ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ನವೆಂಬರ್ 18, 2011

ಲೋಕಾಯುಕ್ತ ದಾಳಿ - ನನ್ನ ಅನುಭವಗಳು -2

      ಇದು ಸುಮಾರು ೨೦ ವರ್ಷಗಳ ಹಿಂದಿನ ಘಟನೆ. ನಾನಾಗ ಹೊಳೆನರಸಿಪುರದಲ್ಲಿದ್ದೆ. ಒಂದು ಆರ್ಥಿಕ ಸಮೀಕ್ಷಾಕಾರ್ಯ ನಡೆಸಲು ಎಲ್ಲಾ ಇಲಾಖೆಗಳಿಂದ ಆಯ್ದ ಅಧಿಕಾರಿಗಳ ಮತ್ತು ನೌಕರರ ತರಬೇತಿ ಸಭೆ ಹಳೇಕೋಟೆಯ ಒಂದು ಕಾಲೇಜು ಸಭಾಂಗಣದಲ್ಲಿ ಆಯೋಜಿತವಾಗಿತ್ತು. ಹೊಳೆನರಸಿಪುರದ ವಿಶೇಷ ಭೂಸ್ವಾಧೀನಾಧಿಕಾರಿಯವರ ಕಛೇರಿಯ ರೆವಿನ್ಯೂ ಇನ್ಸ್‌ಪೆಕ್ಟರ್ ನನ್ನ ಬಳಿ ಬಂದು ತನ್ನ ಹತ್ತಿರದ ಬಂಧು ಒಬ್ಬರು ತೀವ್ರ ಅನಾರೋಗ್ಯದಿಂದಿದ್ದಾರೆಂದು ಹೇಳಿ ಅವರಿಗೆ ಚಿಕಿತ್ಸೆ ಕೊಡಿಸಿ ಬರುವುದಾಗಿಯೂ, ತಡವಾಗಿ ಬರುವುದಾಗಿಯೂ ಕೇಳಿಕೊಂಡರು. ಮಾನವೀಯತೆಯ ಕಾರಣದಿಂದ ಒಪ್ಪಿ ಆದಷ್ಟು ಬೇಗ ಬರಬೇಕೆಂದು ತಿಳಿಸಿದ್ದೆ. ಮಧ್ಯಾಹ್ನದ ವೇಳೆಗೆ ಆತ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತದ ಬಲೆಗೆ ಸಿಕ್ಕಿಬಿದ್ದ ಸುದ್ದಿ ಬಂತು. ನಿಜವಾಗಿ ನಡೆದದ್ದೇನೆಂದರೆ ಭೂಸ್ವಾಧೀನದ ಪರಿಹಾರದ ಚೆಕ್ ನೀಡಲು ಲಂಚ ಪಡೆಯುವ ಸಲುವಾಗಿ ಆತ ಬಂಧುವಿನ ಅನಾರೋಗ್ಯದ ಸುಳ್ಳು ಹೇಳಿದ್ದ. ಆತ ತರಬೇತಿಗೆ ಹಾಜರಾಗಿದ್ದಿದ್ದರೆ ಈ ಗತಿ ಬರುತ್ತಿರಲಿಲ್ಲ. ಸಾಯಂಕಾಲ ಹೊಳೆನರಸಿಪುರಕ್ಕೆ ನಾವು ಬರುವ ಸಮಯದಲ್ಲಿ ಲುಂಗಿ ಉಟ್ಟಿದ್ದ (ಪ್ಯಾಂಟನ್ನು ಜಪ್ತಿ ಮಾಡಿಕೊಂಡಿದ್ದರು) ಆತನನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲು ಕರೆದೊಯ್ಯಲಾಗುತ್ತಿತ್ತು. ತಲೆ ತಗ್ಗಿಸಿ ನಡೆಯುತ್ತಿದ್ದ ಆತನನ್ನು ಕಂಡು ಅಯ್ಯೋ ಅನ್ನಿಸಿತು.


     ಮೇಲಿನ ಘಟನೆ ನಡೆದು ಒಂದೆರಡು ವರ್ಷಗಳಾಗಿರಬಹುದು. ನಾನಾಗ ಸಕಲೇಶಪುರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. ಒಂದು ದಿನ ರಾತ್ರಿ ಸುಮಾರು ೧೧ ಘಂಟೆಯಾಗಿತ್ತು. ಮನೆಯ ಬಾಗಿಲು ಬಡಿದ ಸದ್ದು ಕೇಳಿ ನೋಡಿದರೆ ಗಾಬರಿಯಲ್ಲಿದ್ದಂತೆ ಕಂಡು ಬಂದ ಸಕಲೇಶಪುರದ ಪಂಚಾಯಿತಿ ವಿಸ್ತರಣಾಧಿಕಾರಿ ಮಾತನಾಡಲು ತಡವರಿಸುತ್ತಿದ್ದರು. ಒಳಗೆ ಕರೆದು ನೀರು ಕುಡಿಯಲು ಕೊಟ್ಟೆ. ಸಮಾಧಾನವಾದ ನಂತರ ಅವರು ಹೇಳಿದ್ದೇನೆಂದರೆ ಹೊಳೆನರಸಿಪುರದ ಶಿರಸ್ತೇದಾರರೊಬ್ಬರನ್ನು ಲಂಚ ಸ್ವೀಕರಿಸುವಾಗ ಹಿಡಿಯಲು ತನ್ನನ್ನು ಸಾಕ್ಷಿಯಾಗಿ ಕರೆದುಕೊಂಡು ಹೋಗಿದ್ದರೆಂದೂ, ಅವರು ಮಧ್ಯಾಹ್ನ ರಜೆಯಲ್ಲಿದ್ದರಿಂದ ತನ್ನನ್ನು ವಾಪಸು ಕರೆದುಕೊಂಡು ಬಂದರೆಂದೂ ಹೇಳಿದರು. ಸಾಯಂಕಾಲ ೬ ಘಂಟೆಗೇ ವಾಪಸು ಬಂದರೂ ತನ್ನನ್ನು ಲೋಕಾಯುಕ್ತ ಕಛೇರಿಯಲ್ಲಿ ಈ ಕ್ಷಣದವರೆಗೂ ಕೂರಿಸಿಕೊಂಡಿದ್ದರೆಂದೂ, ಮರುದಿನ ಬೆಳಿಗ್ಗೆ ೫ ಘಂಟೆಗೇ ಬರಲು ಹೇಳಿದ್ದಾರೆಂದೂ ತಿಳಿಸಿದರು. ಬಹುಷಃ ಬೇರೆ ಯಾರಿಗೂ ಸುದ್ದಿ ತಿಳಿಯದಿರಲಿ ಎಂದು ಹಾಗೆ ಮಾಡಿದ್ದಿರಬೇಕು. ನಾನು ಹಿಂದೆ ಹೊಳೆನರಸಿಪುರದಲ್ಲಿ ಕೆಲಸ ಮಾಡಿದ್ದರಿಂದ ಅವರಿಗೆ ಹೇಗಾದರೂ ಮಾಡಿ ಸುದ್ದಿ ಕೊಡಲು ನನಗೆ ಕೋರಿಕೊಂಡರು. ಆ ಅಧಿಕಾರಿಗೆ ಹೊಳೆನರಸಿಪುರದ ಶಿರಸ್ತೇದಾರರ ಪರಿಚಯವಿರದೇ ಇದ್ದರೂ, ಅವರಿಗೆ ತೊಂದರೆಯಾಗಬಾರದೆಂಬ ಕಳಕಳಿಯಿತ್ತು. ನಾನು ಸುದ್ದಿ ತಲುಪಿಸಿದೆ. ಶಿರಸ್ತೇದಾರರು ನಂತರದ ಎರಡು ದಿನಗಳು ರಜೆ ವಿಸ್ತರಿಸಿ ಕಛೇರಿಗೇ ಬರಲಿಲ್ಲ. ರಜೆಯಲ್ಲಿದ್ದುಕೊಂಡೇ ಯಾರು ತನ್ನನ್ನು ಸಿಕ್ಕಿಸಲು ಪ್ರಯತ್ನಿಸುತ್ತಿದ್ದರೋ ಅವರ ಕೆಲಸ ಬೇಗ ಮಾಡಿಕೊಡುವಂತೆ ಇತರ ಸಹೋದ್ಯೋಗಿಗಳಿಗೆ ಹೇಳಿ ಮಾಡಿಸಿದರು. ಹೀಗಾಗಿ ಅವರು ಬಚಾವಾದರು. ಆ ಪಂಚಾಯಿತಿ ಅಧಿಕಾರಿ ಮತ್ತು ನಾನು ಮಾಡಿದ ಆ ಕೆಲಸ ಒಂದು ರೀತಿಯಲ್ಲಿ ಸರಿಯೂ ಆಗಿತ್ತು, ತಪ್ಪೂ ಆಗಿತ್ತು.


     ಶಿಕಾರಿಪುರದಲ್ಲಿ ತಹಸೀಲ್ದಾರನಾಗಿದ್ದ ನನಗೆ ವರ್ಗಾವಣೆಯಾಗಿ ಶಿವಮೊಗ್ಗಕ್ಕೆ ಬಂದ ಒಂದೆರಡು ತಿಂಗಳಿನಲ್ಲಿ (ಸುಮಾರು ಮೂರು ವರ್ಷಗಳ ಹಿಂದೆ) ನಡೆದ ಘಟನೆಯಿದು. ಶಿಕಾರಿಪುರದ ತಾಲ್ಲೂಕು ಕಛೇರಿಯ ಗ್ರಾಮಲೆಕ್ಕಿಗ, ರೆವಿನ್ಯೂ ಇನ್ಸ್‌ಪೆಕ್ಟರ್ ಮತ್ತು ಒಬ್ಬ ಗುಮಾಸ್ತರು ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿದ್ದರು. ಜಮೀನಿನ ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ರೂ. ೨೦೦೦/- ಹೆಚ್ಚಿನ ಹಣಕ್ಕೆ ಒತ್ತಾಯಿಸಿ ಸಿಕ್ಕಿಬಿದ್ದಿದ್ದರವರು. ಖಾತೆ ಆದೇಶವಾಗಿದ್ದರೂ ನಕಲು ಕೊಡಲು ಸತಾಯಿಸಿದ್ದ ಗುಮಾಸ್ತರ ಪಾತ್ರವೇ ಇದರಲ್ಲಿ ಹೆಚ್ಚಿನದಾಗಿತ್ತು. ಆ ಗುಮಾಸ್ತ ಅನುಕಂಪದ ಆಧಾರದಲ್ಲಿ ನೇಮಕವಾಗಿದ್ದ ತರುಣನಾಗಿದ್ದು ಸೇವೆಗೆ ಸೇರಿ ೬-೭ ವರ್ಷಗಳಾಗಿದ್ದಿರಬಹುದು.  ಆತನಿಗೆ ತಾನೇ ಬುದ್ಧಿವಂತನೆಂಬ ಮನೋಭಾವದೊಂದಿಗೆ ಇತರರನ್ನು ಕೀಳಾಗಿ ಕಾಣುವ, ಜನರನ್ನು ಸತಾಯಿಸುವ ಮನೋಭಾವ. ನಾನು ಅಧಿಕಾರಿಯಾಗಿದ್ದಾಗ ಆಗಾಗ್ಗೆ ಪರಿಶೀಲಿಸುತ್ತಿದ್ದುದು, ಎಚ್ಚರಿಕೆ ನೀಡುತ್ತಿದ್ದುದು ಅವನಿಗೆ ಇಷ್ಟವಾಗುತ್ತಿರಲಿಲ್ಲ. ಕೆಲಸ ಮಾಡದೆ ಇದ್ದುದಕ್ಕೆ ವಿಚಾರಿಸಿದರೆ ಮೊಂಡುವಾದ ಮಾಡುತ್ತಿದ್ದ. ಅವನ ಅಸಮರ್ಪಕ ಕೆಲಸಕ್ಕಾಗಿ ನೋಟೀಸು ನೀಡಿ ವಿವರಣೆ ಪಡೆದ ನಂತರ ಅವನ ವಿರುದ್ಧ ಶಿಸ್ತುಕ್ರಮಕ್ಕಾಗಿ ಜಿಲ್ಲಾಧಿಕಾರಿಯವರಿಗೆ ವರದಿ ನೀಡಿದ್ದೆ. ಆ ಸಂದರ್ಭದಲ್ಲೇ ನನಗೆ ವರ್ಗಾವಣೆಯಾಗಿದ್ದರಿಂದ ಆತ ಮುಂದಿನ ಶಿಸ್ತುಕ್ರಮ ನಡೆಯದಂತೆ ನೋಡಿಕೊಳ್ಳಲು ಯಶಸ್ವಿಯಾಗಿದ್ದ. ಹೇಗೆ ಎಂದು ವಿವರಿಸಬೇಕಿಲ್ಲವೆಂದುಕೊಳ್ಳುತ್ತೇನೆ. ಈ ಮಹಾಶಯನ ಹತ್ತಿರ ಹಣವಿದ್ದಾಗಲೇ ಲೋಕಾಯುಕ್ತ ಪೋಲಿಸರು ಅವನನ್ನು ಹಿಡಿದಿದ್ದರು. ಅವನು ತಕ್ಷಣ ಹಣವನ್ನು ಬಾಯಿಗೆ ಹಾಕಿಕೊಂಡು ಅಗಿದು ನುಂಗಲು ಪ್ರಾರಂಭಿಸಿದ. ಕೂಡಲೇ ಪೋಲಿಸರು ಅವನ ಕುತ್ತಿಗೆ ಮೇಲೆ ಹೊಡೆದು ಹಣ ಕಕ್ಕುವಂತೆ ಮಾಡಿ ಒದ್ದೆಮುದ್ದೆಯಾದ ಎಂಜಲು ನೋಟುಗಳನ್ನೇ ವಶಪಡಿಸಿಕೊಂಡಿದ್ದರು. ಅವನು ತನ್ನನ್ನು ಹಿಡಿದಿದ್ದ ಪೋಲಿಸರ ಕೈಯನ್ನೇ ಕಚ್ಚಿ, ಪರಚಿ, ಹೊಡೆದು ಓಡಿಹೋಗಲು ಮಾಡಿದ ಪ್ರಯತ್ನ ವಿಫಲವಾಗಿತ್ತು. ಪ್ರಕರಣ ದಾಖಲಾಯಿತು. ಸಂಬಂಧಿಸಿದವರು ಅಮಾನತ್ತುಗೊಂಡರು. ೬ ತಿಂಗಳ ನಂತರ ಅಮಾನತ್ತು ರದ್ದಾಗಿ ಅವರುಗಳು ಈಗ ಬೇರೆ ಕಛೇರಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಘಟನೆ ನಡೆದ ನಂತರದಲ್ಲಿ ಗುಮಾಸ್ತ ತನ್ನ ಸಹೋದ್ಯೋಗಿಗಳಿಗೆ "ಆ ಬೆಂಕಿ ಇದ್ದಿದ್ದರೆ ನಾನು ಸಿಕ್ಕಿಹಾಕಿಕೊಳ್ಳುತ್ತಿರಲಿಲ್ಲ" ಎಂದು ಹೇಳಿದ್ದನಂತೆ. 'ಬೆಂಕಿ' ಅನ್ನುವುದು ಶಿಕಾರಿಪುರದ ತಾಲ್ಲೂಕು ಕಛೇರಿ ನೌಕರರು ನನಗೆ ಇಟ್ಟಿದ್ದ ಅಡ್ಡಹೆಸರಾಗಿತ್ತು. ಒಂದು ರೀತಿಯಲ್ಲಿ ಅದು ನಿಜವಿರಬಹುದು. ಏಕೆಂದರೆ ಪ್ರತಿದಿನ ಸಾಯಂಕಾಲ ೫-೦೦ರ ನಂತರದಲ್ಲಿ ನಾನು ಭೂಮಿ ಶಾಖೆಯಲ್ಲಿ (ಜಮೀನುಗಳ ಖಾತೆ ಮಾಡುವ ಗಣಕೀಕರಣ ಶಾಖೆ) ಬಾಕಿ ಉಳಿದ ಪ್ರಕರಣಗಳ ಸಮೀಕ್ಷೆ ನಡೆಸಿ ಅವಧಿ ಮೀರಿ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ರೆವಿನ್ಯೂ ಇನ್ಸ್‌ಪೆಕ್ಟರರಿಗೆ ಸೂಚನೆ ನೀಡುತ್ತಿದ್ದೆ. ಮರುದಿನವೇ ಅವರು ಖಾತೆ ಇತ್ಯರ್ಥ ಪಡಿಸಿದ ಬಗ್ಗೆ (ಮಂಜೂರು ಅಥವ ವಜಾ) ನನ್ನ ಗಮನಕ್ಕೆ ತರಲೇಬೇಕಿತ್ತು. ನಾನು ಶಿಕಾರಿಪುರದ ತಹಸೀಲ್ದಾರನಾಗಿದ್ದ ಎರಡು ಅವಧಿಗಳಲ್ಲಿ ಯಾವೊಬ್ಬ ನೌಕರರೂ ಲೋಕಾಯುಕ್ತ ಬಲೆಗೆ ಬಿದ್ದಿರಲಿಲ್ಲ ಅನ್ನುವುದು ವಿಶೇಷವೇ ಸರಿ. 
**************
-ಕ.ವೆಂ.ನಾಗರಾಜ್.

5 ಕಾಮೆಂಟ್‌ಗಳು:

  1. ನಿಮ್ಮ ಅನುಭವಗಳನ್ನು ಬರೆದರೆ ದೊಡ್ದ ಗ್ರಂಥವೇ ಆದೀತು!

    ಪ್ರತ್ಯುತ್ತರಅಳಿಸಿ