ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಜುಲೈ 23, 2010

ಸೇವಾ ಪುರಾಣ -8

ಸೇವಾ ಪುರಾಣ -8
ಸರಳುಗಳ ಹಿಂದಿನ ಲೋಕ -1
     ಪಾಪಿಗಳ ಲೋಕವೆಂದೇ ಹೇಳಲಾಗುವ ಬಂದೀಖಾನೆಗೆ ನನ್ನ ಪ್ರಥಮ ಪ್ರವೇಶ ದಿನಾಂಕ 05-08-1975ರಲ್ಲಿ ಆಗಿ ಅಲ್ಲಿ ನನ್ನ ಹೆಸರು ನೋಂದಾವಣೆ ಆಯಿತು. ಹಾಸನದ ಬಂದೀಖಾನೆಯಲ್ಲಿ ನನ್ನ ಹೆಸರು, ಕುಲ, ಗೋತ್ರ, ಅಪರಾಧದ ವಿವರ, ನನ್ನ ಕೈಬೆರಳುಗಳ ಮುದ್ರೆಗಳು, ಇತ್ಯಾದಿಗಳನ್ನೆಲ್ಲಾ ಒಂದು ರಿಜಿಸ್ಟರಿನಲ್ಲಿ ಪಡೆದುಕೊಂಡರು. ನನ್ನ ಜೇಬಿನಲ್ಲಿದ್ದ ಪುಡಿಗಾಸು, ಕೈಯಲ್ಲಿದ್ದ ವಾಚು, ಎಲ್ಲವನ್ನೂ ತೆಗೆದಿರಿಸಿಕೊಂಡು ದಾಖಲಿಸಿ ಇಟ್ಟುಕೊಂಡರು. ನನ್ನ ಮೈಮೇಲಿದ್ದ ಜನಿವಾರ, ಉಡುದಾರಗಳನ್ನು ಹರಿದು ಕಿತ್ತೆಸೆದರು. ಗಬ್ಬು ವಾಸನೆ ಬರುತ್ತಿದ್ದ ಒಂದು ಹರಕಲು ಕಂಬಳಿ,ನೆಗ್ಗಿ ನುಗ್ಗೆಕಾಯಿ ಆಗಿದ್ದ ಒಂದು ಅಲ್ಯೂಮಿನಿಯಂ ಚಂಬು, ತಟ್ಟೆಯ ಅಕಾರವನ್ನೇ ಕಳೆದುಕೊಂಡಿದ್ದ ಒಂದು ಅಲ್ಯೂಮಿನಿಯಂ ತಟ್ಟೆಗಳನ್ನು ನನ್ನ ಕೈಗೆ ಕೊಟ್ಟರು. ಜೈಲಿನ ದೊಡ್ಡ ಬಾಗಿಲಿನ ಒಂದು ಭಾಗದಲ್ಲಿದ್ದ ಸಣ್ಣ ಬಾಗಿಲಿನಿಂದ ಬಗ್ಗಿ ನಡೆದು ಜೈಲಿನ ಒಳಾಂಗಣಕ್ಕೆ ಕಾಲಿಟ್ಟಾಗ ನನಗೆ ಹೇಗೆ ಹೇಗೋ ಆಯಿತು, ತಳಮಳವಾಯಿತು. ಅಲ್ಲಿ ಇದ್ದ ಎರಡು ದೊಡ್ಡ ಬ್ಯಾರಕ್ ಗಳ ಪೈಕಿ ಒಂದರ ಒಳಗೆ ನನ್ನನ್ನು ತಳ್ಳಿ ಮತ್ತೆ ಬ್ಯಾರಕ್ ಗೆ ಬೀಗ ಹಾಕಿದರು.ಒಳಗೆ ಹೋದ ಕೂಡಲೇ ಒಳಗಿದ್ದವರು ನನ್ನನ್ನು 'ಹೋ' ಎಂದು ಮುತ್ತಿಕೊಂಡರು. ನನಗೆ ಕಕ್ಕಾಬಿಕ್ಕಿಯಾಯಿತು. ಕಾಲೇಜುಗಳಲ್ಲಿ ಹೊಸ ವಿದ್ಯಾರ್ಥಿಗಳನ್ನು ಹಳಬರು ಗೋಳು ಹುಯ್ದುಕೊಳ್ಳುವಂತೆ ಕೆಲವರು ನನ್ನನ್ನು ಗೋಳಾಡಿಸಿದರು. ಕೆಲವರು ನಿರ್ಲಿಪ್ತರಾಗಿ ತಮ್ಮ ಪಾಡಿಗೆ ತಾವು ಇದ್ದರು. ನನ್ನ ಚರಿತ್ರೆ ಕೇಳಿ ತಿಳಿದುಕೊಂಡ ಅವರುಗಳು 'ಓ, ಇಂದಿರಾಗಾಂಧಿ ಕೇಸು' ಎಂದು ಚಪ್ಪಾಳೆ ಬಡಿದು ನಕ್ಕರು. ಆ ದೊಡ್ಡ ಹಾಲಿನಲ್ಲಿ ಸಮಾಧಿಗಳ ಆಕಾರದಲ್ಲಿ ಗಾರೆ,ಸಿಮೆಂಟಿನಲ್ಲಿ ಕಟ್ಟೆಗಳನ್ನು ಕೈದಿಗಳು ಮಲಗುವ ಸಲುವಾಗಿ ಕಟ್ಟಿಸಿದ್ದರು. ಇರಬೇಕಾದ ಸಂಖ್ಯೆಗಿಂತ ಹೆಚ್ಚಿನ ಕೈದಿಗಳು ಇದ್ದುದರಿಂದ ಕಟ್ಟೆಗಳ ನಡುವಿನ ಸ್ಥಳಗಳಲ್ಲೂ ಕೈದಿಗಳು ಮಲಗಬೇಕಾಗಿತ್ತು. ಕಟ್ಟೆಗಳನ್ನು ಸಮಾಧಿ ಎಂದೇ ಕರೆಯುತ್ತಿದ್ದರು. ಕಟ್ಟೆಯ ಮೇಲೆ ಮಲಗುವುದು ಎಂದರೆ ಸಮಾಧಿಯ ಮೇಲೆ ಮಲಗುವುದು ಎಂತಲೂ ಮಧ್ಯದ ಸ್ಥಳದಲ್ಲಿ ಮಲಗುವುದು ಎಂದರೆ ಸಮಾಧಿಯ ಒಳಗೆ ಮಲಗುವುದು ಎಂತಲೂ ಹೇಳುತ್ತಿದ್ದರು.ಅಂತಹ ಒಂದು ಸಮಾಧಿಯ ಒಳಗೆ ನಾನು ಮಲಗಬೇಕೆಂದು ಅಲ್ಲಿದ್ದ ಹಳಬರು ಅಪ್ಪಣೆ ಕೊಟ್ಟರು.ನನಗೆ ಕೊಟ್ಟಿದ್ದ ಹರಕಲು ಕಂಬಳಿಯಲ್ಲಿ ತಿಗಣೆಯೊಂದು ಹರಿಯುತ್ತಿದ್ದುದನ್ನು ನೋಡಿದ ನಾನು ಕಂಬಳಿಯನ್ನು ಪಕ್ಕಕ್ಕೆ ತಳ್ಳಿ ಅಲ್ಲಿದ್ದವರನ್ನು ಗಮನಿಸುತ್ತಾ ಗೋಡೆಗೆ ಒರಗಿ ಕುಳಿತುಕೊಳ್ಳಲು ಹೋದವನು ಒರಗಿಕೊಳ್ಳಲಿಲ್ಲ, ಏಕೆಂದರೆ ಗೋಡೆಯ ಮೇಲೆಲ್ಲಾ ತಿಗಣೆಗಳನ್ನು ತೀಡಿ ಸಾಯಿಸಿದ, ಸೊಳ್ಳೆಗಳನ್ನು ಸಾಯಿಸಿದ ರಕ್ತದ ಕಲೆಗಳು ರಾರಾಜಿಸುತ್ತಿದ್ದವು.ಅಲ್ಲಿದ್ದವರ ಮುಖಗಳಲ್ಲಿ ಕೆಲವರು ಕೇಡಿಗರಂತೆ ಕಂಡರೆ ಕೆಲವರು ಅಮಾಯಕರಂತೆ ಕಾಣುತ್ತಿದ್ದರು. ಕೆಲವರು ಚಿಂತಿತರಾಗಿದ್ದರೆ ಕೆಲವರು ಏನೂ ಆಗೇ ಇಲ್ಲವೆಂಬಂತೆ ಇದ್ದರು.ನಾಲ್ಕು ಗೋಡೆಗಳು, ಭದ್ರವಾದ ಬಾಗಿಲು, ಅಲ್ಲಿದ್ದ ಅದೇ ಜನಗಳು, ಇಷ್ಟೇ ಪ್ರಪಂಚ. ಆ ಮುಚ್ಚಿದ ಬ್ಯಾರಕ್ಕಿನ ಮೂಲೆಯಲ್ಲಿಯೇ ಶೌಚಾಲಯವಿತ್ತು. ನಾನು ಅಲ್ಲಿಗೆ ಹೋಗಿ ನೋಡಿದರೆ ವಾಂತಿ ಬರುವಂತಾಯಿತು. ಶೌಚ ಹೋಗುವ ಪೈಪು ಕಟ್ಟಿಕೊಂಡು ಶೌಚ ಹೊರಗೆ ಹೋಗುತ್ತಿರಲಿಲ್ಲ. ಶೌಚಾಲಯದ ಒಳಗೆ ಕಾಲಿಡಲು ಸಾಧ್ಯವೇ ಆಗದಷ್ಟು ಹೇಸಿಗೆ ತುಂಬಿಹೋಗಿತ್ತು. ನಾರುತ್ತಿದ್ದ ಗಬ್ಬು ವಾಸನೆ ಬ್ಯಾರಕ್ಕಿನಲ್ಲೂ ಹರಡಿತ್ತು. ಹಾಗೆಯೇ ವಾಪಸು ಬಂದೆ.
     ಊಟಕ್ಕಾಗಿ ಬೀಗ ತೆಗೆದು ಹೊರಬಿಟ್ಟಾಗ ಎಲ್ಲರ ಜೊತೆ ಸಾಲಿನಲ್ಲಿ ನಿಂತರೆ ನನ್ನ ತಟ್ಟೆಗೆ ಅರ್ಧ ಇಟ್ಟಿಗೆ ಆಕಾರದ ಮುದ್ದೆ ಮತ್ತು ಅರ್ಧ ಸೌಟು ನೀರು ಸಾಂಬಾರು ಬಿತ್ತು. ಸಾಂಬಾರಿನಲ್ಲಿದ್ದ ಬೇಳೆ ಬೆಂದಿರಲೇ ಇಲ್ಲ.ಒಬ್ಬಿಬ್ಬರ ತಟ್ಟೆಯಲ್ಲಿ ತರಕಾರಿ ಹೋಳುಗಳು ಕಂಡವು. ಕಲ್ಲಿನಂತಿದ್ದ ಮುದ್ದೆ ಕಂಡು ತಿನ್ನಲು ಮನಸ್ಸಾಗದೆ ಹಾಗೆಯೇ ಹಿಡಿದುಕೊಂಡಿದ್ದೆ. ನನ್ನನ್ನು ಗಮನಿಸುತ್ತಿದ್ದವನೊಬ್ಬ ನನ್ನನ್ನು ಕೇಳಿ ನನ್ನ ಊಟವನ್ನೂ ತೆಗೆದುಕೊಂಡ.ಎಲ್ಲರೂ ಅದನ್ನೇ ತಿಂದರು.ಕೆಲವರು ತಟ್ಟೆಯನ್ನೇ ನೆಕ್ಕುತ್ತಿದ್ದರು. ತಿಂದಾದ ಮೇಲೆ ಕೈತೊಳೆಯಲು ಇದ್ದ ಪಾಚಿಗಟ್ಟಿದ್ದ ತೊಟ್ಟಿಯ ನೀರಿಗೆ ತಟ್ಟೆಯನ್ನೇ ಅದ್ದುತ್ತಿದ್ದರು.ಸ್ನಾನ ಮಾಡಲೂ ಅದೇ ತೊಟ್ಟಿಯ ನೀರನ್ನು ಬಳಸಬೇಕಾಗಿತ್ತು. ಅದನ್ನು ಕಟ್ಟಿಸಿದಾಗಿನಿಂದಲೂ ಸ್ವಚ್ಛಗೊಳಿಸಿರಲಿಲ್ಲವೆಂಬಂತೆ ಕಾಣುತ್ತಿತ್ತು. ಅದರಲ್ಲಿದ್ದ ನೀರು ಚರಂಡಿಯ ನೀರಿನಂತೆ ಇತ್ತು. ಅಲ್ಲಿದ್ದ ಸ್ಥಿತಿ ನೋಡಿದರೆ ಕಾರಾಗೃಹ ಕಾಯಿಲೆಗಳ ಉಗಮಸ್ಥಾನ ಎಂಬುದರಲ್ಲಿ ಅನುಮಾನ ಕಾಣಲಿಲ್ಲ. ಏಕೆಂದರೆ ಕಾಯಿಲೆಗಳಿಂದ ನರಳುವವರ ಸಂಖ್ಯೆ ಕಡಿಮೆಯಿರಲಿಲ್ಲ. ಕೆಮ್ಮುವವರು, ಸೀನುವವರು, ಎಲ್ಲೆಂದರಲ್ಲಿ ಉಗುಳುವವರು, ಇತ್ಯಾದಿ ನೋಡಿದಾಗ ಹಿಂಸೆಯೆನಿಸುತ್ತಿತ್ತು. ನೀರಿನ ತೊಟ್ಟಿಯ ಹತ್ತಿರದಲ್ಲೇ ಕ್ಷೌರಿಕನೊಬ್ಬ ಕಟಿಂಗ್, ಶೇವಿಂಗ್ ಮಾಡಿಸಿಕೊಳ್ಳುವ ಬಂದಿಗಳಿಗೆ ಕ್ಷೌರ ಮಾಡುತ್ತಿದ್ದ. ಕಟಿಂಗ್ ಮಾಡಿಸಿಕೊಂಡ ಒಬ್ಬ ಬಂದಿ ತನ್ನ ತಲೆಯನ್ನೇ ತೊಟ್ಟಿಗೆ ಅದ್ದಿ ಹೊರತೆಗೆದಿದ್ದುದನ್ನು ಕಂಡೆ. ಅದೇ ಮತ್ತು ಅಷ್ಟೇ ಅವನ ಸ್ನಾನವಾಗಿತ್ತು. ನಾನು ತೊಟ್ಟಿಗೆ ನೀರು ಬಿಡಲು ಇದ್ದ ನಲ್ಲಿಯಿಂದ ಸೋರುತ್ತಿದ್ದ ಚಂಬಿನಲ್ಲಿ ನೀರು ಹಿಡಿದುಕೊಂಡು ಮುಖ ತೊಳೆದುಕೊಂಡೆ. ಊಟಕ್ಕೆ ಬಿಟ್ಟಿದ್ದ ಸಮಯದಲ್ಲಿ ಕೆಲವು ಒಂಟಿ ಸೆಲ್ ಗಳು ಹಾಗೂ ಒಂದು ಸಣ್ಣ ಬ್ಯಾರಕ್ ಇದ್ದುದನ್ನು ಗಮನಿಸಿದೆ. ಒಂಟಿ ಸೆಲ್ ಗಳಲ್ಲಿ ಗಲಾಟೆ ಮಾಡುವವರು, ಅಪಾಯಕಾರಿಗಳೆಂದು ಕಂಡವರನ್ನು ಇಡುತ್ತಿದ್ದರು. ಸಣ್ಣ ಬ್ಯಾರಕ್ಕಿನಲ್ಲಿ ಮಹಿಳಾ ಕೈದಿಗಳಿದ್ದು ಅವರಿಗೆ ಬೇರೆ ಸಮಯದಲ್ಲಿ ಊಟ, ಸ್ನಾನಗಳಿಗೆ ಹೊರಬಿಡುತ್ತಿದ್ದರು. ಕೆಲವರು ಕೈದಿಗಳು ಮಹಿಳಾ ಕೈದಿಗಳ ಬ್ಯಾರಕ್ಕಿನ ಸರಳಿನ ಒಳಗೆ ಕೈಬೆರಳುಗಳನ್ನು (ಕೈ ಹಿಡಿಸುತ್ತಿರಲಿಲ್ಲ, ಒಳಗಿದ್ದವರು ಕಾಣುತ್ತಿರಲಿಲ್ಲ) ಹಾಕುತ್ತಿದ್ದರು.ಅದಕ್ಕೆ ಒಳಗಿದ್ದವರೂ ಬೆರಳುಗಳನ್ನು ಸ್ಪರ್ಶಿಸಿ ಪರಸ್ಪರ ಸಂತೋಷಿಸುತ್ತಿದ್ದರಂತೆ. ಬಹಳ ಕಾಲದಿಂದ ಜೈಲಿನಲ್ಲಿದ್ದವರು ಸ್ವಲಿಂಗಿಗಳೊಂದಿಗೇ ವಿಹರಿಸುತ್ತಿದ್ದುದು ವಿಶೇಷವಾಗಿರಲಿಲ್ಲ. ಲೈಂಗಿಕ ಹಸಿವು ಅವರನ್ನು ಹಾಗೆ ಮಾಡಿಸಿದ್ದಿರಬಹುದು. ಸ್ವಲ್ಪ ಸಮಯದ ನಂತರ ಎಲ್ಲರನ್ನೂ ಒಳಗೆ ಕಳಿಸಿ ತಲೆಗಳನ್ನು ಎಣಿಸಿ ಬೀಗ ಹಾಕಿದರು.ಸಾಯಂಕಾಲದ ಹೊತ್ತಿಗೆ ನನ್ನ ತಂದೆ ನನ್ನನ್ನು ಜಾಮೀನಿನ ಮೇಲೆ ಬಿಡಿಸಿ ಹೊರಕರೆತಂದರು.ಮನೆಗೆ ಹೋಗಿ ಸ್ನಾನ ಮಾಡಿದ ನಂತರವೇ ನನಗೆ ಉಸಿರಾಡುವಂತೆ ಆಗಿದ್ದು. ಸುದಾರಿಸಿಕೊಂಡನಂತರ ಮಾಡಿದ ಅಮ್ಮನ ಕೈಯಿನ ಊಟ ಅಮೃತಸಮಾನವಾಗಿತ್ತು!

2 ಕಾಮೆಂಟ್‌ಗಳು:

  1. ಹೊಳೆ ನರಸೀಪುರ ಮಂಜುನಾಥ
    25JUL2010 1:08
    ಕವಿ ನಾಗರಾಜರೆ, ಇದು ಮಾತ್ರ ಭಯ೦ಕರ ಅನುಭವ!

    Komal
    25JUL2010 12:24
    ನಿಯತ್ತಾಗಿರುವವರಿಗೆ ಕಾಲವಿಲ್ಲ ಎನ್ನುತ್ತಾರೆ ಅದು ಸತ್ಯ ಅಂತಾ ನಿಮ್ಮ ಅನುಭವದಿಂದ ತಿಳಿಯುತ್ತದೆ. ಬೇಗ ಮುಂದಿನ ಕತೆ ಬರೆಯಿರಿ.

    Kavinagaraj
    25JUL2010 12:34
    ಧನ್ಯವಾದ, ಕೋಮಲ್. ನೀವಂದಂತೆ ಮುಂದಿನ ಕತೆ -ಅಲ್ಲ,ಅಲ್ಲ- ಅನುಭವ ಹಂಚಿಕೊಳ್ಳುವೆ.

    Kavinagaraj
    25JUL2010 12:32
    ಹೌದು, ಮಂಜು. ಈ ಅನುಭವ ದಾಖಲಿಸುವಾಗ ಮತ್ತೊಮ್ಮೆ ಜೈಲಿನಲ್ಲಿದ್ದ ಭಾವನೆ, ವಿಷಾಧಭಾವ ಅನುಭವಿಸಿದೆ. ಧನ್ಯವಾದಗಳು.

    ಬೆಳ್ಳಾಲ ಗೋಪೀನಾಥ ರಾವ್
    25JUL2010 12:32
    ಕವಿಗಳೇ ನಿಮ್ಮ ಅನುಭವ ಭೀಕರ. ಆ ದಿನಗಳನ್ನು ಎಣಿಸಿದರೇ ಈಗಲೂ ನಿಮಗೆ ಅಲ್ಲಿದ್ದ ಅನುಭವ ಹಚ್ಚ ಹಸಿರಾಗುವಷ್ಟು. ನಿಮಗೆ ನನ್ನ ಸಹಾನುಭೂತಿಗಳು
    ತಪ್ಪು ಮಾಡದೇ ಅನುಭವಿಸುವುದು ಎಂದರೆ ... ಅಬ್ಬಬ್ಬಾ!!!

    Kavinagaraj
    25JUL2010 12:35
    ಗೋಪಿನಾಥರೇ, ನಿಮ್ಮ ಮೆಚ್ಚುಗೆ ಅನನ್ಯ; ನಾನು ಧನ್ಯ.

    ನಾರಾಯಣ ಭಾಗ್ವತ
    25JUL2010 12:50
    ಕವಿನಾಗರಾಜ್ ರವರಿಗೆ ವಂದನೆಗಳು.
    ನಿಮ್ಮ ಅನುಭವಕ್ಕೊಂದು ಸಲಾಂ.

    Kavinagaraj
    25JUL2010 2:56
    ನಮಸ್ಕಾರ ಭಾಗ್ವತರೇ. ಅನುಭವಗಳೇ ನನ್ನ ದೊಡ್ಡ ಗುರು. ಧನ್ಯವಾದಗಳು.

    ಸುರೇಶ್ ನಾಡಿಗ್
    25JUL2010 5:54
    ಆ ಸಮಯದಲ್ಲಿನ ನಿಮ್ಮ ಮನಸ್ಥಿತಿ ನೆನಸಿಕೊಂಡರೆ ನಮಗೆ ಬೆಚ್ಚಿದಂತಾಗುತ್ತದೆ. ಅದನ್ನೆಲ್ಲಾ ಎದುರಿಸಿದ ನೀವು ಬಹಳ ತಾಳ್ಮೆ ಹಾಗೂ ಸಂಯಮ ಇದ್ದವರು ಎನ್ನುವುದರಲ್ಲಿ ಎರಡು ಮಾತಿಲ್ಲ.

    Kavinagaraj
    25JUL2010 9:57
    ವಂದನೆಗಳು ಸುರೇಶ್. ತಾಳ್ಮೆ ಇತ್ತು ಎಂಬುದರಲ್ಲಿ ಅನುಮಾನ, ಆದರೆ ಪರಿಸ್ಥಿತಿ ಎದುರಿಸುವ ಛಲ ಉಳಿಸಿಕೊಂಡಿದ್ದೆ ಎಂದು ಹೇಳಬಹುದು.

    ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ
    26JUL2010 8:02
    {ಕವಿನಾಗರಾಜ್ ರವರಿಗೆ ವಂದನೆಗಳು.
    ನಿಮ್ಮ ಅನುಭವಕ್ಕೊಂದು ಸಲಾಂ.} ನನ್ನದೂ!

    ಶ್ರೀಕಾಂತ ಮಿಶ್ರಿಕೋಟಿ
    25JUL2010 7:58
    ನಾಗರಾಜರೆ ,
    ನಿಮ್ಮ ಅನುಭವ ಭಯಾನಕವಾಗಿದೆ.
    ಅಂದ ಹಾಗೆ ಈ ಬರವಣಿಗೆಯ ತಲೆಬರಹವನ್ನು ( ಮತ್ತೆ ಮುಂದೆ ಬರೆಯಲಿರುವ ಲೇಖನಗಳ ತಲೆಬರಹವನ್ನು ) ಇನ್ನಷ್ಟು ವಿವರ ತಿಳಿಸುವಂತೆ ಬರೆಯಿರಿ, ಸೇವಾ ಪುರಾಣ -8 ಎಂದಷ್ಟೇ ಬೇಡ.

    Kavinagaraj
    25JUL2010 10:00
    ಸೇವಾಪುರಾಣದ ಕೆಳಗೆ ಲೇಖನದ ಪ್ರಾರಂಭದಲ್ಲಿ ಸರಳುಗಳ ಹಿಂದಿನ ಲೋಕ -1 ಎಂಬ ಶೀರ್ಷಿಕೆ ಇದೆ. ಮುಖ್ಯ ಶೀರ್ಷಿಕೆಯಲ್ಲೇ ಸೇರಿಸುವ ಕುರಿತು ನಿಮ್ಮ ಸಲಹೆ ಚೆನ್ನಾಗಿದೆ. ಧನ್ಯವಾದ, ಶ್ರೀಕಾಂತ್.

    ASHOKKUMAR
    26JUL2010 10:17
    ನರಕ ಎಂದರೆ ಹೀಗೆ ಇರುತ್ತೇನೋ..

    Kavinagaraj
    26JUL2010 10:24
    ಧನ್ಯವಾದ, ಅಶೋಕಕುಮಾರರೇ. ನಾನಿನ್ನೂ ಪೂರ್ಣ ನರಕದ ಚಿತ್ರಣ ಕೊಟ್ಟಿಲ್ಲ. ಮುಂದೆ ಇನ್ನೂ ಇದೆ.

    ಚೇತನ್ ಕೋಡುವಳ್ಳಿ
    26JUL2010 10:21
    ಅಬ್ಬಬ್ಬ ಭಯಂಕರ ಅನುಭವ ನಾಗರಾಜವ್ರೆ.
    ನಿಯತ್ತಾಗಿದ್ದಕ್ಕೆ ಈ ರೀತಿಯ ಶಿಕ್ಷೆ!!! ನಿಮ್ಮ ಪುಣ್ಯ ಬೇಗ ಹೊರಗೆ ಬಂದ್ರಿ, ಇನ್ನು ಕೆಲವು ನಿರಪರಾಧಿಗಳು ಅವ್ರಿಗೆ ಬಿಡುಗಡೆ ಆಗದೇ ಅಲ್ಲೇ ತುಂಬಾ ದಿನ ಇದ್ರೆ ಅವರ ಪರಿಸ್ಥಿತಿ ಊಹಿಸಲೂ ಅಸಾಧ್ಯ

    Kavinagaraj
    26JUL2010 10:28
    ಪ್ರಿಯ ಚಿಕ್ಕೂ, ಜೈಲಿಗೆ ನನ್ನ ಪ್ರಥಮ ಭೇಟಿಯ ವಿವರ ಈ ಲೇಖನದಲ್ಲಿದೆ. ಮುಂದೆ ಇನ್ನೂ ಇದೆ. ನಂತರದ ದಿನಗಳಲ್ಲಿ ನಾನು ಒಟ್ಟಿನಲ್ಲಿ ಆರು ತಿಂಗಳು ಹಾಸನದ ಜೈಲಿನ ನಿವಾಸಿಯಾಗಿದ್ದೆ - ಬೇರೆ ಪ್ರಕರಣಗಳನ್ನು ನನ್ನ ಮೇಲೆ ಪೋಲೀಸರು ಹೂಡಿದ್ದರಿಂದ.

    ಚೇತನ್ ಕೋಡುವಳ್ಳಿ
    26JUL2010 10:38
    ಓಹೋ, ಬರೆಯಿರಿ ಓದುವ.
    ಜೈಲಿನ ಮೊದಲ ಹಂತ ನೋಡೇ ಪ್ಯಾಪಿಲಾನ್ ಕಥೆ ಜ್ಞಾಪಕಕ್ಕೆ ಬಂತು

    ಗೋಪಾಲ್ ಮಾ ಕುಲಕರ್ಣಿ
    26JUL2010 12:01
    ಭಯಂಕರ ಅನುಭವ.ಓದಿ ಮೈ ನಡುಕ ಬಂತು.

    Kavinagaraj
    26JUL2010 7:50
    ಗೋಪಾಲ್, ನಿಮ್ಮ ಮತ್ತು ಇತರರ ಪ್ರತಿಕ್ರಿಯೆಗಳಿಂದ ಬರೆಯುತ್ತಿರುವುದು ಸಾರ್ಥಕವೆನಿಸಿದೆ.

    Ksraghavendranavada
    26JUL2010 2:24
    ಅಬ್ಬಾ, ಪ್ರಾಮಾಣಿಕತೆಗೆ ಸ೦ದ ಗೌರವ!
    ಸರಣಿ ಮು೦ದುವರೆಯಲಿ.

    Kavinagaraj
    26JUL 2010 7:56
    ನಾವಡರೇ, ಸಹೃದಯರು ಮೆಚ್ಚುತ್ತಿರುವುದು ನನ್ನ ಸೌಭಾಗ್ಯ.

    ನಂದಕಿಶೋರ
    26JUL2010 6:28
    ಸರ್, ನೀವು ಜೀವನದಲ್ಲಿ ತುಂಬಾ ಸಾಧಿಸಿದ್ದೀರಿ.
    ಅವನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿರುವುದೇ ಒಂದು ಭಾಗ್ಯ.

    Kavinagaraj
    26JUL2010 7:57
    ನಂದಕಿಶೋರರೇ, ನಿಮ್ಮ ಪ್ರತಿಕ್ರಿಯೆ ಆನಂದ ತಂದಿತು.

    ಗಣೇಶ
    31JUL2010 12:01
    ಕವಿನಾಗರಾಜರೆ,
    ಬೆಂಗಳೂರಿನ ಸೆಂಟ್ರಲ್ ಜೈಲನ್ನು "ಫ್ರೀಡಂ ಪಾರ್ಕ್" ಮಾಡಿದ ಮೇಲೆ ಒಮ್ಮೆ ನೋಡಲು ಹೋಗಿದ್ದೆ. ಅಲ್ಲಿನ ಕಲ್ಲು ಹಾಸಿಗೆ ನೋಡಿ, ತಪ್ಪು ಮಾಡಿದ ಕೈದಿಗಳಿಗೆ ಸರಿಯಾದ ಹಾಸಿಗೆ ಎಂದಿದ್ದೆ. ನೀವು ವಿನಾಕಾರಣ ಹಾಸನ ಜೈಲಿನ ’ಸಮಾಧಿ ಒಳಗೆ’ ಇರಬೇಕಾಗಿ ಬಂದುದು ಓದಿದಾಗ ಕರುಳು ಚುರ್ ಎಂದಿತು.
    ’ಸರಳುಗಳ ಹಿಂದಿನ ಲೋಕ ೧’ ಹೆಡ್ಡಿಂಗ್‌ನಲೇ ಸೇರಿಸಿ.
    -ಗಣೇಶ.

    Kavinagaraj
    31JUL2010 10:31
    ನಿಮ್ಮ ಮನದಾಳದ ಪ್ರತಿಕ್ರಿಯೆಗೆ ಧನ್ಯವಾದಗಳು, ಗಣೇಶ್.

    ಹರಿಹರಪುರಶ್ರೀಧರ್
    31JUL2010 8:28
    ನಾಗರಾಜರೇ,
    ನೀವೊಬ್ಬ ವಿಶ್ರಾಂತ ತಹಸಿಲ್ದಾರ್ ಎಂದಷ್ಟೇ ನನ್ನ ಅನೇಕ ಸ್ನೇಹಿತರಿಗೆ ನಿಮ್ಮ ಬಗ್ಗೆ ಗೊತ್ತು.ಎಮೆರ್ಜೆನ್ಸಿ ಹೋರಾಟದಲ್ಲಿ ನಾನಿದ್ದರೂ ಸಹ ನನಗೆ ಈ ಕಷ್ಟದ ಅರಿವಾಗಲಿಲ್ಲ.ಆನಂತರವಾದರೂ ನನ್ನ ನಿಮ್ಮ ಒಡನಾಟದಲ್ಲಿ ನಿಮ್ಮ ಸುಖದ ಕ್ಷಣಗಳನ್ನೇ ಹಂಚಿಕೊಂಡಿರಿ.ಇದು ನಿಮ್ಮ ದೊಡ್ದತನ. ಈಗಲಾದರೂ ಉಳಿದೆಲ್ಲಾ ಅನುಭವ ಹಂಚಿಕೊಂಡುಬಿಡಿ, ಮರೆತುಹೋಗುವ ಮುನ್ನ.

    Kavinagaraj
    31JUL2010 10:32
    ಹಾಗೇ ಆಗಲಿ, ಶ್ರೀಧರ್. ಸಾಧ್ಯವೆನಿಸಿದಷ್ಟು ಬರೆವೆ.

    ಪ್ರತ್ಯುತ್ತರಅಳಿಸಿ
  2. Raghu S P
    31JUL2010 2:31
    ಶರಣು ಶರಣಾರ್ತಿ ಸ್ವಾಮಿ

    SHANKAR MURTHY.K.N
    31JUL2010 3:21
    ನಾಗರಾಜರವರೆ,
    ನಿಮ್ಮ ಅನುಭವ ತುಂಬಾ ಭಯಂಕರವಾಗಿದೆ.ಈ ದಿನಗಳಲ್ಲೂ ಜೈಲೆಂದರೆ ಬೆಚ್ಚಿ ಬೀಳುವಂತಾಗುವಾಗ ಇನ್ನು ಎಮರ್ಜನ್ಸಿಯ ಸಮಯದಲ್ಲಿ ಜೈಲಿನ ವಾಸ..........! ಮುಂದಿನ ಕಥನವನ್ನು ಇದಿರು ನೋಡುತ್ತಿದ್ದೇನೆ.
    Kavinagaraj
    04AUG2010 12:18
    ಮೆಚ್ಚುಗೆಯ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

    Kavinagaraj
    04AUG2010 12:19
    ಮೆಚ್ಚುಗೆಯ ಪ್ರತಿಕ್ರಿಯೆಗಾಗಿ ದನ್ಯವಾದಗಳು.

    ಪ್ರತ್ಯುತ್ತರಅಳಿಸಿ