ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಜೂನ್ 16, 2011

ಪುಟ್ಟಗೌರಿಯ ಜನ್ಮದಿನ
                                                                  ಜನ್ಮದಿನದ ಗೀತೆ
      ಮಕ್ಕಳ ಜನ್ಮದಿನದ ಆಚರಣೆ ಕುರಿತು ಈ ಹಿಂದೆ ಒಂದು ಲೇಖನ ಬರೆದಿದ್ದೆ. ಇದರ ಮುಂದುವರಿಕೆಯೆಂಬಂತೆ ದಿನಾಂಕ ೧೪-೦೬-೨೦೧೧ರಂದು ನಡೆದ ನನ್ನ ಮೊಮ್ಮಗಳು ಅಕ್ಷಯಳ ೫ನೆಯ ವರ್ಷದ ಜನ್ಮದಿನವನ್ನು ಅಳಿಯ ರಾಘವೇಂದ್ರ ಮತ್ತು ಮಗಳು ಬಿಂದು ಆಚರಿಸಿದ ಪರಿ ಕುರಿತು ಈಗ ಹೇಳುತ್ತಿರುವೆ. ಹೆಚ್.ಎಸ್.ಆರ್. ಲೇ ಔಟಿನ ೪ನೆಯ ಸೆಕ್ಟರ್, ೧೬ನೆಯ ಮುಖ್ಯರಸ್ತೆಯ ೧೫ನೆಯ ಅಡ್ಡರಸ್ತೆಯಲ್ಲಿರುವ ಸಮರ್ಥನಮ್ ಟ್ರಸ್ಟ್‌ನವರು ಅಂಗವಿಕಲರು, ಬಡ ಹಾಗೂ ಹಿಂದುಳಿದ ಮಕ್ಕಳಿಗಾಗಿ ನಡೆಸುತ್ತಿರುವ ವಸತಿ ಶಾಲೆಯ ಮಕ್ಕಳೊಂದಿಗೆ ಮಗಳ ಜನ್ಮದಿನ ಆಚರಿಸಲು ಅವರು ನಿರ್ಧರಿಸಿ ಸಂಬಂಧಿಸಿದವರೊಂದಿಗೆ ಮಾತನಾಡಿದರು. ಅದೇ ದಿನ ಹಿರಿಯರೊಬ್ಬರು ತಮ್ಮ ೪೧ನೆಯ ವಿವಾಹ ವಾರ್ಷಿಕೋತ್ಸವದ ನಿಮಿತ್ತ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿದ್ದರು. ಆದ್ದರಿಂದ ಮೊದಲು ತಾವು ಮಾಡಬೇಕೆಂದುಕೊಂಡಿದ್ದ ಊಟದ ವ್ಯವಸ್ಥೆಯನ್ನು ಕೈಬಿಟ್ಟು ಶಾಲೆಯಲ್ಲಿದ್ದ ಎಲ್ಲಾ ೧೭೦ ಮಕ್ಕಳಿಗೆ ಪ್ರತಿಯೊಬ್ಬರಿಗೂ ೨೦೦ ಪುಟಗಳ ಒಳ್ಳೆಯ ಗುಣಮಟ್ಟದ ಎರಡು ನೋಟ್ ಪುಸ್ತಕಗಳು, ಪೆನ್ನು, ಪೆನ್ಸಿಲ್ ಮತ್ತು ಎರೇಸರ್ ಗಳನ್ನು ಕೊಡಲು ತೀರ್ಮಾನಿಸಿದರು.

                                                              ಅಜ್ಜಿಯಿಂದ ಆರತಿ

     ಬೆಳಿಗ್ಗೆ ಎಂದಿನಂತೆ ಶಾಲೆಗೆ ಹೋಗಿಬಂದ ಮೊಮ್ಮಗಳು ತನ್ನ ತರಗತಿಯ ಮಕ್ಕಳಿಗೆ ಮತ್ತು ಶಾಲಾ ಶಿಕ್ಷಕರು, ಸಿಬ್ಬಂದಿಗೆ ಚಾಕೊಲೇಟು ಹಂಚಿ ಬಂದಿದ್ದಳು. ಸಾಯಂಕಾಲ ೬ ಘಂಟೆಗೆ ಅವಳಿಗೆ ಹೊಸಬಟ್ಟೆ ಹಾಕಿ ಆರತಿ ಮಾಡಿದರು. ಮನೆಯವರು ಬಿಟ್ಟರೆ ಅಲ್ಲಿ ಬೇರೆ ಯಾರೂ ಇರಲಿಲ್ಲ, ಯಾರನ್ನೂ ಆಹ್ವಾನಿಸಿರಲಿಲ್ಲ. ಬಹುಷಃ ವಾರಾಂತ್ಯದಲ್ಲಾಗಿದ್ದರೆ ಓರಗೆಯ ಮಕ್ಕಳು ಮತ್ತು ಬಂಧು-ಮಿತ್ರರನ್ನು ಆಹ್ವಾನಿಸುತ್ತಿದ್ದರೋ ಏನೋ! ಆಗ ಇದ್ದ ಮೊಮ್ಮಗಳ ಸ್ನೇಹಿತೆ ಎಂದರೆ ಮನೆಕೆಲಸದವಳ ಮಗಳು ಭೀಮಾ ಮಾತ್ರ. ಅವಳಿಗೇ ಮೊಮ್ಮಗಳು ಸಿಹಿ ಮತ್ತು ಉಡುಗೊರೆ ನೀಡಿದಳು. ನಂತರ ನಾವು ಸಮರ್ಥನಮ್ ಟ್ರಸ್ಟ್ ನಡೆಸುತ್ತಿದ್ದ ಶಾಲೆಗೆ ಸುಮಾರು ೬-೩೦ರ ವೇಳೆಗೆ ಹೋದೆವು. ಮೊದಲೇ ಕೊಟ್ಟಿದ್ದ ಬಲೂನುಗಳನ್ನು ಕಟ್ಟಿ ಶಾಲೆಯನ್ನು ಅಲಂಕರಿಸಿದ್ದರು. ಮುಂಭಾಗದಲ್ಲಿ ಬಣ್ಣದ ರಂಗೋಲಿ ಬರೆದು ಅಕ್ಷಯಳಿಗೆ ಶುಭಾಶಯ ಕೋರಿ ಬರೆದಿದ್ದರು. ಒಳಗೆ ಹೋದ ನಮಗೆ ಶಾಲೆಯ ಮಕ್ಕಳನ್ನು ಕಂಡು ಅವರ ಸ್ಥಿತಿ, ಬಡತನ ಕಂಡು ಮರುಕವಾಯಿತು. ಮುಂದೆ ಅವರಿಗೆ ಸಹಾಯವಾಗುವಂತಹ ಕೆಲಸಕ್ಕೆ ಸಹಕರಿಸಬೇಕೆಂದುಕೊಂಡೆವು. ಶಾಲೆಯ ಅಂಧ ಶಿಕ್ಷಕರೊಬ್ಬರು ಅಕ್ಷಯಳ ಜನ್ಮದಿನದ ಕುರಿತು ತಿಳಿಸಿ ಅವಳಿಗೆ ಮತ್ತು ಕುಟುಂಬದ ಎಲ್ಲರಿಗೆ ಶುಭ ಕೋರಿ ಸ್ವಾಗತಿಸಿದರು. ನನ್ನ ಮೊಮ್ಮಗಳು ಅಲ್ಲಿನ ಮಕ್ಕಳಿಗಾಗಿ ತಾನು ಕಲಿತಿದ್ದ ಎರಡು ಹಾಡು ಹೇಳಿದಳು. ಒಬ್ಬರು ಉಪಾಧ್ಯಾಯಿನಿ ಆರತಿ ಬೆಳಗಿದ ನಂತರ ಮಕ್ಕಳು ಕನ್ನಡದಲ್ಲಿ ಒಂದು ಜನ್ಮದಿನದ ಶುಭಾಶಯ ಗೀತೆ ಹಾಡಿದರು. ಕೇಕು ಕತ್ತರಿಸಿ ಎಲ್ಲಾ ಮಕ್ಕಳಿಗೆ ಸಿಹಿ ಮತ್ತು ತಂದಿದ್ದ ಪುಸ್ತಕ, ಪೆನ್ನು, ಪೆನ್ಸಿಲ್ ಮತ್ತು ಎರೇಸರ್‌ಗಳನ್ನು ಹಂಚಲಾಯಿತು. ಅದನ್ನು ಪಡೆದ ಮಕ್ಕಳು ಕುತೂಹಲ ಮತ್ತು ಸಂತಸದಿಂದ ಪುಸ್ತಕ, ಪೆನ್ನುಗಳನ್ನು ನೋಡುತ್ತಿದ್ದುದು ಚೇತೋಹಾರಿಯಾಗಿತ್ತು. ಅದೇ ದಿನ ಆ ಶಾಲೆಯ ಮಧು ಎಂಬ ೫ನೆಯ ತರಗತಿಯ ಹೆಣ್ಣುಮಗುವಿನ ಜನ್ಮದಿನವೂ ಆಗಿದ್ದು ಆ ಮಗುವಿಗೂ ಶುಭ ಹಾರೈಸಲಾಯಿತು. ಆ ಮಗು ಎಲ್ಲರಿಗೂ ಚಾಕೊಲೇಟುಗಳನ್ನು ಹಂಚಿತು. ನಾವೂ ಸಂತೋಷದಿಂದ ಪಡೆದೆವು. ವಿವಾಹ ವಾರ್ಷಿಕೋತ್ಸವಕ್ಕಾಗಿ ಬಂದಿದ್ದವರ ಪೈಕಿ ಒಬ್ಬರು ಮಾತ್ರ ಆ ಮಗುವನ್ನು ಕಂಡು ಚಾಕೊಲೇಟು ಪಡೆಯಲು ನಿರಾಕರಿಸಿದ್ದು, ನನಗೆ ಅವರ ಮನೋಭಾವದ ಬಗ್ಗೆ ಅಸಹ್ಯವೆನಿಸಿತು.
     ಈ ಸಮಾರಂಭ ವಿಶೇಷವಾದದ್ದು, ಹೇಳಿಕೊಳ್ಳುವಂತಹುದು ಅಲ್ಲವಾದರೂ, ಸಮಾಜಮುಖಿಯಾಗಿದ್ದರಿಂದ ಮತ್ತು ಈರೀತಿಯ ಕಾರ್ಯಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಬರೆದಿರುವೆ. ಕೆಲವರಿಗಾದರೂ ಇದರಿಂದ ಪ್ರೇರಣೆ ಸಿಗಲಿ ಎಂಬ ಆಶಯವೂ ಬರೆಯಲು ಪ್ರೇರಿಸಿದೆ. ಸಮಾರಂಭದ ಕೆಲವು ದೃಷ್ಯಗಳು ಮತ್ತು ಒಂದು ಚಿಕ್ಕ ವಿಡಿಯೋ ನಿಮ್ಮ ಮಾಹಿತಿಗಾಗಿ ನೀಡಿರುವೆ.                                               ಶಾಲೆ ನಡೆಸುತ್ತಿರುವ ಸಮರ್ಥನಮ್ ಟ್ರಸ್ಟ್ ನ ಫಲಕ
                           
                                                       ಶಾಲೆಯ ಉಪಾಧ್ಯಾಯಿನಿಯಿಂದ ಆರತಿ
                                                             ಸಿಹಿ ವಿತರಿಸಿದ ಅಕ್ಷಯ                           
                                                  ಮಕ್ಕಳಿಗಿಲ್ಲ ಜಾತಿಬೇಧ, ಮೇಲು-ಕೀಳು ಗೊಂದಲ


***************

5 ಕಾಮೆಂಟ್‌ಗಳು:

 1. ನಮಸ್ತೆ,
  ಮೊಮ್ಮಗಳ ಜೊತೆಗೆ ಸಮಾರಂಭ ನಡೆದ ಶಾಲೆಯ ಎಲ್ಲಾ ಮಕ್ಕಳಿಗೆ ಭಗವಂತನು ಸಕಲ ಸನ್ಮಂಗಳವನ್ನುಂಟುಮಾಡಲೆಂದು ಅವನಲ್ಲಿ ಪ್ರಾರ್ಥಿಸುವೆ.ಈ ಕಾರ್ಯಕ್ರಮವು ಬೇರೆಯರಿಗೆ ಅನುಕರಣೀಯವಾಗಲಿ. ವೀಡಿಯೋ ನೋಡಲು ತುಂಬಾ ಶ್ರಮ ಪಟ್ಟೆ. ಕಾರಣ ಆಮೆ ವೇಗದ ಅಂತರ್ಜಾಲ.

  ಪ್ರತ್ಯುತ್ತರಅಳಿಸಿ
 2. ಮಕ್ಕಳಿಗಿಲ್ಲ ಜಾತಿಬೇಧ, ಮೇಲು-ಕೀಳು ಗೊಂದಲ...ತುಂಬಾ ಸತ್ಯವಾದ ವಿಚಾರ
  ತುಂಬಾ ಸಂತೋಷದ ವಿಷಯ..ಬಡ ಮಕ್ಕಳ ಜೊತೆ ಹೊಸ ರೀತಿಯಲ್ಲಿ ನಿಮ್ಮ ಮೊಮ್ಮಗಳ ಜನ್ಮದಿನ ಆಚರಿಸಿದ ಬಗೆ..

  ಒಳ್ಳೆದಾಗಲಿ..

  ನಿಮ್ಮವ,
  ರಾಘು.

  ಪ್ರತ್ಯುತ್ತರಅಳಿಸಿ
 3. ಧನ್ಯವಾದಗಳು, ರಾಘುರವರೇ. ಕವಿಮನಕ್ಕೆ ಪ್ರವೇಶಿಸಿದ್ದಕ್ಕೆ ವಂದಿಸುವೆ.
  ಮೆಚ್ಚುಗೆಗಾಗಿ ಮಿತ್ರ ಶ್ರೀಧರರಿಗೂ ವಂದನೆಗಳು.
  -ಕ.ವೆಂ.ನಾಗರಾಜ್.

  ಪ್ರತ್ಯುತ್ತರಅಳಿಸಿ
 4. ನಾಗರಾಜರೇ, ಕೆಲವು ಸಹೃದಯಿಗಳು ಈ ಥರದ ಪ್ರಯೋಗಗಳನ್ನು ಆಗಾಗ ನಡೆಸುತ್ತಿದ್ದಾರೆ. ತಮ್ಮ ಈ ಪ್ರಯತ್ನ ಅನುಕರಣೀಯ, ಪುಟ್ಟಿ ಗೌರಿಗೆ ’ಶತಮಾನಂ ಭವತಿ’ ಮತ್ತು ಉಜ್ವಲ ಭವಿಷ್ಯ ಹಾರೈಸುತ್ತೇನೆ, ಧನ್ಯವಾದಗಳು

  ಪ್ರತ್ಯುತ್ತರಅಳಿಸಿ
 5. ನಿಮ್ಮ ಮೆಚ್ಚುಗೆಗೆ ವಂದಿಸುವೆ, ಭಟ್ಟರೇ.
  -ಕ.ವೆಂ.ನಾಗರಾಜ್.

  ಪ್ರತ್ಯುತ್ತರಅಳಿಸಿ