ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಜುಲೈ 16, 2010

ಅಂಚೆ ಪುರಾಣ -4

ಬಂದಳೋ ಬಂದಳು ಚೆಲುವೆ ಬಂದಳು!
      ಅಂಚೆ ಕಛೇರಿಯ ಏಕತಾನತೆಯ ಕೆಲಸಕಾರ್ಯಗಳಲ್ಲಿ ತೊಡಗಿದ್ದವರು ಪರಸ್ಪರ ಮಾತುಕಥೆಗಳಲ್ಲಿ ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತಿದ್ದರು. ವೃತ್ತಿ ವೈಷಮ್ಯ, ಅಸೂಯೆ, ಇತ್ಯಾದಿಗಳು ರಾಜ್ಯ ಸರ್ಕಾರದ ಕಛೇರಿಗಳಿಗೆ ಹೋಲಿಸಿದರೆ ಅಂಚೆ ಕಛೇರಿಯಲ್ಲಿ ಕಡಿಮೆಯಿತ್ತೆಂದೇ ಹೇಳಬಹುದು. ಆಗಾಗ ರಸಮಯ ಸನ್ನಿವೇಶಗಳೂ ಬರುತ್ತಿದ್ದವು. ಅಂಚೆ ಕಛೇರಿಯ ಪ್ರಾರಂಭದಲ್ಲೇ ತಂತಿ ಕಛೇರಿ ಇತ್ತು. ಅದರ ಪಕ್ಕದಲ್ಲೇ ನಾನು ಕೆಲಸ ಮಾಡುತ್ತಿದ್ದ ಉಳಿತಾಯ ಶಾಖೆ. ಆಗ ತಂತಿ ಸಂದೇಶಗಳನ್ನು ಮೋರ್ಸ್ ಲಿಪಿಯಲ್ಲಿ ಕಳುಹಿಸಲಾಗುತ್ತಿತ್ತು. ಸಂದೇಶ ಬರುವಾಗ 'ಕಟ್ಟ ಕಡ ಕಟ್ಟ ಕಡ ಕಡ ಕಟ್ಟ" ಇತ್ಯಾದಿ ಶಬ್ದ ಬರುತ್ತಿತ್ತು. ಅದನ್ನು ಡಿಕೋಡ್ ಮಾಡಿ ತಂತಿ ಸಂದೇಶವನ್ನು ನಮೂನೆಯಲ್ಲಿ ಕೈಬರಹದಲ್ಲಿ ಬರೆದು ಅಂಚೆಯ ಆಳಿನ ಮೂಲಕ ಸಂಬಂಧಿಸಿದವರಿಗೆ ತಲುಪಿಸಲಾಗುತ್ತಿತ್ತು. ಟೆಲಿಗ್ರಾಫ್ ಆಪರೇಟರ್ ಇನ್ನೂ ಹುಡುಗನಾಗಿದ್ದು ಕೀಟಲೆ ಸ್ವಭಾವ ಹೋಗಿರಲಿಲ್ಲ. ಅಂಚೆ ಕಛೇರಿಗೆ ಯಾರಾದರೂ ನೋಡಲು ಚೆನ್ನಾಗಿದ್ದ ಹುಡುಗಿ ಯಾವುದಾದರೂ ಕೆಲಸಕ್ಕಾಗಿ ಬಂದಾದ ಅವನು ಟೇಬಲ್ ಮೇಲೆ 'ಕಟ್ಟ-ಕಡ-ಕಟ್ಟ-ಕಟ್ಟ' ಇತ್ಯಾದಿ ಶಬ್ದ ಮಾಡುತ್ತಿದ್ದ. 'Beauty is coming'' ಎಂದು ಅದರ ಅರ್ಥವಂತೆ. ಇದು ಗೊತ್ತಿದ್ದ ಕಛೇರಿಯವರು ತಾವು ಮಾಡುತ್ತಿದ್ದ ಕೆಲಸ ಬಿಟ್ಟು ಬಂದವರನ್ನು ನೋಡುತ್ತಿದ್ದರು. ಇವನು ಕುಟ್ಟುವುದು, ಉಳಿದವರು ತಲೆ ಎತ್ತಿ ಗಮನಿಸುವುದನ್ನು ನೋಡಲು ತಮಾಷೆಯಾಗಿತ್ತು. ಹೀಗೆಯೇ ಒಮ್ಮೆ ಒಬ್ಬರು ಬಂದಾಗ ಅವನು ಯಥಾ ಪ್ರಕಾರ ಕಡಕಟ್ಟಿಸಿ ಸಂದೇಶ ನೀಡಿದ. ಇತರರು ನೋಡ ನೋಡುತ್ತಿದ್ದಂತೆಯೇ ಬಂದಿದ್ದ ಹುಡುಗಿ ಸಹ ಸೀದಾ ಒಳಗೆ ಬಂದು ಟೆಲಿಗ್ರಾಫ್ ಆಪರೇಟರನ ಟೇಬಲ್ ಮೇಲೆ ತಾನೂ ಕಡ ಕಟ್ಟ ಕಟ್ಟ ಕುಟ್ಟಿ ಹೆಡ್ ಪೋಸ್ಟ್ ಮಾಸ್ಟರರೊಂದಿಗೆ ಮಾತನಾಡಲು ಹೋದಳು. ನಂತರ ತಿಳಿದ ವಿಷಯವೆಂದರೆ ಆಕೆಯೂ ಟೆಲಿಗ್ರಾಫ್ ಆಪರೇಟರ್ ಆಗಿದ್ದಳು. ಹೆಡ್ ಪೋಸ್ಟ್ ಮಾಸ್ಟರರ ಸಂಬಂಧಿಯಾಗಿದ್ದು ಮಾತನಾಡಿಸಿಕೊಂಡು ಹೋಗಲು ಬಂದಿದ್ದಳಂತೆ. ಅವಳು ನೀಡಿದ್ದ ಸಂದೇಶ 'Thanks for the compliments' ಎಂದು ಆಗಿತ್ತಂತೆ. ಹೆಡ್ ಪೋಸ್ಟ್ ಮಾಸ್ಟರರೊಂದಿಗೆ ಆಕೆ ಈ ಸಂದೇಶ ವಿನಿಮಯಗಳ ವಿಷಯದಲ್ಲಿ ಯಾವುದೇ ಮಾತನ್ನಾಡಿರಲಿಲ್ಲ. ಆದರೂ ಅಂದಿನಿಂದ ಆಪರೇಟರ್ ಮಿತ್ರನ ಕಡಕಟ್ಟುವಿಕೆ ಸಂದೇಶ ನಿಂತುಹೋಯಿತು.
ಅಂಚೆ ಸೇವೆಗೆ ವಿದಾಯ
     ಅಂಚೆ ಕಛೇರಿಯಲ್ಲಿ ಕೇವಲ ಒಂದು ವರ್ಷ ಸೇವೆ ಸಲ್ಲಿಸಿ ನಂತರ ಕೆ.ಪಿ.ಎಸ್.ಸಿ.ಯಿಂದ ಆಯ್ಕೆಗೊಂಡಿದ್ದ ಕಂದಾಯ ಇಲಾಖೆಯ ಕೆಲಸಕ್ಕೆ ಸೇರಿದೆ. ಅಂಚೆ ಕಛೇರಿಯ ನೌಕರರೆಲ್ಲರೂ 'ಮೊದಲು ಅಂಚೆ ಕಛೇರಿ ಬಿಟ್ಟು ಹೋಗು. ಇಲ್ಲಿ ಕತ್ತೆ ಕೆಲಸ, ಸಂಬಳ ಕಡಿಮೆ. ಅಲ್ಲಿ ನಿನಗೆ ಮುಂದುವರೆಯಲು ಅವಕಾಶಗಳಿವೆ' ಎಂದು ಹೇಳುತ್ತಿದ್ದರು. ನನಗೆ ಗೊತ್ತಿದ್ದ ರಾಜ್ಯ ಸರ್ಕಾರಿ ನೌಕರರೆಲ್ಲಾ ಕೇಂದ್ರ ಸರ್ಕಾರದ ನೌಕರಿ ಬಿಟ್ಟುಬರಬೇಡವೆಂದು ಹೇಳುತ್ತಿದ್ದು ನನಗೆ ಏನು ಮಾಡಬೇಕೆಂದು ತೋಚದೆ ಜ್ವರ ಬಂದಿತ್ತು. 'ಪೋಸ್ಟ್ ಮಾಸ್ಟರಿಗೆ ಬುದ್ಧಿ ಇಲ್ಲ; ಸ್ಟೇಶನ್ ಮಾಸ್ಟರಿಗೆ ನಿದ್ದೆ ಇಲ್ಲ' ಎಂಬ ಗಾದೆ ಮಾತು ಆಗ ಚಾಲ್ತಿಯಲ್ಲಿತ್ತು. ಅಂಚೆ ಕಛೇರಿಯ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ನನ್ನ ಕೆಲಸ ಖಾಯಂ ಆಯಿತೆಂದು ಸಂದೇಶ ಬಂದ ದಿನವೇ ಅಂಚೆ ಕಛೇರಿ ಕೆಲಸಕ್ಕೆ ರಾಜಿನಾಮೆ ನೀಡಿ ಹೊರಬಂದೆ. ಈ ನನ್ನ ನಿರ್ಧಾರಕ್ಕೆ ಪದವೀಧರ ನೌಕರರಿಗೂ ಇತರ ನೌಕರರಿಗೂ ಅಲ್ಲಿ ವ್ಯತ್ಯಾಸವಿರದಿದ್ದುದು ಒಂದು ಕಾರಣವಾಗಿದ್ದರೆ, ಇನ್ನೊಂದು ಕಾರಣ ಹೊರಜಗತ್ತಿಗೆಲ್ಲಾ ಸಂಪರ್ಕ ಕಲ್ಪಿಸುವ ಅಂಚೆ ಕಛೇರಿ ನೌಕರರಿಗೇ ಹೊರಜಗತ್ತಿನ ಸಂಪರ್ಕ ಕಡಿಮೆಯಿತ್ತು. ಅವರು ತಾವಾಯಿತು, ತಮ್ಮ ಕೆಲಸವಾಯಿತು ಎಂಬಂತೆ ಇರಬೇಕಿತ್ತು ಆ ಸಮಯದಲ್ಲಿದ್ದ ಹಿರಿಯ ನೌಕರರ ಸ್ಥಿತಿ ಸಹ ನನ್ನನ್ನು ಹೊರಬರಲು ಪ್ರೇರಿಸಿತ್ತು. ಒಬ್ಬರು ಹಿರಿಯ ನೌಕರರಂತೂ ರಸ್ತೆಯಲ್ಲಿ ಓಡಾಡುವಾಗ ತಮ್ಮಷ್ಟಕ್ಕೆ ತಾವೇ ಕೈಯಾಡಿಸಿಕೊಂಡು ಒಬ್ಬರೇ ಮಾತನಾಡಿಕೊಂಡು ಹೋಗುತ್ತಿದ್ದರು. ಯಾರಾದರೂ ಮಾತನಾಡಿಸಿದರೆ ಬೆಚ್ಚಿಬಿದ್ದು ವಾಸ್ತವ ಸ್ಥಿತಿಗೆ ಬರುತ್ತಿದ್ದುದನ್ನು ಕಂಡಿದ್ದ ನನಗೆ ಅವರ ಬಗ್ಗೆ ಮರುಕ ಭಾವನೆ ಬರುತ್ತಿತ್ತು. ಅವರು ನನ್ನನ್ನು ಆತ್ಮೀಯರಂತೆ ಮಾತನಾಡಿಸುತ್ತಿದ್ದುದನ್ನು ನಾನು ಮರೆಯುವುದಿಲ್ಲ. ಅಂಚೆ ಇಲಾಖೆ ಬಿಟ್ಟು ಹೊರಬಂದರೂ ನನಗೆ ಅಲ್ಲಿನ ವಾತಾವರಣ, ಸ್ನೇಹಿತರು ನೆನಪಾಗುತ್ತಿರುತ್ತದೆ. ದಶಕಗಳು ಕಳೆದರೂ ಅಂದಿನ ಸ್ನೇಹಿತರು ಈಗಲೂ ಸ್ನೇಹಿತರಾಗಿ ಉಳಿದಿರುವುದು ಅಂಚೆ ಇಲಾಖೆಯನ್ನು ಗೌರವಿಸುವಂತೆ ಮಾಡಿದೆ. ಅಂಚೆ ಕಛೇರಿಯ ವಾತಾವರಣ ನಾನು ಕೆಲಸ ಮಾಡುತ್ತಿದ್ದ ಅವಧಿಯಲ್ಲಿದ್ದಂತೆ ಈಗಿರಲಾರದು. ನಾನು ಪಡೆದಿದ್ದ ಅಂಚೆ ತರಬೇತಿ ಒಂದು ಅತ್ಯತ್ತಮ ತರಬೇತಿಯಾಗಿದ್ದು ನನ್ನ ಮೇಲೆ ಸತ್ಪ್ರಭಾವ ಬೀರಿದೆ.
(ಕಾಲಘಟ್ಟ; 1972-73)
[ಅಂಚೆ ಪುರಾಣ ಇಲ್ಲಿಗೆ ಮುಗಿಸುತ್ತಿದ್ದು ಇನ್ನು ಮುಂದೆ ನನ್ನ ನೆನಪುಗಳ ಹಂಚಿಕೆ ಸೇವಾಪುರಾಣದ ಮೂಲಕ ಮುಂದುವರೆಯಲಿದೆ.)

1 ಕಾಮೆಂಟ್‌:

  1. ಗೋಪಾಲ್ ಮಾ ಕುಲಕರ್ಣಿ
    06JUL2010 5:47
    ತುಂಬಾ ಚೆನ್ನಾಗಿದೆ.
    <>
    ha haa..:)

    Ksraghavendranavada
    06JUL2010 6:01
    ಕಟ್ಟ-ಕಡ-ಕಟ್ಟ-ಕಡ..... ಹ.ಹ.ಹ. ನಮ್ಮಲ್ಲಿನ ಅ೦ಚೆ ಕಛೇರಿಯನ್ನೊಮ್ಮೆ ನೆನಪು ಮಾಡಿಕೊ೦ಡೆ. ಚೆನ್ನಾಗಿ ಬರುತ್ತಿದ್ದ ಅ೦ಚೆ ಪುರಾಣ ಇದ್ದಕಿದ್ದ೦ತೆ ನಿಲ್ಲಿಸಿದಿರಲ್ಲ! ಹ೦ಚಿಕೆ ಸೇವಾ ಪುರಾಣದ ಬಗ್ಗೆ ಕಾಯುವ೦ತೆ ಮಾಡಿದ್ದೀರಿ.
    ಅನುಭವ ಕಥನ... ಸ್ವಾರಸ್ಯವಾಗಿ ಮೂಡಿಬರುತ್ತಿದೆ.... ಮು೦ದುವರೆಸಿ.
    ನಮಸ್ಕಾರಗಳು.

    Kavinagaraj
    06JUL2010 7:05
    ಅಂಚೆ ಕಛೇರಿಯ ನೆನಪು ನನಗೆ ಸದಾ ಇರುತ್ತದೆ. ಹೇಳಲು ಇನ್ನೂ ವಿಷಯಗಳಿದ್ದರೂ ಅಚ್ಚಳಿಯದೆ ಉಳಿದ ಘಟನೆಗಳನ್ನು ಮಾತ್ರ ಹಂಚಿಕೊಂಡಿರುವೆ. ಸಹೃದಯ ಓದುಗರಾದ ನಿಮ್ಮಂತಹವರಿಂದ ಬರೆಯಲು ಪ್ರೇರಣೆ ಸಿಕ್ಕಿದೆ. ನಮನಗಳು, ನಾವಡರೇ.

    ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ
    06JUL2010 7:12
    kavinagaraj ಅವರೇ,
    ನಿಮ್ಮ ಅಂಚೆ ಪುರಾಣ ರಸವತ್ತಾಗಿದೆ ... ಇಷ್ಟಕ್ಕೆ ಮುಗಿಯಿತೆಂದು ತಿಳಿಯಲು ಬೇಸರವಾಯಿತು ... ಬರಲಿರುವ ಸೇವಾಪುರಾಣವೂ ಇಷ್ಟೇ ರೋಚಕ ಆಗಿರುತ್ತದೆ ಎಂದು ಆಶಿಸುತ್ತೇನೆ.
    ಅಂದ ಹಾಗೆ,
    {... ಆಕೆಯೂ ಟೆಲಿಗ್ರಾಫ್ ಆಪರೇಟರ್ ಆಗಿದ್ದು ಹೆಡ್ ಪೋಸ್ಟ್ ಮಾಸ್ಟರರ ಸಂಬಂಧಿಯಾಗಿದ್ದು ಮಾತನಾಡಿಸಿಕೊಂಡು ಹೋಗಲು ಬಂದಿದ್ದಳಂತೆ. ಅವಳು ನೀಡಿದ್ದ ಸಂದೇಶ 'Thanks for the complements' ಎಂದು ಆಗಿತ್ತಂತೆ ... }
    ಎಂಬಲ್ಲಿ compliments ಎಂದಾಗಬೇಕಿತ್ತು ಆಲ್ವಾ?

    Kavinagaraj
    06JUL2010 7:41
    ಧನ್ಯವಾದಗಳು ಶಾಸ್ತ್ರಿಗಳೇ. ತಪ್ಪು ತಿದ್ದಿಕೊಂಡಿದ್ದೇನೆ. ಮೆಚ್ಚಿದ್ದಕ್ಕೆ ನಮನಗಳು.

    ನನ್ನಿ ಸುನಿಲ
    06JUL2010 9:23
    ಕವಿನಾಗರಜರೆ, ನಿಮ್ಮ ಅಂಚೆ ಪುರಾಣದ ನಾಲ್ಕೂ ಲೇಖನಗಳನ್ನು ಓದಿದೆ. ತುಂಬಾ ತಿಳಿಯಾದ ನುಡಿಗಟ್ಟಿನಲ್ಲಿ ಒಂದು ಒಳ್ಳೆಯ ಮಾಲಿಕೆ ಮೂಡಿ ಬಂದಿದೆ. ಒಳ್ಳೆಯ ಅನುಭವ ಕಥನವನ್ನು ನೀಡಿದ್ದಕ್ಕಾಗಿ ನನ್ನಿ.

    ಬೆಳ್ಳಾಲ ಗೋಪೀನಾಥ ರಾವ್
    06JUL2010 9:34
    ಕವಿಯವರೇ
    ನನ್ನ ತಮ್ಮ ನಿಮ್ಮ ಹಾಗೆ ಅಂಚೆ ಇಲಾಖೆಯಲ್ಲೇ ಸೇವೆ ಸಲ್ಲಿಸುತ್ತಿದ್ದು
    ನಿಸ್ಪ್ರಹ ಅಧಿಕಾರಿ ಎಂದು ಹೆಸರು ಪಡೆದಿದ್ದಾನೆ.( ಈಗಲೂ)
    ನಿಮ್ಮ ಲೇಖನ ತುಂಬಾ ವಿಷಯಗಳನ್ನು ಒಳಗೊಂಡು ಕುತೂಹಲಭರಿತವಾಗಿದೆ
    ಧನ್ಯವಾದಗಳು

    ಇದಕ್ಕೆ ಪ್ರತಿಕ್ರಿಯೆ ಸೇರಿಸಿ ಅನುಚಿತ ಪ್ರತಿಕ್ರಿಯೆ? ಇಲ್ಲಿ ಕ್ಲಿಕ್ ಮಾಡಿ

    ಹೊಳೆ ನರಸೀಪುರ ಮಂಜುನಾಥ
    06JUL2010 10:41
    ಕವಿ ನಾಗರಾಜರೆ, ನಿಮ್ಮ ಅ೦ಚೆ ಪುರಾಣ ಓದಲು ಹಿತವಾಗಿತ್ತು. ಸೇವಾಪುರಾಣ ಓದಲು ಕಾತುರದಿ೦ದ ಕಾಯುತ್ತಿರುತ್ತೇನೆ. ಬೇಗ ಆರ೦ಭಿಸಿ.

    ಜ್ಞಾನ ಮೂರ್ತಿ
    07JUL2010 2:40
    ನಿಮ್ಮ ನಾಲ್ಕೂ ಅಂಚೆ ಪುರಾಣಗಳು ಚೆನ್ನಾಗಿ ಮೂಡಿ ಬಂದಿವೆ ಸರ್...
    ಅದರಲ್ಲೂ 'ಕಟ್ಟ-ಕಡ-ಕಟ್ಟ-ಕಟ್ಟ' ಮತ್ತು 'ಕಡ ಕಟ್ಟ ಕಟ್ಟ' ಸಕ್ಕಾತ್ತಾಗಿತ್ತು.
    -ನಿಮಗೆ ನನ್ನ 'ಕಡ ಕಟ್ಟ' (Compliments)!!!
    -ಜ್ಞಾನ

    Kavinagaraj
    07JUL2010 3:00
    ನಿಮಗೂ ನನ್ನ ಕಟ್ಟ ಕಟ್ಟ ಕಡ ಕಟ್ಟ (ಧನ್ಯವಾದಗಳು), ಜ್ಞಾನಮೂರ್ತಿಯವರೇ

    ಪ್ರತ್ಯುತ್ತರಅಳಿಸಿ