್ಕರೆ ಅಥವಾ ತಪ್ಪೇ ಮಾಡದೆ ಶಿಕ್ಷೆ ಅನುಭವಿಸಬೇಕಾಗಿ ಬಂದರೆ ಅಪರಾಧಿಗಳು ಉದಯಿಸುತ್ತಾರೆ. ನನ್ನ ವೈಯಕ್ತಿಕ ಅನುಭವದಿಂದ ಹೇಳಬೇಕೆಂದರೆ ಇಂದಿನ ಸ್ಥಿತಿಯಲ್ಲಿ ಪೋಲಿಸ್ ಠಾಣೆಗಳು ಮತ್ತು ಕಾರಾಗೃಹಗಳು ಅಪರಾಧ ನಿಯಂತ್ರಣಕ್ಕೆ ಸಹಕಾರಿಯಾಗಿರುವಂತೆ ಅಪರಾಧಿಗಳ ಉಗಮಕ್ಕೂ ಕಾರಣಗಳಾಗಿವೆ.ಇಂದಿನ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಕಾರ್ಯ ವೈಖರಿ ಸಹ ಇದಕ್ಕೆ ಸಹಕಾರಿಗಳಾಗಿವೆ.
     ಶಾಸಕಾಂಗದ ಆಧಾರಸ್ತಂಭಗಳೆನಿಸಿರುವ ಕೊಳಕು ರಾಜಕಾರಣಿಗಳು ಇಂದಿನ ಈ ಹದಗೆಟ್ಟ ಸ್ಥಿತಿಗೆ ಪ್ರಮುಖ ಕಾರಣ. ಕಾಂಗ್ರೆಸ್ಸಿನ ಯುವನಾಯಕ ಶ್ರೀ ರಾಹುಲಗಾಂಧಿಯವರು (ಇವರನ್ನು ಮುಂದಿನ ಭಾರತದ ಪ್ರಧಾನಿ ಮಾಡಲು ವೇದಿಕೆ ಸಜ್ಜುಗೊಳಿಸುತ್ತಿದ್ದಾರೆ) ಕರ್ನಾಟಕದ ಪ್ರವಾಸದ ಸಂದರ್ಭದಲ್ಲಿ 'ಇಂದಿನ ಪ್ರಮುಖವಾದ ಸಮಸ್ಯೆ ಏನು?' ಎಂದು ಕೇಳಿದ ಪ್ರಶ್ನೆಗೆ ವಿದ್ಯಾರ್ಥಿಯೊಬ್ಬರು 'ರಾಜಕಾರಣಿಗಳು, ಭ್ರಷ್ಠ ರಾಜಕಾರಣಿಗಳು, ಅವರನ್ನು ಗುಂಡಿಟ್ಟು ಕೊಲ್ಲಬೇಕು' ಎಂದು ಸರಿಯಾಗಿಯೇ ಉತ್ತರಿಸಿದ್ದಾರೆ. 'ಯಥಾ ರಾಜಾ ತಥಾ ಪ್ರಜಾ' ಎಂಬಂತೆ ನಮ್ಮನ್ನಾಳುತ್ತಿರುವ ರಾಜಕಾರಣಿಗಳ ನೈತಿಕ ಮಟ್ಟ ಅಧೋಗತಿಗೆ ಇಳಿಯುತ್ತಿರುವಂತೆಯೇ ದೇಶದ ಸ್ಥಿತಿ ಸಹ ಅಧೋಗತಿಗೆ ಜಾರುತ್ತಿದೆ. ನೈತಿಕತೆ, ಮೌಲ್ಯಗಳಿಗೆ ಗೌರವ ಕೊಡುವವರು ರಾಜಕೀಯಕ್ಕೆ ಸಕ್ರಿಯರಾಗಿ ಬರಲು ಸಾಧ್ಯವೇ ಇಲ್ಲದಂತಹ ವಾತಾವರಣ ಸೃಷ್ಟಿಯಾಗಿದೆ. ಬಂದರೂ ಅವರನ್ನು ತುಳಿದುಬಿಡುತ್ತಾರೆ. ವಲ್ಲಭಭಾಯಿ ಪಟೇಲ್,ಲಾಲಬಹದೂರ ಶಾಸ್ತ್ರಿ, ಶ್ಯಾಮಪ್ರಸಾದ ಮುಖರ್ಜಿ, ದೀನದಯಾಳ ಉಪಾಧ್ಯಾಯ, ಗುಲ್ಜಾರಿಲಾಲ ನಂದರವರಂತಹ ನಾಯಕರು ಈಗೆಲ್ಲಿ? ಗಾಂಧೀಜಿ ಒಂದುವೇಳೆ ಬದುಕಿದ್ದು ಚುನಾವಣೆಗೆ ಸ್ಪರ್ಧಿಸಬಯಸಿದರೆ ಅವರನ್ನು ಚುನಾವಣೆಗೆ ನಿಲ್ಲಲೂ ಸಾಧ್ಯವಾಗದಂತೆ ಮಾಡುತ್ತಿದ್ದರು. ಹಾಗೂ ಸ್ಪರ್ಧಿಸಿದರೆ ಅವರು ಗೆಲ್ಲುತ್ತಲೂ ಇರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಅವರನ್ನು ಬಹುದೊಡ್ಡ ಕಳಂಕಿತ ವ್ಯಕ್ತಿಯಂತೆ ಬಿಂಬಿಸಿಬಿಡಲಾಗುತ್ತಿತ್ತು. ಇತ್ತೀಚಿನ ಉದಾಹರಣೆಯೆಂದರೆ ಸರಳ, ಸಜ್ಜನ, ದೇಶಭಕ್ತ ರಾಷ್ಟ್ರಪತಿಯಾಗಿದ್ದ ಶ್ರೀ ಅಬ್ದುಲ್ ಕಲಾಮರು ಇನ್ನೊಂದು ಅವಧಿಗೆ ರಾಷ್ಟ್ರಪತಿಗಳಾಗಬೇಕೆಂದು ಒತ್ತಾಯ ಬಂದ ಸಂದರ್ಭದಲ್ಲಿ ಅವರ ವ್ಯಕ್ತಿತ್ವಕ್ಕೆ ಕೆಸರೆರೆಚುವ ಕಾರ್ಯ ಕಾಂಗ್ರೆಸ್ಸಿಗರಿಂದ ಆಗಲೇ ಪ್ರಾರಂಭವಾಗಿಬಿಟ್ಟಿತ್ತಲ್ಲವೇ? ಈ ವಿಷಯ ಚರ್ಚಿಸುತ್ತಾ ಹೋದರೆ ದೊಡ್ಡ ಪ್ರಬಂಧವನ್ನೇ ರಚಿಸಬಹುದು. ಕಟುವಾಸ್ತವವೆಂದರೆ ಈ ರಾಜಕಾರಣಿಗಳು, ಲೋಕಾಯುಕ್ತ ಅಥವ ಇನ್ನಾವುದೇ ಭ್ರಷ್ಠಾಚಾರ ನಿಯಂತ್ರಕ ವ್ಯವಸ್ಥೆಯ ವ್ಯಾಪ್ತಿಯಿಂದ ತಮ್ಮನ್ನು ತಾವೇ ಹೊರಗಿಟ್ಟುಕೊಂಡಿರುವ ಈ ಕೊಳಕು ರಾಜಕಾರಣಿಗಳು ನಮ್ಮನ್ನಾಳುವವರು ಮತ್ತು ಶಾಸನಗಳನ್ನು ರೂಪಿಸುವವರು! ಇಂತಹವರ ಮರ್ಜಿ ಅನುಸರಿಸಿ ಪೋಲಿಸರು ಮತ್ತು ಇತರ ಅಧಿಕಾರಗಳು ಕೆಲಸ ಮಾಡಬೇಕು. ಆಳುವವರೇ ಭ್ರಷ್ಠಾಷಾರಿಗಳಾದರೆ ಭ್ರಷ್ಠಾಚಾರ ನಿಯಂತ್ರಣ ಸಾಧ್ಯವೇ? ಹೀಗಾಗಿ ಎಲ್ಲಾ ಇಲಾಖೆಗಳೂ ಭ್ರಷ್ಠಾಚಾರದ ಕೊಂಪೆಗಳಾಗಿವೆ, ಆಗಲೇ ಬೇಕಾಗಿವೆ! ದೇಶದ ಪರಮೋಚ್ಛ ಹುದ್ದೆಯಾದ ರಾಷ್ಟ್ರಪತಿ ಹುದ್ದೆಯೂ ಸೇರಿದಂತೆ ಪ್ರತಿಯೊಬ್ಬರೂ ಒಂದಿಲ್ಲೊಂದು ಭ್ರಷ್ಠಾಚಾರ ನಿಯಂತ್ರಣ ವ್ಯವಸ್ಥೆಗೆ ಒಳಪಡಲೇಬೇಕು. ಇಲ್ಲದಿದ್ದರೆ ಈ ಹೀನ ರಾಜಕಾರಣಿಗಳು ಅಧಿಕಾರಿಗಳನ್ನು ಹೆದರಿಸಿ,ಬೆದರಿಸಿ ಅವರಿಂದ ಅಕ್ರಮಗಳನ್ನು ಮಾಡಿಸಿ ಅವರನ್ನೇ ದೂರುವ ಕಾಯಕ ಅಬಾಧಿತವಾಗಿ ನಡೆಯುತ್ತಲೇ ಇರುತ್ತದೆ.ಜಾತ್ಯಾತೀತತೆ ಹೆಸರಿನಲ್ಲೇ ಜಾತೀಯತೆಯನ್ನು ಈ ಕೊಳಕರು ಬಲಪಡಿಸುತ್ತಿದ್ದಾರೆ. 'ಜಾತಿ ಬಿಡಿ, ಮತ ಬಿಡಿ, ಮಾನವತೆಗೆ ಜೀವ ಕೊಡಿ' ಎನ್ನುತ್ತಲೇ ಜಾತಿ ಆಧಾರಿತ ಮೀಸಲಾತಿ, ಒಳಮೀಸಲಾತಿ ಬಯಸುತ್ತಾರೆ. ಸಾವಿರಾರು ಕೋಟಿ ಹಣ ಮಾಡಿ(ದೋಚಿ)ರುವವರೂ ದಲಿತರು, ಹಿಂದುಳಿದವರು, ಮಣ್ಣಿನ ಮಕ್ಕಳು, ಬಡವರ ಪ್ರತಿನಿಧಿಗಳು, ಇತ್ಯಾದಿ ಎನ್ನಿಸಿಕೊಳ್ಳಲು ಭಾರತದಲ್ಲಿ ಮಾತ್ರ ಸಾಧ್ಯ. ಎಲ್ಲಾ ಸಾಮಾಜಿಕ ಅಪರಾಧಗಳ ನಿಯಂತ್ರಣಕ್ಕೆ ಸೂಕ್ತ ಕಾಯದೆ, ಕಾನೂನುಗಳಿವೆ. ಅವನ್ನು ಪ್ರಾಮಾಣಿಕವಾಗಿ ಜಾರಿಗೆ ತರಬೇಕು. ಆರ್ಥಿಕವಾಗಿ ಹಿಂದುಳಿದವರನ್ನು ಮೇಲೆತ್ತುವ ನೈಜ ಮತ್ತು ಪ್ರಾಮಾಣಿಕ ಜಾತ್ಯಾತೀತತೆ ಅನುಷ್ಠಾನಗೊಳ್ಳಬೇಕು. ಪ್ರಾಮಾಣಿಕತೆ ಮತ್ತು ನೈತಿಕತೆಯುಳ್ಳ ಸಮಾಜಸೇವಾಸಕ್ತ (ಅಧಿಕಾರಾಕಾಂಕ್ಷಿಗಳಲ್ಲ) ರಾಜಕಾರಣಿಗಳು ಪ್ರಬುದ್ಧಮಾನಕ್ಕೆ ಬರುವಂತಹ ವಾತಾವರಣ ನಿರ್ಮಾಣವಾಗಬೇಕು. ಹೀಗಾಗಬೇಕಾದರೆ ಕೊಳಕು ರಾಜಕಾರಣಿಗಳನ್ನು ಜನರು ಹದ್ದುಬಸ್ತಿನಲ್ಲಿ ಇಡುವಂತಹ ಕ್ರಾಂತಿಯಾಗಬೇಕು. ಇದು ಸಾಧ್ಯವಾದೀತೆ? ಆಗಲಿ ಎಂಬುದು ನನ್ನಂತಹವರ ಅಪೇಕ್ಷೆ ಮತ್ತು ನಿರೀಕ್ಷೆ.
ನುಡಿನಮನ
     ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿ, ವಿರೋಧಿಗಳನ್ನು ಜೈಲಿಗೆ ತಳ್ಳಿ, ಕಂಡರಿಯದ ದರ್ಪ, ದಬ್ಬಾಳಿಕೆಗಳ ಪರ್ವವಾಗಿ ದೇಶ ಸರ್ವಾಧಿಕಾರದ ಕಡೆಗೆ ಜಾರುತ್ತಿದ್ದ ಸಂದರ್ಭದಲ್ಲಿ ಜಯಪ್ರಕಾಶ ನಾರಾಯಣರ ನೇತೃತ್ವದಲ್ಲಿ ಲೋಕ ಸಂಘರ್ಷ ಸಮಿತಿ ಹೆಸರಿನಲ್ಲಿ ಅಭೂತ ಪೂರ್ವ ಚಳುವಳಿ ನಡೆದು ಪ್ರಜಾಸತ್ತೆ ಪುನರ್ ಸ್ಥಾಪಿತವಾದದ್ದು ಈಗ ಇತಿಹಾಸ. ಈಗ ಹಣ ಸುರಿದು ಬಾಡಿಗೆ ಜನರನ್ನು ಕರೆತಂದು ಸಭೆ, ಮೆರವಣಿಗೆ, ಪ್ರತಿಭಟನೆಗಳನ್ನು ನಡೆಸುವುದನ್ನು ಇಂದು ಕಾಣುತ್ತಿದ್ದೇವೆ. ಆಗ ಮಾತನಾಡಲೂ ಅಂಜುವಂತಹ ಪರಿಸ್ಥಿತಿಯಲ್ಲಿ ಸೆಟೆದೆದ್ದು ನಿಂತವರು ಆರೆಸ್ಸೆಸ್ಸಿನ ಕಾರ್ಯಕರ್ತರು. ಚಳುವಳಿಗೆ ಬೆನ್ನೆಲುಬಾಗಿದ್ದವರೇ ಅವರು. ಇದನ್ನು ಎಲ್ಲರೂ ಒಪ್ಪಿದ್ದ ಸಂಗತಿ. ಈಗ ಆರೆಸ್ಸೆಸ್ಸನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿರುವವರೇ ತುರ್ತು ಪರಿಸ್ಥಿತಿ ತೆರುವಾದ ಸಂದರ್ಭದಲ್ಲಿ ಆರೆಸ್ಸೆಸ್ಸನ್ನು ಹಿಗ್ಗಾ ಮುಗ್ಗಾ ಹೊಗಳಿದ್ದರು. ರಾಜಕಾರಣಿಗಳೇ ಹಾಗೆ. ಈಗ ಮಾಧ್ಯಮಗಳೂ ಜೊತೆಗೆ ಸೇರಿಕೊಂಡಿವೆ. ಇರಲಿ ಬಿಡಿ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೀವಗಳನ್ನು ಕಳೆದುಕೊಂಡವರೆಷ್ಟೋ, ಎಷ್ಟು ಸಂಸಾರಗಳು ಹಾಳಾದವೋ, ಲೆಕ್ಕ ಇಟ್ಟವರಾರು? ಎಷ್ಟು ಜನರು ಅಂಗವಿಕಲರಾದರೋ, ಎಷ್ಟು ಜನರು ಸಮಾಜಘಾತಕರಾದರೋ ತಿಳಿಯದು. ದೇಶಹಿತಕ್ಕಾಗಿ ಸೆರೆವಾಸ, ಚಿತ್ರಹಿಂಸೆ ಅನುಭವಿಸಿ, ಮತಿವಿಕಲರಾಗಿ ಚಿಕ್ಕ ವಯಸ್ಸಿನಲ್ಲೇ ಪ್ರಾಣ ಕಳೆದುಕೊಂಡ ನಮ್ಮ ಜೊತೆಯಲ್ಲೇ ಬಂದಿಯಾಗಿದ್ದ ಆರೆಸ್ಸೆಸ್ಸಿನ ಹಾಸನ ಜಿಲ್ಲಾ ಪ್ರಚಾರಕರಾಗಿದ್ದ ಶ್ರೀ ಪ್ರಭಾಕರ ಕೆರೆಕೈ ಮತ್ತು ಅವರಂತೆಯೇ ಪ್ರಾಣ ಕಳೆದುಕೊಂಡ ಎಲ್ಲಾ ಮಹನೀಯರಿಗೂ ಈ ಮೂಲಕ ನನ್ನ ಹೃದಯಪೂರ್ವಕ ನುಡಿನಮನಗಳನ್ನು ಅರ್ಪಿಸುತ್ತೇನೆ.ಇಂದಿನ ಕೊಳಕು ರಾಜಕೀಯವನ್ನು ತಹಬಂದಿಗೆ ತರುವ, ಅಧಿಕಾರಕ್ಕಾಗಿ ಹಪಗಪಿಸುವವರನ್ನು ಮೂಲೆಗೆ ತಳ್ಳಿ ಸರ್ವ ಜನರ ಹಿತ ಬಯಸುವ ನೈಜ ಕಳಕಳಿಯ ಮತ್ತು ದೇಶಹಿತವನ್ನು ಪ್ರಾಮುಖ್ಯವಾಗಿ ಪರಿಗಣಿಸುವ ಸರ್ಕಾರ ಬರಲಿ ಎಂಬುದೇ ನನ್ನಂತಹವರ ಪ್ರಾರ್ಥನೆ.
-ಕ.ವೆಂ.ನಾಗರಾಜ್.

5 ಕಾಮೆಂಟ್‌ಗಳು:

  1. ಚೆನ್ನಾಗಿದೆ, ಸ್ವಲ್ಪ ಫಾಲ್ಲೋವರ್ಸ್ ಲಿಂಕ್ ಹಾಕಿ, ಇಲ್ಲಾಂದ್ರೆ ಫಾಲೋ ಮಾಡಲು ತೊಂದರೆ, ಲೇಖನ ಓದಲು ಹುಡುಕಬೇಕಾಗುತ್ತದೆ!

    ಪ್ರತ್ಯುತ್ತರಅಳಿಸಿ
  2. ನಿಮ್ಮ ಸೂಚನೆ ಚೆನ್ನಾಗಿದೆ. ನನಗೆ ಇಂತಹ ಕಂಪ್ಯೂಟರ್ ಜ್ಞಾನ ಕಡಿಮೆ. ಶ್ರೀಧರ್ ಆಗಲೀ, ನಿಮ್ಮಂತಹವರಾಗಲೀ ಹೇಳಿದಷ್ಟು, ಕಲಿಸಿಕೊಟ್ಟಷ್ಟು ಮಾಡಬಹುದು.

    ಪ್ರತ್ಯುತ್ತರಅಳಿಸಿ
  3. ಅನ೦ತ್ ರಾಜ್ ಅವರ ಬ್ಲಾಗ್ ಮೂಲಕ ನಿಮ್ಮ ಬ್ಲಾಗ್ ಗೆ ಬ೦ದೆ. ಸ್ವಾನುಭವದಿ೦ದ ಕೂಡಿದ ನಿಮ್ಮ ಲೇಖನ ಚೆನ್ನಾಗಿದೆ. ನನ್ನ ಬ್ಲಾಗ್ ಗೆ ಭೇಟಿ ಕೊಡಿ.

    ಪ್ರತ್ಯುತ್ತರಅಳಿಸಿ
  4. ದರ್ಶಿ
    23AUG2010 1:44
    ಅಯ್ಯೋ ಸ್ವಾಮಿ... ನೀವ್ಯಾಕೆ ಅರೆಸ್ಸನ್ನು ಹೊಗಳಲು ಹೋದಿರಿ... ನಿಮ್ಮನ್ನ ಮೂಲಭೂತವಾದಿ ಹಾಗೂ ಕೋಮುವಾದಿ ಎಂದು ಜನ ಬಯ್ಯಲು ಆರಂಭಿಸುತ್ತಾರೆ.

    Kavinagaraj
    27AUG2010 9:49
    ಧನ್ಯವಾದಗಳು. ವಾಸ್ತವ ಸಂಗತಿ ಪಥ್ಯವಾಗದವರು ಬಯ್ಯಬಹುದು!

    Raghu S P
    23AUG2010 1:58
    ಉತ್ತಮ ಚಿಂತನೆ, ಆದರೆ ಬೆಕ್ಕಿಗೆ ಘಂಟೆ ಕಟ್ಟುವರು ಯಾರು

    Kavinagaraj
    27AUG2010 9:49
    ಧನ್ಯವಾದ, ರಘುರವರೇ.

    Bhaashapriya CS
    23AUG2010 6:07
    ಈ ಪುಣ್ಯ ಭೂಮಿಯಲ್ಲಿ ಅವತರಿಸಿದ ಶ್ರೀಕೃಷ್ಣ ಪರಮಾತ್ಮ ಗೀತೆಯಲ್ಲಿ "ಸಂಭವಾಮಿ ಯುಗೇ ಯುಗೇ " ಎಂದು ಹೇಳಿದ್ದಾನೆ , ಹಾಗಿದ್ದರೆ ಶ್ರೀಕೃಷ್ಣನ ಪ್ರಕಾರ ಅಧರ್ಮ ಇನೆಷ್ಟರಮಟ್ಟಕ್ಕೆ ಹೋಗ್ಬೇಕು? ಹಾಗಾದರೆ ನಡೆದಿರುವುದು, ನಡೆಯುತ್ತಿರುವುದು ಬರಿ ಅಧರ್ಮದ ಸ್ಯಾಂಪಲ್ಲ್ಲೇ ? ಗೋವಿಂದ !

    Kavinagaraj
    27AUG2010 9:50
    ಧನ್ಯವಾದಗಳು, ಭಾಷಾಪ್ರಿಯರವರೇ. ನೀವಂದಂತೆ ಸ್ಯಾಂಪಲ್ಲೇ ಇರಬಹುದು!

    ಹೊಳೆ ನರಸೀಪುರ ಮಂಜುನಾಥ
    23AUG2010 6:42
    ಕವಿ ನಾಗರಾಜರೆ, ಸಧ್ಯದ ಪರಿಸ್ಥಿತಿಯಲ್ಲಿ ಉತ್ತಮ ಹಾಗೂ ಚಿ೦ತನೆಗೆ ಹಚ್ಚುವ ಲೇಖನ ನೀಡಿದ್ದಕ್ಕಾಗಿ ಧನ್ಯವಾದಗಳು. ಪ್ರತಿಯೊಬ್ಬರನ್ನೂ ಒ೦ದು ನಿಯಮಿತ ವ್ಯವಸ್ಥೆಯಡಿಯಲ್ಲಿ ತ೦ದು ಭ್ರಷ್ಟಾಚಾರವನ್ನು ನಿಯ೦ತ್ರಿಸುವುದು ಇ೦ದಿನ ಅತ್ಯ೦ತ ಜರೂರು ಅವಶ್ಯಕತೆ. ಆದರೆ ಈ ಭ್ರಷ್ಟ ರಾಜಕಾರಣಿಗಳ ನಡುವೆ ಇದು ಸಾಧ್ಯವೇ? ಇದು ಮಿಲಿಯನ್ ಡಾಲರ್ ಪ್ರಶ್ನೆ. ಆರೆಸ್ಸೆಸ್ ಬಗ್ಗೆ ತಮಗೆ ತಿಳಿದಿರುವ ಇನ್ನಷ್ಟು ವಿಚಾರಗಳನ್ನು ತಮ್ಮ ಲೇಖನಗಳಲ್ಲಿ ಬರೆಯಿರಿ, ತುರ್ತು ಪರಿಸ್ಥಿತಿಯ ದಿನಗಳಲ್ಲಿ ಅವರು ಮಾಡಿದ ದೇಶಸೇವೆ ಎಷ್ಟು ಮೌಲ್ಯಯುತವಾದುದೆ೦ದು ಎಲ್ಲರಿಗೂ ಗೊತ್ತಾಗಲಿ.

    Kavinagaraj
    27AUG2010 9:53
    ಆತ್ಮೀಯ ಮಂಜು, ನಿಮ್ಮ ಈರೀತಿಯ ಪ್ರತಿಕ್ರಿಯೆಗಳೇ ಒಂದು ಆಶಾಕಿರಣ. ಸಜ್ಜನಶಕ್ತಿ ಒಗ್ಗೂಡುವುದು ಕಷ್ಟ. ನೂರು ಸಜ್ಜನರಿದ್ದರೂ ಕೇವಲ ನಾಲ್ಕೈದು ದುರ್ಜನರು ಮೆರೆಯುವಂತಹ ಪರಿಸ್ಥಿತಿ ಇರುವುದು ಇದೇ ಕಾರಣಕ್ಕಾಗಿ!

    ಮಂಜುನಾಥ ಹೊಸೂರು
    24AUG2010 2:45
    ನಾನು ಹುಟ್ಟುವುದಕ್ಕೆ ಮುನ್ನ ನಡೆದ ಈ ತುರ್ತು ಪರಿಸ್ಥಿತಿ ಬಗ್ಗೆ ಜಾಸ್ತಿ ತಿಳಿದುಕೊಳ್ಳಲು ಸಾಧ್ಯವಾಗಿರಲಿಲ್ಲ ಸರ್. ನಿಮ್ಮ ಲೇಖನ ತುರ್ತು ಪರಿಸ್ಥಿತಿಯ ಇನ್ನೊಂದು ಮುಖವನ್ನು ತೋರಿಸಿಕೊಟ್ಟಿದೆ.
    ಆರ್ ಎಸ್ ಎಸ್ ನವರು ಆಗ ಅಷ್ಟೆಲ್ಲಾ ಹೋರಾಟ ಮಾಡಿದವರು ಬರುಬರುತ್ತಾ ಏಕೆ ತಮ್ಮ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ತಮ್ಮ ತತ್ತ್ವ ಸಿದ್ದಾಂತಗಳ್ಯಾವುದರ ಬಗ್ಗೆಯೂ ಪರಿವೆಯಿಲ್ಲದ ರೆಡ್ಡಿ, ಖೋಡಾ ಮುಂತಾದವರೊಂದಿಗೆ ಸರಕಾರ ನಡೆಸಲು ಬಿಜೆಪಿಯನ್ನು ಇವರು ಯಾಕಾದರು ಬಿಡುತ್ತಿದ್ದಾರೋ ಗೊತ್ತಾಗುತ್ತಿಲ್ಲ. ಇಂಥಾ ದೂರದೃಷ್ಟಿಯಿಲ್ಲದ ನಡೆಗಳಿಂದಾಗಿ ಮುಂದೆ ಅಡ್ಡ ಪರಿಣಾಮಗಳಾಗುವುದು ಖಂಡಿತಾ ಅಲ್ಲವೇ..

    Kavinagaraj
    27AUG2010 9:56
    ಪ್ರತಿಕ್ರಿಯೆಗೆ ಧನ್ಯವಾದಗಳು, ಮಂಜುನಾಥರೇ. ಮಂಜುರವರಿಗೆ ನೀಡಿದ ಉತ್ತರ ಇಲ್ಲಿಗೂ ಅನ್ವಯಿಸಬಹುದು.

    ಬೆಳ್ಳಾಲ ಗೋಪೀನಾಥ ರಾವ್
    27AUG2010 10:13
    ಕವಿಯವರೇ, ನಿಮ್ಮ ಲೇಖನ ಒಳ್ಳೊಳ್ಳೆ ಚಿಂತನ ಮಂಥನಗಳಿಗೆ ಅಹಾರವೂ ಆಗುತ್ತಲಿದೆ
    ಧನ್ಯವಾದಗಳು. ನಿಜ ಎಲ್ಲಿಯವರೆಗೆ ಆತ್ಮ ಸಾಕ್ಷಿ ಜಾಗೃತವಾಗುವುದಿಲ್ಲವೋ ಅಲ್ಲಿಯವರೆಗೆ ಇಂತದ್ದೇ ಉದಾಹರಣೆ ( ಈಗಿನ ಕೊಳಕು ರಾಜಕಾರಣ) ಸಿಗುತ್ತಲಿರುತ್ತದೆ.

    Kavinagaraj
    31AUG2010 10:14
    ಧನ್ಯವಾದ, ಗೋಪಿನಾಥರೇ.

    ಪ್ರತ್ಯುತ್ತರಅಳಿಸಿ