ಕೇಳುತಿರ್ದೊಡೆ ತಿಳಿವ ಬೀಜ ಮೊಳೆತೀತು
ಮೊಳಕೆ ಬೆಳೆದೀತು ಕಾಣುವ ನೋಟವಿರೆ
ಮನನದ ನೀರೆರೆದು ಅನುಭವದಿ ಕಳೆಕೀಳೆ
ಅದ್ಭುತಾಮೃತ ಫಲ ನಿನದೆ ಮೂಢ ||
ಶುಭವ ನೋಡದಿರೆ ಕಣ್ಣಿದ್ದು ಕುರುಡ
ಶುಭವ ಕೇಳದಿರೆ ಕಿವಿಯಿದ್ದು ಕಿವುಡ
ಶುಭವ ನುಡಿಯದಿರೆ ಬಾಯಿದ್ದು ಮೂಕ
ಇದ್ದೂ ಇಲ್ಲದವನಾಗದಿರು ಮೂಢ ||
ಕಂಡವರು ಯಾರಿಹರು ಜೀವ ಚೇತನವ
ತರ್ಕವನೆ ಮಾಡುವರು ಅವಿನಾಶಿಯೆನ್ನುವರು |
ವಾದಗಳ ಮುಂದಿರಿಸಿ ವಿನಾಶಿಯೆಂದಿಹರು
ಅನುಭಾವಿ ತಿಳಿದಾನು ಉತ್ತರವ ಮೂಢ ||
ದೇಹವೆಂಬುದು ರಥವು ಬುದ್ಧಿಯೇ ಸಾರಥಿಯು
ಇಂದ್ರಿಯಾಶ್ವವನು ಚಿತ್ತ ಹಿಡಿದಿಹುದು |
ಒಡೆಯ ಹೇಳ್ದಂತೆ ಸಾಗುವನು ಸಾರಥಿಯು
ಒಡೆಯನಾರೆಂದು ತಿಳಿದಿಹೆಯ ಮೂಢ ||
*********************
-ಕ.ವೆಂ.ನಾಗರಾಜ್.
`ಕೇಳುತಿರ್ದೊಡೆ ತಿಳಿವ ಬೀಜ ಮೊಳೆತೀತು' ಉತ್ತಮ ಸಾಲುಗಳ ಅರ್ಥಪೂರ್ಣ ಕಗ್ಗ ಸರ್, ಅಭಿನ೦ದನೆಗಳು.
ಪ್ರತ್ಯುತ್ತರಅಳಿಸಿಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿ