ಪುತ್ತೂರು ತಾಲ್ಲೂಕು ಕಡಬವನ್ನು ತಾಲ್ಲೂಕು ಎಂದು ಘೋಷಿಸದಿದ್ದರೂ ಪೂರ್ವಭಾವಿಯಾಗಿ ವಿಶೇಷ ತಹಸೀಲ್ದಾರರ ಹುದ್ದೆ ಮಂಜೂರು ಮಾಡಿ ಆದೇಶವಾದಾಗ ಪ್ರಥಮ ವಿಶೇಷ ತಹಸೀಲ್ದಾರನಾಗಿ ಕಾರ್ಯ ನಿರ್ವಹಿಸಿದ್ದ ನಾನು ಕಡಬದಲ್ಲಿ ಸೂಕ್ತ ವಸತಿ ಸಿಗದಿದ್ದರಿಂದ ೨೦ ಕಿ.ಮೀ. ದೂರದ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಬಂಧಿಸಿದ ವಸತಿಗೃಹವೊಂದರಲ್ಲಿ ನನಗೆ ಉಳಿದುಕೊಳ್ಳಲು ಅವಕಾಶವಾಗಿತ್ತು. ಸುಬ್ರಹ್ಮಣ್ಯ ಸಹ ಉದ್ದೇಶಿತ ಕಡಬ ತಾಲ್ಲೂಕು ವ್ಯಾಪ್ತಿಗೆ ಒಳಪಡುವ ಗ್ರಾಮವಾಗಿತ್ತು. ಆ ಸಂದರ್ಭದ ನೆನಪೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ.
ಇದು ಸುಮಾರು ೧೦-೧೨ ವರ್ಷಗಳ ಹಿಂದಿನ ಘಟನೆ. ಪ್ರತಿದಿನ ಬೆಳಿಗ್ಗೆ ೫-೩೦ರ ವೇಳೆಗೆ ಎದ್ದು ಸುಮಾರು ೩-೪ ಕಿ.ಮೀ. ದೂರ ವಾಕಿಂಗ್ ಹೋಗುವ ಅಭ್ಯಾಸವಿಟ್ಟುಕೊಂಡಿದ್ದೆ. ಹೆಚ್ಚಿನವರ ದಿನದ ಚಟುವಟಿಕೆಗಳು ಪ್ರಾರಂಭಗೊಳ್ಳುವ, ನಿಶ್ಶಬ್ದ ವಾತಾವರಣ ಮರೆಯಾಗಿ ಗಿಜಿಬಿಜಿಗಳು, ಚಿಲಿಪಿಲಿಗಳು, ಶಬ್ದ ಸಾಮ್ರಾಜ್ಯ ರಾರಾಜಿಸಲು ಪ್ರಾರಂಭವಾಗುತ್ತಿದ್ದ ಆ ಸಮಯದಲ್ಲಿ ಸುಬ್ರಹ್ಮಣ್ಯನ ಭಕ್ತರು ಕುಮಾರಧಾರಾ ನದಿಗೆ ಮೀಯಲು ಹೋಗುತ್ತಿದ್ದವರು, ಮಿಂದು ಬರುತ್ತಿದ್ದವರು, ಇನ್ನೂ ನಿದ್ದೆಗಣ್ಣು ಹರಿದಿರದೆ ಕುಕ್ಕರುಗಾಲಿನಲ್ಲಿ ಕುಳಿತು ಬೀಡಿ ಸೇದುತ್ತಾ ಕುಳಿತವರು, ಹೋಟೆಲುಗಳಲ್ಲಿ ಟೀ, ಕಾಫಿಗಳನ್ನು ಹೀರುತ್ತಾ ಇದ್ದವರು, ಬಿಡಾಡಿ ನಾಯಿಗಳು, ಬಿಂಕದಿಂದ ಕೊಕ್ಕೊಕ್ಕೋ ಎನ್ನುವ ಕೋಳಿಗಳು, ಒಳ್ಳೆಯ ಗಾಳಿ ಸೇವಿಸಲು ಹೊರಟವರನ್ನು ಅಣಕಿಸುವಂತೆ ಹಿಂದೆ ಮುಂದೆ ಬೀಡಿ, ಸಿಗರೇಟು ಸೇದುತ್ತಾ ಹೊಗೆ ಕುಡಿಸುವವರು, (ಅವರುಗಳು ಕಂಡಾಗ ಅವರನ್ನು ದಾಟಿ ಹೋಗಲು ನನ್ನ ಹೆಜ್ಜೆಗಳು ಬಿರುಸಾಗಿ ಚಲಿಸುತ್ತಿದ್ದವು), ಮುಂದಿನ ಪ್ರಯಾಣಕ್ಕೆ ವಾಹನಗಳನ್ನು ಶುಚಿಗೊಳಿಸಿ ಸಿದ್ಧಪಡಿಸುವವರು, ಸುತ್ತಮುತ್ತಲಿನ ಆಹ್ಲಾದಕರ ಹಸಿರು ಪರಿಸರ, ಇತ್ಯಾದಿ ಗಮನಿಸುತ್ತಾ ನನ್ನ ವಾಕಿಂಗ್ ಸಾಗುತ್ತಿತ್ತು. ಪ್ರಾರಂಭದ ದಿನಗಳಲ್ಲಿ ಇದೆಲ್ಲಾ ವಿಶೇಷವಾಗಿ ಕಂಡಿತ್ತಾದರೂ ಕ್ರಮೇಣ ಹೊಂದಿಕೆಯಾಯಿತು.
ಒಮ್ಮೆ ನಾನು ವಾಕಿಂಗ್ ಹೋಗುವಾಗ ನನ್ನ ಹಿಂದೆ ಒಂದು ಕರಿಯ ಬಡಕಲು ನಾಯಿಮರಿ, ಮರಿಯೆಂದರೆ ಚಿಕ್ಕದೇನಲ್ಲ, ಸ್ವಲ್ಪ ದೊಡ್ಡದೇ, ನನ್ನ ಹಿಂದೆ ಬಾಲವಾಡಿಸಿಕೊಂಡು ಬರುತ್ತಿತ್ತು. ಇದು ನಾಯಿಮರಿಗಳ ಸ್ವಭಾವವಾದ್ದರಿಂದ ನಾನು ಅದಕ್ಕೆ ವಿಶೇಷ ಗಮನ ಕೊಡಲಿಲ್ಲ. ಆದರೆ ಆರೀತಿ ಹಿಂಬಾಲಿಸುವುದು ಹಲವು ದಿನಗಳವರೆಗೆ ಮುಂದುವರೆದಾಗ ಸಹಜವಾಗಿ ಅದರ ಕಡೆಗೆ ನಾನು ಗಮನಿಸತೊಡಗಿದೆ. ಇತರ ನಾಯಿಗಳು ಅದನ್ನು ಕಂಡು ಬೊಗಳಿ ಕಚ್ಚಲು ಬರುತ್ತಿದ್ದಾಗ ನಾನು ಅವುಗಳನ್ನು ಓಡಿಸುತ್ತಿದ್ದೆ. ಅದೂ ಸಹ ತನ್ನನ್ನು ರಕ್ಷಿಸಬೇಕೆಂಬಂತೆ ನನ್ನನ್ನು ದೀನನೋಟದಿಂದ ನೋಡುತ್ತಿತ್ತು. ಪ್ರಾರಂಭದಲ್ಲಿ ಸ್ವಲ್ಪದೂರ ಮಾತ್ರ ಬರುತ್ತಿದ್ದ ನಾಯಿಮರಿ ನಾನು ವಾಪಸು ಬರುವುದನ್ನು ಕಾಯುತ್ತಾ ಇದ್ದಿದ್ದು ವಾಪಸು ಬಂದಾಗ ಪುನಃ ನಾನು ವಸತಿಗೃಹಕ್ಕೆ ಹೋಗುವವರೆಗೂ ಹಿಂಬಾಲಿಸುತ್ತಿತ್ತು. ಆ ನಾಯಿಮರಿ ವಾಕಿಂಗ್ ಹೋಗುತ್ತಿದ್ದ, ರಸ್ತೆಯಲ್ಲಿ ಓಡಾಡುತ್ತಿದ್ದ ಇತರರ ಹಿಂದೆ ಹೋಗುತ್ತಿರದೇ ಇದ್ದುದು ನನಗೆ ಆಶ್ಚರ್ಯ ತಂದಿತ್ತು. ಯಾವಾಗ ಇತರ ನಾಯಿಗಳಿಂದ ಅದಕ್ಕೆ ನನ್ನಿಂದ ರಕ್ಷಣೆ ಸಿಗತೊಡಗಿತೋ ಅದು ನಂತರದಲ್ಲಿ ನನ್ನ ಹಿಂದೆ ವಾಕಿಂಗ್ ಮುಗಿಸುವವರೆಗೂ ಬರತೊಡಗಿತು. ನನಗೂ ಅದು ಅಭ್ಯಾಸವಾಗಿ ವಾಕಿಂಗ್ ಪ್ರಾರಂಭಿಸಿದ ೮-೧೦ ಹೆಜ್ಜೆ ನಡೆದರೂ ಅದು ಕಣ್ಣಿಗೆ ಬೀಳದಿದ್ದರೆ ಇರುಸುಮುರುಸಾಗುತ್ತಿತ್ತು. ಅಷ್ಟರಲ್ಲಿ ಯಾವ ಚರಂಡಿಯ ಒಳಗಿನಿಂದಲೋ, ಅಂಗಡಿಯ ಬದಿಯಿಂದಲೋ, ಯಾವುದೋ ವಾಹನದ ಕೆಳಗಿನಿಂದಲೋ ಹಾರಿ ಬಂದು ಅರಳಿದ ಕಣ್ಣುಗಳನ್ನು ಬಿಡುತ್ತಾ ನನ್ನ ಜೊತೆ ವಾಕಿಂಗಿಗೆ ಜೊತೆಗೂಡುತ್ತಿತ್ತು. ಕಪ್ಪಗಿದ್ದರಿಂದ ಅದಕ್ಕೆ ಕರಿಯ ಎಂದು ಹೆಸರು ಇಟ್ಟಿದ್ದೆ. ಒಂದು ಬೆಳಿಗ್ಗೆ ಅದು ಕಾಣದಿದ್ದಾಗ ನಾನು 'ಕರಿಯ, ಕರಿಯ. . . ಯ' ಎಂದು ಕರೆದಾಗ ಅದು ಹಾರಿಬಂದು ನನ್ನ ಮುಂದೆ ನುಲಿದಾಡಿತ್ತು. ಒಮ್ಮೆ ಮಾತ್ರ ಅದಕ್ಕೆ ಅಂಗಡಿಯಿಂದ ಬನ್ ಒಂದನ್ನು ಖರೀದಿಸಿ ಹಾಕಿದ್ದೆ. ಸಂತೋಷದಿಂದ ತಿಂದಿತ್ತು. ವಾಕಿಂಗ್ ಹೊರಟಾಗ ಅದನ್ನು ಬಾಯಲ್ಲಿ ಕಚ್ಚಿ ಹಿಡಿದೇ ಹೊರಟಾಗ ನಾನು ನಿಂತು, ಅದು ತಿನ್ನುವುದನ್ನು ಮುಗಿಸಿದ ಮೇಲೆ ಹೊರಟೆ. ಅದನ್ನು ಬಿಟ್ಟರೆ ಅದಕ್ಕೆ ಮತ್ತೆಂದೂ ನಾನು ಯಾವ ಆಹಾರವನ್ನೂ ಕೊಟ್ಟಿರಲಿಲ್ಲ. ಕೊಡಬೇಕಿತ್ತೆಂದು ಒಂದು ರೀತಿಯ ಅಪರಾಧೀಭಾವ ನನ್ನನ್ನು ಆಗಾಗ್ಗೆ ಕಾಡುತ್ತಿರುತ್ತದೆ. ಸುಮಾರು ಮೂರು ತಿಂಗಳು ಇದೇ ರೀತಿಯ ಜೊತೆಜೊತೆಯ ವಾಕಿಂಗ್ ನಡೆದಿರಬೇಕು. ಒಂದು ದಿನ ಅದು ಎಂದಿನಂತೆ ನನ್ನ ಜೊತೆಗೆ ಬರದಿದ್ದಾಗ 'ಕರಿಯ, ಕರಿಯ' ಎಂದು ಕರೆದೆ. ಐದು ನಿಮಿಷ ಅಲ್ಲೇ ಕಾದಿದ್ದರೂ ಅದು ಬರದಿದ್ದಾಗ ಮುಂದೆ ಹೊರಟೆ. ಸ್ವಲ್ಪ ದೂರ ಹೋಗುತ್ತಿದ್ದಂತೆ ಅದು ಕಣ್ಣಿಗೆ ಬಿತ್ತು, ಆದರೆ ಜೀವಂತವಾಗಿ ಅಲ್ಲ, ಮಾಂಸದ ಮುದ್ದೆಯಾಗಿ, ಭೀಕರವಾಗಿ. ಯಾವುದೋ ವಾಹನ ಅದರ ಮೇಲೆ ಹರಿದುಹೋಗಿತ್ತು. ನನಗೆ ಬಹಳ ದುಃಖವಾಯಿತು. ವಾಕಿಂಗ್ ಮುಂದುವರೆಸದೆ ಮನೆಗೆ ವಾಪಸು ಬಂದು ಕುಳಿತೆ. ಆ ದಿನವೆಲ್ಲಾ ಮನಸ್ಸು ಸರಿಯಿರಲಿಲ್ಲ. ಇದು ನಡೆದು ೧೦ ವರ್ಷಗಳ ಮೇಲಾದರೂ ಕರಿಯನ ನೆನಪು ಈಗಲೂ ಮನಃಪಟಲದಲ್ಲಿ ಅಳಿಸದೇ ಉಳಿದಿದೆ. ಯಾವ ಜನ್ಮದ ಋಣಾನುಬಂಧವೋ ನಾನರಿಯೆ, ಪ್ರೀತಿಯ ಕರಿಯಾ, ನಾನಿನ್ನ ಮರೆಯಲಾರೆ!
**************
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ