ಇನ್ನೊಂದು ಪ್ರಮುಖ ಸಂಗತಿಯನ್ನು ಇಲ್ಲಿ ಗಮನಿಸಬೇಕಿದೆ. ಅದೆಂದರೆ ಹಿಂದಿರುವುದಕ್ಕೆ ಅಥವ ಮುಂದೆ ಇರುವುದಕ್ಕೆ ಜಾತಿ ಎಂದೂ ಕಾರಣ ಅಲ್ಲವೇ ಅಲ್ಲ. ನಿಜವಾದ ಕಾರಣವೆಂದರೆ ಜೀವನಶೈಲಿ ಮಾತ್ರ ಹಿಂದೆ ಉಳಿಯುವುದರಲ್ಲಿ ಅಥವ ಮುಂದೆ ಬರುವುದರಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಆದರೆ ಕುಟಿಲ ರಾಜಕಾರಣಿಗಳು, ಪೂರ್ವಾಗ್ರಹ ಪೀಡಿತ, ಸ್ವಾರ್ಥಪ್ರೇರಿತ ಸಾಹಿತಿಗಳು ಮತ್ತು ಇಂತಹ ಮನಸ್ಕರು ಮಾತ್ರ ಅಧಿಕಾರ, ಕೀರ್ತಿ ಮತ್ತು ಸ್ವಲಾಭದ ಸಲುವಾಗಿ ಸಂವಿಧಾನಾತ್ಮಕವಾದ ಈ ಜಾತ್ಯಾತೀತ ದೇಶದಲ್ಲಿ ಜಾತಿ ಜಾತಿಗಳಲ್ಲಿ ವಿಷಬೀಜ ಬಿತ್ತುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವುದು ವಿಪರ್ಯಾಸ. ಕೃಪಾಪೋಷಿತ ಮಾಧ್ಯಮಗಳೂ ಇದಕ್ಕೆ ನೀರೆರೆಯುತ್ತಿವೆ. ಜಾತಿ ವಿದ್ವೇಷ ಅಥವ ಜಾತಿಪ್ರೇಮವನ್ನೇ ಬಂಡವಾಳವಾಗಿಸಿಕೊಂಡ ಕೆಲವು ಸಾಹಿತಿಗಳೂ ಜಾತಿ-ಜಾತಿಗಳಲ್ಲಿ ವೈಮನಸ್ಯ ಪೋಷಿಸುತ್ತಿರುವುದು ಪರಿಸ್ಥಿತಿ ವಿಷಮಗೊಳಿಸಿದೆ. ಭಾರತದ ರಾಷ್ಟ್ರಪತಿಯಾಗಿದ್ದ ಡಾ, ಝಾಕಿರ್ ಹುಸೇನರು ಹೇಳಿದ್ದ ಈ ಮಾತು ಇಲ್ಲಿ ಬಹಳ ಪ್ರಸ್ತುತವಾಗುತ್ತದೆ: "ಭಾರತದಲ್ಲಿ ಎಂದು ನೀವು ನನ್ನನ್ನು ಧರ್ಮದಿಂದ ಗುರುತಿಸುವುದಿಲ್ಲವೋ ಅಂದು ಮಾತ್ರ ಭಾರತದಲ್ಲಿ ಜಾತ್ಯಾತೀತತೆ ಸಾಧ್ಯವಾಗುತ್ತದೆ!"
ಎಲ್ಲರೂ ಎಲ್ಲಾ ವಿಷಯಗಳಲ್ಲಿ ಪ್ರವೀಣರಾಗಿರುವುದಿಲ್ಲ. ಆದ್ದರಿಂದ ಎಲ್ಲರೂ ಎಲ್ಲಾ ಕೆಲಸಗಳನ್ನು ಮಾಡಲಾರರು. ಯಾರು ಯಾವ ವಿಷಯದಲ್ಲಿ ಪ್ರವೀಣರಾಗಿರುತ್ತಾರೋ ಆ ಕ್ಷೇತ್ರದಲ್ಲಿ ಬದುಕು ಕಾಣಬಲ್ಲರು. ಹೀಗಾಗಿ ಕೆಲವರು ಬೌದ್ಧಿಕ ಕ್ಷೇತ್ರ, ಕೆಲವರು ವಾಣಿಜ್ಯ ಕ್ಷೇತ್ರ, ಆಡಳಿತಾತ್ಮಕ ಕ್ಷೇತ್ರ, ಶಾರೀರಿಕ ಶ್ರಮದ ಕ್ಷೇತ್ರಗಳಲ್ಲಿ ತೊಡಗಿಕೊಂಡು ಜೀವನದ ದಾರಿ ಕಾಣುತ್ತಾರೆ. ನಿಜ ಸಮಾನತೆಯೆಂದರೆ ಈ ಎಲ್ಲಾ ಕೆಲಸಗಳಲ್ಲಿ ಉಚ್ಛ-ನೀಚ ಭಾವನೆಗಳಿಗೆ ಅವಕಾಶ ಕೊಡದಿರುವುದು. ಸಮಾನತೆಯಿರಬೇಕೆಂದು ಎಲ್ಲರೂ ವಕೀಲರಾಗಲಿ, ವೈದ್ಯರಾಗಲಿ, ಇಂಜನಿಯರರಾಗಲಿ, ಕಾರ್ಮಿಕರಾಗಿರಲಿ ಎಂದು ಬಯಸುವುದು ಉಚಿತವಾಗುವುದೇ? ಸ್ವಸ್ಥ ಸಮಾಜಕ್ಕೆ, ಸಮಾಜದ ಅಸ್ತಿತ್ವಕ್ಕೆ ಒಬ್ಬರಿಗೊಬ್ಬರು ಪೂರಕವಾದ ಈ ಎಲ್ಲಾ ವಿಭಾಗಗಳಲ್ಲೂ ಕೆಲಸ ಮಾಡುವವರು ಇರಬೇಕು. ವಾಸ್ತವವಾಗಿ ನೋಡಿದರೆ ಯಾವ ಒಂದು ವಿಭಾಗವೂ ಚಿಕ್ಕದಲ್ಲ ಅಥವ ದೊಡ್ಡದಲ್ಲ. ಯಾವುದೊಂದು ಇಲ್ಲದಿದ್ದರೂ ಆ ಸಮಾಜ ಅಂಗವಿಕಲವಾಗುತ್ತದೆ. ಈ ಕೆಲಸಗಳು ಸಂಬಂಧಿಸಿದ ವ್ಯಕ್ತಿಗಳ ಶಕ್ತಿ, ಸಾಮರ್ಥ್ಯವನ್ನು, ಒಲವನ್ನೂ ಅವಲಂಬಿಸಿದವಾದ್ದರಿಂದ ಅವರುಗಳ ಆ ಕೆಲಸಗಳಿಗೆ ಮನ್ನಣೆ ನೀಡುವ ಮನೋಭಾವ ಮೂಡಿದಲ್ಲಿ ಅದು ಸಮಾನತೆಯೆನಿಸೀತು.
ವಿಶ್ವಮಾನವ ಕಲ್ಪನೆ, ವಿಶ್ವಭ್ರಾತೃತ್ವ ಅನ್ನುವುದನ್ನೂ ಪರಸ್ಪರರಲ್ಲಿ ಸೋದರತೆ, ಸಮಾನತೆಗೆ ಪರ್ಯಾಯವಾಗಿ ಬಳಸುವುದನ್ನು ಕಂಡಿದ್ದೇವೆ. ಪ್ರಪಂಚದಲ್ಲಿ 196 ದೇಶಗಳಿವೆಯೆಂದು ಗುರುತಿಸುತ್ತಾರೆ. ಎಷ್ಟೋ ದೇಶಗಳ ಹೆಸರುಗಳೇ ನಮಗೆ ಗೊತ್ತಿಲ್ಲ. ವಿಶ್ವಭ್ರಾತೃತ್ವ ಸಾಧ್ಯವಿದ್ದರೆ ಈ ದೇಶಗಳ ಸಂಖ್ಯೆ ಕಡಿಮೆಯಿರುತ್ತಿತ್ತು ಅಥವ ವಿವಿಧ ದೇಶಗಳ ನಡುವೆ ಸ್ನೇಹಭಾವವಿರುತ್ತಿತ್ತು. ಈಗಲಾದರೋ ದೇಶಗಳು ಒಡೆಯುತ್ತಿವೆ, ಆಕ್ರಮಣಕ್ಕೆ ಒಳಗಾಗುತ್ತವೆ, ಗಡಿರೇಖೆಗಳು ಬದಲಾಗುತ್ತವೆ. ಪ್ರಪಂಚವೇ ಒಂದು ಕುಟುಂಬ (ವಸುಧೈವ ಕುಟುಂಬಕಮ್) ಎಂಬ ವೇದವಾಣಿಯ ಸಾಕಾರಕ್ಕೆ ಪೂರಕ ವಾತಾವರಣವಿದೆಯೇ? ಈ 196 ದೇಶಗಳ ಪೈಕಿ 49 ದೇಶಗಳು ಮುಸ್ಲಿಮರು ಬಹುಸಂಖ್ಯಾತರಾಗಿರುವ ದೇಶಗಳಾಗಿವೆ, ಕೆಲವು ಇಸ್ಲಾಮಿಕ್ ದೇಶಗಳೆಂದೇ-ಪಾಕಿಸ್ತಾನವೂ ಸೇರಿ- ಘೋಷಿಸಲ್ಪಟ್ಟ ದೇಶಗಳಾಗಿವೆ. 120 ದೇಶಗಳು ಕ್ರಿಶ್ಚಿಯನ್ ದೇಶಗಳೆಂದು ಗುರುತಿಸಲ್ಪಡುತ್ತವೆ. ಒಂದು ಅಂದಾಜಿನ ಪ್ರಕಾರ ಮತ/ಧರ್ಮದ ಅನುಸಾರ ಪ್ರಪಂಚದ ಜನಸಂಖ್ಯೆ ಸುಮಾರು ಹೀಗಿದೆ:
೧. ಕ್ರಿಶ್ಚಿಯನ್ - 2 ಬಿಲಿಯನ್.
೨. ಇಸ್ಲಾಮ್ - 1.3ಬಿಲಿಯನ್,
೩. ಹಿಂದೂ - 900 ಮಿಲಿಯನ್,
೪. ಇತರರು - 850 ಮಿಲಿಯನ್,
೫. ಬೌದ್ಧ - 360 ಮಿಲಿಯನ್,
೬. ಚೀನಾ ಮೂಲವಾಸಿ - 225ಮಿಲಿಯನ್,
೭. ಆದಿವಾಸಿ ಪದ್ಧತಿ - 95 ಮಿಲಿಯನ್.
೮. ಯಹೂದ್ಯರು - 19 ಮಿಲಿಯನ್.
ವಸ್ತುಸ್ಥಿತಿಯಂತೆ ವಿಶ್ಲೇಷಣೆ ಮಾಡಿದರೆ ಮತ/ಧರ್ಮಗಳೂ ಸಮಾನತೆಯ ಶತ್ರುಗಳಾಗಿ ಪರಿಣಮಿಸಿರುವುದು ಗೋಚರವಾಗದಿರದು. ಎಲ್ಲಿ ಪರಧರ್ಮ ಸಹಿಷ್ಣುತೆ ಇರುತ್ತದೋ ಅಲ್ಲಿ ಸಮಾನತೆಯ ಕನಸು ಕಾಣಬಹುದು. ಕೋಟ್ಯಂತರ ವರ್ಷಗಳಿಂದ ಅಸ್ತಿತ್ವದಲ್ಲಿರುವ ಈ ಪ್ರಪಂಚದಲ್ಲಿ ಕೇವಲ ಸುಮಾರು 2016 ವರ್ಷಗಳ ಹಿಂದೆ ಪ್ರಾರಂಭವಾದ ಕ್ರಿಶ್ಚಿಯನ್ ಮತವನ್ನು ಇಂದು ಪ್ರಪಂಚದ ಅತಿ ಹೆಚ್ಚು ಸಂಖ್ಯೆಯ ಜನರು ಅನುಸರಿಸುತ್ತಿದ್ದಾರೆ. ಸುಮಾರು 1400 ವರ್ಷಗಳ ಹಿಂದೆ ಜನಿಸಿದ ಇಸ್ಲಾಮ್ ಮತಾನುಯಾಯಿಗಳು ಎರಡನೆಯ ಸ್ಥಾನದಲ್ಲಿದ್ದಾರೆ. ಇಷ್ಟೊಂದು ಕ್ಷಿಪ್ರ ಪ್ರಗತಿಯ ಹಿಂದೆ ತಮ್ಮ ತಮ್ಮ ಧರ್ಮಗಳನ್ನು ಅಗ್ರಣಿಗಳಾಗಿಸಲು ನಡೆದ ಪ್ರಯತ್ನಗಳದು ಸಿಂಹಪಾಲೆಂದರೆ ತಪ್ಪಾಗಲಾರದು. ಆಸೆ, ಆಮಿಷ, ಅನಿವಾರ್ಯತೆ, ಬಡತನ ಮತ್ತು ಅಜ್ಞಾನಗಳ ದುರುಪಯೋಗ, ಕುಟಿಲೋಪಾಯಗಳು, ದುರ್ಮಾರ್ಗಗಳು, ಬಲಪ್ರಯೋಗಗಳಿಂದ ಮಾಡಲಾದ ಮತಾಂತರಗಳ ಕೊಡುಗೆಯೂ ಇದರಲ್ಲಿದೆ. ಪ್ರಪಂಚವನ್ನೇ ಕ್ರಿಶ್ಚಿಯನ್/ಮುಸ್ಲಿಮ್ ಬಹುಸಂಖ್ಯಾತರನ್ನಾಗಿಸಲು ಪ್ರಯತ್ನಗಳು ಎಡೆಬಿಡದೆ ನಡೆಯುತ್ತಿದ್ದು, ಇದಕ್ಕಾಗಿ ಯುದ್ಧಗಳು ಸಂಭವಿಸಿವೆ, ಸಂಭವಿಸಲಿವೆ. ಆರೋಗ್ಯಕರ ಪೈಪೋಟಿ ಮಾನವನ ಅಭಿವೃದ್ಧಿಗೆ ಪೂರಕ. ಅನಾರೋಗ್ಯಕರ ಪೈಪೋಟಿ ಮಾನವನಿಗೆ ಮಾರಕ. ಪೈಪೋಟಿ ಹೀಗೆಯೇ ಮುಂದುವರೆದಲ್ಲಿ ಮುಂದಿನ ದಿನಗಳಲ್ಲಿ ಕ್ರಿಶ್ಚಿಯನ್ ಮತ್ತು ಮುಸ್ಲಿಮ್ ರಾಷ್ಟ್ರಗಳ ನಡುವೆ ಯುದ್ಧಗಳು -ನೇರ ಮತ್ತು ಪರೋಕ್ಷ- ನಡೆಯುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು. ಧರ್ಮ/ಮತದ ಹೆಸರಿನಲ್ಲಿ ವೈಚಾರಿಕ ಮನೋಭಾವ. ಚಿಂತನೆಗಳಿಗೆ ಇರುವ ಅವಕಾಶಗಳಿಗೆ ಬೇಡಿ ತೊಡಿಸಲಾಗಿದೆ. ಹಾಗೆಯೇ, ಅಭಿವ್ಯಕ್ತಿ ಸ್ವಾತಂತ್ರ್ಯದ ಮುಸುಕಿನಲ್ಲಿ ವಿರೋಧಿ ಮತ/ಧರ್ಮಗಳವರನ್ನು ನಿಂದಿಸುವವರೂ ಇದ್ದಾರೆ. ಯಾರಿಗೆ ಯಾವ ಧರ್ಮ ಇಷ್ಟವೋ ಅದನ್ನು ಅನುಸರಿಸಲು ಅವಕಾಶ ಕೊಟ್ಟರೆ, ಮತಾಂತರಕ್ಕೆ ಪ್ರೋತ್ಸಾಹ ಸಿಗದಿದ್ದರೆ, ಪ್ರಲೋಭನೆ ಒಡ್ಡದಿದ್ದರೆ ಸಮಾನತೆಯ, ವಿಶ್ವಭ್ರಾತೃತ್ವದ ಕನಸು ಕಾಣಲು ಅವಕಾಶವಿದೆ.
ಭಾಷೆಗಳೂ ಸಹ ಅಸಮಾನತೆಯ ಕಾರಣವಾಗಿವೆಯೆಂಬುದು ಕಹಿ ಸತ್ಯ. ಪ್ರಪಂಚದಲ್ಲಿ 6000-7000 ಭಾಷೆಗಳು ಇವೆಯೆನ್ನಲಾಗಿದೆ. ಜನಸಂಖ್ಯಾವಾರು ಲೆಕ್ಕ ಹಾಕಿದರೆ, 2009ರ ಅಂಕಿ ಅಂಶಗಳಂತೆ ಚೈನೀಸ್ ಭಾಷೆಯನ್ನು 1213 ಮಿಲಿಯನ್ ಜನರು ಮಾತನಾಡುತ್ತಿದ್ದು ಪ್ರಥಮ ಸ್ಥಾನದಲ್ಲಿ ಬರುತ್ತದೆ. ಅನುಕ್ರಮವಾಗಿ 2,3 ಮತ್ತು 4ನೆಯ ಸ್ಥಾನಗಳಲ್ಲಿ 329 ಮಿಲಿಯನ್ ಜನ ಮಾತನಾಡುವ ಸ್ಪಾನಿಷ್, 328ಮಿಲಿಯನ್ ಜನರು ಮಾತನಾಡುವ ಇಂಗ್ಲಿಷ್ ಮತ್ತು 229 ಮಿಲಿಯನ್ ಜನರು ಮಾತನಾಡುವ ಅರೇಬಿಕ್ ಭಾಷೆಗಳು ಬರುತ್ತವೆ. 182 ಮಿಲಿಯನ್ ಜನರು ಮಾತನಾಡುವ ಹಿಂದಿ 5ನೆಯ ಸ್ಥಾನದಲ್ಲಿದೆ. ಭಾರತ ದೇಶವೊಂದರಲ್ಲೇ 1652 ವಿವಿಧ ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಬ್ರಿಟಿಷರ ಬಳುವಳಿಯಾಗಿ ಭಾರತಕ್ಕೆ ಬಂದ ಇಂಗ್ಲಿಷನ್ನು 1965ರವರೆಗೆ ಮಾತ್ರ ಉಳಿಸಿಕೊಳ್ಳಲು ಸಂವಿಧಾನದಲ್ಲಿ ನಿರ್ಧರಿಸಲಾಗಿತ್ತು. ಆದರೆ ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಮಾಡುವ ವಿಚಾರದಲ್ಲಿ ದಕ್ಷಿಣ ಭಾರತದಲ್ಲಿ ಉಗ್ರ ಚಳುವಳಿಗಳು ನಡೆದು ವಿಷಯ ತಣ್ಣಗಾಯಿತು. ಪ್ರಾದೇಶಿಕ ಭಾಷೆಗಳ ಜೊತೆಗೆ ಇಂಗ್ಲಿಷಿನ ಬದಲಿಗೆ ಹಿಂದಿಯನ್ನು ಒಪ್ಪಿಕೊಂಡಿದ್ದರೆ, ಇಂದು ಹಿಂದಿ ಮಾತನಾಡುವವರ ಸಂಖ್ಯೆ ಪ್ರಪಂಚದಲ್ಲಿ ಎರಡನೆಯ ಸ್ಥಾನದಲ್ಲಿರುತ್ತಿತ್ತು. ಈ ಅಂಕಿ ಅಂಶಗಳನ್ನು ಸಾಂದರ್ಭಿಕವಾಗಿ ಹೇಳಿದ್ದಷ್ಟೆ ಹೊರತು ಮುಖ್ಯ ವಿಷಯಕ್ಕೆ ಬರುತ್ತೇನೆ. ಸ್ವಭಾಷಾ ಪ್ರೇಮಕ್ಕಿಂತ ಇತರ ಭಾಷಾದ್ವೇಶ ಸಹ ಸೋದರತೆಯ ಭಾವನೆಗೆ ಕೊಡಲಿ ಪೆಟ್ಟು ಹಾಕಿದೆ. ಹಿಂದಿ ಭಾಷೆಯ ಮೇಲಿನ ದ್ವೇಶ ಗುಲಾಮಗಿರಿಯ ಬಳುವಳಿಯಾದ ಇಂಗ್ಲಿಷನ್ನು ಅನಿವಾರ್ಯವನ್ನಾಗಿ ಉಳಿಸಿತು. ಇಂಗ್ಲಿಷ್ ಇಲ್ಲದೆ ಬೆಳವಣಿಗೆ, ಪ್ರಗತಿ ಅಸಾಧ್ಯ ಅನ್ನುವುದು ಸರಿಯಲ್ಲ ಅನ್ನುವುದನ್ನು ಪ್ರಪಂಚದ ಭಾಷಾ ಅಂಕಿ ಸಂಖ್ಯೆಗಳು ಸಾರಿವೆ. ಭಾಷಾವಾರು ರಾಜ್ಯಗಳ ರಚನೆ ಸಹ ದೇಶದ ಸಮಗ್ರತೆಗೆ ಧಕ್ಕೆ ತರುತ್ತಿದೆಯೇನೋ ಎಂದು ಅನ್ನಿಸುತ್ತಿದೆ. ಭಾಷೆಯ ಹೆಸರಿನಲ್ಲಿ ಅಕ್ಕ ಪಕ್ಕದ ರಾಜ್ಯಗಳ ನಡುವೆ ಹಿಂಸಾತ್ಮಕ ಗಲಭೆಗಳಾಗಿವೆ, ಆಗುತ್ತಿವೆ. ನಮ್ಮ ಭಾಷೆಯೇ ಹೆಚ್ಚು ಎಂಬ ವಾದ ವಿವಾದಗಳು ಮಾನವರ ನಡುವೆ ಕಂದಕ ಉಂಟು ಮಾಡುತ್ತಿವೆ. ನಮ್ಮ ನಮ್ಮ ಭಾಷೆಗಳನ್ನು ಪ್ರೀತಿಸೋಣ, ಉಳಿಸೋಣ, ಬೆಳೆಸೋಣ; ಇತರ ಭಾಷೆಗಳನ್ನು ದ್ವೇಷಿಸದಿರೋಣ ಎಂಬ ಭಾವನೆ ಬರುವುದು ಸಾಧ್ಯವಾದಾಗ ಮಾತ್ರ ಸೋದರತೆ, ಸಮಾನತೆಗಳ ಮಾತನ್ನಾಡಲು ನಮಗೆ ಹಕ್ಕಿರುತ್ತದೆ.
(ಮುಂದುವರೆಯುವುದು)
-ಕ.ವೆಂ.ನಾಗರಾಜ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ