ಇಂದು ನಮಗೇನಾಗಿದೆ? ಯಾರನ್ನಾದರೂ ಗುರುತಿಸಲು ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರು, ಆ ಜಾತಿಯವರು, ಈ ಜಾತಿಯವರು, ಎಡ ವಿಚಾರದವರು, ಬಲ ವಿಚಾರದವರು, ತಮಿಳರು, ಕನ್ನಡಿಗರು, ಆ ಪಕ್ಷದವರು, ಈ ಪಕ್ಷದವರು, ಇತ್ಯಾದಿಗಳೇ ಮಾನದಂಡವಾಗುತ್ತಿರುವುದು ದುರ್ದೈವದ ಸಂಗತಿ. ನಾವು ಮನುಷ್ಯರನ್ನು ಗುರುತಿಸುವುದು ಯಾವಾಗ? ಕಂಡದ್ದನ್ನು ಕಂಡಂತೆ ಹೇಳುವವರನ್ನು, ನ್ಯಾಯ ಪಕ್ಷಪಾತಿಗಳನ್ನೂ ಸಹ ಒಂದಲ್ಲಾ ಒಂದು ಹಣೆಪಟ್ಟಿ ಹಚ್ಚಿಯೇ ಗುರುತಿಸುತ್ತಾರೆ. ಬ್ರಿಟಿಷರ ಬಳುವಳಿಯಾದ ವಿಭಜಿಸಿ ಆಳುವ ಪ್ರವೃತ್ತಿ ಇಂದು ಬೃಹತ್ ವಿಷವೃಕ್ಷವಾಗಿ ಬೆಳೆದಿದ್ದು ಅದರ ಫಲವನ್ನು ಜನಸಾಮಾನ್ಯರು ಭೋಗಿಸುತ್ತಿದ್ದಾರೆ. ನೋಡುವ ಕಣ್ಣುಗಳಿಗೆ ಬಣ್ಣದ ಕನ್ನಡಕಗಳು ಅಳವಡಿಸಲ್ಪಟ್ಟು ಆ ಕನ್ನಡಕಗಳು ತಮಗೆ ಬೇಕಾದಂತೆ ದೃಷ್ಯವನ್ನು ತೋರಿಸುತ್ತಿವೆ. ಮಾನವತೆ, ವಾಸ್ತವತೆಗಳು ಕಣ್ಮರೆಯಾಗಿಬಿಟ್ಟಿವೆ. ಸಮಸ್ಯೆಗಳನ್ನು ಎಲ್ಲರೂ ತಮ್ಮ ತಮ್ಮ ಮೂಗಿನ ನೇರಕ್ಕೆ ವಿಶ್ಲೇಷಿಸುತ್ತಿರುವುದು ಸಮಸ್ಯೆಗಳು ಇತ್ಯರ್ಥವಾಗದಿರುವಂತೆ ಮಾಡುತ್ತಿವೆ. ಬೆಂದ ಮನೆಯಲ್ಲಿ ಗಳ ಹಿರಿಯುವವರಿಗೆ ಸಮಸ್ಯೆ ಇತ್ಯರ್ಥವಾಗುವುದು ಬೇಕಾಗಿಲ್ಲ. ಸಮಸ್ಯೆಗಳನ್ನು ಹುಟ್ಟು ಹಾಕಿ ಸ್ವಾರ್ಥಸಾಧನೆ ಮಾಡಿಕೊಳ್ಳುವುದೇ ಅವರಿಗೆ ಲಾಭಕರ. ಹೀಗಾಗಿ ನಮ್ಮ ಪವಿತ್ರ ಸಂವಿಧಾನದ ಆಶಯಗಳಾದ ಸಮಾನತೆ, ನೈಜ ಜಾತ್ಯಾತೀತತೆ, ಧರ್ಮನಿರಪೇಕ್ಷತೆ, ಇತ್ಯಾದಿಗಳು ಹುಡುಕಿದರೂ ಕಾಣಸಿಗದಾಗಿವೆ.
ಒಂದೆರಡು ವ್ಯಾಪಕವಾದ ಚಳುವಳಿಗಳು, ಪ್ರತಿ-ಚಳುವಳಿಗಳನ್ನು ಕಂಡ ಉದಾಹರಣೆಗಳನ್ನು ಗಮನಿಸೋಣ. ಹೈದರಾಬಾದಿನ ವಿದ್ಯಾರ್ಥಿ ವೇಮುಲ ಆತ್ಮಹತ್ಯೆ ಮಾಡಿಕೊಂಡಾಗ ಅದನ್ನು ರಾಜಕೀಯ ಕಾರಣಗಳಿಗಾಗಿ ಉಪಯೋಗಿಸಿಕೊಳ್ಳಲಾಯಿತೇ ಹೊರತು ಸತ್ಯ ಎಲ್ಲೋ ಮುಚ್ಚಿಹೋಯಿತು. ಆತ ದಲಿತನೋ, ಹಿಂದುಳಿದವನೋ ಎಂಬ ಚರ್ಚೆಗಳೂ ಆದವು. ತ್ವರಿತ ಇತ್ಯರ್ಥಗೊಳಿಸಿ ಸತ್ಯ ಹೊರತರುವ ಪ್ರಯತ್ನ ಹಿಂದೆಯೇ ಉಳಿದು, ಆತನ ಸಾವನ್ನು ರಾಜಕೀಯ ಲಾಭ ಪಡೆದುಕೊಳ್ಳಲು ಬಳಸಲಾಯಿತು. ನಮ್ಮ ಮುಖ್ಯಮಂತ್ರಿಗಳೂ ವೇಮುಲನ ಆತ್ಮಹತ್ಯೆ ಸಂದರ್ಭದಲ್ಲಿ ಮಾಡಿದ ಪ್ರತಿಕ್ರಿಯೆಗಳು, ನಮ್ಮ ರಾಜ್ಯದಲ್ಲೇ ಆದ ರೈತರ ಆತ್ಮಹತ್ಯೆಗಳು, ಅಧಿಕಾರಿಗಳ ಆತ್ಮಹತ್ಯೆಗಳ ಸಂದರ್ಭದಲ್ಲಿ ಕೊಟ್ಟ ಪ್ರತಿಕ್ರಿಯೆಗಳನ್ನು ಗಮನಿಸಿದರೆ ವ್ಯತ್ಯಾಸ ಅರ್ಥೈಸಿಕೊಳ್ಳಬಹುದು. ಸತ್ತ ಪ್ರಾಣಿಗಳ ಮೇಲೆ ಎರಗುವ ರಣಹದ್ದುಗಳಂತೆ ಯಾವುದೋ ಆತ್ಮಹತ್ಯೆ, ಕೊಲೆಗಳ ಸಂದರ್ಭದಲ್ಲಿ ಅದನ್ನೂ ಸ್ವಲಾಭಕ್ಕೆ, ವಿರೋಧಿಗಳ ಮೇಲೆ ಗೂಬೆ ಕೂರಿಸುವುದಕ್ಕೆ ಕಾಯುತ್ತಿರುವ ರಾಜಕಾರಣಿಗಳು ಮತ್ತು ಕೆಲವು ಮಾಧ್ಯಮಗಳವರು ಹೇಸಿಗೆ ಹುಟ್ಟಿಸುತ್ತಾರೆ. ಸತ್ಯ ಹೊರಬರುವಷ್ಟರಲ್ಲಿ ಅವರುಗಳು ಬೇಳೆ ಬೇಯಿಸಿಕೊಂಡುಬಿಡುತ್ತಾರೆ.
ದೆಹಲಿಯ ಜವಹರಲಾಲ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಕನ್ನಯ್ಯನ ವಿಷಯವನ್ನೂ ಪ್ರಸ್ತಾಪಿಸಲೇಬೇಕು. ದೇಶದ್ರೋಹಿ ಚಟುವಟಿಕೆಗಳು, ಘೋಷಣೆಗಳನ್ನು ಮಾಡಿದ ಆರೋಪದ ಮೇಲೆ ವಿದ್ಯಾರ್ಥಿ ಸಂಘದ ನಾಯಕನಾಗಿದ್ದ ಆತನನ್ನೂ ಮತ್ತು ಇತರ ಹಲವರನ್ನೂ ಬಂಧಿಸಿದಾಗ ದೊಡ್ಡ ಕೋಲಾಹಲವೇ ಆಯಿತು. ದೇಶಾದ್ಯಂತ ಪರ-ವಿರೋಧ ಚಳುವಳಿಗಳು, ಚರ್ಚೆಗಳು ನಡೆದವು. ಎಡವಿಚಾರಿಗಳು ಮತ್ತು ಬಲವಿಚಾರಿಗಳ ನಡುವೆ ಸಂಘರ್ಷವೇ ಆಯಿತು. ಇದಕ್ಕೆ ಕಾರಣ ಆತ ಪ್ರತಿನಿಧಿಸುತ್ತಿದ್ದ ವಿಚಾರ ಮತ್ತು ಆತನ ಜಾತಿ! ಇಲ್ಲೂ ಅಷ್ಟೆ, ಸತ್ಯ ಯಾರಿಗೂ ಪಥ್ಯವಾಗಿರಲಿಲ್ಲ. ಯಾವ ರಾಜಕೀಯ ಪಕ್ಷಗಳವರು ಯಾವ ರಾಜಕೀಯ ಪಕ್ಷದ ವಿರುದ್ಧ ಮೇಲುಗೈ ಪಡೆಯಲು ಈ ಪ್ರಕರಣ ಬಳಸಿಕೊಂಡರು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಒಬ್ಬ ಬಡ ಕೂಲಿಕಾರಳ ಮಗನಾದ ಕನ್ನಯ್ಯ ಎಷ್ಟು ವರ್ಷಗಳಿಂದ ವಿದ್ಯಾರ್ಥಿಯಾಗಿಯೇ ಅಲ್ಲಿ ಉಳಿದಿದ್ದಾನೆ, ಆತನ ನಂತರ ಬಂದ ನೂರಾರು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಗಿಸಿಹೋಗಿದ್ದರೂ ಇನ್ನೂ ಆತನ ಸಂಶೋಧನೆ ಏಕೆ ಮುಗಿದಿಲ್ಲ, ಬಡತಾಯಿಯನ್ನು ಸಲಹಲು ಆತ ಏಕೆ ಮುಂದುವರೆಯಲಿಲ್ಲ, ಇತ್ಯಾದಿಗಳು ಸಾಮಾನ್ಯನಾಗಿ ನನ್ನನ್ನು ಕಾಡುತ್ತವೆ. ರಾತ್ರೋರಾತ್ರಿ ಕನ್ನಯ್ಯನನ್ನು ನಾಯಕನನ್ನಾಗಿ ಬೆಳೆಸಿದ ಸ್ವಹಿತಾಸಕ್ತರು ಅವನನ್ನು ಬಿಹಾರದ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಾರೆ. ಆತನ ಖಾತೆಗೆ ಲಕ್ಷಾಂತರ ರೂ.ಗಳು ಜಮೆಯಾಗುತ್ತವೆ. ಇಂದು ಆತ ವಿಮಾನದ ಬಿಸಿನೆಸ್ ಕ್ಲಾಸಿನಲ್ಲಿ ಸಂಚರಿಸುತ್ತಾನೆ. ಹೇಗೆ? ಏಕೆ?
ಪ್ರೊ. ಕಲಬುರ್ಗಿಯವರ ಹತ್ಯೆಯಿರಬಹುದು, ಪಶ್ಚಿಮ ಬಂಗಾಳದಲ್ಲಿ, ಕೇರಳದಲ್ಲಿ ಕಮ್ಯುನಿಸ್ಟರು ನಡೆಸಿರುವ ತಮ್ಮ ವಿರೋಧಿಗಳ, ಪ್ರಧಾನವಾಗಿ ಆರೆಸ್ಸೆಸ್ಸಿನವರ ಹತ್ಯೆಗಳಿರಬಹುದು, ಈ ಎಲ್ಲಾ ಸಂಗತಿಗಳಲ್ಲಿ ಸತ್ತವರ ಜಾತಿ ಮತ್ತು ಅವರು ಪ್ರತಿನಿಧಿಸುವ ವಿಚಾರಗಳು ಪ್ರಮುಖ ಪಾತ್ರ ವಹಿಸಿರುವುದನ್ನು ಗಮನಿಸಬಹುದು. ಅವರ ವಿಚಾರಗಳನ್ನು ಸಮರ್ಥಿಸುವವರು ಮಾತ್ರ ಅದನ್ನು ಪ್ರತಿಭಟಿಸುತ್ತಾರೆ, ವಿರೋಧಿಸುವವರು ಸುಮ್ಮನಿರುತ್ತಾರೆ ಅಥವ ಅವರ ಹುಳುಕುಗಳನ್ನು ಎತ್ತಿ ಆಡುತ್ತಾರೆ. ಇದು ನಿಲ್ಲಬೇಕು. ಎಡವಿಚಾರವೋ, ಬಲವಿಚಾರವೋ ಮುಖ್ಯವಲ್ಲ. ಮಾನವೀಯತೆ ಮುಖ್ಯವಾಗಬೇಕು. ಸತ್ಯ ಮಾತ್ರ ಪ್ರಕಾಶಿಸಬೇಕು. ಡಿವೈಎಸ್ಪಿ ಗಣಪತಿಯವರ ಆತ್ಮಹತ್ಯೆ, ಜಿಲ್ಲಾಧಿಕಾರಿ ಡಿ.ಕೆ. ರವಿಯವರ ಆತ್ಮಹತ್ಯೆ(?) ಪ್ರಕರಣಗಳಲ್ಲಿ ಮಂತ್ರಿಯೊಬ್ಬರ ಹೆಸರು ಕೇಳಿಬಂದಿತು. ತನಿಖೆಯನ್ನು ದಾರಿ ತಪ್ಪಿಸುವ ಪ್ರಯತ್ನ ಆಡಳಿತ ಪಕ್ಷದ ಪ್ರಮುಖರಿಂದಲೇ ಆಯಿತು ಮತ್ತು ಆಗುತ್ತಿದೆ ಎಂಬ ಸಂಶಯ ವ್ಯಕ್ತವಾದುದು ಸುಳ್ಳಲ್ಲ. ಗಣಪತಿಯವರ ಪ್ರಕರಣದಲ್ಲಿ ಮಂತ್ರಿಯ ಪಾತ್ರವಿಲ್ಲವೆಂದಾಗುತ್ತದೆ, ಅವರು ಮತ್ತೆ ಮಂತ್ರಿಯಾಗಿ ಬರುತ್ತಾರೆ ಎಂಬುದು ಸಾಮಾನ್ಯರು ಆಡಿಕೊಳ್ಳುತ್ತಿರುವ ಮಾತು. ಮಂತ್ರಿಯ ಪಾತ್ರ ಇದೆಯೋ, ಇಲ್ಲವೋ ಎಂಬುದು ಮುಖ್ಯವಲ್ಲ. ಗಣಪತಿಯವರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಬರಲು ಕಾರಣರು ಯಾರೆಂದು ತಿಳಿಯಬೇಕು ಮತ್ತು ಕಾರಣರಾದವರಿಗೆ ಶಿಕ್ಷೆಯಾಗಬೇಕು ಎಂಬುದಷ್ಟೇ ಜನಸಾಮಾನ್ಯನ ನಿರೀಕ್ಷೆ. ಯಾರು ಕೆಟ್ಟವರು ಎಂದರೆ ಸತ್ತವರೇ ಕೆಟ್ಟವರು ಎಂದಾಗಬಾರದು. ಆ ನಿರೀಕ್ಷೆ ನೆರವೇರಬಹುದೇ?
ತಪ್ಪು ಯಾರು ಮಾಡಿದರೂ ಅದನ್ನು ತಪ್ಪೆಂದು ಗುರುತಿಸುವ ಮನೋಭಾವ ಬೆಳೆಯಬೇಕು. ಸಂಬಂಧಿಸಿದವರ ಜಾತಿ, ಪಕ್ಷ, ಅವರಿಂದ ಸಿಗುವ ಲಾಭ, ಇತ್ಯಾದಿಗಳು ಮಾನದಂಡವಾಗಬಾರದು. ಜಾತಿ, ಪಕ್ಷ, ಇತ್ಯಾದಿಗಳ ಓಲೈಕೆಯ ಪರಾಕಾಷ್ಠೆಯೆಂದರೆ ತಪ್ಪು ಮಾಡಿದವರು ಸಹ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ತಾವು ದಲಿತರೆಂದು, ಹಿಂದುಳಿದವರೆಂದು, ಅಲ್ಪ ಸಂಖ್ಯಾತರೆಂದು ತುಳಿಯಲು ಪ್ರಯತ್ನಿಸುತ್ತಿದ್ದಾರೆಂದು ಗುಲ್ಲು ಎಬ್ಬಿಸುವುದು ಸಾಮಾನ್ಯವಾಗಿಬಿಟ್ಟಿದೆ. ನಾನು ತಹಸೀಲ್ದಾರನಾಗಿದ್ದಾಗಿನ ಒಂದು ಘಟನೆಯಿದು.. ಅನಧಿಕೃತವಾಗಿ 20 ದಿನಗಳಿಗೂ ಹೆಚ್ಚು ಕಾಲ ಗೈರು ಹಾಜರಾಗಿದ್ದ ಇಬ್ಬರು ಗ್ರಾಮಲೆಕ್ಕಿಗರ ವಿರುದ್ಧ ಶಿಸ್ತುಕ್ರಮಕ್ಕೆ ಪ್ರಸ್ತಾವನೆ ಕಳುಹಿಸಿದ್ದೆ. ಇಬ್ಬರಲ್ಲಿ ಒಬ್ಬ ದಲಿತ ಸಮುದಾಯದವನು. ದಲಿತ ಸಂಘಟನೆಯವರು ನನ್ನನ್ನು ಕಂಡು ದಲಿತನೆಂಬ ಕಾರಣಕ್ಕಾಗಿ ಅಧೀನ ನೌಕರನಿಗೆ ತೊಂದರೆ ಕೊಡುತ್ತಿದ್ದೇನೆಂದು ದೂರಿದ್ದರು. ಇಬ್ಬರು ನೌಕರರು ಮಾಡಿರುವುದೂ ಒಂದೇ ತಪ್ಪು, ತಪ್ಪಿಗೆ ಶಿಕ್ಷೆ ಸಹಾ ಒಂದೇ ಆಗಬೇಕು, ಇನ್ನೊಬ್ಬ ಗ್ರಾಮಲೆಕ್ಕಿಗ ನನ್ನ ಜಾತಿಗೇ ಸೇರಿದವನಾಗಿದ್ದು ನಾನು ಪಕ್ಷಪಾತ ಮಾಡುತ್ತಿಲ್ಲವೆಂದು ಅವರಿಗೆ ಮನವರಿಕೆ ಮಾಡಿದ್ದರೂ ಅವರಿಗೆ ಸಮಾಧಾನವಾಗಿರಲಿಲ್ಲ. ರಾಜ್ಯದ ಗೃಹಮಂತ್ರಿಯಾಗಿದ್ದ, ತಮ್ಮ ಕೈಯಲ್ಲಿ ಬಹುದೊಡ್ಡ ಅಧಿಕಾರ ಹೊಂದಿರುವ, ವೈದ್ಯಕೀಯ ಕಾಲೇಜು ಮತ್ತು ಇತರ ಶಿಕ್ಷಣ ಸಂಸ್ಥೆಗಳ ಒಡೆಯರಾಗಿರುವ, ಶ್ರೀಮಂತರಾಗಿರುವ, ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ವ್ಯಕ್ತಿಯೇ ತಾವು ದಲಿತನೆಂಬ ಕಾರಣದಿಂದ ಕಡೆಗಣಿಸಲಾಗಿದೆಯೆಂದು ಅಲವತ್ತುಕೊಂಡಿದ್ದರಲ್ಲವೇ? ನೇರ ಚುನಾವಣೆಯಲ್ಲಿ ಸೋತು, ಹಿಂಬಾಗಿಲಿನಿಂದ ಪ್ರವೇಶ ಪಡೆದು ಇಷ್ಟೊಂದು ಸವಲತ್ತು ಪಡೆದಿದ್ದರೂ ಈ ರೀತಿ ಹೇಳುವುದು ಸರಿಯೇ? ಜಾತಿಯ ಆಧಾರದಲ್ಲಿ ರಾಜಕೀಯ ನಡೆಯುವುದು ಮೊದಲು ನಿಲ್ಲಬೇಕು. ವಿಘಟನೆಯ ಪ್ರವೃತ್ತಿಯಿಂದ ವಿನಾಶವೇ ಕಟ್ಟಿಟ್ಟ ಬುತ್ತಿ ಎಂಬುದನ್ನು ಪ್ರಜ್ಞಾವಂತರು ಜನರಿಗೆ ಮನವರಿಕೆ ಮಾಡಿಕೊಡಬೇಕಿದೆ. ವಿಘಟನೆಯ ವಿಷಬೀಜ ಬಿತ್ತುವವರ ವಿರುದ್ಧ ಜಾಗೃತರಾಗಿರಬೇಕಿದೆ.
-ಕ.ವೆಂ.ನಾಗರಾಜ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ