ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ಆಚಾರ್ಯ ವಿನೋಬಾಭಾವೆಯವರ ಭೂದಾನ ಆಂದೋಳನ ಒಂದು ಕ್ರಾಂತಿಯನ್ನೇ ಉಂಟುಮಾಡಿತ್ತೆನ್ನಬಹುದು. ದೇಶಾದ್ಯಂತ ಸಂಚರಿಸಿದ ಅವರು ಉಳ್ಳವರಿಂದ ಭೂದಾನ ಪಡೆದು ಅದನ್ನು ದೀನ ದಲಿತರಿಗೆ ಹಂಚುವ ಮಹತ್ಕಾರ್ಯ ಮಾಡಿ ಅನೇಕ ದಲಿತರ ಸ್ವಾಭಿಮಾನಿ ಬದುಕಿಗೆ ಆಶ್ರಯವಾದವರು. ಸಾಮಾಜಿಕ ನ್ಯಾಯ ಒದಗಿಸುವ ಅತ್ಯಂತ ಸುಂದರಮಾರ್ಗವಿದಾಗಿತ್ತು. ಬಲವಂತದಿಂದ, ಹಿಂಸೆಯಿಂದ ಸಾಧ್ಯವಾಗದುದು ಮನವೊಲಿಕೆಯಿಂದ ಸಾಧ್ಯವೆಂಬುದನ್ನು ತೋರಿಸಿಕೊಟ್ಟಿದ್ದವರು ವಿನೋಬಾಜಿ. ಅವರು 1975-77ರ ತುರ್ತುಪರಿಸ್ಥಿತಿಯನ್ನು ಬೆಂಬಲಿಸಿದ್ದ ದೂಷಣೆಗೆ ಒಳಗಾಗಿದ್ದೂ ಇತ್ತು. ಆದರೆ ಅವರ ಉದ್ದೇಶ ಜನರು ಮತ್ತು ಆಳುವವರು ಇಬ್ಬರೂ ಕಾನೂನನ್ನು ಗೌರವಿಸಬೇಕೆಂಬುದಾಗಿದ್ದು, ಇದನ್ನು ಆ ಸಮಯದಲ್ಲಿ ಆಡಳಿತದಲ್ಲಿದ್ದವರು ಜನರನ್ನು ದಾರಿತಪ್ಪಿಸಲು ಅವರ ಹೇಳಿಕೆಯನ್ನು ಭಾಗಶಃ ಬಳಸಿಕೊಂಡಿದ್ದರು.
ಮದರ್ ತೆರೇಸಾ ಅವರು ಬಡಜನರ ಸೇವೆ ಮಾಡಿ ಹೆಸರಾದವರು. ಬಡವರಲ್ಲಿ ಬಡವರ, ಕಾಯಿಲೆಯಿಂದ ನರಳುತ್ತಿದ್ದವರ, ಸಾಯುವ ಸ್ಥಿತಿಯಲ್ಲಿದ್ದ ಜನರ ಆರೈಕೆ ಮಾಡಿದ್ದವರು. ಅನಾಥರ, ನೆರವು ಸಿಗದವರ ಆಶಾಕಿರಣವಾಗಿದ್ದ ಅವರ ವಿರುದ್ಧ ಸೇವೆಯ ಹೆಸರಿನಲ್ಲಿ ಮತಾಂತರ ಮಾಡಿದವರೆಂಬ ಆರೋಪವೂ ಇದೆ. ಅವರಿಗೆ ನೊಬೆಲ್ ಪ್ರಶಸ್ತಿಯೂ ಕೊಡಲ್ಪಟ್ಟಿತ್ತು.
ಸ್ವಾಮಿ ವಿವೇಕಾನಂದರಂತೂ ದೀನದಲಿತರ ಪರವಾಗಿ ಬಲವಾದ ದ್ವನಿ ಎತ್ತಿದವರು. ಕಟುವಾದ ನುಡಿಗಳಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಅನಿಷ್ಟ ಆಚರಣೆಗಳನ್ನು ಖಂಡಿಸಿದ್ದವರು. 'ದರಿದ್ರದೇವೋಭವ' ಎಂದು ಘೋಷಿಸಿ ಜಾಗೃತಿ ಮೂಡಿಸಿದ್ದವರು. ಎಲ್ಲಾ ನ್ಯೂನತೆಗಳ ನಡುವೆಯೂ ಬದಲಾವಣೆಗೆ ತೆರೆದುಕೊಳ್ಳಬಲ್ಲ ಹಿಂದೂಧರ್ಮದ ಶ್ರೇಷ್ಠತೆಯನ್ನು ಜಗತ್ತಿನಲ್ಲಿ ಎತ್ತಿ ಹಿಡಿದ ಶ್ರೇಯಕ್ಕೆ ಅವರು ಪಾತ್ರರಾಗಿದ್ದಾರೆ.
ಮಹರ್ಷಿ ದಯಾನಂದ ಸರಸ್ವತಿಯವರು ಸಾಮಾಜಿಕ-ಧಾರ್ಮಿಕ ಜಗತ್ತಿನಲ್ಲಿ ಪ್ರಬಲ ಅಲೆಯನ್ನೆಬ್ಬಿಸಿದವರು. 'ವೇದಗಳಿಗೆ ಹಿಂತಿರುಗಿ' ಎಂಬ ಘೋಷವಾಕ್ಯದೊಂದಿಗೆ ಜಾತಿಪದ್ಧತಿಯನ್ನು ಪ್ರಬಲವಾಗಿ ವಿರೋಧಿಸಿದ ಅವರು 1875ರಲ್ಲಿ ಆರ್ಯಸಮಾಜವನ್ನು ಸ್ಥಾಪಿಸಿ ಪುರಾಣಗಳು, ಮೂರ್ತಿಪೂಜೆ ಮತ್ತು ಅಂಧ ಸಂಪ್ರದಾಯಗಳನ್ನು ಕಟುವಾಗಿ ವಿರೋಧಿಸಿದರು. ಜನರನ್ನು ಹುಟ್ಟಿನ ಜಾತಿಯ ಆಧಾರದಲ್ಲಿ ಗುರುತಿಸುವುದು ತಪ್ಪೆಂದು, ಅವರು ಆಚರಿಸುವ ವೃತ್ತಿ ಮತ್ತು ಕೆಲಸಗಳಿಂದ ಮಾತ್ರ ಗುರುತಿಸಬೇಕೆಂದು ಪ್ರತಿಪಾದಿಸಿದವರು. ಅಸ್ಪೃಷ್ಯತೆ, ಬಾಲ್ಯವಿವಾಹಗಳ ವಿರುದ್ಧ ಅಭಿಯಾನ ಮಾಡಿದವರು. ಅಂತರ್ಜಾತೀಯ ವಿವಾಹ, ವಿಧವಾ ವಿವಾಹಗಳಿಗೆ ಪ್ರೋತ್ಸಾಹವಿತ್ತ ಅವರು ಎಲ್ಲಾ ಜಾತಿಗಳವರೂ ಮತ್ತು ಮಹಿಳೆಯರೂ ವೇದದ ಕಲಿಕೆ ಮಾಡಲು ಹಕ್ಕುಳ್ಳವರೆಂದು ಸಾಧಾರವಾಗಿ ನಿರೂಪಿಸಿದ್ದಲ್ಲದೆ ಪ್ರತ್ಯಕ್ಷ ಆಚರಣೆಗೂ ತಂದವರು. ಕ್ರಿಶ್ಚಿಯನ್ ಮತ್ತು ಇಸ್ಲಾಮ್ ಮತಗಳಿಗೆ ಮತಾಂತರಗೊಂಡವರನ್ನು ಮರಳಿ ಹಿಂದೂಧರ್ಮಕ್ಕೆ ಕರೆತರುವ ಶುದ್ಧೀಕರಣ ಕಾರ್ಯಕ್ಕೂ ಅವರು ಚಾಲನೆ ಕೊಟ್ಟವರು, ಭಾರತ ಭಾರತೀಯರದು ಎಂದವರು. ಅವರ ನಿಷ್ಠುರ ಮಾತು, ನಡಳಿಕೆಗಳನ್ನು ಸಹಿಸದ ವಿರೋಧಿಗಳಿಂದ ಅವರನ್ನು ಹತ್ಯೆ ಮಾಡುವ ಪ್ರಯತ್ನಗಳು ಹಲವು ಸಲ ನಡೆದಿದ್ದವು. ಕೊನೆಗೂ ಅವರು ವಿಷಪ್ರಾಶನಕ್ಕೆ ಬಲಿಯಾಗಬೇಕಾಯಿತು.
ಜ್ಯೋತಿಬಾ ಫುಲೆಯವರು ಬ್ರಾಹ್ಮಣ ಜನಾಂಗದವರಾಗಿದ್ದು ಅಸ್ಪೃಷ್ಯತೆಯ ಆಚರಣೆಯ ಕಡುವಿರೋಧಿಯಾಗಿದ್ದಲ್ಲದೆ ಜಾತಿಬೇಧ ಮಾಡದೆ ಎಲ್ಲಾ ಸಮುದಾಯದವರಿಗಾಗಿ ಶಾಲೆ ತೆರೆದಿದ್ದವರು. ಸತ್ಯಶೋಧಕ ಸಮಾಜ ಸ್ಥಾಪಿಸಿ ಜಾತಿರಹಿತ ಸಮಾಜಕ್ಕಾಗಿ ದುಡಿದವರು. ಅಸ್ಪೃಷ್ಯರನ್ನು ದಲಿತ ಎಂಬ ಪದದಿಂದ ಮೊಟ್ಟಮೊದಲಿಗೆ ಸಂಬೋಧಿಸಿದವರು ಇವರೇ! ಇವರೂ ಸಹ ಸಾಮಾಜಿಕ ಅನಿಷ್ಟ ಪದ್ಧತಿಗಳನ್ನು ವಿರೋಧಿಸಿ ಜಾಗೃತಿ ಮೂಡಿಸಲು ಶ್ರಮಿಸಿದವರು.
1958ರಲ್ಲಿ ಉದಯಪುರದ ಖಾಟಿಕ್ ಸಮುದಾಯದವರು ಜೈನಮುನಿ ಸಮೀರ ಮುನಿಯವರ ಪ್ರೇರಣೆಯಿಂದ ಜೈನರಾದರು. ದಲಿತ ಸಮುದಾಯಕ್ಕೆ ಸೇರಿದ 22 ವರ್ಷದ ತರುಣ 2005ರಲ್ಲಿ ಜಾಲೋರಿನಲ್ಲಿ ಜೈನಮುನಿಯಾಗಿ ದೀಕ್ಷೆ ಪಡೆದರೆ, 2010ರಲ್ಲಿ ಮಹರ್ ಜನಾಂಗದ ಇಂಜನಿಯರ್ ವಿಶಾಲ್ ದಾಮೋದರ್ ಸಮೇತ್ ಶಿಖರಿನಲ್ಲಿ ಜೈನ ಸನ್ಯಾಸಿಯಾದರು. 1984ರಲ್ಲಿ ಜೋಧಪುರದ ಭಂಗಿ ಸಮುದಾಯದವರು ಆಚಾರ್ಯ ತುಳಸಿಯವರ ಪ್ರಭಾವದಿಂದ ಜೈನ ಧರ್ಮ ಸ್ವೀಕರಿಸಿದರು.
ಬ್ರಹ್ಮಸಮಾಜ, ಆರ್ಯಸಮಾಜ, ರಾಷ್ಟ್ರೀಯ ಸ್ವಯಂಸೇವಕ ಸಂಘ, ರಾಮಕೃಷ್ಣ ಮಿಷನ್‌ಗಳು ದಲಿತರನ್ನು ಸಾಮಾಜಿಕ ಬಹಿಷ್ಕಾರಗಳಿಂದ ಮುಕ್ತಿಗೊಳಿಸಲು ಮತ್ತು ಎಲ್ಲರಂತೆ ಒಂದು ಎಂಬ ಅಭಿಪ್ರಾಯ ಕ್ರೋಢೀಕರಣ ಮತ್ತು ಜಾಗೃತಿಗಾಗಿ ಅಪೂರ್ವವಾಗಿ ಶ್ರಮಿಸಿವೆ, ಶ್ರಮಿಸುತ್ತಿವೆ. ದಲಿತರು ತಮ್ಮದೇ ಆದ ಪೂಜಾಸ್ಥಳಗಳನ್ನು ಹೊಂದಿದ್ದರೂ, 1928ರಿಂದ ಪ್ರಥಮವಾಗಿ ಮೇಲುಜಾತಿಯವರ ದೇವಸ್ಥಾನವಾದ ವಾರ್ಧಾದ ಲಕ್ಷ್ಮಿನಾರಾಯಣ ದೇವಸ್ಥಾನಕ್ಕೆ ಬಹಿರಂಗವಾಗಿ ಮತ್ತು ಆತ್ಮೀಯವಾಗಿ ಪ್ರವೇಶ ಸಿಕ್ಕಿತು. ನಂತರದಲ್ಲಿ ಇನ್ನಿತರ ಹಲವು ದೇವಾಲಯಗಳಿಗೂ ಅವರ ಪ್ರವೇಶವನ್ನು ಸ್ವಾಗತಿಸಲಾಯಿತು. 1936-47ರ ಅವಧಿಯಲ್ಲಿ ಕೇರಳದ ಅರಸರು ಅಲ್ಲಿನ ಎಲ್ಲಾ ದೇವಾಲಯಗಳಲ್ಲಿ ಎಲ್ಲಾ ಹಿಂದೂಗಳಿಗೂ ಮುಕ್ತ ಪ್ರವೇಶಕ್ಕೆ ಅನುಮತಿಸಿ ಘೋಷಿಸಿದ್ದು ಅಸ್ಪೃಷ್ಯತೆಯ ನಿವಾರಣೆಯಲ್ಲಿ ದಿಟ್ಟ ಹೆಜ್ಜೆಯೆನಿಸಿತ್ತು. ಸತ್ನಾಮಿ ಆಂದೋಳನದ ರೂವಾರಿ ಪಂಜಾಬಿನ ಸುಧಾರಕ ದಲಿತ ಗುರು ಘಾಸಿದಾಸ್, ದಲಿತ ಗುರು ರವಿದಾಸ್ ಮೊದಲಾದವರು ದಲಿತರ ಹಿತಕ್ಕೆ ಶ್ರಮಿಸಿದ್ದವರು. ಸುಧಾರಕ ಗ್ಯಾನಿ ದಿತ್ತ್ ಸಿಂಗ್ ಸಿಂಗ್ ಸಭಾ ಪ್ರಾರಂಭಿಸಿ ದಲಿತರನ್ನು ತಮ್ಮ ತೆಕ್ಕೆಗೆ ಸೆರಿಸಿಕೊಳ್ಳುವ ಕೆಲಸ ಮಾಡಿದರು. ದೇವಾಲಯಗಳಿಗೆ ದಲಿತರ ಪ್ರವೇಶ ವಿವಾದಗಳನ್ನೂ ಸೃಷ್ಟಿಸಿತ್ತು. ಸುಬ್ರಹ್ಮಣ್ಯ ಭಾರತಿಯವರು ದಲಿತರಿಗೆ ಬ್ರಾಹ್ಮಣತ್ವ ದೀಕ್ಷೆ ಕೊಡಿಸಿದ್ದೂ ವಿವಾದದ ಸಂಗತಿಯಾಗಿತ್ತು. ಶಿವಾಜಿಯ ಸೈನ್ಯದಲ್ಲಿ ಹಿಂದುಳಿದವರಲ್ಲದೆ ದಲಿತರ ಮಹರ್ ರೆಜಿಮೆಂಟ್ ಸಹ ಅಸ್ತಿತ್ವದಲ್ಲಿತ್ತು. ಆದಿವಾಸಿಗಳು, ಗುಡ್ಡಗಾಡು ಜನಾಂಗಗಳವರ ಅನುಪಮ ಸಂಘಟಕ ಶಿವಾಜಿ ಬ್ರಿಟಿಷರಿಗೆ ಮತ್ತು ಮೊಘಲರಿಗೆ ಸಿಂಹಸ್ವಪ್ನವಾಗಿದ್ದುದು ಇತಿಹಾಸ.
ಭಾರತ ರತ್ನ ಬಾಬಾಸಾಹೇಬ್ ಅಂಬೇಡ್ಕರರು ದಲಿತ ವಿಮೋಚನಾ ಕಾರ್ಯಕ್ಕಾಗಿ ಅನುಪಮ ಕಾರ್ಯ ಮಾಡಿದವರು. ಅಸ್ಪೃಷ್ಯರೆಂದು ಪರಿಗಣಿಸಲ್ಪಟ್ಟಿದ್ದ ಮಹರ್ ಜಾತಿಯಲ್ಲಿ ಜನಿಸಿದ ಅವರು ಅಸ್ಪೃಷ್ಯತೆಯ ಕರಾಳ ಅನುಭವಗಳ ನಡುವೆಯೂ ಛಲದಿಂದ ಉತ್ತಮ ಶಿಕ್ಷಣ ಪಡೆಯಲು ಸಫಲರಾಗಿ ಸ್ನಾತಕೋತ್ತರ ಶಿಕ್ಷಣಕ್ಕಾಗಿ ಅಮೆರಿಕಾಕ್ಕೆ ಹೋಗಿ ನ್ಯೂಯಾರ್ಕಿನ ಪ್ರತಿಷ್ಠಿತ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಮತ್ತು ಪಿ.ಹೆಚ್.ಡಿ. ಸಂಪಾದಿಸಿದರು. ಲಂಡನ್ ಮಹಾವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಗಳಿಸಿ ಭಾರತಕ್ಕೆ ಹಿಂತಿರುಗಿದವರು. ಅವರು ಕಾನೂನು ಶಾಸ್ತ್ರದಲ್ಲೂ ಪದವಿ ಪಡೆದರು. ಅಸ್ಪೃಷ್ಯತೆ ವಿರುದ್ಧ ಹೋರಾಡಿದ್ದಲ್ಲದೆ ದಲಿತರಿಗೆ ಸ್ವಾಭಿಮಾನದ ಬದುಕಿಗಾಗಿ ಪ್ರೇರೇಪಿಸಿ, ಎಲ್ಲರ ಗೌರವಾದರಗಳಿಗೆ ಪಾತ್ರರಾದ ಅವರನ್ನು ವಿಶೇಷವಾಗಿ ದಲಿತ ಸಮುದಾಯವು ಅತ್ಯುನ್ನತ ಸ್ಥಾನದಲ್ಲಿರಿಸಿ ಗೌರವಿಸುತ್ತಿದೆ. ಮೂಕನಾಯಕ ಎಂಬ ಸಾಪ್ತಾಹಿಕ, ಬಹಿಷ್ಕೃತ ಭಾರತ ಎಂಬ ನಿಯತಕಾಲಿಕಗಳನ್ನು ಹೊರತಂದು ಸಮಾಜದ ಜಾಗೃತಿಗೆ ಶ್ರಮಿಸಿದವರು. 1924ರಲ್ಲಿ ಬಹಿಷ್ಕೃತ ಹಿತಕಾಮಿಸಭಾ ಸ್ಥಾಪಿಸಿ ಸಾಮಾಜಿಕ-ರಾಜಕೀಯ ಹಿತಾಸಕ್ತಿಗಳಿಗಾಗಿ ಹೋರಾಡಲು ದಲಿತರಿಗೆ ಪ್ರೇರಿಸಿದರು. ಶಿಕ್ಷಣ, ಸಂಘರ್ಷ ಮತ್ತು ಸಂಘಟನೆ ಎಂಬ ಧ್ಯೇಯವಾಕ್ಯದೊಂದಿಗೆ ಹುರಿದುಂಬಿಸಿದರು. ಅವರ ಪ್ರಕಾರ ಕ್ರಿ.ಶ. 400ರ ಸುಮಾರಿನಲ್ಲಿ ಬೌದ್ಧ ಮತ್ತು ಆರ್ಯ ಸಂಸ್ಕೃತಿಗಳ ನಡುವೆ ಶ್ರೇಷ್ಠತ್ವಕ್ಕಾಗಿ ಸಂಘರ್ಷ ನಡೆದ ಸಂದರ್ಭದಲ್ಲಿ ಅಸ್ಪೃಷ್ಯತೆಯ ಉಗಮವಾಯಿತೆನ್ನಲಾಗಿದೆ. ತಾರತಮ್ಯ ದೃಷ್ಟಿಗೆ ಮನುಸ್ಮೃತಿ ಕಾರಣವೆಂದು ಆ ಪುಸ್ತಕವನ್ನು ಸುಟ್ಟವರು. 1932ರಲ್ಲಿ ದಲಿತ ಪ್ರತಿನಿಧಿಗಳನ್ನು ದಲಿತರು ಮಾತ್ರ ಚುನಾಯಿಸಬೇಕೆಂದು ಬ್ರಿಟಿಷರ ಆಡಳಿತ ಕಾಲದಲ್ಲಿ ಒತ್ತಾಯಿಸಿದ್ದರು. ಇದು ದಲಿತರನ್ನು ಪ್ರತ್ಯೇಕವಾಗಿ ಉಳಿಸುತ್ತದೆಯೆಂದು ಮತ್ತು ಬದಲಾವಣೆಗೆ ಹಿಂದೂಧರ್ಮ ತೆರೆದುಕೊಳ್ಳುತ್ತದೆಯೆಂದು ಪ್ರತಿಪಾದಿಸಿದ್ದ ಗಾಂಧೀಜಿ ಮತ್ತು ಇತರ ನಾಯಕರು ಇದನ್ನು ವಿರೋಧಿಸಿದ್ದರು. ನಂತರದಲ್ಲಿ ದಲಿತರಿಗೆ ಹೆಚ್ಚಿನ ಸ್ಥಾನಗಳನ್ನು ಮೀಸಲಿರಿಸುವ ನಿರ್ಧಾರಕ್ಕೆ ಸಹಮತಿ ದೊರಕಿತ್ತು. ಇದು ಇತರರನ್ನು ದಲಿತರಿಂದ ಪ್ರತ್ಯೇಕಿಸುವ ಅಪಾಯ ತಪ್ಪಿಸಿ ಅವರನ್ನೂ ಒಳಗೊಂಡ ರಾಜಕೀಯ ವ್ಯವಸ್ಥೆ ರೂಪಿತವಾದುದು ಸಮಾಧಾನದ ಸಂಗತಿ. ಇದು ಸ್ವತಂತ್ರ ಭಾರತದಲ್ಲೂ ಮುಂದುವರೆದುಕೊಂಡು ಬಂದಿದೆ. ಭಾರತದ ಪ್ರಥಮ ಕಾನೂನು ಮಂತ್ರಿಯಾಗಿ ಮತ್ತು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಸಂವಿಧಾನ ರೂಪಿಸುವಲ್ಲಿ ಅಂಬೇಡ್ಕರರ ಪಾತ್ರ ಮಹತ್ವದ್ದಾಗಿದೆ. ಅವರು ಆಚರಣೆಯಲ್ಲಿದ್ದ ಅಸ್ಪೃಷ್ಯತೆಯಿಂದ ಅನುಭವಿಸಿದ ಕಷ್ಟ, ನೋವುಗಳಿಂದಾಗಿ 14.10.1956ರಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸಿದರಲ್ಲದೆ ನಂತರದಲ್ಲಿ ಸುಮಾರು 5ಲಕ್ಷದಷ್ಟು ಸಮರ್ಥಕರನ್ನೂ ಬೌದ್ಧಧರ್ಮಕ್ಕೆ ಪರಿವರ್ತಿಸಿದರೆನ್ನಲಾಗಿದೆ.
(ಮುಂದುವರೆಯುವುದು)
-ಕ.ವೆಂ.ನಾಗರಾಜ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ