ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಏಪ್ರಿಲ್ 17, 2012

ಮೂಢ ಉವಾಚ - 82


ಹುಟ್ಟದೇ ಇರುವವರು ಸಾಯುವುದೆ ಇಲ್ಲ
ಹುಟ್ಟಿದರು ಎನಲವರು ಸತ್ತಿರಲೆ ಇಲ್ಲ |
ಸತ್ತರು ಎನಲವರು ಹುಟ್ಟಿರಲೆ ಇಲ್ಲ
ಹುಟ್ಟುಸಾವುಗಳೆರಡು ಮಾಯೆ ಮೂಢ || ..೨೮೧


ಹಿರಿಯ ಪರ್ವತದ ಬದಿಯೆ ಕಂದಕವು
ಮೂಢರಿರಲಾಗಿ ಬುದ್ಧಿವಂತಗೆ ಬೆಲೆಯು |
ಸುಖವ ಬಯಸಿರಲು ಜೊತೆಗಿರದೆ ದುಃಖ
ಒಂದರಿಂದಾಗಿ ಮತ್ತೊಂದು ಮೂಢ || ..೨೮೨


ನುಡಿವ ಸತ್ಯವದು ಗೆಳೆತನವ ನುಂಗೀತು
ಬಂಧುತ್ವ ಕಳೆದೀತು ಸೌಜನ್ಯ ಮರೆಸೀತು |
ಮರುಳು ಮಾಡುವ ಸುಳ್ಳಿಗಿಹ ಬೆಲೆಯ
ಕೊಡರು ಸತ್ಯಕಿದು ಸತ್ಯ ಮೂಢ || ..೨೮೩


ಸಂತೋಷ ಜೊತೆಗಿರಲು ಮತ್ತೇನೂ ಬೇಕಿಲ್ಲ
ಮತ್ತೇನೂ ಬೇಡದಿರೆ ಸಂತೋಷ ಬಾಳೆಲ್ಲ|
ಇರುವುದು ಸಾಕೆಂಬ ಭಾವ ಸಂತೋಷ
ಅರಿತವನೆ ಪರಮಸುಖಿ ಕಾಣು ಮೂಢ || ..೨೮೪
*************
-ಕ.ವೆಂ.ನಾಗರಾಜ್.

6 ಕಾಮೆಂಟ್‌ಗಳು:

  1. ಇಲ್ಲೊಬ್ಬರು ದಾರ್ಶಿನಕರ ದರ್ಶನವಾಯ್ತು ಎನಗೆ. ನಮ್ಮ ಸ್ನೇಹಿತರು. ಕನ್ನಡದ ಸರ್ವಜ್ಞ, ಗುಂಡಪ್ಪ, ಮತ್ತು ತೆಲುಗಿನ ಸುಮತಿ ಮತ್ತು ವೇಮನರಂಥಹ ದಾರ್ಶನಿಕರ ಸಾಲಲ್ಲಿ ನಿಲ್ಲುವಂಥಹವರು ಮಾನ್ಯ Kavi Nagaraj ರವರು. ಇವರು ಬರೆಯುವ ನಾಲ್ಕು ಸಾಲಿನ ನುಡಿಗಳು ಅಣಿ ಮುತ್ತುಗಳಂತಿವೆ. ಎಲ್ಲರೂ ಓದಿ ಮನನಮಾಡಿ , ಚಿಂತಿಸಿ, ವಿಚಾರಮಾಡಬೇಕಾದ ಲೇಖನಗಳು. ಅವರಿಗೆ ನನ್ನ ಹೃತ್ಪೂರ್ವಕ ವಂದನೆಗಳು ಮತ್ತು ಇದನ್ನು ಹೀಗೆ ಮುಂದುವರಿಸಲು ಹಾರೈಕೆಗಳು.

    ಪ್ರತ್ಯುತ್ತರಅಳಿಸಿ
  2. ಮಾನ್ಯ ತಿರುಮಲೈ ರವಿಯವರಿಗೆ ವಂದನೆಗಳು. ನಿಮ್ಮ ಶುಭವಾಕ್ಕುಗಳು ನನ್ನ ದಾರಿ ಕಠಿಣವೆಂದು ಎಚ್ಚರಿಸಿವೆ.

    ಪ್ರತ್ಯುತ್ತರಅಳಿಸಿ
  3. ಸಾವಿರಾರು ಮೈಲಿಗಳ ಪಯಣವು ಕೇವಲ ಒಂದು ಹೆಜ್ಜೆಯೊಡನೆ ಆರಂಭವಾಗುತ್ತದೆ... ಶುಭವಾಗಲಿ..

    ಪ್ರತ್ಯುತ್ತರಅಳಿಸಿ
  4. ನಾಗರಾಜರ ಉವಾಚಕ್ಕೆ,
    ದಾರಿ ಕಠಿಣವಾದರೇನು ಉತ್ಸಾಹದ ಚಿಲುಮೆ ಉಕ್ಕುತಿದೆಯಲ್ಲ,
    ವಿವೇಕದ ಗಣಿ ಖಾಲಿಯಾಗಿಲ್ಲವಲ್ಲ, ಬರೆವ ತುಡಿತ ಬತ್ತಿಲ್ಲವಲ್ಲ,
    ಮೂಡರಿಗೆ ಉವಾಚವೆನ್ನುವ ಮಾತಲ್ಲಿ ಆತ್ಮದರ್ಶನವಾಗುತಿದೆಯಲ್ಲ,
    ತನ್ನ ತಾ ಅರಿಯುವ ಪರಿಯಲಿ ಸಾರ್ಥಕ ಬದುಕು ಸಾಗುತಿದೆಯಲ್ಲ.
    ಧನ್ಯವಾದಗಳು
    ಪ್ರಕಾಶ್

    ಪ್ರತ್ಯುತ್ತರಅಳಿಸಿ
  5. ಆತ್ಮೀಯ ಪ್ರಕಾಶರೇ,
    ಹೊಸ ಅಂಗಿ ಧರಿಸುವ ಮುನ್ನ ಹಳೆಯ ಅಂಗಿಯನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುವ ಹಂಬಲ ನನ್ನಿಂದ ಬರೆಯಿಸುತ್ತಿದೆ.

    ಪ್ರತ್ಯುತ್ತರಅಳಿಸಿ