ಕಠಿಣ ತರಬೇತಿ
ಮೈಸೂರಿನ ನಝರಬಾದಿನಲ್ಲಿರುವ ಮೊದಲು ಮಹಾರಾಜರಿಗೆ ಸೇರಿದ್ದಾಗಿದ್ದ ಭವ್ಯ ಮಹಲಿನಲ್ಲಿ ಅಂಚೆ ತರಬೇತಿ ಕೇಂದ್ರವಿತ್ತು. ಮೂರು ತಿಂಗಳ ತರಬೇತಿ ಶಿಸ್ತುಬದ್ಧ ಮತ್ತು ಯೋಜಿತ ರೀತಿಯಲ್ಲಿ ಬೆಳಿಗ್ಗೆ 5-30ರಿಂದ ಸಾಯಂಕಾಲ 6-00ರವರೆಗೆ ನಡೆಯುತ್ತಿತ್ತು. ಶಿಕ್ಷಾರ್ಥಿಗಳು ಅಲ್ಲೇ ವಾಸವಿದ್ದು ತರಬೇತಿ ಪಡೆಯಬೇಕಾಗಿತ್ತು. ಶಾರೀರಿಕ ವ್ಯಾಯಾಮಗಳು, ವಿವಿಧ ಅಂಚೆ ಕಛೇರಿ ಕೆಲಸಕಾರ್ಯಗಳ ಕಲಿಯುವಿಕೆಯೊಂದಿಗೆ ಮಾತೃಭಾಷೆ ಹೊರತುಪಡಿಸಿ ದಕ್ಷಿಣ ಭಾರತದ ಯಾವುದಾದರೂ ಒಂದು ಭಾಷೆಯನ್ನು ನಾವು ಕಲಿಯಬೇಕಿತ್ತು.ನಾನು ತಮಿಳು ಭಾಷೆಯನ್ನು ಓದಲು ಬರೆಯಲು ಕಲಿತೆ.
ಭಾಷಾ ಜಗಳ
ತರಬೇತಿಗೆ ಬಂದಿದ್ದ 329 ಶಿಕ್ಷಾರ್ಥಿಗಳ ಪೈಕಿ 290 ತಮಿಳರು, 12 ಮಲೆಯಾಳಿಗಳು, 6 ತೆಲುಗು ಭಾಷಿಗರು ಇದ್ದು 21 ಶಿಕ್ಷಾರ್ಥಿಗಳು ಮಾತ್ರ ಕನ್ನಡದವರಾಗಿದ್ದೆವು. ಬೋಧಕರೂ ಹೆಚ್ಚಿನವರು ತಮಿಳರೇ ಆಗಿದ್ದು ನಾವು ತಮಿಳುನಾಡಿನಲ್ಲಿದ್ದೇವೇನೋ ಎಂದು ಅನ್ನಿಸುತ್ತಿತ್ತು. ಆಗಾಗ ತಮಿಳು - ಕನ್ನಡ ಭಾಷಾ ಜಗಳಗಳಾಗುತ್ತಿದ್ದವು. ನಾನು ತಮಿಳು ಭಾಷೆ ಕಲಿಯುತ್ತಿದ್ದರಿಂದ ಎರಡು ಭಾಷೆಗಳ ತುಲನೆ ಮಾಡಲು ಸುಲಭವೆನಿಸುತ್ತಿತ್ತು. ತಮಿಳು ಬೋಧಕರೊಬ್ಬರು ಬೋರ್ಡಿನ ಮೇಲೆ 'kozhikode' ಎಂದು ಬರೆದು ನನ್ನನ್ನು ಎಬ್ಬಿಸಿ ಓದಲು ಹೇಳಿದರು. ನಾನು 'ಕೋಝಿಕೋಡ್' ಎಂದು ಓದಿದಾಗ ತಮಿಳರು, ಮಲೆಯಾಳಿಗಳು ಗೊಳ್ಳೆಂದು ನಕ್ಕಿದ್ದರು. ನನಗೆ ಅದನ್ನು 'ಕೋಳಿಕೋಡ್'' ಎಂದು ಓದಬೇಕೆಂದು ಬೋಧಿಸಿದರು. ಉಚ್ಛಾರಕ್ಕೆ ತಕ್ಕಂತೆ ಬರೆಯಲು ಸಾಧ್ಯವಿದ್ದ ಕನ್ನಡ ಭಾಷೆ ಬಗ್ಗೆ ನನಗೆ ಹೆಮ್ಮೆಯಿತ್ತು. ನಾನು ನನ್ನ ತಮಿಳು ಮಿತ್ರರಿಗೆ ಆಂಗ್ಲ ಭಾಷೆಯಲ್ಲಿ 16 ಪದಗಳನ್ನು ಬರೆಯುವುದಾಗಿಯೂ, ಕನ್ನಡದಲ್ಲಿ ಅದೇ ಉಚ್ಛಾರಕ್ಕೆ ತಕ್ಕಂತೆ 16 ಪದಗಳನ್ನು ಬರೆಯುವುದಾಗಿಯೂ ಹೇಳಿ, ತಮಿಳಿನಲ್ಲಿ ಆ ಪದಗಳನ್ನು ಬರೆಯಲು ಹೇಳುತ್ತಿದ್ದೆ. ಕನ್ನಡದಲ್ಲಿನ ಕ,ಖ,ಗ,ಘ ಅಕ್ಷರಗಳ ಬದಲಿಗೆ 'ಕ್' ಎಂಬ ಒಂದೇ ಅಕ್ಷರ, ಕನ್ನಡದ ಪ,ಫ,ಬ,ಭ ಅಕ್ಷರಗಳ ಬದಲಿಗೆ 'ಪ್' ಎಂಬ ಒಂದೇ ಅಕ್ಷರ ತಮಿಳಿನಲ್ಲಿದ್ದು ಅವರಿಗೆ ಪ್ರತ್ಯೇಕ ಪದಗಳನ್ನು ಬರೆದು ತೋರಿಸಲು ಸಾಧ್ಯವಾಗುತ್ತಿರಲಿಲ್ಲ. ನಾನು ಬರೆದಿದ್ದ ಪದಗಳೆಂದರೆ "ಕಂಪ, ಖಂಪ, ಗಂಪ, ಘಂಪ, ಕಂಫ, ಖಂಫ, ಗಂಫ, ಘಂಫ, ಕಂಬ, ಖಂಬ, ಗಂಬ, ಘಂಬ, ಕಂಭ, ಖಂಭ, ಗಂಭ,ಘಂಭ"; ಈ ಪದಗಳಿಗೆ ತಮಿಳಿನಲ್ಲಿ ಕಂಪ ಎಂದು ಬರೆಯಲು ಮಾತ್ರ ಸಾಧ್ಯವಿದ್ದು ಉಚ್ಛಾರ ಮಾತ್ರ ಕಂಪ, ಗಂಬ, ಕಂಬ ಇತ್ಯಾದಿ ಹೇಳುತ್ತಿದ್ದರು.
ಮಾತನಾಡಿಸದಿದ್ದ ಹುಡುಗಿ
ಕರ್ನಾಟಕದ 21 ಶಿಕ್ಷಾರ್ಥಿಗಳ ಪೈಕಿ 19 ಉತ್ತರ ಕರ್ನಾಟಕದವರಾಗಿದ್ದು, ನಾನು ಮತ್ತು ಒಬ್ಬ ಸಂಕೇತಿ ಹುಡುಗಿ ಮಾತ್ರ ಹಾಸನದವರಾಗಿದ್ದೆವು. ನನ್ನ ಸಂಕೋಚ ಸ್ವಭಾವದಿಂದಾಗಿ ಆ ಹುಡುಗಿಯನ್ನು ತರಬೇತಿಯ ಮೂರು ತಿಂಗಳ ಅವಧಿಯಲ್ಲಿ ಒಮ್ಮೆಯೂ ಮಾತನಾಡಿಸಿರಲಿಲ್ಲ. ತರಬೇತಿಯ ನಂತರ ನನ್ನನ್ನು ಹಾಸನದ ಪ್ರಧಾನ ಕಛೇರಿಗೆ ಮತ್ತು ಆಕೆಯನ್ನು ಒಂದು ಉಪ ಅಂಚೆ ಕಛೇರಿಗೆ ನೇಮಿಸಿದಾಗಲೂ ಮಾತನಾಡಿಸಿರಲಿಲ್ಲ. ಹಾಸನದ ಪ್ರಧಾನ ಅಂಚೆ ಕಛೇರಿಯಲ್ಲಿ ಅಂಚೆ ಇನ್ಸ್ ಪೆಕ್ಟರ್ ಆಗಿದ್ದ ಸಹೋದ್ಯೋಗಿಯೊಂದಿಗೆ ಆಕೆಯ ವಿವಾಹ ಆದಾಗ 10 ಜನರೊಂದಿಗೆ 11ನೆಯವನಾಗಿ ಶುಭಾಶಯ ಹೇಳಲು ಹೋದಾಗಲೇ ಆಕೆಯನ್ನು ಪ್ರಥಮವಾಗಿ ಮಾತನಾಡಿಸಿದ್ದು ಎಂಬುದನ್ನು ನೆನೆಸಿಕೊಂಡು ನನಗೆ ನಗು ಬರುತ್ತದೆ.
ಭಾವತಂತಿ ಮೀಟಿದಾಗ
ಅಂಚೆ ತರಬೇತಿ ಕೇಂದ್ರದ ಗೀತೆಯೆಂದು ಪರಿಗಣಿಸಿದ್ದ ಹಾಡನ್ನು ಆರಿಸಿದ ಪುಣ್ಯಾತ್ಮನನ್ನು ನೆನೆಸಿಕೊಳ್ಳುತ್ತೇನೆ. ಭಗತ್ ಸಿಂಗ್ ಕುರಿತಾದ ಹಿಂದಿ ಚಲನಚಿತ್ರ "ಶಹೀದ್"ನಲ್ಲಿ ಭಗತ್ ಸಿಂಗನನ್ನು ಗಲ್ಲಿಗೇರಿಸಿದ ನಂತರ ಆತನ ಶವಯಾತ್ರೆ ನಡೆಯುತ್ತಿದ್ದ ಸಂದರ್ಭದಲ್ಲಿ ಹಿನ್ನೆಲೆಯಲ್ಲಿ ಹಾಡಲಾಗಿದ್ದ ಗೀತೆ ಅದು. ಈ ಹಾಡನ್ನು ಸಾಮೂಹಿಕವಾಗಿ ನಮ್ಮಿಂದ ಹಾಡಿಸಲಾಗುತ್ತಿತ್ತು.
ವತನ್ ಕಿ ರಾಹ ಮೇ ವತನ್ ಕಿ ನೌಜವಾನ್ ಶಹೀದ್ ಹೋ|
ಶಹೀದ್ ತೇರೆ ಮೌತ್ ಹಿ ತೇರೇ ವತನ್ ಕಿ ಜಿಂದಗಿ||
(ದೇಶಕ್ಕಾಗಿ ದೇಶದ ನವಯುವಕನೇ ಹುತಾತ್ಮನಾಗು|
ಹುತಾತ್ಮನೇ, ನಿನ್ನ ಮರಣವೇ ನಿನ್ನ ದೇಶದ ಬದುಕು||)
ಈ ರೀತಿ ಪ್ರಾರಂಭವಾಗುತ್ತಿದ್ದ ಈ ಹಾಡಿನ ಪ್ರತಿ ಸಾಲಿನಲ್ಲಿ ದೇಶಭಕ್ತಿ ಉಕ್ಕಿಸುವ, ದೇಶಕ್ಕಾಗಿ ದೇಹ ಮುಡುಪಿಡುವ, ದೇಶಕ್ಕಾಗಿ ಹೋರಾಡುವ ಪ್ರೇರಣೆ ತುಂಬಿಸಲಾಗಿತ್ತು. ಈ ಹಾಡನ್ನು ಹೇಳುವಾಗಲೆಲ್ಲಾ ನನ್ನ ಗಂಟಲು ತುಂಬಿ ಬರುತ್ತಿತ್ತು. ಭಾವಾವೇಶಕ್ಕೆ ಒಳಗಾಗುತ್ತಿದ್ದೆ. ಈ ಹಾಡನ್ನು ನಾನು ಈಗಲೂ ನಾನು ನೆನೆಸಿಕೊಳ್ಳುತ್ತಿದ್ದು, ಇದು ನನ್ನ ಮೇಲೆ ಬಹಳ ಪ್ರಭಾವ ಬೀರಿದೆ.
[ಕಾಲಘಟ್ಟ: 1971-72, ಸ್ಥಳ: ಮೈಸೂರು]
.......ಮುಂದುವರೆಯುವುದು.
Ksraghavendranavada
ಪ್ರತ್ಯುತ್ತರಅಳಿಸಿ30JUN2010 7:40
ಚೆನ್ನಾಗಿದೆ... ಮು೦ದುವರೆಸಿ, ಕವಿನಾಗರಾಜರೇ.
Komal
30JUN2010 8:10
ಸರ್ ನಿಮ್ಮ ಅನುಭವ ಚೆನ್ನಾಗಿದೆ. ಹಾಗೇ ಹಾಸ್ಯಮಯವಾಗಿದೆ.
ಗೋಪಾಲ್ ಮಾ ಕುಲಕರ್ಣಿ
02JUL2010 10:17
ಚೆನ್ನಾಗಿದೆ... ಮು೦ದುವರೆಸಿ
ನಾರಾಯಣ ಭಾಗ್ವತ
02JUL2010 9:02
ಚೆನ್ನಾಗಿದೆ ಕವಿನಾಗರಾಜ್ ರವರೆ, ವಂದನೆಗಳು.
ಬೆಳ್ಳಾಲ ಗೋಪೀನಾಥ ರಾವ್
03JUL2010 9:26
ಮಾನ್ಯ ಕವಿಗಳೇ
ತುಂಬಾ ಕುತೂಹಲ ಭರಿತವಾಗಿ ಮೂಡಿ ಬರುತ್ತಲಿದೆ ನಿಮ್ಮ ಈ ಅಂಚೆ ಪುರಾಣ
ಧನ್ಯವಾದಗಳು