ಇತಿಹಾಸ ರೋಚಕವಾಗಿರುವುದೇ ಹಿತಶತ್ರುಗಳಿಂದಾಗಿ ಎನ್ನಬಹುದು. ಮಹಾಭಾರತದ ಶಕುನಿ ಕೌರವರ ಜೊತೆಯಲ್ಲಿ ಅವರ ಹಿತೈಷಿಯಂತೆಯೇ ಇದ್ದು ಅವರ ಸರ್ವನಾಶಕ್ಕೆ ಕಾರಣನಾದವನು. 12ನೆಯ ಶತಮಾನದಲ್ಲಿ ಅಜ್ಮೇರ್ ಮತ್ತು ದೆಹಲಿಯನ್ನಾಳಿದ್ದ ರಜಪೂತ ದೊರೆ ಪೃಥ್ವಿರಾಜ ಚೌಹಾನನ ಅಂತ್ಯಕ್ಕೆ ಕಾರಣನಾದವನು ನೆರೆಯ ಕನೌಜ ರಾಜ್ಯದ ದೊರೆ ಜಯಚಂದ್ರ. ಜಯಚಂದ್ರನ ರಾಜ್ಯ ವಿಸ್ತರಣಾಕಾಂಕ್ಷೆಗೆ ಅಡ್ಡಿಯಾದುದಲ್ಲದೆ ತನ್ನ ಮಗಳು ಸಂಯೋಗಿತಾಳನ್ನು ಪೃಥ್ವಿರಾಜ ಪ್ರೇಮಿಸಿದ್ದುದು ಅವನ ಮೇಲಿನ ಅವನ ದ್ವೇಷಕ್ಕೆ ಕಾರಣವಾಗಿತ್ತು. ಅವಮಾನಿಸಲೆಂದೇ ಜಯಚಂದ್ರ ತನ್ನ ಮಗಳು ಸಂಯೋಗಿತಾಳ ಸ್ವಯಂವರದ ಸಂದರ್ಭದಲ್ಲಿ ಪೃಥ್ವಿರಾಜನ ಪ್ರತಿರೂಪದ ಗೊಂಬೆ ಮಾಡಿಸಿ ದ್ವಾರಪಾಲಕನ ಸ್ಥಾನದಲ್ಲಿ ನಿಲ್ಲಿಸಿದ್ದ. ಪೃಥ್ವಿರಾಜ ಚಾಣಾಕ್ಷತನದಿಂದ ಅಲ್ಲಿಗೆ ಧಾವಿಸಿ ಸಂಯೋಗಿತಾಳನ್ನು ಕರೆದುಕೊಂಡು ಹೋಗಿ ವಿವಾಹವಾಗಿದ್ದು ದ್ವೇಷಾಗ್ನಿ ಮತ್ತಷ್ಟು ಹೆಚ್ಚಿಸಿತ್ತು. ಈ ಸಂದರ್ಭದಲ್ಲಿ ದೆಹಲಿಯನ್ನು ವಶಪಡಿಸಿಕೊಳ್ಳಲು ಹೊಂಚುಹಾಕಿದ್ದ ಮಹಮದ್ ಘೋರಿಗೆ ತನ್ನ ಸೈನ್ಯದ ಸಹಾಯಹಸ್ತ ಚಾಚಿ ಜಯಚಂದ್ರ ದೆಹಲಿಯ ಪತನಕ್ಕೆ ನಾಂದಿ ಹಾಡಿದ್ದ. ಮೊದಲೊಮ್ಮೆ ಪೃಥಿರಾಜನಿಂದ ಸೋತು ಓಡಿಹೋಗಿದ್ದ ಘೋರಿ ತನ್ನ ಎರಡನೆಯ ಪ್ರಯತ್ನದಲ್ಲಿ ಜಯಚಂದ್ರನ ಅನಿರೀಕ್ಷಿತ ನೆರವಿನಿಂದ ಯಶಸ್ವಿಯಾಗಿದ್ದ. ಸಹಾಯದ ಕೃತಜ್ಞತೆಯನ್ನೂ ತೋರದಿದ್ದ ಮಹಮದ್ ಘೋರಿ ನಂತರದಲ್ಲಿ ಜಯಚಂದ್ರನನ್ನೂ ಸಂಹರಿಸಿದ್ದ. ಜಯಚಂದ್ರ ತನ್ನ ಮಗಳು ವಿಧವೆಯಾಗುವುದನ್ನೂ ಲೆಕ್ಕಿಸದೆ ಪೃಥ್ವಿರಾಜನ ನಾಶಕ್ಕೆ ಪ್ರಯತ್ನಿಸದೇ ಇದ್ದಿದ್ದರೆ, ಸಂಬಂಧದ ಕಾರಣದಿಂದ ವಿಶ್ವಾಸದಿಂದ ಇದ್ದಿದ್ದರೆ ಎರಡೂ ರಾಜ್ಯಗಳು ಮತ್ತಷ್ಟು ಬಲಿಷ್ಠವಾಗುತ್ತಿದ್ದವು. ಮೊಘಲರಾಗಲೀ, ಇತರ ವಿದೇಶೀಯರಾಗಲೀ ಭಾರತಕ್ಕೆ ಬರಲಾಗುತ್ತಿರಲಿಲ್ಲ. ಹೀಗಾಗದೆ ಇದ್ದುದರಿಂದಾಗಿ ಭಾರತ ದೊಡ್ಡ ಬೆಲೆ ತೆರಬೇಕಾಯಿತು. ಶತಮಾನಗಳ ಕಾಲ ಮೊಘಲರ ಆಳ್ವಿಕೆಗೆ ದೇಶ ಒಳಪಟ್ಟಿತು.
ಇನ್ನೊಂದು ಉದಾಹರಣೆ ನೋಡೋಣ. ಧಾರವಾಡದ ಕಲೆಕ್ಟರ್ ಆಗಿದ್ದ ಬ್ರಿಟಿಷರ ಪ್ರತಿನಿಧಿ ಥ್ಯಾಕರೆ ಕಿತ್ತೂರನ್ನು ವಶಪಡಿಸಿಕೊಳ್ಳಲು 21ನೇ ಅಕ್ಟೋಬರ್ 1824ರಲ್ಲಿ ದಂಡೆತ್ತಿ ಬಂದಾಗ ವೀರಾವೇಶದಿಂದ ಹೋರಾಡಿ ಥ್ಯಾಕರೆಯನ್ನು ಸಂಹರಿಸಿದ್ದ ಕಿತ್ತೂರು ರಾಣಿ ಚನ್ನಮ್ಮಳ ಧೈರ್ಯ, ಶೌರ್ಯ ನಾಡಿಗೇ ತಿಳಿದ ಸಂಗತಿ. ಚನ್ನಮ್ಮನನ್ನು ನಿಯಂತ್ರಿಸದಿದ್ದರೆ ಬೇರೆ ಸಂಸ್ಥಾನಗಳವರೂ ತಿರುಗಿ ಬಿದ್ದಾರೆಂದು ಯೋಚಿಸಿದ ಬ್ರಿಟಿಷರು ತಮ್ಮ ಸೈನ್ಯ ಒಗ್ಗೂಡಿಸಿ 1824ರ ಡಿಸೆಂಬರ್ 3ರಲ್ಲಿ ಮತ್ತೆ ದಾಳಿ ಮಾಡಿದಾಗ ಬ್ರಿಟಿಷರೊಂದಿಗೆ ಕೈಜೋಡಿಸಿದವನು ಕಿತ್ತೂರಿನ ನಾಡದ್ರೋಹಿ ಮಲ್ಲಪ್ಪಶೆಟ್ಟಿ! ಕಿತ್ತೂರು ಸೈನ್ಯದ ತೋಪುಗಳು ಸಿಡಿಯದಂತೆ ಅವುಗಳಿಗೆ ನೀರು ತುಂಬಿಸಿಬಿಟ್ಟಿದ್ದರು ಆ ದ್ರೋಹಿಗಳು. ಪರಿಣಾಮವಾಗಿ ಚನ್ನಮ್ಮ ಬಂದಿಯಾಗಿ ಬೈಲಹೊಂಗಲದ ಸೆರೆಮನೆಯಲ್ಲಿರಬೇಕಾಯಿತು. 1829ರ ಏಪ್ರಿಲ್, 2ರಲ್ಲಿ ಚನ್ನಮ್ಮನ ದೇಹಾಂತ್ಯವಾಗಿತ್ತು. ಚನ್ನಮ್ಮ ಬಂಧನದಲ್ಲಿದ್ದರೂ ಸಂಗೊಳ್ಳಿ ರಾಯಣ್ಣ ತನ್ನ ಹೋರಾಟ ಮುಂದುವರೆಸಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದ. ಈ ರಾಯಣ್ಣ ಬ್ರಿಟಿಷರಿಗೆ ಸೆರೆ ಸಿಕ್ಕಲು ಕಾರಣನಾದವನು ಅವನ ದೂರದ ಬಂಧು ಲಕ್ಕಪ್ಪ! ರಾಯಣ್ಣನ ಜೊತೆ ಜೊತೆಗೇ ಇದ್ದು ಅವನೊಂದಿಗೆ ಕಾಳಗದಲ್ಲಿ ನೆರವು ನೀಡುವ ನಾಟಕವಾಡುತ್ತಾ ಬ್ರಿಟಿಷರಿಗೆ ರಾಯಣ್ಣನ ಸುಳಿವು ನೀಡಿದ್ದ ಆ ಲಕ್ಕಪ್ಪ. ನಂತರದಲ್ಲಿ ರಾಯಣನನ್ನು ವಿಚಾರಣೆಯ ನಾಟಕ ಆಡಿ ಗಲ್ಲಿಗೇರಿಸಲಾಯಿತು.
ನಮ್ಮ ನಡುವೆಯೇ ಇದ್ದು ನಮ್ಮ ಹಿತೈಷಿಯಂತೆಯೇ ನಂಬಿಸಿ ಕೊರಳು ಕತ್ತರಿಸುವವರ ಸಂತತಿ ಇಂದು ಸಾವಿರ, ಸಾವಿರವಾಗಿದೆ. ಅಧಿಕಾರ ಮತ್ತು ಹಣಗಳಿಕೆಯ ಮೇಲಾಟದಲ್ಲಿ ದೇಶದ ಹಿತ ಕಡೆಗಣಿಸಲ್ಪಟ್ಟಿದೆ. ನ್ಯಾಯಾಂಗ, ಶಾಸಕಾಂಗ, ಆಡಳಿತಾಂಗಗಳು ಜನರ ವಿಶ್ವಾಸ ಕಳೆದುಕೊಳ್ಳುತ್ತಿವೆ. ಹಲವು ಮಾಧ್ಯಮಗಳೂ ಸಹ ಪಕ್ಷಪಾತದಿಂದ ವರ್ತಿಸುತ್ತಿರುವುದು ಢಾಳಾಗಿ ಗೋಚರಿಸುತ್ತಿದೆ. ಬೇಲಿಯೇ ಎದ್ದು ಹೊಲ ಮೇಯುತ್ತಿದೆ. ಹಣ, ಅಧಿಕಾರ, ಪ್ರಭಾವ ಇರುವವರ ಪರವಾಗಿ ವ್ಯವಸ್ಥೆ ಟೊಂಕ ಕಟ್ಟಿನಿಂತಿದೆಯೇನೋ ಎನ್ನಿಸುತ್ತಿದೆ. ಇದಕ್ಕೆ ಪೂರಕವಾಗಿ ಉದಾಹರಣೆಗಳನ್ನು ಸಾಲುಸಾಲಾಗಿ ಕೊಡಬಹುದು. ಬಹುಜನರ ನಿರೀಕ್ಷೆ, ಅಪೇಕ್ಷೆಗಳನ್ನು ಕಡೆಗಣಿಸಲಾಗುತ್ತಿದೆ. ಕುಡಿಯುವ ನೀರಿಗೆ ವರ್ಷಕ್ಕೂ ಹೆಚ್ಚು ಕಾಲದಿಂದ ಚಳುವಳಿಗಳನ್ನು ಮಾಡುತ್ತಿರುವವರ ಜನರ ಗೋಳನ್ನು ಕೇಳುವುದಿರಲಿ, ಅವರೊಂದಿಗೆ ಅಮಾನುಷವಾಗಿ ವರ್ತಿಸುತ್ತಾರೆ, ಚಳುವಳಿ ಹತ್ತಿಕ್ಕಲು ಶ್ರಮಿಸುತ್ತಾರೆಯೇ ಹೊರತು, ಪರಿಹಾರ ಹುಡುಕುವ ಗೋಜಿಗೇ ಹೋಗುವುದಿಲ್ಲ.
ಅಭಿವ್ಯಕ್ತಿ ಸ್ವಾತಂತ್ರ್ಯದ ಮುಸುಕಿನಲ್ಲಿ ದೇಶದ್ರೋಹದ ಮತ್ತು ಜನಾಂಗೀಯ ಸೌಹಾರ್ದ ಕದಡುವ ಚಟುವಟಿಕೆಗಳನ್ನೂ ಬೆಂಬಲಿಸುವವರನ್ನು ಬುದ್ಧಿಜೀವಿಗಳೆಂಬಂತೆ ಬಿಂಬಿಸಲಾಗುತ್ತಿರುವುದು ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಭಯೋತ್ಪಾದಕರು, ಮಾವೋವಾದಿಗಳು ಸೇನೆ, ಪೋಲಿಸ್ ಮತ್ತು ಜನಸಾಮಾನ್ಯರ ವಿರುದ್ಧ ನಡೆಸುತ್ತಿರುವ ರಕ್ತಪಾತಗಳನ್ನು ಬೆಂಬಲಿಸುವವರು, ಸಮರ್ಥಿಸುವವರು, ರಕ್ಷಣೆ ಕೊಡುತ್ತಿರುವವರು ಹೊರಗಿನವರಲ್ಲ, ನಮ್ಮ ನಡುವೆಯೇ ಇರುವವರು! ಅಂತಹವರ ಸಮರ್ಥನೆಗೆ ಆಕರ್ಷಣೀಯ ಮುಖವಾಡದ ಹೆಸರುಗಳನ್ನು ಹೊಂದಿದ ರಾಷ್ಟ್ರೀಯ, ಅಂತರರಾಷ್ಟ್ರೀಯ ಸಂಸ್ಥೆಗಳೇ ಇವೆ. ಅವುಗಳಿಗೆ ವಿದೇಶೀ ದೇಣಿಗೆ ಸರಾಗವಾಗಿ ಹರಿದುಬರುತ್ತದೆ. ದೇಶದ ಹಿತಕ್ಕೆ ವಿರುದ್ಧವಾಗಿ ವರ್ತಿಸುವ, ಪ್ರಚೋದಕ ಹೇಳಿಕೆಗಳನ್ನು ಕೊಡುವವರು ನಮ್ಮ ದೇಶದ ಸಂಸದರೂ ಆಗಿದ್ದಾರೆ! ವಿವಿಧ ರಾಜಕೀಯ ನಾಯಕರುಗಳೂ ಅಧಿಕಾರ ಮತ್ತು ಮತಗಳಿಕೆಯ ದೃಷ್ಟಿಯಿಂದ ಅವರನ್ನೇ ಬೆಂಬಲಿಸುತ್ತಾರೆ ಅಥವ ಅವರ ವಿರುದ್ಧ ಸಣ್ಣ ಧ್ವನಿಯನ್ನೂ ಎತ್ತುವುದಿಲ್ಲ. ಪಾಕಿಸ್ತಾನದ ನೆಲದಲ್ಲಿ ನಿಂತು ಅಲ್ಲಿನ ಟಿವಿ ಚಾನೆಲ್ಲಿಗೆ ಸಂದರ್ಶನ ಕೊಡುತ್ತಾ ಈಗಿನ ಸರ್ಕಾರವನ್ನು ಕಿತ್ತೆಸೆಯುವ ಕೆಲಸಕ್ಕೆ ಸಹಕಾರ ಕೊಡಿ ಎಂದು ಪಾಕಿಸ್ತಾನದ ಜನರನ್ನು ಕೋರುವ ಹಿಂದಿನ ಕೇಂದ್ರ ಸರ್ಕಾರದ ಮಂತ್ರಿಗಳ ನಡೆಯನ್ನು ಏನೆನ್ನಬೇಕು?
ಸಾಮಾನ್ಯರು ಸ್ವತಃ ಜಾಗೃತಗೊಂಡು ದೇಶದ ಹಿತಕ್ಕೆ ಮಾರಕವಾಗಿ ವರ್ತಿಸುವ ಜಯಚಂದ್ರ, ಮಲ್ಲಪ್ಪಶೆಟ್ಟಿ, ಮೀರ್ ಸಾದಿಕರುಗಳನ್ನು ನಿಯಂತ್ರಿಸುವ ಕೆಲಸ ಮಾಡಬೇಕಿದೆ. ಜನರನ್ನು ಈ ದಿಸೆಯಲ್ಲಿ ಜಾಗೃತಗೊಳಿಸುವ ಕೆಲಸವನ್ನು ಪ್ರಜ್ಞಾವಂತರು ಮಾಡಲೇಬೇಕಿದೆ. ನೆಹರೂ ಆಡಳಿತದ ಕಾಲದಲ್ಲಿ ಇತಿಹಾಸ ರಚನೆಯ ಹೊಣೆಯನ್ನು ಎಡ ವಿಚಾರಧಾರೆಯ ವಿದ್ವಾಂಸರಿಗೆ ವಹಿಸಿದ್ದು ದೊಡ್ಡ ಪ್ರಮಾದವೇ ಆಗಿದೆ. ಇತಿಹಾಸ ಪದದ ಅರ್ಥವೆಂದರೆ ಅದು ಹಾಗೆ ಇತ್ತು ಎಂದು! ಇದ್ದದ್ದನ್ನು ಇದ್ದಂತೆ ಹೇಳುವ ಇತಿಹಾಸ ನೈಜ ಇತಿಹಾಸವೆನಿಸುತ್ತದೆ. ಈಗ ಶಾಲೆಗಳಲ್ಲಿ ನಾವು ಕಲಿಯುತ್ತಿರುವುದು ತಿರುಚಲ್ಪಟ್ಟ ಇತಿಹಾಸ ಮಾತ್ರ. ಸ್ವಾತಂತ್ರ್ಯ ಹೋರಾಟವೆಂದರೆ ಕೇವಲ ಕಾಂಗ್ರೆಸ್ ನೇತಾರರಾದ ಗಾಂಧಿ, ನೆಹರು ಮುಂತಾದವರ ಗುಣಗಾನ ಮಾಡುವ ಸಂಗತಿಯಾಗಿದೆ. ದೇಶಕ್ಕಾಗಿ ಬಲಿದಾನ ಮಾಡಿದ ಅಸಂಖ್ಯ ಶೂರ, ವೀರರ, ಸಾಧು-ಸಂತರ ಹೆಸರುಗಳೇ ನಮ್ಮ ಪೀಳಿಗೆಗೆ ತಿಳಿದೇ ಇಲ್ಲ. ಸುಭಾಷ ಚಂದ್ರ ಬೋಸರ ಕುರಿತ ವಿವರಗಳನ್ನು ಮುಚ್ಚಿಡಲು ಹೇಗೆ ಶ್ರಮಿಸಲಾಯಿತು ಎಂಬುದು ಈಗ ಬೆಳಕಿಗೆ ಬರುತ್ತಿದೆ. ನೈಜ ಇತಿಹಾಸವನ್ನು ಮಕ್ಕಳಿಗೆ ಕಲಿಸುವ ಕೆಲಸ ಆಗಬೇಕು. ಸಜ್ಜನ ಶಕ್ತಿ ಜಾಗೃತಗೊಳ್ಳಲಿ, ಜಯಚಂದ್ರ, ಮೀರ್ ಸಾದಿಕರುಗಳ ಸಂತತಿ ಅಂತ್ಯವಾಗಲಿ ಎಂಬುದು ಸಾಮಾನ್ಯರ ಆಶಯವಾಗಿದೆ.
-ಕ.ವೆಂ.ನಾಗರಾಜ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ