ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಜುಲೈ 16, 2010

ಸೇವಾ ಪುರಾಣ -3: ಇವನು ಫುಡ್ಇನ್ಸ್ ಪೆಕ್ಟರಾ? -3: ಕಿಸಿದಿದ್ದೇನು?

ಕಿಸಿದಿದ್ದೇನು?
      ಕೆಲಸಕ್ಕೆ ಸೇರಿ ಮೂರು ತಿಂಗಳಾಗುತ್ತಾ ಬಂದರೂ ನಾನು ಏನು ಕೆಲಸ ಮಾಡಬೇಕೆಂದು ಯಾರೂ ಹೇಳಲೂ ಇಲ್ಲ, ಏನು ಮಾಡುತ್ತಿದ್ದೇನೆಂದು ಕೇಳಲೂ ಇಲ್ಲ, ಯಾರೂ ಕೆಲಸ ಕಲಿಸಿಕೊಡಲೂ ಇಲ್ಲ. ಫುಡ್ ಅಸಿಸ್ಟೆಂಟ್ ಸಾಹೇಬರನ್ನು ಕೇಳಿದರೆ "ನೀನು ಏನೂ ಮಾಡಬೇಡ, ಆಫೀಸಿನಲ್ಲಿ ಕುಳಿತಿರು" ಎಂದು ಅಪ್ಪಣೆ ಮಾಡಿದ್ದರು. ನಾನು ಕಛೇರಿಯಲ್ಲೇ ಕುಳಿತು ಅಗತ್ಯ ವಸ್ತುಗಳ ಕಾಯದೆ, ನಿಯಮಗಳು, ಸುತ್ತೋಲೆಗಳು, ಇತ್ಯಾದಿಗಳನ್ನು ಓದುತ್ತಾ ಹಳೆಯ ಗುಮಾಸ್ತರ ಮರ್ಜಿ ನೋಡಿಕೊಂಡು ಫುಡ್ ಇನ್ಸ್ ಪೆಕ್ಟರನ ಅಧಿಕಾರ ಏನು, ಕೆಲಸ ಏನು, ಇತ್ಯಾದಿ ಮಾಹಿತಿ ಪಡೆದುಕೊಂಡೆ. ಒಂದೆರಡು ತಿಂಗಳು ಸುಮ್ಮನಿದ್ದು ಮೆಲ್ಲನೆ ನನ್ನ ಅಧಿಕಾರ ವ್ಯಾಪ್ತಿಯ ಕೆಲಸ ಪ್ರಾರಂಭಿಸಿದೆ. ನ್ಯಾಯ ಬೆಲೆ ಅಂಗಡಿಗಳು, ಸಹಕಾರ ಸಂಘಗಳ ತಪಾಸಣೆಗಳನ್ನು ಮಾಡತೊಡಗಿದೆ. ಕಂಡುಬಂದ ನ್ಯೂನತೆಗಳ ಬಗ್ಗೆ ನಿರ್ದಾಕ್ಷಿಣ್ಯವಾಗಿ ವರದಿ ಮಾಡತೊಡಗಿದೆ. ಮೊದಮೊದಲು ನನ್ನ ಕೆಲಸದ ಬಗ್ಗೆ ಆಕ್ಷೇಪಿಸುತ್ತಿದ್ದ ಸಾಹೇಬರು ಆಮೇಲೆ ಸುಮ್ಮನಾಗಿದ್ದರು. ಅದಕ್ಕೆ ಕಾರಣವೆಂದರೆ ನಾನು ವರದಿಸಿದ ನ್ಯೂನತೆಗಳ ಬಗ್ಗೆ ಕಾರಣ ಕೇಳಿ ಅಂಗಡಿ ಮಾಲಿಕರುಗಳಿಗೆ ನೋಟೀಸು ಹೋಗುತ್ತಿತ್ತು. ಅವರುಗಳು ಬಂದು ಸಾಹೇಬರಿಗೆ, ಗುಮಾಸ್ತರಿಗೆ ಕೈ ಬೆಚ್ಚಗೆ ಮಾಡಿದ ನಂತರ ಕಡತಗಳು ಮೂಲೆ ಸೇರುತ್ತಿದ್ದವು. ನನ್ನ ವರದಿಗಳೇ ಅವರ ಹೆಚ್ಚಿನ ಆದಾಯಕ್ಕೆ ಕಾರಣವಾದವು. ಅಂಗಡಿಗಳವರು 'ನೀನೇನು ಕಿಸಿದೆ?' ಎಂಬಂತೆ ನನ್ನನ್ನು ನೋಡುತ್ತಿದ್ದರೂ, ಹಿಂದಿನಿಂದ ಆಡಿಕೊಳ್ಳುತ್ತಿದ್ದರೂ ಒಳಗೊಳಗೇ ನನಗೆ ಹೆದರುತ್ತಿದ್ದರು. ಪ್ರಾಮಾಣಿಕತೆಯೂ ಅಧಿಕಾರಿಯ ಹಾಗೂ ಸಹನೌಕರರ ಅಕ್ರಮ ಸಂಪಾದನೆಗೆ ಮಾರ್ಗವಾಗುತ್ತಿದ್ದುದನ್ನು ಕಂಡು ಬೇಸರವಾಗುತ್ತಿತ್ತು.
ನೀರಿನಲ್ಲಿ ಹೋಮ!
     ಒಂದು ದಿನ ಒಂದು ನ್ಯಾಯಬೆಲೆ ಅಂಗಡಿಯವನು ಎರಡು ಚೀಲ ಸಕ್ಕರೆ ಮತ್ತು ಐದು ಚೀಲ ಅಕ್ಕಿಯನ್ನು ಒಂದು ಹೋಟೆಲಿಗೆ (ಹಾಸನದ ಈ ಹೋಟೆಲ್ ಇರುವ ರಸ್ತೆಯನ್ನು ಹೋಟೆಲ್ ಹೆಸರಿನಿಂದಲೇ ಗುರುತಿಸುತ್ತಾರೆ) ಗಾಡಿಯಲ್ಲಿ ಸಾಗಿಸುತ್ತಿದ್ದಾಗ ನನ್ನ ಕೈಗೆ ಸಿಕ್ಕಿ ಬಿದ್ದ. ಮೇಲಾಧಿಕಾರಿಗೆ ವರದಿ ಮಾಡಿದರೆ ಪ್ರಯೋಜನವಾಗುವುದಿಲ್ಲವೆಂದು ಗೊತ್ತಿದ್ದ ನಾನು ದಾಸ್ತಾನನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ನನ್ನ ಅಧಿಕಾರ ಉಪಯೋಗಿಸಿ ಪೋಲಿಸ್ ಠಾಣೆಗೆ ದೂರು ಸಲ್ಲಿಸಿದೆ. ಸ್ಥಳೀಯ ಪತ್ರಿಕೆಯಲ್ಲೂ ವಿಷಯ ಪ್ರಕಟವಾಯಿತು. ಸಾಹೇಬರು ಕೆಂಡಾಮಂಡಲವಾಗಿ ನನ್ನನ್ನು ಛೇಂಬರಿಗೆ ಕರೆಯಿಸಿ ನಿಂದಿಸಿದರು. ಅಗತ್ಯ ವಸ್ತುಗಳ ಕಾಯದೆಯನ್ವಯ ದಾಖಲಾದ ಈ ಪ್ರಕರಣ ಜಿಲ್ಲಾಧಿಕಾರಿಯವರ ನ್ಯಾಯಾಲಯದಲ್ಲಿ ಸುಮಾರು ಆರು ತಿಂಗಳ ಕಾಲ ನಡೆಯಿತು. ಅಂತ್ಯದಲ್ಲಿ ಅಪರಾಧ ಸಾಬೀತಾಗಿ ಆರೋಪಿಗೆ 5000 ರೂ. ದಂಡ ವಿಧಿಸಲಾಯಿತು. ಆತನ ನ್ಯಾಯ ಬೆಲೆ ಅಂಗಡಿ ಪರವಾನಗಿ ಸಹ ರದ್ದಾಯಿತು. ಆದರೆ, ಒಂದೇ ವಾರದಲ್ಲಿ ಹೊಸ ನ್ಯಾಯ ಬೆಲೆ ಅಂಗಡಿ ಪರವಾನಗಿ ನೀಡಲಾಯಿತು. ಹೊಸ ಅಂಗಡಿಯ ಮಾಲಿಕ ಹಳೆಯ ಅಂಗಡಿ ಮಾಲಿಕನ ತಮ್ಮನೇ ಆಗಿದ್ದ!
ಕೆಲಸ ಮಾಡದಿರಲೂ ಲಂಚ!
     ಒಂದು ದಿನ ಬೆಳ್ಳಂಬೆಳಿಗ್ಗೆ ನ್ಯಾಯ ಬೆಲೆ ಅಂಗಡಿ ಮಾಲಿಕರುಗಳ ಸಂಘದ ಅಧ್ಯಕ್ಷ ನನ್ನ ಮನೆಗೆ ಬಂದು "ಸ್ವಾಮಿ, ನಾವು ಹೊಟ್ಟೆಪಾಡಿಗೆ ಹೇಗೋ ಜೀವನ ಮಾಡಿಕೊಂಡಿದ್ದೇವೆ. ಸರ್ಕಾರದ ನೀತಿ ಚೌಕಟ್ಟಿನಲ್ಲಿ ಕೆಲಸ ಮಾಡಿದರೆ ನಮಗೆ ನಷ್ಟ ಕಟ್ಟಿಟ್ಟ ಬುತ್ತಿ. ದಯವಿಟ್ಟು ನಮಗೆ ಸಹಕಾರ ನೀಡಿ. ನೀವು ಮಾಡಬೇಕಾದ್ದೇನೂ ಇಲ್ಲ. ಸುಮ್ಮನಿದ್ದು ಬಿಡಿ. ಪ್ರತಿ ತಿಂಗಳೂ ನಿಮಗೆ ಹತ್ತು ಸಾವಿರ ರೂ. ಕೊಡುತ್ತೇವೆ. ಹಿಂದಿನ 3-4 ತಿಂಗಳು ನಾವು ನಿಮಗೇನೂ ಕೊಟ್ಟಿಲ್ಲ. ಇದರಲ್ಲಿ ಇಪ್ಪತ್ತೈದು ಸಾವಿರ ರೂ. ಇದೆ. ತೆಗೆದುಕೊಳ್ಳಿ" ಎಂದು ಹಣವಿದ್ದ ಚೀಲ ನನಗೆ ಕೊಡಬಂದ. ನಾನು ಪಡೆಯಲಿಲ್ಲ. ಇಂತಹುದೆಲ್ಲಾ ನನಗಿಷ್ಟವಿಲ್ಲವೆಂದು ಹೇಳಿದೆ. ಅದನ್ನು ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಂಡ ಆತ "ದಯವಿಟ್ಟು ಇದನ್ನು ಇಟ್ಟುಕೊಳ್ಳಿ. ಉಳಿದವರೊಂದಿಗೆ ಮಾತನಾಡಿ ಇನ್ನೂ ಹೆಚ್ಚಿಗೆ ಕೊಡಲು ವ್ಯವಸ್ಥೆ ಮಾಡುತ್ತೇನೆ" ಎಂದ. ನಾನು ಸಿಟ್ಟಿಗೆದ್ದು ಗದರಿಸಿದಾಗ ಹಣದ ಚೀಲ ಅಲ್ಲೇ ಬಿಟ್ಟು ಹೊರಡಲನುವಾದ. ಹಣ ತೆಗೆದುಕೊಂಡು ಹೋಗದಿದ್ದರೆ ಹೊರಗೆ ಎಸೆಯುವುದಾಗಿ ಹೇಳಿದಾಗ ನನ್ನನ್ನು ಒಂದು ವಿಚಿತ್ರ ಪ್ರಾಣಿಯೆಂಬಂತೆ ನೋಡಿ ಹಣದ ಚೀಲ ತೆಗೆದುಕೊಂಡು ವಾಪಸು ಹೋದ. ನಂತರದ ಬೆಳವಣಿಗೆಯಲ್ಲಿ ಅಂಗಡಿ ಮಾಲಿಕರುಗಳು ಒಟ್ಟಾಗಿ ಫುಡ್ ಅಸಿಸ್ಟೆಂಟ್ ಸಾಹೇಬರನ್ನು ಭೇಟಿ ಮಾಡಿ ಫುಡ್ ಇನ್ಸ್ ಪೆಕ್ಟರರಿಂದ ತಮ್ಮನ್ನು ರಕ್ಷಿಸಬೇಕೆಂದು ಕೇಳಿಕೊಂಡು 'ಅಭಯ' ಪಡೆದುಕೊಂಡರು. ಅಂದಿನಿಂದ ನಾನೊಬ್ಬ ನಾಲಾಯಕ್, ಬದುಕಲು ಕಲಿಯದವನು ಎಂದೆಲ್ಲಾ ಅನ್ನಿಸಿಕೊಳ್ಳಬೇಕಾಯಿತು. ಕೆಲವರು ಹಳೆಯ ಅನುಭವಿ ನೌಕರರು "ಈಗ ಹಾವನ್ನು ಹೊಡೆದು ಹದ್ದಿಗೆ ಹಾಕುವ ಕಾಲ. ನೀನಾಗೆ ಲಂಚ ತೆಗೆದುಕೊಳ್ಳಬೇಡ. ಅವರಾಗೇ ಕೊಟ್ಟರೆ ಏಕೆ ಬೇಡ ಅನ್ನುತ್ತೀಯ? ಹೀಗೇ ಇದ್ದರೆ ನಿನಗೇ ತೊಂದರೆ" ಎಂದು ಬುದ್ಧಿವಾದ ಹೇಳಿದ್ದರು. ಆದರೆ ಆದರ್ಶದ ಬೆನ್ನು ಹತ್ತಿ ಹೊರಟಿದ್ದ ನನಗೆ ಅವೆಲ್ಲಾ ರುಚಿಸುತ್ತಿರಲಿಲ್ಲ. ಹಣವಿಲ್ಲದಿದ್ದರೂ ನನ್ನ ಮನಸ್ಸಿಗೆ ನೆಮ್ಮದಿಯಿದೆ, ಸರಿಯಾಗಿ ನಡೆಯುತ್ತಿದ್ದೇನೆಂಬ ಸಮಾಧಾನವಿದೆ ಎಂದು ನನಗೆ ನಾನೇ ಅಂದುಕೊಳ್ಳುತ್ತಿದ್ದೆ.
ಪರವಾಗಿಲ್ಲ, ರಸೀದಿ ಬೇಡ!
     ಲಂಚ ಕೊಡಲು ಬಂದವರನ್ನು ಕಂಡರೆ ನನಗೆ ಕಿಡಿಕಿಡಿಯಾಗುತ್ತಿತ್ತು. ಬೇಡವೆಂದು ಹೇಳಿದರೂ ಬಲವಂತವಾಗಿ ಕೊಟ್ಟ ಒಂದೆರಡು ಪ್ರಕರಣಗಳಲ್ಲಿ ನೋಟುಗಳನ್ನು ಹರಿದು ಹಾಕಿದ್ದೆ. ನಂತರ ನನ್ನ ತಪ್ಪಿನ ಅರಿವಾಗಿ ಹಾಗೆ ಮಾಡುತ್ತಿರಲಿಲ್ಲ. ಜನೋಪಯೋಗಿ ಕಾರ್ಯಗಳನ್ನು ಮಾಡುತ್ತಿದ್ದ ಸಂಘ-ಸಂಸ್ಥೆಗಳ ವಿವರಗಳನ್ನು ನನ್ನಲ್ಲಿ ಇಟ್ಟುಕೊಂಡಿದ್ದು ಲಂಚ ಕೊಡಲು ಬಂದವರಿಗೆ ಲಂಚದ ಬದಲು ಅಂತಹ ಸಂಘ-ಸಂಸ್ಥೆಗಳಿಗೆ ದಾನ ಮಾಡಲು ಸೂಚಿಸುತ್ತಿದ್ದೆ. ರಾಷ್ತ್ರೋತ್ಥಾನ ಪರಿಷತ್ ನವರು ಮಹಾಪುರುಷರ, ಸಾಧು-ಸಂತರ ಜೀವನ ಚರಿತ್ರೆಗಳನ್ನು ಮಕ್ಕಳ ಸಲುವಾಗಿ (ಭಾರತ-ಭಾರತಿ) ಚಿಕ್ಕ ಚಿಕ್ಕ ವರ್ಣರಂಜಿತ ಪುಸ್ತಕಗಳನ್ನು ಕಡಿಮೆ ಬೆಲೆಗ ಸಿದ್ಧಪಡಿಸಿದ್ದರು. ಯಾರಾದರೂ ದಾನ ನೀಡಿದರೆ ಅವರು ನೀಡಿದಷ್ಟೇ ಮೊಬಲಗನ್ನು ಅವರೂ ಸೇರಿಸಿ ಒಟ್ಟು ಮೊಬಲಗಿನ ಪುಸ್ತಕಗಳನ್ನು ಮಕ್ಕಳಿಗೆ ಉಚಿತವಾಗಿ ಹಂಚುವ ಅವರ 'ಮಕ್ಕಳ ಕೈಗೆ ಸರಸ್ವತಿ' ಯೋಜನೆ ನನಗೆ ಇಷ್ಟವಾಗಿತ್ತು. ಈ ಯೋಜನೆಯ ವಿವರದ ಕರಪತ್ರಗಳನ್ನು ಅಂಗಡಿಗಳವರಿಗೆ ಕೊಟ್ಟು ಅವರು ಇಷ್ಟಪಡುವಷ್ಟು ಹಣವನ್ನು ಕೊಡಬಹುದೆಂದೂ ಸಾಯಂಕಾಲ ಬರುತ್ತೇನೆಂದೂ ಹೇಳಿ ಸಾಯಂಕಾಲ ಹೋದರೆ ನನಗೇ ಆಶ್ಚರ್ಯವಾಗುವಂತೆ ಕೆಲವೇ ಗಂಟೆಯಲ್ಲಿ ಇಪ್ಪತ್ತು ಸಾವಿರ ರೂ. ಸಂಗ್ರಹವಾಗಿತ್ತು. ಹೆಚ್ಚಿನವರು 'ನಮಗೇನೂ ರಸೀದಿ ಬೇಡ ಸಾರ್, ಪರವಾಗಿಲ್ಲ' ಎಂದಿದ್ದರು. ಅವರುಗಳು ನಾನು ಹಣ ಮಾಡಲು ಕಂಡುಕೊಂಡ ಹೊಸ ಮಾರ್ಗವಿದು ಎಂದು ಅಂದುಕೊಂಡಿದ್ದಿರಬಹುದು. ಅದರೆ ಅವರುಗಳ ಹೆಸರಿಗೆ ರಸೀದಿಗಳನ್ನು ತರಿಸಿಕೊಟ್ಟಾಗ ಅವರಿಗೆ ಆಶ್ದರ್ಯ ಆಗಿದ್ದಂತೂ ನಿಜ. ಒಬ್ಬರು ಅಂಗಡಿ ಮಾಲಿಕರಂತೂ (ಅವರ ಅಂಗಡಿ ಗಾಂಧಿಬಜಾರಿನಲ್ಲಿದೆ) "ಬೇರೆ ಫುಡ್ ಇನ್ಸ್ ಪೆಕ್ಟರ್ ಆಗಿದ್ದರೆ ಲಂಚವಾಗೇ ಬಹಳ ಹಣ ಹೋಗುತ್ತಿತ್ತು. ನೀವು ಒಳ್ಳೆಯ ಕಾರಣಕ್ಕಾಗಿ ಅದೂ ಬೇರೆಯವರಿಗಾಗಿ ಕೇಳಿದಿರಿ. ನಾನು ಪ್ರತಿ ತಿಂಗಳೂ ನೀವು ಹೇಳುವ ಕಾರ್ಯಕ್ಕಾಗಿ ಹಣ ಕೊಡುತ್ತೇನೆ" ಎಂದಿದ್ದರು. ನಾನು ಇದೇ ಉದ್ದೇಶಕ್ಕೆ ಹಣವನ್ನು ಅವರೇ ಕಳುಹಿಸಬಹುದೆಂದು ಹೇಳಿದೆ. ಅದರಂತೆ ಅವರು ಪ್ರತಿ ತಿಂಗಳೂ ಹಣ ಕಳಿಸಿ ನನಗೆ ರಸೀದಿ ತೋರಿಸುತ್ತಿದ್ದರು. ನಂತರದಲ್ಲಿ ನಾನು ಯಾವ ಒಳ್ಳೆಯ ಉದ್ದೇಶಕ್ಕೆ ಹಣ ಕೇಳಿದರೂ ಅಂಗಡಿ ಮಾಲಿಕರುಗಳು ಕೊಡುತ್ತಿದ್ದರು. ಅವರುಗಳ ವಿಶ್ವಾಸವನ್ನು ನಾನು ದುರುಪಯೋಗಪಡಿಸಿಕೊಳ್ಳಲಿಲ್ಲವೆಂದು ನನಗೆ ಸಮಾಧಾನವಿದೆ.
-ಕ.ವೆಂ.ನಾಗರಾಜ್.
(ಕಾಲಘಟ್ಟ: 1973-74) .. -ಮುಂದುವರೆಯಲಿದೆ.

1 ಕಾಮೆಂಟ್‌:

  1. ರಾಘವೇಂದ್ರ ನಾವಡ
    ನಿಮ್ಮ ಪ್ರಾಮಾಣಿಕತೆಗೆ ನನ್ನ ಹ್ಯಾಟ್ಸಾಫ್.. ಕವಿನಾಗರಾಜರೇ.
    ಮು೦ದುವರೆಸಿ. ನಮಸ್ಕಾರಗಳು.

    ನನ್ನಿ ಸುನಿಲ
    12JUL2010 9:09
    ನಿಮ್ಮಂತಹವರ ಆದರ್ಶಗಳನ್ನು ನೋಡಿ ನಾವುಗಳು ಕಲಿತುಕೊಳ್ಳಬೇಕಿರುವುದು ತುಂಬಾ ಇದೆ. ನನ್ನಿ.

    ಹೊಳೆ ನರಸೀಪುರ ಮಂಜುನಾಥ
    12JUL2010 10:13
    ಕವಿ ನಾಗರಾಜರೆ, ನಿಮ್ಮ ಪ್ರಾಮಾಣಿಕತೆಗೆ ನನ್ನ ಸಲಾ೦! ಆದರೆ ಅದೇ ಇತರರ ಲ೦ಚಕೋರತನಕ್ಕೆ ಸಹಾಯಕವಾಗಿದ್ದು ನಮ್ಮ ವ್ಯವಸ್ಥೆಯ ವಿಪರ್ಯಾಸ.

    ಹೌದು, ಮಂಜುರವರೇ. ನನಗೆ ನೋವು ಕೊಟ್ಟಿದ್ದು, ಕೊಡುವುದು ಅದೇ ಸಂಗತಿ.
    -ನಾಗರಾಜ್.

    ಚೇತನ್ ಕೋಡುವಳ್ಳಿ
    12JUL2010 11:51
    ಎಲ್ಲರೂ ಅವರವರ ಕೆಲಸ ನಿಯತ್ತಾಗಿ ಮಾಡಿದ್ರೆ ಎಷ್ಟು ಚೆನ್ನಾಗಿರತ್ತೆ.
    ನಿಮ್ಮ ಅನುಭವಗಳು ಚೆನ್ನಾಗಿದೆ

    ಪಾಲಚಂದ್ರ
    12JUL2010 12:10
    >>ಪರವಾಗಿಲ್ಲ, ರಸೀದಿ ಬೇಡ!
    ಒಳ್ಳೇ ಪ್ರಯೋಗ..
    ನಿಮ್ಮ ಪ್ರಾಮಾಣಿಕ ಅನುಭವವನ್ನು ನಮ್ಮೆದುರು ಹಂಚಿಕೊಂಡಿದ್ದಕ್ಕೆ ನನ್ನಿ

    ಪ್ರತ್ಯುತ್ತರಅಳಿಸಿ