ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಜುಲೈ 19, 2017

ದಲಿತತ್ವದಿಂದ ಉನ್ನತಿಯೆಡೆಗೆ! - 9


     ನಾವು ಮುಂದೆ ಬರಬೇಕೆಂದರೆ ಇನ್ನೊಬ್ಬರನ್ನು ದ್ವೇಷಿಸುವುದರಿಂದ, ಇನ್ನೊಬ್ಬರನ್ನು ತುಳಿಯುವುದರಿಂದ, ಇನ್ನೊಬ್ಬರ ಪ್ರಗತಿಗೆ ಅಡ್ಡಿಯಾಗುವುದರಿಂದ ಮುಂದೆ ಬರಬಹುದು ಎಂಬ ಭ್ರಮೆಯಿಂದ ಮೊದಲು ಹೊರಬರಬೇಕು. ನೆರೆಯವರನ್ನು ಪ್ರೀತಿಸು ಎಂಬ ಏಸುವಿನ ವಾಣಿ ಇಲ್ಲಿ ಪ್ರಸ್ತುತ. ನಮ್ಮ ನೆರೆಯವರು ನಮ್ಮ ಬಗ್ಗೆ ಅಸಹಿಷ್ಣುವಾಗಿದ್ದರೆ ನಮ್ಮ ಬದುಕು ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ನೆರೆಯವನನ್ನು ಹತ್ತಿಕ್ಕಿ ಮೆರೆಯುತ್ತೇವೆ ಎಂಬುದೂ ನೆಮ್ಮದಿ ಕೊಡುವುದಿಲ್ಲ. ಬದಲಾಗಿ ಪ್ರತಿಕ್ಷಣವೂ ಅವನೇನು ಮಾಡುತ್ತಾನೋ ಎಂಬ ಅಂಜಿಕೆ, ಅಳುಕುಗಳಲ್ಲಿಯೇ ಜೀವನ ಸವೆಯುತ್ತದೆ. ಬದಲಾಗಿ ಹೊಂದಿಕೊಂಡು ಹೋದರೆ? ಇಬ್ಬರಿಗೂ ನೆಮ್ಮದಿ! ಈ ತತ್ವವನ್ನು ಎಲ್ಲರೂ ಮನಗಾಣುವ, ಎಲ್ಲರಿಗೂ ಮನಗಾಣಿಸುವ ಕೆಲಸಕ್ಕೆ ಒತ್ತು ಕೊಡಬೇಕು. ಕಾಯದೆ, ಕಾನೂನುಗಳು ಒಂದು ಸೀಮಿತ ವ್ಯಾಪ್ತಿಯಲ್ಲಿ ಮಾತ್ರ ಉಪಯೋಗಕ್ಕೆ ಬರುತ್ತದೆ. ಹಟಕ್ಕೆ ಬಿದ್ದರೆ ಹಾನಿ ತಪ್ಪದು. ಪ್ರಚೋದಿಸುವವರ, ಹಾದಿ ತಪ್ಪಿಸುವವರ ವಿರುದ್ಧ ಎಚ್ಚರಿಕೆಯಿಂದಿರಬೇಕು. ಸಂಘರ್ಷದಿಂದ ಫಲ ಸಿಗಬಹುದು, ಆದರೆ ಅದು ಮಾಡುವ ಹಾನಿಯ ಮುಂದೆ ಸಿಗುವ ಫಲ ಚಿಕ್ಕದೇ ಆಗಿರುತ್ತದೆ. ಸಾಮರಸ್ಯದಿಂದ ಸಿಗುವ ಫಲ ಚಿಕ್ಕದೇ ಆದರೂ ಅದು ದೀರ್ಘಕಾಲಿಕ ಲಾಭ ತರದೇ ಇರದು.
     ಇಂದಿನ ಪರಿಸ್ಥಿತಿ ಸರಿಪಡಿಸಲು ದೂಷಿಸುವವರೊಂದಿಗೆ, ದೂಷಿಸಲ್ಪಡುವವರೂ ಪೂರ್ವಾಗ್ರಹ ಪೀಡಿತರಾಗದೆ ಒಳ್ಳೆಯ ರೀತಿ-ನೀತಿಗಳ ವ್ಯವಸ್ಥೆ ತರಲು ಕೈಜೋಡಿಸುವುದು ಅಗತ್ಯವಾಗಿದೆ. ಏಕೆಂದರೆ ಈಗಿರುವ ಈ ಇಬ್ಬರೂ ಇಂದಿನ ಈ ಸ್ಥಿತಿಗೆ ಕಾರಣರಲ್ಲ. ಯಾರೋ ಮಾಡಿದ ತಪ್ಪಿಗೆ ಇನ್ನು ಯಾರೋ ಮತ್ಯಾರನ್ನೋ ದೂಷಿಸುವುದರಿಂದ ಪರಿಸ್ಥಿತಿ ಸುಧಾರಿಸಬಹುದೆಂದು ನಿರೀಕ್ಷಿಸಲಾಗದು. ಪರಸ್ಪರರ ದೂಷಣೆಯಿಂದ ದೊರಕುವ ಫಲವೆಂದರೆ ಮನಸ್ಸುಗಳು ಕಹಿಯಾಗುವುದು, ಕಲುಷಿತಗೊಳ್ಳುವುದು ಅಷ್ಟೆ. ಸೈದ್ಧಾಂತಿಕವಾಗಿ ಯಾವುದೇ ವಿಚಾರವನ್ನು ಒಪ್ಪಬೇಕು ಅಥವ ವಿರೋಧಿಸಬೇಕೇ ಹೊರತು, ಅದು ವ್ಯಕ್ತಿಗಳ ನಡುವಣ ದ್ವೇಷವಾಗಿ ತಿರುಗಬಾರದು. ಎಲ್ಲರೂ ಒಂದೇ ರೀತಿಯಲ್ಲಿ ಯೋಚಿಸುವವರಾದರೆ, ನಡೆಯುವುದಾದರೆ ಈ ಜಗತ್ತು ನಡೆಯುವುದಾದರೂ ಹೇಗೆ? ನಮ್ಮ ನಮ್ಮ ವಿಚಾರಗಳನ್ನು ಬಿಟ್ಟುಕೊಡಬೇಕಿಲ್ಲ, ಇತರರ ವಿಚಾರಗಳನ್ನು ಒಪ್ಪಲೇಬೇಕೆಂದಿಲ್ಲ. ಅವರವರ ವಿಚಾರ ಅವರಿಗಿರಲಿ. ಆದರೆ, ನನ್ನ ವಿಚಾರವೇ ಸರಿ, ಅದನ್ನು ಎಲ್ಲರೂ ಒಪ್ಪಲೇಬೇಕೆಂಬ ಆಗ್ರಹ ಮಾತ್ರ ಸರಿಯೆನಿಸುವುದಿಲ್ಲ.
ನಿನಗೆ ನೀನೆ ಬಂಧು ನಿನಗೆ ನೀನೆ ಶತ್ರು
ಪರರು ಮಾಡುವುದೇನು ನಿನದೆ ತಪ್ಪಿರಲು |
ಉನ್ನತಿಗೆ ಹಂಬಲಿಸು ಅವನತಿಯ ಕಾಣದಿರು
ನಿನ್ನುದ್ಧಾರ ನಿನ್ನಿಂದಲೇ ಮೂಢ ||
     ದಲಿತತ್ವದಿಂದ ಮೇಲೇರಬೇಕೆಂದರೆ ಮೇಲೇರಬೇಕೆಂಬ ಅದಮ್ಯ ವಿಶ್ವಾಸ ಮೊದಲು ಇರಬೇಕು. ಸವಲತ್ತುಗಳು, ಸಮಾಜ ಸುಧಾರಕರ ಬೆಂಬಲಗಳು, ಕಾಯದೆ-ಕಾನೂನುಗಳನ್ನು ಸಹಾಯಕ್ಕಾಗಿ ಬಳಸಿಕೊಳ್ಳಬಹುದೇ ಹೊರತು ಅಷ್ಟರಿಂದ ಮಾತ್ರ ಮೇಲೆ ಬರುವುದು ಕಷ್ಟ. ಆತ್ಮವಿಶ್ವಾಸವಿದ್ದರೆ ನೂರು ರೀತಿಯ ಅಡ್ಡಿ-ಅಡಚಣೆಗಳು ಏನೂ ಮಾಡಲಾರವು. ಉತ್ತಮ ರೀತಿಯ ವಿದ್ಯಾಭ್ಯಾಸ ಗಳಿಕೆ ಗುರಿಯಾಗಬೇಕು. ಇಂದು ಯಾರಾದರೂ ಮುಂದಿದ್ದಾರೆಂದು ಅಂದುಕೊಂಡರೆ ಅವರು ಏಕೆ ಮುಂದಿದ್ದಾರೆ ಎಂಬ ಅಂಶವನ್ನು ಅಧ್ಯಯಿಸಿದರೆ ಅವರ ಜೀವನಶೈಲಿ ಮತ್ತು ಮುಂದುವರೆಯಬೇಕೆಂಬ ಛಲವೇ ಅದಕ್ಕೆ ಕಾರಣವೆಂಬುದು ಗೊತ್ತಾಗುತ್ತದೆ. ಇದನ್ನು ನಮ್ಮದಾಗಿಸಿಕೊಳ್ಳಬಾರದೇಕೆ? ಆತ್ಮ ವಿಶ್ವಾಸವಿಲ್ಲದವನ ಬಳಿ ಇರುವ ಹಣ, ಅಧಿಕಾರ, ತೋಳ್ಬಲ ಎಲ್ಲವೂ ವ್ಯರ್ಥ. ಆತ್ಮವಿಶ್ವಾಸವಿರುವವನಿಗೆ ಇವು ಯಾವುವೂ ಇಲ್ಲದಿದ್ದರೂ ಅವನು ಯಶಸ್ವಿಯಾಗುವನು. ಯೋಗ್ಯತೆ ಇದ್ದವರು ಯಾವ ರಂಗದಲ್ಲಿಯೇ ಆಗಲಿ ಯಶಸ್ಸು ಕಾಣುತ್ತಾರೆ, ಇಲ್ಲದವರು ಹಿಂದುಳಿಯುತ್ತಾರೆ. ಯೋಗ್ಯತೆ ಮತ್ತು ಅರ್ಹತೆಗಳಿಗೆ ಜಾತಿ ಮಾನದಂಡ ಅಲ್ಲವೇ ಅಲ್ಲ, ಆಗಲೂಬಾರದು. ದಲಿತರಲ್ಲಿ ಆತ್ಮವಿಶ್ವಾಸವನ್ನು, ಸ್ವಾಭಿಮಾನವನ್ನು ಜಾಗೃತಗೊಳಿಸುವ ಕೆಲಸ ಆದ್ಯತೆ ಪಡೆಯಬೇಕು. ಆಗ ಅಂಬೇಡ್ಕರರ ಆಶಯದಂತೆ ಸ್ವಂತ ಬಲದಿಂದ ಮಂದೆ ಬರುವ ಛಲ ಅವರಲ್ಲಿ ಮೂಡುತ್ತದೆ.  
     ದೇಶಪ್ರೇಮ, ಧರ್ಮಪ್ರೇಮ, ಜಾತಿಪ್ರೇಮ, ಭಾಷಾಪ್ರೇಮ ಎಲ್ಲವೂ ಒಳ್ಳೆಯದೇ. ಅಸಮಾನತೆಗೆ ದೇಶ, ಧರ್ಮ, ಜಾತಿ, ಭಾಷೆಗಳು ಕಾರಣವಲ್ಲ. ಆದರೆ ದೇಶ, ಧರ್ಮ, ಜಾತಿ, ಭಾಷೆಯ ಹೆಸರಿನಲ್ಲಿ ಅದೆಷ್ಟು ಮಾರಣಹೋಮಗಳಾಗಿವೆ! ನಿಜವಾದ ಕಾರಣ ನಿಮಗೆ ಈಗ ಗೊತ್ತಾಗಿರಬಹುದು. ಇತರ ದೇಶ/ಧರ್ಮ/ಜಾತಿ/ಭಾಷೆಗಳ ಮೇಲಿನ ದ್ವೇಷವೇ ಅದು! ಅದನ್ನು ತ್ಯಜಿಸಿದರೆ ನಾವು ವಿಶ್ವಮಾನವರೇ. ಅಸಮಾನತೆಯನ್ನು ಹೋಗಲಾಡಿಸಲು ಧರ್ಮ/ಜಾತಿಗಳು ಹುಟ್ಟಿದವು. ಆದರೆ ಮುಂದೆ ಅವೇ ಅಸಮಾನತೆಗೆ ಮೆಟ್ಟಲುಗಳಾದವು. ಸಮಾನತೆಯ ಸಾಧನೆಗೆ ಕೇವಲ ಸರ್ಕಾರವನ್ನು ನೆಚ್ಚಿ ಕುಳಿತುಕೊಳ್ಳುವಲ್ಲಿ, ಸರ್ಕಾರವನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ಸರ್ಕಾರ ಕೇವಲ ಸಾಧನ ಮಾತ್ರ. ಆ ಸಾಧನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕೆಲಸ ಮಾಡಬೇಕಾದವರು ನಾವುಗಳೇ.
     ಸಮಾನತೆಯನ್ನು ಜನರ ಬುದ್ಧಿಶಕ್ತಿಯಲ್ಲಿ, ದೇಹಶಕ್ತಿಯಲ್ಲಿ, ಮನೋಭಾವದಲ್ಲಿ, ಭೌತಿಕ ಸೌಂದರ್ಯದಲ್ಲಿ, ಇತ್ಯಾದಿ ಹತ್ತು ಹಲವು ರೀತಿಗಳಲ್ಲಿ ತರುವುದು ಸಾಧ್ಯವಿದೆಯೇ? ಸಮಾನತೆಯನ್ನು ತರಲು ಸಾಧ್ಯವಿರುವಂತಹ ಸಂಗತಿಗಳಲ್ಲಿ ಮಾತ್ರ ಅದನ್ನು ಸಾಧಿಸಲು ಪ್ರಯತ್ನಿಸುವುದು ಉತ್ತಮ. ಯಾವುದರಲ್ಲೋ ಸಮಾನತೆ ತರುತ್ತೇವೆಂದು ಮತ್ತಿನ್ಯಾವುದೋ ರೀತಿಯ ತಾರತಮ್ಯಗಳನ್ನು ಜನರ ನಡುವೆ ಉಂಟುಮಾಡುವ, ಸಮಾನತೆಯ ಹೆಸರಿನಲ್ಲಿ ಅಸಮಾನತೆ ಹೆಚ್ಚಿಸುವ ಸರ್ಕಾರದ ಇಂದಿನ ರೀತಿ-ನೀತಿಗಳು, ಕಾರ್ಯಕ್ರಮಗಳು ಬದಲಾದರೆ ಮಾತ್ರ ಏನನ್ನಾದರೂ ಒಳಿತನ್ನು ನಿರೀಕ್ಷಿಸಲು ಸಾಧ್ಯ. ಈ ವೇದಮಂತ್ರದ ಸಂದೇಶ ಅರ್ಥಪೂರ್ಣವಾಗಿದೆ:
ಯೇ ಪಂಥಾನೋ ಬಹವೋ ದೇವಯಾನಾ ಅಂತರಾ ದ್ಯಾವಾಪೃಥಿವೀ ಸಂಚರಂತಿ | ತೇಷಾಮಜ್ಯಾನಿಂ ಯತಮೋ ವಹಾತಿ ತಸ್ಮೈಮಾದೇವಾಃ ಪರಿಧತ್ತೇಹ ಸರ್ವೇ | ಗ್ರೀಷ್ಮೋ ಹೇಮಂತಃ ಶಿಶಿರೋ ವಸಂತಃ ಶರದ್ವರ್ಷಾಃ ಸ್ವಿತೇನೋದಧಾತ | ಆನೋಗೋಷು ಭಜತಾಂ ಪ್ರಜಯಾಂ ನಿವಾತ ಇದ್ ವಃ ಶರಣೇಸ್ಯಾಮ | ಇದಾವತ್ಸರಾಯ ಪರಿವತ್ಸರಾಯ ಸಂವತ್ಸರಾಯ ಕೃಣುತಾ ಬೃಹನ್ನವಮ್ | ತೇಷಾಂ ವಯಂ ಸುಮತೌ ಯಜ್ಞಿಯಾನಾಮಪಿ ಭದೇ ಸೌಮನಸೇ ಸ್ಯಾಮ || (ಅಥರ್ವ.6.55.1,2)
     ಅರ್ಥ: ಜನರು ಒಳ್ಳೆಯವರಾಗಲು ಬಹಳಷ್ಟು ದಾರಿಗಳಿವೆ. ಯಾವ ದಾರಿ ಒಳ್ಳೆಯದೋ ಅದರಲ್ಲಿ ಮಾತ್ರ ಹೋಗಬೇಕು. ಒಳ್ಳೆಯ ದಾರಿಯ ಪಯಣ ಮತ್ತು ಒಳ್ಳೆಯದನ್ನೇ ಮಾಡುವುದರಿಂದ ಸದಾ ಸುಖ, ಸಂತೋಷ, ನೆಮ್ಮದಿ ಸಿಗುತ್ತದೆ. ನಮಗಾಗಿ ಶ್ರಮಿಸುವ ಹಾಲು ಕೊಡುವ ಹಸುಗಳಿಗೆ, ಹೊಲ-ಗದ್ದೆಗಳಲ್ಲಿ ದುಡಿಯುವ ಎತ್ತುಗಳಿಗೆ, ಜೀವರಿಗೆ ನಾವು ಒಳಿತನ್ನೇ ಬಯಸಬೇಕು. ಮನೆಯಲ್ಲೂ, ಮನೆಯ ಹೊರಗೂ ಎಲ್ಲೆಡೆಯೂ, ಎಲ್ಲರೊಂದಿಗೂ ನಮ್ಮ ನಡವಳಿಕೆಗಳು ಪ್ರೇಮಭಾವದಿಂದ ಕೂಡಿರಬೇಕು. ಅನ್ನ, ಜಲ, ಅವಕಾಶಗಳು ಸಮೃದ್ಧಿಯಾಗಿರುವಂತೆ ನೋಡಿಕೊಂಡು, ಜ್ಞಾನಪ್ರಸಾರ, ಕೆಲಸಕಾರ್ಯಗಳು, ಸಮಾನ ಅವಕಾಶಗಳು ಸದಾ ಸಮೃದ್ಧವಾಗಿರುವಂತೆ ಇರಬೇಕು. ಹೀಗಿದ್ದರೆ ದೇಶದ ಉನ್ನತಿ, ಎಲ್ಲರಲ್ಲಿ ಭಾವೈಕ್ಯ ಮೂಡದೇ ಇದ್ದೀತೆ? ತಾರತಮ್ಯವಿರದ ಸಹೃದಯ ಪೂರ್ಣ ಸದ್ಗುಣಗಳು ಮಾತ್ರ ಸಮಾನತೆಗೆ ಪ್ರೇರಕ ಅಂಶಗಳು.
     ಪ್ರಗತಿ ಜೀವಂತಿಕೆಯ ಸಂಕೇತ. ಈಗ ಇರುವುದಕ್ಕಿಂತ ಮುಂದಿನ ಉತ್ತಮ ಸ್ಥಿತಿಗೆ ಮುಂದೆ ಹೋಗೋಣ. ಮುಂದೆ ಹೋದಾಗ ಹಿಂತಿರುಗಿ ನೋಡಿ, ಹಿಂದೆ ಬಿದ್ದವರನ್ನು ಮುಂದೆ ಬರಲು ಸಹಕರಿಸಿ ಕೈಹಿಡಿದು ಮುಂದೆ ತರೋಣ. ಮತ್ತೆ ಮುಂದೆ ಹೋಗೋಣ, ಮತ್ತೆ ಹಿಂದಿರುವವರನ್ನೂ ಮುಂದಕ್ಕೆ ತರೋಣ, ಮತ್ತೆ ಮುಂದೆ ಹೋಗೋಣ. ಈ ಪ್ರಕ್ರಿಯೆ ನಿರಂತರವಾಗಿರಲಿ. ಇದು ನಿಜವಾದ ಸಮಾನತೆಯ, ನಿಜವಾದ ಮಾನವತೆಯ, ನಿಜವಾದ ವಿಶ್ವಭ್ರಾತೃತ್ವದ ಕಲ್ಪನೆ. ಈ ಕಲ್ಪನೆ ಸಾಕಾರವಾಗಬೇಕಾದರೆ ಇದಕ್ಕೆ ಪೂರಕವಾದ ಜ್ಞಾನದ ಅರಿವನ್ನು ಮೂಡಿಸುವ ಕಾರ್ಯ ಮುಂದೆ ಇರುವವರದಾಗಿದೆ. ಟೀಕೆ ಮಾಡುತ್ತಾ, ಒಬ್ಬರನ್ನೊಬ್ಬರು ದೂಷಿಸುತ್ತಾ ಅವರ ಕಾಲನ್ನು ಇವರು ಕಾಲನ್ನು ಅವರು ಎಳೆಯುತ್ತಾ ಪರಿಸ್ಥಿತಿ ವಿಷಮಗೊಳಿಸುವುದರಿಂದ ಯಾರೂ ಮುಂದೆ ಬರಲಾರರು.. ಮುಂದೆ ಬರಬೇಕೆಂದರೆ ಮುಂದೆ ಹೋಗಬೇಕಷ್ಟೆ. ಸಮಾನತೆ ಬೇಕೆಂದರೆ ಹಿಂದಿರುವವರನ್ನು ಮುಂದೆ ತರಬೇಕಷ್ಟೆ, ಮುಂದಿರುವವರನ್ನು ಹಿಂದೆ ತರುವುದಲ್ಲ. ಇದಕ್ಕೆ ಬೇರೆ ಅಡ್ಡದಾರಿಗಳಿಲ್ಲ. ಸಂ ಅಜತಿ ಇತಿ ಸಮಾಜಃ - ಒಂದುಗೂಡಿ ಮುಂದುವರೆಯುವುದೇ ಸಮಾಜ. ಇಲ್ಲದಿದ್ದರೆ ಅದು ಸಮಾಜ ಅನ್ನಿಸಿಕೊಳ್ಳದೆ, ದುಃ ಅಜ ಅರ್ಥಾತ್ ದುರಾಜ ಆಗುತ್ತದೆ. ದಲಿತತ್ವ ಮತ್ತು ಉನ್ನತಿ ಇವೆರಡೂ ನಮ್ಮ ಜೀವನದ ಸ್ಥಿತಿಗಳಷ್ಟೆ. ನಮಗಿಂತ ಎಷ್ಟೋ ಜನರು ನಮಗಿಂತ ಮುಂದಿರುತ್ತಾರೆ. ಆದ್ದರಿಂದ ನಾವು ಹಿಂದುಳಿದವರು. ನಮಗಿಂತ ಅದೆಷ್ಟೋ ಜನರು ಹಿಂದುಳಿದಿದ್ದಾರೆ. ಆದ್ದರಿಂದ ನಾವು ಮುಂದುವರೆದವರು! ನಾವೀಗ ಮಾಡಬೇಕಾದುದೇನೆಂದರೆ ಹಿಂದುಳಿದಿರುವವರನ್ನು ನಮ್ಮ ಜೊತೆಜೊತೆಗೇ ಮುಂದೆ ತಂದು, ನಮಗಿಂತ ಮುಂದೆ ಇರುವವರ ಜೊತೆಗೆ ಸಮನಾಗಿ ಹೋಗುವ ಮತ್ತು ಅವರನ್ನೂ ಮೀರಿಸುವ ಪ್ರಯತ್ನ ಎಡೆಬಿಡದೆ ಮಾಡೋಣ, ಮುನ್ನಡೆಯೋಣ, ದಲಿತತ್ವದಿಂದ ಉನ್ನತಿಯೆಡೆಗೆ ಸಾಗೋಣ.
 ನಮೋ ಜ್ಯೇಷ್ಠಾಯ ಚ ಕನಿಷ್ಠಾಯ ಚ ನಮಃ ಪೂರ್ವಜಾಯ ಚಾಪರಜಾಯ ಚ ನಮೋ ಮಧ್ಯಮಾಯ ಚಾಪಗಲ್ಫಾಯ ಚ ನಮೋ ಜಘನ್ಯಾಯ ಚ ಬುದ್ಧ್ಯಾಯ ಚ || [ಯಜು. 16-32]
     ಗುಣ-ಕರ್ಮ ಸ್ವಭಾವಗಳಿಂದ ದೊಡ್ಡವನಾಗಿರುವವನಿಗೆ ನಮಸ್ಕಾರ; ಹಾಗೆಯೇ ಗುಣ-ಕರ್ಮ ಸ್ವಭಾವಗಳಿಂದ ಚಿಕ್ಕವನಾಗಿರುವವನಿಗೂ ನಮಸ್ಕಾರ; ಮತ್ತು, ವಯಸ್ಸಿನಲ್ಲಿ ಹಿರಿಯನಿಗೆ ನಮಸ್ಕಾರ ಹಾಗೂ ವಯಸ್ಸಿನಲ್ಲಿ ಕಿರಿಯನಿಗೂ ನಮಸ್ಕಾರ; ಅಂತೆಯೇ ನಡುವಯಸ್ಕನಿಗೆ ನಮಸ್ಕಾರ; ಅದೇ ರೀತಿ, ಅವಿಕಸಿತ ಶಕ್ತಿಯುಳ್ಳವನಿಗೆ ನಮಸ್ಕಾರ. ಹೀನ ಸ್ಥಿತಿಯಲ್ಲಿರುವವನಿಗೂ, ವಿಶಾಲ ಮನಸ್ಕನಿಗೂ ನಮಸ್ಕಾರ.
-ಕ.ವೆಂ.ನಾಗರಾಜ್.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ