ತೊಳಲಾಟ
ಅಂದ ಹಾಗೆ ನನ್ನ ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವೇನಾಗಿರಲಿಲ್ಲ. ಕೆಳಮಧ್ಯಮ ವರ್ಗಕ್ಕೆ ಸೇರಿಸಬಹುದಾದ ಕುಟುಂಬ ನಮ್ಮದು. ತಿಂಗಳ ಕೊನೆಯ ವಾರದಲ್ಲಿ ಸಂಬಳ ಬರಲು ಇನ್ನೂ ಎಷ್ಟು ದಿನ ಇದೆ ಎಂದು ಲೆಕ್ಕ ಹಾಕುವ ಪರಿಸ್ಥಿತಿ ಇತ್ತು. ಇಂತಹುದೇ ಒಂದು ದಿನ ಕಾಲೇಜು ರಸ್ತೆಯಲ್ಲಿದ್ದ ಒಂದು ನ್ಯಾಯಬೆಲೆ ಅಂಗಡಿಗೆ ತಪಾಸಣೆ ಮಾಡಲು ಹೋದೆ. ಲೆಕ್ಕ ಪತ್ರಗಳು, ದಾಸ್ತಾನು ಪರಿಶೀಲಿಸಿ ಹೊರಡುವ ಸಮಯದಲ್ಲಿ ನನ್ನ ಸ್ವಭಾವದ ಅರಿವಿದ್ದ ಮಾಲಿಕ "ದಯವಿಟ್ಟು ತಪ್ಪು ತಿಳಿಯಬೇಡಿ, ಸ್ವಾಮಿ. ಇದು ಲಂಚ ಅಲ್ಲ. ಮನೆಗೆ ಹಣ್ಣು ತೆಗೆದುಕೊಂಡು ಹೋಗಿ ಸ್ವಾಮಿ" ಎಂದು ನನ್ನ ಜೇಬಿಗೆ ಬೇಡ ಎಂದರೂ 50 ರೂ. ನೋಟನ್ನು ಹಾಕಿದ. ನನಗೆ ಆಗ ಹಣದ ಅವಶ್ಯಕತೆ ಇತ್ತು. ಮನಸ್ಸು ಡೋಲಾಯಮಾನ ಸ್ಥಿತಿಯಲ್ಲಿತ್ತು. ಹಾಗಾಗಿ ಸುಮ್ಮನೆ ಹೊರಬಂದೆ. ಜೇಬಿನಲ್ಲಿ ಹಣವಿದೆ. ಉಪಯೋಗಕ್ಕೆ ಆಯಿತು ಎಂದುಕೊಂಡೆ. ಆದರೆ ನನ್ನ ಮನಸ್ಸಿಗೆ ನೆಮ್ಮದಿ ಇಲ್ಲವಾಯಿತು. ಸರಿಯಾಗಿ ಊಟ ಸೇರಲಿಲ್ಲ. ರಾತ್ರಿ ನಿದ್ದೆ ಬರಲಿಲ್ಲ. ಹಣವನ್ನು ಅಂಗಡಿ ಮಾಲಿಕನಿಗೆ ವಾಪಸು ಕೊಡುವುದು ಒಳ್ಳೆಯದೆಂದು ನಿರ್ಧಾರಕ್ಕೆ ಬಂದ ನಂತರ ನಿದ್ದೆ ಬಂತು. ಬೆಳಿಗ್ಗೆ ಬೇಗ ಎದ್ದು ಸ್ನಾನ, ತಿಂಡಿ ಮುಗಿಸಿಕೊಂಡು ಹೋಗಿ ನೋಡಿದರೆ ಅಂಗಡಿ ಬಾಗಿಲು ಇನ್ನೂ ತೆರೆದಿರಲಿಲ್ಲ. ಮಾಲಿಕನಿಗೆ ಕಾಯುತ್ತಾ ಅಂಗಡಿಯ ಕಟ್ಟೆ ಮೇಲೆ ಕುಳಿತುಕೊಂಡೆ. ಸ್ವಲ್ಪ ಸಮಯದ ನಂತರ ಬಂದ ಅಂಗಡಿ ಮಾಲಿಕ ನನ್ನನ್ನು ಕಂಡು ಗಲಿಬಿಲಿಗೊಂಡ.ಏನೋ ಗ್ರಹಚಾರ ಕಾದಿದೆ ಎಂದು ಆತ ಅಂದುಕೊಂಡಿದ್ದನೆಂದು ನಂತರ ಆತನೇ ನನಗೆ ಹೇಳಿದ. ಆತನಿಗೆ ನಾನು 50 ರೂ. ಹಿಂತಿರುಗಿಸಿ "ನೀವು ಹಣ ಕೊಟ್ಟಾಗ ನನ್ನ ಮನಸ್ಸು ಚಂಚಲವಾಯಿತು. ದಯವಿಟ್ಟು ಇನ್ನೊಮ್ಮೆ ಹೀಗೆ ಮಾಡಬೇಡಿ" ಎಂದು ಹೇಳಿ ನಿರಾಳ ಮನಸ್ಸಿನಿಂದ ಅಲ್ಲಿಂದ ಹೊರಟೆ. ಅಂಗಡಿಯವನೂ ನಿಟ್ಟುಸಿರು ಬಿಟ್ಟಿದ್ದ!
ಫುಡ್ ಇನ್ಸ್ ಪೆಕ್ಟರ್ ಯಾರು?
ಆಗ ಹಾಸ್ಟೆಲುಗಳಿಗೆ, ಸಂಸ್ಥೆಗಳಿಗೆ ವಿಶೇಷ ಪಡಿತರ ಪರ್ಮಿಟ್ಟುಗಳನ್ನು ಕೊಡಲಾಗುತ್ತಿತ್ತು. ಸೈಂಟ್ ಫಿಲೋಮಿನಾ ಶಾಲೆಯ ಹಾಸ್ಟೆಲ್ಲಿಗೆ ವಿಶೇಷ ಪರ್ಮಿಟ್ ಕೋರಿ ಬಂದಿದ್ದ ಅರ್ಜಿ ಕುರಿತು ನಾನು ಪರಿಶೀಲಿಸಿ ವರದಿಸಲು ಹೊರಟಿದ್ದ ವೇಳೆಯಲ್ಲಿ ಅಂತಿಮ ವರ್ಷದ ಪಾಲಿಟೆಕ್ನಿಕ್ ನಲ್ಲಿ ಹಾಸನದ ಎಲ್.ವಿ.ಪಾಲಿಟೆಕ್ನಿಕ್ ನಲ್ಲಿ ಓದುತ್ತಿದ್ದ ನನ್ನ ಸಂಬಂಧಿ ಚಿದಂಬರ ದಾರಿಯಲ್ಲಿ ಸಿಕ್ಕು ಜೊತೆಯಲ್ಲಿ ತಾನೂ ಬರುತ್ತೇನೆಂದು ನನ್ನೊಟ್ಟಿಗೆ ಬಂದ. ವಿದ್ಯಾರ್ಥಿಯಾಗಿದ್ದರೂ ಆತ ದಷ್ಟಪುಷ್ಟನಾಗಿದ್ದ. ನಾನು ಆತನ ಮುಂದೆ ಪೀಚು. ನಾನು ಹಾಸ್ಟೆಲ್ ನ ಮುಖ್ಯಸ್ಥರಾಗಿದ್ದ ಪಾದ್ರಿಯನ್ನು ವಿಚಾರಿಸುತ್ತಿದ್ದೆ. ಅವರು ಚಿದಂಬರನನ್ನೇ ಫುಡ್ ಇನ್ಸ್ ಪೆಕ್ಟರ್ ಎಂದು ಭಾವಿಸಿ ಅವನನ್ನು ಕರೆದು ಕುರ್ಚಿಯ ಮೇಲೆ ಕುಳ್ಳಿರಿಸಿದರು. ನನ್ನನ್ನು ಅವನ ಸಹಾಯಕ ಎಂದು (ನನ್ನ ಹತ್ತಿರ ಕಡತಗಳಿದ್ದ ಬ್ಯಾಗ್ ಇದ್ದರೆ ಆತ ಬಿಡುಬೀಸಾಗಿ ಬಂದಿದ್ದರಿಂದ ಇರಬಹುದು) ತಿಳಿದಿದ್ದರು. ನಂತರ ಕುರ್ಚಿಯಿಲ್ಲದೆ ನಿಂತಿದ್ದ ನನಗೂ ಒಂದು ಕುರ್ಚಿ ತರಿಸಿಕೊಟ್ಟರು. ನಾನು ಹಾಜರಾತಿ ಪುಸ್ತಕ, ಹಾಸ್ಟೆಲ್ಲಿನಲ್ಲಿರುವವರ ವಿವರ ಕೇಳುತ್ತಿದ್ದರೆ ಪಾದ್ರಿಗಳು ಚಿದಂಬರನ ಮುಖ ನೋಡಿ ಇಂಗ್ಲಿಷಿನಲ್ಲಿ ಉತ್ತರಿಸುತ್ತಿದ್ದರು. ಅವನು 'ಯಸ್. ಯಸ್' ಎನ್ನುತ್ತಿದ್ದ. ಒಂದು ಪ್ಲೇಟಿನಲ್ಲಿ ಗೋಡಂಬಿ, ದ್ರಾಕ್ಷಿ ತಂದು ಚಹಾದೊಟ್ಟಿಗೆ ಅವನ ಮುಂದೆ ಇಟ್ಟರು. ನನಗೆ ಬರಿ ಚಹಾ. ಅವನು ಗೋಡಂಬಿ ತಿನ್ನುತ್ತಾ 'ನಿನಗೆ ಬೇಕಾ?' ಎಂದು ನನ್ನನ್ನು ಕೇಳಿದಾಗ ಪಾದ್ರಿಗಳು "ನೀವು ತೆಗೆದುಕೊಳ್ಳಿ ಸಾರ್, ಅವರಿಗೂ ಬೇರೆ ಕೊಡುತ್ತಾರೆ" ಎಂದು ಹೇಳಿದರು. ನನ್ನನ್ನು ನೋಡಿ ನಗುತ್ತಾ ಚಿದಂಬರ ಗೋಡಂಬಿ, ದ್ರಾಕ್ಷಿ ಮೆಲ್ಲುತ್ತಿದ್ದ. ವಿಚಾರಣೆ ಮುಗಿಸಿ ಹೊರಟಾಗ ಚಿದಂಬರನಿಗೆ ಪಾದ್ರಿಗಳ ನಮಸ್ಕಾರ ಸಹ ಸಿಕ್ಕಿತು. ಹೊರಗೆ ಬಂದಾಗ "ಇನ್ನು ಮುಂದೆ ಯಾವುದೇ ತಪಾಸಣೆಗೆ ಹೋದಾಗ ನಿನ್ನ ಜೊತೆಗೆ ನಾನೂ ಬರುತ್ತೇನೆ, ಚೆನ್ನಾಗಿರುತ್ತೆ" ಎಂದ! ನಾನು ನಂತರ ಅವನನ್ನು ಜೊತೆಗೆ ಕರೆದೊಯ್ಯುತ್ತಿರಲಿಲ್ಲ!
ಇನ್ಸ್ ಪೆಕ್ಟರ್ ಗಿರಿ ಹೋಯಿತು!
ಫುಡ್ ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡುತ್ತಾ ಒಂದು ವರ್ಷವಾಗಿತ್ತು. ಮೊದಲಿದ್ದ ಫುಡ್ ಅಸಿಸ್ಟೆಂಟರಿಗೆ ವರ್ಗವಾಗಿ ಹೊಸದಾಗಿ ಎಮ್. ಶಿವಯ್ಯ ಎಂಬುವವರು ಅವರ ಸ್ಥಾನಕ್ಕೆ ಬಂದಿದ್ದರು. ಅವರು ಮೂಲತಃ ಅಬಕಾರಿ ಇಲಾಖೆಗೆ ಸೇರಿದ್ದವರಾಗಿದ್ದು ಫುಡ್ ಅಸಿಸ್ಟೆಂಟರಾಗಿ ಹೇಗೆ ನೇಮಿಸಲಾಗಿತ್ತೋ ತಿಳಿಯದು. (ನಿವೃತ್ತಿ ನಂತರ ಅವರು ಮಂಡ್ಯದ ಮಳವಳ್ಳಿ ಕ್ಷೇತ್ರದಿಂದ ವಿಧಾನಸಭೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೇವಲ 500 ಮತಗಳಿಂದ ಸೋತಿದ್ದರು.) ಒಂದು ಸಾಯಂಕಾಲ ಸುಮಾರು ಆರು ಗಂಟೆಯಾಗಿರಬಹುದು. ನಾನು ಮಾಡಬೇಕಾದ ಕೆಲಸ ಬಾಕಿಯಿರಲಿಲ್ಲ. ನನ್ನ ಅಟ್ಲಾಸ್ ಸೈಕಲ್ಲಿನ ಹ್ಯಾಂಡಲಿಗೆ ಕ್ಯಾಶ್ ಬ್ಯಾಗ್ ಸಿಕ್ಕಿಸಿ ಹೊರಟೆ. (ನನ್ನ ಶ್ರೇಣಿಯ ಇತರ ಅಧಿಕಾರಿಗಳು ಮೋಟರ್ ಬೈಕಿನಲ್ಲಿ ಓಡಾಡುತ್ತಿದ್ದರೆ, ನನ್ನ ಹತ್ತಿರ ಇದ್ದುದು ಒಂದು ಅಟ್ಲಾಸ್ ಸೈಕಲ್ ಮತ್ತು ಒಂದು ಕ್ಯಾಶ್ ಬ್ಯಾಗು.ಹೆಸರಿಗೆ ಕ್ಯಾಶ್ ಬ್ಯಾಗು ಆದರೂ ಅದರಲ್ಲಿ ಕಡತಗಳಿರುತ್ತಿದ್ದವು, ಕ್ಯಾಶ್ ಇರುತ್ತಿರಲಿಲ್ಲ.) ಅಜಾನುಬಾಹು ಸಾಹೇಬರು ಛೇಂಬರಿನ ಹೊರಗೆ ಕಾರಿಡಾರಿನಲ್ಲಿ ನಿಂತು ಸಿಗರೇಟು ಸೇದುತ್ತಾ ನಿಂತಿದ್ದರು. ಅವರ ಗಟ್ಟಿಧ್ವನಿ ಮೊಳಗಿತು:
"ಏಯ್, ನಾಗರಾಜ, ಬಾ ಇಲ್ಲಿ".
ಸೈಕಲ್ ನಿಲ್ಲಿಸಿ ಹೋದೆ. ಆಗ ನಡೆದ ಸಂಭಾಷಣೆ:
"ಏಯ್, ನಾಗರಾಜ, ಬಾ ಇಲ್ಲಿ".
ಸೈಕಲ್ ನಿಲ್ಲಿಸಿ ಹೋದೆ. ಆಗ ನಡೆದ ಸಂಭಾಷಣೆ:
ಸಾಹೇಬರು: ನಾನಿಲ್ಲಿ ದೆವ್ವ ನಿಂತ ಹಾಗೆ ನಿಂತಿದ್ದೀನಿ. ಹೊರಟು ಬಿಟ್ಟೆಯಲ್ಲಾ?
ನಾನು: ಕೆಲಸ ಮುಗಿದಿತ್ತು, ಹೊರಟೆ.
ಸಾಹೇಬರು: ನೀನು ಎಗ್ಸಿಕ್ಯೂಟಿವ್. ನಾನು ಇರುವವರೆಗೂ ನೀನು ಇರಬೇಕು
ನಾನು: ಕ್ಷಮಿಸಿ. ಕೆಲಸ ಇದ್ದರೆ ರಾತ್ರಿಯೆಲ್ಲಾ ಇರುತ್ತೇನೆ. ಇಲ್ಲದಿದ್ದರೆ ಇರುವ ಅಗತ್ಯ ಕಾಣುತ್ತಿಲ್ಲ.
ಸಾಹೇಬರು: ಹಾಗಾದರೆ ನೀನು ಎಗ್ಸಿಕ್ಯೂಟಿವ್ ನೌಕರಿಗೆ ಏಕೆ ಬಂದೆ?
ನಾನು: ಕೆಲಸ ಇಲ್ಲದಿದ್ದರೂ ನೀವು ಇರುವವರೆಗೂ ನಾನು ಇರಬೇಕೆಂದಾದರೆ ನನಗೆ ಎಗ್ಸಿಕ್ಯೂಟಿವ್ ನೌಕರಿಯೇ ಬೇಡ.
ಸಾಹೇಬರು: ಹಾಗೆಂದು ಬರೆದುಕೊಡು.
ನಾನು ನನ್ನ ಬ್ಯಾಗಿನಿಂದ ಒಂದು ಹಾಳೆ ತೆಗೆದುಕೊಂಡು ಸೈಕಲ್ ಸೀಟನ್ನೇ ಆಧಾರವಾಗಿಟ್ಟುಕೊಂಡು ಅದೇ ರೀತಿ ಬರೆದುಕೊಟ್ಟು ಅವರು ನೋಡ ನೋಡುತ್ತಿದ್ದಂತೆಯೇ ಸೈಕಲ್ ಹತ್ತಿ ಹೊರಟುಬಿಟ್ಟೆ. ನಾನು ಹೋಗುವುದನ್ನೇ ನೋಡುತ್ತಿದ್ದ ಸಾಹೇಬರಿಗೆ ಭಯಂಕರ ಸಿಟ್ಟು ಬಂದಿರಬೇಕು. ಆ ಕೂಡಲೇ ಅವರು ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿದರಂತೆ. ಮರುದಿನ ಬೆಳಿಗ್ಗೆ ಕಛೇರಿಗೆ ಬಂದಾಗ ನನ್ನನ್ನು ಕಛೇರಿಯ ಗುಮಾಸ್ತನನ್ನಾಗಿಯೂ, ಕಛೇರಿಯ ಗುಮಾಸ್ತರೊಬ್ಬರನ್ನು ಫುಡ್ ಇನ್ಸ್ ಪೆಕ್ಟರನನ್ನಾಗಿಯೂ ಬದಲಾಯಿಸಿ ಮಾಡಿದ ಆದೇಶ ನನಗೆ ತಲುಪಿಸಲಾಯಿತು. ನನಗೆ ಅದರಿಂದ ದುಃಖವೇನೂ ಆಗಲಿಲ್ಲ. ಯಾವುದೇ ಕೆಲಸವಾದರೂ ನಾನು ಮಾಡಲು ಸಿದ್ಧನಿದ್ದೆ.
(ಕಾಲಘಟ್ಟ:1974) ... ಮುಂದುವರೆಯಲಿದೆ.
Ksraghavendranavada
ಪ್ರತ್ಯುತ್ತರಅಳಿಸಿ14JUL2010 7:51
ಆಗಿನ ಕಾಲದಲ್ಲಿಯೇ ಈ ರೀತಿ ಇತ್ತಲ್ಲವೇ? ನಮಸ್ಕಾರ ಮಾಡಲಿಲ್ಲವೆ೦ದು ಕರೆದು, ಬೈದು, “ ನಾಳೆಯಿ೦ದ ನಾನು ಕ೦ಡಕೂಡಲೇ ನಮಸ್ಕಾರ ಮಾಡಬೇಕು“ ಎ೦ದು ಬೇಡಿ, ನಮಸ್ಕರಿಸಿಕೊಳ್ಳುವ, ಆನ೦ತರ ಭಿಕ್ಷೆಯಿ೦ದ ಬ೦ದ ನಮಸ್ಕಾರದ ಮೂಲಕ ತನ್ನ ಮರ್ಯಾದೆಯನ್ನು ಹೆಚ್ಚಿಸಿಕೊಳ್ಳುವುದು, ಆಗಲೂ ಇತ್ತಲ್ಲವೇ? ಈಗ೦ತೂ ಹೆಚ್ಚು. ಏನೇ ಆಗಲಿ... ಸರಣಿ ಮು೦ದುವರೆಯಲಿ... ಮು೦ಡಿನ ಭಾಗದ ನಿರೀಕ್ಷೆಯಲ್ಲಿ..
ಧನ್ಯವಾದಗಳು.
Kavinagaraj
14JUL2010 12:39
ರಾಘವೇಂದ್ರರೇ, ನೀವಂದಂತೆ ಇಂತಹ ಕ್ರಿಯೆ, ಪ್ರತಿಕ್ರಿಯೆಗಳು ನಿರಂತರ ಮತ್ತು ಮಾನವಸಹಜಗುಣಗಳು. ಕೇಳಿ ಪಡೆಯುವ ಮರ್ಯಾದೆಗೆ ಈಗ ಬೆಲೆ ಜಾಸ್ತಿ. ಏಕೆಂದರೆ ಕೇಳಿ ಪಡೆಯುವುದೇ ಇಂದಿನ ವಸ್ತುಸ್ಥಿತಿಯಾಗಿದೆ. ಮೆಚ್ಚುಗೆಗೆ ವಂದನೆಗಳು.
ಬೆಳ್ಳಾಲ ಗೋಪೀನಾಥ ರಾವ್
14JUL2010 8:07
ಕವಿಯವರೇ
ಇಂತಹವರು ಎಲ್ಲಾ ಕಡೆ ಇದ್ದೇ ಇರುತ್ತಾರೆ ಅನ್ನಿಸುತ್ತೆ ನನಗೂ ಇಂತಹಾ ತರಹೇವಾರಿ ಜನರನ್ನು ನೋಡಿ ಎಷ್ಟೋ ಅನುಭವವವಾಗಿದೆ ಸುಂದರವಾಗಿ ಕುತೂಹಲಕಾರಿಯಾಗಿ ಮೂಡಿ ಬಂದಿದೆ
ಧನ್ಯವಾದಗಳು
Kavinagaraj
14JUL2010 12:40
ಗೋಪಿನಾಥರಿಗೆ ನಮಸ್ಕಾರಗಳು. ನೀವೇ ಅನುಭವಿಸಿರುವವರಾದ್ದರಿಂದ ನಿಮಗೆ ಅರ್ಥವಾಗುತ್ತದೆ. ಮೆಚ್ಚುಗೆಗೆ ವಂದಿಸುವೆ.
ಚೇತನ್ ಕೋಡುವಳ್ಳಿ
14JUL2010 12:54
ಸರ್ಕಾರಿ ಇಲಾಖೆಯ ಹಾಸ್ಯ ಸನ್ನಿವೇಶಗಳು, ಭೀಕರ ವ್ಯಕ್ತಿತ್ವಗಳು ನಿಮ್ಮ ಲೇಖನದಲ್ಲಿ ಚೆನ್ನಾಗಿ ಮೂಡಿಬಂದಿದೆ ನಾಗರಾಜವ್ರೆ.
ನಿಮ್ಮ ಸರಣಿ ಮುಂದುವರೆಯುತ್ತಿರಲಿ, ನೋಡುವ ಇನ್ನೂ ಯಾವ ಯಾವ ತರದ ಜನಗಳ ದರುಶನ ನಮಗೆ ಆಗುವುದೆಂದು...
Kavinagaraj
14JUL2010 1:02
ಮೆಚ್ಚುಗೆಗೆ ಧನ್ಯವಾದ ಚಿಕ್ಕೂ. ಭೀಕರ ವ್ಯಕ್ತಿತ್ವಗಳ ಜೊತೆಗೆ ಭೀಕರ ಸನ್ನಿವೇಶಗಳೂ ಎದುರಾಗಿವೆ. ನೋಡೋಣ, ಹೆಚ್ಚಿನವನ್ನು ಹಂಚಿಕೊಳ್ಳುವೆ.
ಹೊಳೆ ನರಸೀಪುರ ಮಂಜುನಾಥ
14JUL2010 2:19
ಕವಿ ನಾಗರಾಜರೆ, ಪ್ರಾಮಾಣಿಕತೆಗೆ ಈ ವ್ಯವಸ್ಥೆಯಲ್ಲಿ ಎ೦ದಿಗೂ ಬೆಲೆಯಿಲ್ಲವೆ೦ದು ಮತ್ತೊಮ್ಮೆ ನಿಮ್ಮ ಅನುಭವದ ಕಥೆಗಳಿ೦ದ ಸಾಬೀತಾಗುತ್ತಿದೆ. ನಿಮ್ಮ ಸೇವಾಪುರಾಣ ಮು೦ದುವರೆಯಲಿ.
Kavinagaraj
14JUL2010 4:41
ಆತ್ಮೀಯ ಮಂಜುರವರೇ, ಪ್ರಾಮಾಣಿಕತೆ ಎಲ್ಲರೂ ಬಯಸುವರು. ಪ್ರಾಮಾಣಿಕರನ್ನು ಕಡೆಗಣಿಸುವರು. ಕಲಿಯುಗದ ಪ್ರಭಾವ? ಮೆಚ್ಚುಗೆಗೆ ವಂದನೆಗಳು.
Komal
14JUL2010 9:51
ನಾಗರಾಜ್ ಸರ್ ತುಂಬಾ ಚೆನ್ನಾಗಿದೆ ಸೇವಾ ಪುರಾಣ.
Kavinagaraj
15JUL2010 9:55
ಹೆಸರು ಪುರಾಣ ಎಂದಿಟ್ಟಿದ್ದರೂ ಇವು ಸತ್ಯಘಟನೆಗಳು. ಮೆಚ್ಚಿದ್ದಕ್ಕೆ ಧನ್ಯವಾದ, ಕೋಮಲ್.
ನಾರಾಯಣ ಭಾಗ್ವತ
14JUL2010 10:13
ಕವಿನಾಗರಾಜರವರಿಗೆ ವಂದನೆಗಳು
ಸೇವಾ ಪುರಾಣ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ.
ಮಾಲತಿ
15JUL2010 10:24
ಅನುಭವ ಚೆನ್ನಾಗಿದೆ..ಆದ್ರು ನೀವು ದುಡುಕಿದ ಅನುಭವ ನಿಮಗಾಗ್ಲಿಲ್ಲವೆ..ತಕ್ಷಣ ರಾಜೀನಾಮೆ ನಿಡಬಾದದಿತ್ತೇನೊ..
Kavinagaraj
15JUL2010 10:33
ಅದು ರಾಜಿನಾಮೆಯಲ್ಲ ಮಾಲತಿಯವರೇ. ಷರತ್ತಿನ ಎಗ್ಸಿಗ್ಯೂಟಿವ್ ನೌಕರಿ ಬೇಡವೆಂದು ಬರೆದುಕೊಟ್ಟಿದ್ದು. ನೀವು ಹೇಳಿದಂತೆ ಸ್ವಾಭಿಮಾನ ಎಲ್ಲಾ ಸಮಯಗಳಲ್ಲೂ ಸರಿಯಾದುದಲ್ಲವೆಂಬುದು ನನ್ನ ಅನುಭವವೂ ಸಹ.