ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಜುಲೈ 26, 2010

ಸೇವಾಪುರಾಣ -9: ಸರಳುಗಳ ಹಿಂದಿನ ಲೋಕ -2: ಪೋಲಿಸರ ಕುಯುಕ್ತಿ

ಪೋಲಿಸರ ಕುಯುಕ್ತಿ
     ನಾನು ಪೋಲಿಸ್ ಠಾಣೆಗೆ ಹಾಜರಾತಿ ಹಾಕಲು ಹೋಗಿದ್ದಾಗ ಸಬ್ ಇನ್ಸ್ ಪೆಕ್ಟರರು ನನ್ನನ್ನು ಜೀಪಿನಲ್ಲಿ ಕುಳಿತುಕೊಳ್ಳಲು ಹೇಳಿದರು. ನಾನು ಏಕೆ ಎಂದು ಕೇಳಿದ್ದಕ್ಕೆ ಕೆಕ್ಕರಿಸಿ ನೋಡಿದರು. ನಾನು ಸುಮ್ಮನೆ ಹೋಗಿ ಜೀಪು ಹತ್ತಿ ಕುಳಿತೆ. ಒಬ್ಬ ಆರೆಸ್ಸೆಸ್ ಕಾರ್ಯಕರ್ತನನ್ನು ಬಂಧಿಸಲು ಹೋಗುತ್ತಿದ್ದರೆಂದು ಆತನ ಮನೆಯ ಮುಂದೆ ಜೀಪು ನಿಂತಾಗಲೇ ನನಗೆ ಗೊತ್ತಾಗಿದ್ದು. ನನ್ನನ್ನೂ ಅವರ ಮನೆಯ ಒಳಗೆ ಕರೆದುಕೊಂಡು ಹೋದರು.ನಾನು ಮನೆಯ ಸ್ಟೇರ್ ಕೇಸಿನ ಮೆಟ್ಟಿಲ ಮೇಲೆ ಹಿಡಿಯಾದ ಮನಸ್ಸಿನಿಂದ ಕುಳಿತಿದ್ದೆ. ಯಾರನ್ನು ಬಂಧಿಸಲು ಹೋಗಿದ್ದರೋ ಆತನೂ ನನ್ನ ಸ್ನೇಹಿತನೇ ಆಗಿದ್ದು ಆತನ ಮನೆಯವರೂ ನನಗೆ ಪರಿಚಿತರಿದ್ದರು. ಆತನ ಮನೆಯವರು ನನ್ನನ್ನು ಒಂದು ತರಹಾ ನೋಡುತ್ತಿದ್ದರು. ಅವರ ದೃಷ್ಟಿಯಲ್ಲಿ ಆತನನ್ನು ನಾನೇ ಹಿಡಿಸುತ್ತಿದ್ದೇನೆ ಎಂಬ ಭಾವನೆ ಬಂದಿತ್ತೆಂದು ನಂತರ ನನಗೆ ಗೊತ್ತಾಗಿ ಬಹಳ ನೊಂದುಕೊಂಡಿದ್ದೆ. ಆತ ಆ ಸಮಯದಲ್ಲಿ ಮನೆಯಲ್ಲಿರಲಿಲ್ಲ. ಪೇದೆಗಳು ಮನೆಯನ್ನೆಲ್ಲಾ ಜಾಲಾಡಿದರು. ಅವನನ್ನು ಕರೆಸಲು ಆತನ ತಂದೆಗೆ ಪೋಲಿಸ್ ಭಾಷೆಯಲ್ಲಿ ಆದೇಶಿಸಿದರು. ಬಂದ ತಕ್ಷಣ ಠಾಣೆಗೆ ಕಳಿಸಿಕೊಡುವುದಾಗಿ ಆತನ ವೃದ್ಧ ತಂದೆ ಹೇಳಿದರೂ, ಸಬ್ ಇನ್ಸ್ ಪೆಕ್ಟರರು ಆ ವೃದ್ಧರಿಗೆ ಹೇಳಿದ ಮಾತಿನಿಂದ ನನಗೇ ರೋಷ ಉಕ್ಕಿ ಬಂದಿದ್ದಾಗ ಆತನ ಮನೆಯವರಿಗೆ ಹೇಗಾಗಿರಬೇಕು!  ಅಸಹಾಯಕತೆ ಎಲ್ಲರನ್ನೂ ಷಂಡರನ್ನಾಗಿಸಿತ್ತು. ತುರ್ತು ಪರಿಸ್ಥಿತಿ ಅಂತಹ ವಾತಾವರಣ ನಿರ್ಮಿಸಿತ್ತು. ರಾಜಕೀಯಸ್ಥರು -ಅದರಲ್ಲೂ ಕಾಂಗ್ರೆಸ್ಸಿಗರು- ತಮಗಾಗದವರನ್ನು ಮಟ್ಟ ಹಾಕಲು ಸಂದರ್ಭವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಿದ್ದರು. ಪೋಲಿಸರ ಕೈಗೆ ಸರ್ವಾಧಿಕಾರ ಸಿಕ್ಕಿಬಿಟ್ಟಿತ್ತು. ಅವರ ವಿಕೃತ ಕ್ರೌರ್ಯಕ್ಕೆ ಮಿತಿಯೇ ಇರಲಿಲ್ಲ.
ರಾಷ್ಟ್ರದ್ರೋಹದ ಕೇಸು!
     ಎರಡು ತಿಂಗಳ ನಂತರ ದಿನಾಂಕ 9-11-1975ರಂದು ವಿಧ್ವಂಸಕ ಕೃತ್ಯಕ್ಕಾಗಿ ಪಿತೂರಿ ಮಾಡುತ್ತಿದ್ದೇನೆಂದು ನಾನೂ ಸೇರಿದಂತೆ 11 ಜನರ ವಿರುದ್ಧ ಭಾರತ ರಕ್ಷಣಾ ಕಾಯದೆಯನ್ವಯ ಮೊಕದ್ದಮೆ ಹೂಡಿದಾಗ ಪುನಃ ಜೈಲಿನ ದರ್ಶನವಾಯಿತು. ಹಾಸನದ ಇಂಜನಿಯರಿಂಗ್ ಕಾಲೇಜಿನ ಇನ್ಸ್ ಟ್ರಕ್ಟರ್ ಚಂದ್ರಶೇಖರ್, ಕರ್ನಾಟಕ ಬ್ಯಾಂಕ್ ಉದ್ಯೋಗಿ ಜಯಪ್ರಕಾಶ್, ಟೈಲರ್ ಜನಾರ್ಧನ ಐಯಂಗಾರ್, ಪೆಟ್ಟಿಗೆ ಅಂಗಡಿ ರಾಮಚಂದ್ರ (ಇವರನ್ನು ಕಛ್ ರಾಮಚಂದ್ರ ಎಂದು ಕರೆಯುತ್ತಿದ್ದರು, ಗೋವಾ ವಿಮೋಚನಾ ಚಳುವಳಿಯಲ್ಲಿ ಪಾಲ್ಗೊಂಡಿದ್ದವರು),ಆರೆಸ್ಸೆಸ್ ಪ್ರಚಾರಕರಾಗಿದ್ದ ಪ್ರಭಾಕರ ಕೆರೆಕೈ (ಇವರು ತುರ್ತು ಪರಿಸ್ಥಿತಿ ನಂತರದಲ್ಲಿ ಮಾನಸಿಕ ಅಸ್ವಸ್ಥತೆಗೆ ಒಳಗಾಗಿ ಯಾರನ್ನು ಕಂಡರೂ -ಪರಿಚಯದವರಾದರೂ- ಭಯಪಡುತ್ತಿದ್ದರು, ಮತ್ತು ಇದೇ ಕಾರಣದಲ್ಲಿ 30-32ರ ಚಿಕ್ಕ ವಯಸ್ಸಿನಲ್ಲೇ ತೀರಿಕೊಂಡರು.ಬಹುಷಃ ತುರ್ತು ಪರಿಸ್ಥಿತಿಯಲ್ಲಿ ಅವರು ಅನುಭವಿಸಿದ್ದ ಹಿಂಸೆ ಅದಕ್ಕೆ ಕಾರಣವಾಗಿದ್ದಿರಬಹುದು),ವಿದ್ಯಾರ್ಥಿಗಳಾದ ನಾಗಭೂಷಣ, ಪಾರಸಮಲ್, ಶ್ರೀನಿವಾಸ,ಪಟ್ಟಾಭಿರಾಮ, ಸದಾಶಿವ ಇವರುಗಳೇ ನನ್ನೊಂದಿಗೆ ಬಂದಿಗಳಾದವರು. ಈ ಪ್ರಕರಣದಲ್ಲಿ ನಮಗೆ ಜಾಮೀನು ಸಿಗಲಿಲ್ಲ. ಜೊತೆಯಲ್ಲಿದ್ದ ಕೆಲವರು ಹತಾಶರಾಗಿದ್ದರು. ಈ ಪ್ರಕರಣ ಮುಗಿಯುವವರೆಗೆ ಅಂದರೆ 3-4 ತಿಂಗಳುಗಳವರೆಗೆ ನಾವು ಕಾರಾಗೃಹದಲ್ಲೇ ಇರಬೇಕಾಯಿತು. ನನ್ನ ಜೊತೆಗೆ ನನ್ನಂತಹವರೇ ಇದ್ದುದರಿಂದ ಈಸಲ ಅಷ್ಟೊಂದು ಹಿಂಸೆಯೆನಿಸಲಿಲ್ಲ.ಇದೇ ತಿಂಗಳಿನಲ್ಲಿ ತುರ್ತು ಪರಿಸ್ಥಿತಿ ವಿರೋಧಿಸಿ ದೇಶವ್ಯಾಪಿ ಆಂದೋಲನ ಪ್ರಾರಂಭವಾಗಿ ಆರೆಸ್ಸೆಸ್, ಜನಸಂಘದವರು ಹೆಚ್ಚಿನ ಸಂಖ್ಯೆಯಲ್ಲಿ ಹಾಸನದ ಜೈಲಿಗೆ ಬರತೊಡಗಿದರು. ಇಂತಹ ಹೊಸ ಹೊಸ ಬಂದಿಗಳು ಬಂದಾಗಲೆಲ್ಲಾ ಅವರಿಗೆ ಜೈಲಿನಲ್ಲಿ ವೀರೋಚಿತ ಸ್ವಾಗತ ಸಿಗುತ್ತಿತ್ತು. ಸತ್ಯಾಗ್ರಹಿಗಳ ಸಂಖ್ಯೆ ಜಾಸ್ತಿಯಾದಾಗ ಕಳ್ಳಕಾಕರೊಂದಿಗೆ ಇರಿಸದೆ ಪ್ರತ್ಯೇಕವಾಗಿ ಇರಿಸಬೇಕೆಂಬ ಒತ್ತಾಯಕ್ಕೆ ಜೈಲು ಸಿಬ್ಬಂದಿ ಮಣಿಯಲೇ ಬೇಕಾಯಿತು. ನಮ್ಮನ್ನೆಲ್ಲಾ ಒಂದು ಬ್ಯಾರಕ್ಕಿನಲ್ಲಿ, ಇತರ ಕೈದಿಗಳನ್ನು ಇನ್ನೊಂದು ಬ್ಯಾರಕ್ಕಿನಲ್ಲಿ ತುಂಬಿದರು. 35 ಬಂದಿಗಳನ್ನು ಇರಿಸಬಹುದಾದ ಕಾರಾಗೃಹದಲ್ಲಿ 200ಕ್ಕೂ ಹೆಚ್ಚು ಕೈದಿಗಳನ್ನು ಅಕ್ಷರಶಃ ತುಂಬಲಾಗಿತ್ತು.ನಂತರ ಬಂದವರನ್ನು ಬಳ್ಳಾರಿ, ಮೈಸೂರು ಜೈಲುಗಳಿಗೆ ಕಳಿಸುತ್ತಿದ್ದರು. ಜೈಲಿನ ಒಳಗಿದ್ದಾಗ ಹೊಸ ಕೇಸುಗಳ ಭಯವಿರಲಿಲ್ಲ.ಹೊರಗಿಗಿಂತ ಜೈಲಿನ ಒಳಗೇ ಒಂದು ರೀತಿಯ ನಿರ್ಭಯ ವಾತಾವರಣವಿತ್ತೆಂದರೆ ತಪ್ಪಿರಲಿಲ್ಲ.
ಸುಧಾರಣೆ
     ನಮ್ಮ ಪ್ರತಿಭಟನೆಯಿಂದಾಗಿ ಜೈಲು ಸಿಬ್ಬಂದಿ ಕಟ್ಟಿದಾರಭ್ಯ ಶುಚಿಗೊಳ್ಳದಿದ್ದ ನೀರಿನ ತೊಟ್ಟಿ, ಅಡುಗೆ ಮನೆ, ಶೌಚಾಲಯ ಸ್ವಚ್ಛಗೊಳಿಸಲು ಕ್ರಮ ಕೈಗೊಂಡದ್ದು ಅದ್ಭುತ ಸಾಧನೆಯೆಂದೇ ಹೇಳಬಹುದು.ಮೊದಲು ನಮಗೆ ಕೊಡುತ್ತಿದ್ದ ಆಹಾರವನ್ನು ತಯಾರಿಸುವ ಕೆಲಸ ಅಡುಗೆ ಬಲ್ಲ ಕೈದಿಗಳೇ ಮಾಡುತ್ತಿದ್ದು ಅವರು ಇರುತ್ತಿದ್ದ ಸ್ಥಿತಿ ನೋಡಿದರೆ ಮಾಡಿದ ಊಟವೆಲ್ಲಾ ಹೊರಬರುತ್ತಿತ್ತು.ನಮ್ಮ ಅಡುಗೆಯನ್ನು ನಾವೇ ಸಿದ್ಧಪಡಿಸಿಕೊಳ್ಳಲು ಅವಕಾಶ ಪಡೆದೆವು.ನಾನು ಫುಡ್ ಇನ್ಸ್ ಪೆಕ್ಟರ್ ಆಗಿದ್ದರಿಂದ ಎಲ್ಲರೂ ನನ್ನನ್ನು ಫುಡ್ ನಾಗರಾಜ ಎಂತಲೇ ಕರೆಯುತ್ತಿದ್ದರು. ಜೈಲಿನಲ್ಲಿಯೂ ಆಹಾರ ವಿಭಾಗದ ಮೇಲ್ವಿಚಾರಣೆ ಕೆಲಸ ನನ್ನ ಹೆಗಲಿಗೇ ಬಿತ್ತು.ನಮಗೆ ಬರಬೇಕಾದ ಆಹಾರ ಧಾನ್ಯಗಳ ಪ್ರಮಾಣವನ್ನು (ಒಬ್ಬ ಕೈದಿಗೆ ಇಷ್ಟು ಹಿಟ್ಟು, ತರಕಾರಿ, ಬೇಳೆ, ಸೌದೆ, ಎಂದು ಪ್ರಮಾಣ ನಿಗದಿತವಾಗಿರುತ್ತದೆ) ಲೆಕ್ಕ ಹಾಕಿ ಪಡೆಯುವ ಕೆಲಸ ಮಾಡುತ್ತಿದ್ದೆ. ಜೈಲು ಸಿಬ್ಬಂದಿ ಈ ಮೊದಲು ಕೈದಿಗಳಿಗೆ ಕೊಡುತ್ತಿದ್ದ ಪ್ರಮಾಣ ಕಡಿಮೆ ಮಾಡಿ ತಮ್ಮ ಮನೆಗಳಿಗೆ ಸಾಗಿಸುತ್ತಿದ್ದುದು ನಾವು ಸರಿಯಾಗಿ ತೂಕ ಹಾಕಿಸಿ ಪಡೆಯುತ್ತಿದ್ದರಿಂದ ಇಂತಹ ಅಕ್ರಮಕ್ಕೆ ಅವಕಾಶವಾಗುತ್ತಿರಲಿಲ್ಲ.ಕಾಯಿಲೆಯಾದವರಿಗೆ ಹಾಲು, ಬ್ರೆಡ್ ಕೊಡಲು ಅವಕಾಶವಿದ್ದುದರಿಂದ ಮತ್ತು ನಮಗೆ ಮಜ್ಜಿಗೆ ಕೊಡುತ್ತಿರಲಿಲ್ಲವಾದ್ದರಿಂದ 6-7 ಜನರಿಗೆ ಕಾಯಿಲೆಯಾದವರೆಂದು ಲೆಕ್ಕ ಕೊಟ್ಟು ಅವರ ಪಾಲಿನ ಹಾಲು, ಬ್ರೆಡ್ ಪಡೆದು ಎಲ್ಲರೂ ಹಂಚಿಕೊಂಡು ತಿನ್ನುತ್ತಿದ್ದೆವು.ಜೈಲು ಸಿಬ್ಬಂದಿಗೆ ಸೌದೆ, ತರಕಾರಿ, ಇತ್ಯಾದಿಗಳನ್ನು ಮನೆಗೆ ಸಾಗಿಸಲು ಅವಕಾಶವಿಲ್ಲದ್ದರಿಂದ ಅವರಿಗೆ ನಮ್ಮಗಳ ಮೇಲೆ ಅಸಮಾಧಾನವಿತ್ತು.ಇದಕ್ಕಾಗಿ ಅವರು ಇತರ ಕೈದಿಗಳನ್ನು ನಮ್ಮ ಮೇಲೆ ಎತ್ತಿಕಟ್ಟಿದ್ದರಿಂದ ಅವರಿಗೂ, ನಮಗೂ ಎರಡು-ಮೂರು ಸಲ ಹೊಡೆದಾಟವಾಗಿತ್ತು. ಒಳ್ಳೆಯ ಕಂಬಳಿ, ತಟ್ಟೆ, ಲೋಟಗಳಿಗಾಗಿ ಸಹ ಸತ್ಯಾಗ್ರಹ ನಡೆಸಬೇಕಾಯಿತು. ಜೈಲು ಸೂಪರಿಂಟೆಂಡೆಂಟರು ತಟ್ಟೆ, ಲೋಟಗಳನ್ನು ತರಿಸಿಕೊಟ್ಟರು. ಕಂಬಳಿ ತರಿಸಲು ಅವರು ಸಮಯಾವಕಾಶ ಕೇಳಿದರೂ ತರಿಸಿಕೊಡಲಿಲ್ಲ. ಅವುಗಳನ್ನು ಯಾರೂ ಉಪಯೋಗಿಸುತ್ತಲೂ ಇರಲಿಲ್ಲ.ಮನೆಯಿಂದ ಹೊದಿಕೆ ತರಿಸಿಕೊಳ್ಳಲು ಅವಕಾಶ ನೀಡಿ ಉಪಕಾರ ಮಾಡಿದರು.ಹಾಡು, ಭಜನೆ, ಚರ್ಚೆಗಳನ್ನು ಮಾಡುತ್ತಾ ಸಮಯ ಕಳೆಯುತ್ತಿದ್ದೆವು. 'ಆರದಿಹ ಆದರ್ಶ ಜ್ವಾಲೆಯ ಅರ್ಚಿಸುವೆ ನಾ ದಿನದಿನ' ಎಂಬುದು ನನ್ನ ಮೆಚ್ಚಿನ ಹಾಡಾಗಿದ್ದು ಅದನ್ನೇ ಇತರರಿಗೆ ಹೇಳಿಕೊಡುತ್ತಿದ್ದೆ. ಹೊರಗಿಗಿಂತ ಜೈಲಿನ ಒಳಗೇ ಒಂದು ರೀತಿಯ ನಿರ್ಭಯ ವಾತಾವರಣವಿತ್ತು. ತುರ್ತು ಪರಿಸ್ಥಿತಿಯಲ್ಲಿ ನಾವು ಜೈಲಿನ ಒಳಗಡೆ ಮಾಡುತ್ತಿದ್ದಂತಹ ಚರ್ಚೆಗಳನ್ನು ಮುಕ್ತವಾಗಿ ಹೊರಗೆ ಮಾಡಲು ಸಾಧ್ಯವೇ ಇರಲಿಲ್ಲ!
-ಕ.ವೆಂ.ನಾಗರಾಜ್.

2 ಕಾಮೆಂಟ್‌ಗಳು:

  1. Komal
    28JUL2010 4:58
    ಮುಂದಿನ ಅನುಭವ ಓದುವ ಕಾತುರ. ಈ ಅನುಭವ ಮನಸ್ಸಿಗೆ ನೋವಾಯಿತು.

    Kavinagaraj
    28JUL2010 8:42
    ಹಿತವಾದ ಪ್ರತಿಕ್ರಿಯೆಗಾಗಿ ಧನ್ಯವಾದ, ಕೋಮಲ್.

    ಸಂತೋಷ್ ಎನ್. ಆಚಾರ್ಯ
    28JUL2010 5:14
    ತುರ್ತು ಪರಿಸ್ಥಿತಿಯಲ್ಲಿ ಸಮಸ್ಯೆ ಅನುಭವಿಸಿದ ಎಲ್ಲರ ಬಗ್ಗೆ ಮನಸ್ಸಿನಲ್ಲಿ ಇನ್ನೂ ಬೇಸರವಿದೆ. ಅಷ್ಟೇನೂ ಗೊತ್ತಿರದಿದ್ದರೂ ಇತ್ತೀಚೆಗಷ್ಟೇ ಅಲ್ಪ ಸ್ವಲ್ಪ ಓದಿದಾಗ ಅರ್ಥವಾಗಿದ್ದು. ನಿಮ್ಮ ಅನುಭವ ಅದಕ್ಕೆ ಹಿಡಿದ ಕನ್ನಡಿ

    Kavinagaraj
    28JUL2010 8:46
    ಹೌದು, ಸಂತೋಷ್. ತುರ್ತು ಪರಿಸ್ಥಿತಿ ಬಗ್ಗೆ ನನಗೆ ಗೊತ್ತಿದ್ದೆಲ್ಲವನ್ನೂ ಬರೆದರೆ ದೊಡ್ಡ ಗ್ರಂಥವೇ ಆದೀತು. ಆದರೆ ನಾನು ಅನುಭವಿಸಿದ, ನನ್ನ ಸ್ವತಃ ಅರಿವಿಗೆ ಬಂದ ಸಂಗತಿಗಳನ್ನು ಮಾತ್ರ ಸಂಪದಿಗರ ಮುಂದಿಡುತ್ತಿದ್ದೇನೆ. ಮೆಚ್ಚಿದ್ದಕ್ಕೆ ಧನ್ಯವಾದಗಳು.

    ಸಿ ಸೋಮಶೇಖರಯ್ಯ
    28JUL2010 5:23
    ತುರ್ತು ಪರಿಸ್ಥಿತಿಯ ಕರಾಳ ನೆನಪುಗಳ ಸ್ವಂತ ಅನುಭವಗಳನ್ನು ಎಷ್ಟೊಂದು ನೈಜವಾಗಿ , ಸರಳವಾಗಿ ವಿವರಿಸುತ್ತಿದ್ದೀರಿ . ನಿಮ್ಮ ಲೇಖನಗಳ ಶೈಲಿಗೆ ಮಾರುಹೋಗಿದ್ದೇನೆ , ಸಂಪದ ಸಾಹಿತ್ಯಕವಾಗಿ ಸಿರಿವಂತವಾಗುತ್ತಿದೆ .
    ಧನ್ಯವಾದಗಳು , ನಾಗರಾಜ್ ಅವರೆ

    Kavinagaraj
    28JUL2010 8:47
    ನಿಮ್ಮ ಪ್ರತಿಕ್ರಿಯೆ ನನಗೆ ತುಂಬಾ ಸಂತೋಷವುಂಟುಮಾಡಿದೆ. ವಂದನೆಗಳು.

    Ksraghavendranavada
    28JUL2010 5:34
    ನೈಜ ಹಾಗೂ ಸು೦ದರ ನಿರೂಪಣೆ ಓದಿಸಿಕೊ೦ಡು ಹೋಗುತ್ತಿದ್ದು, ಮು೦ದಿನದಕ್ಕೆ ಕಾಯುವ೦ತೆ ಮಾಡಿದೆ.
    ನಮಸ್ಕಾರಗಳೊ೦ದಿಗೆ,

    Kavinagaraj
    28JUL2010 8:48
    ರಾಘವೇಂದ್ರರೇ, ನಿಮ್ಮ ಪ್ರತಿಕ್ರಿಯೆಯೂ ಸುಂದರ, ಪ್ರೋತ್ಸಾಹದಾಯಕ. ನಮನಗಳು.

    ವೀರೇಂದ್ರ. ಸಿ
    28JUL2010 5:59
    ನಾಗರಾಜ್ ರವರೆ,
    ನಿಮ್ಮ ಅನುಭವವು ಯಾತನದಾಯಕವಾಗಿದ್ದು , ತುರ್ತು ಪರಿಸ್ತಿತಿಯ ಕರಾಳತೆಯನ್ನು ಎತ್ತಿ ತೋರಿಸುತದೆ. ನನ್ನಂಥವರಿಗೆಲ್ಲ ಅಂದರೆ ೧೯೭೫+ ನಂತರ ಹುಟ್ಟಿದವರಿಗೆ ಬಹುಷಃ ಈ ಕಷ್ಟಗಲ್ಲೆಲ್ಲ ತಿಳಿದಿಲ್ಲವೆನ್ನಿಸುತದೆ.
    ನಿಮ್ಮ ಬರಹವು ತುಂಬಾ ಆಸಕ್ತಿದಾಯಕವಾಗಿದೆ .. ಹೀಗೆ ಮುಂದುವರಸಿ .

    Kavinagaraj
    28JUL2010 8:49
    ನಿಮ್ಮ ಮೆಚ್ಚುಗೆಗಾಗಿ ಹೃತ್ಪೂರ್ವಕ ವಂದನೆಗಳು.

    Vijay Pai
    28JUL2010 9:04
    ನಾಗರಾಜ ಅವರೆ..
    ತುರ್ತು ಪರಿಸ್ಥಿತಿಯ ಕರಾಳತೆ ನಮಗೆ ಅರ್ಥ ಆಗುವಂತೆ ಮಾಡುತ್ತಿದ್ದೀರಿ ಈ ನಿಮ್ಮ ನೈಜ ಅನುಭವಗಳ ಮೂಲಕ. ತಾವು ಬದುಕಿನಲ್ಲಿ ಸಾಕಷ್ಟು ಏರಿಳಿತ ಅನುಭವಿಸಿ ಮೇಲೆ ಬಂದಿದ್ದೀರಿ.

    Kavinagaraj
    29JUL2010 9:43
    ನಮಸ್ಕಾರ ವಿಜಯ ಪೈರವರೇ. ಜೀವನ ಸಮುದ್ರದಲ್ಲಿ ಏರಿಳಿತಗಳು ಸಾಮಾನ್ಯ. ಆದರೆ ಕೆಲವರು ಹುಚ್ಚು ಪ್ರವಾಹದಲ್ಲಿ ಸಿಲುಕುತ್ತಾರೆ. ಅಂತಹವರ ಪೈಕಿ ನಾನೊಬ್ಬ ಅಷ್ಟೆ.

    ಬೆಳ್ಳಾಲ ಗೋಪೀನಾಥ ರಾವ್
    28JUL2010 9:15
    ಕವಿಯವರೇ
    ನೋಡಿ ನಿಮ್ಮ ಜೀವನದಲ್ಲಿ ಏನೇನೆಲ್ಲಾ ಆಗಿ ಹೋಗಿದೆ
    ಕೆಲವೊಮ್ಮೆ ಅದೇ ನೆನಪಿಗೆ ಬಂದು ಹಿಂಸೆಯಾಗುತ್ತದೆ ಮನಸ್ಸಿಗೆ.
    ಆ ಕಷ್ಟ ಕೋಟಲೆಗಳನ್ನೆಲ್ಲಾ ಜಯಿಸಿ ಬಂದಿರಲ್ಲಾ ನೀವು ದಿವ್ಯಾತ್ಮ ಬಿಡಿ
    ನಿಮ್ಮ ಮೇಲಿನ ಅಭಿಮಾನ ನೂರ್ಮಡಿಯಾಗುತ್ತಿದೆ

    ಪ್ರವೀಣ ಸಾಯ
    28JUL2010 9:27
    ನಾಗರಾಜ್ ಅವರೇ ,
    ನಮಗೂ ತುರ್ತು ಪರಿಸ್ಥಿತಿಯ ಆಗು ಹೋಗು ಗಳ ಬಗ್ಗೆ ತುಂಬಾ ಬೇಸರವಿತ್ತು . ನಿಮ್ಮ ನಿಜ ಚಿತ್ರಣಗಳು ಅದೆಲ್ಲವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿ ಹೇಳಿದೆ .
    ಪ್ರವೀಣ ಸಾಯ

    Kavinagaraj
    29JUL2010 9:48
    ಧನ್ಯವಾದಗಳು, ಪ್ರವೀಣ ಸಾಯ.

    Kavinagaraj
    29JUL2010 9:46
    ಗೋಪಿನಾಥರೇ, ಕಷ್ಟಗಳನ್ನು ಅನುಭವಿಸುವಾಗ ನಾನು ಒಂಟಿಯೇನೋ ಅನ್ನಿಸಿತ್ತು. ಅನುಭವಗಳನ್ನು ಹಂಚಿಕೊಳ್ಳುತ್ತಿರುವಾಗ ನಿಮ್ಮಿಂದ ಬಂದ ಈ ಪ್ರತಿಕ್ರಿಯೆ ನನ್ನ ಎದೆ ತುಂಬಿಸಿದೆ.
    ನಾರಾಯಣ ಭಾಗ್ವತ
    28JUL2010 11:14
    ಕವಿ ನಾಗರಾಜ್ ರವರೆ ವಂದನೆಗಳು,
    ನಿಮ್ಮ ಈ ಕರಾಳ ಅನುಭವವನ್ನು ತೆರೆದಿಡುವ ನಿಮ್ಮ ಲೇಖನ ಶೈಲಿಗೆ ಹಾಗೂ ನಿಮ್ಮ ಆ ಅನುಭವಕ್ಕೆ ಸಲಾಂ

    Kavinagaraj
    29JUL2010 9:47
    ನಿಮಗೂ ನನ್ನ ಸಲಾಂ, ಭಾಗ್ವತರೇ.

    ಗೋಪಾಲ್ ಮಾ ಕುಲಕರ್ಣಿ
    29JUL2010 9:57
    ನಿಮ್ಮ ಆ ಕಷ್ಟದ ದಿನಗಳು ಯಾರಿಗಾದರೂ ಕಣ್ಣಲ್ಲಿ ನೀರು ತರಿಸುವಂತವು. ನಿಮ್ಮ ಲೇಖನ ತುಂಬಾ ಚೆನ್ನಾಗಿ ಮೂಡಿ ಬರುತ್ತಾ ಇದೆ.

    Kavinagaraj
    29JUL2010 10:06
    ಗೋಪಾಲ್, ನಿಮ್ಮ ಪ್ರತಿಕ್ರಿಯೆ ಹೃದಯಸ್ಪರ್ಷಿಯಾಗಿದೆ. ವಂದನೆ.

    ಪ್ರತ್ಯುತ್ತರಅಳಿಸಿ
  2. ಹೊಳೆ ನರಸೀಪುರ ಮಂಜುನಾಥ
    29JUL2010 10:36
    ಕವಿ ನಾಗರಾಜರೆ, ತುರ್ತು ಪರಿಸ್ಥಿತಿಯ ದಿನಗಳಲ್ಲಿನ ನಿಮ್ಮ ಅನುಭವಗಳು ನನ್ನ ಕಾ೦ಗ್ರೆಸ್ ವಿರೋಧಿ ನಿಲುವನ್ನು ಇನ್ನೂ ಗಟ್ಟಿಗೊಳಿಸುತ್ತಿವೆ. ಅವರಿವರ ಅನುಭವಗಳನ್ನು ಕೇಳಿದ್ದೆ, ಸಾಕಷ್ಟು ಓದಿ ಅ೦ದಿನ ಕಠೋರ ವಾಸ್ತವತೆಯನ್ನು ಅರ್ಥ ಮಾಡಿಕೊ೦ಡಿದ್ದೆ, ಆದರೆ ಈಗ ಸ೦ಪದದಲ್ಲಿ ನೀವು ಹರಿ ಬಿಡುತ್ತಿರುವ ನಿಮ್ಮ ಅನುಭವಗಳು ನಿಜಕ್ಕೂ ಇ೦ದಿರಮ್ಮನ ಭಕ್ತರ ಕಣ್ಣು ತೆರೆಸುವ೦ತಿವೆ.

    Kavinagaraj
    29JUL2010 11:02
    ಆತ್ಮೀಯ ಮಂಜು, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ಹರೀಶ್ ಆತ್ರೇಯ
    29JUL2010 11:20
    ಆತ್ಮೀಯ
    ತುರ್ತು ಪರಿಸ್ಥಿಯ ಕ್ರೌರ್ಯದ ಬಗ್ಗೆ ಕೇಳಿದ್ದೆ. ಆದರೆ ನಿಮ್ಮ ಬರಹ ಓದಿದ ಮೇಲೆ ಅದರ ಬಗ್ಗೆ ಇನ್ನೂ ಅಸಹ್ಯವಾಗುತ್ತೆ. ಛೆ ಎ೦ಥ ನಾಯಕರಿದ್ದರು ಅ೦ತ. ಅದೇ ಜಾತಿ ಇನ್ನೂ ಇದೆ. ವಿಚಿತ್ರ ಅ೦ದ್ರೆ ಅವರ೦ಥವರನ್ನೇ ನಮ್ಮ ಜನ ಪೀಠಕ್ಕೆ ಕೂರಿಸ್ತಾರಲ್ಲ ಅ೦ತ.
    ಪೋಲೀಸನ ಕ್ರೌರ್ಯ ಈ ಮಟ್ಟದಲ್ಲೂ ಇದೆ ಅ೦ದ್ರೆ ...ಛೆ! ಜನಗಳ ಮೇಲೆ ಆ ಥರ ಮಾತಾಡ್ತಾರೆ ಅ೦ದ್ರೆ ಅವರಲ್ಲಿ ಮಾನವತೆ ಅನ್ನೋದು ಇಲ್ವಾ?. ಬರಹ ಕುತೂಹಲಕಾರಿಯಾಗಿ ಇದೆ ಜೊತೆಗೆ ಸತ್ಯದ ಅನಾವರಣವೂ ಹೌದು
    ಹರಿ

    Kavinagaraj
    29JUL2010 11:38
    ಆತ್ಮೀಯ ಹರಿ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಮಾನವತೆಯ ಒರತೆ ಬತ್ತುತ್ತಿದೆಯೇ ಎಂದು ಒಮ್ಮೊಮ್ಮೆ ಅನ್ನಿಸುತ್ತದೆ. ಸಾಮಾನ್ಯರಿಗೆ ಪೋಲಿಸರ ಭಯ ಇರುತ್ತದೆ. ಪೋಲಿಸರಿಗೆ?

    Raghu S P
    29JUL2010 11:34
    ಮನ ಮುಟ್ಟುವ ಬರಹ, ಇಷ್ಟೊಂದು ಹೋರಾಟ ಮಾಡಿದ ನಿಮಗೆ, ಇವತ್ತಿನ ದೇಶದ ರಾಜಕೀಯ ಪರಿಸ್ಥಿತಿಯಲ್ಲಿ , ಅಂತಹ ಒಂದು ವಿರೋಧದ ಚಳುವಳಿಯ ಆಗತ್ಯವಿದೆ ಅನ್ನಿಸುವುದಿಲ್ಲವೇ.

    Kavinagaraj
    29JUL2010 11:41
    ನಮಸ್ಕಾರ ರಘು, ರಾಜಕೀಯ ದಾರಿ ತಪ್ಪಿದೆ, ಜನತೆ ದಿಕ್ಕು ತಪ್ಪಿದೆ. ಚಳುವಳಿಗಳು ಅರ್ಥ ಕಳೆದುಕೊಂಡಿವೆ. ಜನರು ಪ್ರಜ್ಞಾವಂತರಾಗುವವರೆಗೆ ಇದೇ ಪರಿಸ್ಥಿತಿ ಇರುತ್ತದೆ.

    ತೇಜಸ್ವಿ
    29JUL2010 12:59
    ತುರ್ತು ಪರಿಸ್ಥಿತಿ ಸಮಯದಲ್ಲಿ ಈ ಮಟ್ಟಿಗೆ ಕಷ್ಟ ಇತ್ತು ಅಂತ ಊಹಿಸಿರಲಿಲ್ಲ. ಅಂದಿನ ಪರಿಸ್ಥಿತಿಯನ್ನು ತಿಳಿಸಿ ಕೊಟ್ಟಿದಕ್ಕೆ ಧನ್ಯವಾದಗಳು.
    ಅದರಲ್ಲೂ ನೀವು ಇಷ್ಟು ತೊಂದರೆ ಅನುಭವಿಸಿದ್ದು ನೋಡಿ ಮನಸ್ಸಿಗೆ ಬೇಜಾರಾಯಿತು.

    Kavinagaraj
    29JUL2010 3:49
    ತೇಜಸ್ವಿ, ನಿಮ್ಮ ಸ್ಪಂದನಕ್ಕೆ ಧನ್ಯವಾದಗಳು. ತುರ್ತು ಪರಿಸ್ಥಿತಿ ಕಾಲದಲ್ಲಿ ನಡೆದ ದೌರ್ಜನ್ಯಗಳು, ಹಿಂಸೆಗಳಲ್ಲಿ ಬೀದಿಗೆ ಬಿದ್ದವರೆಷ್ಟೋ, ಪ್ರಾಣ ಕಳೆದುಕೊಂಡವರೆಷ್ಟೋ! ಅಂತಹುದನ್ನೆಲ್ಲಾ ಗಣನೆಗೆ ತೆಗೆದುಕೊಂಡರೆ ನನ್ನಂತಹವರ ಕಷ್ಟ ಸಹನೀಯವಾಗಿತ್ತೆನ್ನಬಹುದು! ಈ ಕುರಿತು ಅನೇಕ ಪುಸ್ತಕಗಳೇ ಹೊರಬಂದಿವೆ. ರಾಷ್ಟ್ರೋತ್ಥಾನ ಪರಿಷತ್ ಪ್ರಕಟಣೆ 'ಭುಗಿಲು' ನೀವು ಓದಬಹುದು.

    ಸುಧೀ೦ದ್ರ ಚಡಗ
    29JUL2010 4:03
    ನಾಗರಾಜ ಅವರೆ, ತುರ್ತು ಪರಿಸ್ಥಿತಿಯಲ್ಲಿ ಪೋಲೀಸರ ದೌರ್ಜನ್ಯ ಓದಿ ಮನಸ್ಸಿಗೆ ತು೦ಬಾ ನೋವಾಯಿತು. ಇದನ್ನ ಹ೦ಚಿಕೊ೦ಡಿದ್ದಕ್ಕೆ ಬಹಳ ನನ್ನಿ.
    ಲೇಖನದ ಮು೦ದಿನ ಭಾಗಕ್ಕೆ ಕಾಯುತ್ತಿರುವೆ.

    Kavinagaraj
    29JUL2010 5:27
    ಬರಹಕ್ಕೆ ಸ್ಪಂದಿಸಿದ ಚಡಗರಿಗೆ ಧನ್ಯವಾದಗಳು.

    ಕೇಶವ ಮೈಸೂರು
    30JUL2010 8:00
    ಕವಿ ನಾಗರಾಜ್ ರವರಿಗೆ,
    ನಿಮ್ಮ ಬರಹಗಳೆಲ್ಲವನ್ನೂ ಓದುತ್ತಿದ್ದೇನೆ. ಸೇವಾ ಪುರಾಣದ ಸರಣಿ ನಿಜಕ್ಕೂ ಹೃದಯ ತಟ್ಟುವಂಥದ್ದು. ಭ್ರಷ್ಟಾಚಾರದ ಆಡೊಂಬಲವಾದ ಕಂದಾಯ ಇಲಾಖೆಯಲ್ಲಿದ್ದುಕೊಂಡೂ ಪ್ರಾಮಾಣಿಕತೆ, ನೈತಿಕತೆಗಳನ್ನು ಬಿಡದೆ ಇದ್ದ ನೀವು ನಿಜಕ್ಕೂ ಪ್ರಾತಃಸ್ಮರಣೀಯರು.
    ಅಂದಹಾಗೆ ನಿಮ್ಮ ಅಂಚೆ ಪುರಾಣದ ಮೊದಲ ಕಂತು ಓದಿದಾಗ ತಟ್ಟನೆ ನೆನೆಪಿಗೆ ಬಂದದ್ದು - ೧೯೮೦ರಲ್ಲಿ ನಾನು ೭೨% ತೆಗೆದುಕೊಂಡು ಎಸ್ ಎಸ್ ಎಲ್ ಸಿ ಪರೀಕ್ಷೆ ಪಾಸು ಮಾಡಿದಾಗ ಬೆಟ್ಟದಪುರದಲ್ಲಿ ಪೋಸ್ಟ್ ಮಾಸ್ತರರಾಗಿ ಕೆಲಸ ಮಾಡುತ್ತಿದ್ದ ನಮ್ಮ ತಂದೆಯವರು ಅಂದದ್ದು - "ಪರವಾಗಿಲ್ಲ, ಎಲ್ಲಿ ಕೆಲಸ ಸಿಗದಿದ್ದರೂ ನಿನಗೆ ಅಂಚೆ ಕಚೇರಿಯಲ್ಲಿ ಪೋಸ್ಟ್ ಮಾಸ್ತರ್ ಕೆಲಸವಂತೂ ಸಿಗುತ್ತದೆ ಬಿಡು!" ಅವರು ೧೯೬೦ರಲ್ಲಿ ಅರಕಲುಗೂಡಿನಲ್ಲೂ, ೧೯೬೩ರಲ್ಲಿ ಬೇಲೂರಿನಲ್ಲೂ ಸೇವೆ ಸಲ್ಲಿಸಿದ್ದರು. ಅದಕ್ಕೆ ೧೯೬೪ರಲ್ಲಿ ಹುಟ್ಟಿದ ನನಗೆ ಕೇಶವನೆಂದು ಹೆಸರು! ೧೯೮೮ರಿಂದ ಅವರೀಗ ಮೈಸೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.
    ನಿಮ್ಮ ಕವಿಮನಕ್ಕೂ ಹೋಗಿಬಂದೆ. ಅದರಲ್ಲಿ ನೀವು ಬಳಸಿರುವ ಶೀರ್ಷಿಕೆಯ ಛಾಯಾಚಿತ್ರ - ಭವ್ಯ ದೇವಾಲಯದ್ದು, ಬಹಳ ಚೆನ್ನಾಗಿದೆ. ಅದು ಎಲ್ಲಿಯ ದೇವಾಲಯ ಎಂದು ಸ್ವಲ್ಪ ತಿಳಿಸುತ್ತೀರಾ?
    ಕೇಶವ ಮೈಸೂರು

    Kavinagaraj
    31JUL2010 10:44
    ನಮಸ್ಕಾರ, ಮೈಸೂರು ಕೇಶವರಿಗೆ. ನಿಮ್ಮ ಮೆಚ್ಚುಗೆಯ ಮಾತುಗಳನ್ನು ಕೇಳಿ ಸಾರ್ಥಕವೆನಿಸಿತು.
    ನಾನು ಕೆಳದಿ ಕವಿಮನೆತನದವನು ಎಂದು ತಿಳಿದದ್ದೇ 6 ವರ್ಷಗಳ ಹಿಂದೆ. ಅದು ಗೊತ್ತು ಮಾಡಿಕೊಳ್ಳುವುದರ ಹಿಂದೆ ನನ್ನ ಮತ್ತು ನನ್ನ ತಮ್ಮನ ಸುಮಾರು 8-10 ವರ್ಷಗಳ ಶ್ರಮ -ವಿಶೇಷವಾಗಿ ನನ್ನ ತಮ್ಮ ಸುರೇಶನ - ಇದೆ. ಆದ್ದರಿಂದ ಕವಿನುಡಿ ಬ್ಲಾಗ್ ಶೀರ್ಷಿಕೆಯಲ್ಲಿ ಕೆಳದಿ ರಾಮೇಶ್ವರ ದೇವಾಲಯದ ಚಿತ್ರ ಅಳವಡಿಸಿಕೊಂಡಿದ್ದೇನೆ.
    ನಾನು ಬೇಲೂರಿನಲ್ಲಿ ಉಪತಹಸೀಲ್ದಾರನಾಗಿ (1994-99) ಮತ್ತು ಅರಕಲಗೂಡಿನಲ್ಲಿ ತಹಸೀಲ್ದಾರನಾಗಿ(2001-02) ಕೆಲಸ ಮಾಡಿದ್ದೆ.

    ಪ್ರತ್ಯುತ್ತರಅಳಿಸಿ