ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಸೆಪ್ಟೆಂಬರ್ 30, 2011

ಮೂಢ ಉವಾಚ - 73


ಶ್ರಮವಿರದ ಸುಖವೆಲ್ಲರಿಗೆ ಬೇಕು ನಿತ್ಯ
ಸುಖವು ಶ್ರಮದಲಿಹುದೆಂಬುದೆ ಪರಮಸತ್ಯ |
ಸುಖಿಸುವರ ಕಂಡು ಕರುಬುವರು ಪರರು
ಶ್ರಮಿಸುವರ ಮಚ್ಚರಿಪರಿಹರೆ ಮೂಢ ||


ವಿಷಯರಾಗವನು ಮೂಡಿಪುದೆ ಮನಸು
ಪಶುತರದಿ ಬಂಧಗೊಳಿಪುವುದು ಮನಸೆ |
ವಿರಾಗದಲಿ ಬಂಧ ಬಿಡಿಸುವುದು ಮನಸು
ಮನಸಿನಿಂದಲೆ ಕನಸು ನನಸು ಮೂಢ ||


ಹೆತ್ತು ಹೊತ್ತು ಸಲಹಿದ ಮಮತೆಯ ಜಲಧಿ
ತಾಯ ಋಣ ತೀರಿಸಲು ಆಗುವುದೆ ಜಗದಿ |
ನೋವನುಂಡು ನಲಿವ ನೀಡುವಳು ಮುದದಿ
ಆಕೆಯನು ನೋಯಿಪನು ಕಡುಪಾಪಿ ಮೂಢ ||


ಸಾಲ ಪಡೆದೆವು ಋಣಿಗಳಾದೆವು ನಾವು
ಶರೀರವಿತ್ತ ದೇವಗೆ ಹೆತ್ತವರ್ಗೆ ಹೊತ್ತವರ್ಗೆ |
ದಾರಿ ತೋರುವ ಗುರು ಹಿರಿಯರೆಲ್ಲರಿಗೆ
ಸಾಲವನು ತೀರಿಸದೆ ಮುಕ್ತಿಯುಂಟೆ ಮೂಢ ||

****************
-ಕ.ವೆಂ.ನಾಗರಾಜ್.


ಗುರುವಾರ, ಸೆಪ್ಟೆಂಬರ್ 29, 2011

ಸಮಸ್ಯೆ ಒಂದು - ಸಂಭಾವ್ಯ ಪರಿಹಾರ ಐದು!

ಒಂದು:
     ರಾಜಣ್ಣ ಒಬ್ಬ ಪೋಸ್ಟ್ ಗ್ರಾಜುಯೇಟ್ ನಿರುದ್ಯೋಗಿ. ಏನಾದರೂ ಒಳ್ಳೆಯದು ಮಾಡಬೇಕೆಂಬ ಕಳಕಳಿಯಿದ್ದರೂ ಮುನ್ನುಗ್ಗುವ ಸ್ವಭಾವದವನಾಗಿರಲಿಲ್ಲ. ಓದುತ್ತಿದ್ದಾಗ ತಾನಾಯಿತು, ತನ್ನ ಪುಸ್ತಕವಾಯಿತು ಎಂಬಂತಿದ್ದವನು. ಅವನಿದ್ದ ಮನೆಯ ಮುಂದಿನ ರಸ್ತೆಯಲ್ಲಿ ದೊಡ್ಡ ಗುಂಡಿಯಿದ್ದು ವಾಹನಗಳು ಓಡಾಡುವುದು ದುಸ್ತರವಾಗಿತ್ತು. ಒಮ್ಮೆ ಅವನ ಸ್ನೇಹಿತ ಅವನನ್ನು ಕಾಣಲು ಬರುವಾಗ ಗುಂಡಿಯ ಕಾರಣದಿಂದ ಬೈಕಿನಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದಾಗಿನಿಂದ ರಸ್ತೆ ಸರಿಪಡಿಸಲು ನಗರಸಭೆಯ ಅಧಿಕಾರಿಗಳನ್ನು ಹಲವಾರು ಸಲ ಭೇಟಿ ಮಾಡಿ ಅರ್ಜಿ ಕೊಟ್ಟು ವಿಚಾರಿಸಿದರೂ ಏನೂ ಪ್ರಯೋಜನವಾಗಿರಲಿಲ್ಲ. ಆ ಭಾಗದ ಕೌನ್ಸಿಲರರನ್ನು ಕಂಡು ಬರುವುದು ಒಳ್ಳೆಯದೆಂದುಕೊಂಡು ಅವರ ಮನೆಗೆ ಹೋದ. ಮನೆಯ ಮುಂದೆ ಜನಗಳ ಗುಂಪೇ -ಕೆಲಸ ಮಾಡಿಸಿಕೊಳ್ಳಲು ಬಂದವರು, ಹಿಂಬಾಲಕರು, ಮುಂಬಾಲಕರು, ಇತ್ಯಾದಿ-ಇತ್ತು. ರಾಜಣ್ಣ ಅವರ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದರೂ ಅವರು ಅವನನ್ನು ಗಮನಿಸಿಯೂ ಗಮನಿಸದಂತೆ ಇತರರೊಂದಿಗೆ ಮಾತುಕತೆಯಲ್ಲೇ ತೊಡಗಿದ್ದರು. ಮಧ್ಯೆ ಮಧ್ಯೆ ಆಪ್ತ/ಗುಪ್ತ ಸಮಾಲೋಚನೆಗಾಗಿ ಪಕ್ಕದ ಕೊಠಡಿಗೆ ಹೋಗಿಬರುತ್ತಿದ್ದರು. ಕೊನೆಗೊಮ್ಮೆ ಆ ಜನಪ್ರತಿನಿಧಿ 'ಏನ್ರೀ, ನಿಮ್ಮದು?' ಎಂದಾಗ ರಸ್ತೆ ದುರಸ್ತಿ ಮಾಡಿಸಿಕೊಡಬೇಕೆಂದೂ, ನಗರಸಭೆಯ ಅಧಿಕಾರಿಗಳು ಕ್ಯಾರೇ ಅನ್ನುತ್ತಿಲ್ಲವೆಂದು ಹೇಳಿಕೊಂಡ. ಅವರು 'ನಮಗೆ ಇದೇ ಕೆಲಸವೇನ್ರೀ? ಆ ರಸ್ತೆ ಮಾಡಿಸಿ, ಈ ಚರಂಡಿ ಕ್ಲೀನ್ ಮಾಡಿಸಿ, ಬರೀ ಇದೇ ಆಯಿತು' ಎಂದು ಹೇಳಿ, ಅಲ್ಲೇ ಇದ್ದ ನಗರಸಭೆ ಇಂಜನಿಯರರಿಗೆ 'ಅದೇನು ನೋಡ್ರೀ' ಎಂದು ಹೇಳಿದವರು  ಆಗತಾನೇ ಬಂದ ವ್ಯಕ್ತಿಯೊಬ್ಬರನ್ನು ಆತ್ಮೀಯವಾಗಿ ಆಹ್ವಾನಿಸಿ ಪಕ್ಕದ ಕೊಠಡಿಗೆ ಕರೆದುಕೊಂಡು ಹೋದರು. ಇಂಜನಿಯರ್ ಉದಾಸೀನದಿಂದ 'ಆಯ್ತು ನೋಡೋಣ, ಹೋಗಿ' ಎಂದು ಹೇಳಿದ. ರಾಜಣ್ಣ ವಾಪಸು ಬಂದ.
ಎರಡು:
     ನಾಗಣ್ಣ ನಿವೃತ್ತನಾಗಿದ್ದ ಒಬ್ಬ ಹಿರಿಯ ಅಧಿಕಾರಿ. ರಸ್ತೆ ರಿಪೇರಿ ಮಾಡಿಸಲು ದೂರವಾಣಿ ಮೂಲಕ ನಗರಸಭೆ ಕಮಿಷನರರೊಂದಿಗೆ ಮಾತನಾಡಿದ್ದರು. ಹಾಗೆಯೇ ಕೌನ್ಸಿಲರರಿಗೆ ಒಂದು ಮಾತು ಹೇಳೋಣವೆಂದು ಕಾರಿನಲ್ಲಿ ಬಂದಿಳಿದ ಅವರನ್ನು ಕಂಡು ಮನೆಯ ಮುಂದಿದ್ದವರು ಅವರು ಒಳಗೆ ಬರಲು ಜಾಗ ಮಾಡಿಕೊಟ್ಟು ಸರಿದು ನಿಂತರು. ಒಳಗೆ ಹೋದ ನಾಗಣ್ಣ ಜನಪ್ರತಿನಿದಿಗೆ ವಿಷಯ ತಿಳಿಸಿದರು. 'ಆಯ್ತು ಬಿಡಿ, ಮಾಡಿಸೋಣ' ಎಂದವರು, ಇಂಜನಿಯರರಿಗೆ 'ಇಂಥ ಸಣ್ಣ ಕೆಲಸ ಮಾಡಕ್ಕೆ ಆಗಲ್ಲವೇನ್ರೀ, ಬೇಗ ಮಾಡಿಸಿರಿ' ಎಂದರು. ನಮಸ್ಕಾರ ಮಾಡಿ ನಾಗಣ್ಣ ಹೊರಗೆ ಹೋದಾಗ 'ನನಗೆ ಮಾಡಕ್ಕೆ ಬೇರೆ ಕೆಲಸ ಇಲ್ಲ ಅಂದುಕೊಂಡಿದಾನೆ' ಎಂದು ಗೊಣಗುಟ್ಟಿದರು. ಇಂಜನಿಯರರಿಗೆ ಆ ಕೆಲಸಕ್ಕೆ ಅರ್ಜೆಂಟ್ ಇಲ್ಲವೆಂದು ಅರ್ಥವಾಯಿತು. 
ಮೂರು:
     ಮಂಜಣ್ಣ ವಿದ್ಯಾವಂತನೇನಲ್ಲ, ಪಿಯುಸಿ ಫೇಲಾದ ಮೇಲೆ ಅವನ ವಿದ್ಯಾಭ್ಯಾಸ ಮೊಟಕಾಗಿತ್ತು. ಅಪ್ಪ ಕೊಟ್ಟ ದುಡ್ಡಿನಲ್ಲಿ ಕೆಲವು ಟ್ಯಾಕ್ಸಿಗಳನ್ನು ಇಟ್ಟುಕೊಂಡು ಡ್ರೈವರರನ್ನು ನೇಮಿಸಿಕೊಂಡು ಟ್ರಾವೆಲ್ ಏಜೆನ್ಸಿ ನಡೆಸಿ ಪ್ರವರ್ಧಮಾನಕ್ಕೆ ಬರುತ್ತಿದ್ದ. ಕಟ್ಟುಮಸ್ತಾಗಿದ್ದ ಅವನ ಜೊತೆ ಗೆಳೆಯರ ಗುಂಪೇ ಇರುತ್ತಿತ್ತು. ಏನಾದರೂ ಕೆಲಸ ಆಗಬೇಕಿದ್ದರೆ ಅವನಿಗೆ ಹೇಳಿದರೆ ಆಗುತ್ತಿತ್ತು. ಅದನ್ನು ಮಾಡಬೇಕೆಂದು ಅವನಿಗೆ ಅನ್ನಿಸಿದರೆ ಅವನು ಅದನ್ನು ಆಗುವವರೆಗೂ ಬಿಡುವ ಜಾಯಮಾನ ಅವನದಾಗಿರಲಿಲ್ಲ. ಅಂದು ಅವನು ತನ್ನ ಗೆಳೆಯರ ಗುಂಪಿನೊಂದಿಗೆ ತನ್ನ ಗಡಸು ದ್ವನಿಯಲ್ಲಿ 'ಇದಾರೇನ್ರೀ' ಎಂದುಕೊಂಡು ಕೌನ್ಸಿಲರರ ಮನೆಗೆ ಪ್ರವೇಶಿಸುತ್ತಿದ್ದಂತೆಯೇ ಎದ್ದುಬಂದ ಆ ಜನಪ್ರತಿನಿಧಿ 'ಏನ್ ಮಂಜಣ್ಣಾ, ಏನ್ಸಮಾಚಾರ?' ಎಂದು ಕೇಳಿದ. 'ಬರೀ ಕಮಿಷನ್, ಕಂಟ್ರಾಕ್ಟು ಅಂತ ಇರ್ತೀರೋ ಅಥವಾ ಜನಗಳ ಕೆಲಸಾನೂ ಮಾಡ್ತೀರೋ?' ಎಂದ ಅವನನ್ನು ಸಮಾಧಾನಿಸಿ 'ಈಗ ಏನಾಗಬೇಕು ಹೇಳು ಮಂಜಣ್ಣ' ಎಂದು ವಿಚಾರಿಸಿದ. ರಸ್ತೆ ರಿಪೇರಿ ವಿಷಯವೆಂದು ತಿಳಿದಾಗ ಅಲ್ಲಿದ್ದ ಇಂಜನಿಯರರಿಗೆ 'ನೀವೇನು ಕತ್ತೆ ಕಾಯ್ತಾ ಇರ‍್ತೀರಾ? ಆ ರಸ್ತೆ ಗುಂಡಿ ಮುಚ್ಚಿ ಸರಿ ಮಾಡಿ ಅಂತ ನಿಮಗೆ ಎಷ್ಟು ಸಲ ಹೇಳಬೇಕ್ರೀ? ಅದೆಲ್ಲಾ ಗೊತ್ತಿಲ್ಲ, ನಾಳೆ ಒಳಗೆ ಆ ಕೆಲಸ ಮಾಡಿ ನನಗೆ ಮುಖ ತೋರಿಸಬೇಕು' ಎಂದು ಗದರಿಸಿದರು. ಇಂಜನಿಯರ್ 'ಇವತ್ತೇ ಮಾಡಿಸುತ್ತಿದ್ದೆ ಸಾರ್, ಜನ ಸಿಗಲಿಲ್ಲ, ನಾಳೆ ಖಂಡಿತಾ ಆಗುತ್ತೆ ಸಾರ್' ಎಂದ. ಇಂಜನಿಯರ್ ತರಿಸಿದ ಕಾಫಿ ಕುಡಿದು ಮಂಜಣ್ಣ ಮತ್ತು ಅವನ ಗೆಳೆಯರು ಅಲ್ಲಿಂದ ಹೊರಟರು.
ನಾಲ್ಕು:
     ಗುಂಡಣ್ಣನ ಮನೆಯ ಮುಂದೆ ಇದ್ದ ಆ ಗುಂಡಿಯಿಂದ ಎಲ್ಲರಿಗೂ ಅನಾನುಕೂಲವಾಗಿದ್ದನ್ನು ನೋಡಲಾರದೆ ಗುಂಡಣ್ಣ ಎದುರುಮನೆ ತಿಮ್ಮಪ್ಪನನ್ನು ಕರೆದು ಇಬ್ಬರೂ ಖರ್ಚು ಹಾಕಿಕೊಂಡು ಜಲ್ಲಿ ಮಣ್ಣು ತರಿಸಿ ಇಬ್ಬರ ಮನೆಯ ಮುಂದಿರುವ ಹಳ್ಳಕೊಳ್ಳಗಳನ್ನು ಮುಚ್ಚಿಸೋಣವೆಂದರೆ ತಿಮ್ಮಪ್ಪ ಒಪ್ಪಲಿಲ್ಲ. ಮುನಿಸಿಪಾಲಿಟಿಗೆ ಹೋಗಿ ದಬಾಯಿಸೋಣ, ನಾವು ಏಕೆ ಖರ್ಚು ಮಾಡಬೇಕು ಎಂಬುದು ತಿಮ್ಮಪ್ಪನ ವಾದ. ಅದು ಸರಿಯೇ ಇದ್ದರೂ ಮುನಿಸಿಪಾಲಿಟಿಯಿಂದ ಈ ಕಾಲಕ್ಕೆ ಕೆಲಸವಾಗದೆಂದು ಗುಂಡಣ್ಣ ತಾನೇ ಒಂದು ಲೋಡು ಮಣ್ಣು ಮತ್ತು ಜಲ್ಲಿ ತರಿಸಿ ಮನೆಯ ಮುಂಭಾಗದ ರಸ್ತೆ ಸಮತಟ್ಟು ಮಾಡಿಸಿದ. ತಿಮ್ಮಪ್ಪನಿಗೆ ಇಷ್ಟವಿಲ್ಲದಿದ್ದರೂ ಎಷ್ಟು ಖರ್ಚಾಯಿತೆಂದು ವಿಚಾರಿಸಿ ನಂತರ ಅರ್ಧ ಹಣ ಕೊಟ್ಟ. 
ಐದು:-
     ಅಂದು ಬೆಳ್ಳಂಬೆಳಗ್ಗೆ ರಸ್ತೆ ದುರಸ್ತಿ ತರಾತುರಿಯಿಂದ ನಡೆದಿತ್ತು. ಕೆಲಸಗಾರರ, ಕೆಲಸದ ಉಸ್ತುವಾರಿ ನೋಡಿಕೊಳ್ಳುವವರ ದೊಡ್ಡ ಗುಂಪೇ ಅಲ್ಲಿ ನೆರೆದಿತ್ತು. ಕಾರಣ, ಜಿಲ್ಲಾ ಮಂತ್ರಿಗಳು ಅಂದು ಆ ರಸ್ತೆಯ ಮೂಲಕ ಹಾದು ಹೋಗುತ್ತಿದ್ದರು!

ಮಂಗಳವಾರ, ಸೆಪ್ಟೆಂಬರ್ 27, 2011

ಮೂಢ ಉವಾಚ - 72

ಬುದ್ಧಿಗೂ ಹೃದಯಕೂ ಎನಿತೊಂದು ಅಂತರ
ಬುದ್ಧಿಯದು ಚಮತ್ಕಾರ ಹೃದಯದಿಂದುಪಕಾರ |
ಬುದ್ಧಿಯ ಬಲದಲಿ ಜಗವನೆ ಗೆಲಲೇಕೆ
ಹೃದಯವಂತ ಜಗದೊಡೆಯ ಮೂಢ ||

ಹೃದಯವಿರದ ಬುದ್ಧಿ ಅಪಾಯ ತಂದೀತು
ಸ್ವಾರ್ಥ ಮೇಲಾಗಿ ಲೋಕಕಪಕಾರಿಯಾದೀತು |
ಹೃದಯದ ಒಲವಿರಲು ಬುದ್ಧಿ ಜೊತೆಗಿರಲು
ಲೋಕವೊಪ್ಪಿ ಅಹುದೆನದೆ ಮೂಢ || 


ಮೇಲು ಕೀಳುಗಳಿಗೆ ಕಾರಣರು ಪರರಲ್ಲ
ಆಲಸಿಕೆ ಕುಚಟಗಳ ದಾಸರಾಗರೆ ಕೀಳು |
ಮುನ್ನಡೆಯ ಹಂಬಲಿಸೆ ಆಗುವರು ಮೇಲು
ಪರರ ದೂಷಿಸಿ ಫಲವೇನು ಮೂಢ ||


ಸಮರಾರಿಹರು ಜಗದೊಳು ಸಮರಾರಿಹರು
ಅಸಮಾನರೆನಿಸೆ ಹಂಬಲಿಸಿ ಹೋರಾಡುತಿಹರು |
ಗುರಿ ಸಮನಿರಬಹುದು ದಾರಿ ಸಮನಹುದೆ
ನಿಜಸಮತೆ ಕಂಡೀತು ಸಾವಿನಲಿ ಮೂಢ ||
**************
-ಕ.ವೆಂ.ನಾಗರಾಜ್.

ಗುರುವಾರ, ಸೆಪ್ಟೆಂಬರ್ 22, 2011

ಮೂಢ ಉವಾಚ -71


ತಿಳಿಯಾಗಿರಲಿ ಮನ ದೋಷವಿರದಿರಲಿ
ಆನಂದ ತುಂಬಿರಲಿ ಮಂದಹಾಸವದಿರಲಿ |
ರೋಷವದು ದೂರ ವಿವೇಕ ಬಳಿಯಿರಲಿ
ಮಾನಸ ತಪದ ಫಲವೊಲಿಯಲಿ ಮೂಢ ||


ಗುರುಹಿರಿಯರ ಗೌರವವಿಸದವ ಹಾಳು
ಒಳಿತಿನಲಿ ಹುಳುಕರಸುವ ಸಂಶಯಿ ಹಾಳು
ಸಂಶಯಿಗೆ ಸುಖವಿಲ್ಲ ಇಹವಿಲ್ಲ ಪರವಿಲ್ಲ
ಪರರಿಗೂ ಅವನಿಂದ ಸುಖವಿಲ್ಲ ಮೂಢ || 


ಸುಖ ಬೇಕು ಮನುಜನಿಗೆ ದುಃಖ ಬೇಡ
ಸುಖಿಯು ಹೆಚ್ಚು ಸುಖ ಬಯಸುವನು |
ಬೇಡವೆನಿಸದ ದುಃಖಗಳೆರಗೆರಗಿ ಬರುತಿರಲು
ಸುಖವ ನಿನ್ನೊಳಗೆ ಅರಸು ಮೂಢ || 


ಲೌಕಿಕ ಸುಖಕಾಗಿ ಹೊರಗೆ ಸುತ್ತಲು ಬೇಕು
ಅಂತರಂಗದ ಸುಖಕೆ ಒಳಗೆ ಸಾಗಲು ಬೇಕು |
ಸುಖ ದುಃಖಗಳೆರಡು ಅವಳಿ ಜವಳಿಗಳು
ಒಂದು ಬಿಟ್ಟಿನ್ನೊಂದಿಲ್ಲ ಮೂಢ ||
****************
-ಕ.ವೆಂ.ನಾಗರಾಜ್.

ಮಂಗಳವಾರ, ಸೆಪ್ಟೆಂಬರ್ 20, 2011

ಮೂಢ ಉವಾಚ - 70

ಹಿತಮಿತದ ಮಾತು ಬಾಳಿಗಾಧಾರ
ಹಿತಮಿತದ ಊಟ ಆರೋಗ್ಯಧಾರ |
ಹಿತಮಿತದ ಕರ್ಮ ಸೊಗಸಿನ ಮರ್ಮ
ಇತಿಮಿತಿಯಲಿ ಬಾಳೆಲೋ ಮೂಢ || 


ಸಂಕಲ್ಪದಿಂ ಕಾಮ ಕಾಮದಿಂ ಕರ್ಮ
ಕರ್ಮದಿಂ ಬಹುದು ಸುಖ ದುಃಖ ಪ್ರಾಪ್ತಿ
ಪುನರಪಿ ಮರಣ ಪುನರಪಿ ಜನನ
ಸಂಸಾರ ಚಕ್ರಕೆ ಮೂಲ ಸಂಕಲ್ಪ ಮೂಢ || 



ವಿರಳ ಮಾನವಜನ್ಮ ಪುಣ್ಯಪಾಪದ ಫಲವು 
ವಿರಳವು ಹುಟ್ಟಿನ ಮಹತಿ ಗುರಿಯರಿವು |
ವಿರಳರು ಅರಿವರಿತು ಸರಿದಾರಿ ಹಿಡಿವವರು
ವಿರಳಾತಿವಿರಳ ಮುಕ್ತಿ ಪಡೆವವರು ಮೂಢ || 


ನುಡಿದಂತೆ ನಡೆಯುವರು ಸಟೆಯನಾಡರು
ಚಿತ್ತದಲಿ ಶಾಂತಿ ಹಿರಿಯರಲಿ ಗೌರವ |
ಅಲೋಲುಪ ಅಚಾಪಲ ತ್ಯಾಗಿಗಳವರು
ದೇವಮಾನವರವರೆ ಮೂಢ || 

ಭಾನುವಾರ, ಸೆಪ್ಟೆಂಬರ್ 18, 2011

ಸುಳ್ಳು ಹೇಳುವುದು ಸುಲಭವಲ್ಲ


     ಸುಳ್ಳು ಹೇಳುವುದು ಸುಲಭವಲ್ಲ. ಸುಳ್ಳು ಹೇಳಿದರೂ ಅರಗಿಸಿಕೊಳ್ಳುವುದು ಸುಲಭವಲ್ಲ. ಸುಳ್ಳು ಹೇಳುವವರಿಗೆ ಅರ್ಹತೆಯಿರಬೇಕು. ಏನು ಅರ್ಹತೆ? ನನಗೆ ತೋಚಿದ ಕೆಲವು ಅಂಶಗಳು:
೧. ಅಗಾಧ ಜ್ಞಾಪಕಶಕ್ತಿಯಿರಬೇಕು.
೨. ಸುಳ್ಳು ಸಮರ್ಥಿಸಿಕೊಳ್ಳಲು ಸುಳ್ಳುಗಳ ಸರಮಾಲೆ ಹೆಣೆಯುವ ಚಾಕಚಕ್ಯತೆ ಇರಬೇಕು.
೩. ಬುದ್ಧಿವಂತಿಕೆ ಇರಬೇಕು. 
೪. ಆಪ್ತರೇ ಹೇಳಿಕೊಟ್ಟಂತೆ ಸುಳ್ಳು ಹೇಳಿದರೂ ಅದನ್ನು ನಿಭಾಯಿಸುವ ಚಾಣಾಕ್ಷತೆ ಇರಬೇಕು. ಅತ್ಯಂತ ಆಪ್ತರೇ ಆದರೂ ಅವರು ಹೇಳಿಕೊಟ್ಟಂತೆ ಹೇಳಬೇಕೋ ಬೇಡವೋ ಎಂಬುದನ್ನು ನಿರ್ಧರಿಸುವ ಶಕ್ತಿ ಇರಬೇಕು.
೫. ಹೇಳಿದ್ದು ಸುಳ್ಳು ಎಂದು ಗೊತ್ತಾದಾಗ ಆಗುವ ಪರಿಣಾಮ ಎದುರಿಸಲು ಸಿದ್ಧರಿರಬೇಕು.
೬. ಗಾಢ ಸಂಬಂಧಗಳನ್ನು ಕಳೆದುಕೊಳ್ಳುವ ಅಪಾಯದ ಅರಿವಿರಬೇಕು. (ಅಥವ ಸಂಬಂಧಗಳಿಗೆ ಬೆಲೆ ಕೊಡದ ಮನಸ್ಥಿತಿ ಹೊಂದಬೇಕು.)
೭. ನಂಬಿಕಾರ್ಹರಲ್ಲ ಎಂಬ ಹಣೆಪಟ್ಟಿ ಹೊರಲು ಸಿದ್ಧರಿರಬೇಕು.
೮. ತಾನು ಮಾಡಿದ್ದು ತಪ್ಪಲ್ಲವೆಂದು ವಾದಿಸಿ ಗೆಲ್ಲುವ ಭಂಡತನವಿರಬೇಕು. ವಾದದಲ್ಲಿ ಗೆದ್ದರೂ ವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಪುನಃ ವಿಶ್ವಾಸ ಗಳಿಸುವ ನೈಪುಣ್ಯತೆ ಹೊಂದಿರಬೇಕು.
೯. ಕೆಲವೊಮ್ಮೆ ಪೇಚಿನ ಪ್ರಸಂಗಗಳಲ್ಲಿ ಸುಳ್ಳು ಹೇಳಬೇಕಾಗಿ ಬಂದರೂ ಆ ಸುಳ್ಳನ್ನು ನಿಜ ಮಾಡುವಂತೆ ನಡೆದುಕೊಳ್ಳಬೇಕು.
೧೦. . . . . . 
೧೧. . . . . .
     ನಬ್ರೂಯಾತ್ ಸತ್ಯಮಪ್ರಿಯಮ್ -  ಅಪ್ರಿಯವಾದ ಸತ್ಯ ಹೇಳಬಾರದು ಎಂಬ ಕಾರಣಕ್ಕಾಗಿ ಹಾಗೂ ಒಳ್ಳೆಯ ಉದ್ದೇಶಗಳಿಗಾಗಿ ಹೇಳುವ ಸುಳ್ಳುಗಳಿಗೆ ಇವು ಅನ್ವಯವಾಗುವುದಿಲ್ಲ. ಆದರೆ ಸುಳ್ಳು ಹೇಳಿದ ಕಾರಣದಿಂದ ಆಪ್ತರ ಮನಸ್ಸಿಗೆ ನೋವಾಗಿರುವುದು ಅರಿವಿಗೆ ಬಂದರೆ ಅವರ ಕ್ಷಮೆ ಕೇಳಿ ದೊಡ್ಡವರೆನಿಸಿಕೊಳ್ಳುವುದು ಬುದ್ಧಿವಂತರ ಲಕ್ಷಣ. ಸುಳ್ಳು ಹೇಳುವ ಪ್ರಸಂಗಗಳೇ ಬಾರದಂತೆ ನೋಡಿಕೊಳ್ಳುವುದು ಇನ್ನೂ ಬುದ್ಧಿವಂತರ ಲಕ್ಷಣ. 
*********************

ಕರ್ನಾಟಕ ಇತಿಹಾಸ ಅಕಾದೆಮಿಯ ೨೫ನೆಯ ವಾರ್ಷಿಕ ಸಮ್ಮೇಳನ

     ಕರ್ನಾಟಕ ಇತಿಹಾಸ ಅಕಾದೆಮಿಯ ೨೫ನೆಯ ವಾರ್ಷಿಕ ಸಮ್ಮೇಳನ ದಿನಾಂಕ ೯,೧೦ ಮತ್ತು ೧೧-೦೯-೨೦೧೧ರಂದು ಬೆಂಗಳೂರಿನ ಮಿಥಿಕ್ ಸೊಸೈಟಿ ಆವರಣದಲ್ಲಿ ನಡೆಯಿತು. ಪ್ರೊ. ಜಿ. ವೆಂಕಟಸುಬ್ಬಯ್ಯನವರು ಉದ್ಘಾಟಿಸಿದ ಈ ಸಮ್ಮೇಳನದಲ್ಲಿ ಇತಿಹಾಸ ದರ್ಶನದ ೨೬ನೆಯ ಸಂಚಿಕೆ, ಡಾ. ಜಿ.ಎಸ್. ದೀಕ್ಷಿತ್ ರವರ ಇಂಗ್ಲಿಷ್ ಲೇಖನಗಳ ಸಂಕಲನ South India: An Expedition into the Past’  ಇತಿಹಾಸ ದರ್ಶನ ಲೇಖನ;ಲೇಖಕರ ಸೂಚಿ, ಡಾ. ಎಫ್.ಟಿ ಹಳ್ಳಿಕೇರಿಯವರ ಕೃತಿ 'ಹಾಲುಮತ ಸಂಸ್ಕೃತಿ' ಮತ್ತು ಬೆಂಗಳೂರು ಜಿಲ್ಲೆ ಕುರಿತು ವಿಚಾರಸಂಕಿರಣದಲ್ಲಿ ಮಂಡಿತ ಪ್ರಬಂಧಗಳ ಸಿಡಿಗಳ ಬಿಡುಗಡೆಯಾಯಿತು. ಪ್ರೊ.ಜಿ. ವೆಂಕಟಸುಬ್ಬಯ್ಯ, ಡಾ. ಸೂರ್ಯನಾಥ ಕಾಮತ್, ಎಂ.ಕೆ.ಎಲ್.ಎನ್.ಶಾಸ್ತ್ರಿ, ಡಾ. ದೇವರಕೊಂಡಾರೆಡ್ಡಿ ಮೊದಲಾದವರು ಉಪಯುಕ್ತ ಮಾತುಗಳನ್ನಾಡಿದರು. ಸಾಹಿತಿ ಮತ್ತು ಸಂಶೋಧನಾ ತಜ್ಞ ಡಾ. ಹೆಚ್.ಎಸ್. ಗೋಪಾಲರಾವ್ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಶಾಸನತಜ್ಞ ಶ್ರೀ ಕೆ.ಮಹಮದ್ ಷರೀಫ್ ರವರಿಗೆ ಡಾ.ಬಾ.ರಾ. ಗೋಪಾಲ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಾಡಿನೆಲ್ಲೆಡೆಯಿಂದ ನೂರಾರು ಇತಿಹಾಸಾಸಕ್ತರು ಭಾಗವಹಿಸಿದ್ದರು.
     ಕರ್ನಾಟಕ ಅಕಾದೆಮಿಯ ಧ್ಯೇಯೋದ್ದೇಶ ಕರ್ನಾಟಕದ ಇತಿಹಾಸವನ್ನು ಜನಪ್ರಿಯಗೊಳಿಸುವುದು, ಸಂಶೋಧನೆಗೆ ಪ್ರೋತ್ಸಾಹಿಸುವುದು ಮತ್ತು ಜನಜಾಗೃತಿಗೊಳಿಸುವುದೇ ಆಗಿದೆ. ಸುಮಾರು ೧೬೦೦ ಆಜೀವ ಸದಸ್ಯರಾಗಿರುವ ಅಕಾದೆಮಿಗೆ ನಾನೂ ಸಹ ಆಜೀವ ಸದಸ್ಯನಾಗಿದ್ದೇನೆ. ೩ ದಿನಗಳಲ್ಲಿ ೧೦೦ಕ್ಕೂ ಹೆಚ್ಚು ಸಂಶೋಧನಾ ಸಂಪ್ರಬಂಧಗಳು ಮಂಡಿತವಾಗಿ, ಆ ಕುರಿತು ಆಸಕ್ತರು ಚರ್ಚೆ, ಪ್ರಶ್ನೋತ್ತರಗಳಲ್ಲಿ ಪಾಲುಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಸಭೆಯಲ್ಲಿ ಪಾಲ್ಗೊಂಡಿದ್ದ ನಾನು ಸೆರೆ ಹಿಡಿದಿದ್ದ ಕೆಲವು ಚಿತ್ರಗಳನ್ನು ಸಂಪದಿಗರ ಮುಂದಿಡುತ್ತಿರುವೆ.






ನನ್ನ ಅನಿಸಿಕೆ:
೧. ಇತಿಹಾಸ ಅಧ್ಯಯನಕ್ಕೆ ಎಲ್ಲರೂ ಮನಸ್ಸು ಮಾಡಬೇಕು. ತನ್ನ ನಾಡು, ತನ್ನ ಜನ, ತನ್ನ ಪರಂಪರೆಗಳ ಅರಿವು ಮೂಡಲು ಇತಿಹಾಸದ ಅಧ್ಯಯನ ಅವಶ್ಯಕ.
೨. ಇತಿಹಾಸವನ್ನು ಅದು ಹೇಗಿತ್ತೋ ಹಾಗೆ ಬೋಧಿಸಬೇಕು. ಆಳುವವರ, ರಾಜಕಾರಣಿಗಳ ಮರ್ಜಿ ಅನುಸರಿಸಿ ಇತಿಹಾಸ ತಿದ್ದಬಾರದು. ಜಾತ್ಯಾತಿತತೆ, ಕೋಮುಸೌಹಾರ್ದ, ಇತ್ಯಾದಿಗಳ ನೆಪದಲ್ಲಿ ಇತಿಹಾಸಕ್ಕೆ ಅಪಚಾರ ಮಾಡಬಾರದು, ಸತ್ಯ ಮುಚ್ಚಿಡಬಾರದು.
೩. ಇತಿಹಾಸದಿಂದ ನಾವು ಪಾಠ ಕಲಿಯಬೇಕು. ಹಿಂದಿನವರ ತಪ್ಪುಗಳನ್ನು ಮಾಡದಿರುವಂತೆ ಜಾಗೃತಿ ವಹಿಸಬೇಕು.
*****************
-ಕ.ವೆಂ.ನಾಗರಾಜ್.





ಶನಿವಾರ, ಸೆಪ್ಟೆಂಬರ್ 17, 2011

ದೀಪಕ್ ಮತ್ತು ಅಂಬಿಕಾರ ದ್ವಂದ್ವ ವಯೊಲಿನ್ ವಾದನ - 15-09-2011

     ದಿನಾಂಕ 15-09-2011ರಂದು ಹಾಸನದ ಗಣಪತಿ ಪೆಂಡಾಲಿನಲ್ಲಿ ಶಿವಮೊಗ್ಗದ ಕವಿಸುರೇಶರ ಮಗ ಬಿ.ಎಸ್.ಆರ್.ದೀಪಕ್ ಮತ್ತು ಮಗಳು ಬಿ.ಎಸ್.ಆರ್.ಅಂಬಿಕಾರವರಿಂದ ದ್ವಂದ್ವ ವಯೊಲಿನ್ ವಾದನ ಕಾರ್ಯಕ್ರಮ ನೆರೆದಿದ್ದ ಸಂಗೀತಾಸಕ್ತರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಅವರ ವಾದನದ ಒಂದು ಸಣ್ಣ ಕ್ಲಿಪಿಂಗ್ ಇಲ್ಲಿದೆ. 
ಕೆಲವು ಫೋಟೋಗಳು:





     ಬೆಳೆಯುತ್ತಿರುವ ಕಲಾಕುಡಿಗಳಿಗೆ ಶುಭವಾಗಲಿ.
***************
-ಕ.ವೆಂ.ನಾಗರಾಜ್.

ಶುಕ್ರವಾರ, ಸೆಪ್ಟೆಂಬರ್ 16, 2011

ಬೆಲಗೂರಿನಲ್ಲಿ ನಡೆದ ಶ್ರೀರಾಮ ಪಟ್ಟಾಭಿಷೇಕ ಕಾರ್ಯಕ್ರಮ - 24ರಿಂದ 28-08-2011

     ಬೆಲಗೂರಿನಲ್ಲಿ  24ರಿಂದ 28-08-2011ರವರೆಗೆ ನಡೆದ ಶ್ರೀರಾಮ ಪಟ್ಟಾಭಿಷೇಕ ಕಾರ್ಯಕ್ರಮ, ಸಹಸ್ರ ಕುಂಭಾಭಿಷೇಕ ವೀಕ್ಷಿಸಲು ಅನೇಕ ಸ್ಥಳಗಳಿಂದ ಭಕ್ತರು ಆಗಮಿಸಿದ್ದರು. ಆ ಸಂದರ್ಭದ ಕೆಲವು ದೃಷ್ಯಗಳು:















     ಸ್ವಾಮಿ ಬಿಂದು ಮಾಧವ ಶರ್ಮರವರ ಚೈತನ್ಯಶೀಲ ವ್ಯಕ್ತಿತ್ವ ಎಲ್ಲರನ್ನೂ ಸೆಳೆಯುವಂತಹುದು. ಜಾತಿಭೇದ ಮಾಡದ , ಎಲ್ಲರನ್ನೂ ಸಮಾನರಾಗಿ ಕಾಣುವ ಅವರು ಇತರರಿಗೆ ಮಾದರಿಯಾಗಿದ್ದಾರೆ. ನಾಲ್ಕು ದಿನಗಳ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಲು ಪ್ರೇರಕರಾದ ಅವರ ಶಕ್ತಿ ಆಶ್ಚರ್ಯ ತರುವಂತಹುದು. ವೈಯಕ್ತಿಕವಾಗಿ ನನಗೆ ದೇವಸ್ಥಾನದ ಹೊರಗೆ ಕುಳಿತು ಏಕನಾದದೊಂದಿಗೆ ತತ್ವಪದ ಹೇಳುತ್ತಿದ್ದ ಒಬ್ಬ ವ್ಯಕ್ತಿ ಗಮನಸೆಳೆದ. ಸಾಂಸ್ಕೃತಿಕ ಕಾರ್ಯಕ್ರಮಗಳೂ ಚೇತೋಹಾರಿಯಾಗಿದ್ದವು. ಕಲ್ಯಾಣರಾಮನ್ ರವರು ಭಜನೆಗಳನ್ನು ಹೇಳಿ ಸೇರಿದ್ದವರನ್ನು ಭಕ್ತಿಪರವಶರಾಗಿಸಿದ್ದಲ್ಲದೆ ಕುಣಿಯುವಂತೆ ಮಾಡಿದ್ದು ಮನಸ್ಸಿಗೆ ಉಲ್ಲಾಸ ನೀಡಿತೆಂದರೆ ಅತಿಶಯೋಕ್ತಿಯಲ್ಲ.
***************
-ಕ.ವೆಂ.ನಾಗರಾಜ್.

ಬುಧವಾರ, ಸೆಪ್ಟೆಂಬರ್ 14, 2011

ಪಂ. ಸುಧಾಕರ ಚತುರ್ವೇದಿಯವರ ವಿಚಾರ ಲಹರಿ-೨




ದೇವರೆಲ್ಲಿದ್ದಾನೆ?
     ದೇವರು ಎಲ್ಲೆಲ್ಲೂ ಇದ್ದಾನೆ, ಅಣು ಅಣುವಿನಲ್ಲೂ ಇದ್ದಾನೆ, ಎಲ್ಲೆಲ್ಲೂ ವ್ಯಾಪಿಸಿದ್ದಾನೆ. ಅವನು ಸರ್ವರಕ್ಷಕ, ಸರ್ವಶಕ್ತ, ಯಾರೂ ಅವನನ್ನು ಬಗ್ಗಿಸಲು ಸಾಧ್ಯವಿಲ್ಲ. ಹಾಗಿದ್ದಾಗ ನನ್ನ ದೇವರು ತಿರುಪತಿಯಲ್ಲಿದ್ದಾನೆ, ನನ್ನ ದೇವರು ರಾಮೇಶ್ವರದಲ್ಲಿದ್ದಾನೆ, ಅಲ್ಲಿದ್ದಾನೆ, ಇಲ್ಲಿದ್ದಾನೆ, ಆ ವಿಗ್ರಹದಲ್ಲಿದ್ದಾನೆ, ಈ ವಿಗ್ರಹದಲ್ಲಿದ್ದಾನೆ ಎನ್ನುವುದು ಎಷ್ಟು ಸರಿ? ಸೋಮೇಶ್ವರ ದೇವಸ್ಥಾನದ ಮೇಲೆ ಘಜನಿ ಮಹಮದ್ ಬಾರಿ ಬಾರಿ ದಾಳಿ ಮಾಡಿದ. ದೇವಸ್ಥಾನ ಧ್ವಂಸ ಮಾಡಿದ. ಸೋಮೇಶ್ವರ ತನ್ನನ್ನು ತಾನೇ ರಕ್ಷಣೆ ಮಾಡಿಕೊಂಡನೆ? ಘಜನಿ ಮಹಮದ್ ಗೆದ್ದ, ಸೋಮೇಶ್ವರ ಸೋತ! ಆ ವಿಗ್ರಹ ನಿಜವಾಗಿ ದೇವರಾಗಿದ್ದರೆ ಎಂದೂ ಆ ಸ್ಥಿತಿ ಬರುತ್ತಿರಲಿಲ್ಲ. ನಾನು ಹೇಳುತ್ತಾ ಇರುತ್ತೇನೆ, ನನಗೆ ಭಗವಂತನ ಭಯ ಇಲ್ಲ, ಅವನ ಭಕ್ತರ ಭಯ! ನಾನು ಹೀಗೆ ಹೇಳಿದರೆ ಅವರಿಗೆ ಕೋಪ ಬರುತ್ತೆ. ನನ್ನನ್ನು ನಾಸ್ತಿಕ ಎನ್ನುತ್ತಾರೆ. ಗೊಂಬೆಯನ್ನು ದೇವರು ಎಂದು ನಂಬದಿದ್ದರೆ ನಾಸ್ತಿಕ ಎಂದರೆ ನಾನು ನಾಸ್ತಿಕನೇ. ದೇವರಿಲ್ಲದಿದ್ದರೆ ಈ ಪ್ರಪಂಚ ಇರುತ್ತಿರಲಿಲ್ಲ. ಆ ಪರಮಾತ್ಮ ಕರ್ತ-ಧರ್ತ-ಸಂಹರ್ತ. ಪ್ರಪಂಚ ಸೃಷ್ಟಿ ಮಾಡುವವನು, ರಕ್ಷಿಸುವವನು ಮತ್ತು ನಾಶ ಮಾಡುವವನು ಅವನೇ. ಆ ದೇವರು ಕಾಣುವುದಿಲ್ಲ, ಅದಕ್ಕೇ ನಂಬುವುದಿಲ್ಲ ಅಂದರೆ ಬಹಳ ಕಷ್ಟ. ಕಣ್ಣಿಗೆ ಕಾಣುವುದಕ್ಕಿಂತ ಕಾಣಿಸದಿರುವುದೇ ಹೆಚ್ಚು. ವಾಯು ಇದೆ, ಕಣ್ಣಿಗೆ ಕಾಣುತ್ತಾ? ಆಕಾಶ ಇದೆ, ಅದನ್ನು ಕಾಣಲು ಎಷ್ಟು ಮೇಲಕ್ಕೆ ಹೋದರೆ ಅದು ಅಷ್ಟೂ ಮೇಲಕ್ಕೆ ಹೋಗುತ್ತೆ. ಏಕೆಂದರೆ ಅಲ್ಲಿ ಏನೂ ಇಲ್ಲ, ಶೂನ್ಯ. ಆ ಶೂನ್ಯಕ್ಕೆ ಹದ್ದು ಕಟ್ಟಲು ಸಾಧ್ಯವೇ? ಇಷ್ಟೇ ಉದ್ದ, ಇಷ್ಟೇ ಅಗಲ, ಇಷ್ಟೇ ಎತ್ತರ ಎಂದು ನಿಗದಿ ಪಡಿಸಲು ಸಾಧ್ಯವೇ? ಆ ಪರಮಾತ್ಮ ಇದ್ದಾನೆ, ಅವನು ಶೂನ್ಯ ಅಲ್ಲ. ಅವನಿರುವುದರಿಂದಲೇ ಈ ಸೂರ್ಯ, ಚಂದ್ರ, ಭೂಮಿ, ಬ್ರಹ್ಮಾಂಡ ಎಲ್ಲಾ! (ಇಲ್ಲಿ ಒಂದು ವೇದ ಮಂತ್ರ ಉಲ್ಲೇಖಿಸಿ ಹೇಳುತ್ತಾರೆ:) ಆ ಭಗವಂತ ಎಷ್ಟು ಪ್ರಕಾಶಮಯವೆಂದರೆ ಅವನೆದುರಿಗೆ ಈ ಸೂರ್ಯ ಯಾವ ಲೆಕ್ಕಕ್ಕೂ ಇಲ್ಲ. ಆ ಸೂರ್ಯನೇ ಲೆಕ್ಕಕ್ಕಿಲ್ಲವೆಂದರೆ ಚಂದ್ರನ ಪಾಡೇನು? ನಕ್ಷತ್ರಗಳೂ ಅಷ್ಟೆ. ಆ ಪರಮಾತ್ಮನ ಜ್ಯೋತಿಯಿಂದಲೇ ಇವೆಲ್ಲಾ ಬೆಳಗುತ್ತಿವೆ. ಅಂತಹ ಜ್ಯೋತಿರ್ಮಯನಾದ ಪರಮಾತ್ಮನನ್ನು ಬಿಟ್ಟು ಯಾವತ್ತು ಕಲ್ಲು, ಮಣ್ಣು, ಮರಗಳಿಂದ ಮಾಡಿದ ಗೊಂಬೆಗಳನ್ನು ಪೂಜಿಸಲು ಪ್ರಾರಂಭಿಸಿದೆವೋ ಅವತ್ತಿನಿಂದಲೇ ನಮ್ಮ ಪತನ ಆರಂಭವಾಯಿತು. 
ನಾವೇನು ಮಾಡಬೇಕು?
     ಬೇರೆಯವರು ಮುಂದಕ್ಕೆ ಹೋಗುತ್ತಿದ್ದಾರೆ. ಮುಸ್ಲಿಮರಾಗಲಿ, ಕ್ರಿಶ್ಚಿಯನರಾಗಲಿ ಅವರ ಸಂಖ್ಯೆ ಜಾಸ್ತಿಯಾಗುತ್ತಾ ಇದೆ. ನಮ್ಮದೇ ಯಾಕೆ ಪೀಕಲಾಟ? ಯಾಕೆ? ಅವರು ಬುದ್ಧಿಪೂರ್ವಕವಾಗಿ ಕೆಲಸ ಮಾಡುತ್ತಿದ್ದಾರೆ. ಬಡವರಿಗೆ ಅನ್ನ ಬೇಕು, ಅನ್ನ ಕೊಡುತ್ತಾರೆ, ಬಟ್ಟೆ ಬೇಕು, ಕೊಡುತ್ತಾರೆ, ಮನೆ ಬೇಕು, ಕಟ್ಟಿಸಿಕೊಡುತ್ತಾರೆ. ಹೀಗೆ ಮಾಡಿ ಮಾಡಿ ಕ್ರಿಶ್ಚಿಯನರು ತಮ್ಮ ಸಂಖ್ಯೆ ಜಾಸ್ತಿ ಮಾಡಿಕೊಳ್ಳುತ್ತಿದ್ದಾರೆ. ನಾವು? ನಮ್ಮವರು ಬಡವರಾ? ಕೋಟ್ಯಾಧೀಶರಿದ್ದಾರೆ. ಪೇಪರಿನಲ್ಲಿ ಓದಿರಬಹುದು. ಆ ತಿರುಪತಿ ದೇವರಿಗೆ ೪೫ ಕೋಟಿ ಬೆಲೆ ಬಾಳುವ ವಜ್ರದ ಕಿರೀಟ ಮಾಡಿಸಿಕೊಡುತ್ತಾರೆ. ಆ ಗೊಂಬೆಗೆ ಏನು ಗೊತ್ತಾಗುತ್ತೆ? ಆ ವಜ್ರದ ಕಿರೀಟ ಇಡಿ, ತೆಗೆದು ಹಾಕಿ, ಮುಳ್ಳಿನ ಕಂತೆ ಇಡಿ, ಏನು ಮಾಡಿದರೂ ಸುಮ್ಮನಿರುತ್ತೆ. ಅದೇ ಹಸಿವಿರುವವರಿಗೆ ಅನ್ನ ಹಾಕುವುದಿಲ್ಲ. ಪೂರ್ಣ ತೃಪ್ತನಿಗೆ ನಾವು ಏನಾದರೂ ಕೊಟ್ಟು ತೃಪ್ತಿ ಕೊಡಲು ಸಾಧ್ಯವೇ? ದೇವರಿಗೆ ನೈವೇದ್ಯ ಅಂತ ಇಡ್ತೀವಿ. ಯಾವುದು ಆ ನೈವೇದ್ಯ? ಎಲ್ಲಿಂದ ಬಂತು? ತೆಂಗಿನಕಾಯಿಯಾಗಲಿ, ಹಣ್ಣು ಹಂಪಲಾಗಲೀ ಎಲ್ಲಿಂದ ಬಂತು? ನಾವು ಮಾಡಿದ್ದಾ? ಅದೂ ಭಗವಂತನದೇ. ಅವನದ್ದನ್ನೇ ಅವನಿಗೆ ಕೊಟ್ಟಂತೆ ಮಾಡಿ, ನಾವು ಹೇಳುತ್ತೇವೆ, ನಾನು ಭಗವದ್ಭಕ್ತ, ದೇವರಿಗಾಗಿ ಇಷ್ಟೊಂದು ಖರ್ಚು ಮಾಡಿದ್ದೇನೆ, ಅಂತ. (ಬಹಳ ವರ್ಷದ ಹಿಂದೆ) ಒಬ್ಬ ಶೆಟ್ಟಿ ಬೆಳಿಗ್ಗೆ ಬಂದಾಗ ಖುಷಿಯಲ್ಲಿದ್ದವನು ಸಾಯಂಕಾಲ ಮುಖ ಸಪ್ಪಗೆ ಹಾಕಿಕೊಂಡು ಬಂದ. ವಿಚಾರಿಸಿದರೆ 'ಕುದುರೆ ರೇಸಿನಲ್ಲಿ ಎಲ್ಲಾ ಕಳೆದುಕೊಂಡೆ. ಇಪ್ಪತ್ತೈದು ರೂಪಾಯಿ ಕೊಟ್ಟಿರಿ, ಶಿವಮೊಗ್ಗಕ್ಕೆ ಹೋಗಿ ವಾಪಸು ಕಳಿಸುತ್ತೇನೆ' ಅಂತ ಹೇಳಿದ. ಇದು ಭಗವದ್ಭಕ್ತರ ಲಕ್ಷಣವಾ? ಕುದುರೆ ಜೂಜಾಡುವುದು? (ಒಂದು ವೇದ ಮಂತ್ರವನ್ನು ಉಲ್ಲೇಖಿಸಿ) ಜೂಜಾಡಬಾರದು, ಕಷ್ಟಪಟ್ಟು ದುಡಿ, ದುಡಿಯಬೇಕು, ತಿನ್ನಬೇಕು, ಅದು ನಿಜವಾದ ಊಟ. ತಿನ್ನುವವರೇ ತುಂಬಾ ಇದ್ದು, ದುಡಿಯುವವರು ಇಲ್ಲದಿದ್ದರೆ! ಅನ್ನ ಎಲ್ಲಿಂದ ಬರಬೇಕು? ತುಂಬಾ ಕಷ್ಟ. ಸರ್ವಾಧಾರ ಪರಮಾತ್ಮ ಎಲ್ಲರಿಗೂ ಆಧಾರ ಹೌದು, ಆದರೆ ಸೋಮಾರಿಗಳ ಬಂಧು ಅಲ್ಲ. ಪರಮಾತ್ಮ ಎಲ್ಲರಿಗೂ ಕೊಡುತ್ತಾನೆ, ಯಾರಿಗೆ ಕೊಡುತ್ತಾನೆ? ದುಡಿಯುವವರಿಗೆ ಕೊಡುತ್ತಾನೆ. ವೇದ ಹೇಳುತ್ತೆ, ಕಷ್ಟ ಪಡು, ದುಡಿ, ಬೇರೆಯವರ ಶ್ರಮದ ಊಟ ನಮಗೆ ಬೇಡ, ನಮ್ಮ ಅನ್ನವನ್ನು ನಾವು ಸಂಪಾದಿಸೋಣ, ವೇದ ಹೀಗೆ ಹೇಳಿದರೆ ಇಂದು ನಾವು ನೋಡುತ್ತಿರುವುದೇನು? ಮನೆಯಲ್ಲಿ ಸಮಾರಂಭ, ಪೂಜೆ ಮಾಡಿ ಹೊಟ್ಟೆ ತುಂಬಿದವರಿಗೇ ಊಟ ಹಾಕುತ್ತೇವೆ, ಹಸಿದ ಭಿಕ್ಷುಕ ಹೊರಗೆ ಬೇಡಿ ಬಂದರೆ 'ಹೋಗಲೇ' ಅಂತ ಗದರಿಸಿ ಕಳಿಸಿಬಿಡುತ್ತೇವೆ. ಇದು ದಾನ ಮಾಡುವ ರೀತಿಯಾ? ಹಸಿದವರಿಗೆ ಅನ್ನ ಹಾಕಿ, ಬಟ್ಟೆ ಇಲ್ಲದವರಿಗೆ ಬಟ್ಟೆ ಕೊಡಿ, ಮನೆಯಿಲ್ಲದವರಿಗೆ ಮನೆ ಕಟ್ಟಿಸಿಕೊಡಿ,  ಇದು ಪುಣ್ಯದ ಕೆಲಸ. ಇದು ನಿಮ್ಮ ಕರ್ತವ್ಯ. ಇದು ಬಿಟ್ಟು ಸ್ವಾರ್ಥಿಗಳಾಗಿ ನಿಮ್ಮ ಅಭಿವೃದ್ಧಿ ಮಾತ್ರ ಮಾಡಿಕೊಂಡರೆ ಅದು ದೇವರು ಮೆಚ್ಚುವ ಕೆಲಸವಲ್ಲ. ಯಾವತ್ತೂ ಕೂಡ ಸ್ವಾರ್ಥಿಗೆ ತಾನು ಮಾಡುವುದು ತಪ್ಪು ಅಂತ ಅನ್ನಿಸುವುದೇ ಇಲ್ಲ. ನನ್ನ ಅನ್ನ ಸಂಪಾದಿಸಿ ತಿನ್ನುತ್ತೇನೆ, ಆ ಸಂಪಾದನೆ ಹೇಗಾದರೂ ಸರಿ, ಹತ್ತು ಜನರ ತಲೆ ಒಡೆದಾದರೂ ಸರಿ, ಅನ್ನುವುದು ಅವರ ಮಾತು. ಬೇರೆಯವರ ಶ್ರಮದ ಫಲವನ್ನು ಕಿತ್ತುಕೊಂಡು ಅನ್ಯಾಯವಾಗಿ ಹಣ ಸಂಗ್ರಹಿಸಿಟ್ಟುಕೊಳ್ಳುವವರನ್ನು ಇಂದು ಕಾಣುತ್ತಿದ್ದೇವೆ. 'ಶತಹಸ್ತ ಸಮಾಹರ ಸಹಸ್ರಹಸ್ತ ಸಂ ಕಿರ| ಕೃತಸ್ಯ ಕಾರ್ಯಸ್ಯ ಚೇಹ ಸ್ಫಾತಿಂ ಸಮಾವಹ||' - ಈ ಮಂತ್ರದ ಅರ್ಥ, ನೂರು ಕೈಗಳಿಂದ ದುಡಿ, ಸಾವಿರ ಕೈಗಳಿಂದ ದಾನ ಮಾಡು ಅಂತ. ಇದರ ಅರ್ಥ ನಿಮಗಾಗಿ ಮಾತ್ರ, ನಿಮ್ಮ ಕುಟುಂಬಕ್ಕಾಗಿ ಮಾತ್ರ ನೀವು ದುಡಿಯಬಾರದು. ಸಮಾಜದ ಹಿತವನ್ನೂ ಪರಿಗಣಿಸಬೇಕು ಎಂದು. ಈ ಮಾತು ಎಲ್ಲರಿಗೂ ಅನ್ವಯಿಸುತ್ತೆ, ಬ್ರಹ್ಮಚಾರಿ, ಗೃಹಸ್ತ, ಸನ್ಯಾಸಿ, ಎಲ್ಲರಿಗೂ ಅನ್ವಯಿಸುತ್ತೆ. ಎಲ್ಲರ ಸುಖದಲ್ಲಿ ನಮ್ಮ ಸುಖ ಇದೆ. ಸರ್ವೇಜನಾಃ ಸುಖಿನೋ ಭವಂತು. ಎಲ್ಲರೂ ಅನ್ನುವಲ್ಲಿ ನಾವೂ ಸೇರುತ್ತೇವೆ. ಎಲ್ಲರಿಗೂ ಸಿಕ್ಕಿದರೆ ನಮಗೂ ಸಿಗುತ್ತೆ, ಯಾರಿಗೂ ಸಿಗದಿದ್ದರೆ ನಮಗೂ ಇಲ್ಲ ಅಷ್ಟೆ. ಇದು ಈ ವೇದ ಮಂತ್ರದ ಅರ್ಥ. ಅರ್ಥ ಮಾಡಿಕೊಂಡು ಅನುಸರಿಸಿದರೆ ನಮ್ಮದು ಶ್ರೇಷ್ಠ ಜೀವನವಾಗುತ್ತದೆ. 
**************
-ಕ.ವೆಂ.ನಾಗರಾಜ್.

ಪಂ. ಸುಧಾಕರ ಚತುರ್ವೇದಿಯವರ ವಿಚಾರ ಲಹರಿ -೧


      ಶತಾಯುಷಿ ಪಂ. ಸುಧಾಕರ ಚತುರ್ವೇದಿಯವರ ಮಾತುಗಳು, ಅವರ ಶಿಷ್ಯ ಶ್ರೀ ಸುಧಾಕರ ಶರ್ಮರವರ ವಿಚಾರಗಳು, ಮಾತುಗಳನ್ನು ಕೇಳುತ್ತಾ ಹೋಗುತ್ತಿದ್ದಂತೆ ನನ್ನ ಅಂತರಂಗದ ಅನಿಸಿಕೆಗಳು ಗಟ್ಟಿಗೊಳ್ಳುತ್ತಾ ಹೋಗುತ್ತಿರುವ ಅನುಭವ ನನ್ನದು. ನಾನು ಹೊಂದಿದ್ದ ಭಾವನೆಗಳಿಗೆ ಆಧಾರ ಸಿಕ್ಕಿದ ಮತ್ತು ಅದು ಸರಿಯಾಗಿದೆ ಅನ್ನುವ ಸಂತಸ ಒಡಮೂಡುತ್ತಿದೆ. ಸತ್ಯದ ಸಂಗತಿಗಳು ಯಾರಿಂದಲೇ ಬರಲಿ - ಅವರು ಶತ್ರುಗಳೇ ಆಗಿರಲಿ - ಅದು ಸ್ವೀಕಾರಾರ್ಹ ಎಂಬ ದೃಷ್ಟಿ ಮತ್ತು ಪೂರ್ವಾಗ್ರಹವಿಲ್ಲದ ವಿಚಾರ ವಿಮರ್ಶೆಯಿಂದ ಹೊರಬರುವ ಸತ್ಯ ಸಿಹಿಯಾಗಿರುತ್ತದೆಯೆಂದು ಅಂದುಕೊಂಡಿದ್ದೇನೆ. ದಿನಾಂಕ ೧೦-೧೧-೨೦೧೧ರಂದು ಶನಿವಾರ ಸಾಯಂಕಾಲ (ಪ್ರತಿ ಶನಿವಾರ ಸತ್ಸಂಗವಿರುತ್ತದೆ) ಪಂ. ಸುಧಾಕರ ಚತುರ್ವೇದಿಯವರ ಬೆಂಗಳೂರಿನ ಜಯನಗರದಲ್ಲಿರುವ ಅವರ ಮನೆಯಲ್ಲಿ ನಡೆದ ಸತ್ಸಂಗದಲ್ಲಿ ನಾನು ಪಾಲ್ಗೊಂಡಿದ್ದು, ಅಂದು  ಅವರು ತಿಳಿಸಿದ ವಿಚಾರಗಳನ್ನು ಬರಹರೂಪದಲ್ಲಿಳಿಸಿ ನಿಮ್ಮೊಡನೆ ಹಂಚಿಕೊಳ್ಳುತ್ತಿರುವೆ.
ಸರ್ವಾಧಾರ ಪರಮಾತ್ಮ
    'ಸ್ಕಂಭೋದಾಧಾರ ಪೃಥಿವೀಮುತದ್ಯಾ . . . .' ಅಥರ್ವಣ ವೇದದ ಮಂತ್ರ ಇದು. ಪರಮಾತ್ಮನನ್ನು ಅನೇಕ ರೀತಿಯಲ್ಲಿ ವರ್ಣಿಸುವುದುಂಟು. ಇಲ್ಲಿ ಅವನನ್ನು ಕಂಬ ಎಂದು ಹೇಳಿದ್ದಾರೆ. ಭೂಲೋಕ ಪರಲೋಕಗಳನ್ನು ಕಂಬದಂತಿರುವ ಪರಮಾತ್ಮ ಎತ್ತಿ ಹಿಡಿದಿದ್ದಾನೆ ಎಂದು ಇದರ ಅರ್ಥ. ಅವನು ಎತ್ತಿ ಹಿಡಿಯದಿದ್ದರೆ ಎಲ್ಲವೂ ಛಿದ್ರ ಛಿದ್ರವೇ. ಭೂಮಿಯ ಆಕರ್ಷಣ ಶಕ್ತಿ ಸೀಮಿತ. ಎಲ್ಲಾ ಕಡೆ ವ್ಯಾಪಿಸಿಲ್ಲ. ಭೂಮಿಯ ಈ ಆಕರ್ಷಣ ಶಕ್ತಿ ಚಂದ್ರನನ್ನು ತನ್ನ ಸುತ್ತ ತಿರುಗುವಂತೆ ನೋಡಿಕೊಳ್ಳುತ್ತಿದೆ. ಈ ಆಕರ್ಷಣ ಶಕ್ತಿ ಇಲ್ಲದಿದ್ದರೆ ಚಂದ್ರ ಎಲ್ಲೋ, ನಾವು ಎಲ್ಲೋ! ಭಗವಂತನ ನಿಯಮವೇ ಹಾಗೆ. ಮನುಷ್ಯನ ನಿಯಮ ವ್ಯತ್ಯಾಸ ಆಗಬಹುದು. ಭಗವಂತನ ನಿಯಮ ವ್ಯತ್ಯಾಸವಾಗುವುದಿಲ್ಲ. 
ಒಂದು ರಾಜ್ಯಕ್ಕೆ ಹಲವರು ರಾಜರು!
     ನಾವು ಭಗವಂತನನ್ನು ಸಾರ್ವಕಾಲಿಕ, ಸಾರ್ವದೇಶಿಕ ಎಂತೆಲ್ಲಾ ಹೇಳುತ್ತೇವೆ. ನಮಗೆ ಬ್ರಹ್ಮಾಂಡ ಎಷ್ಟಿದೆ ಗೊತ್ತಿಲ್ಲ. ನಮ್ಮ ಸರ್ವ ಅನ್ನುವುದು ಚಿಕ್ಕದು. ಎಲ್ಲವನ್ನೂ ತಿಳಿಯುವುದು ನಮಗೆ ಸಾಧ್ಯವೇ ಇಲ್ಲ. ಅಷ್ಟೇ ಏಕೆ, ನಮ್ಮ ಭೂಮಿ ಬಗ್ಗೆ ತಿಳಿಯ ಹೊರಟರೆ ನಮ್ಮ ತಲೆ ತಿರುಗುತ್ತೆ. ನಮ್ಮ ಮನೆಯೇ ನಮಗೆ ಒಂದು ಪ್ರಪಂಚ. ಈ ಮನೆಯಲ್ಲೂ ಒಳಗೆ ಕುಳಿತವರಿಗೆ ಹೊರಗಿನವರು ಕಾಣುವುದಿಲ್ಲ, ಹೊರಗಿನವರಿಗೆ ಒಳಗಿರುವವರು ಕಾಣುವುದಿಲ್ಲ. ನಮ್ಮ ಪರಿಸ್ಥಿತಿ ಸಂಕುಚಿತ. ಹೀಗಿರುವಾಗ ನಾವು ಸರ್ವಜ್ಞರು ಅಂದುಕೊಂಡರೆ ಆ ಸರ್ವ ಅನ್ನುವ ಪದಕ್ಕೆ ಅರ್ಥವೇ ಇಲ್ಲ. ಯಾರೂ ಸರ್ವಜ್ಞರಲ್ಲ. ಈ ಮಾತು ಹೇಳಿದರೆ ಕೆಲವರಿಗೆ ಕೋಪ ಬರುತ್ತೆ. ಶಂಕರಾಚಾರ್ಯರು ಸರ್ವಜ್ಞರಲ್ಲವೇ, ರಾಮಾನುಜಾಚಾರ್ಯರು ಸರ್ವಜ್ಞರಲ್ಲವೇ, ಮಧ್ವರು ಸರ್ವಜ್ಞರಲ್ಲವಾ ಅನ್ನುತ್ತಾರೆ. (ಅವರು ತಮ್ಮನ್ನು ಸರ್ವಜ್ಞರು ಅಂದುಕೊಳ್ಳಲಿಲ್ಲ. ಅವರ ಅನುಯಾಯಿಗಳು ಅನ್ನುತ್ತಾರೆ.) ಇಷ್ಟೊಂದೆಲ್ಲಾ ಸರ್ವಜ್ಞರಿದ್ದರೆ ಆ ಸರ್ವನ ಗತಿಯೇನು? ಒಂದು ಭೂಪ್ರದೇಶವನ್ನು ಒಬ್ಬ ರಾಜ ಆಳಬಹುದು. ಅದೇ ೨೫ ರಾಜರು ಕಿತ್ತಾಡಿ ಆಳಿದರೆ ಆ ರಾಜ್ಯದಲ್ಲಿ ಬಾಳುವ ಪ್ರಜೆಗಳಿಗೆ ಏನು ಸುಖ? ಆದ್ದರಿಂದ ಒಬ್ಬ ನಿಯಾಮಕನನ್ನು ನಂಬಬೇಕು. ನನ್ನ ಗುರು ದೊಡ್ಡವನು, ನಿನ್ನ ಗುರು ಚಿಕ್ಕವನು ಅನ್ನುವ ಮಾತು ತಕ್ಕದ್ದಲ್ಲ. ಈಗಿನ ಕಾಲದಲ್ಲಿ ಗುರುಗಳ ಕಾಟ ಬಹಳ ಜಾಸ್ತಿ. ಕೆಲವರು ಗುರುಗಳಿಗೆ ಶಿಷ್ಯರೇ ಇಲ್ಲ. ಶಿಷ್ಯರುಗಳಿಗಿಂತ ಗುರುಗಳೇ ಜಾಸ್ತಿ ಈಗ. ಗುರು ಅಂದರೆ ಭಾರ, ದೊಡ್ಡವನು ಎಂದರ್ಥ. ಸತ್ಯವನ್ನು ಉಪದೇಶಿಸುವವನೇ ಗುರು. ಸತ್ಯ ಬಿಟ್ಟು ನಾನು ಹೇಳುವುದೇ ಸತ್ಯ ಎಂದು ತಮ್ಮ ಮನಸ್ಸಿಗೆ ಬಂದದ್ದನ್ನು ಹೇಳುತ್ತಾ ಹೋಗುತ್ತಾರೆ. ಆ ಗುರು ದೊಡ್ಡವನು, ಈ ಗುರು ಚಿಕ್ಕವನು ಅನ್ನುವುದೆಲ್ಲಾ ಇಲ್ಲ. ಸತ್ಯಮೇವ ಜಯತೇ ನಾನೃತಮ್. . . . . ದೇವಗುಣ ಸಂಪನ್ನರಿಗೆ, ದೇವಜ್ಞರಿಗೆ ಸತ್ಯ ಯೋಗ್ಯವಾದ ದಾರಿ ತೋರಿಸುತ್ತದೆ. ಸತ್ಯವನ್ನು ಆಶ್ರಯಿಸಿದರೆ ಮಾತ್ರ ಸುಖ. ಹಿಂದೆ ಮೇಷ್ಟ್ರಿಗೆ ವಿದ್ಯಾರ್ಥಿಗಳು ಹೆದರುತ್ತಿದ್ದರು. ಇಂದು ಮೇಷ್ಟ್ರೇ ಹುಡುಗರಿಗೆ ಹೆದರುತ್ತಾ ಶಾಲಾಕೊಠಡಿಗೆ ಹೋಗುತ್ತಾರೆ, ಯಾರು ಏನು ಕೀಟಲೆ ಮಾಡುತ್ತಾರೋ, ಏನು ತೊಂದರೆ ಕೊಡುತ್ತಾರೋ ಅಂತ! ಕಾಲ ಹಾಗೆ ಬಂದಿದೆ. ಅದಕ್ಕೇ ಈ ಪ್ರಪಂಚದಲ್ಲಿ ಶಾಂತಿ ಇಲ್ಲ. ಸುಖ ಶಾಂತಿ ಬೇಕೆಂದರೆ ಸತ್ಯವನ್ನು ಆಶ್ರಯಿಸಬೇಕು.
ಸತ್ಯಂ ಬ್ರೂಯಾತ್. .
     'ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನಬ್ರೂಯಾತ್ ಸತ್ಯಮಪ್ರಿಯಂ'. ಸತ್ಯ ಹೇಳಬೇಕು, ಆದರೆ ಆ ಸತ್ಯವನ್ನು ಹಿತವಾಗಿ ಹೇಳಬೇಕು, ಅಪ್ರಿಯವಾದ ಸತ್ಯ ಹೇಳಬಾರದು ಎಂದು ಇದರ ಅರ್ಥ. ಕುಂಟನನ್ನು ಕುಂಟ ಎಂದರೆ, ಕುರುಡನನ್ನು ಕುರುಡ ಎಂದರೆ ಅದು ಸತ್ಯ ಇದ್ದರೂ ಕೇಳಿಸಿಕೊಂಡವರಿಗೆ ನೋವಾಗುತ್ತದೆ. ನಮ್ಮ ಗುರುಗಳು ಹೇಳುತ್ತಿದ್ದರು, ಕುರುಡನನ್ನು ಪ್ರಜ್ಞಾಚಕ್ಷು ಎನ್ನಬೇಕು ಎಂದು. ಮಹರ್ಷಿ ದಯಾನಂದರ ಗುರು ಸ್ವಾಮಿ ವಿರಜಾನಂದರೂ ಕುರುಡರೇ. ಅವರು ನಿಜಕ್ಕೂ ಪ್ರಜ್ಞಾಚಕ್ಷುಗಳಾಗಿದ್ದರು. (ಪ್ರಾಸಂಗಿಕವಾಗಿ ಒಂದು ಕಥೆ:) ಒಬ್ಬ ಕಳ್ಳ ಒಬ್ಬ ಗುರು ಹತ್ತಿರ ಉಪದೇಶ ಕೇಳಲು ಹೋಗುತ್ತಿದ್ದ. ಸತ್ಯವನ್ನೇ ಹೇಳಬೇಕು ಎಂಬ ಗುರುಗಳ ಮಾತನ್ನು ಕೇಳಿದ ಕಳ್ಳ 'ನಾನು ನಿಜ ಹೇಳಿದರೆ ನನ್ನ ಜೀವನ ಹೇಗೆ ನಡೆಯಬೇಕು ಸ್ವಾಮಿ' ಅಂದಾಗ ಗುರು ಹೇಳಿದರು: 'ಸತ್ಯದ ಮಾರ್ಗದಲ್ಲಿ ನಡೆಯದಿದ್ದರೂ ಪರವಾಗಿಲ್ಲ, ಯಾರಾದರೂ ಕೇಳಿದರೆ ಸತ್ಯವನ್ನೇ ಹೇಳು'. ಅವನು ಒಮ್ಮೆ ದಾರಿಯಲ್ಲಿ ಹೋಗುತ್ತಿರುವಾಗ ಅವನನ್ನು ಒಬ್ಬರು ಕೇಳಿದರು: 'ಯಾವ ಕಡೆಗೆ ಪ್ರಯಾಣ?' ಕಳ್ಳ ಇಂಥವರ ಮನೆಗೆ ಕನ್ನ ಹಾಕಲು ಹೋಗುತ್ತಿದ್ದೇನೆ ಎಂದು ಸತ್ಯ ಹೇಳಿದರೆ ಅವನು ಸೀದಾ ಹೋಗುವುದು ಪೋಲಿಸ್ ಸ್ಟೇಷನ್ನಿಗೆ, ಜೈಲಿಗೆ!
ಕರ್ತವ್ಯ ಮತ್ತು ಮಾನಾಪಮಾನ
     ಪರಮಾತ್ಮ ಕಂಬದಂತೆ ಈ ಪ್ರಪಂಚ ಮತ್ತು ಆಕಾಶದಾಚೆಯಿರುವ ಪ್ರಪಂಚಗಳನ್ನೆಲ್ಲಾ ಆಧರಿಸಿದ್ದಾನೆ. ನಾವು ಸರ್ವಾಧಾರ ಪರಮಾತ್ಮನನ್ನು ಮರೆತುಬಿಡುತ್ತೇವೆ. ನಮಗೆ ಕಷ್ಟ ಬಂದಾಗ ಇನ್ನೇನಪ್ಪಾ ಗತಿ, ನಮ್ಮನ್ಯಾರು ಕಾಪಾಡುತ್ತಾರೆ ಅಂತ ಗೋಳಿಡುತ್ತೇವೆ. ಸರ್ವರಕ್ಷಕ ಅವನಿರುವಾಗ ಹೆದರುವುದು ಏಕೆ? ಹಿಂದೊಮ್ಮೆ ವಿಗ್ರಹಾರಾಧನೆ ವಿಷಯದಲ್ಲಿ ಚರ್ಚೆ ಏರ್ಪಾಡಾಯಿತು. ದಯಾನಂದರು ಒಂದು ಕಡೆ, ಕಾಶಿ ಪಂಡಿತರೆಲ್ಲಾ ಒಂದು ಕಡೆ. ಅಲ್ಲಿ ವಿಗ್ರಹಾರಾಧನೆ ವಿಷಯ ಬರಲೇ ಇಲ್ಲ. ವ್ಯಾಕರಣದ ಬಗ್ಗೆ ಕಿತ್ತಾಡಿದರು, ಆ ಸೂತ್ರ ಸರಿಯೋ ಈ ಸೂತ್ರ ಸರಿಯೋ ಅಂತ. ಎಲ್ಲಾ ಛಲ, ಕಪಟ. 'ಪ್ರತಿಮೆ ಇಲ್ಲದಿದ್ದರೆ ಮನಸ್ಸು ನಿಲ್ಲುವುದಿಲ್ಲ. ಪ್ರತಿಮಾರಾಧನೆ ಸಮರ್ಥಿಸುವ ವೇದಮಂತ್ರ ಇದು' ಎಂದು ಕೈಯಲ್ಲಿ ಬರೆದಿದ್ದ ಯಾವುದೋ ಕಾಗದವನ್ನು ಒಬ್ಬರು ದಯಾನಂದರಿಗೆ ಕೊಟ್ಟರು. ಅವರು ಅದು ಯಾವ ವೇದದ ಮಂತ್ರ ಎಂದು ನೋಡುತ್ತಿರುವಾಗ ಕಾಶಿ ಪಂಡಿತರೆಲ್ಲಾ ದಯಾನಂದರಿಗೆ ಉತ್ತರ ಕೊಡಲಾಗಲಿಲ್ಲ ಎಂದು ಎದ್ದುಬಿಟ್ಟರು. ಸಭೆಯಲ್ಲಿ ಗಲಾಟೆಯಾಯಿತು. ಪುಂಡರೂ ಅಲ್ಲಿ ಸೇರಿದ್ದು ದಯಾನಂದರ ಮೇಲೆ ಕಲ್ಲು, ಇಟ್ಟಿಗೆ ಚೂರುಗಳಿಂದ ಪ್ರಹಾರ ಮಾಡಿದರು. ಆ ಮಹಾತ್ಮ ಸಹಿಸಿಕೊಂಡು ಸ್ವಲ್ಪವೂ ಅಲುಗಾಡದೆ ಶಾಂತವಾಗಿದ್ದರು. ಶಾಸ್ತ್ರಾರ್ಥದ ಗತಿ ಹೀಗಾಯಿತು. ಸುಳ್ಳು ಗೆದ್ದಿತು. ಸತ್ಯ ಗೆಲ್ಲಲಿಲ್ಲ. ವಿಷಯ ತಿಳಿದ ಸಂತ ಈಶ್ವರ ಸಿಂಹ ಎಂಬ ಸಿಖ್ಖರ ಗುರು ದಯಾನಂದರನ್ನು ಕಾಣಲು ಬಂದರು. ದಯಾನಂದರ ಹತ್ತಿರ ಗಂಟೆಗಟ್ಟಲೇ ಮಾತನಾಡಿದರೂ ದಯಾನಂದರು ಗಲಾಟೆಯ ವಿಷಯ ಎತ್ತಲೇ ಇಲ್ಲ. ದಯಾನಂದರು ಹೊದ್ದಿದ್ದ ಶಾಲು ಜಾರಿದಾಗ ಅವರ ಎದೆಯ ಮೇಲೆ ಕಲ್ಲಿನ ಹೊಡೆತದಿಂದಾಗಿದ್ದ ದೊಡ್ಡ ಗಾಯ ಕಂಡಿತು. ಸಿಖ್ ಗುರು (ಮರುಗಿ) ವಿಚಾರಿಸಿದರು. "ಬಹಳ ಗಲಾಟೆಯಾಗಿದೆ. ಇಂದು ರಾತ್ರಿ ಕಳೆಯುವವವರೆಗಾದರೂ ಎಲ್ಲಾದರೂ ಅಡಗಿಕೊಂಡಿರುವುದು ಒಳ್ಳೆಯದು" ಎಂದು ಸಲಹೆ ಕೊಟ್ಟರು. ದಯಾನಂದರು ಹೇಳಿದರು: 'ನನ್ನ ಕರ್ತವ್ಯ ನಾನು ಮಾಡಿದ್ದೇನೆ. ಮಾನ, ಅವಮಾನಗಳಿಗೆ, ಕಷ್ಟ, ನಷ್ಟಗಳಿಗೆ ಅಂಜಿದರೆ ಸನ್ಯಾಸಿಗಳಿಗೆ ಸೇವೆ ಮಾಡಲಾಗುವುದಿಲ್ಲ. ಇಂದು ಕಲ್ಲು, ಇಟ್ಟಿಗೆಗಳಿಂದ ಹೊಡೆದಿದ್ದಾರೆ. ನಾಳೆ ಪುಷ್ಪವೃಷ್ಠಿ ಮಾಡುತ್ತಾರೆ. ಸುಖ-ದುಃಖಗಳೆರಡೂ ಕೂಡ ಆ ಭಗವಂತ ಕೊಟ್ಟ ವರದಾನ. ನಿಷ್ಠೆಯಿಂದ ಸತ್ಯ ಬಿಡದಿರುವುದೇ ನಮ್ಮ ಧರ್ಮ. ಪ್ರಪಂಚವೆಲ್ಲಾ ಎದುರಾಗಲಿ, ರಕ್ಷಿಸುವ ಪರಮಾತ್ಮ ರಕ್ಷಣೆ ಕೊಟ್ಟೇ ಕೊಡುತ್ತಾನೆ'. ಜ್ಞಾಪಕ ಇಟ್ಟುಕೊಳ್ಳಿ, ಸತ್ಯದ ದಾರಿ ಯಾವತ್ತೂ ಸುಲಭವಲ್ಲ. ಆ ದೇವರು ಎಲ್ಲರನ್ನೂ ಸಮಾನರಾಗಿ ನೋಡುತ್ತಾನೆ. ಒಳ್ಳೆಯವರನ್ನೂ ರಕ್ಷಿಸುತ್ತಾನೆ, ಕೆಟ್ಟವರನ್ನೂ ರಕ್ಷಿಸುತ್ತಾನೆ. ಭಾರತದಲ್ಲಿರುವವರು ಆಸ್ತಿಕರು (ಎನ್ನುತ್ತಾರೆ), ಅವರಿಗೂ ಅನ್ನ ಕೊಡುತ್ತಾನೆ. ರಷ್ಯದಲ್ಲಿರುವವರು ದೇವರೇ ಇಲ್ಲ ಅನ್ನುವ ನಾಸ್ತಿಕರು (ಎನ್ನುತ್ತಾರೆ), ಅವರಿಗೂ ಅನ್ನ ಕೊಡುತ್ತಾನೆ. ನೀನು ಅಂಥವನು, ಇಂಥವನು ಎಂದು ಹೊಗಳುವವರನ್ನು ಕಂಡು ಅವನೇನು ಉಬ್ಬಿ ನಾನು ದೊಡ್ಡ ದೇವರು ಅಂದುಕೊಂಡು ಹೊಗಳಿದವರಿಗೆ ದೊಡ್ಡ ಉಪಕಾರವನೇನೂ ಮಾಡುವುದಿಲ್ಲ. ಅವನನ್ನು ತೆಗಳಿದವರಿಗೆ, ಬೈದವರಿಗೆ ಸಿಟ್ಟು ಮಾಡಿಕೊಂಡು ಕೆಟ್ಟದನ್ನೂ ಮಾಡುವುದಿಲ್ಲ. ನಿಂದಾಸ್ತುತಿಗಳು ಮನುಷ್ಯರಿಗೇ ಹೊರತು ಪರಮಾತ್ಮನಿಗಿಲ್ಲ. ಹಾಗೆ ಮಾಡಿದರೆ ನಮಗೂ ಅವನಿಗೂ ಏನು ವ್ಯತ್ಯಾಸ? ಈಗ ಕೋರ್ಟುಗಳಲ್ಲಿ ಪ್ರಮಾಣ ಮಾಡಿಸುತ್ತಾರೆ: 'ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ, ನಾನು ಹೇಳುವುದೆಲ್ಲಾ ಸತ್ಯ' ಅಂತ. ಆದರೆ ಲಾಯರ್ ಹೇಳಿಕೊಟ್ಟಿರುತ್ತಾರೆ -ಸತ್ಯ ಅಂತ ಎಲ್ಲಾ ಹೇಳಿದರೆ ಕೆಡುತ್ತೀಯ, ನಾನು ಹೇಳಿಕೊಟ್ಟದ್ದೇ ಸತ್ಯ , ಅದನ್ನೇ ಹೇಳು ಅಂತ. (ನಾನು ತಮಾಷೆ ಮಾಡುತ್ತಿರುತ್ತೇನೆ) ಲಾಯರ್ ಅಂದರೆ ಲೈಯರ್ ಅಂತ! ಮಾಡುತ್ತಾ ಇರುವುದು ಹಾಗೇನೇ, ಇವತ್ತು ಇರುವುದೂ ಹಾಗೇನೇ.
. . . ಮುಂದುವರೆದಿದೆ.
**************
-ಕ.ವೆಂ.ನಾಗರಾಜ್.

ಮಂಗಳವಾರ, ಸೆಪ್ಟೆಂಬರ್ 13, 2011

ಹೊಳಲು ಯೋಗಾನರಸಿಂಹ ದೇವಾಲಯ

     24-08-2011ರಂದು ಗೆಳೆಯ ಶ್ರೀ ನಟರಾಜಪಂಡಿತರ ಆಹ್ವಾನದ ಮೇರೆ  ಶಾಂತಿಗ್ರಾಮದ ಸಮೀಪದ ಹೊಳಲು ಗ್ರಾಮಕ್ಕೆ ಶ್ರೀಯುತರಾದ ಸಿ.ಎಸ್. ಕೃಷ್ಣಸ್ವಾಮಿ, ನಟರಾಜಪಂಡಿತ್, ಹರಿಹರಪುರ ಶ್ರೀಧರ್ ಮತ್ತು ಆಕಾಶವಾಣಿ ಮತ್ತು ದೂರದರ್ಶನದ ಜಿಲ್ಲಾ ಕರೆಸ್ಪಾಂಡೆಂಟ್ ಮೋಹನಕೃಷ್ಣ ರವರೊಡಗೂಡಿ ಅಲ್ಲಿ ಜೀರ್ಣೋದ್ಧಾರಕ್ಕೆ ಕಾದಿರುವ ಶ್ರೀ ಯೋಗಾನರಸಿಂಹ ದೇವಾಲಯ ನೋಡಿದೆವು. ಸ್ಥಳೀಯ ಶ್ರೀ ಕೃಷ್ಣಯ್ಯಂಗಾರ್ ಅಲ್ಲಿ ಜೊತೆಗೂಡಿದರು. ಹೊರಗೆ ವಿಶೇಷವಾಗಿರದಿದ್ದರೂ ಒಳಭಾಗದಲ್ಲಿನ ವಿಗ್ರಹ, ಕಂಬಗಳು ಮನಮೋಹಕವಾಗಿವೆ. ಜೀರ್ಣೋದ್ಧಾರದ ಕೆಲಸದಲ್ಲಿ  ಶ್ರೀ ಕೃಷ್ಣಸ್ವಾಮಿಯವರ ಪ್ರೇರಣೆ ಹಾಗೂ ಆರ್ಥಿಕ ಸಹಕಾರ, ನಟರಾಜ ಪಂಡಿತರ ಉತ್ಸಾಹ ಮೆಚ್ಚುವಂತಹುದು. ಸರ್ಕಾರದಿಂದ ಸ್ವಲ್ಪ ಅನುದಾನ ಮಂಜೂರಾಗಿದ್ದು ಸ್ಥಳೀಯರ ಸಹಕಾರ ಪಡೆದು ಜೀರ್ಣೋದ್ಧಾರ ಕಾರ್ಯ ಯಶಸ್ವಿಗೊಳಿಸಲು ನಟರಾಜ್ ಮುಂದಾಗಿದ್ದಾರೆ. ಅವರಿಗೆ ಸಹಕರಿಸೋಣ.









ಸೋಮವಾರ, ಸೆಪ್ಟೆಂಬರ್ 12, 2011

ಮೂಢ ಉವಾಚ - 69

ಸುಗಮ ಜೀವನಕೆ ಕಟ್ಟುಪಾಡುಗಳು ಬೇಕು 
ಮೀರಿದರೆ ಆಪತ್ತು ನೆಮ್ಮದಿಯು ಹಾಳು |
ಶಾಸ್ತ್ರವಿಧಿಗಳಿರಬೇಕು ಮಂಗಳವ ತರಲು
ವಿವೇಕದಿಂದನುಸರಿಸೆ ಸುಖವು ಮೂಢ || 


ಭಕ್ತಿಯೆಂಬುದು ಕೇಳು ಒಳಗಿರುವ ಭಾವ 
ಅಂತರಂಗದೊಳಿರುವ ಪ್ರೇಮಪ್ರವಾಹ |
ಮನವ ಮುದಗೊಳಿಪ ಆನಂದಭಾವ
ಭಕ್ತಿಯಲೆ ಆನಂದ ಭಕ್ತನಿಗೆ ಮೂಢ || 


ತಿಳಿಯಾಗಿರಲಿ ಮನ ದೋಷವಿರದಿರಲಿ
ಆನಂದ ತುಂಬಿರಲಿ ಮಂದಹಾಸವದಿರಲಿ
ರೋಷವದು ದೂರ ವಿವೇಕ ಬಳಿಯಿರಲಿ
ಮಾನಸ ತಪದ ಫಲವೊಲಿಯಲಿ ಮೂಢ || 


ಬ್ರಾಹ್ಮಣನೆಂದರೆ ಬ್ರಹ್ಮನ ತಿಳಿದವ
ಶಮ ದಮ ತಪ ಶೌಚಗಳೊಡೆಯ |
ಶುದ್ಧಬುದ್ಧಿಯಲಿ ಜ್ಞಾನವನು ಪಡೆವ
ಭೇದವೆಣಿಸದವ ಬ್ರಾಹ್ಮಣನು ಮೂಢ || 
***************
-ಕ.ವೆಂ.ನಾಗರಾಜ್

ಶುಕ್ರವಾರ, ಸೆಪ್ಟೆಂಬರ್ 9, 2011

ದೊಂಡಿಯವಾಘನ ನೆನೆಯೋಣ

ದೊಂಡಿಯವಾಘನ ನೆನೆಯೋಣ
     ಇಂದಿಗೆ ದೊಂಡಿಯವಾಘ ಅಮರನಾಗಿ ೨೧೧ ವರ್ಷಗಳು ಕಳೆದಿವೆ. ಸ್ನೇಹಿತರೇ, ಮರೆಯದಿರಿ, ಆಂಗ್ಲರಿಗೆ ಸಿಂಹಸ್ವಪ್ನವಾಗಿ ಕಾಡಿ ಸ್ವರಾಜ್ಯಕ್ಕಾಗಿ, ಸ್ವಧರ್ಮಕ್ಕಾಗಿ, ಸ್ವಾಭಿಮಾನಕ್ಕಾಗಿ ಹೋರಾಡುತ್ತಲೇ ಮಡಿದಾಗ ಅವನ ವಯಸ್ಸು ಸುಮಾರು ೩೦ ವರ್ಷಗಳ ಆಸುಪಾಸಿನಲ್ಲಿತ್ತು ಅಷ್ಟೆ. ಅದರಲ್ಲೂ ಸುಮಾರು ೬ ವರ್ಷಗಳನ್ನು ಟಿಪ್ಪುಸುಲ್ತಾನನ ಸೆರೆಮನೆಯಲ್ಲಿ ಕಳೆದಿದ್ದವನು. ಟಿಪ್ಪುವಿನ ಸೈನ್ಯದಲ್ಲಿ ಸೈನಿಕನಾಗಿ ೧೮೭೪ರಲ್ಲಿ ಸೇರಿದ್ದ ಅವನನ್ನು ಟಿಪ್ಪು ಬಲವಂತವಾಗಿ ಮುಸ್ಲಿಮನನ್ನಾಗಿ ಮತಾಂತರಗೊಳಿಸಿದರೂ ಸ್ವಧರ್ಮ ಬಿಡಲೊಲ್ಲದ ಅವನನ್ನು ಶ್ರೀರಂಗಪಟ್ಟಣದ ಸೆರೆಮನೆಗೆ ತಳ್ಳಿದ್ದ. ಟಿಪ್ಪು ಹತನಾದ ನಂತರ ೧೮೭೯ರಲ್ಲಿ ಹೊರಬಂದ ಅವನು ತನ್ನದೇ ಸೈನ್ಯ ಕಟ್ಟಿ ಪ್ರಬಲ ಬಂಡಾಯದ ಬಾವುಟ ಶಿವಮೊಗ್ಗ ಜಿಲ್ಲೆಯಿಂದ ಉತ್ತರಕರ್ನಾಟಕದಾದ್ಯಂತ ಹಾರುವಂತೆ ಮಾಡಿದ್ದವನು. ೧೦-೦೯-೧೮೦೦ರಲ್ಲಿ ನಿಜಾಮನ ಸೀಮೆಯ ಕೋಣಗಲ್ಲಿನಲ್ಲಿ ಲಾರ್ಡ್ ವೆಲ್ಲೆಸ್ಲಿಯ ತುಕಡಿಯೊಂದಿಗೆ ಹೋರಾಡುತ್ತಲೇ ವೀರಸ್ವರ್ಗ ಸೇರಿದವನು. ಅವನಂತಹವರ ಹೋರಾಟವನ್ನು ಸ್ಮರಿಸದೆ ಕೇವಲ ಗಾಂಧಿ, ನೆಹರುರಂತಹವರನ್ನು ಮಾತ್ರ ಜಪಿಸಿದರೆ ಇತಿಹಾಸಕ್ಕೆ ಮಾಡುವ ಅನ್ಯಾಯವಲ್ಲವೆ? ಉಗ್ರಗಾಮಿಗಳೆನಿಸಿಕೊಂಡರೂ ಪರವಾಗಿಲ್ಲ, ದೇಶಕ್ಕಾಗಿ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದ ದೊಂಡಿಯವಾಘ ಮತ್ತು ಅವನಂತಹ ಅಸಂಖ್ಯ ಭಾರತರತ್ನರನ್ನು ನೆನೆಯೋಣ.
(ದೊಂಡಿಯವಾಘನ ಕುರಿತು ವಿಸ್ತೃತ ಲೇಖನಕ್ಕಾಗಿ ಇಲ್ಲಿ ನೋಡಿ:  http://kavimana.blogspot.com/2011/08/blog-post_20.html )
     ಇಂದು ನಮ್ಮ ದೇಶವನ್ನಾಳುತ್ತಿರುವ ಜನಪ್ರತಿನಿಧಿಗಳೆನಿಸಿಕೊಂಡವರಲ್ಲಿ ಬಹುತೇಕರು ಭಂಡರು. ಅವರು ಬಗ್ಗುವುದು ದಂಡಕ್ಕೆ ಮಾತ್ರ. ಯಾವುದೇ ರೀತಿಯ ಅನ್ಯಾಯದ ವಿರುದ್ಧ ಯಾರೇ ಹೋರಾಡಲಿ, ಅವರೊಡನೆ ಕೈಜೋಡಿಸದಿದ್ದರೂ ಪರವಾಗಿಲ್ಲ, ಅವರನ್ನು ಸಮರ್ಥಿಸುವ, ಪ್ರೋತ್ಸಾಹಿಸುವ ಕನಿಷ್ಠ ಕೆಲಸವನ್ನಾದರೂ ಮಾಡಲು ಮನಸ್ಸು ಮಾಡಬಹುದಲ್ಲವೇ? ಸಜ್ಜನ ಶಕ್ತಿ ರೂಪುಗೊಳ್ಳುವುದು ಇಂತಹ ಮನೋಭೂಮಿಕೆಯಿಂದಲೇ. ಇಂತಹ ಕೆಲಸಗಳೇ ನಾವು ದೊಂಡಿಯವಾಘನಂತಹವರ ಬಲಿದಾನಕ್ಕೆ ತೋರಬಹುದಾದ ಗೌರವ.
********************
(ಚಿತ್ರ: ಶಿಕಾರಿಪುರದ ಹುಚ್ಚರಾಯಸ್ವಾಮಿ ದೇವಾಲಯದಲ್ಲಿರುವ ದೊಂಡಿಯವಾಘನ ಖಡ್ಗ).

ಗುರುವಾರ, ಸೆಪ್ಟೆಂಬರ್ 8, 2011

ಅಬ್ದುಲ್ ವಾಜಿದರ ಕವನ



ಮೃದುವಾದ ಮಾತಿನಲಿ
- ಗಡಸುತನವಿಲ್ಲ;
ಗುಡುಗು - ಸಿಡುಕಿಲ್ಲ
- ಒಡಲಲ್ಲಿ;
ಮಿಂಚಿನ ಪ್ರಖರತೆಯ ಪ್ರಕಾಶ
- ನುಡಿಮುತ್ತಲ್ಲಡಗಿದೆ;
ಮೂಡಿಸಲು ನಮ್ಮೆಲ್ಲರ ಎದೆಗೂಡಲ್ಲಿ
- ಕಾರ್ಯಕ್ಷಮತೆ-ಕ್ರಿಯಾಶೀಲತೆ
- ಕಾಯಕದ ಅರಿವಿನ ಚೈತನ್ಯ.
ಬೇಸರಿಸದೆ ಅರಿತು
- ಅಂತರಾತ್ಮದಿ ಅವಲೋಕಿಸಿ
ಕಲಿತು - ಬೆರೆತು
-ನಾವನುಸರಿಸಿದರೆ
ಸೇವೆಯ ಜೀವನ ಸಾಗುವುದು
- ಸೊರಗಿಲ್ಲದೆ;
ಸುಗಮ - ಸುಖಕರ
- ಆನಂದಮಯ - ಅನನ್ಯ!


     ಇದು ನಾನು ತಹಸೀಲ್ದಾರನಾಗಿ ಕೆಲಸ ಮಾಡುತ್ತಿದ್ದ ಶಿಕಾರಿಪುರದಿಂದ ವರ್ಗಾವಣೆಯಾದ ಸಂದರ್ಭದಲ್ಲಿ ಸಿಬ್ಬಂದಿ ವರ್ಗದವರು ಏರ್ಪಡಿಸಿದ್ದ ಬೀಳ್ಕೊಡುಗೆ ಸಂದರ್ಭದಲ್ಲಿ ರೆವಿನ್ಯೂ ಇನ್ಸ್‌ಪೆಕ್ಟರ್ ಶ್ರೀ ಅಬ್ದುಲ್ ವಾಜಿದರು ರಚಿಸಿ ಹೇಳಿದ ಕವನ.
(ವಾಜಿದರ ಕುರಿತು ತಿಳಿಯಲು: http://kavimana.blogspot.com/2011/04/blog-post_30.html)

ಸೋಮವಾರ, ಸೆಪ್ಟೆಂಬರ್ 5, 2011

ಚುಟುಕು-ಗುಟುಕು-ಕುಟುಕು


     ಸಿಟಿ ಬಸ್ಸು ಜನರಿಂದ ತುಂಬಿ ತುಳುಕಿತ್ತು. ವೃದ್ಧರೊಬ್ಬರು ಮಹಿಳೆಯರಿಗೆ ಮೀಸಲಿದ್ದ ಸೀಟಿನಲ್ಲಿ ಕುಳಿತಿದ್ದರು. ಜನರ ಮಧ್ಯದಿಂದ ತೂರಿ ಬಂದ ನವತರುಣಿಯೊಬ್ಬಳು ಆ ವೃದ್ದರನ್ನು ಉದ್ದೇಶಿಸಿ 'ಏಳಯ್ಯಾ ಮೇಲೆ, ಇದು ಲೇಡೀಸ್ ಸೀಟು' ಎಂದು ಏಕವಚನದಲ್ಲಿ ಜಬರಿಸಿದಳು. ಆ ವೃದ್ಧರು ಕಷ್ಟಪಟ್ಟು ತಮ್ಮ ಊರುಗೋಲು ಊರಿಕೊಂಡು ಎದ್ದು ನಿಂತರು. ಆ ತರುಣಿ ಏನನ್ನೋ ಸಾಧಿಸಿದಂತೆ ಹಮ್ಮಿನ ಮುಖಭಾವದೊಂದಿಗೆ ಆ ಸೀಟಿನಲ್ಲಿ ಆಸೀನಳಾದಳು. ವೃದ್ಧರ ಇನ್ನೊಂದು ಕೈಯಲ್ಲಿ ಕೈಚೀಲವಿದ್ದು ಕಂಬವನ್ನು ಆಧರಿಸಿ ಒರಗಿ ನಿಲ್ಲುವುದೂ ಅವರಿಗೆ ಕಷ್ಟವಾಗಿದ್ದುದನ್ನು ಗಮನಿಸಿದ ಹಿಂದಿನ ಸೀಟಿನ ಪ್ರೌಢ ಮಹಿಳೆ ತನ್ನ ಸೀಟನ್ನು ಬಿಟ್ಟುಕೊಟ್ಟು ವೃದ್ಧರಿಗೆ ಕೂರಲು ಹೇಳಿದಳು. ವೃದ್ಧರು 'ಇದು ಮಹಿಳೆಯರ ಸೀಟು, ಇನ್ಯಾರೋ ಬಂದು ಏಳಯ್ಯಾ ಅಂದರೆ ಏಳಬೇಕಾಗುತ್ತೆ' ಅಂತ ಹೇಳಿ ಕುಳಿತುಕೊಳ್ಳಲಿಲ್ಲ. ಹಿರಿಯ ನಾಗರಿಕರಿಗೆ ಮೀಸಲಿದ್ದ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಮಧ್ಯವಯಸ್ಕರು ಇದನ್ನು ಗಮನಿಸಿದರೂ ಗಮನಿಸದಂತೆ ತಮ್ಮ ಪಾಡಿಗೆ ತಾವು ಕುಳಿತಿದ್ದರು. ಅವರ ಹಿಂದಿನ ಸೀಟಿನಲ್ಲಿದ್ದ ಹುಡುಗನೊಬ್ಬ ತಾನು ಕುಳಿತಿದ್ದ ಜಾಗದಿಂದ ಮೇಲೆದ್ದು 'ಕೂತ್ಕೊಳಿ ತಾತಾ' ಎಂದು ಅವರ ಕೈಹಿಡಿದು ಕುಳ್ಳಿರಿಸಿದಾಗ ಅಲ್ಲಿ ಕುಳಿತ ವೃದ್ಧ ಆ ಹುಡುಗನಿಗೆ 'ಚೆನ್ನಾಗಿರಪ್ಪಾ' ಎಂದು ಆಶೀರ್ವದಿಸಿದರು.  
**************
-ಕ.ವೆಂ.ನಾಗರಾಜ್.

ಭಾನುವಾರ, ಸೆಪ್ಟೆಂಬರ್ 4, 2011

ಮೂಢ ಉವಾಚ - 68

ಕುಜನರೊಡನಾಡಿ ವಂಚನೆಯ ಗೈಯುವನು
ಪರರ ನೋವಿನಲಿ ಆನಂದ ಕಾಣುವನು |
ಆಲಸಿಕ ತಾನಾಗಿ ಪಶುವಿನಂತಾಡುವನು
ಅಯುಕ್ತನವನಸುರನೋ ಮೂಢ || 


ಗುರುಹಿರಿಯರ ಗೌರವವಿಸದವ ಹಾಳು
ಒಳಿತಿನಲಿ ಹುಳುಕರಸುವ ಸಂಶಯಿ ಹಾಳು |
ಸಂಶಯಿಗೆ ಸುಖವಿಲ್ಲ ಇಹವಿಲ್ಲ ಪರವಿಲ್ಲ

ಪರರಿಗೂ ಅವನಿಂದ ಸುಖವಿಲ್ಲ ಮೂಢ || 


ವಿಶ್ವಾಸವಿರುವವರು ಇತಿಹಾಸ ರಚಿಸುವರು
ಅವರ ಇತಿಹಾಸವೇ ಜಗದ ಇತಿಹಾಸ |
ವಿಶ್ವಾಸದಿಂದುದಯ ಮನೋಬಲ ಚೇತನ
ಶ್ವಾಸವಿರಲಿ ಜೊತೆಗೆ ವಿಶ್ವಾಸವಿರಲಿ ಮೂಢ ||


ನೂರು ದೇವರನು ನಂಬಿದೊಡೆ ಫಲವೇನು
ತನ್ನ ತಾ ನಂಬದಿರೆ ಬೀಳದಿಹರೇನು | 
ದೇವನನು ನಂಬಿ ವಿಶ್ವಾಸಜೊತೆಯಿರಲು
ಗರಿಮೆಯ ಸಿರಿಗರಿ ನಿನದೆ ಮೂಢ || 
***************
-ಕ.ವೆಂ.ನಾಗರಾಜ್.

ಗುರುವಾರ, ಸೆಪ್ಟೆಂಬರ್ 1, 2011

ಸಾಧಕರಿವರು: ಸಂಶೋಧನಾ ರತ್ನ ಕೆಳದಿ ಗುಂಡಾಜೋಯಿಸ್

     ಕೆಳದಿಯ ಇತಿಹಾಸ ಮತ್ತು ಸಂಸ್ಕೃತಿಯನ್ನು ಜನಮಾನಸದಲ್ಲಿ ಉಳಿಸುವ ಕಾರ್ಯದಲ್ಲಿ ಕೆಳದಿ ಕವಿಮನೆತನ ಮತ್ತು ಕೆಳದಿ ಜೋಯಿಸ್ ಕುಟುಂಬಗಳು ಮಹತ್ವದ ಪಾತ್ರ ವಹಿಸಿವೆ. ಕೆಳದಿ ಕವಿಮನೆತನದವರಿಗೆ ಈ ಹೆಸರು ಬರಲು ಕಾರಣೀಭೂತನಾದ ೧೭ನೆಯ ಶತಮಾನದ ಕವಿ ಲಿಂಗಣ್ಣ ರಚಿಸಿದ ಕೆಳದಿನೃಪ ವಿಜಯ ಒಂದು ಅದ್ಭುತ ರಚನೆಯಾಗಿದ್ದು ಸುಮಾರು ೨೫೦ ವರ್ಷಗಳ ಕಾಲ ಕರ್ನಾಟಕದ ಮುಖಕಮಲದಂತೆ ರಾರಾಜಿಸಿದ, ಹಿಂದೂ ಸಂಸ್ಕೃತಿ ಮತ್ತು ಪರಂಪರೆಯ ರಕ್ಷಕರಾದ ಕೆಳದಿ ಅರಸರ ಜೀವನ ಚರಿತ್ರೆಯನ್ನು ಕಾವ್ಯರೂಪದಲ್ಲಿ ಐತಿಹಾಸಿಕ ಸಂಗತಿಗಳಿಗೆ ಲೋಪವಾಗದಂತೆ ಬಿಂಬಿಸಿದೆ. ಆಗಿನ ಕಾಲದಲ್ಲಿ ಪ್ರಚಲಿತವಿದ್ದ ಕಾವ್ಯದ ಶೈಲಿಯಲ್ಲಿರುವ ಈ ಕೃತಿಯನ್ನು ಕೆಳದಿಯ ಗುಂಡಾಜೋಯಿಸರು ಎಲ್ಲರಿಗೂ ಅರ್ಥವಾಗುವಂತೆ ಗದ್ಯರೂಪದಲ್ಲಿ ಸಿದ್ಧಪಡಿಸಿದ್ದು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರಕಟಗೊಂಡು ಈಗಾಗಲೇ ಮೂರು ಮುದ್ರಣಗಳನ್ನು ಕಂಡಿದೆ. ಕೆಲವು ವರ್ಷಗಳ ಹಿಂದೆ ಡಾ. ಉಮಾಹೆಗ್ಗಡೆಯವರು ಇದರ ಹಿಂದಿ ಗದ್ಯಾನುವಾದ ಮಾಡಿದ್ದು ಕೆಳದಿ ಇತಿಹಾಸದ ವಿವರ ಕನ್ನಡೇತರರಿಗೂ ತಲುಪಿದಂತಾಗಿದೆ. ಇದೀಗ ಇದರ ಇಂಗ್ಲಿಷ್ ಗದ್ಯಾನುವಾದವನ್ನು ಕವಿ ಸುರೇಶರು ಮಾಡಿದ್ದು, ಹೆಚ್ಚು ಹೆಚ್ಚು  ಓದುಗರಿಗೆ ಮತ್ತು ಇತಿಹಾಸಾಸಕ್ತರಿಗೆ ಉಪಯೋಗವಾಗಿದೆ. 
     ಕೆಳದಿ ಕವಿಮನೆತನದ ೫ನೆಯ ತಲೆಮಾರಿನ ಕವಿ ಕೃಷ್ಣಪ್ಪ-ಸುಬ್ಬಮ್ಮ ದಂಪತಿಗಳ ಮಗಳು ಗಂಗಮ್ಮನನ್ನು ಜೋಯಿಸ್ ಕುಟುಂಬದ ಕೃಷ್ಣಜೋಯಿಸರಿಗೆ ಕೊಟ್ಟು ವಿವಾಹವಾದಾಗ ಕವಿ ಮನೆತನ ಮತ್ತು ಜೋಯಿಸ್ ಕುಟುಂಬಗಳ ನೆಂಟಸ್ತಿಕೆ ಆರಂಭವಾಯಿತೆನ್ನಬಹುದು. ಕವಿಕೃಷ್ಣಪ್ಪನವರ ಕಿರಿಯ ಮಗ ಎಸ್,ಕೆ. ಲಿಂಗಣ್ಣಯ್ಯನವರು ಒಂದು ಅದ್ಭುತ ಪ್ರತಿಭೆಯಾಗಿದ್ದು ಕವಿಮನೆತನದ ಹೆಸರನ್ನು ಎತ್ತಿ ಹಿಡಿದವರು. ಇವರ ಪರಿಚಯವನ್ನು ಮುಂದೊಮ್ಮೆ ಮಾಡಿಕೊಡುವೆ. ಕೃಷ್ಣಜೋಯಿಸರ ಮಗ ನಂಜುಂಡಜೋಯಿಸರಿಗೆ ಕವಿ ಎಸ್.ಕೆ. ಲಿಂಗಣ್ಣಯ್ಯನವರ ಮಗಳು ಮೂಕಾಂಬಿಕಮ್ಮ (ಮೂಕಮ್ಮನೆಂದೇ ಕರೆಯಲ್ಪಡುತ್ತಿದ್ದವರು)ನನ್ನು ಕೊಟ್ಟು ವಿವಾಹವಾದಾಗ ಎರಡು ಕುಟುಂಬಗಳ ಬಾಂಧವ್ಯ ಮತ್ತಷ್ಟು ಗಟ್ಟಿಗೊಂಡಿತು. ನಂಜುಂಡ ಜೋಯಿಸ್-ಮೂಕಮ್ಮನವರ ಸುಪುತ್ರರೇ ಪ್ರಸ್ತುತ ಈಗ ಪರಿಚಯಿಸುತ್ತಿರುವ ಕೆಳದಿ ಗುಂಡಾಜೋಯಿಸರು. 
ಇತರರು ಓದಲು ಕಷ್ಟಪಡುವ ಲಿಪಿಗಳನ್ನು ಓದಬಲ್ಲ ಮೋಡಿಗಾರ
     ೨೭-೦೯-೧೯೩೧ರಲ್ಲಿ ಕೆಳದಿಯಲ್ಲಿ ಜನಿಸಿದ ಗುಂಡಾಜೋಯಿಸರು ಈಗ ೮೦ ವರ್ಷದ ತರುಣರು. ಅವರು ಉತ್ಸಾಹದ ಚಿಲುಮೆಯಾಗಿದ್ದು ಈಗಲೂ ತಮ್ಮ ಸಂಶೋಧನಾ ಕಾರ್ಯ ಮುಂದುವರೆಸಿದ್ದಾರೆ. ಕನ್ನಡ ಪಂಡಿತ, ಆಗಮ ವೇದ ವಿದ್ವಾನ್, ಕನ್ನಡ ರತ್ನ, ಹಿಂದಿ ಪ್ರಬೋಧ ಪರೀಕ್ಷೆಗಳಲ್ಲಿಯೂ ತೇರ್ಗಡೆಯಾಗಿರುವ ಇವರು ಮೈಸೂರು ವಿಶ್ವವಿದ್ಯಾನಿಲಯದ ಎಮ್.ಎ. ಪದವೀಧರರು. ಹಳೆಯ ಮತ್ತು ಐತಿಹಾಸಿಕ ವಸ್ತುಗಳ ಸಂಗ್ರಹದಲ್ಲಿ ಆಸಕ್ತಿ ಹೊಂದಿದ ಇವರು ಹಳೆಯ ಕೈಬರಹ, ಮೋಡಿಲಿಪಿ ಮತ್ತು ತಿಗಳಾರಿ ಲಿಪಿಗಳನ್ನು ಓದುವಲ್ಲಿ ಶ್ರೇಷ್ಠ ಪರಿಣಿತರು. ವಿರಳವಾದ ಮತ್ತು ಮಹತ್ವದ ಅನೇಕ ಸಂಗತಿಗಳನ್ನು ಈ ಮೂಲಕ ಬೆಳಕಿಗೆ ತಂದ ಕೀರ್ತಿ ಇವರದು. ಸರ್ಕಾರದ ಹಿರಿಯ ಅಧಿಕಾರಿಗಳಿಗೆ, ಅನೇಕ ವಿದ್ವಾಂಸರು, ಆಸಕ್ತರಿಗೆ ಮೋಡಿ ಮತ್ತು ತಿಗಳಾರಿ ಲಿಪಿಗಳನ್ನು ಓದುವ ಕುರಿತು ತರಬೇತಿ ನೀಡಿದ್ದಾರೆ. 
ಕೆಳದಿಯ ಹೆಮ್ಮೆಯಾದ ಅಪೂರ್ವ ಸಂಗ್ರಹಾಲಯದ ಜನಕ
     ಸುಮಾರು ನಾಲ್ಕು ಶತಮಾನಗಳ ಹಳೆಯ ಶಿಲಾಶಾಸನಗಳು, ಸಾಹಿತ್ಯಗಳು, ಪಳೆಯುಳಿಕೆಗಳು, ಕಾಗದಪತ್ರಗಳು, ಓಲೆಗರಿಗಳು, ಇತ್ಯಾದಿಗಳು ಇತಿಹಾಸ ಸಂಶೋಧನೆಗೆ ಅಮೂಲ್ಯ ಕಾಣಿಕೆ ಕೊಡುತ್ತವೆ. ತಾಯಿ ಮೂಕಮ್ಮನವರ ಪ್ರೇರಣೆಯಿಂದ ಇದರಲ್ಲಿ ಆಸಕ್ತಿ ಹೊಂದಿದ ಗುಂಡಾಜೋಯಿಸರು ಅಮೂಲ್ಯ ಸಂಗ್ರಹದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸುಮಾರು ೫೦-೫೫ ವರ್ಷಗಳ ಹಿಂದೆ ಕರ್ನಾಟಕ ಪ್ರಾಚ್ಯವಸ್ತು ಸಂಗ್ರಹಾಲಯದ ನಿರ್ದೇಶಕರಾಗಿದ್ದ ಡಾ. ಶೇಷಾದ್ರಿಯವರು ಸರ್ವೇಕ್ಷಣೆಗಾಗಿ ಕೆಳದಿಗೆ ಬಂದವರು ಗುಂಡಾಜೋಯಿಸರ ಮನೆಯಲ್ಲಿದ್ದ ಪ್ರಾಚೀನವಾದ ಮತ್ತು ಅಮೂಲ್ಯವಾದ ವಸ್ತುಗಳ ಸಂಗ್ರಹ ಕಂಡು ಬೆರಗಾಗಿದ್ದರು. ಸರ್ಕಾರ ಅವುಗಳ ರಕ್ಷಣೆ ಮಾಡುವುದು ಅಗತ್ಯವೆಂದು ಮನಗಂಡು ಸರಕಾರದೊಂದಿಗೆ ವ್ಯವಹರಿಸಿ ರೂ.೬೦೦೦೦/- ಪರಿಹಾರ ಕೊಟ್ಟು ಆ ವಸ್ತುಗಳನ್ನು ಮೈಸೂರು ಮತ್ತು ಬೆಂಗಳೂರು ವಸ್ತುಸಂಗ್ರಹಾಲಯದಲ್ಲಿರಿಸಲು ಗುಂಡಾಜೋಯಿಸ್ ಕುಟುಂಬದವರ ಒಪ್ಪಿಗೆ ಪಡೆದರು. ಅಂದುಕೊಂಡಂತೆಯೇ ಆಗಿದ್ದರೆ ಈಗ ನಾವು ಕಾಣುತ್ತಿರುವ ವಸ್ತುಸಂಗ್ರಹಾಲಯ ಕೆಳದಿಯಲ್ಲಿ ಇರುತ್ತಿರಲಿಲ್ಲ. ಪ್ರಾಚೀನ ವಸ್ತುಗಳನ್ನು ಹಸ್ತಾಂತರ ಮಾಡುವ ವಿಚಾರದಲ್ಲಿ ಪರಿಶೀಲನೆಗೆ ಬಂದ ಆಗಿನ ಜಿಲ್ಲಾಧಿಕಾರಿ ಶ್ರೀ ಸತೀಶ್ ಚಂದ್ರನ್ ರವರು ಗುಂಡಾಜೋಯಿಸರ ಬಳಿಯಿದ್ದ ತಾಳೆಗರಿಗಳು, ಹಳೆಯ ಜಾನಪದ ವಸ್ತುಗಳು, ಕಡತಗಳು, ತಾಳೆಗರಿಗಳು, ಮುಂತಾದುವನ್ನು ಕಂಡು ಬೆರಗಾದ ಅವರು ಅವುಗಳನ್ನು ಕೆಳದಿಯಲ್ಲಿಯೇ ಸುರಕ್ಷಣೆಯಲ್ಲಿ ಇಡುವುದು ಒಳ್ಳೆಯದೆಂದು ಭಾವಿಸಿ ಸರ್ಕಾರದ ಒಪ್ಪಿಗೆ ಮತ್ತು ಅನುದಾನ ಪಡೆದು ಗುಂಡಾಜೋಯಿಸರ ಮನೆಯ ಪಕ್ಕದ ಆವರಣದಲ್ಲಿ ಕೆಳದಿ ವಸ್ತು ಸಂಗ್ರಹಾಲಯ ಮತ್ತು ಇತಿಹಾಸ ಸಂಶೋಧನಾ ಕೇಂದ್ರ ಎಂಬ ಹೆಸರಿನಲ್ಲಿ ಕಾರ್ಯಾರಂಭಕ್ಕೆ ಕಾರಣಕರ್ತರಾದರು. ಕೆಲವರ ಚಿತಾವಣೆಯಿಂದ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಈ ವಸ್ತುಸಂಗ್ರಹಾಲಯವನ್ನು ಸೂಪರ್ ಸೀಡ್ ಮಾಡಲು ಸರ್ಕಾರ ಮುಂದಾಗಿದ್ದು ಆಗ ನೆರವಿಗೆ ಬಂದವರು ಆಗ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ಇದೇ ಶ್ರೀ ಸತೀಶ್ ಚಂದ್ರನ್ ರವರು. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿನ ಅಪೂರ್ವವೆನಿಸಿರುವ ವಸ್ತು ಸಂಗ್ರಹಾಲಯ ಕೆಳದಿಯಲ್ಲೇ ಉಳಿಯಿತು.
     ಗುಂಡಾಜೋಯಿಸರ ಶ್ರಮದಿಂದ ಸಣ್ಣ ಪ್ರಮಾಣದಲ್ಲಿ ಆರಂಭಗೊಂಡ ಈ ಸಂಸ್ಥೆ ಕ್ರಮೇಣ ಹಲವರ ಸಹಕಾರದಿಂದ ಇಂದು ದೊಡ್ಡದಾಗಿ ಬೆಳೆದಿದೆ. ೧೯೮೭-೮೯ರಲ್ಲಿ ಹೊಸ ಕಟ್ಟಡ ನಿರ್ಮಾಣವಾಗಿದ್ದು ಇದಕ್ಕೆ ಜೋಯಿಸರು ಭೂಮಿದಾನ ನೀಡಿದ್ದಾರೆ. ಈಗ ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಹಸ್ತಾಂತರಗೊಂಡಿರುವ ವಸ್ತು ಸಂಗ್ರಹಾಲಯದ ಉಪಯೋಗಕ್ಕಾಗಿ ಕೆಲವು ವರ್ಷಗಳ ಹಿಂದೆ ಹೊಸ ಕಟ್ಟಡವನ್ನೂ ಸಹ ನಿರ್ಮಿಸಲಾಗಿದೆ. ಗುಂಡಾಜೋಯಿಸರು ತಮ್ಮ ಶ್ರಮದಿಂದ ಸಂಗ್ರಹಿಸಿದ ಎಲ್ಲಾ ವಸ್ತುಗಳನ್ನು ಪ್ರತಿಫಲಾಪೇಕ್ಷೆಯಿಲ್ಲದೆ ನೀಡಿರುವುದು ವಿಶೇಷವೇ ಸರಿ. ಹಳೆಯ ಕಾಲದ ವಿಗ್ರಹಗಳು, ಕಾಷ್ಠಶಿಲ್ಪಗಳು, ವರ್ಣಚಿತ್ರಗಳು, ತುಕ್ಕು ಹಿಡಿದಿದ್ದರೂ ಅಂದಿನ ಕಥೆ ಹೇಳುವ ಆಯುಧಗಳು, ನಾಣ್ಯಗಳು, ಬೀಗಗಳು, ರಾಜ-ರಾಣಿಯರ ಉಡುಪುಗಳು, ಶಾಸನಗಳು, ವೀರಗಲ್ಲುಗಳು, ತಾಡೆಯೋಲೆಗಳು, ಹಸ್ತಪ್ರತಿಗಳು, ಮುಂತಾದುವನ್ನು ಕಣ್ಣಾರೆ ಕಂಡೇ ಅವುಗಳ ಮಹತ್ವ ಅರಿಯಬೇಕು. ಕವಿ ಶ್ರೀ ಎಸ್.ಕೆ. ಲಿಂಗಣ್ಣಯ್ಯನವರ ರಚನೆಯ ಅದ್ಭುತವೆನಿಸುವ ಕಲಾಕೃತಿಗಳು ಎಲ್ಲರ ಮನಸೆಳೆಯುತ್ತವೆ. ಅವರ ಗಾರ್ಡಿಯನ್ ಏಂಜಲ್ ಆಫ್ ಬ್ರಿಟಿಷ್ ಎಂಪೈರ್ ಚಿತ್ರದಲ್ಲಿ ಆಂಗ್ಲರ ಆಡಳಿತಕಾಲದಲ್ಲಿದ್ದ ದೇಶಗಳನ್ನು ವಿಕ್ಟೋರಿಯಾ ರಾಣಿಯ ಚಿತ್ರದಲ್ಲಿ ರೂಪಿಸಿದ್ದು ಅದರಲ್ಲಿ ಭಾರತ ಹೃದಯಭಾಗದಲ್ಲಿರುವಂತೆ ಚಿತ್ರಿಸಿರುವುದು ವಿಶೇಷ. ಕಲಾತಜ್ಞರ ಪ್ರಕಾರ ಈ ಚಿತ್ರ ಲಕ್ಷಾಂತರ ರೂ. ಮೌಲ್ಯವುಳ್ಳದ್ದಾಗಿದೆ. ಸುಮಾರು ೧೮೦೦ ಚಿತ್ರಗಳಿರುವ ಚಿತ್ರರಾಮಾಯಣ, ಚಿತ್ರಭಾಗವತಗಳೂ ಇಲ್ಲಿ ಕಾಣಸಿಗುತ್ತವೆ. ಕವಿಮನೆತನದ ವಂಶವೃಕ್ಷವನ್ನು ಸಹ ಇಲ್ಲಿ ನೋಡಬಹುದು. ಅಸಂಖ್ಯ ಕನ್ನಡ, ತೆಲುಗು, ತಮಿಳು, ತಿಗಳಾರಿ, ದೇವನಾಗರಿ ಲಿಪಿಗಳಲ್ಲಿರುವ ಓಲೆಗರಿ ಕಟ್ಟುಗಳಿದ್ದು ಅಧ್ಯಯನಯೋಗ್ಯವಾಗಿವೆ. ಧರ್ಮಶಾಸ್ತ್ರ, ಸಂಗೀತ, ಆಯುರ್ವೇದ, ಇತಿಹಾಸ, ಇತ್ಯಾದಗಳಿಗೆ ಸಂಬಂಧಿಸಿದ ಓಲೆಗರಿಗಳಿವೆಯೆಂದು ತಿಳಿದುಬರುತ್ತದೆ. ಕೃಷ್ಣದೇವರಾಯನ ದಿನಚರಿ, ನವಾಬ್ ಹೈದರಾಲಿಯ ಸಹಿಯುಳ್ಳ ದಾಖಲೆ, ಸರ್ವಜ್ಞನ ಪೂರ್ವಾಪರ ತಿಳಿಸುವ ತಾಡಪತ್ರ, ಶ್ರೀ ಶಂಕರಾಚಾರ್ಯರ ಅಪ್ರಕಟಿತ ಸ್ತೋತ್ರಗಳು, ಗದಗದ ತೋಂಟದಾರ್ಯ ಮಠದ ಚಿನ್ನದ ಪಾದುಕೆಗಳಲ್ಲಿರುವ ಕೆಳದಿಯ ಶಾಸನ ಹಾಗೂ ರೇಖಾಚಿತ್ರವಿದ್ದ ಸಂಶೋಧನಾತ್ಮಕ ಕೃತಿಗಳು, ವಿಜಯನಗರದ ದೇವರಾಯನ ಅಂಕಿತದ ತಾಮ್ರಶಾಸನ, ಹೀಗೆ ನೂರಾರು ಅಮೂಲ್ಯ ಪ್ರಾಚೀನ ಸಂಪತ್ತು ಇಲ್ಲಿ ರಕ್ಷಿಸಲ್ಪಟ್ಟಿದ್ದು ಇವುಗಳ ಮಹತ್ವವನ್ನು ಬಿತ್ತರಿಸುವ ನೈಜ ಇತಿಹಾಸ ಹೊರತರುವ ಕೆಲಸ ಆಗಬೇಕಿದೆ. ಕುವೆಂಪು ವಿಶ್ವವಿದ್ಯಾನಿಲಯ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲು ವಿಪುಲ ಆಕರಗಳು, ಅವಕಾಶಗಳು ಇವೆ. ಇಲ್ಲಿಯ ತಾಡೆಯೋಲೆ ಸಂಗ್ರಹ ಮತ್ತು ವೈಜ್ಞಾನಿಕ ರೀತಿಯ ರಕ್ಷಣೆಗಾಗಿ ಕೇಂದ್ರ ಸರಕಾರ ಇದನ್ನು ಹಸ್ತಪ್ರತಿ ಸಂಪನ್ಮೂಲ ಕೇಂದ್ರವಾಗಿ ಗುರುತಿಸಿದೆ. ಈಗ ಸರಕಾರ ಇದನ್ನು ಕುವೆಂಪು ವಿಶ್ವವಿದ್ಯಾನಿಲಯದ ಜೊತೆ ವಿಲೀನಗೊಳಿಸಿದೆ. ಇತ್ತೀಚೆಗೆ ಇಕ್ಕೇರಿಯ ಹಳೆರಥವನ್ನು ವಸ್ತುಸಂಗ್ರಹಾಲಯದ ಸಂಗ್ರಹಕ್ಕೆ ಸೇರಿಸಿಕೊಳ್ಳಲಾಗಿದೆ. ಗುಂಡಾಜೋಯಿಸರ ಈ ಎಲ್ಲಾ ಅದ್ಭುತ ಕೆಲಸದಿಂದ ಇಂದು ಈ ವಸ್ತುಸಂಗ್ರಹಾಲಯ ಈಗಿನ ಸ್ಥಿತಿಗೆ ತಲುಪಿದ್ದು ಮುಂದೊಮ್ಮೆ ಕರ್ನಾಟಕದ ಹೆಮ್ಮೆಯೆನಿಸುವುದರಲ್ಲಿ ಸಂಶಯವಿಲ್ಲ. ಅವರಿಗೆ ನಮೋ ನಮೋ! 
ಕೆಳದಿ ಇತಿಹಾಸ ತಿರುಚಿದ್ದಕ್ಕೆ  ಕೆರಳಿದರು!
     ಇತಿಹಾಸಕ್ಕೆ ಜಾತಿ, ದೇಶ, ದರ್ಮ, ಇತ್ಯಾದಿ ಹಲವು ಕಾರಣಗಳಿಂದ ಅಪಚಾರವಾಗಿದೆ, ಆಗುತ್ತಿದೆ. ಭಾರತದ ನೈಜ ಇತಿಹಾಸವನ್ನೂ ಸಹ ಜಾತ್ಯಾತೀತತೆ ನೆಪದಲ್ಲಿ ಮುಚ್ಚಿಹಾಕಲಾಗುತ್ತಿದೆ. ಇತಿಹಾಸವೆಂದರೆ (ಅರ್ಥ: ಅದು ಹಾಗೆ ಇತ್ತು) ಅದು ಹೇಗೆ ಇತ್ತೋ ಹಾಗೆ ಹೇಳಬೇಕು. ಆದರೆ ತಮಗೆ ಬೇಕಾದಂತೆ ತಿರುಚಿದ ಇತಿಹಾಸವನ್ನು ನಮ್ಮ ಮಕ್ಕಳು ಅಭ್ಯಸಿಸುತ್ತಿರುವುದು ದುರ್ದೈವ. ಮಾಸ್ತಿ ವೆಂಕಟೇಶ ಅಯ್ಯಂಗಾರರು ತಮ್ಮ ಚೆನ್ನಬಸವನಾಯಕ ಕಾದಂಬರಿಯಲ್ಲಿ ಕೆಳದಿಯ ರಾಣಿ ವೀರಮ್ಮಾಜಿಯ ಚಾರಿತ್ರ್ಯ ವಧೆ ಮಾಡುವಂತಹ ವರ್ಣನೆಗಳನ್ನು ಮಾಡಿದ್ದುದನ್ನು ಪ್ರಬಲವಾಗಿ ಖಂಡಿಸಿದ್ದ ಗುಂಡಾಜೋಯಿಸರು ಹಲವಾರು ಲೇಖನಗಳನ್ನು ಪ್ರಕಟಿಸಿದರು. ಅಷ್ಟೇ ಸಲ್ಲ, ಸಂಶೋಧನಾತ್ಮಕವಾದ, ಸತ್ಯಶೋಧನೆ ಆಧರಿಸಿ ನಿಷ್ಕಳಂಕಿಣಿ ಕೆಳದಿ ವೀರಮ್ಮಾಜಿ ಎಂಬ ಗ್ರಂಥವನ್ನೇ ಪ್ರಕಟಿಸಿದರು. ಮಾಸ್ತಿಯಂತಹವರೂ ತಮ್ಮದೇ ಆದ ಕಾರಣಕ್ಕಾಗಿ ನೈಜ ಇತಿಹಾಸಕ್ಕೆ ಕಳಂಕ ತಂದದ್ದು ನೋವು ತರುವಂತಹುದು. ಮಾಸ್ತಿಯವರಿಗೆ ಈ ಕೃತಿಗಾಗಿ ಕೊಡಬೇಕೆಂದಿದ್ದ ಜ್ಞಾನಪೀಠ ಪ್ರಶಸ್ತಿಯನ್ನು ಪ್ರತಿಭಟನೆಯ ಕಾರಣಕ್ಕಾಗಿ ಸಮಗ್ರ ಸಾಹಿತ್ಯಕ್ಕಾಗಿ ಎಂದು ಬದಲಾಯಿಸಿ ಕೊಡಲಾಯಿತು. 
ಮೌಲಿಕ ಬರಹಗಾರರು
     ಸುಂದರ ಕೈಬರಹಗಾರರಾದ ಗುಂಡಾಜೋಯಿಸರು ೩೦ಕ್ಕೂ ಹೆಚ್ಚು ಇತಿಹಾಸ ಸಂಶೋಧನೆಯ ಕೃತಿಗಳು, ೨೫೦ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು, ಲೇಖನಗಳನ್ನು ಪ್ರಕಟಿಸಿದ್ದಾರೆ. ಇವರ ಎಲ್ಲಾ ಕೃತಿಗಳು ದಾಖಲೆಗಳನ್ನು ಆಧರಿಸಿದ್ದು ಸತ್ಯಶೋಧನೆಯ ಫಲಗಳಾಗಿವೆ. ಹೆಚ್ಚಿನ ಕೃತಿಗಳು ಕೆಳದಿ ಅರಸರು, ಅವರ ಕಾಲದ ಇತಿಹಾಸ, ಸಾಹಿತ್ಯಗಳಿಗೆ ಸಂಬಂಧಿಸಿವೆ. ಸಂಶೋಧನಾತ್ಮಕ ಕಾರ್ಯಗಳಿಗೆ ಭಾರತ ಮತ್ತು ರಾಜ್ಯ ಸರ್ಕಾರದ ನೆರವೂ ಸಿಕ್ಕಿದ್ದು ಅವರ ಸಂಶೋಧನೆಗೆ ಸಹಕಾರಿಯಾಗಿದೆ. ಅನೇಕ ರಾಷ್ಟ್ರೀಯ ಮತ್ತು ಆರು ಅಂತರರಾಷ್ಟ್ರೀಯ ಸೆಮಿನಾರುಗಳಲ್ಲಿ ಭಾಗವಹಿಸಿ ಪ್ರೌಢ ಪ್ರಬಂಧಗಳನ್ನು ಮಂಡಿಸಿದ ಹೆಗ್ಗಳಿಕೆ ಇವರದು. ಇವರ ಸಾಹಿತ್ಯ ಕೃಷಿಯ ಕುರಿತು ಬರೆಯಹೊರಟರೆ ಅದೇ ಪ್ರತ್ಯೇಕ ದೀರ್ಘ ಲೇಖನವಾಗುತ್ತದೆ. 
ಅರಸಿ ಬಂದ ಪ್ರಶಸ್ತಿಗಳು
     ಹಲವಾರು ಪ್ರಶಸ್ತಿ, ಸನ್ಮಾನಗಳು ಇವರನ್ನು ಅರಸಿ ಬಂದಿವೆ. ೧೯೯೪ರಲ್ಲಿ ರಾಜ್ಯ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಇತಿಹಾಸ ಅಕಾಡೆಮಿಯ ಆಜೀವ ಸದಸ್ಯರಾಗಿರುವ ಇವರು ೨೦೦೪ರಲ್ಲಿ ಹೊನ್ನಾಳಿಯಲ್ಲಿ ನಡೆದ ಅಕಾಡೆಮಿಯ ವಾರ್ಷಿಕ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರ ಸಾಧನೆಯನ್ನು ಕೆಳದಿ ರಾಜಗುರು ಹಿರೇಮಠ ಗುರುತಿಸಿ ಕೆಳದಿ ಇತಿಹಾಸ ಸಂಶೋಧನಾ ರತ್ನ ಎಂಬ ಪ್ರಶಸ್ತಿ ನೀಡಿದ್ದು, ಈ ಬಿರುದು ನಿಜಕ್ಕೂ ಅರ್ಥಪೂರ್ಣವಾಗಿದೆ. ವಿಶ್ವ ಹಿರಿಯರ ನಾಗರಿಕರ ದಿನಾಚರಣೆ ಅಂಗವಾಗಿ ಬೆಂಗಳೂರಿನಲ್ಲಿ ಸರ್ಕಾರದಿಂದ ಸನ್ಮಾನಿತರಾದ ಐವರ ಪೈಕಿ ಇವರೂ ಒಬ್ಬರು. ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕಳೆದ ಜೂನ್ ತಿಂಗಳಿನಲ್ಲಿ ನಡೆದ ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 
ಬತ್ತದ ಚಿಲುಮೆ
     ೮೦ರ ಹರಯದಲ್ಲಿ ಈಗಲೂ ಬತ್ತದ ಚಿಲುಮೆಯಂತಿರುವ ಗುಂಡಾಜೋಯಿಸರ ತಲೆಯಲ್ಲಿ ಸುಮಾರು ೬೦-೭೦ ಲಕ್ಷ ರೂ.ಗಳ ವೆಚ್ಚದ ಅಂದಾಜಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದ ನಿರೀಕ್ಷೆಯಲ್ಲಿ ಮುಂದಿನ ೬ ವರ್ಷಗಳಲ್ಲಿ ಮಾಡಲು ಉದ್ದೇಶಿಸಿರುವ ಹಲವಾರು ಯೋಜನೆಗಳಿವೆ. ತಿಗಳಾರಿ ಹಸ್ತಪ್ರತಿಗಳು, ಮೋಡಿ ಲಿಪಿಗಳ ಕುರಿತು ಸಂಶೋಧನಾ ಲೇಖನಗಳು, ಅಪ್ರಕಟಿತ ತಾಳೆಗರಿ ಸಾಹಿತ್ಯಗಳನ್ನು ಹೊರತರುವುದು, ಕೆಳದಿಯ ಸಮಗ್ರ ಇತಿಹಾಸ (ಇಂಗ್ಲಿಷ್ ಮತ್ತು ಕನ್ನಡದಲ್ಲಿ), ಇತ್ಯಾದಿ ಅವರ ಯೋಜನೆ/ಯೋಚನೆಗಳು ಕಾರ್ಯಗತಗೊಳ್ಳಲಿ ಎಂದು ಹಾರೈಸೋಣ. ಸಾಗರದಿಂದ ೮ ಕಿ,ಮೀ, ದೂರದ ಕೆಳದಿಗೆ ಭೇಟಿ ನೀಡಿ ರಾಮೇಶ್ವರ ದೇವಾಲಯ ಮತ್ತು ಕೆಳದಿಯ ವಸ್ತು ಸಂಗ್ರಹಾಲಯ ಹಾಗೂ ೩ ಕಿ,ಮೀ. ದೂರದ ಇಕ್ಕೇರಿಯ ಅಘೋರೇಶ್ವರ ದೇವಾಲಯ ಸಂದರ್ಶಿಸಿರದಿದ್ದಲ್ಲಿ ಸಂದರ್ಶಿಸಿರಿ. ಆ ಸಂದರ್ಭದಲ್ಲಿ ಹಿರಿಯ ಸಾಧಕ ಗುಂಡಾಜೋಯಿಸರನ್ನು ಕಂಡು ಮಾತನಾಡಿಸಿ ಬರಬಹುದು. ಏನಂತೀರಿ?   
                                     ಕೆಳದಿ ವಸ್ತು ಸಂಗ್ರಹಾಲಯ 
                                       ಓಲೆಗರಿಗಳಲ್ಲಿನ ಸಾಹಿತ್ಯ ಭಂಡಾರ
                                       ಪ್ರಾಚೀನ ವಸ್ತುಗಳ ಒಂದು ನೋಟ
                                       ರಾಜರ ಆಯುಧಗಳ ಒಂದು ನೋಟ

                                          ರಾಜರ ಪೋಷಾಕು, ಕವಿಮನೆತನದ ವಂಶವೃಕ್ಷ

                                                ಬೀಗಗಳು




                                    ಅಮೂಲ್ಯ ವಸ್ತುಗಳು

             
                                       ದೊಡ್ಡ ಗಾತ್ರದ ತಾಡಪತ್ರದಲ್ಲಿ ಮಹಾಭಾರತ