ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಜೂನ್ 7, 2011

ಮೇಲಕ್ಕೇರಿದ ಮೈಲಾರಶರ್ಮ

     ನಾನು ಹಾಸನದ ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ಸಹೋದ್ಯೋಗಿಯಾಗಿದ್ದವರು ಮೈಲಾರಶರ್ಮ. ನನಗೆ ಸುಮಾರು ೩೫-೩೬ ವರ್ಷಗಳಿಂದ ಪರಿಚಯಸ್ಥರು. ನನಗಿಂತ ಸುಮಾರು 8-10 ವರ್ಷ ದೊಡ್ಡವರು. ಎಲ್ಲರೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿದ್ದ ಸರಳ ವ್ಯಕ್ತಿ, ಸಂಪ್ರದಾಯಸ್ಥ. ನಿವೃತ್ತರಾದ ಮೇಲೆ ಪೂಜೆ, ಪುನಸ್ಕಾರ, ತೀರ್ಥಕ್ಷೇತ್ರಗಳಿಗೆ ಪ್ರವಾಸ ಮಾಡಿಕೊಂಡಿದ್ದವರು. ಅವರು ದಿನಾಂಕ ೨೭-೦೫-೨೦೧೧ರ ಬೆಳಿಗ್ಗೆ ವಿಧಿವಶರಾದರು. ನನಗೆ ಆಶ್ಚರ್ಯ ಮತ್ತು ಸಂತೋಷದ ವಿಷಯವಾಗಿ ತಿಳಿದದ್ದೇನೆಂದರೆ ಅವರ ದೇಹವನ್ನು ಹಾಸನದ ಮೆಡಿಕಲ್ ಕಾಲೇಜಿಗೆ ದಾನವಾಗಿ ನೀಡಿದ್ದು. ಅವರ ಕಣ್ಣುಗಳೂ ಸಹ ಉಪಯೋಗಕ್ಕೆ ಬಂದದ್ದು. ಅವರು ನಿಧನಾನಂತರ ತಮ್ಮ ದೇಹವನ್ನು ಮತ್ತು ಕಣ್ಣುಗಳನ್ನು ದಾನ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದರಂತೆ. ಅವರ ಇಚ್ಛೆಯನ್ನು ಅವರ ಕುಟುಂಬದವರು ನೆರವೇರಿಸಿದ್ದೂ ಸಹ ಒಂದು ಒಳ್ಳೆಯ ಬೆಳವಣಿಗೆಯಾಗಿ ನನಗೆ ಕಂಡಿತು. ಮೈಲಾರಶರ್ಮ, ನೀವು ಧನ್ಯ, ನಿಮ್ಮ ಕುಟುಂಬದವರೂ ಧನ್ಯರು. ನಿಮ್ಮ ಈ ಕೆಲಸ ಇತರರಿಗೆ ಮಾರ್ಗದರ್ಶಿಯಾಗಿದೆ. ನಿಮಗೆ ನನ್ನ ನಮಸ್ಕಾರಗಳು.
     ದೇಹದಲ್ಲಿ ಪ್ರಾಣವಿರುವವರೆಗೂ ದೇಹಕ್ಕೆ ಅರ್ಥವಿರುತ್ತದೆ. ನಂತರದಲ್ಲಿ ಅದು ವ್ಯಕ್ತಿಯೆಂದು ಗುರುತಿಸಲ್ಪಡದೆ ವ್ಯಕ್ತಿಯ ಹೆಣವೆಂದು ಕರೆಯಲ್ಪಡುತ್ತದೆ. ಸತ್ತ ನಂತರದಲ್ಲಿ ಜನರು ಹೆಣವನ್ನು ಸುಡುವುದೋ, ಹೂಳುವುದೋ, ಇತ್ಯಾದಿ ತಮ್ಮ ಸಂಪ್ರದಾಯಗಳಿಗನುಸಾರವಾಗಿ ಮಾಡುತ್ತಾರೆ. ಹಿಂದೂಗಳು ಪುನರ್ಜನ್ಮವನ್ನು ನಂಬುತ್ತಾರೆ. ಭಗವದ್ಗೀತೆಯಲ್ಲಿ, ವೇದದ ಉಲ್ಲೇಖಗಳಲ್ಲಿ ತಿಳಿಸಲ್ಪಟ್ಟಿರುವ ಪ್ರಕಾರ ಆತ್ಮ ಅವಿನಾಶಿ, ಅನಂತ. ಮರಣಾನಂತರ ಆತ್ಮ ಇನ್ನೊಂದು ಜೀವಿಯಾಗಿ ಜನ್ಮ ತಾಳುತ್ತದೆ. ಹಳೆಯ, ಹರಿದ ಅಂಗಿಯನ್ನು ತೊರೆದು ಹೊಸ ಅಂಗಿಯನ್ನು ತೊಡುವಂತೆ ಆತ್ಮ ಜೀರ್ಣ ಶರೀರ ತೊರೆದು ಇನ್ನೊಂದು ಶರೀರಧಾರಣೆ ಮಾಡುತ್ತದೆ ಎಂಬುದು ಪ್ರಚಲಿತ ನಂಬಿಕೆ. ಮೃತ ಶರೀರವನ್ನು ಉತ್ತರಕ್ರಿಯಾಕರ್ಮಗಳಿಂದ ಪಂಚಭೂತಗಳಲ್ಲಿ ಲೀನಗೊಳಿಸಲಾಗುತ್ತದೆ. ಆತ್ಮ ಅವಿನಾಶಿಯಾದ್ದರಿಂದ ಸಂಬಂಧಿಸಿದ ವ್ಯಕ್ತಿ ಅಪೇಕ್ಷೆ ಪಟ್ಟಿದ್ದಲ್ಲಿ ಅದನ್ನು ಅವನ ಇಚ್ಛೆಯಂತೆ ಆತನ ಮೃತಶರೀರವನ್ನು ವಿಲೇವಾರಿ ಮಾಡಿದರೆ ಅದರಲ್ಲಿ ತಪ್ಪಿಲ್ಲವೆಂದು ನನ್ನ ಅನಿಸಿಕೆ. ಆತ್ಮದ ಸದ್ಗತಿ ಕೋರಿ ಮಾಡುವ ಇತರ ಕರ್ಮಗಳನ್ನು ಸಂಬಂಧಿಕರು ಅವರು ಬಯಸಿದಲ್ಲಿ ಮಾಡಿಕೊಳ್ಳಬಹುದು. ಯಾವುದೇ ವ್ಯಕ್ತಿಗೆ ಆತನ ಕರ್ಮಾನುಸಾರ ಫಲಗಳು ಸಿಕ್ಕುವುದೆಂಬುದು ತಿಳಿದವರು ಹೇಳುವರು. ಹೀಗಿರುವಾಗ ಅವನಿಗೆ ಅವನ ಮರಣದ ನಂತರ ಇತರರು ಒಳ್ಳೆಯ ಫಲ ದೊರೆಯುವಂತೆ ಮಾಡುವುದು ಹೇಗೆ ಸಾಧ್ಯ? ಕೇಳಿದ ಉಪನ್ಯಾಸಗಳು, ಓದಿದ ಕೆಲವು ಗ್ರಂಥಗಳು, ಸಂಸ್ಕಾರವಶಾತ್ ಹೊಂದಿರುವ ಅಭಿಪ್ರಾಯಗಳು ಕಾರಣವಾಗಿ ಮೂಡಿದ ಕೆಲವು ಮುಕ್ತಕಗಳನ್ನು ತಮ್ಮ ಮುಂದಿಟ್ಟಿರುವೆ:

ತಾಯಿಯ ಸ್ವತ್ತಲ್ಲ ತಂದೆಯ ಸ್ವತ್ತಲ್ಲ
ಪತ್ನಿಯ ಸ್ವತ್ತಲ್ಲ ಮಕ್ಕಳ ಸ್ವತ್ತಲ್ಲ |
ಮಿತ್ರರ ಸ್ವತ್ತಲ್ಲ ತನ್ನದಲ್ಲವೆ ಅಲ್ಲ
ಶರೀರವಿದಾರ ಸ್ವತ್ತು ಗೊತ್ತಿಲ್ಲ ಮೂಢ ||

ಪಂಚಭೂತಗಳಿಂದಾದುದೀ ಮಲಿನ ದೇಹ
ಹೊಲಸು ತುಂಬಿರುವ ಕೊಳಕು ಚರ್ಮದ ಚೀಲ |
ಬಣ್ಣಬಣ್ಣದ ಬಟ್ಟೆಯಲಿ ಮುಚ್ಚುವರು ಕೊಳಕ
ಇಂತಪ್ಪ ದೇಹವನು ನಾನೆನಲೆ ಮೂಢ ||

ತನುವು ಸುಂದರವೆಂದು ಉಬ್ಬದಿರು ಮನುಜ
ಹೊಳೆವ ಚರ್ಮದೊಳಗಿಹುದು ಹೊಲಸು |
ತನುವಿನೊಳಿಲ್ಲ ಬಣ್ಣದೊಳಿಲ್ಲ ಚೆಲುವು ಹೊರಗಿಲ್ಲ
ಒಳಗಿನ ಗುಣದಲ್ಲಿ ಚೆಲುವಿಹುದು ಮೂಢ ||

ದೇಹವೆಂಬುದು ಅನಂತ ಆಪತ್ತುಗಳ ತಾಣ
ಹೇಳದೆ ಕೇಳದೆ ಸಾವು ಬರುವುದು ಜಾಣ |
ದೇಹ ಚೈತನ್ಯ ಮೂಲಕೆ ಸಾವಿರದು ಕಾಣಾ
ಸಾಧು ಸಂತರ ಮಾತು ನೆನಪಿರಲಿ ಮೂಢ ||

ರಕ್ತ ಮಾಂಸ ಮೂಳೆಗಳ ತಡಿಕೆಯೀ ತನುವು
ಚೈತನ್ಯ ಒಳಗಿರೆ ತನುವರ್ಥ ಪಡೆಯುವುದು |
ದೇಹ ದೋಣಿಯಾಗಿಸಿ ಸಂಸಾರಸಾಗರವ
ದಾಂಟಿಸುವ ಅಂಬಿಗನೆ ಜೀವಾತ್ಮ ಮೂಢ ||

ಪ್ರಾಣವಿದ್ದರೆ ತ್ರಾಣ ಪ್ರಾಣದಿಂದಲೆ ನೀನು
ಪ್ರಾಣವಿರದಿರೆ ದೇಹಕರ್ಥವಿಹುದೇನು? |
ನಿನಗರ್ಥ ನೀಡಿರುವ ಜೀವಾತ್ಮನೇ ನೀನು
ನೀನಲ್ಲ ತನುವೆಂಬುದರಿಯೋ ಮೂಢ ||

ಹಿಂದೆ ಇರಲಿಲ್ಲ ಮುಂದೆ ಇರದೀ ದೇಹ
ಈಗಿರುವ ದೇಹಕರ್ಥ ಬಂದುದು ಹೇಗೆ |
ಶುದ್ಧ ಬುದ್ಧಿಯಲಿ ನೋಡೆ ತಿಳಿದೀತು ನಿನಗೆ
ಅಂತರಾತ್ಮನ ಕರೆಯು ಕೇಳಿಪುದು ಮೂಢ ||

ಪರಮಾತ್ಮ ರಚಿಸಿಹನು ನವರಸದರಮನೆಯ
ನಡೆದಾಡುವೀ ಮಹಲಿನರಸ ಜೀವಾತ್ಮ |
ಬುದ್ಧಿಯದು ಮಂತ್ರಿ ಮನವು ಸೇನಾಧಿಪತಿ
ಇಂದ್ರಿಯಗಳು ಕಾವಲಿಗಿಹವು ಮೂಢ ||

ನೀರು ಹರಿಯುವುದು ಬೆಂಕಿ ಸುಡುವುದು
ಬಾಲನವನಂತ್ಯದಲಿ ಮುಪ್ಪಡರಿ ಕುಗ್ಗುವನು |
ಚಣಚಣಕೆ ತನುವು ಬದಲಾಗುತಿಹುದು
ಬದಲಾಗುವುದೆ ತನುಗುಣವು ಮೂಢ ||

ತನುವು ನೀನಲ್ಲವೆನೆ ಯಾವುದದು ನಿನದು?
ಆ ಜಾತಿ ಈ ಜಾತಿ ನಿನದಾವುದದು ಜಾತಿ? |
ಬಸವಳಿಯದಿರಳಿವ ದೇಹದಭಿಮಾನದಲಿ
ಜೀವರಹಸ್ಯವನರಿತವನೆ ಜ್ಞಾನಿ ಮೂಢ ||

ಜೀವಿಗಳಿವರು ಎಲ್ಲಿಂದ ಬಂದವರು
ಬಂದದ್ದಾಯಿತು ಮತ್ತೆಲ್ಲಿ ಹೋಗುವರು |
ಎಲ್ಲಿಂದ ಬಂದಿಹರಲ್ಲಿಗೇ ಹೋಗುವರು
ಕೆಲದಿನ ನಮ್ಮೊಡನಿರುವರು ಮೂಢ ||

ಅರಿತವರು ಹೇಳಿಹರು ಅಚ್ಚರಿಯ ಸಂಗತಿಯ
ಆತ್ಮಕ್ಕೆ ಅಳಿವಿಲ್ಲ ಹುಟ್ಟು ಸಾವುಗಳಿಲ್ಲ |
ಬದಲಾಗದು ಬೆಳೆಯದು ನಾಶವಾಗದು
ಚಿರಂಜೀವ ನಿತ್ಯ ಶಾಶ್ವತವು ಮೂಢ ||

ಕಾಣಿಸದು ಕಣ್ಣಿಗೆ ಕಿವಿಗೆ ಕೇಳಿಸದು
ಮುಟ್ಟಲಾಗದು ಕರ ತಿಳಿಯದು ಮನ |
ಬಣ್ಣಿಸಲು ಸಿಗದು ಪ್ರಮಾಣಕೆಟುಕದು
ಅವ್ಯಕ್ತ ಆತ್ಮದರಿವು ಸುಲಭವೆ ಮೂಢ ||

ಕಾಣುವುದು ನಿಜವಲ್ಲ ಕಾಣದಿರೆ ಸುಳ್ಳಲ್ಲ
ತಿಳಿದದ್ದು ನಿಜವಲ್ಲ ತಿಳಿಯದಿರೆ ಸುಳ್ಳಲ್ಲ |
ಕೇಳುವುದು ನಿಜವಲ್ಲ ಕೇಳದಿರೆ ಸುಳ್ಳಲ್ಲ
ಆತ್ಮಾನಾತ್ಮರರಿವು ಅವನೆ ಬಲ್ಲ ಮೂಢ ||

ಅಚ್ಚರಿಯು ಅಚ್ಚರಿಯು ಏನಿದಚ್ಚರಿಯು
ಆತ್ಮವಿದು ಅಚ್ಚರಿಯು ಹೇಳಲಚ್ಚರಿಯು |
ಕೇಳಲಚ್ಚರಿಯು ಅರಿಯಲಚ್ಚರಿಯು
ಆತ್ಮವನರಿಯದಿಹದಚ್ಚರಿಯು ಮೂಢ ||

ಭೂಮಿಯೊಂದಿರಬಹುದು ಮಣ್ಣಿನ ಗುಣ ಭಿನ್ನ
ಜಲವೊಂದಿರಬಹುದು ಜಲದಗುಣ ಭಿನ್ನ |
ಜ್ಯೋತಿಯೊಂದಿರಬಹುದು ಪ್ರಕಾಶ ಭಿನ್ನ
ಭಿನ್ನದೀ ಜಗದಿ ಆತ್ಮವವಿಚ್ಛಿನ್ನ ಮೂಢ ||

     ವೈಯಕ್ತಿಕವಾಗಿ ನಾನೂ ಸಹ ನನ್ನ ಮರಣಾನಂತರ ನನ್ನ ದೇಹದ ಉಪಯೋಗಕ್ಕೆ ಬರುವಂತಹ ಅಂಗಗಳನ್ನು ತೆಗೆದು ಯಾರಿಗಾದರೂ ಉಪಯೋಗಕ್ಕೆ ಬರುವಂತೆ ನೋಡಿಕೊಳ್ಳಲು ಮತ್ತು ನನ್ನ ದೇಹವನ್ನು ಸಹ ಹತ್ತಿರದ ಯಾವುದಾದರೂ ವೈದ್ಯಕೀಯ ಕಾಲೇಜಿಗೆ ದಾನ ಮಾಡುವ ಮನಸ್ಸನ್ನು ನನ್ನ ಸಂಬಂಧಿಕರು ಮಾಡಬೇಕೆಂದು ಬಯಸುತ್ತೇನೆ. ನನ್ನ ಸಂಬಂಧಿಕರಿಗಾಗಲೀ, ಮಿತ್ರರಿಗಾಗಲೀ ನಾನು ನನ್ನ ಈ ಅಭಿಪ್ರಾಯದಿಂದ ನೋವಾಗದಿರಲಿ ಎಂಬುದು ನನ್ನ ಮನದಾಳದ ಬಯಕೆ. ವಾಸ್ತವತೆ ಅರಿತಲ್ಲಿ, ಬದುಕಿನ ಮಹತ್ವ ತಿಳಿದಲ್ಲಿ ನನ್ನ ಈ ಬಯಕೆ ನಿಜವಾಗಿ ಬದುಕುವ ಬಯಕೆ ಎಂಬುದು ಅರ್ಥವಾಗಬಹುದು.
-ಕ.ವೆಂ.ನಾಗರಾಜ್.

1 ಕಾಮೆಂಟ್‌:

  1. Durgaprasad Menda
    ನಮ್ಮ ಸತ್ಕರ್ಮಗಳು ನಮಗೆ ಈ ಜೀವಿತದಲ್ಲಾಗಲೀ ಮುಂದಿನ ಜನ್ಮಗಳಲ್ಲಾಗಲೀ ಸತ್ಫಲವಾಗಿ ನಮ್ಮ ಕೈಸೇರುವುದು ಎಂಬುದು ಶಾಸ್ತ್ರಗಳ ಉಕ್ತಿ. ನೀವು ತಿಳಿಸಿದ ಪ್ರಕರಣದಲ್ಲಿ ಮರಣ ಹೊಂದಿದ ವ್ಯಕ್ತಿಯೇ ಸ್ವತಃ ತನ್ನ ಮರಣಾನಂತರ ತನ್ನ ದೇಹವನ್ನು ದಾನಮಾಡಬೇಕೆಂದು ಇಚ್ಚಿಸಿದ್ದ. ಹಾಗಾಗಿ ಇದರ ಸತ್ಫಲವು ಅವರಿಗೆ ತಾನಾಗಿಯೇ ಲಭಿಸುತ್ತದೆ. ಯಾಕೆಂದರೆ ಆ ಕರ್ಮದ ಹಿಂದೆ ಇದ್ದ ಇಚ್ಛೆ ಅವರದ್ದೇ ಆಗಿತ್ತು. ಅವರ ಇಚ್ಚೆಯಂತೆ ಕುಟುಂಬದವರು ಹಾಗೆ ಮಾಡಿರುತ್ತಾರೆ.
    ಅಲ್ಲದೆ ಪೂರ್ವಜರಿಗಾಗಿ ಯಾಗ ಯಜ್ಞಾದಿಗಳನ್ನು ಮಾಡಿ ಅದರ ಫಲ ಸ್ವರೂಪವಾಗಿ ಪೂರ್ವಜರು ಉನ್ನತ ಸ್ಥಾನವನ್ನು ಪಡೆದ ನಿದರ್ಶನಗಳು ಇತಿಹಾಸಗಳಲ್ಲಿ ಇವೆ. ಪಾಂಡವರು ಮಾಡಿದ ರಾಜಸೂಯಾಧ್ವರದ ಫಲವಾಗಿ ಪಾಂಡುವಿಗೆ ಸ್ವರ್ಗದಲ್ಲಿ ಉನ್ನತ ಸ್ಥಾನವು ಲಭಿಸಿತು ಎಂಬುದನ್ನು ಮಹಾಭಾರತದಲ್ಲಿ ನಾವು ಕಾಣುತ್ತೇವೆ.
    ಸತ್ತವರೆಲ್ಲರೂ ಪುನರ್ಜನ್ಮವನ್ನು ಪಡೆಯುತ್ತಾರೆ, ಎನ್ನುವುದು ಶತಪ್ರತಿಶತಃ ಸತ್ಯವಲ್ಲ.
    ಜನ್ಮ ಕರ್ಮ ಚ ಮೇ ದಿವ್ಯಂ
    ಏವಂ ಯೋ ವೇತ್ತಿ ತತ್ತ್ವತಃ
    ತ್ಯಕ್ತ್ವಾ ದೇಹಂ ಪುನರ್ಜನ್ಮ
    ನೈತಿ ಮಾಮೇತಿ ಸೋರ್ಜುನ (ಭಗವದ್ಗೀತೆ 4.9)
    ಅಂತ ಕಾಲೇಚ ಮಾಮೇವ
    ಸ್ಮರನ್ ಮುಕ್ತ್ವಾ ಕಲೇವರಂ
    ಯಃ ಪ್ರಯಾತಿ ಸ ಮದ್ಭಾವಂ
    ಯಾತಿ ನಾಸ್ತ್ಯತ್ರ ಸಂಶಯಃ (ಭಗವದ್ಗೀತೆ 8.5)
    ನಾತದ್ ಭಾಸಯತೇ ಸೂರ್ಯೋ ನ ಶಶಾಂಕೊ ನ ಪಾವಕಃ
    ಯದ್ ಗತ್ವಾ ನ ನಿವರ್ತಂತೇ ತದ್ಧಾಮ ಪರಮಂ ಮಮ (ಭಗವದ್ಗೀತೆ 15.6)
    ಹೀಗೆ ಇನ್ನೂ ಅನೇಕ ಕಡೆಗಳಲ್ಲಿ ಈ ಜನ್ಮ ಮೃತ್ಯು ಜರಾ ವ್ಯಾಧಿಗಳೆಂಬ ವಿಷ ವರ್ತುಲದಿಂದ ಹೊರನಡೆಯುವ ವಿಧಾನವನ್ನು ಸ್ವತಃ ಶ್ರೀ ಕೃಷ್ಣನೇ ಹೇಳಿದ್ದಾನೆ. ಯಾರು ಅದಕ್ಕನುಗುಣವಾಗಿ ನಡೆದುಕೊಳ್ಳುತ್ತಾರೋ ಅವರು ಪುನರ್ಜನ್ಮವನ್ನು ಹೊಂದಲಾರರು.
    ತಾವು ಬರೆದಿರುವ ಕವನ ಸಾಲುಗಳು ಅತ್ಯುತ್ತಮವಾಗಿವೆ. ಅಭಿನಂದನೆಗಳು.

    Lakshmi G Prasad
    anusaraniiya vyaktitva ,great

    Avinash Dhaded
    thats great sir.................

    Chandra Kumar
    ಎಲ್ಲ ರೂ ಶ್ರೀ ಮೈಲಾರಶರ್ಮರನ್ನು ಅನುಸರಿಸಿದರೇ ನಮ್ಮ ದೇಶದಲ್ಲಿ ಅಂಧತ್ವ ನಿವಾರ ಣೆ ಯಾಗುತ್ತ ಲ್ಲವೇ ಸಾಹೇಬರೇ. ಶ್ರೀ ಮೈಲಾರಶರ್ಮ ರು ನಿಜಕ್ಕೂ ಧನ್ಯರು.

    Srinivasa MV
    ಮೆಚ್ಚುವಂತಹ ನಡೆ. RIP.

    Rashwanth Gowda M
    Respect sir

    ಪ್ರತ್ಯುತ್ತರಅಳಿಸಿ