ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಜುಲೈ 20, 2010

ಮೂಢ ಉವಾಚ -13

ಆರು ಅರಿಗಳನು ಅರಿಯದವರಾರಿಹರು?
ದೇವಕಾಮದ ಫಲವಲ್ಲವೇ ಚರಾಚರರು|
ನಿತ್ಯಮುಕ್ತ ಪರಮಾತ್ಮನಾಧೀನ ಕಾಮವಾದರೆ
ಕಾಮನಾಧೀನರಾಗಿಹರು ನರರು ಮೂಢ||


ಆತ್ಮನೇ ತಾನೆಂಬ ಅರಿವು ಮರೆಯಾಗಿ
ತನು-ಮನವೆ ತಾವೆಂದುಭ್ರಮಿತರಾಗಿರಲು|
ತುಂಬಿದಜ್ಞಾನದಿಂ ಜನಿಸುವುದು ಕಾಮ
ಕಾಮಫಲಿತಕ್ಕಾಗಿ ಕರ್ಮಗೈವರೋ ಮೂಢ||


ಬೇಕು ಬೇಕೆಂಬುದಕೆ ಕೊನೆಯೆಂಬುದೆಲ್ಲಿ?
ಬಯಸಿದ್ದು ಸಿಕ್ಕಲ್ಲಿ ಮತ್ತಷ್ಟು ಬೇಕು ಮತ್ತಷ್ಟು|
ಸಿಕ್ಕಲ್ಲಿ ಮಗದಷ್ಟು ಬೇಕೆಂಬುದಕೆ ಕಾರಣವು
ಕಾಮ ಅದಕಿಲ್ಲ ಪೂರ್ಣ ವಿರಾಮ ಮೂಢ||


ಹೊನ್ನು ಕಾರಣವಲ್ಲ ಹೆಣ್ಣು ಕಾರಣವಲ್ಲ
ಮಣ್ಣು ಕಾರಣವಲ್ಲ ಮನಸು ಕಾರಣವಲ್ಲ|
ಬೇಕು ಬೇಕು ಬೇಕೆಂಬ ಅನಂತಾತೃಪ್ತತೆಗೆ
ಕಾಮ ಕಾರಣವಲ್ಲದೆ ಮತ್ತೊಂದಲ್ಲ ಮೂಢ||
-ಕ.ವೆಂ.ನಾಗರಾಜ್.

1 ಕಾಮೆಂಟ್‌:

  1. Ksraghavendranavada
    21JUL2010 5:35
    ಎ೦ದಿನ೦ತೆ ಅರ್ಥಗರ್ಭಿತ.
    ನಮಸ್ಕಾರಗಳೊ೦ದಿಗೆ,

    Kavinagaraj
    21JUL2010 8:09
    ವಂದನೆಗಳು, ರಾಘವೇಂದ್ರರೇ.

    ನಾರಾಯಣ ಭಾಗ್ವತ
    21JUL2010 6:53
    ತುಂಬಾ ಅದ್ಭುತ ವಿಚಾರಗಳು.ಕವಿನಾಗರಾಜ್ ರವರೆ ವಂದನೆಗಳು ತಮಗೆ.

    Kavinagaraj
    21JUL2010 8:08
    ಭಾಗ್ವತರಿಗೆ ಧನ್ಯವಾದಗಳು.
    ಹೊಳೆ ನರಸೀಪುರ ಮಂಜುನಾಥ
    23JUL2010 5:38
    ಕವಿ ನಾಗರಾಜರೆ,ಕೊನೆಯ ಪದ್ಯದ ಮೊದಲ ಸಾಲಿನಲ್ಲಿ >>>ಹೆಣ್ಣು ಕಾರಣವಲ್ಲ>>> ಅ೦ತೀರಿ, ಕೊನೆಯ ಸಾಲಿನಲ್ಲಿ <<>>ಅ೦ತೀರಿ, ಹೆಣ್ಣು ಇಲ್ಲದೆ ಕಾಮ ಸಾಧ್ಯವೆ? ಕಾಮ ಕಾರಣವಾದರೆ ಹೆಣ್ಣೂ ಕಾರಣವಾದ೦ತಲ್ಲವೆ?

    Kavinagaraj
    23JUL2010 6:38
    ಆತ್ಮೀಯ ಮಂಜು, ಕಾಮ ಎಂಬುದು ಅರಿಷಡ್ವೈರಿಗಳಲ್ಲಿ ಮೊದಲನೆಯದು. ಕಾಮ ಎಂಬುದಕ್ಕೆ ಮೊದಲ ಅರ್ಥವೇ ಬಯಕೆ, ಆಸೆ ಎಂದು. ಲೈಂಗಿಕತೆ ಎಂಬುದು ಎರಡನೆಯ ಅರ್ಥ. ಕಾಮ ಎಂದರೆ ಬಯಸುವುದು, ಬೇಕು ಎಂಬ ಮನಸ್ಥಿತಿ. ಎಲ್ಲರೂ ಬಯಸುವ (ಕಾಮ) ನಾಲ್ಕು ಮುಖ್ಯ ಸಂಗತಿಗಳೆಂದರೆ - ಆಹಾರ,ನಿದ್ರಾ, ಅಭಯ ಮತ್ತು ಮೈಥುನ. ಹೊಟ್ಟೆಯ ಹಸಿವಿಗೆ ಆಹಾರ, ಅಯಾಸ ಪರಿಹಾರಕ್ಕೆ ನಿದ್ರೆ, ಭಯವಿಲ್ಲದ ಬದುಕಿಗಾಗಿ ಆಸರೆ/ಮನೆ, ಲೈಂಗಿಕ ಹಸಿವಿಗೆ ಮೈಥುನ! ನಾವು ಬಯಸಿದಷ್ಟೇ ಸಿಕ್ಕು ತೃಪ್ತಿ ಪಡುವುದಿಲ್ಲ. ಇನ್ನೂ ಬೇಕು, ಬೇಕು ಎಂಬ ಕಾಮ ಮುಗಿಯುವಂತಹುದಲ್ಲ. ಆದರೆ ಈಗ ಕಾಮ ಎಂದರೆ 'ಲೈಂಗಿಕತೆ' ಎಂಬ ಸೀಮಿತ ಅರ್ಥದಲ್ಲಿ ಬಳಕೆಯಾಗುತ್ತಿರುವುದರಿಂದ ಈರೀತಿಯ ಸಂದೇಹ ಸಹಜವಾಗಿ ಆಗುತ್ತದೆ. ನಿಮ್ಮ ಹಾಗೂ ಭಾಗ್ವತರ ಮುಕ್ತ ಅಭಿಪ್ರಾಯಗಳನ್ನು ಗೌರವಿಸುವೆ.

    ಹೊಳೆ ನರಸೀಪುರ ಮಂಜುನಾಥ
    23JUL2010 6:41
    ಕವಿ ನಾಗರಾಜರೆ, "ಕಾಮ"ದ ವಿಸ್ತೃತ ಅರ್ಥವನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು.

    Kavinagaraj
    23JUL2010 6:48
    :-)

    Kavinagaraj
    24JUL2010 9:08
    ಪ್ರತಿಕ್ರಿಯಿಸುವ ಭರದಲ್ಲಿ ಮೇಲಿನ ಟಿಪ್ಪಣಿಯಲ್ಲಿ 'ಅರಷಡ್ವರ್ಗ' ಎಂದು ಬರೆಯುವ ಬದಲು 'ಅರಿಷಡ್ವೈರಿ' ಎಂದು ಬರೆದಿದ್ದೇನೆ. ದಯಮಾಡಿ ಗಮನಿಸಲು ಕೋರುವೆ.

    ನಾರಾಯಣ ಭಾಗ್ವತ
    23JUL2010 6:20
    ಕವಿನಾಗರಾಜ್ ರವರಿಗೆ ವಂದನೆಗಳು.
    ಮಂಜುನಾಥ ಅವರ ಅಭಿಪ್ರಾಯ ಸರಿ ಎನಿಸಿತು.
    ಮೊದಲನೆಯದು ಇಷ್ಟವಾಯಿತು.

    Kavinagaraj
    23JUL2010 6:49
    ಮಿತ್ರ ಮಂಜುನಾಥರವರಿಗೆ ನೀಡಿದ ಉತ್ತರ ಗಮನಿಸಲು ಕೋರುವೆ.
    ನಾರಾಯಣ ಭಾಗ್ವತ
    23JUL2010 7:28
    ಕವಿನಾಗರಾಜ್ ರವರೆ ವಂದನೆಗಳು.
    ಸ್ಪಷ್ಟ ವಿವರಣೆ ನೀಡಿ ಗೊಂದಲ ಪರಿಹರಿಸಿದ್ದೀರಿ. ನಿಮ್ಮ ಮಾಹಿತಿಗಾಗಿ ಧನ್ಯವಾದಗಳು.

    ಸುರೇಶ್ ನಾಡಿಗ್
    23JUL2010 8:43
    ನಾಗರಾಜರೆ ಉತ್ತಮ ಕವನ. ನಿಮ್ಮ ಕವನಗಳ ಸರಣಿ ಹೀಗೆ ಮುಂದುವರೆಯುತ್ತಲೇ ಇರಲಿ.

    Kavinagaraj
    24JUL2010 9:12
    ನಿಮ್ಮ ಮೆಚ್ಚುಗೆಗೆ ಧನ್ಯವಾದ.

    Kavinagaraj
    24JUL2010 9:08
    :-)

    Ksraghavendranavada
    23JUL2010 9:21
    ಎ೦ದಿನ೦ತೆ ಅರ್ಥಗರ್ಭಿತವಾಗಿವೆ.

    Kavinagaraj
    24JUL2010 9:09
    ವಂದನೆ, ನಾವಡರೇ.

    ಬೆಳ್ಳಾಲ ಗೋಪೀನಾಥ ರಾವ್
    24JUL2010 8:25
    ಈ ಮೂಢ ಮನಸ್ಸು "ಅದನ್ನು" ಅರಿತರೆ ಎಷ್ಟು ಚೆನ್ನಿತ್ತು
    ಅಲ್ವಾ ಕವಿಗಳೇ

    Kavinagaraj
    24JUL2010 9:09
    ಹೌದು, ಗೋಪಿನಾಥ್, ಧನ್ಯವಾದಗಳು.

    ಕೃಷ್ಣಪ್ರಕಾಶ ಬೊಳುಂಬು
    24JUL2010 10:51
    ಕವಿ ನಾಗರಾಜರಿಗೆ ನಮಸ್ಕಾರ!
    ಕಾಮವೂ ಇರಲಿ, ಪೂರ್ಣ ವಿರಾಮವೂ ಇರಲಿ.
    "ಕಾಮ, ಅದಕಿಲ್ಲ ಪೂರ್ಣ ವಿರಾಮ ಮೂಢ" ಹೀಗಿದ್ದರೆ ಅರ್ಥಪೂರ್ಣವಾಗುತ್ತಿತ್ತು. ;)
    "ಹೊನ್ನು ಕಾರಣವಲ್ಲ ಹೆಣ್ಣು ಕಾರಣವಲ್ಲ" - ಹೊನ್ನು ಹೆಣ್ಣುಗಳ ನಡುವೆ ಕಾಮವಿರಲಿ.
    <> .....ಅನನ್ತ ಅತೃಪ್ತತೆಗೋ?
    ತಾವು 'ವಿರಹಗೀತ'ಕ್ಕೆ ಪ್ರತಿಕ್ರಿಯೆಯ ಮುಗುಳ್ನಗೆಯ ಹೂರಣ ತಿಳಿಯಲಿಲ್ಲ.

    Kavinagaraj
    25JUL2010 12:24
    ಕೃಷ್ಣಪ್ರಕಾಶರಿಗೆ ನಮಸ್ಕಾರ. ನಿಮ್ಮ ಸೂಚನೆಯಂತೆ 'ಕಾಮ'ಗಳನ್ನು ಬಳಸಿಕೊಂಡಿದ್ದೇನೆ. ಧನ್ಯವಾದ. ಅನಂತ+ತೃಪ್ತತೆ = ಅನಂತತೃಪ್ತತೆ ಎಂದಾಗುತ್ತದೆ ಎಂದು ಭಾವಿಸಿದ್ದೇನೆ. ಈ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ ಅಗತ್ಯವಿದ್ದಲ್ಲಿ ಸರಿಪಪಡಿಸಿಕೊಳ್ಳುತ್ತೇನೆ. ಪದಗಳನ್ನು ಬಿಡಿಸಿ ಬರೆಯುವುದಾಗಿದ್ದಲ್ಲಿ ನೀವಂದಂತೆ ಅನಂತ ಅತೃಪ್ತತೆ ಎಂದು ಬರೆಯುತ್ತಿದ್ದೆ. ಸಲಹೆಗೆ ಮತ್ತೊಮ್ಮೆ ಧನ್ಯವಾದ.

    ಪ್ರತ್ಯುತ್ತರಅಳಿಸಿ