ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಅಕ್ಟೋಬರ್ 31, 2011

ನನಗೀಗ ಅರವತ್ತು!

ನನಗೀಗ ಅರವತ್ತು!
     ಹೌದು, ಅರವತ್ತು! ಹುಟ್ಟಿದ ದಿನಾಂಕದಿಂದ ಲೆಕ್ಕ ಹಾಕಿದರೆ ಅರವತ್ತು ವರ್ಷಗಳಾಯಿತು. ಮಾನಸಿಕವಾಗಿ ಲೆಕ್ಕ ಹಾಕಿದರೆ, ಇನ್ನೂ ಏನಾದರೂ ಮಾಡಬೇಕೆಂಬ ಮನಸ್ಸಿರುವುದರಿಂದ ಹತ್ತು ವರ್ಷ ಚಿಕ್ಕವನಿರಬಹುದು. ಅನುಭವಿಸಿದ ನೋವು-ನಲಿವುಗಳು, ಸುಖ-ದುಃಖಗಳು, ಬಿದ್ದ ದೈಹಿಕ-ಮಾನಸಿಕ ಪೆಟ್ಟುಗಳು, ಮಾನ-ಅವಮಾನಗಳು, ಪುರಸ್ಕಾರ-ತಿರಸ್ಕಾರಗಳು, ಈಡೇರಿದ ಮತ್ತು ಈಡೇರದ ಬಯಕೆಗಳು, ಮಾಡಬಯಸಿದರೂ ಮಾಡಲಾಗದ ಅಸಹಾಯಕತೆಯ ಪ್ರಸಂಗಗಳು, ವೈಯಕ್ತಿಕ ತಪ್ಪಿಲ್ಲದಿದ್ದರೂ ಅನುಭವಿಸಬೇಕಾಗಿ ಬಂದ ಮುಜುಗರದ ಪ್ರಸಂಗಗಳು, ಇತ್ಯಾದಿ ಕಾರಣಗಳಿಂದಾಗಿ ಭೌತಿಕ ದೇಹಕ್ಕೆ ಇನ್ನೂ ಹತ್ತು-ಹದಿನೈದು ವರ್ಷಗಳು ಜಾಸ್ತಿಯಾಗಿರಬಹುದು. ನನ್ನ ಪರಿಚಯದವರು, ಸ್ನೇಹಿತರು, ಸಹೋದ್ಯೋಗಿಗಳು ಯಾರಾದರೂ ನಿಧನರಾದಾಗಲೂ ಸರತಿಯ ಸಾಲಿನಲ್ಲಿ ಬದುಕಿನ ನಿಜಸತ್ಯವಾದ ಸಾವಿನೆಡೆಗೆ ಮುಂದುವರೆಯುತ್ತಿರುವಂತೆ ಭಾಸವಾಗುತ್ತಿದೆ. ಒಂದಂತೂ ಸತ್ಯ, ಸಾವು ನನ್ನನ್ನು ಹೆದರಿಸಿಲ್ಲ, ನಾನು ಹೆದರಿಯೂ ಇಲ್ಲ. ನಾನು ಅದು ಯಾವಾಗ ಬಂದರೂ ಸ್ವಾಗತಿಸಲು ಸಿದ್ಧನಿದ್ದೇನೆ. ಹಾಗೆಂದು ನಾನು ಸಾಯಬಯಸಿಲ್ಲ. ಸಾಯುವವರೆಗೂ ಬದುಕಿರಲು ಬಯಸಿರುವೆ. ಬದುಕಿರುವುದೆಂದರೆ ಅಂತಃಸಾಕ್ಷಿ ಒಪ್ಪುವಂತೆ ಬದುಕುವುದು ಮತ್ತು ಅಂತಹ ಪೂರಕ ಪರಿಸರಕ್ಕಾಗಿ ಶ್ರಮಿಸುವುದು, ಆಶಿಸುವುದು. ಸಾಯುವ ಮೊದಲು ಬಂಧುಗಳೆಲ್ಲರೂ ಸಾಮರಸ್ಯದಿಂದ ಇರುವುದನ್ನು ಕಾಣಬೇಕೆಂಬ ಬಯಕೆ ಜೀವಂತವಾಗಿದೆ. ನನ್ನ ಬಯಕೆ ಎಷ್ಟರ ಮಟ್ಟಿಗೆ ಈಡೇರೀತು ಎಂಬುದನ್ನು ಕಾಲವೇ ಹೇಳಲಿದೆ. ಕಠಿಣ ವಾಸ್ತವತೆ ನನ್ನಲ್ಲಿ ಒಂದು ರೀತಿಯ ನಿರ್ಲಿಪ್ತಭಾವ ಪ್ರಧಾನವಾಗಿ ಆವರಿಸುವಂತೆ ಮಾಡುತ್ತಿದೆ. ಹೇಳಬೇಕೆಂದರೆ:
ಎನ್ನ ಕೊನೆಯ ದಿನಗಳ ಮೊದಲ ದಿನಗಳಿವು
ಬಂದ ದಾರಿಯ ನಿಂತು ನೋಡಿದೆ ಮನವು|
ಗುಣಿಸಿ ಭಾಗಿಸಿ ಕೂಡಿ ಕಳೆದುಳಿದ ಶೇಷವು
ಸೋಲೋ ಗೆಲುವೋ ತಿಳಿಯದ  ವಿಷಣ್ಣಭಾವವು||


ನನಗೀಗ ಅರವತ್ತು!    
     ಹೌದು, ಲೆಕ್ಕ ಹಾಕುವ ಹೊತ್ತು. ಈ ದೇಹ ಧರಿಸಿ ಇದುವರೆಗೆ ಸಾಧಿಸಿದ್ದೇನು ಎಂದು ಅವಲೋಕಿಸುವ ಹೊತ್ತು. ಗಳಿಸಿದ್ದೇನು, ಕಳೆದಿದ್ದೇನು, ಉಳಿಸಿದ್ದೇನು, ಕೊಟ್ಟಿದ್ದೇನು, ಪಡೆದಿದ್ದೇನು ಎಂಬುದನ್ನು ಪರೀಕ್ಷಿಸುವ ಹೊತ್ತು. ಅಥರ್ವ ವೇದದಲ್ಲಿನ ಒಂದು ಮಂತ್ರ ಹೇಳುತ್ತದೆ:


ಅನೃಣಾ ಅಸ್ಮಿನ್ನನೃಣಾಃ ಪರಸ್ಮಿನ ತೃತೀಯೇ ಲೋಕೇ ಅನೃಣಾಃ ಸ್ಯಾಮ |
ಯೇ ದೇವಯಾನಾಃ ಪಿತೃಯಾಣಾಶ್ಚ ಲೋಕಾಃ ಸರ್ವಾನ್ಪಥೋ ಅನೃಣಾ ಆ ಕ್ಷಿಯೇಮ ||  (ಅಥರ್ವ. ೬.೧೧೭.೩.)
    ಋಣರಹಿತರಾಗಿ ಬ್ರಹ್ಮಚರ್ಯದಲ್ಲಿರೋಣ. ಗಾರ್ಹಸ್ಥ್ಯದಲ್ಲಿಯೂ, ಋಣರಹಿತರಾಗಿರೋಣ. ಮೂರನೆಯದಾದ ವಾನಪ್ರಸ್ಥದಲ್ಲಿಯೂ, ಋಣರಹಿತರಾಗಿರೋಣ. ಯಾವ ಆಧ್ಯಾತ್ಮಿಕ ಗತಿಯ ಮತ್ತು ಸಾಂಸಾರಿಕಗತಿಯ ಸ್ಥಿತಿಗತಿಗಳಿವೆಯೋ, ಆ ಎಲ್ಲಾ ಮಾರ್ಗಗಳನ್ನೂ ಋಣರಹಿತರಾಗಿ ಸಂಕ್ರಮಿಸೋಣ. ವಾನಪ್ರಸ್ಥ ತೀರಿದ ಮೇಲೆ, ಸಂನ್ಯಾಸ ಸ್ವೀಕರಿಸಲು ಅರ್ಹರಾದವರು ಸಂನ್ಯಾಸಿಗಳು, ದೇವಯಾನ ಮಾರ್ಗಿಗಳಾಗುತ್ತಾರೆ. ಶಕ್ತಿಯಿಲ್ಲದವರು ಹಾಗೆಯೇ ಉಳಿಯುತ್ತಾರೆ. ಯಾವ ದಾರಿಯಲ್ಲೇ ಉಳಿಯಲಿ, ಋಣ ಮಾತ್ರ ಹೊರಬಾರದು. ಬೇರೆಯವರಿಗಾಗಿ ಏನನ್ನೂ ಒಳಿತನ್ನು ಮಾಡದೆ, ತಾನು ಬೇರೆಯವರಿಂದ ಏನನ್ನೂ ಪಡೆಯುವಂತಿಲ್ಲ ಎಂಬುದು ಇದರ ಕರೆ.
     ಮಾತೃಋಣ, ಪಿತೃಋಣ, ಗುರುಋಣ, ಸಮಾಜಋಣ - ಈ ನಾಲ್ಕನ್ನು ಪ್ರಧಾನವಾಗಿ ಪ್ರತಿ ವ್ಯಕ್ತಿ ಹೊಂದಿರುತ್ತಾನೆ. ಆಯಾ ವ್ಯಕ್ತಿಯ ಗುಣಾವಗುಣಗಳು, ಸಾಧನೆಗಳು ಅವನು ಎಷ್ಟರಮಟ್ಟಿಗೆ ಋಣರಹಿತನಾಗಿದ್ದಾನೆ ಎಂಬುದನ್ನು ನಿರ್ಧರಿಸುತ್ತದೆ. ಎಷ್ಟರಮಟ್ಟಿಗೆ ಋಣರಹಿತರಾಗಿ ಬಾಳಲು ಸಾಧ್ಯ ಎಂಬುದು ವಿಚಾರಾರ್ಹ ಸಂಗತಿ. ಈ ಜನ್ಮದ ಶೇಷ ಆಯಸ್ಸಿನಲ್ಲಿ ಯಾರು ಯಾರಿಗೆ ಎಷ್ಟು ಋಣಿಯಾಗಿದ್ದೇನೋ ಅವರುಗಳ ಋಣ ತೀರಿಸುವ ಹೊಣೆ ನನ್ನ ಮೇಲಿದೆ. ಎಷ್ಟರಮಟ್ಟಿಗೆ ಋಣಮುಕ್ತನಾದೇನು, ಗೊತ್ತಿಲ್ಲ, ಇದುವರೆಗಿನ ಬದುಕಿನ ಅವಲೋಕನ, ಆತ್ಮಾವಲೋಕನ ಮಾಡಿಕೊಂಡಾಗ ಋಣಮುಕ್ತನಾದೇನೆಂಬ ಕುರಿತು ವಿಶ್ವಾಸ ಮೂಡುತ್ತಿಲ್ಲ. ಆದ್ದರಿಂದ ನನಗೆ ಇನ್ನೊಂದು ಜನ್ಮವಿದೆ. ಋಣಮುಕ್ತನಾಗುವ, ಮೇಲೇರುವ ಇಚ್ಛೆಯಿದೆಯಾದರೂ, ಈ ದಿಸೆಯಲ್ಲಿ ಪ್ರಯತ್ನ ನಡೆದಿದೆಯಾದರೂ ಕ್ರಮಿಸಬೇಕಾದ ಆ ಹಾದಿ ಇನ್ನೂ ದೂರವಿದೆಯೆಂಬ ಅರಿವು ನನಗಿದೆ. ಋಣಮುಕ್ತನಾಗಿಸೆಂದು ಆ ದೇವನಲ್ಲಿ ನನ್ನ ಮೊರೆಯಿದೆ.  


ನನಗೀಗ ಅರವತ್ತು!
     ನಿವೃತ್ತಿಯಾಗುವ ಹೊತ್ತು. ಜೀವನ ಪಥದ ದಿಕ್ಕು ಬದಲಾಯಿಸಬೇಕಾದ ಹೊತ್ತು. ವಾನಪ್ರಸ್ಥಕ್ಕೆ ಮನ ಸಿದ್ಧಗೊಳ್ಳಬೇಕಾದ ಹೊತ್ತು. ವಾನಪ್ರಸ್ಥವೆಂದರೆ ಕಾಡಿಗೆ ಹೋಗಿ ಧ್ಯಾನ, ತಪಸ್ಸಿಗೆ ತೊಡಗುವುದೆಂದಲ್ಲ. ಮೋಕ್ಷ ಮತ್ತು ಧರ್ಮದ ಕುರಿತು ಚಿಂತನೆ ನಡೆಸುವುದು, ಆ ಹಾದಿಯಲ್ಲಿ ಕ್ರಮಿಸುವುದು. ಲೌಕಿಕ ಸಂಗತಿಗಳಲ್ಲಿ ಆಸಕ್ತಿ ಕಡಿಮೆ ಮಾಡಿಕೊಳ್ಳುವುದು. ನನ್ನ ದೃಷ್ಟಿಯಲ್ಲಿ ಧರ್ಮ ಮತ್ತು ಮೋಕ್ಷದ ಚಿಂತನೆಯೆಂದರೆ ಸಮಾಜಮುಖಿಯಾಗಿ, ದೇಶಮುಖಿಯಾಗಿ ಅಂತರಂಗ  ಯಾವುದನ್ನು ಒಳ್ಳೆಯದು ಎಂದು ಹೇಳುತ್ತದೋ ಆ ಹಾದಿಯಲ್ಲಿ ಸಾಗುವುದು, ಪ್ರಯತ್ನಪೂರ್ವಕವಾಗಿ ಧನಾತ್ಮಕವಾಗಿರುವುದು(ಪಾಸಿಟಿವ್),  ಋಣಾತ್ಮಕ (ನೆಗೆಟಿವ್)  ವಿಚಾರಗಳಿಂದ ದೂರವಿರುವುದು. ಈ ಪಥ ಬದಲಾವಣೆ ಸುಲಭವೆಂದು ಅನ್ನಿಸುತ್ತಿಲ್ಲ. 
     ಕಳೆದ ಎರಡು - ಮೂರು  ವರ್ಷಗಳಿಂದ ಬರವಣಿಗೆಯ ಕಾರ್ಯದಲ್ಲಿ ಸಕ್ರಿಯನಾಗಿ ತೊಡಗಿಕೊಂಡಿದ್ದು  ಮನದ ಭಾವನೆಗಳು ಬರವಣಿಗೆಯ ರೂಪದಲ್ಲಿ ಹೊರಹೊಮ್ಮುತ್ತಿವೆ. ಕಾಲಾನಂತರದಲ್ಲಿ ನನ್ನದಾಗಿ ಏನಾದರೂ ಅಲ್ಪ ಸ್ವಲ್ಪ ಉಳಿದರೆ ಅದು ನನ್ನ ಬರವಣಿಗೆ ಮಾತ್ರ. ಅದೂ ನಂತರದ ಕೆಲವು ಅವಧಿಯವರೆಗೆ ಮಾತ್ರ ಹಾಗೂ ಯಾರಾದರೂ ಗುರುತಿಸಿದಾಗ ಮಾತ್ರ ಎಂಬುದರ ಅರಿವಿದೆ. ಮುನಿಶ್ರೀ ತರುಣಸಾಗರಜಿಯವರು ಹೇಳಿದ ಮಾತೊಂದು ನನ್ನಲ್ಲಿ ಅಚ್ಚೊತ್ತಿದೆ. ಅದೆಂದರೆ "ಸತ್ತ ನಂತರವೂ ಜನ ನಿಮ್ಮನ್ನು ಮರೆಯಬಾರದು ಎಂದು ನೀವು ಭಾವಿಸುವುದಾದರೆ ಎರಡರಲ್ಲಿ ಒಂದು ಕೆಲಸವನ್ನಾದರೂ ಖಂಡಿತವಾಗಿ ಮಾಡಿ. ಓದಲು ಸಾಧ್ಯವಿರುವ ಯಾವುದನ್ನಾದರೂ ಬರೆದುಬಿಡಿ ಅಥವಾ ಬರೆಯಲು ಸಾಧ್ಯವಿರುವಂಥದ್ದನ್ನು ಏನಾದರೂ ಬರೆದುಬಿಡಿ. ಓದಲು ಲಾಯಕ್ಕಾಗಿರುವಂಥಹದೇನಾದರೂ ಬರೆಯಿರಿ ಅಥವಾ ಬರೆಯುವುದಕ್ಕೆ ಲಾಯಕ್ಕಾಗಿರುವಂತಹ ಕೆಲಸವನ್ನೇನಾದರೂ ಮಾಡಿಬಿಡಿ. ಪ್ರಪಂಚದಲ್ಲಿ ಯಾವುದೇ ವ್ಯಕ್ತಿಯನ್ನು ಆತನ ಬಹುಮೂಲ್ಯ ಕೃತಿಗಳಿಗಾಗಿ ಅಥವಾ ಕೃತ್ಯಗಳಿಗಾಗಿ ಮಾತ್ರ ನೆನಪು ಮಾಡಿಕೊಳ್ಳಲಾಗುತ್ತದೆ".  ನಾನು ಇಷ್ಟಪಡುವ  ಕೆಲಸಗಳಲ್ಲಿ ತೊಡಗಿಕೊಂಡಿರುವುದು ಹೆಸರು ಮತ್ತು ಪ್ರಸಿದ್ಧಿಯ ಸಲುವಾಗಿ ಎಂದು ಹತ್ತಿರದ ಬಂಧುವೊಬ್ಬರು ಹೇಳಿದ ಮಾತು ನನ್ನನ್ನು ಘಾಸಿಗೊಳಿಸಿದರೂ ಅರಗಿಸಿಕೊಂಡಿದ್ದೇನೆ. ತಹಸೀಲ್ದಾರನಾಗಿ ನನಗೆ ಒಳ್ಳೆಯ ಹೆಸರಿತ್ತು. ಸ್ವಇಚ್ಛಾ ನಿವೃತ್ತಿ ಪಡೆದಿರದಿದ್ದರೆ ಹಿರಿಯ ಅಸಿಸ್ಟೆಂಟ್ ಕಮಿಷನರರಾಗಿ ನಿವೃತ್ತನಾಗಬಹುದಿತ್ತು. ಇನ್ನೂ ಹೆಚ್ಚಿನ ಹೆಸರು, ಪ್ರಸಿದ್ಧಿ ಪಡೆಯಲು ಅವಕಾಶವಿತ್ತು. ನನ್ನ ಮನ ಹಗುರ ಮಾಡಿಕೊಳ್ಳಲು ಈ ಬರವಣಿಗೆ ನೆರವಾಗಿದೆ. ಅರಳು-ಮರಳು ಆವರಿಸುವ ಮುನ್ನ, ಶಕ್ತಿ ಕುಂದುವ ಮುನ್ನ, ಮರೆವು ಬರುವ ಮುನ್ನ, ಮನ ನುಡಿದಿದ್ದನ್ನು ಕಪ್ಪು-ಬಿಳಿಯಲ್ಲಿ ಮೂಡಿಸುವ ಬಯಕೆಯಿದೆ. ಮುಪ್ಪಿನಲ್ಲಿ 'ಊರು ಹೋಗು ಎನ್ನುತ್ತಿದೆ, ಕಾಡು ಬಾ ಎನ್ನುತ್ತಿದೆ' ಎಂಬ ಭಾವ ಬರುವ ಮುನ್ನ ತೋಚಿದ್ದನ್ನು ಗೀಚಬೇಕೆನ್ನಿಸಿದೆ. ನಾನೊಬ್ಬ ಪಂಡಿತ, ದೊಡ್ಡ ಬರಹಗಾರನೆಂದಲ್ಲ, ನನಗೆ ಪಾಂಡಿತ್ಯವಿದೆಯೆಂದೂ ನಾನು ಅಂದುಕೊಂಡಿಲ್ಲ. ಇದನ್ನು ಮನದೊಳಗಣ ತುಂಬಿದ ಭಾವನೆಗಳನ್ನು ಹೊರಹಾಕಿ ಹಗುರಗೊಳ್ಳುವ ಇರಾದೆಯೆನ್ನಬಹುದು. ಬಿಟ್ಟರೂ ಬಿಡದೀ ಮಾಯೆ ಅನ್ನುವುದು ಇದಕ್ಕೇ ಇರಬೇಕು. ಗೋಂದಾವಲೀ ಮಹಾರಾಜರ ಉಪನ್ಯಾಸವೊಂದರ ಆಡಿಯೋ ಕೇಳಿದ್ದು, ಅವರು ಹೇಳಿದ್ದ ಒಂದು ಸ್ವಾರಸ್ಯಕರವಾದ ಪ್ರಸಂಗ ನೆನಪಾಗುತ್ತಿದೆ. ಒಬ್ಬರು ೯೫ ವರ್ಷದ ವೃದ್ಧೆ ಅವರನ್ನು ಉದ್ದೇಶಿಸಿ, "ಸ್ವಾಮಿ, ನನಗೆ ಇನ್ನು ಯಾವ ಆಸೆಯೂ ಇಲ್ಲ, ನನ್ನ ಮಕ್ಕಳು, ಮೊಮ್ಮಕ್ಕಳೆಲ್ಲಾ ಸುಖವಾಗಿ ಚೆನ್ನಾಗಿದ್ದಾರೆ. ನಿಮ್ಮ ಪಾದದ ಬಳಿ ನನ್ನ ಕೊನೆಯುಸಿರು ಬಿಡಬೇಕೆಂದು ಆಸೆ" ಎಂದರಂತೆ. ಅವಧೂತರು, 'ಅದಕ್ಕೇನಂತೆ, ಹಾಗೇ ಮಾಡಿ, ಬನ್ನಿ' ಎಂದರಂತೆ. ಆ ವೃದ್ಧೆ ಗಾಬರಿಯಾಗಿ "ಈಗಲೇ ಅಲ್ಲ ಸ್ವಾಮಿ, ಇನ್ನು ಕೆಲವು ತಿಂಗಳಲ್ಲಿ ನನ್ನ ಮೊಮ್ಮಗಳಿಗೆ ಮದುವೆಯಾಗಲಿದೆ. ಅವಳ ಮದುವೆ ನೋಡಿ, ಅವರು ಸುಖವಾಗಿರುವುದನ್ನು ಕಂಡು ಮರಿಮಗುವನ್ನು ಎತ್ತಾಡಿಸುವ ಒಂದು ಸಣ್ಣ ಆಸೆ ಉಳಿದಿದೆ"ಎಂದಳಂತೆ. ವಾನಪ್ರಸ್ಥದ ಮಾತನಾಡುವುದರೊಂದಿಗೆ ಬರವಣಿಗೆ ಕುರಿತು ಹೇಳಿಕೊಂಡಿದ್ದು,  ನನ್ನ ಸ್ಥಿತಿಯೂ ಹೀಗೇ ಆಗಿದೆಯೋ ಏನೋ, ಅಂತಲೂ ಅನ್ನಿಸಿದೆ. ಈ ಮೋಹವೆಂಬ ಮಾಯಾಂಗನೆಯ ಮುಸುಕು ಸರಿಸುವುದು ಎಷ್ಟು ಕಷ್ಟವೆಂಬುದರ ಅರಿವು ನನಗಿದೆ. ಪ್ರಶ್ನೆಗೆ ಉತ್ತರ ಗೊತ್ತಿದ್ದರೆ ಮಾತ್ರ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದಿಲ್ಲ, ಗೊತ್ತಿರುವ ಉತ್ತರವನ್ನು ಬರೆದರಲ್ಲವೇ ತೇರ್ಗಡೆಯಾಗುವುದು? ನನಗೂ ಅಂತಹ ಕಾಲವೊಂದು ಬಂದೀತು! ಬರಲಿ! 


ನನಗೀಗ ಅರವತ್ತು!
     ಚಿಂತನೆ ನಡೆಸುವ ಹೊತ್ತು. ದೇಹದಲ್ಲಿ ಪ್ರಾಣವಿರುವವರೆಗೂ ದೇಹಕ್ಕೆ ಅರ್ಥವಿರುತ್ತದೆ. ನಂತರದಲ್ಲಿ ಅದು ವ್ಯಕ್ತಿಯೆಂದು ಗುರುತಿಸಲ್ಪಡದೆ ವ್ಯಕ್ತಿಯ ದೇಹ(ಹೆಣ)ವೆಂದು ಕರೆಯಲ್ಪಡುತ್ತದೆ. ಸತ್ತ ನಂತರದಲ್ಲಿ ಜನರು ದೇಹವನ್ನು  ಸುಡುವುದೋ, ಹೂಳುವುದೋ, ಇತ್ಯಾದಿ ತಮ್ಮ ಸಂಪ್ರದಾಯಗಳಿಗನುಸಾರವಾಗಿ ಮಾಡುತ್ತಾರೆ. ಹಿಂದೂಗಳು ಪುನರ್ಜನ್ಮವನ್ನು ನಂಬುತ್ತಾರೆ. ಭಗವದ್ಗೀತೆಯಲ್ಲಿ, ವೇದದ ಉಲ್ಲೇಖಗಳಲ್ಲಿ ತಿಳಿಸಲ್ಪಟ್ಟಿರುವ ಪ್ರಕಾರ ಆತ್ಮ ಅವಿನಾಶಿ, ಅನಂತ. ಮರಣಾನಂತರ ಆತ್ಮ ಇನ್ನೊಂದು ಜೀವಿಯಾಗಿ ಜನ್ಮ ತಾಳುತ್ತದೆ. ಹಳೆಯ, ಹರಿದ ಅಂಗಿಯನ್ನು ತೊರೆದು ಹೊಸ ಅಂಗಿಯನ್ನು ತೊಡುವಂತೆ ಆತ್ಮ ಜೀರ್ಣ ಶರೀರ ತೊರೆದು ಇನ್ನೊಂದು ಶರೀರಧಾರಣೆ ಮಾಡುತ್ತದೆ ಎಂಬುದು ಪ್ರಚಲಿತ ನಂಬಿಕೆ. ಮೃತ ಶರೀರವನ್ನು ಉತ್ತರಕ್ರಿಯಾಕರ್ಮಗಳಿಂದ ಪಂಚಭೂತಗಳಲ್ಲಿ ಲೀನಗೊಳಿಸಲಾಗುತ್ತದೆ. ಆತ್ಮ ಅವಿನಾಶಿಯಾದ್ದರಿಂದ ಸಂಬಂಧಿಸಿದ ವ್ಯಕ್ತಿ ಅಪೇಕ್ಷೆ ಪಟ್ಟಿದ್ದಲ್ಲಿ ಅವನ ಇಚ್ಛೆಯಂತೆ ಆತನ ಮೃತಶರೀರವನ್ನು ವಿಲೇವಾರಿ ಮಾಡಿದರೆ ಅದರಲ್ಲಿ ತಪ್ಪಿಲ್ಲವೆಂದು ನನ್ನ ಅನಿಸಿಕೆ. ಆತ್ಮದ ಸದ್ಗತಿ ಕೋರಿ ಮಾಡುವ ಇತರ ಕರ್ಮಗಳನ್ನು ಸಂಬಂಧಿಕರು ಅವರು ಬಯಸಿದಲ್ಲಿ ಮಾಡಿಕೊಳ್ಳಬಹುದು. ಶ್ರಾದ್ಧಾದಿ ಕಾರ್ಯಗಳು ಮಾಡುವವರು ತಮ್ಮ ಹಿರಿಯರನ್ನು ನೆನೆಸಿಕೊಂಡು ಸಲ್ಲಿಸುವ ಕೃತಜ್ಞತೆಯೆನ್ನಬಹುದಷ್ಟೆ. ಅದರ ಫಲವೇನಿದ್ದರೂ ಮಾಡುವವರಿಗಷ್ಟೆ.  ಯಾವುದೇ ವ್ಯಕ್ತಿಗೆ ಆತನ ಕರ್ಮಾನುಸಾರ ಫಲಗಳು ಸಿಕ್ಕುವುದೆಂಬುದು ತಿಳಿದವರು ಹೇಳುವರು. ಹೀಗಿರುವಾಗ ಅವನಿಗೆ ಅವನ ಮರಣದ ನಂತರ ಇತರರು ಒಳ್ಳೆಯ ಫಲ ದೊರೆಯುವಂತೆ ಮಾಡುವುದು ಹೇಗೆ ಸಾಧ್ಯ? ಪ್ರಳಯ, ಪ್ರವಾಹ, ಇತ್ಯಾದಿ ನೈಸರ್ಗಿಕ ಕಾರಣಗಳಿಂದ ಉತ್ತರಕ್ರಿಯೆ ಮಾಡುವವರೂ ಇಲ್ಲದಂತೆ ನಾಶವಾಗುವ ಸಹಸ್ರಾರು ಜೀವಗಳಿಗೆ ಸದ್ಗತಿ ದೊರೆಯುವುದಿಲ್ಲವೆಂದು ಹೇಳಲಾಗುವುದೆ? ಈ ಮುಪ್ಪಡರಿರುವ ಶರೀರದ ಮೇಲೆ ಸತ್ತ ಮೇಲೂ ಸಹ ಮೋಹ ಇರಿಸಿಕೊಳ್ಳುವಷ್ಟು ಮೋಹ ಆ ದೇವರ ದಯೆಯಿಂದ ನನಗಿಲ್ಲ. ಆದ್ದರಿಂದ ನನ್ನ ಮರಣಾನಂತರ ನನ್ನ ದೇಹದ ಉಪಯೋಗಕ್ಕೆ ಬರುವಂತಹ ಅಂಗಗಳನ್ನು ತೆಗೆದು ಯಾರಿಗಾದರೂ ಉಪಯೋಗಕ್ಕೆ ಬರುವಂತೆ ನೋಡಿಕೊಳ್ಳಲು ಮತ್ತು ನನ್ನ ದೇಹವನ್ನು ಸಹ ಹತ್ತಿರದ ಯಾವುದಾದರೂ ವೈದ್ಯಕೀಯ ಕಾಲೇಜಿಗೆ ದಾನ ಮಾಡುವ ಮನಸ್ಸನ್ನು ನನ್ನ ಸಂಬಂಧಿಕರು ಮಾಡಬೇಕೆಂದು ಬಯಸುವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇದು ನನ್ನ ಉಯಿಲು ಎಂದು ಭಾವಿಸಬಹುದು. ನನ್ನ ಸಂಬಂಧಿಕರಿಗಾಗಲೀ, ಮಿತ್ರರಿಗಾಗಲೀ ನಾನು ನನ್ನ ಈ ಅಭಿಪ್ರಾಯದಿಂದ ನೋವಾಗದಿರಲಿ ಎಂಬುದು ನನ್ನ ಮನದಾಳದ ಬಯಕೆ. ವಾಸ್ತವತೆ ಅರಿತಲ್ಲಿ, ಬದುಕಿನ ಮಹತ್ವ ತಿಳಿದಲ್ಲಿ ನನ್ನ ಈ ಬಯಕೆ ನಿಜವಾಗಿ ಬದುಕುವ ಬಯಕೆ ಎಂಬುದು ಅರ್ಥವಾಗಬಹುದು. ಈ ಹಿಂದೆ ಬರೆದ ನನ್ನ  'ಮೇಲಕ್ಕೇರಿದ ಮೈಲಾರಶರ್ಮ ಮೂಡಿಸಿದ ವಿಚಾರತರಂಗ' 
(http://kavimana.blogspot.com/2011/10/blog-post_31.html) ಎಂಬ ಲೇಖನದಲ್ಲಿ ಈಕುರಿತು ನನ್ನ ವಿವರವಾದ, ವಿಸ್ತಾರವಾದ ಅನಿಸಿಕೆಯನ್ನು ಈಗಾಗಲೇ ದಾಖಲಿಸಿರುವೆ. ಆಸಕ್ತರು ಗಮನಿಸಬಹುದು.ಸಂಬಂಧಿಕರು ಮಾತ್ರ ಇದನ್ನು ಓದಲೇಬೇಕೆಂಬುದು ನನ್ನ ಇಚ್ಛೆ. ಬದುಕಿದ್ದಾಗ ನನ್ನಿಂದ ಯಾರಿಗೆ ಉಪಕಾರವಾಗಿದೆಯೋ, ಇಲ್ಲವೋ ಗೊತ್ತಿಲ್ಲ, ಸತ್ತಮೇಲಾದರೂ ಉಪಯೋಗವಾಗಲಿ ಎಂಬುದು ನನ್ನ ಕಿರು ಆಶಯ.
ಅರಿತವರು ಹೇಳಿಹರು ಅಚ್ಚರಿಯ ಸಂಗತಿಯ
ಆತ್ಮಕ್ಕೆ ಅಳಿವಿಲ್ಲ ಹುಟ್ಟು ಸಾವುಗಳಿಲ್ಲ |
ಬದಲಾಗದು ಬೆಳೆಯದು ನಾಶವಾಗದು 
ಚಿರಂಜೀವ ನಿತ್ಯ ಶಾಶ್ವತವು ಮೂಢ ||


ನನಗೀಗ ಅರವತ್ತು!
     ಹಿರಿಯ ನಾಗರಿಕರ ಸಾಲಿಗೆ ಸೇರಿರುವ ಹೊತ್ತು. ದೈಹಿಕ ಶಕ್ತಿ ಕುಂದಲು ಮತ್ತು ಮುಪ್ಪು ತನ್ನ ಇರುವನ್ನು ತೋರಿಸಲು ಪ್ರಾರಂಭಿಸುವ ಹೊತ್ತು. ನಿಂದಾಸ್ತುತಿಗಳಿಗೆ ಪಕ್ಕಾಗುವ ಹೊತ್ತು. ಅದನ್ನು ಯೋಗ್ಯತಾನುಸಾರ ಪಡೆಯುವ ಹೊತ್ತು. ನಿಂದೆ, ಹೀಗಳಿಕೆಗಳನ್ನು ಎದುರಿಸಲು, ಪ್ರತಿಭಟಿಸಲು ಮನವಿದ್ದರೂ ವಸ್ತುಸ್ಥಿತಿ ವಿರುದ್ಧವಾಗಿರುವ ಹೊತ್ತು, ಮೌನವಾಗಿ ನುಂಗಬೇಕಾಗಿ ಬರುವ ಹೊತ್ತು.   ಕಸುವು ಇದ್ದಾಗ ಮತ್ತು ಕಸುವು ಇಲ್ಲದಾಗ, ಅಧಿಕಾರವಿದ್ದಾಗ ಮತ್ತು ಇಲ್ಲದಿದ್ದಾಗ, ಆರೋಗ್ಯವಿದ್ದಾಗ ಮತ್ತು ಇಲ್ಲದಿದ್ದಾಗ, ವಯಸ್ಕನಾಗಿದ್ದಾಗ ಮತ್ತು ಮುಪ್ಪಡರಿದಾಗ ವ್ಯಕ್ತಿಯ ಬಗ್ಗೆ ಇತರರ ಮನೋಭಾವ ಹೇಗಿರುತ್ತದೆ, ಹೇಗೆ ಬದಲಾಗುತ್ತದೆ ಎಂಬುದು ತಿಳಿದಿರುವ ವಿಷಯ. ಇದನ್ನು ಸರಿ-ತಪ್ಪುಗಳ ಅಳತೆಗೋಲಿನಲ್ಲಿ ಅಳೆಯಲಾಗುವುದಿಲ್ಲ. ವಾಸ್ತವತೆಯ ಬೆಳಕಿನಲ್ಲಿ ನೋಡಬೇಕು. ವಯಸ್ಸಿದ್ದಾಗ ಆಶ್ರಯ ಕೊಡುತ್ತಿದ್ದವರು ಮುಪ್ಪಿನಲ್ಲಿ ಆಶ್ರಯ ಬಯಸುವಂತಹ ಸ್ಥಿತಿ ಬರುತ್ತದೆ. ನನಗೆ ಇಂತಹ ಸ್ಥಿತಿ ಬಂದಿದೆಯೆಂದು ನಾನು ಹೇಳುತ್ತಿಲ್ಲ. ವಸ್ತುಸ್ಥಿತಿಯ ವಿಶ್ಲೇಷಣೆ ಮಾಡುತ್ತಿದ್ದೇನಷ್ಟೆ. ಇರುವಷ್ಟು ಕಾಲ ಯಾರಿಗೂ ಹೊರೆಯೆನಿಸದಂತೆ ಬಾಳಬೇಕೆಂಬ ಬಯಕೆ ಈಡೇರಲಿ ಎಂದು ಆ ದೇವನಲ್ಲಿ ನನ್ನ ಬೇಡಿಕೆಯಿದೆ. 


ನನಗೀಗ ಅರವತ್ತು!
     ಎಲ್ಲರಿಗೂ ಶುಭವ ಬಯಸುವ ಹೊತ್ತು, ಶುಭವ ಕಾಣುವ ಹೊತ್ತು. 


ಶುಭವ ನೋಡದಿರೆ ಕಣ್ಣಿದ್ದು ಕುರುಡ
ಶುಭವ ಕೇಳದಿರೆ ಕಿವಿಯಿದ್ದು ಕಿವುಡ |
ಶುಭವ ನುಡಿಯದಿರೆ ಬಾಯಿದ್ದು ಮೂಕ
ಇದ್ದೂ ಇಲ್ಲದವನಾಗದಿರು ಮೂಢ ||


ಸರ್ವೇ ಜನಾಃ ಸುಖಿನೋ ಭವನ್ತು.
*******

2 ಕಾಮೆಂಟ್‌ಗಳು:

 1. ಆತ್ಮೀಯ ನಾಗರಾಜ್ ರವರಿಗೆ,
  ನಿಮ್ಮ ಭಾವನ ಡೈರಿಯ ಪುಟಗಳನ್ನೂ ಓದಿದೆ. ಒಂದು ತಿದ್ದುಪಡಿ ಬೇಕೆಂದು ಅನಿಸಿತು. "ನನಗೀಗ ಅರವತ್ತು" ಎನ್ನುವ ಕಡೆ " ನನಗೀಗ ಅರವತ್ತೇ!" ಎಂದು ಇರಬೇಕಾಗಿತ್ತು ಅಲ್ಲವೇ. ನಿಮ್ಮೆಲ್ಲ ಮನದಾಳದ ಮಾತುಗಳಿಗೆ ನನ್ನ ಗುರುನಾಥರ ಮಾತುಗಳು ಸಮಯೋಚಿತ ಎನಿಸುತ್ತದೆ. " ಸಿದ್ದನಾಗಿರು, ಸಿದ್ದಮಾಡಿ ಕೊಳ್ಳಬೇಡ" ಎಂದು ಯಾವಾಗಲು ಹೇಳುತ್ತಿದ್ದರು. ಸಿದ್ದಮಾಡಿಕೊಳ್ಳಲು ನಾವೆಷ್ಟರವರು? ಆದರೆ ಸಿದ್ದನಾಗಿರಬಹುದಲ್ಲವೇ? ಇದೇ ಮನಸ್ಥಿತಿ ನಿಮ್ಮದು. ಜೊತೆಗೆ " ಅನಾಯಾಸೇನ ಮರಣಂ ವಿನ ದೈನ್ಯೇನ ಜೀವನಂ" ಎಂಬ ಪ್ರಾರ್ಥನಾ ಸಂಕಲ್ಪದೊಂದಿಗೆ ಇದ್ದಿರ!
  ಸರಳವಾದ ಮಾತುಗಳಲ್ಲಿ ಹೇಳಬೇಕೆಂದರೆ " ಕರೆದಾಗ ಓ ಎನ್ನುತ ಓಡೋಡಿ ಬರುವೆ, ನಿನ್ನ ಅಮೃತದ ಆ ನಿನಾದದ ದನಿಗಾಗಿ ಕಾಯುವೆ............. " ಎಷ್ಟೊಂದು ಬರೆಯಲು ಇದೆ.
  ಒಮ್ಮೆ ಮುಖತಃ ಬೆಟ್ಟಿಯಾದಾಗ ಆಡುವ ಮಾತು ಸಾಕಷ್ಟಿದೆ. ಆ ಸಮಯಕ್ಕೆ ಕಾಯುವೆ.
  ವಿಚಾರ ವಿನಿಮಯಕ್ಕಾಗಿ ಕೃತಜ್ಞ,
  ಪ್ರಕಾಶ್.

  ಪ್ರತ್ಯುತ್ತರಅಳಿಸಿ
 2. I AM ALSO NOW AT THE EDGE OF 60. A VERY GOOD ARTICLE WITH YOUR SIMPLICITY AND HUMBLENESS WORDS FROM THE HEART.

  ಪ್ರತ್ಯುತ್ತರಅಳಿಸಿ