ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಜೂನ್ 30, 2011

ಜೀವಸೆಲೆ

   


 

ಹಕ್ಕಿಯೊಂದು ಹಾರಿ ಬಂದು ಕಿಟಕಿಯಲ್ಲಿ ಕುಳಿತಿತು
ಸುತ್ತಮುತ್ತ ಹಾರಿತು ಅತ್ತ ಇತ್ತ ನೋಡಿತು |
ಸರಿಯೆಂದು ಕಂಡಿತು ಗೂಡನೊಂದು ಕಟ್ಟಿತು
ಕಾಲ ಕೂಡಿ ಬಂದಿತು ಮೊಟ್ಟೆ ಮೂರು ಇಟ್ಟಿತು ||




ಹಕ್ಕಿಗಾಗಿ ಕೋಣೆ ತೆರವು ಮನೆಮಂದಿಯಲ್ಲ ನೆರವು
ತಾಯಿಗಿಲ್ಲ ತಲೆಭಾರ ಜೀವಸೆಲೆಗೆ ಉಪಕಾರ |
ಬಿಟ್ಟ ಬಾಣದಂತೆ ಹಾರಿ ಬಂದವರನು ಹೆದರಿಸಿತು
ಕಾವಲಿದ್ದು ಕಾವು ಕೊಟ್ಟು ತಾಯಿತನವ ಮೆರೆಯಿತು||
 

ಮೊಟ್ಟೆ ಬಿರಿದು ಬೊಮ್ಮಟೆಗಳು ಬಂದವು
ತ್ರಾಣವಿಲ್ಲ ಕಾಣದೆಲ್ಲ ಕಿಚಿಪಿಚಿ ಕದಲಿದವು |
ನಾವು ತಾಳಲಾರೆವು ಅಮ್ಮ ಹಸಿವೆ ಅಮ್ಮ ಹಸಿವೆ
ಬಂದೆ ತಡಿ ಇಗೋ ಹಿಡಿ ಪ್ರೀತಿ ಎಲ್ಲ ಸುರಿವೆ ||


  

ಹಾ ಸರಿ ಹೀಗೆ ಮರಿ ಎಲ್ಲಿ ಹಾರು ನೋಡುವ
ಹಾರುವುದ ಕಲಿತ ಮೇಲೆ ಭರ್ ಎಂದು ಹಾರುವ|
ನಿಮ್ಮ ನೆರವು ನಮ್ಮ ನಲಿವು ಎನಿತು ಮಧುರ ಸಂಬಂಧ
ದ್ವೇಷ ಬಿಡಿ ಪ್ರೀತಿಸಿರಿ ಅನಿತು ಬಾಳು ಚೆಂದ ||


****************
-ಕ.ವೆಂ. ನಾಗರಾಜ್.
(ಆಧಾರ: ಶಿವಮೊಗ್ಗದ ದಿನಪತ್ರಿಕೆ 'ಜನಹೋರಾಟ'ದಲ್ಲಿ ಪ್ರಕಟವಾದ ಕವಿ ಸುರೇಶರ 'ಒಂದು ಗೂಡಿನ ಕಥೆ' ಎಂಬ ಸಚಿತ್ರ ಲೇಖನ;                                              ಚಿತ್ರಗಳು: ಬಿ.ಎಸ್.ಆರ್. ದೀಪಕ್.)



ಬುಧವಾರ, ಜೂನ್ 29, 2011

ಅರಿವು


ನಮ್ಮವರೆಂಬರು ನಮ್ಮವರಲ್ಲ; ಮೋಹಕೆ ಸಿಲುಕಿ ಬಳಲಿದೆನಲ್ಲ |
ದೇವ ನಿನ್ನನು ನೆನೆಯಲೆ ಇಲ್ಲ; ಹುಟ್ಟಿನ ಮಹತಿ ತಿಳಿಯಲೆ ಇಲ್ಲ || ಪ ||

ಕಂಡದ್ದೆಲ್ಲ ಬಯಸಿದೆನಲ್ಲ; ಸಿಕ್ಕದೆ ಇರಲು ಶಪಿಸಿದೆನಲ್ಲ |
ಇಲ್ಲದ ಬಯಸಿ ಕೊರಗಿದೆನಲ್ಲ; ಇದ್ದುದ ಬಿಟ್ಟು ಕೆಟ್ಟೆನಲ್ಲ || 1 ||

ಚಪಲತೆ ಕಣ್ಣನು ಮುಚ್ಚಿತಲ್ಲ; ನಿಜ ಕಾಣದಾಯಿತಲ್ಲ |
ಚಂಚಲ ಬುದ್ಧಿ ಆಡಿದ ಆಟಕೆ ಎಡವಿ ಬಿದ್ದೆನಲ್ಲಾ || 2 ||

ಸಜ್ಜನ ಸಂಗವ ಮಾಡಲಿಲ್ಲ; ಸದ್ಗತಿ ಸಿಗಲಿಲ್ಲ |
ಕೋಪವು ಮತಿಯ ತಿಂದಿತಲ್ಲ; ಮನಸೇ ಸರಿಯಿಲ್ಲ || 3 ||

ಮಿಗಿಲಾರೆಂದು ಬೀಗಿದೆನಲ್ಲ; ನಗೆಪಾಟಲಾಯಿತಲ್ಲ |
ರಜೋ ತಮಗಳ ಆರ್ಭಟದಲ್ಲಿ ಸತ್ವ ಸತ್ತಿತಲ್ಲಾ || 4 ||

ನಾನು ಎಂಬುದು ನಿಜವಲ್ಲ; ನಾನೇ ಎಂಬುದು ತರವಲ್ಲ |
ನಿನ್ನನು ಬಿಟ್ಟು ನಾನೇನೆಂಬುದ ಅರಿಯಲಿಲ್ಲವಲ್ಲಾ || 5 ||

ಕ.ವೆಂ.ನಾಗರಾಜ್.

ಮಂಗಳವಾರ, ಜೂನ್ 28, 2011

ಮೂಢ ಉವಾಚ - 57

ಭವಬಂಧನದ ಕಿಚ್ಚಿನಲಿ ಬೆಂದು ನೊಂದವಗೆ
ಹಿತಕಾರಿ ಶೀತಲ ಮೃದು ಮಧುರ ಗುರುವಾಣಿ |
ಸುಜ್ಞಾನಿ ಗುರುವೆರೆವ ಅನುಭವಾಮೃತ ಸವಿದು
ಗುರುಮಾರ್ಗವನುಸರಿಸೆ ಧನ್ಯ ಮೂಢ ||


ಶ್ರದ್ಧೆಯಿರಲಿ ಧರ್ಮದಾಚರಣೆಯಲಿ
ತುಡಿತವಿರಲಿ ಅರಿವ ಹಸಿವಿನಲಿ
ಸಂಯತೇಂದ್ರಿಯನಾಗಿ ಅಂತರಂಗವನರಿಯೆ
ನಿಜಶಾಂತಿ ಸಿಗದಿರದೆ ಮೂಢ ||


ಪರರು ನಮಿಪುವ ತೇಜವಿರುವವನು
ಕೆಡುಕ ಸೈರಿಸಿ ಕ್ಷಮಿಪ ಗುಣದವನು |
ನಾನತ್ವ ದೂರ ನಡೆನುಡಿಯು ನೇರ
ಸಾತ್ವಿಕನು ಸಾಧಕನು ಅವನೆ ಮೂಢ ||


ಜಗದೊಡೆಯ ಪರಮಾತ್ಮನಲಿರಿಸಿ ಭಕ್ತಿ
ಏಕಾಂತದಲಿ ಧ್ಯಾನ ಆತ್ಮಾನುಸಂಧಾನ |
ಗುರುವಿನಲಿ ಶ್ರದ್ಧೆ ಸುಜನ ಸಹವಾಸ
ಸಾಧಕರ ದಾರಿಯಿದು ನೋಡು ಮೂಢ ||
***************
-ಕ.ವೆಂ.ನಾಗರಾಜ್.

ಭಾನುವಾರ, ಜೂನ್ 26, 2011

ನೂತನ ಕೊಠಡಿ ಪ್ರವೇಶ(?)




     'ವಿಪ್ರವಾಹಿನಿ' ನಾಗರಾಜರ ಮನೆಯಲ್ಲಿ ಪ್ರತಿತಿಂಗಳ ಕೊನೆಯ ಭಾನುವಾರ ವೇದಪಾಠ ನಡೆಸಲಾಗುತ್ತಿತ್ತು. ಬೇಲೂರಿನ ಶ್ರೀ ವಿಶ್ವನಾಥಶರ್ಮರವರು ಪಾಠ ಹೇಳಿಕೊಡುತ್ತಿದ್ದರು. ತಿಂಗಳಿಗೆ ಒಮ್ಮೆ ಮಾತ್ರ ನಡೆದರೆ ಸಾಕಾಗಲಾರದು, ವಾರಕ್ಕೊಮ್ಮೆಯಾದರೂ ನಡೆದರೆ ಒಳ್ಳೆಯದೆಂಬ ಸಲಹೆ ಮೂಡಿಬಂದಿತು. ಮುಂದಿನ ಭಾನುವಾರ ನಮ್ಮ ಮನೆಯಲ್ಲಿ ನಡೆಸಬಹುದೆಂಬ ನನ್ನ ಕೋರಿಕೆಯನ್ನು ಶ್ರೀ ವಿಶ್ವನಾಥಶರ್ಮ ಮತ್ತು ಅಭ್ಯಾಸಿಗಳು ಒಪ್ಪಿದರು.
     ಸರ್ಕಾರಿ ಸೇವೆಯಿಂದ ಸ್ವ ಇಚ್ಛಾ ನಿವೃತ್ತಿಯಾದ ನಂತರ ಹಾಸನದ ಸ್ವಂತದ ಮನೆಯ ಮೇಲೆ ಒಂದು ಕೊಠಡಿಯನ್ನು ಕಟ್ಟಿಸಿದ್ದೆ. ಕೊಠಡಿ ಪೂರ್ಣವಾದ ನಂತರ ಆ ನಿಮಿತ್ತ ಪ್ರತ್ಯೇಕ ಕಾರ್ಯಕ್ರಮ - ಗೃಹಪ್ರವೇಶ, ಸತ್ಯನಾರಾಯಣಪೂಜೆ, ಇತ್ಯಾದಿ - ಮಾಡಿರಲಿಲ್ಲ, ಮಾಡುವ ಇರಾದೆಯೂ ಇರಲಿಲ್ಲ. ವೇದಪಾಠವನ್ನು ಆ ಕೊಠಡಿಯಲ್ಲೇ ನಡೆಸಲು ಮತ್ತು ಆ ಸಂದರ್ಭದಲ್ಲಿ ಪ್ರಾರಂಭದಲ್ಲಿ ಅಗ್ನಿಹೋತ್ರ ಮಾಡಲು ಮತ್ತು ಅದನ್ನೇ ಕೊಠಡಿಯ ಗೃಹಪ್ರವೇಶ ಎಂದು ಭಾವಿಸಲು ನಿರ್ಧರಿಸಿದೆವು. ಶರ್ಮರಿಗೆ ದೂರವಾಣಿ ಮೂಲಕ ಪಾಠಾಭ್ಯಾಸದ ಮುನ್ನ ಅಗ್ನಿಹೋತ್ರ ಕಾರ್ಯ ನಡೆಸಲು ಕೇಳಿದಾಗ ಅವರ ಒಪ್ಪಿಗೆಯೂ ಸಿಕ್ಕಿತು. ಆ ಭಾನುವಾರ ಬೆಳಿಗ್ಗೆ ೧೦-೩೦ರ ವೇಳೆಗೆ ಹರಿಹರಪುರ ಶ್ರೀಧರ ತಮ್ಮ ಪತ್ನಿಯೊಂದಿಗೆ ಬಂದರು. ವಿಪ್ರವಾಹಿನಿ ನಾಗರಾಜ್-ಗಿರಿಜಾಂಬಾರವರೂ ಆಗಮಿಸಿದರು. ಶ್ರೀದರರು ತಮ್ಮೊಂದಿಗೆ ಅಗ್ನಿಹೋತ್ರ ಮಾಡಲು ಹೋಮಕುಂಡ, ಸಮಿತ್ತು ಮತ್ತು ಅಗತ್ಯ ಸಾಮಗ್ರಿ ತಂದಿದ್ದರು. 'ಹಾಸನವಾಣಿ' ಸಂಪಾದಕಿ ಶ್ರೀಮತಿ ಲೀಲಾವತಿ, ನಿವೃತ್ತ ಕಾರ್ಯಪಾಲಕ ಇಂಜನಿಯರ್ ಜಯರಾಮ್ ಮತ್ತು ಕೆಲವರು ವೇಧಾಭ್ಯಾಸಿಗಳೂ ಹಾಜರಾದರು. ಪಾಠದ ಮುನ್ನ ಅಗ್ನಿಹೋತ್ರ ನಡೆಯಿತು. ಕೊಠಡಿಯ ವಿದ್ಯುಕ್ತ ಪ್ರವೇಶ ಆಯಿತು ಅಂದುಕೊಂಡೆವು. ಕಾರ್ಯಕ್ರಮದ ನಂತರ ಮನೆಯಲ್ಲಿ ಎಲ್ಲರಿಗೂ ಊಟವಾಯಿತು. ಅಂದಹಾಗೆ ಕಾರ್ಯಕ್ರಮ ನಡೆದ ಭಾನುವಾರ ಈ ವರ್ಷದ ಯುಗಾದಿಯ ಹಿಂದಿನ ದಿನವಾದ ೦೩-೦೪-೨೦೧೧ರ ಅಮಾವಾಸ್ಯೆಯಂದು. ಅಂದು ತೆಗೆದಿದ್ದ ಕೆಲವು ಫೋಟೋಗಳು ಇಲ್ಲಿವೆ.




ಶುಕ್ರವಾರ, ಜೂನ್ 24, 2011

ಮೂಢ ಉವಾಚ - 56

ದೇವ
ಜಾತಿಗವ ದೂರ ನೀತಿಗವ ದೂರ
ಕುಲವು ಅವಗಿಲ್ಲ ಗೋತ್ರ ಮೊದಲಿಲ್ಲ |
ದೇಶ ಕಾಲಗಳಿಲ್ಲ ನಾಮರೂಪಗಳಿಲ್ಲ
ಅವನಿಗವನೆ ಸಮನನ್ಯರಿಲ್ಲ ಮೂಢ ||


ಗುರು
ತಿಮಿರಾಂಧಕಾರವನು ಓಡಿಸುವ ಗುರುವು
ಸಾಧನೆಯ ಮಾರ್ಗ ತೋರುವನೆ ಗುರುವು |
ಸಂದೇಹ ಪರಿಹರಿಸಿ ತಿಳಿವು ಪಸರಿಸುವ
ಸದ್ಗುರುವೆ ದೇವರೂಪಿಯೋ ಮೂಢ ||


ಆಳವಿಹ ಸಾಗರವ ಹಡಗು ದಾಟಿಸಬಹುದು
ಭವಸಾಗರವ ದಾಟೆ ಅರಿವ ಜಹಜಿರಬೇಕು |
ದಾರಿ ತೋರುವ ಗುರುಕರುಣೆಯಿರಬೇಕು
ದಾಟಬೇಕೆಂಬ ಮನ ಬೇಕು ಮೂಢ ||


ಭವಬಂಧನವೆ ಕಿಚ್ಚು ಮರಣವೆ ಬಿರುಗಾಳಿ
ಕಾಡ್ಗಿಚ್ಚಿನಲಿ ಸಿಲುಕಿ ಬೆಂದು ನೊಂದಿರುವ |
ಬಿರುಗಾಳಿಯಲಿ ಸಿಲುಕಿ ಭಯಗೊಂಡ ಮನವ
ಸಂತಯಿಪ ಗುರುವೆ ದೇವ ಮೂಢ ||
**************
-ಕ.ವೆಂ.ನಾಗರಾಜ್.

ಗುರುವಾರ, ಜೂನ್ 23, 2011

ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ : ಬಾಳಿಗೆ ಬೆಳಕು



ಸಹೃದಯರೇ,
     ದಿನಾಂಕ ೧೮-೦೬-೨೦೧೧ ರಂದು ಪಂ. ಸುಧಾಕರ ಚತುರ್ವೇದಿಯವರ ಸತ್ಸಂಗದಲ್ಲಿ ಪಾಲ್ಗೊಂಡು ಅವರ ವಿಚಾರವನ್ನು ಸವಿಯುವ ಸೌಭಾಗ್ಯ ನನ್ನದಾಗಿತ್ತು. ವಯಸ್ಸು ೧೧೫ ವರ್ಷಗಳಾದರೂ (ಈಗ 117) ಇನ್ನೂ ಉತ್ಸಾಹದ ಚಿಲುಮೆಯಾಗಿ ವಿಚಾರಗಳನ್ನು ಸುಸ್ಪಷ್ಟವಾಗಿ ವಿವರಿಸುವ ಅವರು ಪ್ರಖರ ಸತ್ಯವಾದಿ. ನಿಜ ಅರ್ಥದಲ್ಲಿ ವಿಚಾರವಾದಿ. (ಈಗ ವಿಚಾರವಾದಿ ಎಂಬ ಪದ ಸಹ ವಿಚಾರವಾದಿಗಳೆಂದು ಕರೆಯಿಸಿಕೊಳ್ಳುವವರಿಂದ ಕಲುಷಿತವಾಗಿದೆ). ಅಂದು ನಾನು ಕೇಳಿದ ಅವರ ಮಾತುಗಳನ್ನು ಬರಹರೂಪದಲ್ಲಿಳಿಸಿ ತಮ್ಮ ಮುಂದಿಟ್ಟಿದ್ದೇನೆ. ಸಹೃದಯರ ಪ್ರತಿಕ್ರಿಯೆ, ವಿಮರ್ಶೆಗಳಿಗೆ ಸ್ವಾಗತವಿದೆ.
-ಕ.ವೆಂ.ನಾಗರಾಜ್.
*************************
ಬಾಳಿಗೆ ಬೆಳಕು

     ಅಗ್ನಿಹೋತ್ರ ಮಾಡುವಾಗ ಮೊದಲು ಒಂದುಸಲ 'ಅಯಂತ ಇಧ್ಮ' ಎಂದು ಹೇಳುತ್ತೇವೆ. ಆಮೇಲೆ ೫ ಸಲ 'ಅಯಂತ ಇಧ್ಮ' ಎಂದು ಹೇಳುತ್ತೇವೆ. ಅಗ್ನಿಹೋತ್ರ ಮಾಡುವ ವಿಚಾರದಲ್ಲಿ ತಿಳಿದುಕೊಳ್ಳಬೇಕಾದ್ದಿದೆ. ವಾಯುಶುದ್ಧಿ, ಜಲಶುದ್ದಿ ಇವೆಲ್ಲಾ ಇದ್ದದ್ದೇ. ಎಲ್ಲರಿಗೂ ಅರ್ಥವಾಗುತ್ತೆ. ಆಧ್ಯಾತ್ಮಿಕ ಭಾವನೆಯನ್ನು ಸಹ ಅರ್ಥ ಮಾಡಿಕೊಳ್ಳಬೇಕು. ಹೋಮ, ಹವನ ಮಾಡಿದೆವು ಅಂತೀವಿ, ನಮ್ಮ ಉದ್ಧಾರವಾಗುತ್ತೋ, ಭಗವಂತನ ಉದ್ಧಾರವಾಗುತ್ತೋ ತಿಳಿದುಕೊಳ್ಳುವುದಿಲ್ಲ., ಭಗವಂತ, ನೀನು ಮಹಾನ್ ಅಗ್ನಿ, 'ಅಯಂ ಆತ್ಮಾ ತೇ ಇಧ್ಮ' - ನನ್ನ ಆತ್ಮ ಇದು ನಿನಗೆ ಸಮಿತ್ತು- ಅಂತ. ನಾನು ಸಮಿತ್ತು. ನನ್ನ ಆತ್ಮ ಇದೆಯಲ್ಲಾ, ಭಗವಂತಾ, ಅದನ್ನು ನಿನಗೆ ಸಮರ್ಪಿಸುತ್ತಿದ್ದೇನೆ, ಅಂತ. ಅರ್ಥ ಮಾಡಿಕೊಳ್ಳಿ, ಅಗ್ನಿಯಲ್ಲಿ ಬೆಳಕಿದೆ, ಸಮಿತ್ತಿನಲ್ಲಿ ಸ್ವತಃ ಬೆಳಕಿಲ್ಲ. ಅಗ್ನಿಯೊಡನೆ ಬೆರೆತಾಗ ಸಮಿತ್ತು ಉರಿದು ಬೆಳಕು ಕೊಡುತ್ತದೆ. ಹೀಗೆ, ಪರಮಾತ್ಮ ಜ್ಯೋತಿಸ್ವರೂಪ, ಸರ್ವಶಕ್ತ, ನಮ್ಮ ಆತ್ಮ ಅಲ್ಪಜ್ಞ, ಅಲ್ಪಶಕ್ತ. ಒಳ್ಳೆ ಕೆಲಸಾನೂ ಮಾಡ್ತೇವೆ, ಕೆಟ್ಟ ಕೆಲಸಾನೂ ಮಾಡ್ತೇವೆ. ಒಳ್ಳೆ ಕೆಲಸ ಮಾಡಿದಾಗ ಸ್ವಲ್ಪ ಮೇಲೇರುತ್ತೇವೆ, ಕೆಟ್ಟ ಕೆಲಸ ಮಾಡಿದಾಗ ಕೆಳಕ್ಕೆ ಬೀಳುತ್ತೇವೆ. ಈ ಏಳೋದು, ಬೀಳೋದು ನಮ್ಮ ಹಣೆಬರಹ. ಅದರ ಫಲವೇನೇ ಈ ಸುಖ-ದುಃಖ ಅನ್ನುವುದು,.ಒಳ್ಳೆ ಕೆಲಸ ಮಾಡಿದಾಗ ಸುಖ, ಕೆಟ್ಟ ಕೆಲಸ ಮಾಡಿದಾಗ ದುಃಖ. ಇದು ಇದ್ದದ್ದೇ. ಇದನ್ನು ಇಲ್ಲವೆನ್ನುವಂತಿಲ್ಲ. ಇದನ್ನು ಮೀರಿ, ಪರಮಾತ್ಮನಲ್ಲಿ ಆತ್ಮ ಸಮರ್ಪಣೆ ಮಾಡಿಕೊಂಡರೆ ಜೀವಾತ್ಮಕ್ಕೆ ಪ್ರಕಾಶ ಬರುತ್ತದೆ. ಜೀವಾತ್ಮ ಸಮಿತ್ತಿದ್ದಂತೆ, ಅದಕ್ಕೆ ಸ್ವಯಂಪ್ರಕಾಶವಿಲ್ಲ, ಪರಮಾತ್ಮನೆಂಬ ಅಗ್ನಿಯೊಂದಿಗೆ ಒಂದಾದಾಗ ಅದಕ್ಕೆ ಪ್ರಕಾಶ ಬರುತ್ತದೆ. 'ಈಶ್ವರ ಸನ್ನಿಧಾನ' ಅಂತ ಹೇಳ್ತೀವಲ್ಲಾ, ಏನಿದರ ಅರ್ಥ? ತ್ರಿಕರಣ ಪೂರ್ವಕವಾಗಿ ನಮ್ಮನ್ನು ಅಂದರೆ ಆತ್ಮನನ್ನು ಪರಮಾತ್ಮನೊಂದಿಗೆ ಅರ್ಪಿಸಿಕೊಂಡಾಗ ನಮಗೆ ಪರಮಾನಂದ ಸಿಕ್ಕುತ್ತೆ.
     'ಸಮಾಧಿ, ಸುಷುಪ್ತಿ, ಮೋಕ್ಷೇಶು ಬ್ರಹ್ಮರೂಪಪ' - ಸಾಂಖ್ಯ ದರ್ಶನದಲ್ಲಿ ಕಪಿಲಾಚಾರ್ಯರು ಹೇಳುತ್ತಾರೆ. ಕಪಿಲಾಚಾರ್ಯರನ್ನು ಅನೇಕರು ನಾಸ್ತಿಕರು ಎನ್ನುತ್ತಾರೆ. ಅವರು ನಾಸ್ತಿಕರಲ್ಲ, ಅವರನ್ನು ನಾಸ್ತಿಕರು ಅನ್ನುವವರೇ ನಾಸ್ತಿಕರು. ಪರಮಾತ್ಮ ಸರ್ವಜ್ಞ, ಎಲ್ಲವನ್ನೂ ಮಾಡುವವನು, . ಅವನನ್ನು ನಾವು ಈಶ್ವರ ಅಂತ ಬಾವಿಸ್ತೇವೆ. ಭಗವಂತ ಈ ಜಗತ್ತನ್ನು ಸೃಷ್ಟಿ ಮಾಡಿದ್ದಾನೆ. ಪ್ರಕೃತಿ ಇಲ್ಲದಿದ್ದರೆ ಭಗವಂತ ಏನೂ ಮಾಡಲಾಗುತ್ತಿರಲಿಲ್ಲ. ಒಳ್ಳೆಯ ನಿಪುಣ ಟೈಲರ್ ಹತ್ತಿರ ಹೋಗಿ ಬಟ್ಟೆಯನ್ನು ಕೊಡದೆ 'ನನಗೊಂದು ಅಂಗಿ ಹೊಲೆದುಕೊಡು' ಅಂದರೆ ಅವನು ಹೇಗೆ ಹೊಲಿಯುತ್ತಾನೆ? ಹೊಲಿಯಲು ಅವನಿಗೆ ಬಟ್ಟೆ ಕೊಡಬೇಕು. ಹಾಗೆಯೇ ಈ ಪ್ರಕೃತಿ ಇಲ್ಲದಿದ್ದರೆ, ಈ ಜಡ ಪ್ರಕೃತಿ ಇಲ್ಲದಿರುತ್ತಿದ್ದರೆ ಭಗವಂತನಿಗೆ ಈ ಜಗತ್ತನ್ನು ಸ್ಥಾಪನೆ ಮಾಡಲು, ಸೃಷ್ಟಿ ಮಾಡಲು ಸಾಧ್ಯವೇ ಇರುತ್ತಿರಲಿಲ್ಲ. ಇದನ್ನು ಅರಿತುಕೊಂಡು ನಾವು ಮುಂದೆ ಹೆಜ್ಜೆ ಇಡಬೇಕಾಗುತ್ತದೆ. ಯಾವಾಗ ನಾವು ಕೆಳಕ್ಕೆ ಬೀಳುತ್ತೇವೆ ಅಂದರೆ ಆ ಪ್ರಕೃತಿಗೆ ವಶವಾದಂತೆ ನಾವು ಪರಮಾತ್ಮನನ್ನು ಮರೆತುಬಿಡ್ತೇವೆ, ಪ್ರಕೃತಿಗೆ ವಾಲುತ್ತೇವೆ, ಪರಮಾತ್ಮ ಇಲ್ಲದಿದ್ದರೆ ಪ್ರಕೃತಿ ತನ್ನಿಂದ ತಾನೇ ಏನೂ ಮಾಡುವಂತಿಲ್ಲ. ವಾಯು ಬೀಸುತ್ತೆ, ತನ್ನಷ್ಟಕ್ಕೆ ತಾನೇ ಬೀಸುತ್ತೇನು? ಸಾಧ್ಯವಿಲ್ಲ. ಆ ಬೀಸುವ ಹಾಗೆ ಮಾಡುವವನು ಪರಮಾತ್ಮ. ಬೆಂಕಿ ಸುಡುತ್ತೆ, ಅದಕ್ಕೆ ಸುಡುವ ಶಕ್ತಿ ಕೊಟ್ಟವರಾರು? ಪಂಚಭೂತಗಳೂ ಅಷ್ಟೆ. ಹೀಗೆ ಯೋಚನೆ ಮಾಡುತ್ತಾ ಹೋಗಿ. ಎಲ್ಲಕ್ಕೂ ಮೂಲಶಕ್ತಿ ಆ ಭಗವಂತನೇ. ಜಡ ಪ್ರಕೃತಿ ತನ್ನಷ್ಟಕ್ಕೆ ತಾನೇ ಏನೂ ಮಾಡಲಾರದು. ಇದನ್ನೇ ಕಪಿಲ ಮಹರ್ಷಿಗಳೂ ಹೇಳುತ್ತಾರೆ, ಅವರನ್ನು ನಾಸ್ತಿಕರು ಅಂತ ಹೇಗೆ ಹೇಳುವುದು? ಅವರು ಹೇಳುತ್ತಾರೆ: ಸಮಾಧಿ, ಸುಷುಪ್ತಿ, ಮೋಕ್ಷ - ಈ ಮೂರು ಸ್ಥಿತಿಯಲ್ಲಿ ಜೀವಾತ್ಮನಿಗೆ ಬ್ರಹ್ಮ ರೂಪ ಬರುತ್ತೆ ಅಂತ. ಸಮಾಧಿ ಅಂದರೆ ಎಲ್ಲವನ್ನೂ ಮರೆತು ಮನಸ್ಸು ಸ್ಥಿರವಾಗಿ ನಿಂತು ಪರಮಾತ್ಮನನ್ನು ಧ್ಯಾನಿಸಿದಾಗ, ಜೀವಾತ್ಮ ಇದ್ದೂ ಕೂಡ ಇಲ್ಲದ ಹಾಗೆ ಆದಾಗ, ಜೀವಾತ್ಮ ತನ್ನ ಇರವನ್ನು ತಾನೇ ಮರೆತು ಭಗವಂತನಲ್ಲಿ ಮನಸ್ಸನ್ನು ಸ್ಥಿರಗೊಳಿಸಿದಾಗ ಭಗವಂತ ಬಿಟ್ಟು ಬೇರೇನೂ ಕಾಣದಿದ್ದಾಗ ಉಂಟಾಗುವ ಸ್ಥಿತಿ ಇದೆಯಲ್ಲಾ ಅದನ್ನು ಸಮಾಧಿ ಅನ್ನುತ್ತಾರೆ. ಈಗ ಹೇಳುತ್ತಾರಲ್ಲಾ, ಸತ್ತ ಮೇಲೆ ಹೂತು/ಸುಟ್ಟು ಕಟ್ಟುವ ಕಟ್ಟೆ ಇದೆಯಲ್ಲಾ, ಅದು ಸಮಾಧಿ ಅಲ್ಲ. ಒಳ್ಳೆಯ ವಿಚಾರದಲ್ಲಿ ಎಲ್ಲಿ ಮನಸ್ಸು ಮತ್ತು ಆತ್ಮ ಸ್ಥಿರವಾಗಿ ನಿಲ್ಲುತ್ತೋ ಅದು ಸಮಾಧಿ. ಅದು ಒಂದು ಅವಸ್ಥೆ. ಈ ಸ್ಥಿತಿಯಲ್ಲಿ ಜೀವಾತ್ಮ ತಾನು ಅಲ್ಪಜ್ಞ, ಅಲ್ಪಶಕ್ತ ಎಂಬ ಎಲ್ಲಾ ಭಾವನೆಯನ್ನೂ ಮರೆತುಬಿಡುತ್ತಾನೆ, ಪರಮಾತ್ಮನಲ್ಲಿ ನೆಲೆ ನಿಲ್ಲುತ್ತಾನೆ.
     ಸುಷುಪ್ತಿ - ನಿದ್ದೆ, ಒಳ್ಳೆಯ ನಿದ್ದೆ - ಅಂದರೆ ಒಳ್ಳೆಯ ಸ್ವಾಭಾವಿಕವಾದ ನಿದ್ದೆ. ಆ ಸ್ಥಿತಿಯಲ್ಲಿ ಕೂಡ ನಾವು ಆನಂದ ಪಡೆಯುತ್ತೇವೆ. ಅಲ್ಲಿ ಬಾಹ್ಯ ಪ್ರಪಂಚ ಇರುವುದಿಲ್ಲ. ಶ್ರೀಮಂತನೂ ನಿದ್ದೆ ಮಾಡ್ತಾನೆ, ಬಡವನೂ ನಿದ್ದೆ ಮಾಡ್ತಾನೆ. ಶ್ರೀಮಂತನ ನಿದ್ದೆ ಚಂಚಲವಾಗಬಹುದು, ಎಲ್ಲಿ ತನ್ನ ಶ್ರೀಮಂತಿಕೆಯನ್ನು ಯಾರು ಕೊಳ್ಳೆ ಹೊಡೀತಾರೋ ಅಂತ ಯೋಚನೆಯಲ್ಲಿ ಹಣದ ಮೇಲೆ ಮನಸ್ಸು ನಿಂತಿರುತ್ತದೆ. ಬಡವನಿಗೆ ಹಾಗಲ್ಲ, ಚಾಪೆ ಇದ್ದರೆ ಚಾಪೆ, ನೆಲ ಇದ್ದರೆ ನೆಲ, ಮಲಗುತ್ತಾನೆ, ಚೆನ್ನಾಗಿ ನಿದ್ದೆ ಹೋಗುತ್ತಾನೆ. ಕಾರಣವೇನೆಂದರೆ ಕಳೆದುಕೊಳ್ಳುವುದಕ್ಕೆ ಅವನ ಹತ್ತಿರ ಜಾಸ್ತಿ ಇಲ್ಲ. ಯಾವನ ಹತ್ತಿರ ಕಳೆದುಕೊಳ್ಳುವುದಕ್ಕೆ ಬಹಳ ಕಡಿಮೆ ಇರುತ್ತೋ ಅವನೇ ಸುಖಿ. ನನ್ನ ಹತ್ತಿರ ಒಂದು ರೂಪಾಯಿ ಇತ್ತು ಅಂತ ಇಟ್ಕೊಳ್ಳಿ, ಕಳೆದುಹೋಯಿತು. ಪರವಾಗಿಲ್ಲ, ಮತ್ತೆ ಗಳಿಸಬಹುದು. ಅದೇ ಒಂದು ಕೋಟಿ ರೂಪಾಯಿ ಇತ್ತು ಅಂತ ಇಟ್ಕೊಳ್ಳಿ, ಅದು ಕಳೆದುಹೋಯಿತು ಅಂದರೆ ಅಷ್ಟು ಸುಲಭವಾಗಿ ಸಹಿಸಿಕೊಳ್ಳಲು ಆಗುವುದಿಲ್ಲ, ಈ ಮಾತನ್ನು ಒತ್ತಿ ಒತ್ತಿ ಶಂಕರಾಚಾರ್ಯರೂ ಹೇಳ್ತಾರೆ, ಮಧ್ವಾಚಾರ್ಯರೂ ಹೇಳ್ತಾರೆ, ರಾಮಾನುಜಾಚಾರ್ಯರೂ ಹೇಳ್ತಾರೆ, ಭಾಷೆ ಬೇರೆ ಅಷ್ಟೆ. ಶಂಕರಾಚಾರ್ಯರು 'ಜ್ಞಾನವಿಲ್ಲದೆ ಮುಕ್ತಿಯಿಲ್ಲ' ಅಂತ ಹೇಳ್ತಾರೆ, ರಾಮಾನುಜರು 'ಭಗವಂತನಲ್ಲಿ ಸಂಪೂರ್ಣ ಆತ್ಮಸಮರ್ಪಣೆ ಮಾಡಿಕೊಂಡರೆ ಮುಕ್ತಿ ಸಿಗುತ್ತೆ' ಅಂತಾರೆ, ಮಧ್ವಾಚಾರ್ಯರೂ 'ನಿನ್ನನ್ನು ನೀನು ಮರೆ' ಅಂತ ಹೇಳ್ತಾರೆ. ಪರಮಾತ್ಮನನ್ನು ನಾರಾಯಣ ಅಂತ ಕರೀತಾರೆ. ಅವನನ್ನು ಶಂಕರ ಅಂತಾಲಾದ್ರೂ ಕರೀರಿ, ಶಿವ ಅಂತಲಾದ್ರೂ ಕರೀರಿ, ಯಾವ ಹೆಸರಿನಿಂದಾದರೂ ಕರೀರಿ, ಏನಡ್ಡಿಯಿಲ್ಲ. ನಾವು ಅರ್ಥ ಮಾಡಿಕೊಳ್ಳೋಕೆ ಹೋಗಲ್ಲ. ಪದಗಳನ್ನು ತೆಗೆದುಕೊಂಡು ಬಿಡ್ತೇವೆ, ಅವನಿಗೊಂದು ಜಾಗ ಕಲ್ಪಿಸಬೇಕಲ್ಲಾ, ನಾವು ದೇವರಿಗೆ ಬೇರೆ ಬೇರೆ ಲೋಕ ಕಟ್ಟಿಸಿಕೊಟ್ಟುಬಿಡುತ್ತೇವೆ. ವೈಕುಂಠದಲ್ಲಿ ನಾರಾಯಣ ಇರ್ತಾನೆ, ಕೈಲಾಸದಲ್ಲಿ ಶಿವ ಇರ್ತಾನೆ, ಹೀಗೆ. ಇದೆಲ್ಲಾ ನಮ್ಮ ಕಲ್ಪನೆ.
     ಮೋಕ್ಷ ಇದ್ದೇ ಇದೆ. ಅಲ್ಲಿ ಪ್ರಕೃತಿಯ ಬಂಧನವೇ ಇಲ್ಲ, ಆ ಭಗವಂತನ ಸಾನ್ನಿಧ್ಯದಲ್ಲಿ ಆನಂದವನ್ನು ನೇರವಾಗೇ ಪಡೆಯುತ್ತೇವೆ. ಬ್ರಹ್ಮರೂಪಪ ಅಂತ ಹೇಳ್ತಾರೆ, ಜ್ಞಾಪಕವಿಟ್ಟುಕೊಳ್ಳಿ. ಮೋಕ್ಷದಲ್ಲಿ ಇವನೇ ಬ್ರಹ್ಮ ಆಗಿಬಿಡ್ತಾನೆ ಅಂತ ಅಲ್ಲ. ಜೀವಾತ್ಮ ಯಾವಾಗಲೂ ಜೀವಾತ್ಮನೇ, ಹಿಂದೆಯೂ ಜೀವಾತ್ಮ, ಮುಂದೆಯೂ ಜೀವಾತ್ಮನೇ, ಅನಂತಕಾಲದವರೆಗೂ ಜೀವಾತ್ಮನೇ. ಅದು ಎಂದೂ ಪರಮಾತ್ಮ ಆಗುವುದಿಲ್ಲ. ನಮ್ಮಲ್ಲಿ ಒಂದು ಕಲ್ಪನೆ ಇದೆ, ಸತ್ತ ಮೇಲೆ ಭಗವಂತನಲ್ಲಿ ಸೇರಿ ಹೋಗಿಬಿಡ್ತಾರೆ ಅಂತ. ಹಾಗೆ ಸೇರುತ್ತಾ ಹೋದರೆ ಪರಮಾತ್ಮ ಬೆಳೆಯುತ್ತಾ ಹೋಗಬೇಕಲ್ಲಾ! ಎಲ್ಲರೂ ಸತ್ತು ಸತ್ತು ಸೇರುತ್ತಾ ಹೋದರೆ ದೊಡ್ಡ ಪರಮಾತ್ಮ ಆಗಬೇಕಲ್ಲಾ! ಇದು ಪರಮಾತ್ಮನ ಭಕ್ತರು ಆಡುವ ಮಾತೇ ಇದು? ಪರಮಾತ್ಮನನ್ನು ಹಾಸ್ಯ ಮಾಡಿದಂತೆ.
     ಒಂದು ಉದಾಹರಣೆ ತೆಗೆದುಕೊಳ್ಳಿ, ನಮ್ಮಲ್ಲಿ ಒಗ್ಗಟ್ಟು ಏಕೆ ಇಲ್ಲ? ಶಂಕರಾಚಾರ್ಯರು ಒಂದು ಶ್ಲೋಕ ಬರೆದಿದ್ದಾರೆ; 'ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ' ಅಂದರೆ ಹೇಗೆ ಆಕಾಶದಿಂದ ಬಿದ್ದ ಮಳೆನೀರು ಹೇಗೆ ಸಮುದ್ರ ಸೇರುತ್ತೋ ಹಾಗೆ ಎಲ್ಲಾ ದೇವರಿಗೆ ಮಾಡಿದ ನಮಸ್ಕಾರ ಕೇಶವನಿಗೆ ಸೇರುತ್ತೆ ಅಂತ. ಲಿಂಗಾಯಿತರು 'ಅದು ಏಕೆ ಸ್ವಾಮಿ, ಕೇಶವನಿಗೇ ಏಕೆ ಸೇರಬೇಕು? ಶಂಕರಂ ಪ್ರತಿಗಚ್ಛತಿ ಅಂತ ಹೇಳಬಾರದಾ?' ಅಂತ ಕೇಳಬಹುದು. ಜೈನರು ಜಿನನಿಗೇ ಏಕೆ ಸೇರಬಾರದು ಅಂತ ಕೇಳಬಾರದಾ? ಅಲ್ಲೂ ಕೂಡ ಪ್ರತ್ಯೇಕತೆ! ದೇವರೊಬ್ಬ ಅಂತ ಹೇಳೋದು, ನಾಮ ಹಲವು ಅಂತ ಹೇಳೋದು, ಬೇರೆ ಬೇರೆ ಹೆಸರಿಟ್ಟುಕೊಂಡು ಗುದ್ದಾಡೋದು. ಇದು ಮನುಷ್ಯನ ಅಲ್ಪತ್ವ. ದೇವರು ಎಲ್ಲಿದ್ದಾನೆ? ಅವನು ಎಲ್ಲಾ ಕಡೆ ಇದ್ದಾನೆ. ಅವನನ್ನು ನೋಡಲು ಕಾಶಿಗೆ ಹೋಗಬೇಕಿಲ್ಲ, ರಾಮೇಶ್ವರಕ್ಕೂ ಹೋಗಬೇಕಿಲ್ಲ, ಬದರಿಗೂ ಹೋಗಬೇಕಿಲ್ಲ, ಕೇದಾರನಾಥಕ್ಕೂ ಹೋಗಬೇಕಿಲ್ಲ, ಅಮರನಾಥಕ್ಕೂ ಹೋಗಬೇಕಿಲ್ಲ.ಇರೋ ಊರೇ ಸಾಕು. ದೇವಸ್ಥಾನಕ್ಕೂ ಹೋಗಬೇಕಿಲ್ಲ, ಈ ಶರೀರ ಇದೆಯಲ್ಲಾ, ಇದರಲ್ಲೂ ಇದ್ದಾನೆ. ಅಲ್ಲಿರುವ ದೇವರು ದೊಡ್ಡವನು, ಇಲ್ಲಿರುವ ದೇವರು ಚಿಕ್ಕವನು ಅಂತ ಏನೂ ಇಲ್ಲ. ಅವನು ಎಲ್ಲೋ ಒಂದು ಕಡೆ ಇರುತ್ತಾನಾ? ಎಲ್ಲಾಕಡೆ ಇರುತ್ತಾನೆ. ಇರೋನು ಒಬ್ಬನೇ ದೇವರು. ೨೫ ದೇವರಿಲ್ಲ. ಕಲ್ಪನೆ ಮಾಡಿಕೊಂಡು ಬೇರೆ ಬೇರೆ ಹೆಸರು ಕೊಡೋದು! ಅಣು-ಅಣುವಿನಲ್ಲೂ ದೇವರಿದ್ದಾನೆ ಅಂತಾರೆ. ಹಾಗಿದ್ದ ಮೇಲೆ ಇವೆಲ್ಲಾ ಯಾಕೆ?
     ಸತ್ತ್ವಗುಣ ಹೆಚ್ಚಾಗಿ, ರಜೋಗುಣ ಕಡಿಮೆಯಾಗಿ, ತಮೋಗುಣ ಶೂನ್ಯವಾದಾಗ ನಮಗೆ ಸ್ವಲ್ಪ ಸ್ವಲ್ಪ ಪರಮಾತ್ಮನ ಅನುಭವವಾಗುವುದಕ್ಕೆ ಪ್ರಾರಂಭವಾಗುತ್ತದೆ. ಇದನ್ನು ಅನುಭವಿಸಿ ತಿಳಿಯಬೇಕೇ ಹೊರತು ಪದಗಳಲ್ಲಿ ವಿವರಿಸುವುದು ಕಷ್ಟ. ಜೀವಾತ್ಮ - ಪರಮಾತ್ಮ ಒಟ್ಟು ಸೇರಿದಾಗ ಆಗುವ ಅನುಭೂತಿ, ಆನಂದ ವರ್ಣಿಸಲಸದಳ. ಸಕ್ಕರೆಯ ರುಚಿಯೇ ಗೊತ್ತಿಲ್ಲದೆ ಇರುವವರಿಗೆ ಸಕ್ಕರೆ ಸಿಹಿ ಎಂದು ಇಪ್ಪತ್ತೈದು ಸಲ ಒತ್ತಿ ಒತ್ತಿ ಹೇಳಿದರೂ ಅರ್ಥವಾಗದೆ ಹೋಗಬಹುದು, ಆದರೆ ಸಕ್ಕರೆಯನ್ನು ಆತ ನಾಲಗೆಯ ಮೇಲಿರಿಸಿಕೊಂಡಾಗ ಅವನಿಗೆ ಅದರ ಸಿಹಿ ಅನುಭವಕ್ಕೆ ಬರುತ್ತದೆ. ಹಾಗೆಯೇ ಪರಮಾತ್ಮನನ್ನು ಅನುಭವಿಸಿಯೇ ತಿಳಿಯಬೇಕು. ಸಾಕ್ಷಾತ್ಕಾರ ಅನ್ನುವುದು ಸುಳ್ಳು. ಪರಮಾತ್ಮನನ್ನು ನಮ್ಮ ಹಣೆಗಣ್ಣಿಂದ ನೋಡಿದೆವು ಅನ್ನುವುದು ಸುಳ್ಳು. ಪರಮಾತ್ಮನನ್ನು ಕಾಣಲು ಬೇಕಾಗಿರುವುದು ಜ್ಞಾನದ ಕಣ್ಣು, ಒಳಗಣ್ಣು, ಅಂತಃಚಕ್ಷು, ಆ ಕಣ್ಣುಗಳಿಂದ ನಾವು ಭಗವಂತನನ್ನು ಕಾಣಬಹುದು.
     ಸೂರದಾಸರು ಹುಟ್ಟುಕುರುಡರು. ಅವರು ಕೃಷ್ಣನನ್ನು ವರ್ಣಿಸಿದ ರೀತಿ ನೋಡಿದರೆ ಕೃಷ್ಣ, ದೇವಕಿ, ಯಶೋದೆ, ಎಲ್ಲಾ ಎದುರಿಗೆ ಬಂದಂತೆ ಭಾಸವಾಗುತ್ತದೆ. ಹೇಗೆ ಸಾಧ್ಯವಾಯಿತು ಇದು? ಜನ್ಮಾಂತರದ ಸಂಸ್ಕಾರ, ಅಂತಃಚಕ್ಷುವಿನಿಂದ ನೋಡಿದರು. ಈಗಲೂ ಪರೀಕ್ಷೆ ಮಾಡಿ ನೋಡಿ, ದೇವರಿಗೆ ಆಕಾರ ಇಲ್ಲ, ಕಲ್ಪಿಸಿಕೊಳ್ಳಿ, ಯಾವ ಆಕಾರ ಬೇಕಾದರೂ ಕಲ್ಪಿಸಿಕೊಳ್ಳಿ. ನಾರಾಯಣ - ಶಂಖ, ಚಕ್ರ, ಗದಾಪದ್ಮಧಾರಿ, ಕಿರೀಟ ಹಾಕಿಕೊಂಡಿದ್ದಾನೆ, ತುಳಸಿಮಾಲೆ, ಪೀತಾಂಬರ ವಸ್ತ್ರ, ಏನೇನೋ ಕಲ್ಪಿಸಿಕೊಳ್ಳಿ, ಕಾಣಿ, ಆ ಚಿತ್ರ ಮನಸ್ಸಿಗೆ ಬರುತ್ತೆ, ನಿಜವಾಗಿಯೂ ಹಾಗೆ ಇದೆಯಾ? ನಿಜವಾಗಿ ಹಾಗಿಲ್ಲ. ನಿಮ್ಮ ಕಲ್ಪನೆಯಂತೆ ನಿಮಗೆ ಕಾಣುತ್ತೆ, ಅಷ್ಟೆ. ಹಾಗೆಯೇ ಶಿವ! ಪರಮಾತ್ಮನ ವಿಷಯ ಮಾತನಾಡುವಾಗ ಬಹಳ ಗಂಭೀರವಾಗಿ ಆಲೋಚಿಸಬೇಕು. ಪರಮಾತ್ಮ ಎಲ್ಲೆಲ್ಲೂ ಇದ್ದಾನೆ, ಅಣು ಅಣುವಿನಲ್ಲೂ ಇದ್ದಾನೆ, ಅವನಿಲ್ಲದ ಜಾಗವೇ ಇಲ್ಲ. ಅಗ್ನಿಹೋತ್ರ ಮಾಡುವಾಗ, ಸಂಧ್ಯಾವಂದನೆ ಮಾಡುವಾಗ ಈ ಮಂತ್ರ ಹೇಳ್ತೇವೆ:
ಓಂ ನಮಃ ಶಂಭವಾಯ ಚ ಮಯೋಭವಾಯ ಚ ನಮಃ ಶಂಕರಾಯ ಚ  ಮಯಸ್ಕರಾಯ ಚ | ನಮಃ ಶಿವಾಯ ಚ ಶಿವತರಾಯ ಚ || (ಯಜು.೧೬.೪೧.)
     ಇದರ ಅರ್ಥ ಶಾಂತಿಸ್ವರೂಪನಿಗೆ ನಮಸ್ಕಾರ ಮತ್ತು ಹಾಗೆಯೇ ಆನಂದ ಸ್ವರೂಪನಿಗೆ ನಮಸ್ಕಾರ. ಶಾಂತಿಕಾರಕನಿಗೆ ನಮಸ್ಕಾರ. ಹಾಗೆಯೇ ಆನಂದಕಾರಕನಿಗೆ ನಮಸ್ಕಾರ. ಮಂಗಳಸ್ವರೂಪನಿಗೆ ನಮಸ್ಕಾರ. ಅಂತೆಯೇ ಮಂಗಳತರ ಸ್ವರೂಪನಿಗೆ ನಮಸ್ಕಾರ ಎಂದು.
**************

ಬುಧವಾರ, ಜೂನ್ 22, 2011

ಯದ್ಭಾವಂ ತದ್ಭವತಿ!

                                     
ಅವನು ಉತ್ಸಾಹದಿಂದ ಹೇಳುತ್ತಿದ್ದ:
     "ಯದ್ಭಾವಂ ತದ್ಭವತಿ! ಕಳ್ಳರು ಇತರರನ್ನೂ ಕಳ್ಳರೆಂಬಂತೆ ಕಾಣುತ್ತಾರೆ. ಮಾಟ ಮಂತ್ರಗಳನ್ನು ನಂಬುವವರು ತಮಗೆ ಬೇರೆ ಯಾರೋ ಮಾಟ ಮಂತ್ರ ಮಾಡಿಸಿದ್ದಾರೆಂದು ಸಂಶಯಿಸುತ್ತಾರೆ. ನಡತೆಗೆಟ್ಟವರು ಇತರರೂ ನಡತೆಗೆಟ್ಟಿರಬಹುದೆಂದು ಭಾವಿಸುತ್ತಾರೆ. ಪ್ರತಿಯೊಂದರಲ್ಲೂ ತಪ್ಪು ಹುಡುಕುವವರಿಗೆ ಒಳ್ಳೆಯ ಅಂಶಗಳು ಕಾಣುವುದಿಲ್ಲ. ಒಳ್ಳೆಯವರು ಕೆಟ್ಟವರಲ್ಲೂ ಒಳ್ಳೆಯ ಗುಣಗಳನ್ನು ಗುರುತಿಸುತ್ತಾರೆ. ಇನ್ನೊಬ್ಬರ ತಪ್ಪುಗಳನ್ನು, ಹುಳುಕುಗಳನ್ನು ಎತ್ತಾಡುವುದು ಸರಿಯಲ್ಲ. ನಮ್ಮ ಬೆನ್ನು ನಮಗೆ ಕಾಣುವುದಿಲ್ಲ. ಇನ್ನೊಬ್ಬರನ್ನು ತಿದ್ದಬೇಕೆಂಬ ವಾದವೇ ಸರಿಯಲ್ಲ. ಕಾಲಿಗೆ ಮುಳ್ಳು ಚುಚ್ಚುತ್ತದೆಂದು ನೆಲಕ್ಕೆಲ್ಲಾ ಚಾಪೆಯನ್ನೋ, ಮತ್ತೆಂಹುದನ್ನೋ ಹಾಸುವ ಬದಲು ಕಾಲಿಗೆ ಪಾದರಕ್ಷೆ ಹಾಕಿಕೊಳ್ಳಬಹುದಲ್ಲವೆ? ಬಸವಣ್ಣನವರು ಹೇಳಿಲ್ಲವೇ? 'ಪರಚಿಂತೆ ನಿಮಗೇಕಯ್ಯಾ? ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ'ಅಂತ. ಲೋಕ ಬದಲಾಗಬೇಕೆಂದು ಬಯಸುವುದಕ್ಕಿಂತ ನಾವು ಬದಲಾದರೆ ಸಾಕು. . . . . . . . ."
     ಕೇಳುತ್ತಿದ್ದವನೊಬ್ಬ ಅವನು ತನ್ನನ್ನೇ ಕುರಿತು ಹೇಳುತ್ತಿದ್ದಾನೆಂದು ಭಾವಿಸಿ ಸಿಟ್ಟಿನಿಂದ ಕುದಿಯುತ್ತಾ ಕಿರುಚಿದ:
"ಮುಚ್ಕಂಡ್ ಕೂತ್ಕ".
**********************

ಸೋಮವಾರ, ಜೂನ್ 20, 2011

ಮೂಢ ಉವಾಚ - 55: ದೇವ-2

ಹಣದಿಂದ ಸಿಗನು ಅಧಿಕಾರಕೆ ಬರನು
ವಿದ್ಯೆಗೆ ಬಾಗನು ಸುಂದರತೆಗೊಲಿಯನು |
ಚತುರತೆಗೆ ದಕ್ಕನು ಏನಿತ್ತರೊಲ್ಲನು
ನಿಜ ಪ್ರೀತಿಗೊಲಿಯುವನು ಮೂಢ ||


ದೇವನೆಲ್ಲಿಹನೆಂದು ಚಾರ್ವಾಕ ಕೇಳುವನು
ಎಲ್ಲೆಲ್ಲು ಅವನೆಂದು ಆಸ್ತಿಕನು ಹೇಳುವನು |
ಕಾಣದಿಹ ದೇವನಿಹನೆಂದು ಹೇಳಿಸುವ
ಶಕ್ತಿ ಯಾವುದದಚ್ಚರಿಯು ಮೂಢ ||


ಆಗಸದ ಬಣ್ಣವದು ತೋರುವಂತಿಹುದೇನು
ನೀಲಿ ಕೆಂಪು ಕಪ್ಪಾಗಿ ತೋರುವುದೆ ಸೊಗಸು |
ಅರಿತವರು ಯಾರಿಹರು ಗಗನದ ನಿಜಬಣ್ಣ
ದೇವನೆಂತಿಹನೆಂದು ಗೊತ್ತಿಹುದೆ ಮೂಢ ||


ಅರಿವಿಗಸದಳನು ಅಗೋಚರವಾಗಿಹನು
ಅಳತೆಗೆ ಸಿಲುಕನು ಬುದ್ಧಿಗೆ ನಿಲುಕನು |
ಅನಾದಿಯಾಗಿಹನು ಅನಂತನೆನಿಸಿಹನು
ಪರಿಶುದ್ದ ಪರಿಪೂರ್ಣ ಅವನೆ ಮೂಢ ||
**************
-ಕ.ವೆಂ.ನಾಗರಾಜ್.
ಬದರೀನಾಥ ಪಲವಳ್ಳಿಯವರು ಹಂಚಿಕೊಂಡಿರುವುದು:

ಗುರುವಾರ, ಜೂನ್ 16, 2011

ಪುಟ್ಟಗೌರಿಯ ಜನ್ಮದಿನ




                                                                  ಜನ್ಮದಿನದ ಗೀತೆ
      ಮಕ್ಕಳ ಜನ್ಮದಿನದ ಆಚರಣೆ ಕುರಿತು ಈ ಹಿಂದೆ ಒಂದು ಲೇಖನ ಬರೆದಿದ್ದೆ. ಇದರ ಮುಂದುವರಿಕೆಯೆಂಬಂತೆ ದಿನಾಂಕ ೧೪-೦೬-೨೦೧೧ರಂದು ನಡೆದ ನನ್ನ ಮೊಮ್ಮಗಳು ಅಕ್ಷಯಳ ೫ನೆಯ ವರ್ಷದ ಜನ್ಮದಿನವನ್ನು ಅಳಿಯ ರಾಘವೇಂದ್ರ ಮತ್ತು ಮಗಳು ಬಿಂದು ಆಚರಿಸಿದ ಪರಿ ಕುರಿತು ಈಗ ಹೇಳುತ್ತಿರುವೆ. ಹೆಚ್.ಎಸ್.ಆರ್. ಲೇ ಔಟಿನ ೪ನೆಯ ಸೆಕ್ಟರ್, ೧೬ನೆಯ ಮುಖ್ಯರಸ್ತೆಯ ೧೫ನೆಯ ಅಡ್ಡರಸ್ತೆಯಲ್ಲಿರುವ ಸಮರ್ಥನಮ್ ಟ್ರಸ್ಟ್‌ನವರು ಅಂಗವಿಕಲರು, ಬಡ ಹಾಗೂ ಹಿಂದುಳಿದ ಮಕ್ಕಳಿಗಾಗಿ ನಡೆಸುತ್ತಿರುವ ವಸತಿ ಶಾಲೆಯ ಮಕ್ಕಳೊಂದಿಗೆ ಮಗಳ ಜನ್ಮದಿನ ಆಚರಿಸಲು ಅವರು ನಿರ್ಧರಿಸಿ ಸಂಬಂಧಿಸಿದವರೊಂದಿಗೆ ಮಾತನಾಡಿದರು. ಅದೇ ದಿನ ಹಿರಿಯರೊಬ್ಬರು ತಮ್ಮ ೪೧ನೆಯ ವಿವಾಹ ವಾರ್ಷಿಕೋತ್ಸವದ ನಿಮಿತ್ತ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿದ್ದರು. ಆದ್ದರಿಂದ ಮೊದಲು ತಾವು ಮಾಡಬೇಕೆಂದುಕೊಂಡಿದ್ದ ಊಟದ ವ್ಯವಸ್ಥೆಯನ್ನು ಕೈಬಿಟ್ಟು ಶಾಲೆಯಲ್ಲಿದ್ದ ಎಲ್ಲಾ ೧೭೦ ಮಕ್ಕಳಿಗೆ ಪ್ರತಿಯೊಬ್ಬರಿಗೂ ೨೦೦ ಪುಟಗಳ ಒಳ್ಳೆಯ ಗುಣಮಟ್ಟದ ಎರಡು ನೋಟ್ ಪುಸ್ತಕಗಳು, ಪೆನ್ನು, ಪೆನ್ಸಿಲ್ ಮತ್ತು ಎರೇಸರ್ ಗಳನ್ನು ಕೊಡಲು ತೀರ್ಮಾನಿಸಿದರು.

                                                              ಅಜ್ಜಿಯಿಂದ ಆರತಿ

     ಬೆಳಿಗ್ಗೆ ಎಂದಿನಂತೆ ಶಾಲೆಗೆ ಹೋಗಿಬಂದ ಮೊಮ್ಮಗಳು ತನ್ನ ತರಗತಿಯ ಮಕ್ಕಳಿಗೆ ಮತ್ತು ಶಾಲಾ ಶಿಕ್ಷಕರು, ಸಿಬ್ಬಂದಿಗೆ ಚಾಕೊಲೇಟು ಹಂಚಿ ಬಂದಿದ್ದಳು. ಸಾಯಂಕಾಲ ೬ ಘಂಟೆಗೆ ಅವಳಿಗೆ ಹೊಸಬಟ್ಟೆ ಹಾಕಿ ಆರತಿ ಮಾಡಿದರು. ಮನೆಯವರು ಬಿಟ್ಟರೆ ಅಲ್ಲಿ ಬೇರೆ ಯಾರೂ ಇರಲಿಲ್ಲ, ಯಾರನ್ನೂ ಆಹ್ವಾನಿಸಿರಲಿಲ್ಲ. ಬಹುಷಃ ವಾರಾಂತ್ಯದಲ್ಲಾಗಿದ್ದರೆ ಓರಗೆಯ ಮಕ್ಕಳು ಮತ್ತು ಬಂಧು-ಮಿತ್ರರನ್ನು ಆಹ್ವಾನಿಸುತ್ತಿದ್ದರೋ ಏನೋ! ಆಗ ಇದ್ದ ಮೊಮ್ಮಗಳ ಸ್ನೇಹಿತೆ ಎಂದರೆ ಮನೆಕೆಲಸದವಳ ಮಗಳು ಭೀಮಾ ಮಾತ್ರ. ಅವಳಿಗೇ ಮೊಮ್ಮಗಳು ಸಿಹಿ ಮತ್ತು ಉಡುಗೊರೆ ನೀಡಿದಳು. ನಂತರ ನಾವು ಸಮರ್ಥನಮ್ ಟ್ರಸ್ಟ್ ನಡೆಸುತ್ತಿದ್ದ ಶಾಲೆಗೆ ಸುಮಾರು ೬-೩೦ರ ವೇಳೆಗೆ ಹೋದೆವು. ಮೊದಲೇ ಕೊಟ್ಟಿದ್ದ ಬಲೂನುಗಳನ್ನು ಕಟ್ಟಿ ಶಾಲೆಯನ್ನು ಅಲಂಕರಿಸಿದ್ದರು. ಮುಂಭಾಗದಲ್ಲಿ ಬಣ್ಣದ ರಂಗೋಲಿ ಬರೆದು ಅಕ್ಷಯಳಿಗೆ ಶುಭಾಶಯ ಕೋರಿ ಬರೆದಿದ್ದರು. ಒಳಗೆ ಹೋದ ನಮಗೆ ಶಾಲೆಯ ಮಕ್ಕಳನ್ನು ಕಂಡು ಅವರ ಸ್ಥಿತಿ, ಬಡತನ ಕಂಡು ಮರುಕವಾಯಿತು. ಮುಂದೆ ಅವರಿಗೆ ಸಹಾಯವಾಗುವಂತಹ ಕೆಲಸಕ್ಕೆ ಸಹಕರಿಸಬೇಕೆಂದುಕೊಂಡೆವು. ಶಾಲೆಯ ಅಂಧ ಶಿಕ್ಷಕರೊಬ್ಬರು ಅಕ್ಷಯಳ ಜನ್ಮದಿನದ ಕುರಿತು ತಿಳಿಸಿ ಅವಳಿಗೆ ಮತ್ತು ಕುಟುಂಬದ ಎಲ್ಲರಿಗೆ ಶುಭ ಕೋರಿ ಸ್ವಾಗತಿಸಿದರು. ನನ್ನ ಮೊಮ್ಮಗಳು ಅಲ್ಲಿನ ಮಕ್ಕಳಿಗಾಗಿ ತಾನು ಕಲಿತಿದ್ದ ಎರಡು ಹಾಡು ಹೇಳಿದಳು. ಒಬ್ಬರು ಉಪಾಧ್ಯಾಯಿನಿ ಆರತಿ ಬೆಳಗಿದ ನಂತರ ಮಕ್ಕಳು ಕನ್ನಡದಲ್ಲಿ ಒಂದು ಜನ್ಮದಿನದ ಶುಭಾಶಯ ಗೀತೆ ಹಾಡಿದರು. ಕೇಕು ಕತ್ತರಿಸಿ ಎಲ್ಲಾ ಮಕ್ಕಳಿಗೆ ಸಿಹಿ ಮತ್ತು ತಂದಿದ್ದ ಪುಸ್ತಕ, ಪೆನ್ನು, ಪೆನ್ಸಿಲ್ ಮತ್ತು ಎರೇಸರ್‌ಗಳನ್ನು ಹಂಚಲಾಯಿತು. ಅದನ್ನು ಪಡೆದ ಮಕ್ಕಳು ಕುತೂಹಲ ಮತ್ತು ಸಂತಸದಿಂದ ಪುಸ್ತಕ, ಪೆನ್ನುಗಳನ್ನು ನೋಡುತ್ತಿದ್ದುದು ಚೇತೋಹಾರಿಯಾಗಿತ್ತು. ಅದೇ ದಿನ ಆ ಶಾಲೆಯ ಮಧು ಎಂಬ ೫ನೆಯ ತರಗತಿಯ ಹೆಣ್ಣುಮಗುವಿನ ಜನ್ಮದಿನವೂ ಆಗಿದ್ದು ಆ ಮಗುವಿಗೂ ಶುಭ ಹಾರೈಸಲಾಯಿತು. ಆ ಮಗು ಎಲ್ಲರಿಗೂ ಚಾಕೊಲೇಟುಗಳನ್ನು ಹಂಚಿತು. ನಾವೂ ಸಂತೋಷದಿಂದ ಪಡೆದೆವು. ವಿವಾಹ ವಾರ್ಷಿಕೋತ್ಸವಕ್ಕಾಗಿ ಬಂದಿದ್ದವರ ಪೈಕಿ ಒಬ್ಬರು ಮಾತ್ರ ಆ ಮಗುವನ್ನು ಕಂಡು ಚಾಕೊಲೇಟು ಪಡೆಯಲು ನಿರಾಕರಿಸಿದ್ದು, ನನಗೆ ಅವರ ಮನೋಭಾವದ ಬಗ್ಗೆ ಅಸಹ್ಯವೆನಿಸಿತು.
     ಈ ಸಮಾರಂಭ ವಿಶೇಷವಾದದ್ದು, ಹೇಳಿಕೊಳ್ಳುವಂತಹುದು ಅಲ್ಲವಾದರೂ, ಸಮಾಜಮುಖಿಯಾಗಿದ್ದರಿಂದ ಮತ್ತು ಈರೀತಿಯ ಕಾರ್ಯಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಬರೆದಿರುವೆ. ಕೆಲವರಿಗಾದರೂ ಇದರಿಂದ ಪ್ರೇರಣೆ ಸಿಗಲಿ ಎಂಬ ಆಶಯವೂ ಬರೆಯಲು ಪ್ರೇರಿಸಿದೆ. ಸಮಾರಂಭದ ಕೆಲವು ದೃಷ್ಯಗಳು ಮತ್ತು ಒಂದು ಚಿಕ್ಕ ವಿಡಿಯೋ ನಿಮ್ಮ ಮಾಹಿತಿಗಾಗಿ ನೀಡಿರುವೆ.



                                               ಶಾಲೆ ನಡೆಸುತ್ತಿರುವ ಸಮರ್ಥನಮ್ ಟ್ರಸ್ಟ್ ನ ಫಲಕ
                           
                                                       ಶಾಲೆಯ ಉಪಾಧ್ಯಾಯಿನಿಯಿಂದ ಆರತಿ
                                                             ಸಿಹಿ ವಿತರಿಸಿದ ಅಕ್ಷಯ



                           
                                                  ಮಕ್ಕಳಿಗಿಲ್ಲ ಜಾತಿಬೇಧ, ಮೇಲು-ಕೀಳು ಗೊಂದಲ


***************

ಬುಧವಾರ, ಜೂನ್ 15, 2011

ಮೂಢ ಉವಾಚ - 54: ದೇವ

ದೇವರನು ಅರಸದಿರಿ ಗುಡಿ ಗೋಪುರಗಳಲಿ
ಇರದಿಹನೆ ದೇವ ಹೃದಯ ಮಂದಿರದಲ್ಲಿ |
ಹೃದಯವದು ಶುದ್ಧವಿರೆ ನಡೆಯು ನೇರವಿರೆ
ಪರಮಾತ್ಮ ಒಲಿಯುವನು ಮೂಢ ||


ಸರ್ವಭೂತಾತ್ಮ ದೇವ ಸರ್ವರಿಗೆ ಸಮನು
ಮಿತ್ರರಾರೂ ಇಲ್ಲ ಶತ್ರುಗಳು ಮೊದಲಿಲ್ಲ |
ಜೀವಿಗಳಿವರು ಸಂಚಿತಾರ್ಜಿತ ಕರ್ಮಗಳಿಂ
ಭಿನ್ನ ಫಲ ಪಡೆದಿಹರೋ ಮೂಢ ||


ಬ್ರಹ್ಮಜ್ಞಾನಿ ತಿಳಿದಾನು ವಿಶ್ವವೇ ಭಗವಂತ
ಅಚ್ಚರಿಯ ಕಂಡಲ್ಲಿ ಅಗಾಧತೆಯ ಕಂಡಲ್ಲಿ |
ರವಿ ಸೋಮರಲಿ ಜಲ ವಾಯು ನೆಲ ಜಲದಲಿ
ದೇವನ ಕಾಣುವರು ನರರು ಮೂಢ ||


ಮಿತಿಯುಂಟೆ ದೇವನ ಕೊಡುಗೆ ಕರುಣೆಗೆ
ರವಿ ಸೋಮ ನೆಲ ಜಲ ವಾಯು ಆಗಸ |
ಪೂರ್ಣ ಜಗವನಿತ್ತಿಹನು ಸಕಲ ಜೀವಿಗೆ
ಬೇಧವೆಣಿಸದಾತನಿಗೆ ಶರಣಾಗು ಮೂಢ ||
************
-ಕ.ವೆಂ.ನಾಗರಾಜ್.

ಶುಕ್ರವಾರ, ಜೂನ್ 10, 2011

ದೇಹದಾನ: 'ಮೇಲಕ್ಕೇರಿದ ಮೈಲಾರ ಶರ್ಮ' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ನನ್ನ ಉತ್ತರ:

     ನನ್ನ ಲೇಖನಕ್ಕೆ ಪ್ರತಿಕ್ರಿಯಿಸಿದ ಎಲ್ಲರಿಗೂ ವಂದಿಸುವೆ. ಚಿಂತನೆ, ಜಿಜ್ಞಾಸೆಗಳಿಗೆ ಅವಕಾಶವಾದ ಲೇಖನ ಸಾರ್ಥಕವೆಂದು ಅನ್ನಿಸಿದೆ. ಪ್ರಾರಂಭದಲ್ಲೇ ಸ್ಪಷ್ಟಪಡಿಸಿಬಿಡುತ್ತೇನೆ. ನಾನು ಪೂರ್ವಾಗ್ರಹ ಪೀಡಿತನಾಗಿ ನನ್ನದೇ ಅಭಿಪ್ರಾಯ ಸರಿಯೆಂದು ವಾದಿಸಲು ಹೋಗುವುದಿಲ್ಲ, ಆದರೆ ನಾನು ಹೊಂದಿರುವ ಅಭಿಪ್ರಾಯ ಸರಿಯಲ್ಲವೆಂದು ನನಗೆ ಮನವರಿಕೆಯಾಗುವವರೆಗೂ ಅದನ್ನು ಬದಲಾಯಿಸಿಕೊಳ್ಳುವ ಮನೋಭಾವ ನನ್ನದಲ್ಲ. ನಡೆದುಕೊಂಡು ಬಂದಿರುವ ನಡವಳಿಕೆಗಳು/ ಸಂಪ್ರದಾಯಗಳು/ ವಸ್ತುಸ್ಥಿತಿಯೊಂದಿಗೆ ರಾಜಿ/ಹೊಂದಾಣಿಕೆ ಮಾಡಿಕೊಳ್ಳುವೆನಷ್ಟೆ. ನನ್ನ ಅಭಿಪ್ರಾಯಕ್ಕೆ ವಿರುದ್ಧವಾಗಿರುವವರ ಅಭಿಪ್ರಾಯಗಳಿಗೆ ನಾನು ವಿರೋಧಿಯಲ್ಲ. ಅದು ಅವರ ಹಕ್ಕು, ಅದನ್ನು ಗೌರವಿಸುವೆ. ಅಂತಹವರ ಅಭಿಪ್ರಾಯಗಳಿಂದ ನಾನು ನೊಂದುಕೊಳ್ಳುವುದಾಗಲೀ, ಬೇಸರಪಟ್ಟುಕೊಳ್ಳುವುದಾಗಲೀ ಮಾಡುವುದಿಲ್ಲ. ವೈಚಾರಿಕ ಭಿನ್ನತೆಯೂ ಸಹ ಚಿಂತನೆ, ಜಿಜ್ಞಾಸೆಗಳಿಗೆ ಸಹಕಾರಿ. ನನ್ನ ಲ್ಯಾಪ್ ಟಾಪ್‌ನ ದೋಷದಿಂದಾಗಿ ಲೇಖನಕ್ಕೆ ಬರೆದ ಪ್ರತಿಕ್ರಿಯೆ ಪ್ರಕಟಗೊಳ್ಳುತ್ತಿರಲಿಲ್ಲ. ಎಲ್ಲರಿಗೂ ಒಟ್ಟಿಗೆ ಪ್ರತಿಕ್ರಿಯಿಸಿದರೆ ದೊಡ್ಡದಾಗುವ ಕಾರಣದಿಂದ ಇದನ್ನು ಪ್ರತ್ಯೇಕವಾಗಿ ಪ್ರಕಟಿಸಿರುವೆ. ಪ್ರತಿಕ್ರಿಯಿಸಿದ ಎಲ್ಲಾ ಮಿತ್ರರಿಗೂ ವಂದನೆಗಳು.
     ಮಿತ್ರ ಶ್ರೀಧರರು ಭಾವನಾತ್ಮಕವಾಗಿ ಪತಿ-ಪತ್ನಿಯರ ಮತ್ತು ಇತರ ಸಂಬಂಧಿಕರ ಭಾವನೆಗಳ ಬಗ್ಗೆ ಹೇಳುತ್ತಾರೆ. ಸಂಬಂಧಗಳು ಮಧುರವಾಗಿರಲೇಬೇಕು, ಅದಕ್ಕಾಗಿ ಪತಿ-ಪತ್ನಿಯರು ಹೊಂದಾಣಿಕೆ ಮಾಡಿಕೊಳ್ಳಲೇಬೇಕು ಎಂಬುದು ಸರಿ. ನಿಜ, ಮೃತರಾದ ನಂತರ ಅಂತ್ಯ ಸಂಸ್ಕಾರವಾಗುವವರೆಗೂ ಜಡವಾದ ಶರೀರವನ್ನು ನೋಡಲು, ಕಡೆಯ ಸಲವಾದರೂ ಕಣ್ತುಂಬಿಕೊಳ್ಳಲು ಬಯಸುವುದು ಮಾನವ ಸಹಜ ಗುಣ. ಮೃತರೊಡನೆ ನಾವು ಹೊಂದಿದ್ದ ಆತ್ಮೀಯತೆ ಅನುಸರಿಸಿ ಅವರನ್ನು ದೀರ್ಘಕಾಲದವರೆಗೂ ನೆನಪಿಸಿಕೊಳ್ಳುತ್ತಿರುತ್ತೇವೆ. ಸಾಂಸಾರಿಕ ಜೀವನಕ್ಕೂ, ಮೃತರಾದ ನಂತರದ ಉತ್ತರಕ್ರಿಯೆಗಳಿಗೂ ತಳುಕು ಹಾಕುವುದು ತರವಲ್ಲ. 'ಎಲ್ಲರೂ ದೇಹದಾನ ಮಾಡಲು ತೊಡಗಿದರೆ ಮುಂದೊಂದು ದಿನ ದೇಹ ಪಡೆಯಲು ಆಸ್ಪತ್ರೆಯವರೂ ಮುಂದೆ ಬರಲಾರರು' ಎಂಬ ಮಾತಿಗೆ ನಾನು ಪ್ರತಿಕ್ರಿಯಿಸುವುದೇನೆಂದರೆ ಅಂತಹ ಸ್ಥಿತಿ ಬರಲಿ ಎಂದು. ಅಗತ್ಯವಿರುವ ವಸ್ತುಗಳನ್ನು ಕೊಟ್ಟರೆ ಅದು ದಾನ, ಅದು ಅಗತ್ಯ. ಒಂದು ವೇಳೆ ಅಂತಹ ಅಗತ್ಯವಿಲ್ಲದಿದ್ದರೆ ದೇಹವನ್ನು ಸುಡುವುದು ಒಳ್ಳೆಯ ಕೆಲಸ. ಶರೀರದ ಮಾರಾಟ ಒಂದು ದಂಧೆಯಾದರೂ, ನೆಗಡಿಯೆಂದು ಮೂಗನ್ನೇ ಕತ್ತರಿಸುವುದಿಲ್ಲವಲ್ಲವೇ? ಬದುಕಿರುವಾಗಲೇ ತಮ್ಮ ಆತ್ಮೀಯರಿಗಾಗಿ ತಮ್ಮ ಒಂದು ಕಿಡ್ನಿಯನ್ನು ಕೊಟ್ಟ ಪುಣ್ಯಾತ್ಮರು ಇರುವ ಭೂಮಿಯಿದು. ಡಯಾಲಿಸಿಸ್ ಮಾಡಿಸಿಕೊಳ್ಳುತ್ತಾ, ನರಕಯಾತನೆ ಪಡುತ್ತಿರುವವರನ್ನು ನೋಡಿದವರಿಗೆ, ಸತ್ತ ಮೇಲಾದರೂ ನಮ್ಮ ಶರೀರದ ಕಿಡ್ನಿ ಅವರ ಬದುಕಿಗೆ ಬೆಳಕಾಗುವುದಾದರೆ ಸಾರ್ಥಕವೆಂದು ಅನ್ನಿಸುವುದಿಲ್ಲವೇ? ಅನಾಥರ, ಚಿಕಿತ್ಸೆಗೆ ಬಂದವರ ಕಿಡ್ನಿಗಳನ್ನು ಚಿಕಿತ್ಸೆಯ ನೆಪದಲ್ಲಿ ಕಳ್ಳತನದಿಂದ ಶಸ್ತ್ರಚಿಕಿತ್ಸೆ ಮಾಡಿ ಅಪಹರಿಸುವವರ ಕುಕೃತ್ಯಕ್ಕೆ ಸಹ ಇಂತಹ ದೇಹದಾನದಿಂದ ಕಡಿವಾಣ ಬೀಳುವುದು. ಭಾರತದ ಜನಸಂಖ್ಯೆ ೧೧೦ ಕೋಟಿ. ಪ್ರತಿನಿತ್ಯದ ಸರಾಸರಿ ಅಂದಾಜು ಸಾವು ೬೨೩೮೯. ಸರಾಸರಿ ಅಂದಾಜು ಜನನ ೮೬೮೫೩. ಭಾರತದಲ್ಲಿನ ಅಂಧರ ಸಂಖ್ಯೆ ೬೮೨೪೯೭. ಸಾಯಲಿರುವ ಪ್ರತಿ ವ್ಯಕ್ತಿ ತನ್ನ ಕಣ್ಣುಗಳನ್ನು ದಾನ ಮಾಡಿದರೆ ಹತ್ತೇ ದಿನಗಳಲ್ಲಿ ಎಲ್ಲಾ ಅಂಧರಿಗೆ ಸಾಲುವಷ್ಟು ಕಣ್ಣುಗಳು ದೊರೆಯುತ್ತವೆ. ಭಾರತ ಸಾಧಿಸಬಹುದು. ಆದರೂ ಸಾಧಿಸಿಲ್ಲ. ಬೇರೆಯವರ ವಿಷಯ ಬೇಡ, ನಮ್ಮ ಕಣ್ಣುಗಳನ್ನು ದಾನ ಮಾಡಲು ನಾವು ನಿರ್ಧರಿಸಬಹುದಲ್ಲವೇ? 'ಶರೀರದಾನ ಮಾಡಿದರೆ ನಾವು ಜಡವಸ್ತುವಿನಂತೆ, ನಾವು ಭಾವನೆಗಳಿಲ್ಲದವರು' ಎಂಬುದು ಅವರವರ ಮನೋಭಾವಕ್ಕೆ ಸಂಬಂಧಿಸಿದ್ದು. ಸುಟ್ಟರೆ ಪೂರ್ಣ ಶರೀರ ನಾಶಗೊಳ್ಳುತ್ತದೆ. ದಾನ ಮಾಡಿದರೆ ಕನಿಷ್ಠ ಪಕ್ಷ ಮೃತರ ಕೆಲವು ಅಂಗಗಳಾದರೂ - ಕಿಡ್ನಿ, ಕಣ್ಣು, ಇತ್ಯಾದಿ - ಬೇರೆಯವರ ಶರೀರಗಳಲ್ಲಿ ಬದುಕಿರುತ್ತವೆ, ಅದರಿಂದ ಅವರುಗಳ ಬಾಳೂ ಬೆಳಕಾಗಿದೆ ಎಂಬುದನ್ನು ಜ್ಞಾಪಿಸಿಕೊಂಡರೆ ಧನ್ಯತೆಯ ಭಾವನೆ ಮೂಡಬಹುದು. ದೇಹದಾನ ಮಾಡಬಯಸುವವರು ಮತ್ತು ಸಹಕರಿಸುವ ಕುಟುಂಬದವರಿಗೆ ಸಹ ದೇಹ ಸುಡುವವರಿಗೆ/ಹೂಳುವವರಿಗೆ ಭಾವನೆಗಳು, ಕಳಕಳಿಯಿಲ್ಲವೆಂದು ಅನ್ನಿಸಬಹುದಲ್ಲವೇ?
     'ಬದುಕು ಮತ್ತು ಭಾವನೆಗಳಿಗೆ ಅವಿನಾಭಾವ ಸಂಬಂಧವಿದೆ. ಭಾವನಾರಹಿತ ಜೀವನವು ಬದುಕೇ ಅಲ್ಲ. ಒಮ್ಮೆ ಭಾವನೆಗಳು ನಾಶವಾಗುತ್ತಾ ಬಂದರೆ ಬದುಕು ಯಾಂತ್ರಿಕ. ಇಂತಹ ಬದುಕು ಬೇಕೆ? ಅಥವಾ ಭಾವನೆಗಳ ಜೊತೆಗೆ ಪ್ರೀತಿವಾತ್ಸಲ್ಯ ಮಮಕಾರಗಳಿಂದ ಕೂಡಿದ ಜೀವನ ಬೇಕೆ?' ಎಂಬ ಶ್ರೀಧರರ ಮಾತನ್ನು ಅಕ್ಷರಶಃ ಒಪ್ಪುತ್ತೇನೆ. ದೇಹವನ್ನು ಸುಟ್ಟರೆ ಮಾತ್ರ ಪ್ರೀತಿ, ವಿಶ್ವಾಸಗಳಿವೆ, ದಾನ ಮಾಡಿದರೆ ಇಲ್ಲ ಎಂಬಲ್ಲಿ ಮಾತ್ರ ನಾನು ಭಿನ್ನನೆನಿಸಿಕೊಳ್ಳುವೆ. 'ಭಾವನಾರಹಿತವಾದ ಪತಿ/ಪತ್ನಿ/ಮಕ್ಕಳು ಮಾತ್ರ ದೇಹದಾನ ಮಾಡಲು ಒಪ್ಪ ಬಲ್ಲರು ಅಥವಾ ಆ ಮಟ್ಟಕ್ಕೆ [ಅದು ಅತ್ಯುನ್ನತ ಸ್ಥಿತಿ ಎಂದು ನಾನು ತಿಳಿಯುವೆ] ಕುಟುಂಬದವರೆಲ್ಲಾ ಬೆಳೆದಿರಬೇಕು' ಎಂಬ ಅವರ ಮಾತಿನಲ್ಲೇ ವಿರೋಧಾಭಾಸ ನನಗೆ ಕಂಡಿದೆ. ಒಂದೆಡೆ ಭಾವನಾರಹಿತರಾದವರು ಇನ್ನೊಂದೆಡೆ ಅತ್ಯುನ್ನತ ಸ್ಥಿತಿ ತಲುಪಿದವರು ಎಂದು ಅನ್ನಿಸಿಕೊಳ್ಳುವುದು ಸಾಧ್ಯವೇ? ಸಾವಿನ ವಿಷಯ ಬಂದಾಗ ಆತ್ಮೀಯರು ಆ ವಿಷಯ ಮಾತನಾಡಲು ಬಯಸುವುದಿಲ್ಲ. ಅಂತಹ ವಿಷಯ ಮಾತನಾಡಬೇಡ ಎಂದು ಬಾಯಿ ಮುಚ್ಚಿಸುವುದು ಸಾಮಾನ್ಯ. ನನ್ನ ಬರಹದ ಬಗ್ಗೆ ಮಿತ್ರ ಶ್ರೀಧರರ ಪ್ರತಿಕ್ರಿಯೆಯೂ ಸಹ ಇದಕ್ಕೆ ಒಂದು ಉದಾಹರಣೆ. ಅಂತಹುದರಲ್ಲಿ ಸಾವಿನ ನಂತರ ದೇಹದಾನ ಮಾಡುವ ವಿಚಾರದಲ್ಲಿ ಕುಟುಂಬದ ಸದಸ್ಯರೊಂದಿಗೆ ಚರ್ಚಿಸುವುದು ಕಷ್ಟ ಮತ್ತು ಸೂಕ್ಷ್ಮವಾದ ವಿಚಾರ. ಭಾವನೆ ಅರ್ಥವಾಗುವಂತೆ ಮತ್ತು ಒಪ್ಪಿಕೊಳ್ಳುವಂತೆ ಪರೋಕ್ಷವಾಗಿ ಹೇಳಬೇಕಾಗುತ್ತದೆ. ಆಗ ದೇಹದಾನ ಮಾಡಿದ ಮೈಲಾರಶರ್ಮರಂತಹವರು ನೆರವಿಗೆ ಬರುತ್ತಾರೆ.
     ಶ್ರೀಯುತ ಜಗದೀಶರು ಉಲ್ಲೇಖಿಸಿದ 'ಶರೀರಮಾತ್ರಮ್ ಖಲುಧರ್ಮಸಾಧನಂ' ಎಂಬ ಉಕ್ತಿಗೆ ನನ್ನ ಸಹಮತವಿದೆ. ಧೃಢ ಮನಸ್ಸು ಮತ್ತು ಶರೀರಗಳಿಂದ ಅದ್ಭುತಗಳನ್ನು ಸಾಧಿಸಬಹುದು. ಆದರೆ ಈ ಮಾತು ಜೀವಂತ ಶರೀರಕ್ಕೆ ಅನ್ವಯಿಸುತ್ತದೆ. ಅವರಂತೆ ನನಗೂ ಸಹ 'ಪುನರಪಿ ಜನನಂ ಪುನರಪಿ ಮರಣಂ' ಎಂಬ ವಿಚಾರದಲ್ಲಿ ನಂಬಿಕೆಯಿದೆ. ದೇವನ ಅತ್ಯದ್ಭುತ ನಿರ್ಮಾಣವಾದ ನವರಸದರಮನೆಯಾದ ಈ ದೇಹ ಪಡೆಯುವಲ್ಲಿ ದೇವನ ಕರುಣೆಯೊಂದಿಗೆ ಜೀವಿಯ ಕರ್ಮಫಲವೂ ಸೇರುತ್ತದೆ. ಇಂತಹ ದೇಹದ ಒಡೆತನವನ್ನು ದೇವನನ್ನು ಹೊರತುಪಡಿಸಿ ಸ್ವತಃ ದೇಹದೊಡೆಯನೂ ಸೇರಿದಂತೆ ಯಾರಾದರೂ ಸಾಧಿಸಲು ಸಾಧ್ಯವೇ ಎಂಬುದೇ 'ತಾಯಿಯ ಸ್ವತ್ತಲ್ಲ, ತಂದೆಯ ಸ್ವತ್ತಲ್ಲ, ಪತ್ನಿಯ ಸ್ವತ್ತಲ್ಲ, ಮಕ್ಕಳ ಸ್ವತ್ತಲ್ಲ' ಎಂಬ ಮೂಢನ ಉದ್ಗಾರದ ಒಳಾರ್ಥ. ಭಗವದ್ಗೀತೆ ಬೋಧಿಸಿದಂತೆ ಪ್ರತಿ ಜೀವಿಯೂ ತನ್ನ ಕರ್ಮಕ್ಕೆ ತಕ್ಕಂತೆ ಫಲ ಪಡೆಯುತ್ತಾನೆ. ಎಲ್ಲರೂ ತಾವೇ ಬೇಯಿಸಿದ ಪದಾರ್ಥವನ್ನು ತಿನ್ನಲೇಬೇಕು. ಮೃತ ಶರೀರವನ್ನು ಸುಡಲಿ, ಬಿಡಲಿ, (ಕೇವಲ ಸುಡುವುದಕ್ಕೆ ಮಾತ್ರವಲ್ಲ, ಸಂಪ್ರದಾಯಕ್ಕನುಸಾರವಾಗಿ ಅಂತ್ಯ ಸಂಸ್ಕಾರ ನೆರವೇರಿಸಲಿ, ಬಿಡಲಿ) ಅದು ಜೀವಿಯ ಪುನರ್ಜನ್ಮದ ಮೇಲೆ ಪರಿಣಾಮ ಬೀರಲಾರದು. ಜೀವಿತಾವಧಿಯಲ್ಲಿನ ಕರ್ಮಕ್ಕನುಗುಣವಾಗಿ ಮುಂದಿನ ಜನ್ಮವಿರುತ್ತದೆ ಎಂಬ ಮಾತಿನಲ್ಲಿ ನನಗೆ ನಂಬಿಕೆಯಿದೆ. ಜಗದೀಶರು ಕೊಟ್ಟ 'ಕೇವಲ ಫೋಟೋದಲ್ಲಿನ ತಂದೆಯ ಚಿತ್ರದ ಕಣ್ಣಿಗೆ ಚುಚ್ಚಿದರೆ ಸಹಿಸುತ್ತಾರೆಯೇ' ಎಂಬ ಉದಾಹರಣೆ ಈ ವಿಷಯಕ್ಕೆ ಅಷ್ಟೊಂದು ಸೂಕ್ತವೆನಿಸದು. ಮೃತ ದೇಹಕ್ಕೆ ನೋವಾಗುತ್ತದೆ ಅಥವಾ ಸಂಬಂಧಿಕರ ಮನಸ್ಸಿಗೆ ನೋವಾಗುತ್ತದೆ ಅದನ್ನು ಸುಡದೆ/ಹೂಳದೆ ಇರುತ್ತಾರೆಯೇ? ಅವರಂತೆ ನಾನೂ ಸಹ ಯಾರ ಮನಸ್ಸನ್ನೂ ನೋಯಿಸಲು ಉದ್ದೇಶಿಸಿಲ್ಲ. ನನ್ನ ಅಭಿಪ್ರಾಯವನ್ನು ಎಲ್ಲರೂ - ನನ್ನ ಕುಟುಂಬದ ಸದಸ್ಯರುಗಳೂ ಸೇರಿ - ಒಪ್ಪಬೇಕೆಂದು ನನ್ನ ಆಗ್ರಹವಿಲ್ಲ. ಗಲ್ಲು ಶಿಕ್ಷೆಗೆ ಒಳಗಾದವರನ್ನೂ ಅವರ ಅಂತಿಮ ಇಚ್ಛೆ ಏನೆಂದು ಕೇಳಿ ಸಾಧ್ಯವಿದ್ದರೆ ನೆರವೇರಿಸುತ್ತಾರೆ. ಅದೇ ರೀತಿ ದೇಹದಾನ ಮಾಡಬಯಸುವವರು ಮೃತರಾದ ನಂತರ ಅವರ ಇಚ್ಛೆಯನ್ನು ನೆರವೇರಿಸುವುದು, ಬಿಡುವುದು ಸಂಬಂಧಿಕರಿಗೆ ಸೇರಿದ್ದು. ಕೆಲವು ಜಾತಿಗಳಲ್ಲಿ ಸತ್ತವರಿಗೆ ಇಷ್ಟವೆಂದು ಮಾಂಸ, ಮದ್ಯ, ಸಿಗರೇಟು, ಇತ್ಯಾದಿಗಳನ್ನೂ ಎಡೆ ಇಡುವುದನ್ನು ಕಂಡಿದ್ದೇನೆ. ಅಂತಹುದರಲ್ಲಿ ದೇಹದಾನ ಮಾಡಬಯಸಿದಲ್ಲಿ ಆ ಆಸೆಯನ್ನು ನೆರವೇರಿಸಲು ಸಂಬಂಧಿಕರು ಮನಸ್ಸು ಮಾಡಬಹುದು. ಇದನ್ನು ಬಾಲಿಶ ಹೇಳಿಕೆ ಎಂದು ಪರಿಗಣಿಸಿದರೆ ನನ್ನ ಅಭ್ಯಂತರವಿಲ್ಲ. ಸತ್ತ ನಂತರ ದೇಹದಾನ ಮಾಡುವೆನೆಂದು ಘೋಷಿಸುವವರಿಗಿಂತ ಆತನ ಇಚ್ಛೆಯಂತೆ ದೇಹದಾನ ಮಾಡುವ, ಮೃತನ ಆಸೆ ಈಡೇರಿಸುವ ಅವನ ಸಂಬಂಧಿಕರು ಶ್ರೇಷ್ಠರು!
     ಮಿತ್ರ ಮಹೇಶ ಪ್ರಸಾದ ನೀರ್ಕಜೆಯವರ ಅಭಿಪ್ರಾಯಗಳು ನನ್ನ ಬರಹಕ್ಕೆ ಪೂರಕವಾಗಿದೆ. ನಡೆದ ಚರ್ಚೆಗಳು ಉಪಯುಕ್ತವಾಗಿದೆ. ಸಂಪದದಲ್ಲಿ ಮಿತ್ರ ಗಣೇಶರು ಬರೆದ ದೇಹದಾನ ಕುರಿತ ಲೇಖನ ಸಹ ಇದಕ್ಕೆ ಪೂರಕವಾಗಿದ್ದು ಅದನ್ನೂ ಓದಲು ವಿನಂತಿಸುವೆ. ಶ್ರೀಯುತ ಜಗದೀಶರೇ ಉಲ್ಲೇಖಿಸಿದ ಮುತ್ತಿನಂತಹ ಮಾತುಗಳಿಂದ ಮುಗಿಸುವೆ: “The most difficult requirement of becoming knowledgable is that you must give up certainty!” ಪೂರ್ವಾಗ್ರಹವಿಲ್ಲದೆ ನಮ್ಮದೇ ಸರಿಯೆಂಬ ವಿಚಾರಕ್ಕೆ ಅಂಟಿಕೊಳ್ಳದೆ ವಿಚಾರ ಮಾಡೋಣ, ವಿಮರ್ಶಿಸೋಣ, ನಿಜವ ತಿಳಿಯೋಣ!
ನಮಸ್ಕಾರಗಳು.
-ಕ.ವೆಂ.ನಾಗರಾಜ್.
********************

ಹರಿಹರಪುರ ಶ್ರೀಧರ್ ರವರ ಅಭಿಪ್ರಾಯ:

     [ಭಾವನಾರಹಿತವಾದ ಪತಿ/ಪತ್ನಿ/ಮಕ್ಕಳು ಮಾತ್ರ ದೇಹದಾನ ಮಾಡಲು ಒಪ್ಪ ಬಲ್ಲರು ಅಥವಾ ಆ ಮಟ್ಟಕ್ಕೆ [ಅದು ಅತ್ಯುನ್ನತ ಸ್ಥಿತಿ ಎಂದು ನಾನು ತಿಳಿಯುವೆ] ಕುಟುಂಬದವರೆಲ್ಲಾ ಬೆಳೆದಿರಬೇಕು' ಎಂಬ ಅವರ ಮಾತಿನಲ್ಲೇ ವಿರೋಧಾಭಾಸ ನನಗೆ ಕಂಡಿದೆ]
     ನಿಮ್ಮ ಎಲ್ಲಾ ವಿವರಣೆಗಳೂ ಒಪ್ಪಬಲ್ಲಂತ ಮಾತುಗಳಾಗಿವೆ. ಆದರೆ ನನ್ನ ಈ ಮಾತು ಇದೆಯಲ್ಲಾ ಇಲ್ಲಿ ನೀವು ವಿರೋಧಾಭಾಸ ಕಾಣುತ್ತಿದ್ದೀರಿ. ಆದರೆ ನನಗೆ ಹಾಗೆನಿಸುವುದಿಲ್ಲ. ಹೌದು ದೇಹದಾನವನ್ನು ಅದರ ಹಿಂದಿರುವ ಮಹತ್ವವನ್ನು ಅರ್ಥಮಾಡಿಕೊಂಡು ಮಾಡಿದಾಗ ಅತ್ಯುನ್ನತ ಸ್ಥಿತಿ. ಸತ್ತವರ ಬಗ್ಗೆ ಪ್ರೀತಿಇಲ್ಲದೆ ದೇಹ ವಿಲೇವಾರಿಯಾದರೆಸಾಕೆಂದು ಮಾಡುವುದು ಭಾವನಾರಹಿತವಾದ ನಿರ್ಧಾರ. ಈ ದೃಷ್ಟಿಯಿಂದ ಹೇಳಿದೆ ಅಷ್ಟೆ. ನೀವು ಕೊಟ್ಟಿರುವ ವಿವರಣೆಯು ಶ್ರೇಷ್ಠವಾಗಿದೆ. ಮುಂದೆ ಒಂದುದಿನ ನನ್ನ ಮನಸ್ಸು ಬದಲಾಗಬಾರದೆಂದೇನೂ ಇಲ್ಲವಲ್ಲಾ!
*******************

bkjagadish ರವರ ಅಭಿಪ್ರಾಯ:

Respected Nagaraj ,
     Thank you for your learned comments and I hope to elaborate my point of views when I meet you & ಶ್ರೀಧರ್ ಜಿ some time in future .Surprisingly ಶ್ರೀಧರ್ ಜಿ did not touch my views which normally he does , but stressed his point in regard to ಭಾವನೆ only .While on the topic I wish to add what Sir Laurens Jan Van der post , an Afrikaner authour and inter alia Godfather of Prince William said :-
" HUMAN BEINGS ARE PERHAPS NEVER MORE FRIGHTENING THAN WHEN THEY ARE CONVINCED BEYOND DOUBT THAT THEY ARE RIGHT !! "
In fact I will be too pleased to inlude ಮಿತ್ರ ಮಹೇಶ ಪ್ರಸಾದ ನೀರ್ಕಜೆ also , but he refused to have any more discussion with me ( see his last comment ! ) and hence I am addressing this to you and ಶ್ರೀಧರ್ ಜಿ !. Let me now conclude with a quote by Andre Gide:-
" Everything has been said before, but since nobody listens we have to keep going back and beginning all over again." !!!
**************
ನನ್ನ ಉತ್ತರ:

     ಶ್ರೀ ಜಗದೀಶರೇ, ನಿಮ್ಮ ಅಭಿಪ್ರಾಯದಲ್ಲಿ ಕೆಲವು ವಿದ್ವಜ್ಜನರ ಹೇಳಿಕೆಗಳನ್ನು ನೀಡಿದ್ದೀರಿ. ಅವು ಚೇತೋಹಾರಿ ಹೇಳಿಕೆಗಳು, ನಿಜ. ಆದರೆ ದೇಹದಾನಕ್ಕೆ ಸಂಬಂಧಿಸಿದ ಹೇಳಿಕೆಗಳಲ್ಲ, ದೇಹದಾನ ಮಾಡಬಾರದೆಂಬ ಹೇಳಿಕೆ ಪುಷ್ಟೀಕರಿಸುವಂತಹದಲ್ಲವೆಂದು ನಮ್ರನಾಗಿ ತಿಳಿಸಬಯಸುವೆ. ದೇಹದಾನ ಮಾಡುವುದರಿಂದ ಆಗುವ ಲಾಭ/ನಷ್ಟ,ಸರಿ/ತಪ್ಪುಗಳು ಹಾಗೂ ಸಾಂಪ್ರದಾಯಿಕ ಅಂತ್ಯ ಸಂಸ್ಕಾರದಿಂದ ಆಗುವ ಲಾಭ/ನಷ್ಟ, ಸರಿ/ತಪ್ಪುಗಳು ಇಲ್ಲಿ ಪರಿಗಣಿಸಬೇಕಿದೆ. ಈ ವಿಚಾರದಲ್ಲಿ ನನ್ನದು ಮುಕ್ತಮನ. ನನ್ನ ವಿಚಾರ ಸರಿಯಲ್ಲವೆಂದು ಸಾಧಾರ ಅಂಶಗಳಿದ್ದಲ್ಲಿ ಒಪ್ಪುವೆ. ಅಲ್ಲಿಯವರೆಗೆ . . . !
-ಕ.ವೆಂ.ನಾಗರಾಜ್.
******************

ಮೆರೆದ ಮಾನವೀಯತೆ:

     ದಿನಾಂಕ 08-06-2011ರಂದು ಮೈಸೂರಿನಲ್ಲಿ ಕಾಡಾನೆಯ ತುಳಿತಕ್ಕೆ ಸಿಕ್ಕು ಮೃತರಾದ ಬ್ಯಾಂಕ್ ಆಫ್ ಮಹಾರಾಷ್ಟ್ರದ ಎ.ಟಿ.ಎಮ್.ನ ಸೆಕ್ಯೂರಿಟಿ ಗಾರ್ಡ್ 55 ವರ್ಷದ ಶ್ರೀ ರೇಣುಕಾಪ್ರಸಾದ್ ರವರ ಕಣ್ಣುಗಳನ್ನು ಅವರ ಬಂಧುಗಳು ದಾನ ಮಾಡಿದ ಕುರಿತು ದೂರದರ್ಶನದಲ್ಲಿ ವರದಿ ನೋಡಿದೆ. ಕಣ್ಣೆದುರೇ ಜರುಗಿದ ಕುಟುಂಬದ ಆಧಾರಸ್ಥಂಭವಾಗಿದ್ದ ರೇಣುಕಾಪ್ರಸಾದರ ದಾರುಣ ಸಾವಿನ ನೋವಿನ ನಡುವೆಯೂ ಬಡಕುಟುಂಬದ ಬಂಧುಗಳು ಮಾನವೀಯತೆ, ಸಮಾಜದ ಕಾಳಜಿ ಮೆರೆದಿದ್ದು ಅವರು ಅಭಿನಂದನಾರ್ಹರಾಗಿದ್ದಾರೆ.
********************


ಕೊನೆಯ ಮಾತೆಂದರೆ:
      ನನಗೆ ಮುದ ನೀಡಿದ ಸಂಗತಿಯನ್ನು ಈ ಸಂದರ್ಭದಲ್ಲಿ ಹಂಚಿಕೊಳ್ಳಬಯಸುವೆ. ಕಳೆದ ವಾರ ಬೆಂಗಳೂರಿನಲ್ಲಿ ನಾನು, ನನ್ನ ಪತ್ನಿ, ಮಗ ಮತ್ತು ಮಗಳು ಒಟ್ಟಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ನನ್ನ ಪತ್ನಿ ತಾನು ಸತ್ತ ನಂತರ ತನ್ನ ದೇಹವನ್ನು ದಾನ ಮಾಡಬೇಕೆಂದು, ಯಾವುದೇ ತಿಥಿ-ಮತಿ ಮಾಡಬಾರದೆಂದು ತಿಳಿಸಿದಳು. ನನ್ನ ಪತ್ನಿ ನನ್ನ ಲೇಖನವನ್ನು ಓದಿರಲಿಲ್ಲ, ಈ ಕುರಿತು ನಾನು ಆಕೆಯೊಂದಿಗೆ ಚರ್ಚಿಸಿರಲೂ ಇಲ್ಲ. ಇದನ್ನು ಲಘುವಾಗಿ ಪರಿಗಣಿಸಿದ ನನ್ನ ಮಗ ಆಕೆಗೆ "ನೀನು ಬ್ರಹ್ಮಾಂಡದ ನರೇಂದ್ರ ಶರ್ಮ ಹಾಗೆ ಹೇಳಿದರು, ಹೀಗೆ ಹೇಳಿದರು, ನೀನು ಹೀಗೆ ಮಾಡು ಅಂತೀಯ, ಸಂತೋಷ ಗುರೂಜಿ ಬಗ್ಗೆ ಮಾತಾಡ್ತೀಯ, ಈಗ ಸುಧಾಕರ ಶರ್ಮ, ಚತುರ್ವೇದಿ ಅಂತಿದ್ದೀಯ, ಮುಂದೆ ಯಾವ ಸ್ವಾಮಿ, ಬಾಬಾನೋ" ಅಂತ ತಮಾಷೆ ಮಾಡಿದ. ನನ್ನ ಪತ್ನಿ "ನಾನು ಎಲ್ಲರ ಮಾತೂ ಕೇಳ್ತೀನಿ, ನನಗೆ ಸರಿ ಅನ್ನಿಸಿದ್ದನ್ನು ಮಾಡ್ತೀನಿ" ಅಂದಳು. ಪತ್ನಿ ಮತ್ತು ಮಕ್ಕಳೊಂದಿಗೆ ಯಾವ ವಿಷಯ ಚರ್ಚಿಸಲು, ಹೇಗೆ ಹೇಳಬೇಕೆಂದು ತಿಳಿಯದೆ ನಾನು ಹಿಂದೇಟು ಹಾಕುತ್ತಿದ್ದೆನೋ ಅದನ್ನು ನನ್ನ ಪತ್ನಿ ಸಲೀಸಾಗಿ ಹೇಳಿದ ರೀತಿ ಮೆಚ್ಚುವಂತಹುದು. ಆಗ ನಾನು ಪ್ರತಿಕ್ರಿಯಿಸದೆ ನನ್ನ ಪತ್ನಿಯನ್ನು ಒಬ್ಬಳೇ ಇದ್ದಾಗ ಆಕೆ ತಿಳಿಸಿದ ವಿಷಯ ಗಂಭೀರವಾಗಿ ಹೇಳಿದ್ದೇ ಅಥವಾ ಸುಮ್ಮನೇ ಹೇಳಿದ್ದೇ ಎಂದು ವಿಚಾರಿಸಿದೆ. ಆಕೆ ಆ ವಿಷಯದಲ್ಲಿ ಗಂಭೀರವಾಗಿ ಹೇಳಿದ್ದೆಂದು ತಿಳಿದಾಗ ನನಗೆ ಬಹಳ ಆನಂದವಾಯಿತು. ನಾನು ಸತ್ತ ನಂತರ ನನ್ನ ದೇಹ ಸುಡದೆ ದೇಹದಾನ ಮತ್ತು ಉಪಯೋಗಕ್ಕೆ ಬರುವ ಅಂಗಾಂಗ ದಾನ ಮಾಡಲು ಆ ಸಂದರ್ಭದಲ್ಲಿ ಹತ್ತಿರವಿರುವ ನನ್ನ ಮಕ್ಕಳು ಮತ್ತು ಸಂಬಂಧಿಗಳಲ್ಲಿ ಈಗ ಈ ಮೂಲಕ ತುಂಬಿದ ವಿಶ್ವಾಸದಿಂದ ಮಾಡುತ್ತಿರುವ ನನ್ನ ವಿನಂತಿಯಿದೆ. ಮರಣೋತ್ತರ ಕ್ರಿಯಾಕರ್ಮಗಳನ್ನೂ ಮಾಡುವ ವಿಚಾರದಲ್ಲಿ ನನಗೆ ನಂಬಿಕೆಯಿಲ್ಲ. ಅದನ್ನು ಮಾಡುವ ಅಗತ್ಯವಿಲ್ಲ. ಏಕೆಂದರೆ  ಜೀವಿತಾವಧಿಯಲ್ಲಿ ಮಾಡುವ ಕರ್ಮಗಳನ್ನು ಅನುಸರಿಸಿ ಜೀವಿಯ ಹಣೆಬರಹ ನಿಶ್ಚಯವಾಗುವುದು, ಉತ್ತರಕ್ರಿಯಾಕರ್ಮಗಳಿಂದಲ್ಲ ಎಂದು ನಾನು ನಂಬುತ್ತೇನೆ. ಆದರೂ ಸಹ ಕ್ರಿಯಾಕರ್ಮಗಳನ್ನು ಮಾಡುವ ವಿಚಾರದಲ್ಲಿ ನನ್ನ ಮಕ್ಕಳಿಗೆ ಯಾವ ರೀತಿ ಮಾಡಬೇಕೆನ್ನಿಸುವುದೋ ಆ ರೀತಿ ಮಾಡಲು ಸ್ವತಂತ್ರರಿದ್ದಾರೆ.

     ಬದುಕು ಸಾವಿಗೆ ಅಂಜುವುದಿಲ್ಲ, ಸಾವು ಬದುಕಿಗೆ ಅಂಜುತ್ತದೆ. ಬದುಕೋಣ, ಸಾಯುವವರೆಗೂ ಬದುಕೋಣ, ಸತ್ತ ಮೇಲೂ ಬದುಕೋಣ!
-ಕ.ವೆಂ.ನಾಗರಾಜ್.
************

ಬುಧವಾರ, ಜೂನ್ 8, 2011

ದೇಹದಾನ: ಕೆಲವು ಮಾಹಿತಿಗಳು, ಮತ್ತು ಪ್ರತಿಕ್ರಿಯೆಗಳು

     ದೇಹದಾನ - ಇದು ಒಂದು ಚರ್ಚಿತ ವಿಷಯವಾಗಿದೆ. ಈ ಕುರಿತು ಕೆಲವು ಹೆಚ್ಚುವರಿ ಮಾಹಿತಿಗಳು ಇಲ್ಲಿವೆ. ನನ್ನ ಹಿಂದಿನ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳೂ ಗಮನಾರ್ಹವಾಗಿದ್ದು ಓದುಗರು ತಮ್ಮ ಅನಿಸಿಕೆಗಳನ್ನೂ ವ್ಯಕ್ತಪಡಿಸಲು ಕೋರುವೆ.
     Valves from the heart of a brain-dead 40-day- old infant have saved two other children from premature death in a hospital here. The infant’s eyes were also donated for cornea grafting. [ಚಿತ್ರ ಕೃಪೆ: ಬಿ.ಬಿ.ಸಿ]
     A doctor in India is steadying his nerves to dissect his father's embalmed body to help anatomy students' research at a medical college.
**************
      ಇಂದು (08-06-2011) ಮೈಸೂರಿನಲ್ಲಿ ಕಾಡಾನೆಯ ತುಳಿತಕ್ಕೆ ಸಿಕ್ಕು ಮೃತರಾದ ಬ್ಯಾಂಕ್ ಆಫ್ ಮಹಾರಾಷ್ಟ್ರದ ಸೆಕ್ಯೂರಿಟಿ ಗಾರ್ಡ್ 55 ವರ್ಷದ ಶ್ರೀ ರೇಣುಕಾಪ್ರಸಾದ್ ರವರ ಕಣ್ಣುಗಳನ್ನು ಅವರ ಬಂಧುಗಳು ದಾನ ಮಾಡಿದ ಕುರಿತು ದೂರದರ್ಶನದಲ್ಲಿ ವರದಿ ಬರುತ್ತಿದೆ. ದಾರುಣ ಸಾವಿನ ನೋವಿನ ನಡುವೆಯೂ ಬಡಕುಟುಂಬದ ರೇಣುಕಾಪ್ರಸಾದರ ಬಂಧುಗಳು ಮಾನವೀಯತೆ, ಸಮಾಜದ ಕಾಳಜಿ ಮೆರೆದಿದ್ದು ಅವರು ಅಭಿನಂದನಾರ್ಹರಾಗಿದ್ದಾರೆ.
********************


'ಸಂಪದ' ತಾಣದಲ್ಲಿ ನನ್ನ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳು:
ಕವಿನಾಗರಾಜರೆ,
     ನೂರಾರು ವರ್ಷ ಆರೋಗ್ಯವಂತರಾಗಿ ಬಾಳಿ ಎಂದು ಮೊದಲಿಗೆ ಹಾರೈಸುವೆ. ನಿಮ್ಮ ಅಂಗಾಂಗ ದಾನ,ದೇಹದಾನದ ನಿರ್ಧಾರಕ್ಕೆ ಜೈ. ಕೊನೆಯಲ್ಲಿ ಹೇಳಿದ ಮಾತು ತುಂಬಾ ಚೆನ್ನಾಗಿದೆ-"...ವಾಸ್ತವತೆ ಅರಿತಲ್ಲಿ, ಬದುಕಿನ ಮಹತ್ವ ತಿಳಿದಲ್ಲಿ ನನ್ನ ಈ ಬಯಕೆ ನಿಜವಾಗಿ ಬದುಕುವ ಬಯಕೆ ಎಂಬುದು ಅರ್ಥವಾಗಬಹುದು." ನಿಮ್ಮ ಮುಕ್ತಕಗಳು ನಾಗರತ್ನಮ್ಮನವರು ಹೇಳಿದಂತೆ ಅನರ್ಘ್ಯ ರತ್ನಗಳು.
ಮೈಲಾರ ಶರ್ಮ ಹಾಗೂ ಅವರ ಕುಟುಂಬದವರು ಇತರರಿಗೆ ಆದರ್ಶಪ್ರಾಯರು.
-ಗಣೇಶ.
****************
'ದೇಹದಾನ'
     "ಕಳೆದ ವರ್ಷ ಮಾರ್ಚ್‌ನಲ್ಲಿ ನನ್ನ ತಾಯಿಯವರು ಆಸ್ಪತ್ರೆಯಲ್ಲಿ ನಿಧನರಾದಾಗ ನಡೆದ ಘಟನೆ : ೫೨ ವರ್ಷ ತಾಯಿಯನ್ನು ಹೆಚ್ಚು ಕಮ್ಮಿ ಕ್ಷಣವೂ ಬಿಟ್ಟಿರದ ತಂದೆಯವರು, ತಾಯಿಯ ಬಳಿ ಸ್ವಲ್ಪ ಹೊತ್ತು ನಿಂತು ನೋಡಿ, ಹೊರಬಂದು, ನನ್ನನ್ನು ಕರೆದು, "ಅಮ್ಮನ ದೇಹದಾನ ಮೆಡಿಕಲ್ ಕಾಲೇಜ್‌ಗೆ ಮಾಡುವಂತೆ ಡಾಕ್ಟ್ರಿಗೆ ತಿಳಿಸು" ಎಂದರು. ನನಗೆ ಆಗ ಏನು ಹೇಳುವುದು, ಏನು ಮಾಡುವುದು ತೋಚಲೇ ಇಲ್ಲ. " ಈ ದೇಹದಲ್ಲಿ ಏನಿದೆ? ಅವಳು ನಮ್ಮೆಲ್ಲರ ಹೃದಯದಲ್ಲಿರುವಳು. ನಾಳೆ ಹೇಗೂ ಸುಡುವರು,ಅದರ ಬದಲು..."ಎಂದೆಲ್ಲಾ ತಮ್ಮ ದುಃಖ ನುಂಗಿ ಹೇಳುತ್ತಲೇ ಇದ್ದರು. ಸಿನೆಮಾ ನಟ ಲೋಕೇಶ್‌ರ ನಿಧನಾನಂತರ ಅವರ ದೇಹವನ್ನು ಮೆಡಿಕಲ್ ಕಾಲೇಜ್‌ಗೆ ದಾನ ನೀಡಿದ್ದು ಗೊತ್ತಿತ್ತು. http://www.chitraloka.com/flash-back/137-memories-tragedies/1754-body-donated-to-hospital.html ಮನಸ್ಸನ್ನು ಎಷ್ಟು ಗಟ್ಟಿ ಮಾಡಿದರೂ ನನ್ನಿಂದ ಒಪ್ಪಲು ಸಾಧ್ಯವಾಗಲಿಲ್ಲ. ತಮ್ಮ ತಂಗಿಯ ಅಭಿಪ್ರಾಯ ಕೇಳಿ ಬರುವೆ ಎಂದು ತಂದೆಯ ಬಳಿ ಹೇಳಿ ಬಂದೆ. ಎಲ್ಲರೂ ಬೇಡ ಎಂದು ಒತ್ತಾಯಿಸಿದ್ದರಿಂದ ಅಪ್ಪ ಸುಮ್ಮನಾದರು.
     ನಂತರವೂ ಪ್ರತಿದಿನ ನಮ್ಮಲ್ಲಿ ನಡೆಯುವ ಕ್ರಿಯಾಕರ್ಮಗಳ ಬಗ್ಗೆ ತಂದೆಯವರು ವಿರೋಧಿಸುತ್ತಲೇ ಇದ್ದರು. "ಬದುಕಿರುವಾಗ ನೀನು ಚೆನ್ನಾಗಿ ನೋಡಿರುವೆ. ಅದು ಮುಖ್ಯ. ಇದೆಲ್ಲಾ ವ್ಯರ್ಥ..." ಎಂದು ಹೇಳುತ್ತಿದ್ದರು.
ಒಂದೆರಡು ತಿಂಗಳ ನಂತರ ತಂದೆಯವರು ಒಂದು ಅರ್ಜಿ ತಂದು ಸಹಿ ಹಾಕಲು ಹೇಳಿದರು. ನೋಡಿದರೆ ಅವರ ದೇಹದಾನದ ಅರ್ಜಿ. ಒಬ್ಬ ಡಾಕ್ಟರ್ ಮಗ ತನ್ನ ತಂದೆಯ ದೇಹವನ್ನೇ ಬಗೆದು ಮಕ್ಕಳಿಗೆ ಪಾಠ ಮಾಡಿದರೆ, http://www.bbc.co.uk/news/world-south-asia-11710741 ನಾನು ದೇಹದಾನದ ಅರ್ಜಿಗೇ ಸಹಿ ಹಾಕಲು ಹಿಂದೇಟು ಹಾಕಿದೆ.
     ಆರೋಗ್ಯವಂತರಾಗೇ ಇದ್ದ ನನ್ನ ತಂದೆಯವರು ಎಪ್ರಿಲ್ ೨೫ರಂದು ನಮ್ಮಲ್ಲಿ (ಕೊನೆಯ) ಊಟಮಾಡಿ, ತಂಗಿ ಮನೆಗೆ ಹೋದವರು, ಎಪ್ರಿಲ್ ೨೯ರಂದು ಮನೆಯಲ್ಲಿ ಮಲಗಿದ್ದಂತೆ ತೀರಿದರು. ದುಃಖದಲ್ಲಿದ್ದವನಿಗೆ ದೇಹದಾನವಾಗಲಿ, ಅಂಗಾಂಗ ದಾನವಾಗಲೀ ನೆನಪಾಗಲೇ ಇಲ್ಲ. ತೀರಿಹೋದ ೪೧ ದಿನದ ಮಗುವಿನ ಹೃದಯದ ಕವಾಟ ದಾನದಿಂದಾಗಿ ೨ ಮಕ್ಕಳಿಗೆ ಜೀವದಾನ ಎಂಬ ಪತ್ರಿಕಾ ವರದಿ ಇದೇ ೨೨ನೇ ತಾರೀಕಿನಂದು ಓದಿದೆ. http://www.manipalworldnews.com/news_local.asp?id=3249 ಕವಾಟ ದಾನದ ಬಗ್ಗೆ ಮಗುವಿನ ತಂದೆತಾಯಿಯ ಮನವೊಲಿಸಿದ Mohan (Multi Organ Harvesting Aid Network) foundation ಪ್ರಯತ್ನ ನಿಜಕ್ಕೂ ಪ್ರಶಂಸನೀಯ. http://www.mohanfoundation.org/ ಆದರ್ಶ ಅಧ್ಯಾಪಕರಾಗಿದ್ದ ತಂದೆಯವರು ಸಾವಲ್ಲೂ ಆದರ್ಶರಾಗಲು ನಾನು ಬಿಡಲಿಲ್ಲ..
-ಗಣೇಶ
*******
Submitted by nagarathnavinay... on May 29, 2011 - 8:47pm.
ನಾಗರಾಜ್ ರವರೇ, ದಾರ್ಶನಿಕ ಚಿತ್ರಣ. ವ್ಯಾಪಕವಾದ ಚಿಂತನೆಯ ಆಳದಿಂದ ಹೊರ ಹೊಮ್ಮಿದ ಅನರ್ಘ್ಯ ರತ್ನಗಳು ನಿಮ್ಮ ಈ ಪದ್ಯಗಳೆಂದರೆ ತಪ್ಪಾಗಲಾರದು. ಅಭಿನಂದನೆಗಳು
************
Submitted by partha1059 on June 1, 2011 - 10:15pm.
ನಾಗರಾಜರೆ,
     ಅತ್ಯುತ್ತಮ ಬರಹ ಮತ್ತು ಅಷ್ಟೆ ಉತ್ತಮ ವಿಷಯ. ವೇದಾಂತದಿಂದ ಹೊರತು ಪಡಿಸಿದರೆ ದೇಹ ನಮ್ಮ ಸ್ವತ್ತು, ತಂದೆ ತಾಯಿಯ ಸ್ವತ್ತು ಎನ್ನುವದನ್ನು ಒಪ್ಪಬಹುದು ಏಕೆಂದರೆ ಅವರ ದೇಹದ ಬಾಗವೆ ನಾವಾಗಿರುತ್ತೇವೆ. ಎರಡನ್ನು ಮೀರಿದಾಗ ಇದು ಪ್ರಕೃತಿಯ ಸ್ವತ್ತು ಎನ್ನುವದಂತು ಒಪ್ಪಲೆ ಬೇಕು. ಏಕೆಂದರೆ ದೇಹದ ಪ್ರತಿ ಅಣುವು ಪ್ರಕೃತಿಯ ಬಾಗದಿಂದಲೆ ಆಗಿದೆ, ಅಲ್ಲದೆ ಭೂಮಿಗೆ ಬಂದ ದಿನದಿಂದ ಪ್ರಕೃತಿಯೆ ನಮ್ಮನ್ನು ಸಲಹಿದೆ, ಹೀಗಾಗಿ ತಂದೆ ತಾಯಿಯರು ಬೀಜ ರೂಪರಾದರೆ, ಪ್ರಕೃತಿ ನೀರು ಅಹಾರ ಕೊಟ್ಟು ಪೊರೆದಿದೆ, ಅದಕ್ಕಾಗಿ ದೇಹದಾನವನ್ನು ಪುಣ್ಯದ ಕಾರಣದ ಹೊರತಾಗಿಯು ಮಾಡಬಹುದು. ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬಂತೆ , ನಮ್ಮದಲ್ಲದ ದೇಹ ಯಾರಿಗೊ ಉಪಯೋಗವಾಗಲಿ ಎಂಬಂತೆ.
ಪಾರ್ಥಸಾರಥಿ
***********
Submitted by partha1059 on June 1, 2011 - 10:23pm.
     ದೇಹದಾನ" ದಾನ ಮಾಡುವ ವ್ಯಕ್ತಿಯ ಸ್ವತಂತ್ರ ಅನ್ನುವುದು ನಿಜ. ಆದರೆ ಪ್ರಾಮಾಣಿಕವಾಗಿ ನೋಡಿದಾಗ ನಿರ್ದಾರ ತೆಗೆದುಕೊಳ್ಳುವ ಕಠಿಣ ಸಂಧರ್ಪ ಎದುರಿಸಬೇಕಾಗುವುದು ಅವರ ಮಕ್ಕಳು ಅಥವ ಬಂದುಗಳು. ಈ ಸಂಧರ್ಪದಲ್ಲಿ ಮೃತವ್ಯಕ್ತಿಯ ನಿರ್ದಾರಕಿಂತ ಬಂದುಗಳ ಮನೋಸ್ಥಿಥಿಯೆ ಪ್ರಮುಖ ಪಾತ್ರ ವಹಿಸುತ್ತದೆ ಅನ್ನುವುದು ಸತ್ಯ.
-ಪಾರ್ಥಸಾರಥಿ. (ಗಣೇಶರ ಲೇಖನಕ್ಕೆ ಬರೆದ ಪ್ರತಿಕ್ರಿಯೆ ಇಲ್ಲಿಗು ಹೊಂದುತ್ತದೆ ಎಂದು ಹಾಕಿದ್ದೇನೆ)
***********
'ವೇದಸುಧೆ' ತಾಣದಲ್ಲಿ ಬಂದ ಪ್ರತಿಕ್ರಿಯೆಗಳು:
ಹರಿಹರಪುರ ಶ್ರೀಧರ್ said...
     [ಪತ್ನಿಯ ಸ್ವತ್ತಲ್ಲ ಮಕ್ಕಳ ಸ್ವತ್ತಲ್ಲ] ನನಗೆ ಒಪ್ಪಿಗೆ ಯಾಗಿಲ್ಲ. ಅಂದಮಾತ್ರಕ್ಕೆ ನನ್ನ ಅಭಿಪ್ರಾಯವು ನಿಮಗೆ ಒಪ್ಪಿಗೆ ಯಾಗಬೇಕೆಂದೇನೂ ಅಲ್ಲ. ಅಲ್ಲಾ! ಸಂಸಾರವೆಂದರೇನು? ಸಂಬಂಧವೆಂದರೇನು? ನಮ್ಮ ಶರೀರದ ಮೇಲೆ ನಮಗೇನು ಅಧಿಕಾರ? ಮದುವೆಯಾಗುವವರೆಗೂಒಂದು ಬಗೆ. ಮದುವೆಯಾದನಂತರ ಪತಿ-ಪತ್ನಿಯರು ಏನೆಲ್ಲಾ ಹಂಚಿಕೊಳ್ಳುವುದಿಲ್ಲಾ! ನನ್ನ ಅನುಭವದಲ್ಲಿ ಯಾರೊಡನೆ ಎಷ್ಟೇ ಗೆಳೆತನ-ಬಾಂಧವ್ಯವಿದ್ದರೂ ನಮ್ಮ ಮೊದಲ ಸರ್ಕಲ್ ಪತಿಪತ್ನಿ, ನಂತರ ಮಕ್ಕಳು, ನಂತರ ಉಳಿದೆಲ್ಲಾ. ಅನೇಕಭಾರಿ ಸ್ನೇಹಿತರು ನಮ್ಮ ಪತ್ನಿ-ಮಕ್ಕಳಿಗಿಂತಲೂ ಹತ್ತಿರವಾಗಿ ಕಾಣುತ್ತಾರೆ. ಆದರೂ ನನ್ನ ದೃಷ್ಟಿಯಲ್ಲಿ ಅವರೆಲ್ಲಾರೂ ನಮ್ಮ ಕುಟುಂಬದ ನಂತರವೇ.ಹೀಗಿದ್ದರೇನೇ ಚೆನ್ನಾ.ನಮ್ಮ ಶರೀರವು ಪ್ರಾಣ ಇರುವವರೆಗೂ ನಮ್ಮ ಸ್ವತ್ತು. ನಂತರ ಅದು ಪತಿ/ಪತ್ನಿ ಮಕ್ಕಳಿಗೆ ಬಿಟ್ಟ ವಿಚಾರ. ಒಂದು ದೇಹವು ಸಾವನಪ್ಪಿದ ಕೂಡಲೇ ಅದು ಹೆಣವೆಂದು ಯಾರೂ ಕೂಡ ಜಡವಸ್ತುವಿನಂತೆ ಕಾಣುವುದಿಲ್ಲ.ಆತ್ಮವು ದೇಹದಿಂದ ದೂರವಾದಮೇಲೆ ಅದರಲ್ಲೇನಿದೆ? ಅದೊಂದು ಹೆಣ ಎಂಬುದು ಸತ್ಯವಾದರೂ ಸುಮಾರು ೪೦-೫೦ ವರ್ಷಗಳು ಜೊತೆಗಿದ್ದ ಪತಿ/ಪತ್ನಿ/ಅಪ್ಪ/ಅಮ್ಮ [ದೇಹ+ಆತ್ಮ] ಸತ್ತಕೂಡಲೇ ಆತ್ಮ ವಿಲ್ಲವಾದರೂ ಜಡದೇಹವು ಅದರ ಅಂತ್ಯಸಂಸ್ಕಾರವಾಗುವವರೆಗೂ ಅದನ್ನು ನೋಡಬೇಕೆನಿಸುತ್ತದೆ. ಕಡೆಯಬಾರಿಗೆ ಕಣ್ತುಂಬ ನೋಡಿ ಬಿಡೋಣವೆನಿಸುತ್ತದೆ. ಇದು ಎಲ್ಲಾ ಮನುಷ್ಯರ ಸಹಜ ಸ್ವಭಾವ.ಹೀಗಿರುವಾಗ ನನ್ನ ಅಪ್ಪ/ ಅಮ್ಮ/ ಪತಿ/ ಪತ್ನಿಯ ದೇಹವನ್ನು ಪಂಚಭೂತಗಳಲ್ಲಿ ಲೀನಮಾಡುವವರೆಗೂ ನಮ್ಮ ಮನಸ್ಸು ಒಪ್ಪುವುದಿಲ್ಲ. ಪಂಚಭೂತಗಳಿಂದ ಬಂದ ದೇಹವು ಪಂಚಭೂತಗಳಿಗೇ ಸೇರಬೇಕು. ಇದು ಧರ್ಮ.ಒಮ್ಮೆ ಅದು ಬೂದಿಯಾಯ್ತೆಂದ ಮೇಲೆ ಅದು ಮುಗಿದಕಥೆ. ಅನಂತರ ಸತ್ತವರ ನೆನಪು ಮಾತ್ರ.
     ಅಲ್ಲಾ, ಎಲ್ಲರೂ ಸತ್ತನಂತರ ತಮ್ಮ ಶರೀರವನ್ನು ದಾನಮಾಡುವುದೇ ಆದರೆ ಅದನ್ನು ಸ್ವೀಕರಿಸಲು ಮುಂದೊಂದು ದಿನ ಆಸ್ಪತ್ರೆಯವರೂ ಮುಂದೆಬರಲಾರರು. ತಿಳಿದಿರಲಿ.ನಾನಂತೂ ದೇಹವನ್ನು ದಾನಮಾಡುವ ವಿಚಾರದಲ್ಲಿ ಅದರ ವಿರೋಧಿ. ಇದೇ ಪ್ರವೃತ್ತಿ ಬೆಳೆದು ಬಂದರೆ ನಮ್ಮ ಶರೀರವು ಮಾರಾಟ/ದಾನ ಮಾಡುವ ಒಂದು ವಸ್ತುವಾಗಿಬಿಡಿತ್ತದೆ. ಅಲ್ಲಿಗೆ ನಮ್ಮ ಭಾವನೆಗಳೆಲ್ಲಾ ನುಚ್ಚುನೂರು.ನಾವು ಭಾವನೆಗಳೇ ಇಲ್ಲದ ಜಡವಸ್ತುವಿನಂತೆ. ಕ್ಷಮಿಸಿ. ನನಗೆ ಮನಸ್ಸಿಗೆ ದು:ಖವಾದಾಗ ಮನದೊಳಗೆ ಇರುವುದನ್ನೆಲ್ಲಾ ಹೊರಹಾಕಿ ಬಿಡುತ್ತೇನೆ.
May 29, 2011 8:50 PM
***************
bkjagadish said...
     ಶರೀರ ಮಾತ್ರಮ್ ಖಲು ಧರ್ಮ ಸಾಧನಂ !!... I beg to differ ಕವಿ ನಾಗರಾಜ್ !!.. This body has been given to us by God as a GIFT according to our past Karmas, for fulfillment of ultimate liberation ( Moksha )!!...Certainly we have no right to DONATE the GIFT which incidently still does not belong to us ...Mind you , it belongs to Him !!... And btw let me tell you that I cannot tolerate if somebody punctured the eyes of my Father - IN A PHOTO !!...It hurts me !!...Will you say ಕವಿ ನಾಗರಾಜ್ that after all IT'S ONLY A PHOTO ??? !!...Sorry to find that the vast majority of people are getting carried away by the so called lofty ideals, which is nothing but MISLEADING a kind of ‘ playing to the gallery ‘ !!....ನನ್ನ ಅನಿಸಿಕೆಯೆಂದರೆ ಇಂಥಹ ಬಾಲಿಶ ಹೇಳಿಕೆಗಳು ಕೇಳುವುದಕ್ಕೆ , ಹೇಳುವುದಕ್ಕೆ ಮಾತ್ರ ಚೆನ್ನ , ಆಚರಣೆಯಲ್ಲಲ್ಲ !! ಮನಸ್ಸು ನೋಯಿಸಿದ್ದರೆ ಕ್ಷಮೆ ಇರಲಿ ,ಉದ್ದ್ಹೇಶಪೂರ್ವಕವಲ್ಲ !...ಸವಿನಯ ವಂದನೆಗಳು !!
May 30, 2011 12:20 PM
**************
bkjagadish said...
ಶ್ರೀಧರ್ Sir , I was dilighted to read your views which resonates with mine !!...Deep Bows !!...THANK YOU for sharing it !!!
May 30, 2011 12:22 PM
**************
ಮಹೇಶ ಪ್ರಸಾದ ನೀರ್ಕಜೆ said...
     ಹ್ಮ್.. ಲೋಕೋ ಭಿನ್ನರುಚಿ:... ನನಗಂತೂ ನಾಗರಾಜರು ಬರೆದಿದ್ದಕ್ಕೆ ಸಮ್ಮತಿಯಿದೆ. ಶ್ರೀಯುತ ಶ್ರೀಧರರು ಭಾವನೆ ಬಗ್ಗೆ ಹೇಳಿದರು. ಯಾರ ಭಾವನೆ ಅಂತ ಯೋಚಿಸುತ್ತಿದ್ದೇನೆ ನಾನು. ಸತ್ತವನ ಭಾವನೆ (ಸಾಯುವುದಕ್ಕೆ ಮೊದಲಿದ್ದ) ಯೋ ಅಥವಾ ಸತ್ತವನ ಮನೆಯವರ ಭಾವನೆಯೋ? ಸಾಯುವವನು ಸತ್ತ ಮೇಲೆ ತನ್ನ ದೇಹವನ್ನು ದಾನ ಮಾಡಬೇಕೆಂದು ಮೊದಲೇ ಹೇಳಿದ್ದರೆ ಅವನ ಮನೆಯವರು ಹಾಗೆ ಮಾಡಲೇ ಬೇಕು. ಮಾಡದಿದ್ದಲ್ಲಿ ಅದು ದ್ರೋಹ. ಸತ್ತ ಮೇಲೆ ದೇಹ ಹೊತ್ತಿಸಬೇಕೆಂದೆಣಿಸಿದವನ ದೇಹ ಸುಡಬೇಕು. ಅದನ್ನು ದಾನ ಮಾಡಿದಲ್ಲಿ ಅದು ದ್ರೋಹ. ಸಾಯುತ್ತಿರುವವನ/ಸತ್ತವನ ಭಾವನೆಗೆ ಮೊದಲು ಬೆಲೆ ಕೊಡಬೇಕೆಂದು ನಾನು ಹೇಳುತ್ತೇನೆ. ಸಾಯದೆ ಉಳಿದವರ ಭಾವನೆಗಳ ಪ್ರಶ್ನೆ ನಂತರದ್ದು.
May 30, 2011 2:06 PM
***********
ಮಹೇಶ ಪ್ರಸಾದ ನೀರ್ಕಜೆ said...
     ಬಿಕೆ ಜಗದೀಶ್ ಅವರಿಗೆ... ಶರೀರ ಮಾತ್ರಂ ಖಲು ಧರ್ಮಸಾಧನಂ ಅಂದಿರಿ.. ಸತ್ತ ಮೇಲೆ ದೇಹ ಅದೇನು ಧರ್ಮ ಸಾಧನೆ ಮಾಡುತ್ತದೆ ಹೇಳಿ ಸ್ವಾಮಿ! ಈ ಶ್ಲೋಕ ಹೇಳಿರುವುದು ಜೀವ ಇರುವ ದೇಹದ ಬಗ್ಗೆ. ಜೀವ ಇರುವಾಗಲೇ ಅಧ್ಯಾತ್ಮದ ಹೆಸರಿನಲ್ಲಿ ಶರೀರರದ ಬಗ್ಗೆ ಅಸಡ್ಡೆ ತೋರಿಸುವವರನ್ನು ಉದ್ದೇಶಿಸಿ ಬರೆದಿದ್ದು. ಇನ್ನು ಒಂದು ಕಡೆ ಮೋಕ್ಷ ಅನ್ನುತ್ತೀರಿ.. ಇನ್ನೊಂದು ಕಡೆ Hurts ಎನ್ನುತ್ತೀರಿ.. ನೋವಾಗುವಷ್ಟು ದುರ್ಬಲ ಮನಸ್ಸಿರುವವನು ಮೋಕ್ಷ ಪಡೆಯುವುದು ಅಷ್ಟರಲ್ಲೇ ಇದೆ! ಇನ್ನು ಶರೀರ ದಾನ ಮಾಡಲು ಹಕ್ಕಿಲ್ಲ ಎಂದಿದ್ದೀರಿ. ಹಾಗಿದ್ದಲ್ಲಿ ಅದನ್ನು ಸುಡಲು ಹಕ್ಕು ಇದೆಯೇ? ಇದ್ದರೆ ಅದೆಲ್ಲಿಂದ ಬಂತು! ದಾನ ಮಾಡಿದರೂ ಕೊನೆಗೆ ಅದು ಪಂಚಭೂತಗಳಲ್ಲೇ ಸೇರುತ್ತೆ ತಾನೆ! ಪಂಚಭೂತಗಳನ್ನು ಬಿಟ್ಟು ಆ ದೇಹ ಈ ಪ್ರಪಂಚದಲ್ಲಿ ಅದೆಲ್ಲಿ ಅಡಗಿ ಕುಳಿತೊಕೊಳ್ಳಬಹುದು ಎಂದು ಸ್ವಲ್ಪ ಯೋಚಿಸಿ. ಅಂತಹ ಜಾಗವೇ ಇಲ್ಲ. ಸುಟ್ಟರೋ ಬಿಸಾಕಿದರೂ ದಾನ ಮಾಡಿದರೂ ಅಥವಾ ಗೊಬ್ಬರ ಮಾಡಿದರೂ ಅದು ಸೇರುವುದು ಪಂಚಭೂತಗಳಿಗೆಯೇ! ಶ್ರೀ ನಾಗರಾಜರು ಹೇಳಿದ್ದು ಮಿಸ್ ಲೀಡಿಂಗ್ ಅನಿಸುತ್ತಿಲ್ಲ! ನಿಮ್ಮ ಯೋಚನಾಲಹರಿ, ನಿಮ್ಮ ಸಿಧ್ಧಾಂತ ಮಾತ್ರ ಸರಿ, ಉಳಿದದ್ದೆಲ್ಲ "lofty ideas" ಎನ್ನುವ ಮನಸ್ಥಿತಿ ಇದೆಯಲ್ಲ, ಅದು ಎಲ್ಲರನ್ನೂ ಮಿಸ್ ಲೀಡ್ ಮಾಡುವಂಥಾದ್ದು!
     ಶ್ರೀ ನಾಗರಾಜರವರ ಹೇಳಿಕೆಯನ್ನು ತಾವು ಬಾಲಿಶ ಎಂದು ಹೇಳಿದ್ದಕ್ಕೆ ಸ್ವಲ್ಪ ಖಾರವಾಗಿ ಪ್ರತಿಕ್ರಿಯಿಸಿದೆ.. ಅದು ಬಿಟ್ಟು ಯಾರನ್ನೂ ನೋಯಿಸುವ ಉದ್ದೇಶವಿಲ್ಲ. ನಾನು ಎಲ್ಲರೂ ದೇಹ ದಾನ ಮಾಡಬೇಕೆನ್ನುತ್ತಿಲ್ಲ. ನಾಗರಾಜರವರೂ ಹೇಳಿದಂತಿಲ್ಲ. ಮಾಡಬೇಕೆನ್ನುವವರು ಮಾಡಲಿ. ಬೇಡದಿರುವವರು ಬಿಡಲಿ. ಅಲ್ಲಿಗೆ ಎಲ್ಲರಿಗೂ ಸುಖ ಶಾಂತಿ!
May 30, 2011 2:21 PM
****************
bkjagadish said...
Respected Mahesh , I just wish to humbly say in reply that you need to ' STUDY MORE ' in this context . As for your views ,I do respect the diversity in thinking !...
May 30, 2011 3:06 PM
***********
bkjagadish said...
In this world of sin and sorrow there is always something to be thankful for; as for me, I rejoice that I am not a supporter of ' Body Donation '!! .
May 30, 2011 3:09 PM
**************
ಮಹೇಶ ಪ್ರಸಾದ ನೀರ್ಕಜೆ said...
Dear Jagadish, In reply I humbly say that I am open to any kind of study in any regard. Please suggest me the books/websites.. which contain more details of what you referred to. I am more than willing to study. Om Shanti!
May 30, 2011 3:12 PM
**************
bkjagadish said...
     I have approximate answers and possible beliefs and different degrees of certainty about different things, but I'm not absolutely sure of anything, and many things I don't know anything about, such as whether it means anything to ask why we're here, and what the question might mean. I might think about it a little bit, but if I can't figure it out, then I go on to something else. But I don't have to know an answer.... I don't feel frightened by not knowing things, by being lost in the mysterious universe without having any purpose, which is the way it really is, as far as I can tell, possibly. It doesn't frighten me!!.
May 30, 2011 3:12 PM
*****************
ಮಹೇಶ ಪ್ರಸಾದ ನೀರ್ಕಜೆ said...
     No one can know absolute of anything. Everything is relative to one another in physical domain. That is the reason I criticize (or rather question) the people who ridicule other view points. And there is no reason to be frightened for not knowing something! In fact, it is to be frightened if one happen to feel that he knows everything.
May 30, 2011 3:19 PM
****************
ಹರಿಹರಪುರ ಶ್ರೀಧರ್ said...
ಶ್ರೀ ಮಹೇಶ್,
     ಮೊದಲಿಗೇ ಒಂದು ಮಾತು ಹೇಳಿಬಿಡುತ್ತೇನೆ. ನಾನು ಶಾಸ್ತ್ರಗಳನ್ನು ಅಧ್ಯಯನ ಮಾಡಿದವನಲ್ಲ. ನನಗೆ ಸತ್ತ ದೇಹವನ್ನು ಸುಡಬೇಕೆ? ದಾನ ಮಾಡಬೇಕೆ? ಮಣ್ಣಲ್ಲಿ ಹೂಳಬೇಕೆ? ಎಂದು ಯಾವ ಶಾಸ್ತ್ರದಲ್ಲಿ ಏನು ಬರೆದಿದೆಯೋ ಗೊತ್ತಿಲ್ಲ. ಆದರೆ ಈ ಭೂಮಿಯಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ಬದುಕಿರುವೆ.ಒಂದಿಷ್ಟು ಸಾವು ನೋವು ಗಳನ್ನು ಕಂಡಿರುವೆ. ಸತ್ತಾಗ ಹತ್ತಿರದವರ ಸಂಕಟವನ್ನು ಕಂಡು ನಾನೂ ದು:ಖಿಸಿರುವೆ. ಒಂದು ತಾಜಾ ಉಧಾಹರಣೆ ಕೊಡುವೆ. ನನ್ನ ಸ್ನೇಹಿತರೊಬ್ಬರ ತಂದೆಯವರು ಇದ್ದಕ್ಕಿದ್ದಂತೆ ಹೊಳೇನರಸೀಪುರದಲ್ಲಿ ಒಂದು ಮದುವೆ ಮನೆಯಲ್ಲಿ ಕುಸಿದು ಬಿದ್ದು ಕೊನೆಯುಸಿರೆಳೆದರು.ಆ ಸ್ಥಳದಲ್ಲಿ ಅವರ ಪರಿಚಿತರು ನಾನೊಬ್ಬನೇ. ನನ್ನ ಸ್ನೇಹಿತರು ಹಾಸನದಲ್ಲಿದ್ದರು. ಅವರ ಮನೆಗೆ ಮೃತ ದೇಹವನ್ನು ತೆಗೆದುಕೊಂಡು ಹೋಗಬೇಕು.ಇಲ್ಲಿ ಉದ್ಧೇಶ ಹೆಣವನ್ನು ಸಾಗಿಸುವುದು ತಾನೇ? ಹೇಗೋ ಸಾಗಿಸಿದರಾಗಿತ್ತು. ಆದರೆ ಹಾಗೆ ಮಾಡಲಿಲ್ಲ. ಅವರ ಕರುಳುಕುಡಿಗೆ ಈಗಾಗಲೇ ಅಪ್ಪನ ಸಾವಿನಿಂದ ಆಗಿರುವ ದು:ಖದ ಜೊತೆಗೆ ಇನ್ನೂ ಹೆಚ್ಚು ದು:ಖವಾಗಬಾರದೆಂದು ಯೋಚಿಸಿ ಒಂದು ಕಾರ್ ನಲ್ಲಿ ಜೋಪಾನವಾಗಿ ತೆಗೆದುಕೊಂಡು ಹೋದೆವು. ಅದು ಹೆಣ. ಹೇಗೆ ತೆಗೆದುಕೊಂಡು ಹೋಗಿದ್ದರೂ ಅದಕ್ಕೇನೂ ಆಗುತ್ತಿರಲಿಲ್ಲ. ಆದರೆ ನಾವು ಗಮನದಲ್ಲಿಟ್ಟುಕೊಂಡಿದ್ದು ಅವರ ಮಕ್ಕಳನ್ನು ಮತ್ತು ಪತ್ನಿಯನ್ನು. ಇದೆಲ್ಲಾ ಭಾವನೆಗೆ ಸಂಬಂಧಿಸಿದ್ದು.ಸತ್ತವನು ಗೆದ್ದು ಬಿಡುತ್ತಾನೆ.ಇದ್ದ ಅವನ/ಅವಳ ಕರುಳ ಬಳ್ಳಿಗಳ ಬಗ್ಗೆಯೇ ಯೋಚಿಸಬೇಕಾದ್ದು. ಅವನು ಸತ್ತಾಗ ತನ್ನ ದೇಹದ ಮೇಲಿನ ಅಧಿಕಾರವನ್ನು ಕಳೆದುಕೊಂಡು ಬಿಟ್ಟ. ಅವನ/ಅವಳ ಕರುಳು ಬಳ್ಳಿಗಳದ್ದೇ ಅಧಿಕಾರ ಮತ್ತು ಕರ್ತವ್ಯ. ಮೆಡಿಕಲ್ ಕಾಲೇಜುಗಳಿದೆ ಪ್ರಯೋಗ ಮಾಡಲು ಎಷ್ಟು ಹೆಣ ಬೇಕು? ಎಲ್ಲರೂ ದೇಹವನ್ನು ದಾನಮಾಡುತ್ತೇನೆಂದರೆ ನಂತರದ ಪರಿಸ್ಥಿತಿಯನ್ನು ಊಹಿಸಿ ನೋಡಿ!! ಹೇಗೂ ಪಂಚಭೂತಗಳಲ್ಲಿ ಲೀನವಾಗುತ್ತದೆಂದು ಮೃತದೇಹವನ್ನು ತುಂಡರಿಸಲು ಸಾಧ್ಯವೇ?
     ಬದುಕು ಮತ್ತು ಭಾವನೆಗಳಿಗೆ ಅವಿನಾಭಾವ ಸಂಬಂಧವಿದೆ.ಭಾವನಾರಹಿತ ಜೀವನವು ಬದುಕೇ ಅಲ್ಲ.ಒಮ್ಮೆ ಭಾವನೆಗಳು ನಾಶವಾಗುತ್ತಾ ಬಂದರೆ ಬದುಕು ಯಾಂತ್ರಿಕ. ಇಂತಹ ಬದುಕು ಬೇಕೆ? ಅಥವಾ ಭಾವನೆಗಳ ಜೊತೆಗೆ ಪ್ರೀತಿವಾತ್ಸಲ್ಯ ಮಮಕಾರಗಳಿಂದ ಕೂಡಿದ ಜೀವನ ಬೇಕೆ? ಒಂದು ಆರೋಗ್ಯಕರ ಕುಟುಂಬವೆಂದರೆ ಇವೆಲ್ಲಾ ಅಂಶಗಳೂ ಗಣನೆಗೆ ಬರುತ್ತದೆ. ಯಾಂತ್ರಿಕ ಬದುಕಿಗೆ ಇವಲ್ಲಾ ಬೇಡ.
     ಸಾಯುವವನು ತನ್ನ ದೇಹವನ್ನು ದಾನಮಾಡುತ್ತೇನೆಂದು ವಾಗ್ದಾನ ಮಾಡಿದ್ದರೆ ದಾನ ಮಾಡದೇ ಹೋದಾಗ ದ್ರೋಹವಾಗುವುದಿಲ್ಲವೇ? ಎಂದಿರಿ. ಆದರೆ ವಾಗ್ದಾನ ಮಾಡುವ ಮುಂಚೆ ಪತಿ/ಪತ್ನಿ/ಮಕ್ಕಳು ಸೇರಿ ಸಮಾಲೋಚಿಸಿ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಭಾವನಾರಹಿತವಾದ ಪತಿ/ಪತ್ನಿ/ಮಕ್ಕಳು ಮಾತ್ರ ದೇಹದಾನ ಮಾಡಲು ಒಪ್ಪ ಬಲ್ಲರು ಅಥವಾ ಆ ಮಟ್ಟಕ್ಕೆ[ಅದು ಅತ್ಯುನ್ನತ ಸ್ಥಿತಿ ಎಂದು ನಾನು ತಿಳಿಯುವೆ] ಕುಟುಂಬದವರೆಲ್ಲಾ ಬೆಳೆದಿರಬೇಕು. ಹೌದಲ್ಲವೇ?ಇದೆಲ್ಲಾ ನನ್ನ ಭಾವನೆಗಳು, ಒಪ್ಪಬೇಕೆಂದೇನೂ ಇಲ್ಲ.
May 30, 2011 4:25 PM
************
bkjagadish said...
Nice one Sridharji , I still feel , on propriety ground , that one has NO RIGHT to donate the thing which DOES NOT BELONG TO HIM/HER !!...
May 30, 2011 4:41 PM
**************
padmanabha rao said...
Of course in an emotional moment a person feels to hand over his body to a Hospital, or his Eyes. But the feelings of Family members need to be respected. The person who is dead is gone, but those who belonged to him, will not discard his remains with love. It is a controversial topic which does not come under Law, or Fundamental Rights.
May 30, 2011 8:55 PM
****************
ಮಹೇಶ ಪ್ರಸಾದ ನೀರ್ಕಜೆ said...
{one has NO RIGHT to donate the thing which DOES NOT BELONG TO HIM/HER}
- If one has not right to donate it, how come he has right to burn it! That is my basic question.. Any way, I am not interested in this kind of arguments. So I am not seeking any answers.. THank you
May 30, 2011 9:41 PM
***************
bkjagadish said...
"The most difficult requirement of becoming knowledgable is that you must give up certainty." !!!!...
*****************

ಮಂಗಳವಾರ, ಜೂನ್ 7, 2011

ಮೇಲಕ್ಕೇರಿದ ಮೈಲಾರಶರ್ಮ

     ನಾನು ಹಾಸನದ ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ಸಹೋದ್ಯೋಗಿಯಾಗಿದ್ದವರು ಮೈಲಾರಶರ್ಮ. ನನಗೆ ಸುಮಾರು ೩೫-೩೬ ವರ್ಷಗಳಿಂದ ಪರಿಚಯಸ್ಥರು. ನನಗಿಂತ ಸುಮಾರು 8-10 ವರ್ಷ ದೊಡ್ಡವರು. ಎಲ್ಲರೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿದ್ದ ಸರಳ ವ್ಯಕ್ತಿ, ಸಂಪ್ರದಾಯಸ್ಥ. ನಿವೃತ್ತರಾದ ಮೇಲೆ ಪೂಜೆ, ಪುನಸ್ಕಾರ, ತೀರ್ಥಕ್ಷೇತ್ರಗಳಿಗೆ ಪ್ರವಾಸ ಮಾಡಿಕೊಂಡಿದ್ದವರು. ಅವರು ದಿನಾಂಕ ೨೭-೦೫-೨೦೧೧ರ ಬೆಳಿಗ್ಗೆ ವಿಧಿವಶರಾದರು. ನನಗೆ ಆಶ್ಚರ್ಯ ಮತ್ತು ಸಂತೋಷದ ವಿಷಯವಾಗಿ ತಿಳಿದದ್ದೇನೆಂದರೆ ಅವರ ದೇಹವನ್ನು ಹಾಸನದ ಮೆಡಿಕಲ್ ಕಾಲೇಜಿಗೆ ದಾನವಾಗಿ ನೀಡಿದ್ದು. ಅವರ ಕಣ್ಣುಗಳೂ ಸಹ ಉಪಯೋಗಕ್ಕೆ ಬಂದದ್ದು. ಅವರು ನಿಧನಾನಂತರ ತಮ್ಮ ದೇಹವನ್ನು ಮತ್ತು ಕಣ್ಣುಗಳನ್ನು ದಾನ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದರಂತೆ. ಅವರ ಇಚ್ಛೆಯನ್ನು ಅವರ ಕುಟುಂಬದವರು ನೆರವೇರಿಸಿದ್ದೂ ಸಹ ಒಂದು ಒಳ್ಳೆಯ ಬೆಳವಣಿಗೆಯಾಗಿ ನನಗೆ ಕಂಡಿತು. ಮೈಲಾರಶರ್ಮ, ನೀವು ಧನ್ಯ, ನಿಮ್ಮ ಕುಟುಂಬದವರೂ ಧನ್ಯರು. ನಿಮ್ಮ ಈ ಕೆಲಸ ಇತರರಿಗೆ ಮಾರ್ಗದರ್ಶಿಯಾಗಿದೆ. ನಿಮಗೆ ನನ್ನ ನಮಸ್ಕಾರಗಳು.
     ದೇಹದಲ್ಲಿ ಪ್ರಾಣವಿರುವವರೆಗೂ ದೇಹಕ್ಕೆ ಅರ್ಥವಿರುತ್ತದೆ. ನಂತರದಲ್ಲಿ ಅದು ವ್ಯಕ್ತಿಯೆಂದು ಗುರುತಿಸಲ್ಪಡದೆ ವ್ಯಕ್ತಿಯ ಹೆಣವೆಂದು ಕರೆಯಲ್ಪಡುತ್ತದೆ. ಸತ್ತ ನಂತರದಲ್ಲಿ ಜನರು ಹೆಣವನ್ನು ಸುಡುವುದೋ, ಹೂಳುವುದೋ, ಇತ್ಯಾದಿ ತಮ್ಮ ಸಂಪ್ರದಾಯಗಳಿಗನುಸಾರವಾಗಿ ಮಾಡುತ್ತಾರೆ. ಹಿಂದೂಗಳು ಪುನರ್ಜನ್ಮವನ್ನು ನಂಬುತ್ತಾರೆ. ಭಗವದ್ಗೀತೆಯಲ್ಲಿ, ವೇದದ ಉಲ್ಲೇಖಗಳಲ್ಲಿ ತಿಳಿಸಲ್ಪಟ್ಟಿರುವ ಪ್ರಕಾರ ಆತ್ಮ ಅವಿನಾಶಿ, ಅನಂತ. ಮರಣಾನಂತರ ಆತ್ಮ ಇನ್ನೊಂದು ಜೀವಿಯಾಗಿ ಜನ್ಮ ತಾಳುತ್ತದೆ. ಹಳೆಯ, ಹರಿದ ಅಂಗಿಯನ್ನು ತೊರೆದು ಹೊಸ ಅಂಗಿಯನ್ನು ತೊಡುವಂತೆ ಆತ್ಮ ಜೀರ್ಣ ಶರೀರ ತೊರೆದು ಇನ್ನೊಂದು ಶರೀರಧಾರಣೆ ಮಾಡುತ್ತದೆ ಎಂಬುದು ಪ್ರಚಲಿತ ನಂಬಿಕೆ. ಮೃತ ಶರೀರವನ್ನು ಉತ್ತರಕ್ರಿಯಾಕರ್ಮಗಳಿಂದ ಪಂಚಭೂತಗಳಲ್ಲಿ ಲೀನಗೊಳಿಸಲಾಗುತ್ತದೆ. ಆತ್ಮ ಅವಿನಾಶಿಯಾದ್ದರಿಂದ ಸಂಬಂಧಿಸಿದ ವ್ಯಕ್ತಿ ಅಪೇಕ್ಷೆ ಪಟ್ಟಿದ್ದಲ್ಲಿ ಅದನ್ನು ಅವನ ಇಚ್ಛೆಯಂತೆ ಆತನ ಮೃತಶರೀರವನ್ನು ವಿಲೇವಾರಿ ಮಾಡಿದರೆ ಅದರಲ್ಲಿ ತಪ್ಪಿಲ್ಲವೆಂದು ನನ್ನ ಅನಿಸಿಕೆ. ಆತ್ಮದ ಸದ್ಗತಿ ಕೋರಿ ಮಾಡುವ ಇತರ ಕರ್ಮಗಳನ್ನು ಸಂಬಂಧಿಕರು ಅವರು ಬಯಸಿದಲ್ಲಿ ಮಾಡಿಕೊಳ್ಳಬಹುದು. ಯಾವುದೇ ವ್ಯಕ್ತಿಗೆ ಆತನ ಕರ್ಮಾನುಸಾರ ಫಲಗಳು ಸಿಕ್ಕುವುದೆಂಬುದು ತಿಳಿದವರು ಹೇಳುವರು. ಹೀಗಿರುವಾಗ ಅವನಿಗೆ ಅವನ ಮರಣದ ನಂತರ ಇತರರು ಒಳ್ಳೆಯ ಫಲ ದೊರೆಯುವಂತೆ ಮಾಡುವುದು ಹೇಗೆ ಸಾಧ್ಯ? ಕೇಳಿದ ಉಪನ್ಯಾಸಗಳು, ಓದಿದ ಕೆಲವು ಗ್ರಂಥಗಳು, ಸಂಸ್ಕಾರವಶಾತ್ ಹೊಂದಿರುವ ಅಭಿಪ್ರಾಯಗಳು ಕಾರಣವಾಗಿ ಮೂಡಿದ ಕೆಲವು ಮುಕ್ತಕಗಳನ್ನು ತಮ್ಮ ಮುಂದಿಟ್ಟಿರುವೆ:

ತಾಯಿಯ ಸ್ವತ್ತಲ್ಲ ತಂದೆಯ ಸ್ವತ್ತಲ್ಲ
ಪತ್ನಿಯ ಸ್ವತ್ತಲ್ಲ ಮಕ್ಕಳ ಸ್ವತ್ತಲ್ಲ |
ಮಿತ್ರರ ಸ್ವತ್ತಲ್ಲ ತನ್ನದಲ್ಲವೆ ಅಲ್ಲ
ಶರೀರವಿದಾರ ಸ್ವತ್ತು ಗೊತ್ತಿಲ್ಲ ಮೂಢ ||

ಪಂಚಭೂತಗಳಿಂದಾದುದೀ ಮಲಿನ ದೇಹ
ಹೊಲಸು ತುಂಬಿರುವ ಕೊಳಕು ಚರ್ಮದ ಚೀಲ |
ಬಣ್ಣಬಣ್ಣದ ಬಟ್ಟೆಯಲಿ ಮುಚ್ಚುವರು ಕೊಳಕ
ಇಂತಪ್ಪ ದೇಹವನು ನಾನೆನಲೆ ಮೂಢ ||

ತನುವು ಸುಂದರವೆಂದು ಉಬ್ಬದಿರು ಮನುಜ
ಹೊಳೆವ ಚರ್ಮದೊಳಗಿಹುದು ಹೊಲಸು |
ತನುವಿನೊಳಿಲ್ಲ ಬಣ್ಣದೊಳಿಲ್ಲ ಚೆಲುವು ಹೊರಗಿಲ್ಲ
ಒಳಗಿನ ಗುಣದಲ್ಲಿ ಚೆಲುವಿಹುದು ಮೂಢ ||

ದೇಹವೆಂಬುದು ಅನಂತ ಆಪತ್ತುಗಳ ತಾಣ
ಹೇಳದೆ ಕೇಳದೆ ಸಾವು ಬರುವುದು ಜಾಣ |
ದೇಹ ಚೈತನ್ಯ ಮೂಲಕೆ ಸಾವಿರದು ಕಾಣಾ
ಸಾಧು ಸಂತರ ಮಾತು ನೆನಪಿರಲಿ ಮೂಢ ||

ರಕ್ತ ಮಾಂಸ ಮೂಳೆಗಳ ತಡಿಕೆಯೀ ತನುವು
ಚೈತನ್ಯ ಒಳಗಿರೆ ತನುವರ್ಥ ಪಡೆಯುವುದು |
ದೇಹ ದೋಣಿಯಾಗಿಸಿ ಸಂಸಾರಸಾಗರವ
ದಾಂಟಿಸುವ ಅಂಬಿಗನೆ ಜೀವಾತ್ಮ ಮೂಢ ||

ಪ್ರಾಣವಿದ್ದರೆ ತ್ರಾಣ ಪ್ರಾಣದಿಂದಲೆ ನೀನು
ಪ್ರಾಣವಿರದಿರೆ ದೇಹಕರ್ಥವಿಹುದೇನು? |
ನಿನಗರ್ಥ ನೀಡಿರುವ ಜೀವಾತ್ಮನೇ ನೀನು
ನೀನಲ್ಲ ತನುವೆಂಬುದರಿಯೋ ಮೂಢ ||

ಹಿಂದೆ ಇರಲಿಲ್ಲ ಮುಂದೆ ಇರದೀ ದೇಹ
ಈಗಿರುವ ದೇಹಕರ್ಥ ಬಂದುದು ಹೇಗೆ |
ಶುದ್ಧ ಬುದ್ಧಿಯಲಿ ನೋಡೆ ತಿಳಿದೀತು ನಿನಗೆ
ಅಂತರಾತ್ಮನ ಕರೆಯು ಕೇಳಿಪುದು ಮೂಢ ||

ಪರಮಾತ್ಮ ರಚಿಸಿಹನು ನವರಸದರಮನೆಯ
ನಡೆದಾಡುವೀ ಮಹಲಿನರಸ ಜೀವಾತ್ಮ |
ಬುದ್ಧಿಯದು ಮಂತ್ರಿ ಮನವು ಸೇನಾಧಿಪತಿ
ಇಂದ್ರಿಯಗಳು ಕಾವಲಿಗಿಹವು ಮೂಢ ||

ನೀರು ಹರಿಯುವುದು ಬೆಂಕಿ ಸುಡುವುದು
ಬಾಲನವನಂತ್ಯದಲಿ ಮುಪ್ಪಡರಿ ಕುಗ್ಗುವನು |
ಚಣಚಣಕೆ ತನುವು ಬದಲಾಗುತಿಹುದು
ಬದಲಾಗುವುದೆ ತನುಗುಣವು ಮೂಢ ||

ತನುವು ನೀನಲ್ಲವೆನೆ ಯಾವುದದು ನಿನದು?
ಆ ಜಾತಿ ಈ ಜಾತಿ ನಿನದಾವುದದು ಜಾತಿ? |
ಬಸವಳಿಯದಿರಳಿವ ದೇಹದಭಿಮಾನದಲಿ
ಜೀವರಹಸ್ಯವನರಿತವನೆ ಜ್ಞಾನಿ ಮೂಢ ||

ಜೀವಿಗಳಿವರು ಎಲ್ಲಿಂದ ಬಂದವರು
ಬಂದದ್ದಾಯಿತು ಮತ್ತೆಲ್ಲಿ ಹೋಗುವರು |
ಎಲ್ಲಿಂದ ಬಂದಿಹರಲ್ಲಿಗೇ ಹೋಗುವರು
ಕೆಲದಿನ ನಮ್ಮೊಡನಿರುವರು ಮೂಢ ||

ಅರಿತವರು ಹೇಳಿಹರು ಅಚ್ಚರಿಯ ಸಂಗತಿಯ
ಆತ್ಮಕ್ಕೆ ಅಳಿವಿಲ್ಲ ಹುಟ್ಟು ಸಾವುಗಳಿಲ್ಲ |
ಬದಲಾಗದು ಬೆಳೆಯದು ನಾಶವಾಗದು
ಚಿರಂಜೀವ ನಿತ್ಯ ಶಾಶ್ವತವು ಮೂಢ ||

ಕಾಣಿಸದು ಕಣ್ಣಿಗೆ ಕಿವಿಗೆ ಕೇಳಿಸದು
ಮುಟ್ಟಲಾಗದು ಕರ ತಿಳಿಯದು ಮನ |
ಬಣ್ಣಿಸಲು ಸಿಗದು ಪ್ರಮಾಣಕೆಟುಕದು
ಅವ್ಯಕ್ತ ಆತ್ಮದರಿವು ಸುಲಭವೆ ಮೂಢ ||

ಕಾಣುವುದು ನಿಜವಲ್ಲ ಕಾಣದಿರೆ ಸುಳ್ಳಲ್ಲ
ತಿಳಿದದ್ದು ನಿಜವಲ್ಲ ತಿಳಿಯದಿರೆ ಸುಳ್ಳಲ್ಲ |
ಕೇಳುವುದು ನಿಜವಲ್ಲ ಕೇಳದಿರೆ ಸುಳ್ಳಲ್ಲ
ಆತ್ಮಾನಾತ್ಮರರಿವು ಅವನೆ ಬಲ್ಲ ಮೂಢ ||

ಅಚ್ಚರಿಯು ಅಚ್ಚರಿಯು ಏನಿದಚ್ಚರಿಯು
ಆತ್ಮವಿದು ಅಚ್ಚರಿಯು ಹೇಳಲಚ್ಚರಿಯು |
ಕೇಳಲಚ್ಚರಿಯು ಅರಿಯಲಚ್ಚರಿಯು
ಆತ್ಮವನರಿಯದಿಹದಚ್ಚರಿಯು ಮೂಢ ||

ಭೂಮಿಯೊಂದಿರಬಹುದು ಮಣ್ಣಿನ ಗುಣ ಭಿನ್ನ
ಜಲವೊಂದಿರಬಹುದು ಜಲದಗುಣ ಭಿನ್ನ |
ಜ್ಯೋತಿಯೊಂದಿರಬಹುದು ಪ್ರಕಾಶ ಭಿನ್ನ
ಭಿನ್ನದೀ ಜಗದಿ ಆತ್ಮವವಿಚ್ಛಿನ್ನ ಮೂಢ ||

     ವೈಯಕ್ತಿಕವಾಗಿ ನಾನೂ ಸಹ ನನ್ನ ಮರಣಾನಂತರ ನನ್ನ ದೇಹದ ಉಪಯೋಗಕ್ಕೆ ಬರುವಂತಹ ಅಂಗಗಳನ್ನು ತೆಗೆದು ಯಾರಿಗಾದರೂ ಉಪಯೋಗಕ್ಕೆ ಬರುವಂತೆ ನೋಡಿಕೊಳ್ಳಲು ಮತ್ತು ನನ್ನ ದೇಹವನ್ನು ಸಹ ಹತ್ತಿರದ ಯಾವುದಾದರೂ ವೈದ್ಯಕೀಯ ಕಾಲೇಜಿಗೆ ದಾನ ಮಾಡುವ ಮನಸ್ಸನ್ನು ನನ್ನ ಸಂಬಂಧಿಕರು ಮಾಡಬೇಕೆಂದು ಬಯಸುತ್ತೇನೆ. ನನ್ನ ಸಂಬಂಧಿಕರಿಗಾಗಲೀ, ಮಿತ್ರರಿಗಾಗಲೀ ನಾನು ನನ್ನ ಈ ಅಭಿಪ್ರಾಯದಿಂದ ನೋವಾಗದಿರಲಿ ಎಂಬುದು ನನ್ನ ಮನದಾಳದ ಬಯಕೆ. ವಾಸ್ತವತೆ ಅರಿತಲ್ಲಿ, ಬದುಕಿನ ಮಹತ್ವ ತಿಳಿದಲ್ಲಿ ನನ್ನ ಈ ಬಯಕೆ ನಿಜವಾಗಿ ಬದುಕುವ ಬಯಕೆ ಎಂಬುದು ಅರ್ಥವಾಗಬಹುದು.
-ಕ.ವೆಂ.ನಾಗರಾಜ್.