ದಲಿತ, ಶೋಷಿತ, ಹಿಂದುಳಿದವರ ಪ್ರಮುಖ ಅಗತ್ಯತೆ ಮತ್ತು ಅವಶ್ಯಕತೆ ಸಮಾನತೆಯ ಪ್ರತಿಪಾದನೆಯಾಗಿದೆ. ಸಮಾನತೆ ಅನ್ನುವ ಕಲ್ಪನೆ ಯಾವುದೇ ಆದರ್ಶಮಾನವನ ಗುರಿ. ಸಮಾನತೆ ಅಂದರೇನು ಅನ್ನುವುದಕ್ಕೆ ವಿವರಣೆ ನೀಡುವುದು ಕಷ್ಟವೇ ಸರಿ. ಸರಿಸಮ ಎಂಬುದು ನಿಘಂಟಿನ ಅರ್ಥ. ವ್ಯಾವಹಾರಿಕ ಜಗತ್ತಿನಲ್ಲಿ ಸಮಾನತೆಯ ಕಲ್ಪನೆಯ ಸಾಕಾರ ಹೇಗೆ ಎಂಬುದರ ಕುರಿತು ಚಿಂತಿಸಬೇಕಿದೆ. ಭಾರತದ ಸಂವಿಧಾನದಲ್ಲಿ ದೇಶದ ನಾಗರಿಕರಲ್ಲಿ ಜಾತಿ, ಮತ, ಲಿಂಗ, ಭಾಷೆ - ಇಂತಹ ಯಾವುದೇ ಕಾರಣದಿಂದ ಭೇದ ಕೂಡದು, ಎಲ್ಲರಿಗೂ ಸಮಾನವಾದ ಹಕ್ಕು ಇದೆ ಎಂದಿದೆ. ಆದರೆ ಇಲ್ಲಿ ಜಾತಿಯ ಹೆಸರಿನಲ್ಲಿ, ಮತದ ಹೆಸರಿನಲ್ಲಿ, ಲಿಂಗದ ಹೆಸರಿನಲ್ಲಿ, ಭಾಷೆಯ ಹೆಸರಿನಲ್ಲಿ ಭೇದ ಭಾವ ತಾಂಡವವಾಡುತ್ತಿರುವುದು ದುರ್ದೈವ. ಯಾರು ಈ ಸಮಾನತೆಯನ್ನು ಸಾಧಿಸಬೇಕಿದೆಯೋ ಆ ಆಳುವ ಸ್ಥಾನದಲ್ಲಿರುವ ಜನಪ್ರತಿನಿಧಿಗಳೇ ಇಂತಹ ಭೇದ ಭಾವಗಳನ್ನು ಉಳಿಸಿ, ಪೋಷಿಸಿಕೊಂಡು ಬರುತ್ತಿರುವುದು ಘೋರ ಸತ್ಯ.
ವ್ಯಾವಹಾರಿಕವಾಗಿ ಸಮಾನತೆ ಅನ್ನುವುದು ಹೇಳುವಷ್ಟು ಸುಲಭವಲ್ಲ. ಸಮಾನತೆಯೆಂದರೆ ಒಬ್ಬ ಹೆಸರಾಂತ ಜಟ್ಟಿ/ಕುಸ್ತಿಪಟುವನ್ನು, ಒಬ್ಬ ಬಡಕಲು ದೇಹದವನನ್ನು ಮತ್ತು ಅನಾರೋಗ್ಯಪೀಡಿತನನ್ನು ಸಮಾನ ಬಲಶಾಲಿ ಎಂದು ಒಪ್ಪಿಕೊಳ್ಳಬೇಕೆಂದು ವಾದಿಸುವುದಲ್ಲ. ಒಬ್ಬ ವಿದ್ವಾಂಸನನ್ನೂ, ಓದು ತಲೆಗೆ ಹತ್ತದವನನ್ನೂ ಮತ್ತು ಮಾನಸಿಕ ವಿಕಲ್ಪನನ್ನು ಸಮಾನ ಜ್ಞಾನಿಗಳೆಂದು ಪರಿಗಣಿಸುವುದಲ್ಲ. ಜಾತಿಯ ಆಧಾರದಲ್ಲಿ ಒಬ್ಬರು ಶೇ. 50ರಷ್ಟು ಅಂಕ ಪಡೆದವರೂ, ಶೇ. 60 ಅಂಕ ಪಡೆದ ಇತರರಿಗೆ ಸಮ ಎಂದು ಪರಿಗಣಿಸುವುದರಲ್ಲಿ ಸಮಾನತೆ ಬರುವುದಿಲ್ಲ. 100 ಮೀಟರ್ ದೂರದ ಓಟದ ಸ್ಪರ್ಧೆಯಲ್ಲಿ 100 ಮೀ. ಓಡಿದವನನ್ನೂ, 80-90 ಮೀ. ಓಡಿದವರನ್ನೂ ಸಮರೆಂದು ಪರಿಗಣಿಸುವುದಲ್ಲ. ಬದಲಾಗಿ ಅಶಕ್ತರು, ಹಿಂದುಳಿದವರು ಎಂದು ಪರಿಗಣಿಸಲ್ಪಟ್ಟವರಿಗೆ ಅಗತ್ಯದ ಎಲ್ಲಾ ಅನುಕೂಲ, ಸೌಲಭ್ಯಗಳನ್ನು ಕಲ್ಪಿಸಿ ಅವರು ಮುಂದೆ ಬರಲು ಅವಕಾಶ ಕಲ್ಪಿಸುವುದರಲ್ಲಿ ಸಮಾನತೆ ಕಾಣಬೇಕು. ಎಲ್ಲರೂ ಒಂದೇ ಎತ್ತರದವರಾಗಬೇಕೆಂದು ಕೆಲವರ ತಲೆ, ಕಾಲುಗಳನ್ನು ಕತ್ತರಿಸುವುದು ಸಮಾನತೆಯಾಗಲಾರದು. ಅದು ಪ್ರಗತಿಯ ಲಕ್ಷಣವಲ್ಲ. ಸಮಾನತೆಯೆಂದರೆ ವಿವಿಧ ವಿಷಯಗಳನ್ನೆಲ್ಲಾ ಸಮಾನ ರೀತಿಯಲ್ಲಿ ನೋಡುವುದಲ್ಲ, ವಿವಿಧ ವಿಷಯಗಳನ್ನು ವಿವಿಧ ದೃಷ್ಟಿಯಿಂದ ನೋಡುವುದು. ಸಮಾನ ಅವಕಾಶಗಳಿಂದ ಯಾರೂ ವಂಚಿತರಾಗದೆ ಇರುವಂತೆ ನೋಡಿಕೊಳ್ಳುವುದರಲ್ಲಿ ಸಮಾನತೆಯಿದೆ.
ಈ ಜಗತ್ತಿನಲ್ಲಿ ಎಲ್ಲಾ ರೀತಿಯ ಜನರಿರುತ್ತಾರೆ. ಎಲ್ಲರೂ ಒಂದೇ ರೀತಿಯಲ್ಲಿ ಇರಲು, ಅಂದರೆ ಎಲ್ಲರೂ ಆರೋಗ್ಯವಂತರು, ಬಲಶಾಲಿಗಳು, ಜ್ಞಾನಿಗಳು, ಅಂಗವೈಕಲ್ಯತೆಯಿಲ್ಲದವರು, ಒಂದೇ ಜಾತಿ/ಧರ್ಮದವರು, ಒಂದೇ ವಿಚಾರ ಹೊಂದಿದವರು ಆಗಲು -ನಾವು, ನೀವು ಇಷ್ಟಪಟ್ಟರೂ ಸಹ- ಸಾಧ್ಯವಿದೆಯೇ? ಹೀಗಿರುವಾಗ ನಿಜವಾದ ಸಮಾನತೆಯೆಂದರೆ, ವ್ಯವಹರಿಸುವಾಗ ಪಕ್ಷಪಾತ, ದುರಾಗ್ರಹ, ಅಭಿಮಾನಗಳಿಗೆ ಅವಕಾಶ ಕೊಡದೆ ಪ್ರತಿಯೊಬ್ಬರೂ ತಾವು ಇಷ್ಟಪಡುವ, ಇರಬಯಸುವ ರೀತಿಯಲ್ಲಿ ಬಾಳಲು, ಬದುಕಲು ಸಹಕರಿಸುವುದು ಅನ್ನಬಹುದಷ್ಟೆ. ದೇವರ ಮುಂದೆ ಎಲ್ಲರೂ ಸಮಾನರು ಎಂಬುದನ್ನು ಅರಿಯಬೇಕಿದೆ. ಇಲ್ಲಿ ದೇವರು ಎಂಬ ಪದವನ್ನು ಯಾವುದೇ ಜಾತಿ/ಮತಗಳವರ ದೇವರು ಎಂಬರ್ಥದಲ್ಲಿ ಬಳಸಿಲ್ಲ. ಜಾತಿಗೊಬ್ಬ ದೇವರು, ಮತಕ್ಕೊಬ್ಬ ದೇವರು ಎನ್ನುವುದು, ಅವರ ದೇವರನ್ನು ಇವರು, ಇವರ ದೇವರನ್ನು ಅವರು ನಿಂದಿಸುವ ಮನೋಭಾವಗಳು ಮಾನವನ ಸಂಕುಚಿತ ಭಾವನೆಯನ್ನು ತೋರಿಸುತ್ತದೆ. ಈ ರೀತಿಯ ತಾರತಮ್ಯವೆಸಗದ ಮನೋಭಾವನೆ ಬೆಳೆಸಿಕೊಂಡವರು ಮಾತ್ರ ಕೇವಲ ಮಾನವರಲ್ಲಿ ಮಾತ್ರವಲ್ಲ ಜಗತ್ತಿನ ಎಲ್ಲಾ ಜೀವಿಗಳ ಕುರಿತು ಅಕ್ಕರೆ, ಅಕರಾಸ್ತೆ ಹೊಂದುತ್ತಾರೆ. ಪ್ರಪಂಚದಲ್ಲಿ ಒಂದೇ ಒಂದು ವಿಚಾರದಲ್ಲಿ ಮಾತ್ರ ಸಮಾನತೆಯಿದೆ. ಎಲ್ಲರೂ ಕೊನೆಗೆ ಸಾಯುತ್ತಾರೆ ಅನ್ನುವುದೇ ಆ ಸಮಾನತೆ. ಸಾವಿನಲ್ಲಿ ಮಾತ್ರ ಎಲ್ಲರೂ ಸಮಾನರು.
ಸಮಾನತೆಯ ಇನ್ನೊಂದು ಆಯಾಮವನ್ನೂ ಗಮನಿಸಬೇಕು. ಅದು ಪ್ರಗತಿಗೆ ಅಡ್ಡಿಯಾಗಬಾರದು. ಎಲ್ಲರೂ ಯಾವುದಾದರೂ ಒಂದು ಸಂಗತಿಗೆ ಸಂಬಂಧಿಸಿದಂತೆ ಸಮಾನರಾದರು ಎಂದಿಟ್ಟುಕೊಳ್ಳೋಣ. ಮುಂದೆ? ಎಲ್ಲರೂ ಅಲ್ಲಿಯೇ, ಆ ಸಮಾನ ಸ್ಥಿತಿಯಲ್ಲಿಯೇ ಉಳಿದುಬಿಡಬೇಕೇ? ಇರುವ ಸ್ಥಿತಿಗಿಂತ ಯಾರೂ ಮುಂದೆ ಹೋಗಬಾರದು ಎಂದರೆ ಪ್ರಗತಿ ಹೇಗೆ ಸಾಧ್ಯವಾದೀತು? ಮುಂದೆ ಹೋಗಲೇಬೇಕು. ಹಾಗೆ ಮುಂದೆ ಹೋಗುವಾಗ ಹಿಂದಿರುವವರನ್ನೂ ಜೊತೆಗೆ ಕರೆದೊಯ್ಯುವ ಮನಸ್ಸು ಮಾಡಬೇಕು. ಮುಂದೆ ಇರುವವರನ್ನು ಸಮೀಪಿಸಿ ಅವರೊಡನೆ ಸಮರಾಗುವ ಪ್ರಯತ್ನ ಮಾಡಬೇಕು, ಮತ್ತೆ ಮುಂದುವರೆಯಬೇಕು. ಎಲ್ಲರೂ ಮುಂದೆ ಬರಬೇಕೆಂಬ ವಿಚಾರದಲ್ಲಿ ಮಾತ್ರ ಸಮಾನತೆಯಿರಲೇಬೇಕು. ಮುಂದಿರುವವರನ್ನು ದೂಷಿಸುವುದರಿಂದ ಹಿಂದಿರುವವರು ಮುಂದೆ ಬರಲಾರರು. ಮುಂದೆ ಬರಬೇಕೆಂದರೆ ಪ್ರಯತ್ನಪಟ್ಟು ಮುಂದೆ ಬರಬೇಕಷ್ಟೇ. ಈ ವೇದಮಂತ್ರ ನೆನಪಿನಲ್ಲಿಡಬೇಕಾದುದಾಗಿದೆ: ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ವಃ | ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ || (ಋಕ್.10.191.4.) ಇದರ ಅರ್ಥ ಹೀಗಿದೆ; 'ನಿಮ್ಮ ಆಲೋಚನೆಗಳು, ಹೃದಯಗಳು, ಮನಸ್ಸುಗಳು ಸಮಾನವಾಗಿರಲಿ. ಹೀಗೆ, ನಿಮ್ಮ ಒಳಿತೂ ಸಹ ಒಟ್ಟಿಗೇ ಆಗುವುದು'.
ಆರ್ಥಿಕ ಸಮಾನತೆಯನ್ನೂ ಸಹ ವ್ಯಾವಹಾರಿಕವಾಗಿ ಉಳಿಸಿಕೊಂಡು ಬರುವುದು ದುಸ್ಸಾಧ್ಯ. ಒಂದು ಸಣ್ಣ ಕಾಲ್ಪನಿಕ ಉದಾಹರಣೆ ನೋಡೋಣ. ಒಂದು ಹಳ್ಳಿಯಲ್ಲಿ ಒಂದು ನೂರು ಕುಟುಂಬಗಳಿದ್ದು, ಅದರಲ್ಲಿ 30 ಕುಟುಂಬಗಳು ಶ್ರೀಮಂತ, 40 ಕುಟುಂಬಗಳು ಮಧ್ಯಮ ಮತ್ತು 40 ಕುಟುಂಬಗಳು ಬಡ ಕುಟುಂಬಗಳೆಂದು ಭಾವಿಸೋಣ. ಅವರಲ್ಲಿನ ಎಲ್ಲಾ ಆಸ್ತಿ-ಪಾಸ್ತಿಗಳನ್ನು ವಶಪಡಿಸಿಕೊಂಡು ಬಂದ ಹಣವನ್ನು -ಕುಟುಂಬಕ್ಕೆ ತಲಾ 15 ಲಕ್ಷ ರೂ. ಎಂದುಕೊಳ್ಳೋಣ- ಎಲ್ಲಾ ಕುಟುಂಬಗಳವರಿಗೆ ಹಂಚಲಾಯಿತು ಎಂದುಕೊಳ್ಳೋಣ. ಐದು ವರ್ಷಗಳು ಕಳೆದ ನಂತರ ಸಮೀಕ್ಷೆ ನಡೆಸಿದರೆ ಆ ಹಳ್ಳಿಯಲ್ಲಿ ಶ್ರೀಮಂತ, ಮಧ್ಯಮ ಮತ್ತು ಬಡ ಕುಟುಂಬಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚು-ಕಡಿಮೆ ಕಂಡುಬರಲಾರದು. ಇದಕ್ಕೆ ಮೂಲಕಾರಣ ಜನರ ಮನೋಭಾವ ಎನ್ನುವುದನ್ನು ತಿಳಿಯಲು ಕಷ್ಟವೇನಲ್ಲ. ಬುದ್ಧಿ ಮತ್ತು ಶ್ರಮ ಉಪಯೋಗಿಸಿಕೊಂಡವರು ಮತ್ತು ಹಣವನ್ನು ಸೂಕ್ತ ರೀತಿ ಉಪಯೋಗಿಸಿಕೊಂಡವರು ಶ್ರೀಮಂತರಾಗುತ್ತಾರೆ, ಅಲ್ಪ ಬುದ್ಧಿ, ಅಲ್ಪ ಶ್ರಮಪಡುವವರು ಮಧ್ಯಮವರ್ಗದವರಾಗುತ್ತಾರೆ. ದುಶ್ಚಟಗಳಿಗೆ ದಾಸರಾದವರು, ಸೋಮಾರಿಗಳು, ಹಣವನ್ನು ಸೂಕ್ತ ರೀತಿಯಲ್ಲಿ ಬಳಸಲು ಬರದವರು ತಮ್ಮ ಹಣವನ್ನು ಪೋಲು ಮಾಡಿ ಬಡವರಾಗುತ್ತಾರೆ. ಮತ್ತೆ ಸಮಾನತೆಯ ಕೂಗು ಬಂದರೆ ಪುನಃ ಎಲ್ಲರ ಹಣವನ್ನು ಕಸಿದು ಸಮಾನವಾಗಿ ಹಂಚಬೇಕೆ? ಇಲ್ಲಿ ಅಗತ್ಯವಿರುವುದು ಜನರನ್ನು ಶ್ರಮಜೀವಿಗಳಾಗಿಸುವುದಕ್ಕೆ, ದುಶ್ಚಟಗಳಿಂದ ದೂರವಿರಿಸುವುದಕ್ಕೆ ಬೇಕಾದ ಜ್ಞಾನದ ತಿಳಿವನ್ನು ಮೂಡಿಸುವುದಕ್ಕೆ, ಬದುಕನ್ನು ಒಳ್ಳೆಯ ರೀತಿಯಲ್ಲಿ ನಡೆಸಿ ಮುಂದೆ ಬರಲು ಸಹಕರಿಸುವುದಕ್ಕೆ ಅಷ್ಟೆ. ಕೊಟ್ಟ ಸೌಲಭ್ಯಗಳನ್ನು ಸರಿಯಾಗಿ ಉಪಯೋಗಪಡಿಸಿಕೊಳ್ಳುವವರಿಗೆ ಮಾತ್ರ ಸೌಲಭ್ಯ ನೀಡಿದರೆ ಮಾತ್ರ ಪ್ರಯೋಜನವಾದೀತು. ಇಲ್ಲದಿದ್ದರೆ ಅದು ಅಪಾತ್ರದಾನವಾಗುವುದು.
(ಮುಂದುವರೆಯುವುದು)
-ಕ.ವೆಂ.ನಾಗರಾಜ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ