ಪರಸ್ಪರರಲ್ಲಿನ ಸಂಶಯದ ಕಾರಣದಿಂದ ಅನೇಕ ಸಂಸಾರಗಳು ಹಾಳಾಗಿರುವುದನ್ನು ಕಾಣುತ್ತಿರುತ್ತೇವೆ. ಸಂಶಯ ಪಡುವವರು ಹಾಳಾಗುತ್ತಾರೆ, ಸಂಶಯ ಅನ್ನುವುದು ದೊಡ್ಡ ರೋಗ, ಸಂಶಯ ಪಡುವುದು ಒಳ್ಳೆಯದಲ್ಲ, ಇತ್ಯಾದಿ ಮಾತುಗಳು ಕೇಳಿಬರುವುದು ವಿಶೇಷವೇನಲ್ಲ. ಆದರೆ ಆ ರೀತಿ ಏಕೆ ಸಂಶಯಿಸುತ್ತಾರೆ, ಅದರ ಪರಿಣಾಮಗಳೇನು, ಇತ್ಯಾದಿಗಳ ಕುರಿತು ಮನೋವೈಜ್ಞಾನಿಕರು ಏನು ಹೇಳುತ್ತಾರೆ ಎಂಬ ಬಗ್ಗೆ ಅಂತರ್ಜಾಲ ತಾಣಗಳಲ್ಲಿ ತಡಕಾಡಿದಾಗ ಅನೇಕ ಕುತೂಹಲಕರ ಅಂಶಗಳು ಕಾಣಸಿಕ್ಕಿದವು. ವಿವಿಧ ಲೇಖನಗಳಲ್ಲಿ ಕಂಡು ಬಂದ ಅಂಶಗಳನ್ನು ಒಂದೆಡೆ ಕ್ರೋಢೀಕರಿಸಿ, ನನ್ನ ಮಾತುಗಳನ್ನೂ ಸೇರಿಸಿ ಅದರ ಸಾರವನ್ನು ಹಂಚಿಕೊಳ್ಳಬೇಕೆನ್ನಿಸಿದುದರ ಫಲಶ್ರುತಿ ಈ ಲೇಖನ. ಇಂತಹ ಸಮಸ್ಯೆಗಳಿಂದ ತೊಂದರೆಗೆ ಒಳಗಾದವರಿಗೆ ಇದು ನೆರವಾಗಬಹುದು. ಸಂಬಂಧಿಗಳ ನಡುವಿನ ಸಂಶಯ ಯಾರಿಗೂ ಹಿತ ತರುವುದಿಲ್ಲ ಮತ್ತು ಅಹಿತಕರ ಸನ್ನಿವೇಶಗಳಿಗೆ ಕಾರಣವಾಗುತ್ತದೆ. ಹಿತಕರ ಸಂಬಂಧಗಳಲ್ಲಿ ಪರಸ್ಪರರ ವೈಯಕ್ತಿಕ ರುಚಿ, ಅಭಿರುಚಿಗಳನ್ನು ಗೌರವದಿಂದ ಕಾಣಲಾಗುತ್ತದೆ, ನಂಬಿಕೆ ಇರುತ್ತದೆ. ವೈಯಕ್ತಿಕತನಕ್ಕೆ ಅವಕಾಶವಿರುತ್ತದೆ. ಸಂಶಯದಿಂದ ನೋಡುವ ಪ್ರವೃತ್ತಿಯವರಲ್ಲಿ ಇನ್ನೊಬ್ಬರ ದೂರವಾಣಿ ಸಂದೇಶಗಳು, ಇ-ಮೇಲುಗಳು, ಅವರ ಕಾಗದ-ಪತ್ರಗಳು ಇತ್ಯಾದಿಗಳನ್ನು ಕದ್ದು ನೋಡುವ ಸ್ವಭಾವ ಕಂಡು ಬರುತ್ತದೆ. ಹೀಗೆ ಕದ್ದು ನೋಡುವುದರಿಂದ ಆಗುವ ಪರಿಣಾಮಗಳೇನು ನೋಡೋಣ.
೧. ಕದ್ದು ನೋಡುವವರು ತಮ್ಮನ್ನೇ ನಂಬದವರು: ಕದ್ದು ನೋಡುವ ಸ್ವಭಾವದವರಲ್ಲಿ ಬೇರೆಯವರು ನಂಬಿಕೆಗೆ ಅರ್ಹರಲ್ಲ ಎಂಬ ಭಾವನೆ ಇರುತ್ತದೆ. ಇನ್ನೊಬ್ಬರ ವಿರುದ್ಧ ಮತ್ತಷ್ಟು ಸಾಕ್ಷಿ ಮತ್ತು ತಮ್ಮ ಅನಿಸಿಕೆಗೆ ಪುಷ್ತಿ ಪಡೆದುಕೊಳ್ಳಲು ನೋಡುತ್ತಿರುತ್ತಾರೆ. ಇದು ಒಂದು ರೀತಿಯಲ್ಲಿ ತಮ್ಮನ್ನೇ ತಾವು ನಂಬದ ಮನೋಭಾವ. ಅವರಿಂದ ತಮ್ಮ ಭವಿಷ್ಯಕ್ಕೆ ತೊಂದರೆ ಎಂಬ ಅಭದ್ರತೆಯಿಂದ ನರಳುತ್ತಾರೆ. ಬೇರೆಯವರನ್ನು ದುಷ್ಟರಂತೆ ಕಾಣುವ ಮನಸ್ಥಿತಿಯಿಂದ ಬಲಿಪಶುವಾಗುವವರು ಸ್ವತಃ ತಾವೇ ಎಂಬುದು ವಾಸ್ತವ.
೨. ಕದ್ದು ನೋಡುವುದು ಒಂದು ಗೀಳು: ಕದ್ದು ನೋಡುವವರು ಮೊದಲು ಬೇರೆಯವರ ಫೋನಿನಲ್ಲಿನ ಸಂದೇಶಗಳನ್ನು ಕದ್ದು ನೋಡುತ್ತಾರೆ. ನಂತರ ಅವರ ಕಂಪ್ಯೂಟರ್, ಆಮೇಲೆ ಅವರ ವಸ್ತುಗಳು ಇತ್ಯಾದಿಗಳನ್ನು ಕದ್ದು ಪರಿಶೀಲಿಸುತ್ತಾರೆ. ಅವರು ಕೆಲಸ ಮಾಡುವ ಸ್ಥಳಗಳಲ್ಲಿ ಗುಪ್ತ ವಿಚಾರಣೆ ಮಾಡುತ್ತಾರೆ. ಇದು ಒಳ್ಳೆಯದಲ್ಲ, ಖಂಡಿತವಾಗಿ ಅದು ಇಳಿಜಾರಿನಲ್ಲಿ ಜಾರುವ ದಾರಿ.
೩. ಕದ್ದು ನೋಡುವುದು ನೋವು ಕೊಡುತ್ತದೆ: ಕದ್ದು ನೋಡುವುದರಿಂದ ಒಳ್ಳೆಯದಾಗುವುದು ಸಾಧ್ಯವೇ ಇಲ್ಲ. ಇತರರನ್ನು ನಂಬದಿರುವುದು ಕದ್ದು ನೋಡುವುದರ ಮೂಲ ಕಾರಣ. ಕದ್ದು ನೋಡಿದಾಗ ಎರಡು ಸಾಧ್ಯತೆಗಳು ಸಂಭವಿಸುತ್ತದೆ. ಒಂದು, ಹಾಗೆ ನೋಡಿದಾಗ ಯಾವುದಾದರೂ ಇಷ್ಟವಿಲ್ಲದ ಸಂಗತಿ ಗಮನಕ್ಕೆ ಬರುವುದು. ಹಾಗಾದಾಗ ನೋಡಿದವರಿಗೆ ಸಂತೋಷವಂತೂ ಆಗುವುದಿಲ್ಲ. ಇನ್ನೊಂದು, ಅಂತಹುದೇನೂ ಕಾಣದಿರುವುದು. ಆಗ ಜಾಣತನದಿಂದ ಮುಚ್ಚುಮರೆಯಲ್ಲಿ ಏನೋ ಮಾಡುತ್ತಿದ್ದಾರೆಂದು ಅಂದುಕೊಳ್ಳುವುದು. ಇದು ಅವರನ್ನು ಅವರೇ ನಂಬದ ಮನಸ್ಥಿತಿ ಮತ್ತು ಕದ್ದು ನೋಡಿ ತಾವೇ ನಂಬಿಕೆಗೆ ಅರ್ಹರಲ್ಲವೆಂದು ಸಾಬೀತು ಪಡಿಸಿಕೊಳ್ಳುವ ರೀತಿಯಾಗುತ್ತದೆ. ಸಂಬಂಧಗಳನ್ನು ಇಷ್ಟಪಡುವವರು ಹೀಗೆ ಮಾಡಬಾರದು.
೪. ಕದ್ದು ನೋಡುವವರು ಕೆಟ್ಟವರೆನಿಸುವರು: ಕದ್ದು ನೋಡುವುದರಿಂದ ಪ್ರೀತಿ, ವಿಶ್ವಾಸ, ನಂಬಿಕೆಗಳಿಗೆ ಕೊಡಲಿಪೆಟ್ಟು ಬೀಳುತ್ತದೆ. ಕದ್ದು ನೋಡಲು ಪ್ರಾರಂಭಿಸಿದ ತಕ್ಷಣದಿಂದ ಅವರು ನಂಬಿಕೆಗೆ ಅನರ್ಹರಾಗುತ್ತಾರೆ. ಜೊತೆಗಾರರನ್ನು ನಂಬುವುದು ಕಷ್ಟ ಎಂಬ ಭಾವನೆಯಿಂದ ಕದ್ದು ನೋಡುವುದು ಅಗತ್ಯವೆನಿಸಿದರೆ, ಆ ಅನಿಸಿಕೆಗೆ ಕಡಿವಾಣ ಹಾಕಿ ಜೊತೆಗಾರರೊಡನೆ ಮುಖಾಮುಖಿ ಚರ್ಚಿಸುವುದು ಒಳ್ಳೆಯ ದಾರಿ. ಆಗ ಸಮಸ್ಯೆ ಖಂಡಿತ ತಿಳಿಯಾಗುವುದಲ್ಲದೆ ತಪ್ಪು ಅನಿಸಿಕೆಗಳು ದೂರವಾಗುವ ಅಥವ ಪರಿಸ್ಥಿತಿ ಸರಿಯಾಗುವ ಸಂಭವನೀಯತೆಯೇ ಹೆಚ್ಚಾಗಿರುತ್ತದೆ.
೫. ಕದ್ದು ನೋಡುವುದು ಮೂರ್ಖತನ: ಜನರ ಸಾಮಾನ್ಯ ಸ್ವಭಾವವೆಂದರೆ ತಮ್ಮ ಭದ್ರತೆ, ಅನುಕೂಲತೆಗಳಿಗೆ ಆದ್ಯತೆ ಕೊಡುವುದು. ಅದನ್ನು ತಪ್ಪಿಸುವುದು ಆಗದ ಮಾತು. ಹಾಗಾಗಿ ಸಂಬಂಧದಲ್ಲಿ ನಂಬಿಕೆ, ಪ್ರಾಮಾಣಿಕತೆ ಉಳಿಯಬೇಕೆಂದರೆ ಕದ್ದು ನೋಡದಿರುವುದು ಒಳಿತು.
೬. ಕದ್ದು ನೋಡಿ ನಂಬಿಕೆ ಕಳೆದುಕೊಳ್ಳಬಾರದು: ಕದ್ದು ನೋಡುವ ಸ್ವಭಾವದವರೇ ಜೊತೆಗಾರರು ತಮ್ಮ ವಿಚಾರಗಳನ್ನು ಕದ್ದು ಗಮನಿಸುತ್ತಾರೆಂದು ದೂರಿದರೆ, ತಾವೇ ಆ ರೀತಿ ಮಾಡುವುದನ್ನು ಮುಚ್ಚಿಟ್ಟು ಮೋಸ ಮಾಡಿದಂತೆ ಆಗುತ್ತದೆ. ಮಾಡುವುದಲ್ಲದೆ ಅದನ್ನು ಮುಚ್ಚಿಟ್ಟುಕೊಳ್ಳುವುದು ಹೆಚ್ಚಿನ ದುರ್ನಡತೆಯೆನಿಸುತ್ತದೆ.
೭. ಎರಡು ತಪ್ಪುಗಳಿಂದ ಒಂದು ಸರಿ ಆಗುವುದಿಲ್ಲ: ಸಂಬಂಧಿಗಳ ವೈಯಕ್ತಿಕ ವಿಚಾರಗಳಲ್ಲಿ ಮೂಗು ತೂರಿಸುವುದು ಎಂದೂ ಸರಿಯಲ್ಲ. ಜೊತೆಗಾರರದು ತಪ್ಪು, ಅವರು ಸುಳ್ಳು ಹೇಳುತ್ತಿದ್ದಾರೆಂಬುದನ್ನು ಸಾಧಿಸುವ ಸಲುವಾಗಿ ಕದ್ದು ನೋಡುವುದಾದರೆ ಅದೂ ತಪ್ಪು. ಎರಡು ತಪ್ಪುಗಳಿಂದ ಒಂದು ಸರಿ ಆಗುವುದಿಲ್ಲ. ಉತ್ತಮ ವಿಧಾನವೆಂದರೆ ಇಬ್ಬರೂ ಒಟ್ಟಿಗೆ ಸಮಾಲೋಚಿಸಿ ಒಟ್ಟಿಗೆ ಫೋನಿನ ಸಂದೇಶಗಳು, ಇ-ಮೇಲುಗಳನ್ನು ಓದುವುದು ಮತ್ತು ಸಂದೇಹಗಳಿದ್ದರೆ ಪರಿಹರಿಸಿಕೊಳ್ಳುವುದು. ಅನುಮತಿಯಿಲ್ಲದೆ ಕದ್ದು ನೋಡುವುದಕ್ಕಿಂತ ಇದು ಒಳ್ಳೆಯದು.
೮. ತಪ್ಪು ಗ್ರಹಿಕೆಗೆ ಕಾರಣವಾಗುತ್ತದೆ: ಸಂಬಂಧಗಳಲ್ಲಿ ಇರಲೇಬೇಕಾದ ನಂಬಿಕೆಯನ್ನು ಕದ್ದು ನೋಡುವ ಕ್ರಿಯೆ ನುಚ್ಚುನೂರು ಮಾಡುತ್ತದೆ. ನಿಮ್ಮ ಫೋನ್/ಕಂಪ್ಯೂಟರ್ ಅನ್ನು ಬೇರೆಯವರು ಕದ್ದು ನೋಡಿದುದು ತಿಳಿದರೆ ನಿಮಗೆ ಹೇಗಾಗುತ್ತದೆ? ಕದ್ದು ನೋಡುವುದು ತಪ್ಪು ತಿಳುವಳಿಕೆಗೂ ಕಾರಣವಾಗುತ್ತದೆ. ಇರುವುದೇ ಒಂದು, ತಿಳಿಯುವುದೇ ಮತ್ತೊಂದು! ಕೆಲವೊಂದು ಸಲ ನಮಗೆ ತಿಳಿಯದಂತೆ ಕೆಲವು ಸಂಗತಿಗಳು ಜರುಗುವ ಸಾಧ್ಯತೆ ಇರುತ್ತದೆ. ಹುಟ್ಟುಹಬ್ಬಕ್ಕೋ, ಮತ್ತಾವುದೋ ವಿಶೇಷ ಸಂದರ್ಭಕ್ಕೋ ಚಕಿತಗೊಳಿಸುವ ಸಲುವಾಗಿ ಗುಟ್ಟಾಗಿ ವ್ಯವಸ್ಥೆ ಮಾಡಿಕೊಂಡಿರಬಹುದು. ಅದನ್ನು ಕದ್ದು ತಿಳಿದರೆ ಸ್ವಾರಸ್ಯವೂ ಇರುವುದಿಲ್ಲ, ಜೊತೆಗೆ ಕದ್ದು ನೋಡಿದವರ ಯೋಗ್ಯತೆಯೂ ಬಯಲಾಗುತ್ತದೆ.
೯. ಏಳು-ಬೀಳುಗಳಾಗುತ್ತವೆ: ಸಂಬಂಧಗಳು ನಿಲ್ಲುವುದೇ ನಂಬಿಕೆಯ ಮೇಲೆ. ಆ ನಂಬಿಕೆಯನ್ನು ಕಳೆದರೆ ಇಬ್ಬರೂ ಪರಸ್ಪರ ಬೆನ್ನು ತಿರುಗಿಸುವ ಸಂಭವ ಹೆಚ್ಚು. ಸಂಬಂಧಿಗಳಾಗಿದ್ದೇವೆ, ಸಂಬಂಧಕ್ಕೆ ಗೌರವ ಕೊಡಬೇಕು ಎಂಬ ಮನೋಭಾವವಿರಬೇಕು. ನಿನ್ನದು ತಪ್ಪು ಎಂದು ಒಂದು ಬೆರಳನ್ನು ತೋರಿಸಿದರೆ ಮೂರು ಬೆರಳುಗಳು ನಮ್ಮತ್ತಲೇ ತೋರುತ್ತಿರುತ್ತವೆ ಎಂಬುದು ನೆನಪಿನಲ್ಲಿರಬೇಕು.
೧೦. ಸಂಬಂಧಗಳು ಮುರಿಯುತ್ತವೆ: ಯಾವಾಗ ಅಪನಂಬಿಕೆ ಪ್ರವೇಶಿಸುತ್ತದೋ ನಂಬಿಕೆ ಹಾರಿಹೋಗುತ್ತದೆ. ಸಂಬಂಧ ಮುರಿದುಬೀಳುತ್ತದೆ. ನಿಮ್ಮ ವೈಯಕ್ತಿಕತೆಯನ್ನು ನೀವು ಇಷ್ಟಪಡುವಂತೆ ಬೇರೆಯವರೂ ತಮ್ಮತನ ಉಳಿಸಿಕೊಳ್ಳಲು ಬಯಸುತ್ತಾರೆ ಎಂಬ ಅರಿವಿರಬೇಕು.
೧೧. ಸಂಬಂಧ ಹಾಳು ಮಾಡಿದ ಹೊಣೆ ಹೊರಬೇಕಾಗುತ್ತದೆ: ಕದ್ದು ನೋಡುವ ಮುನ್ನ ಎಚ್ಚರವಿರಬೇಕು. ಸಂಶಯದಿಂದ ನೋಡುವಾಗ ಎಲ್ಲಾ ಸಂಗತಿಗಳೂ ತಪ್ಪು ಗ್ರಹಿಕೆಗೆ ಕಾರಣವಾಗುತ್ತವೆ. ಪ್ರತಿಯೊಂದರಲ್ಲೂ ತಪ್ಪು ಕಾಣುತ್ತದೆ. ಸಂಶಯವಿದ್ದರೆ ಸಂಬಂಧವೇಕೆ ಬೆಳೆಸಬೇಕು? ಸಂಬಂಧ ಬೆಳೆಸಿದ ಮೇಲೆ ನಂಬಿಕೆಯನ್ನೂ ಬೆಳೆಸಿಕೊಳ್ಳಬೇಕು. ತಿದ್ದಿಕೊಳ್ಳಲಾರದ ತಪ್ಪು ಯಾವುದೂ ಇಲ್ಲ.
೧೨. ವೈಯಕ್ತಿಕ ಸಂಗತಿಗಳಿಗೆ ಅಗೌರವವಾಗುತ್ತದೆ: ಸಂಬಂಧಿ/ಜೊತೆಗಾರರು ತಪ್ಪೇ ಮಾಡಿರುವುದು ತಿಳಿದರೂ ಅವರ ಫೋನ್, ಇತ್ಯಾದಿಗಳನ್ನು ಕದ್ದು ನೋಡುವುದು ವೈಯಕ್ತಿಕ ಸ್ವಾತಂತ್ರ್ಯದ ಗೌರವಕ್ಕೆ ಚ್ಯುತಿ ತಂದಂತಾಗುತ್ತದೆ. ಅಲ್ಲಿ ನಂಬಿಕೆ ಮುಳುಗುತ್ತದೆ, ಸಂಬಂಧಕ್ಕೆ ಗಂಡಾಂತರ ಒದಗುತ್ತದೆ. ಗೂಢಚಾರಿಕೆಯಿಂದ ಎಂತಹುದೇ ಸಂಗತಿ ತಿಳಿದುಬರಲಿ, ಮುಕ್ತವಾಗಿ ಪರಸ್ಪರ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದೇ ಅತ್ಯಂತ ಒಳ್ಳೆಯ ಮಾರ್ಗ. ಅಪಮಾರ್ಗಗಳು ಯಾರಿಗೂ ಹಿತವಲ್ಲ.
೧೩. ಕದ್ದು ನೋಡುವುದರಿಂದ ಪರಿಹಾರ ದೊರೆಯದು: ಬಿರುಕು ಬಿಟ್ಟ ತಳಪಾಯದ ಮೇಲೆ ಕಟ್ಟಡ ಹೇಗೆ ಸುಭದ್ರವಾಗಿರುವುದಿಲ್ಲವೋ ಹಾಗೆಯೇ ಸಂಶಯವಿದ್ದಾಗ ದೀರ್ಘಕಾಲದ ಸಂಬಂಧ ಸಾಧ್ಯವಿಲ್ಲ. ದೀರ್ಘ ಕಾಲ ಇದ್ದ ಸಂಬಂಧವೂ ಕದ್ದು ನೋಡುವಂತಹ ಕೆಟ್ಟ ಚಾಳಿಯ ಕಾರಣದಿಂದ ಮುರಿದು ಬೀಳುವುದು ದುರಂತವೇ ಸರಿ.
೧೪. ಮುರಿದ ಕನ್ನಡಿಯಾಗುತ್ತದೆ: ಕದ್ದು ನೋಡುವ ಪ್ರವೃತ್ತಿಯಿಂದ ಏನಾಗುತ್ತದೆಯೆಂದು ಸರಳವಾಗಿ ಹೇಳಬೇಕೆಂದರೆ, ಅವರು ಸಂಬಂಧಿ/ಜೊತೆಗಾರರ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಸಂಬಂಧಗಳು ಮೊದಲಿನಂತೆ ಇರುವುದು ದುಸ್ತರವಾಗುತ್ತದೆ. ಪ್ರೀತಿಸುತ್ತೇನೆ, ಆದರೆ ನಂಬುವುದಿಲ್ಲವೆಂದರೆ ಅದಕ್ಕೆ ಅರ್ಥವೇ ಇಲ್ಲ.
ಸಾರಾಂಶ: ಸಂಬಂಧ ಸುಮಧುರವಾಗಿ ಮುಂದುವರೆಯಬೇಕೆಂದರೆ ಸಂಬಂಧಿ/ಜೊತೆಗಾರರ ಬಗ್ಗೆ ಗೂಢಚಾರಿಕೆ ನಡೆಸುವ ಮನಸ್ಥಿತಿಯಿಂದ ದೂರವಿರಬೇಕು. ಸಂಶಯ ಹಾಳು ಮಾಡುತ್ತದೆ, ನಂಬಿಕೆ ಸಂಬಂಧವನ್ನು ಬೆಸೆಯುತ್ತದೆ.
ನಂಬಿದರೆ ಸತಿ-ಪತಿಯು ನಂಬಿರಲು ಸುತೆ-ಸುತರು
ಬಂಧು-ಮಿತ್ರರ ಬಳಗ ನಂಬಿದರೆ ಮಾತ್ರ|
ಬಾಳಿನಾ ಪಯಣದಲಿ ನಂಬಿಕೆಯೆ ಆಸರೆಯು
ನಂಬಿಕೆಗೆ ನೆರಳಾಗಿ ಬಾಳು ನೀ ಮೂಢ||
-ಕ.ವೆಂ.ನಾಗರಾಜ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ