ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಜುಲೈ 16, 2010

ಸೇವಾ ಪುರಾಣ -1: ಇವನು ಫುಡ್ ಇನ್ಸ್ ಪೆಕ್ಟರಾ? -1

     ಅಂಚೆ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ರಾಜ್ಯ ಸರ್ಕಾರದ ಪ್ರಥಮ ದರ್ಜೆ ಗುಮಾಸ್ತರ ಹುದ್ದೆಗೆ ನಡೆದ ಕೆ.ಪಿ.ಎಸ್.ಸಿ. ಪರೀಕ್ಷೆ ಕಟ್ಟಿ ಉತ್ತೀರ್ಣನಾಗಿದ್ದು ಕಂದಾಯ ಇಲಾಖೆಗೆ ನಿಯೋಜಿಸಲ್ಪಟ್ಟಿದ್ದೆ. ಹಾಸನ ಜಿಲ್ಲಾಧಿಕಾರಿಯವರ ಕಛೇರಿಯಿಂದ ಪ್ರಥಮ ದರ್ಜೆ ಆಹಾರ ನಿರೀಕ್ಷಕ (ಫುಡ್ ಇನ್ಸ್ ಪೆಕ್ಟರ್)ನಾಗಿ ನೇಮಕಾತಿ ಆದೇಶ ಬಂದಾಗ ಅಂಚೆ ಇಲಾಖೆ ಸೇವೆಗೆ ವಿದಾಯ ಹೇಳಿ 03-05-1973ರಲ್ಲಿ ಹಾಸನ ಜಿಲ್ಲಾಧಿಕಾರಿಯವರ ಮುಂದೆ ಕರ್ತವ್ಯಕ್ಕೆ ಹಾಜರಾದೆ. ಅವರು "ಫುಡ್ ಅಸಿಸ್ಟೆಂಟ್ ಹತ್ತಿರ ರಿಪೋರ್ಟ್ ಮಾಡಿಕೋ ಹೋಗು" ಎಂದರು. ನನ್ನನ್ನು ಅವರು ಏಕವಚನದಲ್ಲಿ ಮಾತನಾಡಿಸಿದಾಗ ಇರುಸುಮುರುಸಾಗಿದ್ದು ಸತ್ಯ. ಫುಡ್ ಅಸಿಸ್ಟೆಂಟರವರಲ್ಲಿ ವರದಿ ಮಾಡಿಕೊಂಡು ಪರಿಚಯಿಸಿಕೊಂಡೆ. ರಂಗು ರಂಗಿನ ಸೇವಾ ಯಾತ್ರೆಗ ಚಾಲನೆ ಸಿಕ್ಕಿತು. ನಾನಾಗ 21 ವರ್ಷದ ತರುಣನಾಗಿದ್ದು ಹೇಳಿಕೊಳ್ಳುವಂತಹ ಮೈಕಟ್ಟಿರದೆ ತೆಳ್ಳಗಿದ್ದರಿಂದ ನನ್ನ ಸ್ನೇಹಿತರು ನನ್ನನ್ನು "ಇವನು ಫುಡ್ ಇನ್ಸ್ ಪೆಕ್ಟರಾ? ಫುಡ್ ಇನ್ಸ್ ಪೆಕ್ಟರಿಗೇ ಫುಡ್ಡಿಲ್ಲ" ಎಂದು ಛೇಡಿಸುತ್ತಿದ್ದರು.
     'ಕಛೇರಿಯಲ್ಲಿದ್ದು ಗುಮಾಸ್ತರ ಬಳಿ ಹೋಗಿ ಕೆಲಸ ಕಲಿತುಕೋ' ಎಂದ ಸಾಹೇಬರ ಮಾತಿನಂತೆ ಕಛೇರಿಯ ಹಳೆಯ, ಹಿರಿಯ ಗುಮಾಸ್ತರ ಬಳಿಗೆ ಹೋದರೆ ಯಾರೂ ಸರಿಯಾಗಿ ಮಾತನಾಡಿಸಲೇ ಇಲ್ಲ. ನಾನು ಅವರ ಟೇಬಲ್ ಹತ್ತಿರ ನಿಂತಿದ್ದರೆ ಅವರು ನನ್ನನ್ನು ಗಮನಿಸದೆ ಅವರ ಪಾಡಿಗೆ ಅವರು ಕೆಲಸ ಮಾಡಿಕೊಂಡಿರುತ್ತಿದ್ದರು. ಒಂದೆರಡು ದಿನದ ನಂತರ ಒಬ್ಬ ಗುಮಾಸ್ತರಿಗೆ ಕರುಣೆ ಬಂದು ನನಗೆ ಒಂದು ದಪ್ಪ ಪುಸ್ತಕ ನೀಡಿ ಒಂದು ರೂಲರ್ ಮತ್ತು ಪೆನ್ಸಿಲ್ಲನ್ನೂ ಕೊಟ್ಟು ಪುಸ್ತಕ ಪೂರ್ತಿ ರೂಲ್ ಹಾಕು ಎಂದು ಅಪ್ಪಣೆ ಮಾಡಿದರು. ನಾನು ಹಾಗೆಯೇ ಮಾಡಿದೆ. ಇದನ್ನು ನೋಡಿ ಇತರ ಗುಮಾಸ್ತರೂ ನನಗೆ ಇಂತಹ ಕೆಲಸಗಳನ್ನೇ ಹೇಳಲು ಪ್ರಾರಂಭಿಸಿದರು.
ರೇಶನ್ ಕಾರ್ಡು ಕದ್ದರು!
     ನಾನು ಕೆಲಸಕ್ಕೆ ಸೇರಿ ಒಂದು ತಿಂಗಳಾಗಿರಬಹುದು. ಹಾಸನ ನಗರದಲ್ಲಿ ಹೊಸ ರೇಶನ್ ಕಾರ್ಡುಗಳನ್ನು ಕೊಡುವ ಸಲುವಾಗಿ ನಗರ ಸಭೆ ಸಿಬ್ಬಂದಿಯಿಂದ ಬರೆಸಿಟ್ಟಿದ್ದ ಕಾರ್ಡುಗಳನ್ನು ತರಲು ನನ್ನನ್ನು ನಗರಸಭೆಗೆ ಕಳಿಸಿದರು. ನಾನು ಕಾರ್ಡು ಪಡೆದಿದ್ದಕ್ಕೆ ಸ್ವೀಕೃತಿ ನೀಡಿ ಬರೆದಿಟ್ಟಿದ್ದ ಸುಮಾರು 18000 ಕಾರ್ಡುಗಳನ್ನು ತಂದು ಸಾಹೇಬರ ಛೇಂಬರಿನಲ್ಲಿ ಇಟ್ಟೆ. ಕಾರ್ಡುಗಳನ್ನು ವಿತರಿಸಲು ತಂಡಗಳನ್ನು ರಚಿಸಿ ಆದೇಶಿಸಲಾಯಿತು. ಮರುದಿನ ಕಾರ್ಡುಗಳನ್ನು ತಂಡಗಳಿಗೆ ಕೊಡುವಾಗ ನೋಡಿದರೆ ಸುಮಾರು 1200 ಕಾರ್ಡುಗಳು ಕಣ್ಮರೆಯಾಗಿದ್ದವು. ಉಳಿದ ಕಾರ್ಡುಗಳನ್ನು ತಂಡಗಳಿಗೆ ಕೊಡಲಾಯಿತು. ನಾನೂ ಒಂದು ತಂಡಕ್ಕೆ ಮುಖ್ಯಸ್ಥನಾಗಿದ್ದೆ. ಕಾರ್ಡುಗಳು ಕಾಣೆಯಾದುದಕ್ಕೆ ನನ್ನ ಮೇಲೆ ಏಕೆ ಕ್ರಮ ತೆಗೆದುಕೊಳ್ಳಬಾರದು ಹಾಗೂ ಅದರ ಬೆಲೆ ರೂ. 600 ಅನ್ನು ನನ್ನಿಂದ ಏಕೆ ವಸೂಲು ಮಾಡಬಾರದೆಂದು ನನಗೆ ನೋಟೀಸು ಜಾರಿ ಮಾಡಿದರು. ನಾನು ಬೆಳಿಗ್ಗೆ 8-00 ರಿಂದ ಸಂಜೆ 5-00ರವರೆಗೆ ನನಗೆ ವಹಿಸಿದ್ದ ಬಡಾವಣೆಯ ಮನೆ ಮನೆಗಳಿಗೆ ನನಗೆ ಸಹಾಯಕನಾಗಿದ್ದ ಒಬ್ಬ ನಗರಸಭೆ ಬಿಲ್ ಕಲೆಕ್ಟರನೊಂದಿಗೆ ಹೋಗಿ ಕಾರ್ಡುಗಳನ್ನು ಕೊಡುತ್ತಿದ್ದು, ಸಾಯಂಕಾಲ ಕಛೇರಿಯಲ್ಲಿ ಕುಳಿತು ಕಳುವಾದ ಕಾರ್ಡುಗಳ ವಿವರ, ಅವು ಯಾವ ಅಂಗಡಿಗಳಿಗೆ ಸೇರಿದ್ದು, ಇತ್ಯಾದಿ ವಿವರ ಕಲೆ ಹಾಕುವ ಕೆಲಸ ಮಾಡುತ್ತಿದ್ದೆ. 3 ದಿನಗಳಲ್ಲಿ ಈ ವಿವರ ಸಿದ್ಧಪಡಿಸಿಕೊಂಡು ಸಾಹೇಬರಿಂದ 'ಈ ಕಾರ್ಡುಗಳಿಗೆ ಪರಿಶೀಲನೆಯಾಗುವವರೆಗೆ ಪಡಿತರ ಕೊಡಬಾರದು' ಎಂದು ಆದೇಶ ಮಾಡಿಸಿದೆ. ಒಂದು ತಿಂಗಳ ನಂತರ ಅಂಗಡಿಗಳಿಗೆ ಹೋಗಿ ನೋಡಿದರೆ ಆ ಕಾರ್ಡುಗಳಿಗೂ ರೇಶನ್ ಕೊಡಲಾಗಿದ್ದುದನ್ನು ಕಂಡು ಆಶ್ಚರ್ಯಪಟ್ಟೆ. ವಿಚಾರಿಸಿದಾಗ ಕಛೇರಿಯಿಂದ ಪರಿಶೀಲನೆಯಾದ ನಂತರವೇ ರೇಶನ್ ಕೊಡಲಾಯಿತೆಂದು ಉತ್ತರ ಸಿಕ್ಕಿ ನನಗೆ ಗಲಿಬಿಲಿಯಾಯಿತು. ಇನ್ನೊಂದು ಅಂಗಡಿಗೆ ಹೋದೆ. ಅಕಾಸ್ಮಾತ್ತಾಗಿ ಅಂಗಡಿಯ ಒಂದು ಮೇಲು ಹಲಗೆಯ ಬದಿಯಲ್ಲಿ ಕಾರ್ಡುಗಳ ಕಟ್ಟು ಒಂದು ನನ್ನ ಕಣ್ಣಿಗೆ ಬಿದ್ದು ತೆಗೆದು ನೋಡಿದರೆ ಅಲ್ಲಿ 70 ಕಾರ್ಡುಗಳು ಇದ್ದು ಎಲ್ಲವೂ ಕಳವಾದ ಕಾರ್ಡುಗಳ ಪೈಕಿಯವೇ ಆಗಿದ್ದವು. ಅದಕ್ಕೆ ಫುಡ್ ದೆಪ್ಯುಟಿ ತಹಸೀಲ್ದಾರರು 'ಪರಿಶೀಲಿಸಿದೆ' ಎಂದು ಬರೆದು ಸಹಿ ಹಾಕಿದ್ದರು. ಅದೇ ಸಮಯಕ್ಕೆ ಒಬ್ಬರು ಹತ್ತು ಕಾರ್ಡುಗಳನ್ನು ರೇಶನ್ ಪಡೆಯಲು ತಂದಿದ್ದು ನೋಡಿದರೆ ಅವೂ ಅಂತಹವೇ ಕಾರ್ಡುಗಳಾಗಿದ್ದವು. ಅಂಗಡಿಯವನು ಅವು ಇನ್ನೊಂದು ಅಂಗಡಿಯವರದೆಂದೂ ಅವರ ಬಳಿ ಇನ್ನೂ 70-80 ಕಾರ್ಡುಗಳು ಇವೆಯೆಂದೂ ಹೇಳಿದ. ನಾನು ತಕ್ಷಣ ಆ ಅಂಗಡಿಗೂ ಹೋಗಿ ಆ ಕಾರ್ಡುಗಳನ್ನೂ ಪಡೆದೆ. ಇನ್ನು ಕೆಲವು ಅಂಗಡಿಗಳಲ್ಲಿ ರೇಶನ್ ಕೊಡುವ ಸಮಯದಲ್ಲಿ ಕಾದಿದ್ದು ಮತ್ತಷ್ಟು ಕಾರ್ಡುಗಳನ್ನು ವಶಕ್ಕೆ ಪಡೆದೆ. ಹೀಗೆ ಕಳುವಾದ 1200 ಕಾರ್ಡುಗಳ ಪೈಕಿ ಸುಮಾರು 500 ಕಾರ್ಡುಗಳು ನನ್ನ ಕೈಗೆ ಸಿಕ್ಕಿದವು. ಆ ಕಾರ್ಡುಗಳಿಗೆ ಹಲವಕ್ಕೆ ಫುಡ್ ಡೆಪ್ಯಟಿ ತಹಸೀಲ್ದಾರ್ 'ಪರಿಶೀಲಿಸಿದೆ' ಎಂದು ಬರೆದು ಸಹಿ ಮಾಡಿದ್ದರೆ ಕೆಲವಕ್ಕೆ ಕಛೇರಿ ರೌಂಡ್ ಸೀಲು ಹಾಕಿ ಪರಿಶೀಲಿಸಿದ ಕುರಿತು ದಾಖಲಿಸಲಾಗಿತ್ತು. ನನಗೆ ಆಗ ತಿಳಿದ ಮಾಹಿತಿ ಆಘಾತಕಾರಿಯಾಗಿತ್ತು. ಕಾರ್ಡುಗಳನ್ನು ಫುಡ್ ಡೆಪ್ಯುಟಿ ತಹಸೀಲ್ದಾರ್ ಮತ್ತು ಒಬ್ಬರು ಬೆರಳಚ್ಚುಗಾರ್ತಿ ಹಣಕ್ಕಾಗಿ ಅಂಗಡಿಗಳವರಿಗೇ ಮಾರಿದ್ದರು! ಡೆಪ್ಯಟಿ ತಹಸೀಲ್ದಾರರು ಒಂದು ಸಂಜೆ ನನ್ನ ಮನೆಗೆ ಬಂದು ನನ್ನ ಕೈಹಿಡಿದು "ನಾಗರಾಜ, ಕೈ ಮುಗಿದು ಕೇಳುತ್ತೇನೆ. ಎಲ್ಲಾ ಕಾರ್ಡುಗಳನ್ನೂ ತರಿಸಿಕೊಡುತ್ತೇನೆ. ವಿಷಯ ಇಲ್ಲಿಗೇ ಮುಗಿಸಿಬಿಡು. ವರದಿ ಕೊಡಬೇಡ" ಎಂದು ಕೇಳಿಕೊಂಡಾಗ ನನಗೆ ಅಸಹ್ಯವೆನಿಸಿತು. ಬರವಣಿಗೆಯಲ್ಲಿ ವರದಿ ಕೊಡದಿದ್ದರೂ ಜಿಲ್ಲಾಧಿಕಾರಿಯವರಿಗೆ ಮೌಖಿಕವಾಗಿ ವಿಷಯ ತಿಳಿಸಿದಾಗ ಅವರಿಗೆ ಏನೂ ಅನ್ನಿಸಲಿಲ್ಲ. ಇದೆಲ್ಲಾ ಸಹಜವೆಂಬಂತೆ "ಹೋಗು, ನಿನ್ನ ಕೆಲಸ ನೋಡಿಕೋ ಹೋಗು" ಎಂದಾಗ ಪೆಚ್ಚಾದೆ. ಭ್ರಷ್ಟಾಚಾರದ ಒಂದು ಸಣ್ಣ ನಮೂನೆಯ ದರ್ಶನವಾಗಿತ್ತು. ಕಾರ್ಡುಗಳನ್ನು ವಿತರಿಸುವಾಗಲೂ ಸರಿಯಾಗಿ ವಿತರಿಸದೆ ಇದ್ದುದು, ಆ ಕಾರ್ಡುಗಳಲ್ಲೂ ಹಲವನ್ನು ಮಾರಿಕೊಂಡಿದ್ದು, ಬೇಕಾಬಿಟ್ಟಿಯಾಗಿ ಹಂಚಿದ್ದು, ಇತ್ಯಾದಿಗಳು ಜನರು ಕಛೇರಿಗೆ ಅಲೆದಾಡುವುದರಲ್ಲಿ, ದೂರಿಕೊಂಡು ಶಾಪ ಹಾಕುವುದರಲ್ಲಿ ಅಂತ್ಯ ಕಾಣುತ್ತಿತ್ತು.
(ಕಾಲಘಟ್ಟ: 1973) .... ಮುಂದುವರೆಯಲಿದೆ

3 ಕಾಮೆಂಟ್‌ಗಳು:

  1. ಅನಂತೇಶ ನೆಂಪು
    07JUL2010 10:52
    ಚೆನ್ನಾಗಿದೆ, ನಿಮ್ಮ ಅನುಭವಗಳನ್ನು ಹೀಗೇ ನಮ್ಮೊಂದಿಗೆ ಹಂಚಿಕೊಳ್ಳುತ್ತಾ ಇರಿ. ಧನ್ಯವಾದಗಳು.
    ಹರಿಹರಪುರಶ್ರೀಧರ್
    10JUL2010 11:37
    ಇದು ನಾಗರಾಜರಿಗೆ ಪ್ರತಿಕ್ರಿಯೆಯಲ್ಲ. ಅವರಿಗೆ ಗೊತ್ತಿರುವ ವಿಷಯವೇ. ಸಂಪದಿಗರಿಗೆ ಗೊತ್ತಾಗಲೆಂದು ಎರಡು ಮಾತು.೧೯೭೩ ನಾನು ಹಾಸನದಲ್ಲಿ ವ್ಯಾಸಂಗ ಮಾಡುತ್ತಿದ್ದೆ.ನಾಗರಾಜರು ಆರ್.ಎಸ್.ಎಸ್. ಕಾರ್ಯಕರ್ತರು. ನಾನೂ ಕೂಡ.ಆ ದಿನಗಳಲ್ಲಿ ಎಲ್ಲರಂತೆ ನಾಗರಾಜರೂ ಇದ್ದಿದ್ದರೆ ನಾಲ್ಕು ಮಹಲುಗಳ ಒಡೆಯರಾಗಿರಬಹುದಿತ್ತು.ಸ್ವಯಮ್ ನಿವೃತ್ತ ತಹಸಿಲ್ದಾರ್ ಗೆ ಈಗ ಓಡಾಡಲು ಒಂದು ಹಳೆಯ ಮೊಟಾರ್ ಬೈಕ್ ಇದೆ. ಕರ್ತವ್ಯದಲ್ಲಿ ಭಾರಿ ಶಿಸ್ತು. ಇವರನ್ನು ಕಂಡರೆ ರೇಶನ್ ಅಂಗಡಿಯವರಿಗೆ ಅತ್ಯಂತ ಹೆದರಿಕೆ.ಸಮಾಜದ ಕೆಲಸದಲ್ಲಿ ಅತ್ಯಂತ ಮುಂದು. ಕಳೆದ ೧೦-೧೨ ವರ್ಷಗಳಲ್ಲಿ "ಸೇವಾಭಾರತಿಯ" ಹೆಸರಲ್ಲಿ ನಾವು ಮಾಡಿರುವ ಸಾಮಾಜಿಕ ಚಟುವಟಿಕೆಗಳಬಗ್ಗೆ ಅವರು ಒಂದಿಷ್ಟು ಬರೆದರೆ ಒಳ್ಳೆಯದು.

    ಹೊಳೆ ನರಸೀಪುರ ಮಂಜುನಾಥ
    07JUL2010 11:06
    ಕವಿ ನಾಗರಾಜರೆ, ನಿಮ್ಮ ಸೇವಾಪುರಾಣದ ಮೊದಲ ಭಾಗವೇ ತು೦ಬ ರೋಚಕವಾಗಿದೆ. ಆಗ ರೇಷನ್ ಕಾರ್ಡುಗಳೆ೦ದರೆ ಬಹಳ ಬೆಲೆ ಬಾಳುವ ದಾಖಲೆಯಾಗಿತ್ತು, ಅಲ್ಲವೇ? ಹಾಗೆಯೇ ಅದರ ಜೊತೆಗೆ ಅತಿ ಹೆಚ್ಚು ಭ್ರಷ್ಟಾಚಾರ!!


    Ksraghavendranavada
    08JUL2010 9:37
    ಮೊದಲನೇ ಬಾರಿಗೆ ಭ್ರಷ್ಟಾಚಾರದ ಭೂತ ದರ್ಶನವಾದಾಗ ಅಸಹ್ಯ ಹುಟ್ಟಿಸಿದುದರ ಜೊತೆಗೆ ಕೋಪ ಬರಿಸಲಿಲ್ವೇ? ಸಹೋದ್ಯೋಗಿಗಳ ಅಸಹಕಾರ,ಇವನ್ಯಾವನೋ ಬ೦ದ ಅ೦ಥ ತಿಳ್ಕೋಳ್ಳೋದು ಎಲ್ಲಾ ಸಾಮಾನ್ಯ. ಖಾಸಗಿ ಕ್ಷೇತ್ರ್ದಲ್ಲಿ ಇದು ಇನ್ನೂ ಹೆಚ್ಚು ಎ೦ದು ನನ್ನಭಿಪ್ರಾಯ.
    ಮೊದಲ ಭಾಗದ ನಿರೂಪಣೆ ಚೆನ್ನಾಗಿದೆ. “ಫುಡ್ ಇನ್ ಸ್ಪೆಕ್ಟ್ರೀಗೇ ಫುಡ್ದಿಲ್ಲ“ ಸಾಲು ಚೆನ್ನಾಗಿದೆ. ಮು೦ದುವರೆಸಿ.. ನಿರೀಕ್ಷೆಯಲ್ಲಿ...
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    Kavinagaraj
    08JUL2010 1:05
    :-) ಹೌದು, ನಾವಡರೇ. ನೀವಂದಂತೆ ಅಸಹ್ಯ, ಕೋಪ, ಹತಾಶೆ ಸಾಮಾನ್ಯವಾಗಿತ್ತು.

    ಪ್ರತ್ಯುತ್ತರಅಳಿಸಿ
  2. 'ಶಾಮಲ'
    08JUL2010 9:49
    <"ಫುಡ್ ಅಸಿಸ್ಟೆಂಟ್ ಹತ್ತಿರ ರಿಪೋರ್ಟ್ ಮಾಡಿಕೋ ಹೋಗು" ಎಂದರು. ನನ್ನನ್ನು ಅವರು ಏಕವಚನದಲ್ಲಿ ಮಾತನಾಡಿಸಿದಾಗ ಇರುಸುಮುರುಸಾಗಿದ್ದು ಸತ್ಯ.....ಒಂದೆರಡು ದಿನದ ನಂತರ ಒಬ್ಬ ಗುಮಾಸ್ತರಿಗೆ ಕರುಣೆ ಬಂದು ನನಗೆ ಒಂದು ದಪ್ಪ ಪುಸ್ತಕ ನೀಡಿ ಒಂದು ರೂಲರ್ ಮತ್ತು ಪೆನ್ಸಿಲ್ಲನ್ನೂ ಕೊಟ್ಟು ಪುಸ್ತಕ ಪೂರ್ತಿ ರೂಲ್ ಹಾಕು ಎಂದು ಅಪ್ಪಣೆ ಮಾಡಿದರು.........ಡೆಪ್ಯಟಿ ತಹಸೀಲ್ದಾರರು ಒಂದು ಸಂಜೆ ನನ್ನ ಮನೆಗೆ ಬಂದು ನನ್ನ ಕೈಹಿಡಿದು "ನಾಗರಾಜ, ಕೈ ಮುಗಿದು ಕೇಳುತ್ತೇನೆ. ಎಲ್ಲಾ ಕಾರ್ಡುಗಳನ್ನೂ ತರಿಸಿಕೊಡುತ್ತೇನೆ. ವಿಷಯ ಇಲ್ಲಿಗೇ ಮುಗಿಸಿಬಿಡು. ವರದಿ ಕೊಡಬೇಡ" ಎಂದು ಕೇಳಿಕೊಂಡಾಗ ನನಗೆ ಅಸಹ್ಯವೆನಿಸಿತು. ಬರವಣಿಗೆಯಲ್ಲಿ ವರದಿ ಕೊಡದಿದ್ದರೂ ಜಿಲ್ಲಾಧಿಕಾರಿಯವರಿಗೆ ಮೌಖಿಕವಾಗಿ ವಿಷಯ ತಿಳಿಸಿದಾಗ ಅವರಿಗೆ ಏನೂ ಅನ್ನಿಸಲಿಲ್ಲ. ಇದೆಲ್ಲಾ ಸಹಜವೆಂಬಂತೆ "ಹೋಗು, ನಿನ್ನ ಕೆಲಸ ನೋಡಿಕೋ ಹೋಗು" ಎಂದಾಗ ಪೆಚ್ಚಾದೆ. ಭ್ರಷ್ಟಾಚಾರದ ಒಂದು ಸಣ್ಣ ನಮೂನೆಯ ದರ್ಶನವಾಗಿತ್ತು. ಕಾರ್ಡುಗಳನ್ನು ವಿತರಿಸುವಾಗಲೂ ಸರಿಯಾಗಿ ವಿತರಿಸದೆ ಇದ್ದುದು, ಆ ಕಾರ್ಡುಗಳಲ್ಲೂ ಹಲವನ್ನು ಮಾರಿಕೊಂಡಿದ್ದು, ಬೇಕಾಬಿಟ್ಟಿಯಾಗಿ ಹಂಚಿದ್ದು, ಇತ್ಯಾದಿಗಳು ಜನರು ಕಛೇರಿಗೆ ಅಲೆದಾಡುವುದರಲ್ಲಿ, ದೂರಿಕೊಂಡು ಶಾಪ ಹಾಕುವುದರಲ್ಲಿ ಅಂತ್ಯ ಕಾಣುತ್ತಿತ್ತು.>
    ಆಗಲೂ ( ೧೯೭೩) 'ಕೆಟ್ಟ' ಕಾಲವೇ ಹಾಗಿದ್ರೆ! ಅಂದ್ರೆ, ಈಗ ಕಾಲ ಕೆಟ್ಟಿಲ್ಲ, ಆಗ್ಲೇ ಕೆಟ್ಟುಹೋಗಿತ್ತು :-)
    ಕವಿನಗರಾಜ್ ಅವರೇ,
    ನಿಮ್ಮ ಅಂಚೆ ಪುರಾಣ ತುಂಬಾ ಚೆನ್ನಾಗಿತ್ತು, ಸೇವಾ ಪುರಾಣವೂ ಚೆನ್ನಾಗಿ ಪ್ರಾರಂಭವಾಗಿದೆ. ನಿಮ್ಮ ಲೇಖನಗಳನ್ನು ಓದುತ್ತ ನನಗೆ ನವರತ್ನ ರಾಮರಾಯರ 'ಕೆಲವು ನೆನಪುಗಳು' ನೆನಪಾಯಿತು. ಬರಹದ ಶೈಲಿ ಬಹಳ ಚೆನ್ನಾಗಿದೆ. ದಯವಿಟ್ಟು ಮುಂದುವರೆಸಿ.

    Kavinagaraj
    08JUL2010 1:08
    :-) ಶ್ಯಾಮಲಾರವರೇ, ನಿಮ್ಮ ಮೆಚ್ಚುಗೆ ಮುದ ನೀಡಿದೆ. ಕಾಲ ಕೆಟ್ಟದಲ್ಲ. ಜನ! ಈಗೆ ಹೆಚ್ಚು ಹೆಚ್ಚು ಕೆಡುತ್ತಿದ್ದಾರೆ ಎಂದು ನನಗೆ ಅನ್ನಿಸುತ್ತಿದೆ, ಎಲ್ಲಾ ಹಳಬರಿಗೆ ಅನ್ನಿಸುವಂತೆ!

    ಚೇತನ್ ಕೋಡುವಳ್ಳಿ
    08JUL2010 10:45
    ಚೆನ್ನಾಗಿದೆ ಸರ್, ಮನುಷ್ಯನ ಅತಿಯಾದ ಆಸೆಯೇ ಭ್ರಷ್ಟಾಚಾರಕ್ಕೆ ಮೂಲ ಕಾರಣ.

    ಆಸು ಹೆಗ್ಡೆ
    08JUL2010 11:04
    ಭ್ರಷ್ಟಾಚಾರ ಆಗಿನ್ನೂ ಅಂಬೆಗಾಲಿಕ್ಕುತ್ತಿದ್ದ ಕೂಸು... ಈಗ ಬೆಳೆದು ರಾಕ್ಷಸನಂತಾಗಿದೆ ಅಷ್ಟೇ, ಅಲ್ವೇ ನಾಗರಾಜ್? )
    - ಆಸು ಹೆಗ್ಡೆ


    ಮಹೇಶ್ ಬಾಬು
    08JUL2010 1:35
    ಅಬ್ಬಾ ಹೀಗೂ ಉಂಟೆ ಜನ? ಬ್ರಷ್ಟಾಚಾರ ಇಲ್ಲದ ಜಾಗಗಳೇ ಇಲ್ಲವೆನುಸುತ್ತಿದೆ.. ಇಂದಿನ ಪೀಳಿಗೆಯ ಯುವಕರಾದರೂ ಇದನ್ನು ಹೋಗಲಾಡಿಸಲು ಪ್ರಯತ್ನಿಸಬೇಕು... ಇಂಥಹ ಹೊಲಸು ರಾಜಕಾರಣ ಇರುವಾಗ ಇನ್ನೆಲ್ಲಿ ಸಾದ್ಯ ಎನ್ನುತ್ತಿರ? ಧನ್ಯವಾದಗಳು

    ಇದಕ್ಕೆ ಪ್ರತಿಕ್ರಿಯೆ ಸೇರಿಸಿ ಅನುಚಿತ ಪ್ರತಿಕ್ರಿಯೆ? ಇಲ್ಲಿ ಕ್ಲಿಕ್ ಮಾಡಿ

    Kavinagaraj
    08JUL2010 1:38
    ಹೌದು ಮಹೇಶ್. ಹೀಗೂ ಉಂಟೆ ಅಲ್ಲ, ಹೀಗೇ ಉಂಟು! :-)

    Vijay Pai
    08JUL2010 1:24
    ನಾಗರಾಜ ಅವರೆ..ನಿಮ್ಮ ಈ ಸರಣಿಯಿಂದ ಜಾಗತಿಕರಣದ ಮೊದಲಿನ ಆಡಳಿತಶಾಹಿಯ ಬಗ್ಗೆ ನಮಗೆ ಸಾಕಷ್ಟು ವಿಷಯಗಳು ತಿಳಿಯುವ ಸಾಧ್ಯತೆ ಇದೆ. ತಮ್ಮ ಸೇವಾ ಅವಧಿಯಲ್ಲಿ ಸಿಕ್ಕ ಪ್ರಾಮಾಣಿಕ ಅಧಿಕಾರಿಗಳ ಬಗ್ಗೆ, ಇನ್ನೀತರ ಅಪರೂಪದ ಘಟನೆಗಳ ಬಗ್ಗೆ ಓದಲು ಕಾತುರನಾಗಿದ್ದೇನೆ.
    ಧನ್ಯವಾದಗಳು..

    Kavinagaraj
    08JUL2010 1:41
    ನಿಜ, ವಿಜಯ ಪೈರವರೇ. ಹಲವು ಗಂಭೀರ ಸಂಗತಿಗಳೂ ಘಟಿಸಿದ್ದು ಬರೆಯುವ ಸಂದರ್ಭದಲ್ಲಿ ಬರೆಯುವ ಮುನ್ನ ನಿರ್ಧರಿಸಿ ಬರೆಯುವೆ. ಕೆಲವು ಘಟನೆಗಳನ್ನು ಹಲವು ಕಾರಣಗಳಿಗಾಗಿ ಬರೆಯುವುದು ಕಷ್ಟ. ಧನ್ಯವಾದಗಳು.

    ಬೆಳ್ಳಾಲ ಗೋಪೀನಾಥ ರಾವ್
    08JUL20101:33
    ಈಗಲೂ ಅದೇ ಹಾಡು ಅದೇ ರಾಗ
    ಕವಿಯವರೇ
    ಸಕತ್ತಾಗಿದೆ, ನಿಮ್ಮ ಅನುಭವ ಮತ್ತು ನಿರೂಪಣೆ
    ಧನ್ಯವಾದಗಳು

    Kavinagaraj
    08JUL2010 1:42
    :-) ಕೇಳಿದ್ದೇ ಕೇಳುವುದು ಅನ್ನುತ್ತೀರಾ? ಬೇಸರವಾದಾಗ ತಿಳಿಸಿರಿ.

    ಬೆಳ್ಳಾಲ ಗೋಪೀನಾಥ ರಾವ್
    08JUL2010 1:51
    ಅರೆರೇ ಅದಲ್ಲ ಸಾರ್, ತುಂಬಾ ಚೆನ್ನಾಗಿದೆ ನಿಮ್ಮ ಅನುಭವ ಮತ್ತು ಬರವಣಿಗೆ, ನಾನು ಹೇಳಿದ್ದು ನನ್ನ ನಿಮ್ಮ ಅನುಭವ ಒಂದೇ ಅಂತ
    ಮೇಲಿನ ಪ್ರತಿಕ್ರಿಯೆಯಲ್ಲಿ ಬಂತಲ್ಲ ಆಗಲೂ ಅದೇ ಈಗಲೂ ಅದೇ ಲಂಚ ಬ್ರಷ್ಟಾಚಾರ ಅಂತ ಅದಕ್ಕೆ ಹೇಳಿದ್ದು
    ಹರಿಹರಪುರಶ್ರೀಧರ್
    10JUL2010 11:41
    ನಾಗರಾಜ್,
    ನಿಮ್ಮ ಪ್ರಾಮಾಣಿಕ ಸೇವೆಯು ಬೇರೆಯವರಿಗೆ ದಾರಿ ದೀಪವಾಗಲಿ. ಬರೆಯಿರಿ. ಮಧ್ಯೆ ಮಧ್ಯೆ ಪ್ರವೇಶಿಸತ್ತೇನೆ.

    ಪ್ರತ್ಯುತ್ತರಅಳಿಸಿ