ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಜುಲೈ 16, 2010

ಸೇವಾ ಪುರಾಣ -2: ಇವನು ಫುಡ್ ಇನ್ಸ್ ಪೆಕ್ಟರಾ? -2: ವೇಶ್ಯಾ ಗೃಹಕ್ಕೂ ರೇಶನ್ ಕಾರ್ಡು!

ವೇಶ್ಯಾ ಗೃಹಕ್ಕೂ ರೇಶನ್ ಕಾರ್ಡು!
     ಹಾಸನ ನಗರದಲ್ಲಿ ಹೊಸ ರೇಶನ್ ಕಾರ್ಡುಗಳನ್ನು ವಿತರಿಸಲು ಹಲವು ತಂಡಗಳನ್ನು ರಚಿಸಿ ಆ ಮೂಲಕ ಮಾಡಿಸಲಾಗುತ್ತಿತ್ತು. ನಾನೂ ಒಂದು ತಂಡದ ಮುಖ್ಯಸ್ಥನಾಗಿದ್ದು ನನಗೆ ಸಹಾಯಕನಾಗಿ ನಗರಸಭೆಯ ಒಬ್ಬ ಬಿಲ್ ಕಲೆಕ್ಡರ್ ಇದ್ದ. ಒಂದು ಕಾರ್ಡಿನ ಬೆಲೆ 50 ಪೈಸೆ ಇದ್ದು ಬಿಲ್ ಕಲೆಕ್ಟರ್ 5-10 ರೂ.ಗಳನ್ನು ತೆಗೆದುಕೊಳ್ಳುತ್ತಿದ್ದುದನ್ನು ತಡೆದು 50 ಪೈಸೆ ಮಾತ್ರ ಪಡೆಯುವಂತೆ ಮಾಡಿದ್ದಕ್ಕೆ ಅವನಿಗೆ ಅಸಮಾಧಾನವಿತ್ತು. "ಇತರ ತಂಡಗಳವರು ಕೈತುಂಬಾ, ಜೇಬುತುಂಬಾ ಹಣ ಮಾಡಿಕೊಳ್ಳುತ್ತಿದ್ದಾರೆ. ಪ್ರತಿದಿನ ಸಾಯಂಕಾಲ ತುಂಡು-ಗುಂಡು ಸಮಾರಾಧನೆ ಮಾಡುತ್ತಿದ್ದಾರೆ. ನಿಮ್ಮ ಜೊತೆ ಬಂದಿರುವ ಈ ಪಾಪಿಗೆ ಒಂದು ಕಪ್ ಕಾಫಿ ಸಹ ಇಲ್ಲವಲ್ಲಾ ಸಾರ್" ಎಂದು ಅಲವತ್ತುಕೊಳ್ಳುತ್ತಿದ್ದ. ವಿಧಿಯಿಲ್ಲದೆ ಕಾರ್ಡುಗಳ ಕಟ್ಟು, ರಿಜಿಸ್ಟರ್ ಅನ್ನು ಹೊತ್ತುಕೊಂಡು ನನ್ನ ಜೊತೆ ಬರುತ್ತಿದ್ದ. ನಾನು ಕಾರ್ಡು ಕೊಡುವ ಮುನ್ನ ಕಾರ್ಡಿನಲ್ಲಿರುವ ವಿವರ ಮತ್ತು ಮನೆಯವರು ಹೇಳುವ ವಿವರ ಸರಿಯಿದೆಯೇ ಎಂದು ಪರಿಶೀಲಿಸಿಯೇ ಕಾರ್ಡು ಕೊಡುತ್ತಿದ್ದೆ. ಒಂದು ಮನೆಯ ಹತ್ತಿರ ಬಂದಾಗ "ನಾನು ಇಲ್ಲೇ ಇರುತ್ತೇನೆ. ನೀವು ಹೋಗಿಬನ್ನಿ" ಎಂದ. ನಾನು ಮನೆಯವರನ್ನು ಉದ್ದೇಶಿಸಿ "ಯಾರಿದ್ದೀರಿ?" ಎಂದಾಗ ಒಬ್ಬ ಧಡೂತಿ ಹೆಂಗಸು ಬಾಗಿಲು ತೆರೆದು ಒಳಕ್ಕೆ ಕರೆದು ನನ್ನನ್ನು ಸೋಫಾದ ಮೇಲೆ ಕುಳಿತುಕೊಳ್ಳಲು ಹೇಳಿದರು. ನಾನು ಕುಳಿತುಕೊಳ್ಳುವ ಹೊತ್ತಿಗೆ ಐದಾರು ಹುಡುಗಿಯರು ತುಂಡುಡುಗೆಯಲ್ಲಿ ಅಲ್ಲಿ ಬಂದು ನಿಂತುದನ್ನು ಕಂಡು ನನಗೆ ಮುಜುಗರವಾಯಿತು. ನಾನು ಮನೆಯ ಯಜಮಾನರ ಹೆಸರು ಕೇಳಿದೆ. "ಯಾಕೆ?" ಎಂಬ ಪ್ರಶ್ನೆಗೆ "ಕಾರ್ಡು ಕೊಡಲು" ಎಂದು ಉತ್ತರಿಸಿದೆ. ಧಡೂತಿ ಹೆಂಗಸು ಎಂಥದೋ ಒಂದು ಹೆಸರು ಹೇಳಿದರು. ನಾನು ಅಲ್ಲಿ ನಿಂತಿದ್ದ ಹುಡುಗಿಯರನ್ನು ಕಂಡು "ಇವರೆಲ್ಲಾ ನಿಮ್ಮ ಮಕ್ಕಳಾ?" ಎಂದು ಕೇಳಿದ್ದಕ್ಕೆ ಆ ಹೆಂಗಸು "ತಮಾಷೆ ಸಾಕು. ಯಾರು ಬೇಕೋ ಆರಿಸಿಕೊಳ್ಳಿ" ಎಂದು ಹೇಳಿದಾಗ ನನಗೆ ಧಸಕ್ಕೆಂದಿತು. ಒಂದು ಹುಡುಗಿ ಕಿಸಕ್ಕೆಂದು ನಕ್ಕಿತು. ಇಂತಹದ್ದೆಲ್ಲಾ ಕಲ್ಪನೆಯಿರದ ಮತ್ತು ನಿರೀಕ್ಷಿಸಿರದ ನಾನು ಯಾಕೋ ವಾತಾವರಣ ಸರಿಯಿಲ್ಲವೆಂದು ಮತ್ತು ಅಲ್ಲಿಂದ ಎದ್ದು ಹೋದರೆ ಸಾಕೆಂದು ಗಡಿಬಿಡಿ ಮತ್ತು ಗಾಬರಿಯಿಂದ ಕಾರ್ಡನ್ನು ಅಲ್ಲೇ ಬಿಟ್ಟು ಧಡೂತಿ ಹೆಂಗಸು 'ಏಯ್' ಎಂದು ಅರಚುತ್ತಿದ್ದಂತೆಯೇ ಹೊರಕ್ಕೆ ಓಡಿ ಬಂದೆ.ಹೊರಗಡೆಯಿದ್ದ ಬಿಲ್ ಕಲೆಕ್ಟರ್ "ಏಕೆ ಸಾರ್, ಇಷ್ಟು ಬೇಗ ಬಂದಿರಿ? ನಾನು ಇಲ್ಲೇ ಕಾಯುತ್ತಿರುತ್ತೇನೆ. ಹೋಗಿ ನಿಧಾನವಾಗಿ ಬನ್ನಿ ಸಾರ್" ಎಂದಾಗ ಮಾತನಾಡುವ ಸ್ಥಿತಿಯಲ್ಲಿಲ್ಲದಿದ್ದ ನಾನು ಅವನನ್ನು ದುರುಗುಟ್ಟಿಕೊಂಡು ನೋಡಿ ಏನೂ ಮಾತನಾಡದೆ ಸೀದಾ ಮನೆಗೆ ಹೋಗಿ ಸುಧಾರಿಸಿಕೊಂಡೆ. ಆದಿನ ಮತ್ತೆ ಕಾರ್ಡು ಕೊಡುವ ಕೆಲಸ ಮಾಡಲಿಲ್ಲ.
ಕುರುಡು ಕಾಂಚಾಣ ಕುಣಿಯುತಲಿತ್ತಾ; ಕಾಲಿಗೆ ಬಿದ್ದವರ ತುಳಿಯುತಲಿತ್ತಾ!
     ಲಂಚದ ಬಗ್ಗೆ ಲಂಚಕೋರರ ಬಗ್ಗೆ ಮಾತನಾಡುವವರೇ ಲಂಚದ ಮೂಲ. ಏಕೆಂದರೆ ಅವರೇ ಲಂಚ ಕೊಡುವವರು. ಲಂಚ ಕೊಡುವವರಿದ್ದರೆ ತೆಗೆದುಕೊಳ್ಳುವವರಿಗೇನು ಕಡಿಮೆ? ಲಂಚ ನೀಡಲು ಇರಬಹುದಾದ ಕಾರಣಗಳೆಂದರೆ: 1.ಕಾನೂನು/ನಿಯಮ ಮೀರಿ ಕೆಲಸ ಮಾಡಿಸಿಕೊಳ್ಳಲು ಮತ್ತು ಅದರಿಂದ ಲಾಭ ಮಾಡಿಕೊಳ್ಳಲು, 2.ಕೆಲಸ ಬೇಗ ಮಾಡಿಸಿಕೊಳ್ಳಲು, 3.ಕೆಲಸ ಆಗುವುದೋ ಇಲ್ಲವೋ ಎಂಬ ಆತಂಕ, 4.ಕಾನೂನು ಕಟ್ಟಳೆಗಳನ್ನು ಗೌರವಿಸದಿರುವುದು, ಇತ್ಯಾದಿಯಾಗಿ ಪಟ್ಟಿ ಮಾಡಬಹುದು. ಲಂಚ ಪಡೆಯಲು ಇರಬಹುದಾದ ಕಾರಣಗಳೆಂದರೆ: 1. ಹಣ ಸಂಗ್ರಹದ ದಾಹ, 2.ಮೇಲಾಧಿಕಾರಿಗಳ ಒತ್ತಡ, 3.ಪರಿಸ್ಥಿತಿ /ಸಂದರ್ಭದ ಅನಿವಾರ್ಯತೆ, 4.ಕಾನೂನು/ನಿಯಮಗಳನ್ನು ಗೌರವಿಸದಿರುವುದು, ಇತ್ಯಾದಿ, ಇತ್ಯಾದಿ. ಹಣ ಪಡೆದು ಅಭ್ಯಾಸವಾಗಿರುವವರಿಗೆ ಸುಲಭವಾಗಿ ಹಣ ಮಾಡಿಕೊಳ್ಳುವ ಮಾರ್ಗ ಕಂಡು ಅದೇ ದಾರಿಯಲ್ಲಿ ಮುಂದುವರೆಯುವುದು ವಿಶೇಷವೇನಲ್ಲ. ಏನೇ ಅಂದರೂ ಒಟ್ಟಿನಲ್ಲಿ ಇದು ಒಂದು ವಿಷವರ್ತುಲ. ಇದರಲ್ಲಿ ಕೊಡುವವರು ಮತ್ತು ಪಡೆಯುವವರು ಸಮಾನ ಪಾಪಿಗಳು. ಕೆಲಸ ಆದ ನಂತರ ಪ್ರೀತಿ, ವಿಶ್ವಾಸ, ಗೌರವ, ಇತ್ಯಾದಿ ಹೆಸರಿನಲ್ಲಿ ಕೊಡುವ ಹಣ/ವಸ್ತುಗೂ ಲಂಚಕ್ಕೂ ಇರುವ ನಡುವಣ ವ್ಯತ್ಯಾಸದ ಗೆರೆ ತೆಳುವಾದುದು. ನೌಕರಿಯ ಪ್ರಾರಂಭದ ದಿನಗಳಲ್ಲೇ ನನಗೆ ಭ್ರಷ್ಟಾಚಾರದ ಕಬಂದಬಾಹುವಿನ ಶಕ್ತಿಯ ಪರಿಚಯವಾಗಲಾರಂಭಿಸಿತು. ನನ್ನ ಸಂಸ್ಕಾರ, ಸಹವಾಸಗಳು ಹಾಗೂ ನ್ಯಾಯ, ನೀತಿ, ನಿಷ್ಠೆಯಿಂದ, ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕೆಂಬ ಧ್ಯೇಯ ನನ್ನನ್ನು ತಳಮಳಕ್ಕೆ ಈಡು ಮಾಡಿದ್ದಂತೂ ಸತ್ಯ. ಲಂಚ ಪಡೆಯದೆ ಕೆಲಸ ಮಾಡುವುದು ನಾನು ಅಂದುಕೊಂಡಿದ್ದಷ್ಟು ಸುಲಭದ್ದಾಗಿರಲಿಲ್ಲ. ಲಂಚ ಪಡೆಯದಿದ್ದರಿಂದಲೇ, ನಿಯಮಾನುಸಾರ ಕೆಲಸ ಮಾಡಿದ್ದರಿಂದಲೇ ನಾನು ಬಹಳಷ್ಟು ಕಷ್ಟ-ನಷ್ಟಗಳನ್ನು ಅನುಭವಿಸಬೇಕಾಯಿತೆಂದರೆ ಆಶ್ಚರ್ಯವೆನಿಸಬಹುದಾದರೂ ಅದು ಸತ್ಯ. ಕುರುಡು ಕಾಂಚಾಣ ಕುಣಿಯುತ್ತದೆ; ಕುಣಿಸುತ್ತದೆ!
ಪರ್ಮಿಟ್ ರಾಜ್ಯ!
     ಆ ಸಮಯದಲ್ಲಿ ಸಿಮೆಂಟಿಗೆ ಅಭಾವವಿದ್ದು ಆಹಾರ ಇಲಾಖೆಯಿಂದ ಪರ್ಮಿಟ್ ಪಡೆದವರಿಗಷ್ಟೇ ಸಿಮೆಂಟು ಸಿಗುತ್ತಿತ್ತು. ಫುಡ್ ಇನ್ಸ್ ಪೆಕ್ಟರ್ ಆಗಿದ್ದ ನಾನು ಅಥವ ಸಿವಿಲ್ ಸಪ್ಲೈ ಇನ್ಸ್ ಪೆಕ್ಟರರು ಕಟ್ಟಡಗಳನ್ನು ಪರಿಶೀಲಿಸಿ ನೀಡುವ ವರದಿ ಆಧರಿಸಿ ಸಿಮೆಂಟ್ ಪರ್ಮಿಟ್ ಕೊಡಲಾಗುತ್ತಿತ್ತು. ಆ ಪರ್ಮಿಟ್ ಗಳನ್ನು ನೀಡುವಾಗಲೂ ಲಂಚದ ಕಾರುಬಾರು ಜೋರಾಗಿ ಆಗುತ್ತಿತ್ತು. ನನ್ನ ಮಿತ್ರನೊಬ್ಬ ನನ್ನನ್ನು ಕುರಿತು "ನೀನೊಬ್ಬ ಸಾಚಾ ಎಂದುಕೊಂಡಿದ್ದೆ. ನನ್ನನ್ನೇ ಕೇಳಿದ್ದರೆ ನಾನೇ ಹಣ ಕೊಡುತ್ತಿರಲಿಲ್ಲವಾ?" ಎಂದಾಗ ನನಗೆ ಅರ್ಥವಾಗಲಿಲ್ಲ. ವಿಚಾರಿಸಿದಾಗ ಕಛೇರಿಯ ಗುಮಾಸ್ತರೊಬ್ಬರು ನನಗೂ ಕೊಡಬೇಕೆಂದು ಹೇಳಿ ತನ್ನ ಪಾಲಿನ ಜೊತೆಗೆ ನನ್ನದೂ ಸೇರಿಸಿ ಹೆಚ್ಚು ಹಣ ಪಡೆದಿದ್ದರು. ಮಿತ್ರನನ್ನೂ ಕರೆದುಕೊಂಡು ಹೋಗಿ ಗುಮಾಸ್ತರಿಗೆ ಛೀಮಾರಿ ಹಾಕಿ ಮಿತ್ರನಿಗೆ ಹಣ ವಾಪಸು ಕೊಡಿಸಿದೆ. ಅಂದಿನಿಂದ ಕಛೇರಿಯವರೆಲ್ಲರೂ ನನ್ನ ಮೇಲೆ ಕೆಂಡ ಕಾರಲು ಪ್ರಾರಂಭಿಸಿದ್ದರು.
     ಕೆಲಕಾಲ ಪೆಟ್ರೋಲು, ಡೀಸೆಲುಗಳಿಗೂ ಕೊರತೆಯಾಗಿ ಪರ್ಮಿಟ್ ಮೂಲಕ ವಿತರಣೆಯಾಗುತ್ತಿತ್ತು. ಆಗಿನ ಜಿಲ್ಲಾಧಿಕಾರಿಯವರು ಅವರ ಛೇಂಬರಿನ ಮುಂದೆ ಒಂದು ಕುರ್ಚಿ, ಟೇಬಲ್ಲು ಹಾಕಿಸಿ ಪರ್ಮಿಟ್ ಬರೆಯಲು ನನ್ನನ್ನು ಕೂರಿಸಿದ್ದರು. ಅರ್ಜಿಯ ಮೇಲೆ ಆದೇಶಿಸುವಾಗ ಜಿಲ್ಲಾಧಿಕಾರಿಯವರೇ ಸಣ್ನಪುಟ್ಟ ಮೊತ್ತದ ಹಣ ಪಡೆಯುತ್ತಿದ್ದುದು ಜನರ ಮಾತಿನಿಂದ ನನಗೆ ಗೊತ್ತಾಗುತ್ತಿದ್ದು ನನಗೆ ಅವರ ಮೇಲೆ ಒಂದು ರೀತಿಯ ತಿರಸ್ಕಾರ ಭಾವ ಮೂಡಿತ್ತು. ನನ್ನನ್ನು ಪರ್ಮಿಟ್ ಬರೆಯಲು ಕೂರಿಸಿದ್ದು 'ನಾನು ಲಂಚ ಪಡೆಯುವುದಿಲ್ಲ, ಹಾಗಾಗಿ ಲಂಚದ ಪಾಲುದಾರನಾಗುವುದಿಲ್ಲ' ಎಂಬ ಕಾರಣಕ್ಕಾಗಿ ಆಗಿತ್ತು. ಪರ್ಮಿಟ್ ಪಡೆದವರು ಐದು/ಹತ್ತು ರೂ. ಗಳನ್ನು ಕೊಡಬಂದಾಗ ನಾನು ಬೇಡವೆನ್ನುತ್ತಿದ್ದೆ. ಕೆಲವರು ನನ್ನನ್ನು ಅನುಕಂಪದಿಂದ ನೋಡಿ ಹೋಗುತ್ತಿದ್ದರೆ, ಕೆಲವರು 'ಯಾರಿಗೂ ಹೇಳುವುದಿಲ್ಲ, ಹೆದರಬೇಡ' ಎಂದು ಹೇಳುತ್ತಿದ್ದರು. ಬೆರಳೆಣಿಕೆಯಷ್ಟು ಜನ ಮಾತ್ರ ನನ್ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.
(ಕಾಲಘಟ್ಟ: 1973) ....ಮುಂದುವರೆಯುವುದು.

3 ಕಾಮೆಂಟ್‌ಗಳು:

  1. Ksraghavendranavada
    09JUL2010 1:09
    ಒಳ್ಳೆಯ ನಿರೂಪಣೆ...
    ಹೌದು. ನಮ್ಮ ಒಳ್ಳೆಯ ಗುಣವನ್ನು ಇನ್ನೊಬ್ಬರು ಎನ್ ಕ್ಯಾಷ್ ಮಾಡಿಕೊಳ್ಳುತ್ತಾರೆ. ಆಗಿನ ಜಿಲ್ಲಾಧಿಕಾರಿಗಳೂ ಅದೇ ಥರ...
    ೩೭ ವರುಷಗಳ ಹಿ೦ದಿನ ಕಥಾನಕ ಅರಿತ ಹಾಗೆ ಆಯ್ತು..
    ಮು೦ದುವರೆಸಿ... ನಿರೀಕ್ಷೆಯಲ್ಲಿ..
    ನಿಮ್ಮವ ನಾವಡ.

    ಸುರೇಶ್ ನಾಡಿಗ್
    09JUL2010 2:52
    ನಾಗರಾಜ್, ನಿಮ್ಮ ರೇಷನ್ ಕಾರ್ಡ್ ಪುರಾಣ ಚೆನ್ನಾಗಿದೆ. ಶಿಕಾರಿಪುರದಲ್ಲೂ ಇಂತಹ ಅನುಭವಗಳು ಏನಾದರೂ ಆಗಿತ್ತಾ.

    Kavinagaraj
    09JUL2010 6:14
    ನಾನಿನ್ನೂ ಶಿಕಾರಿಪುರದವರೆಗೆ ಬಂದಿಲ್ಲ. ಶಿಕಾರಿಪುರದ ಅನುಭವಗಳೇ ಬೇರೆ. ಕಾರ್ಡುಗಳನ್ನು ಸರಿಯಾಗಿ ಬರೆಯದಿದ್ದುದಕ್ಕೆ ಗ್ರಾಮಲೆಕ್ಕಿಗರು, ಪಂಚಾಯಿತಿ ಕಾರ್ಯದರ್ಶಿಗಳನ್ನು ಕೆಲವು ಗ್ರಾಮಗಳಲ್ಲಿ ಕೂಡಿಹಾಕಿದ್ದರು. ನಾನು ಗ್ರಾಮಸ್ಥರನ್ನು ಒಪ್ಪಿಸಿ ಬಿಡಿಸುವ ಪ್ರಯತ್ನ ಮಾಡಿರದಿದ್ದರೆ ಅವರ ಪಾಡು ನಾಯಿಪಾಡಾಗುತ್ತಿತ್ತು! ಧನ್ಯವಾದ, ಸುರೇಶ್.

    Kavinagaraj
    09JUL2010 6:10
    ಒಳ್ಳೆಯ ಕಾರಣಕ್ಕೆ ನಮ್ಮ ಒಳ್ಳೆಯತನವನ್ನು ಇತರರು ಬಳಸಿಕೊಂಡರೆ ತಪ್ಪೇನಿಲ್ಲ. ಆದರೆ ದುರ್ಬಳಕೆಯಾದಲ್ಲಿ ಒಳ್ಳೆಯವರೇ ಕೆಟ್ಟವರಾಗುವುದು! ಧನ್ಯವಾದ, ನಾವಡರೇ.

    ಆರ್.ಶರ್ಮಾ.ತಲವಾಟ
    09JUL2010 7:09
    ಓದಿಸಿಕೊಂಡು ಹೋಗುತ್ತಿದೆ ಉತ್ತಮವಾಗಿ.
    ರೇಶನ್ ಕಾರ್ಡ್..ಹ ಹ ಹ

    Kavinagaraj
    09JUL2010 9:30
    ರೇಶನ್ ಕಾರ್ಡೇ ನನ್ನನ್ನು ಓಡಿಸಿಕೊಂಡು ಹೋಗಿತ್ತು ಸ್ವಾಮಿ! ಮೆಚ್ಚುಗೆಗೆ ಧನ್ಯ.

    ಹೊಳೆ ನರಸೀಪುರ ಮಂಜುನಾಥ
    10JUL2010 12:31
    ಕವಿ ನಾಗರಾಜರೆ, ಲ೦ಚಾವತಾರ ನಾಟಕದ ಮಾ.ಹಿರಣ್ಣಯ್ಯನವರ ಡೈಲಾಗ್ ನೆನಪಾಯಿತು ನಿಮ್ಮ ಲೇಖನವನ್ನೋದಿ! ಜೈ ಲ೦ಚಾವತಾರ!!

    ಮಂಜುನಾಥ ಹೊಸೂರು
    10JUL2010 2:50
    ಸೇವಾ ಪುರಾಣ ಚೆನ್ನಾಗಿದೆ ಸರ್..
    ನಾನು ಈ ಹಿಂದೆ ಸರಕಾರಿ ಸೇವೆಯಲ್ಲಿದ್ದಾಗ (ಸುಮಾರು ಮೂರು ವರ್ಷಗಳ ಹಿಂದೆ) ಕೆಲಸಕ್ಕೆ ಸೇರಿದ ಪ್ರಾರಂಭದಲ್ಲಿ ಮೈಸೂರಿನ ಆಡಳಿತ ತರಬೇತಿ ಸಂಸ್ಥೆ (ಎಟಿಐ)-ನಲ್ಲಿ ಒಂದೂವರೆ ತಿಂಗಳ ತರಬೇತಿಗೆಂದು ಹೋಗಿದ್ದೆ. ನನ್ನೊಂದಿಗೆ ಇನ್ನೊಂದು ಇಲಾಖೆಯ ತಾಲೂಕು ಮಟ್ಟದ ಐವರು ಅಧಿಕಾರಿಗಳೂ ಇದ್ದರು, ಹಾಗೂ ಅವರು ನನಗಿಂತ ಸೇವೆಯಲ್ಲಿ ಎರಡ್ಮೂರು ವರ್ಷ ಹಿರಿಯರೂ ಆಗಿದ್ದರು. ತರಬೇತಿಯ ಅವಧಿಯುದ್ದಕ್ಕೂ ಅವರ ಸಂಕಟವೆಂದರೆ (ಖಾಸಗಿಯಾಗಿ ಹೇಳಿಕೊಳ್ಳುತ್ತಿದ್ದುದು) "ಯಾಕಾದ್ರೂ ಈ ತರಬೇತಿಗೆ ಹಾಕ್ತಾರಪ್ಪಾ. ಆಫೀಸಲ್ಲಿದ್ದಿದ್ದರೆ ಈ ವಾರ ನಲ್ವತ್ತು-ಐವತ್ತು ಸಾವಿರ ದುಡ್ಡಾದ್ರೂ ಮಾಡಬಹುದಾಗಿತ್ತು".. :-)
    <>
    ಇದು ಸರಿಯಿಲ್ಲವೆಂದು ನನ್ನ ಅನಿಸಿಕೆ. ಲಂಚ ನೀಡದೇ ಯಾವುದೇ ಕೆಲಸ ಮಾಡಿಕೊಡುವುದು ಈಗಿನ ಕಛೇರಿಗಳಲ್ಲಿ ಸಾಧ್ಯವೇ ಇಲ್ಲ. ಇದೇ ಸಂಪದದಲ್ಲಿ ಈ ಹಿಂದೆ ಯಾರೋ ಒಬ್ಬರು ಬರೆದಂತೆ "ಎಲ್ಲಾ ಲಂಚಕೋರ ಅಧಿಕಾರಿಗಳ ಮೇಲೆ ಲೋಕಾಯುಕ್ತರು ದಾಳಿ ಮಾಡುತ್ತಾ ಹೋದಲ್ಲಿ ಬಹುಶಃ ಈಗಿರುವ ಎಲ್ಲರೂ ಕೆಲಸ ಕಳೆದುಕೊಂಡು ಎಲ್ಲಾ ಸರಕಾರಿ ಇಲಾಖೆಗಳಿಗೆ ಹೋಲ್ಸೇಲಾಗಿ ಹೊಸ ರಿಕ್ರುಟ್ಮೆಂಟ್ ಮಾಡಬೇಕಾಗಿಬರಬಹುದು".

    Kavinagaraj
    10JUL2010 11:09
    ಲಂಚ ಪಡೆಯಲು ಪರಿಸ್ಥಿತಿ/ಸಂದರ್ಭದ ಅನಿವಾರ್ಯತೆ ಬಗ್ಗೆ ದೀರ್ಘ ಮಾಹಿತಿ ನೀಡುವಷ್ಟು ವಿವರ ನನ್ನಲ್ಲಿದೆ. ಅದರೆ ಈಗ ವಿಷಯಾಂತರಗೊಳ್ಳುವ ಕಾರಣದಿಂದ ಪ್ರಸ್ತಾಪಿಸಹೋಗುವುದಿಲ್ಲ. ಅಲ್ಲದೆ ನನ್ನ ಮುಂಬರಲಿರುವ ಕಂತುಗಳಲ್ಲಿ ಈ ಕುರಿತು ಪ್ರಸ್ತಾಪಿಸುವೆ. ಎಲ್ಲಾ ಅಧಿಕಾರಿಗಳೂ, ನೌಕರರೂ ಲಂಚಕೋರರಲ್ಲ. ತಳಪಾಯ ಗಟ್ಟಿ ಇಲ್ಲದಿದ್ದರೆ ಕಟ್ಟಡ ಹೇಗೆ ಭದ್ರವಿದ್ದೀತು? (ಸರ್ಕಾರ ನಡೆಸುವವರೇ ಭ್ರಷ್ಟಾಚಾರ ಮಾಡಿಯೇ ಅಧಿಕಾರ ಹಿಡಿದವರು! ಅವರು ಲೋಕಾಯುಕ್ತದ ವ್ಯಾಪ್ತಿಗೆ ಬರುವುದಿಲ್ಲ! ಎಂತಹ ವಿಪರ್ಯಾಸ!)
    ನಿಮ್ಮ ಪ್ರತಿಕ್ರಿಯೆಗೆ ಧನ್ಯ.

    'ಶಾಮಲ'
    10JUL2010 8:21
    ಚೆನ್ನಾಗಿದೆ!
    ಶಾಮಲ

    ಪ್ರತ್ಯುತ್ತರಅಳಿಸಿ
  2. ಹಾಸ್ಯ ಮಿಶ್ರಿತ ಕರುಣಾಜನಕ ಕಥೆ... :-)

    ಪ್ರತ್ಯುತ್ತರಅಳಿಸಿ