ದೇವರೆಲ್ಲಿದ್ದಾನೆ?
ದೇವರು ಎಲ್ಲೆಲ್ಲೂ ಇದ್ದಾನೆ, ಅಣು ಅಣುವಿನಲ್ಲೂ ಇದ್ದಾನೆ, ಎಲ್ಲೆಲ್ಲೂ ವ್ಯಾಪಿಸಿದ್ದಾನೆ. ಅವನು ಸರ್ವರಕ್ಷಕ, ಸರ್ವಶಕ್ತ, ಯಾರೂ ಅವನನ್ನು ಬಗ್ಗಿಸಲು ಸಾಧ್ಯವಿಲ್ಲ. ಹಾಗಿದ್ದಾಗ ನನ್ನ ದೇವರು ತಿರುಪತಿಯಲ್ಲಿದ್ದಾನೆ, ನನ್ನ ದೇವರು ರಾಮೇಶ್ವರದಲ್ಲಿದ್ದಾನೆ, ಅಲ್ಲಿದ್ದಾನೆ, ಇಲ್ಲಿದ್ದಾನೆ, ಆ ವಿಗ್ರಹದಲ್ಲಿದ್ದಾನೆ, ಈ ವಿಗ್ರಹದಲ್ಲಿದ್ದಾನೆ ಎನ್ನುವುದು ಎಷ್ಟು ಸರಿ? ಸೋಮೇಶ್ವರ ದೇವಸ್ಥಾನದ ಮೇಲೆ ಘಜನಿ ಮಹಮದ್ ಬಾರಿ ಬಾರಿ ದಾಳಿ ಮಾಡಿದ. ದೇವಸ್ಥಾನ ಧ್ವಂಸ ಮಾಡಿದ. ಸೋಮೇಶ್ವರ ತನ್ನನ್ನು ತಾನೇ ರಕ್ಷಣೆ ಮಾಡಿಕೊಂಡನೆ? ಘಜನಿ ಮಹಮದ್ ಗೆದ್ದ, ಸೋಮೇಶ್ವರ ಸೋತ! ಆ ವಿಗ್ರಹ ನಿಜವಾಗಿ ದೇವರಾಗಿದ್ದರೆ ಎಂದೂ ಆ ಸ್ಥಿತಿ ಬರುತ್ತಿರಲಿಲ್ಲ. ನಾನು ಹೇಳುತ್ತಾ ಇರುತ್ತೇನೆ, ನನಗೆ ಭಗವಂತನ ಭಯ ಇಲ್ಲ, ಅವನ ಭಕ್ತರ ಭಯ! ನಾನು ಹೀಗೆ ಹೇಳಿದರೆ ಅವರಿಗೆ ಕೋಪ ಬರುತ್ತೆ. ನನ್ನನ್ನು ನಾಸ್ತಿಕ ಎನ್ನುತ್ತಾರೆ. ಗೊಂಬೆಯನ್ನು ದೇವರು ಎಂದು ನಂಬದಿದ್ದರೆ ನಾಸ್ತಿಕ ಎಂದರೆ ನಾನು ನಾಸ್ತಿಕನೇ. ದೇವರಿಲ್ಲದಿದ್ದರೆ ಈ ಪ್ರಪಂಚ ಇರುತ್ತಿರಲಿಲ್ಲ. ಆ ಪರಮಾತ್ಮ ಕರ್ತ-ಧರ್ತ-ಸಂಹರ್ತ. ಪ್ರಪಂಚ ಸೃಷ್ಟಿ ಮಾಡುವವನು, ರಕ್ಷಿಸುವವನು ಮತ್ತು ನಾಶ ಮಾಡುವವನು ಅವನೇ. ಆ ದೇವರು ಕಾಣುವುದಿಲ್ಲ, ಅದಕ್ಕೇ ನಂಬುವುದಿಲ್ಲ ಅಂದರೆ ಬಹಳ ಕಷ್ಟ. ಕಣ್ಣಿಗೆ ಕಾಣುವುದಕ್ಕಿಂತ ಕಾಣಿಸದಿರುವುದೇ ಹೆಚ್ಚು. ವಾಯು ಇದೆ, ಕಣ್ಣಿಗೆ ಕಾಣುತ್ತಾ? ಆಕಾಶ ಇದೆ, ಅದನ್ನು ಕಾಣಲು ಎಷ್ಟು ಮೇಲಕ್ಕೆ ಹೋದರೆ ಅದು ಅಷ್ಟೂ ಮೇಲಕ್ಕೆ ಹೋಗುತ್ತೆ. ಏಕೆಂದರೆ ಅಲ್ಲಿ ಏನೂ ಇಲ್ಲ, ಶೂನ್ಯ. ಆ ಶೂನ್ಯಕ್ಕೆ ಹದ್ದು ಕಟ್ಟಲು ಸಾಧ್ಯವೇ? ಇಷ್ಟೇ ಉದ್ದ, ಇಷ್ಟೇ ಅಗಲ, ಇಷ್ಟೇ ಎತ್ತರ ಎಂದು ನಿಗದಿ ಪಡಿಸಲು ಸಾಧ್ಯವೇ? ಆ ಪರಮಾತ್ಮ ಇದ್ದಾನೆ, ಅವನು ಶೂನ್ಯ ಅಲ್ಲ. ಅವನಿರುವುದರಿಂದಲೇ ಈ ಸೂರ್ಯ, ಚಂದ್ರ, ಭೂಮಿ, ಬ್ರಹ್ಮಾಂಡ ಎಲ್ಲಾ! (ಇಲ್ಲಿ ಒಂದು ವೇದ ಮಂತ್ರ ಉಲ್ಲೇಖಿಸಿ ಹೇಳುತ್ತಾರೆ:) ಆ ಭಗವಂತ ಎಷ್ಟು ಪ್ರಕಾಶಮಯವೆಂದರೆ ಅವನೆದುರಿಗೆ ಈ ಸೂರ್ಯ ಯಾವ ಲೆಕ್ಕಕ್ಕೂ ಇಲ್ಲ. ಆ ಸೂರ್ಯನೇ ಲೆಕ್ಕಕ್ಕಿಲ್ಲವೆಂದರೆ ಚಂದ್ರನ ಪಾಡೇನು? ನಕ್ಷತ್ರಗಳೂ ಅಷ್ಟೆ. ಆ ಪರಮಾತ್ಮನ ಜ್ಯೋತಿಯಿಂದಲೇ ಇವೆಲ್ಲಾ ಬೆಳಗುತ್ತಿವೆ. ಅಂತಹ ಜ್ಯೋತಿರ್ಮಯನಾದ ಪರಮಾತ್ಮನನ್ನು ಬಿಟ್ಟು ಯಾವತ್ತು ಕಲ್ಲು, ಮಣ್ಣು, ಮರಗಳಿಂದ ಮಾಡಿದ ಗೊಂಬೆಗಳನ್ನು ಪೂಜಿಸಲು ಪ್ರಾರಂಭಿಸಿದೆವೋ ಅವತ್ತಿನಿಂದಲೇ ನಮ್ಮ ಪತನ ಆರಂಭವಾಯಿತು.
ನಾವೇನು ಮಾಡಬೇಕು?
ಬೇರೆಯವರು ಮುಂದಕ್ಕೆ ಹೋಗುತ್ತಿದ್ದಾರೆ. ಮುಸ್ಲಿಮರಾಗಲಿ, ಕ್ರಿಶ್ಚಿಯನರಾಗಲಿ ಅವರ ಸಂಖ್ಯೆ ಜಾಸ್ತಿಯಾಗುತ್ತಾ ಇದೆ. ನಮ್ಮದೇ ಯಾಕೆ ಪೀಕಲಾಟ? ಯಾಕೆ? ಅವರು ಬುದ್ಧಿಪೂರ್ವಕವಾಗಿ ಕೆಲಸ ಮಾಡುತ್ತಿದ್ದಾರೆ. ಬಡವರಿಗೆ ಅನ್ನ ಬೇಕು, ಅನ್ನ ಕೊಡುತ್ತಾರೆ, ಬಟ್ಟೆ ಬೇಕು, ಕೊಡುತ್ತಾರೆ, ಮನೆ ಬೇಕು, ಕಟ್ಟಿಸಿಕೊಡುತ್ತಾರೆ. ಹೀಗೆ ಮಾಡಿ ಮಾಡಿ ಕ್ರಿಶ್ಚಿಯನರು ತಮ್ಮ ಸಂಖ್ಯೆ ಜಾಸ್ತಿ ಮಾಡಿಕೊಳ್ಳುತ್ತಿದ್ದಾರೆ. ನಾವು? ನಮ್ಮವರು ಬಡವರಾ? ಕೋಟ್ಯಾಧೀಶರಿದ್ದಾರೆ. ಪೇಪರಿನಲ್ಲಿ ಓದಿರಬಹುದು. ಆ ತಿರುಪತಿ ದೇವರಿಗೆ ೪೫ ಕೋಟಿ ಬೆಲೆ ಬಾಳುವ ವಜ್ರದ ಕಿರೀಟ ಮಾಡಿಸಿಕೊಡುತ್ತಾರೆ. ಆ ಗೊಂಬೆಗೆ ಏನು ಗೊತ್ತಾಗುತ್ತೆ? ಆ ವಜ್ರದ ಕಿರೀಟ ಇಡಿ, ತೆಗೆದು ಹಾಕಿ, ಮುಳ್ಳಿನ ಕಂತೆ ಇಡಿ, ಏನು ಮಾಡಿದರೂ ಸುಮ್ಮನಿರುತ್ತೆ. ಅದೇ ಹಸಿವಿರುವವರಿಗೆ ಅನ್ನ ಹಾಕುವುದಿಲ್ಲ. ಪೂರ್ಣ ತೃಪ್ತನಿಗೆ ನಾವು ಏನಾದರೂ ಕೊಟ್ಟು ತೃಪ್ತಿ ಕೊಡಲು ಸಾಧ್ಯವೇ? ದೇವರಿಗೆ ನೈವೇದ್ಯ ಅಂತ ಇಡ್ತೀವಿ. ಯಾವುದು ಆ ನೈವೇದ್ಯ? ಎಲ್ಲಿಂದ ಬಂತು? ತೆಂಗಿನಕಾಯಿಯಾಗಲಿ, ಹಣ್ಣು ಹಂಪಲಾಗಲೀ ಎಲ್ಲಿಂದ ಬಂತು? ನಾವು ಮಾಡಿದ್ದಾ? ಅದೂ ಭಗವಂತನದೇ. ಅವನದ್ದನ್ನೇ ಅವನಿಗೆ ಕೊಟ್ಟಂತೆ ಮಾಡಿ, ನಾವು ಹೇಳುತ್ತೇವೆ, ನಾನು ಭಗವದ್ಭಕ್ತ, ದೇವರಿಗಾಗಿ ಇಷ್ಟೊಂದು ಖರ್ಚು ಮಾಡಿದ್ದೇನೆ, ಅಂತ. (ಬಹಳ ವರ್ಷದ ಹಿಂದೆ) ಒಬ್ಬ ಶೆಟ್ಟಿ ಬೆಳಿಗ್ಗೆ ಬಂದಾಗ ಖುಷಿಯಲ್ಲಿದ್ದವನು ಸಾಯಂಕಾಲ ಮುಖ ಸಪ್ಪಗೆ ಹಾಕಿಕೊಂಡು ಬಂದ. ವಿಚಾರಿಸಿದರೆ 'ಕುದುರೆ ರೇಸಿನಲ್ಲಿ ಎಲ್ಲಾ ಕಳೆದುಕೊಂಡೆ. ಇಪ್ಪತ್ತೈದು ರೂಪಾಯಿ ಕೊಟ್ಟಿರಿ, ಶಿವಮೊಗ್ಗಕ್ಕೆ ಹೋಗಿ ವಾಪಸು ಕಳಿಸುತ್ತೇನೆ' ಅಂತ ಹೇಳಿದ. ಇದು ಭಗವದ್ಭಕ್ತರ ಲಕ್ಷಣವಾ? ಕುದುರೆ ಜೂಜಾಡುವುದು? (ಒಂದು ವೇದ ಮಂತ್ರವನ್ನು ಉಲ್ಲೇಖಿಸಿ) ಜೂಜಾಡಬಾರದು, ಕಷ್ಟಪಟ್ಟು ದುಡಿ, ದುಡಿಯಬೇಕು, ತಿನ್ನಬೇಕು, ಅದು ನಿಜವಾದ ಊಟ. ತಿನ್ನುವವರೇ ತುಂಬಾ ಇದ್ದು, ದುಡಿಯುವವರು ಇಲ್ಲದಿದ್ದರೆ! ಅನ್ನ ಎಲ್ಲಿಂದ ಬರಬೇಕು? ತುಂಬಾ ಕಷ್ಟ. ಸರ್ವಾಧಾರ ಪರಮಾತ್ಮ ಎಲ್ಲರಿಗೂ ಆಧಾರ ಹೌದು, ಆದರೆ ಸೋಮಾರಿಗಳ ಬಂಧು ಅಲ್ಲ. ಪರಮಾತ್ಮ ಎಲ್ಲರಿಗೂ ಕೊಡುತ್ತಾನೆ, ಯಾರಿಗೆ ಕೊಡುತ್ತಾನೆ? ದುಡಿಯುವವರಿಗೆ ಕೊಡುತ್ತಾನೆ. ವೇದ ಹೇಳುತ್ತೆ, ಕಷ್ಟ ಪಡು, ದುಡಿ, ಬೇರೆಯವರ ಶ್ರಮದ ಊಟ ನಮಗೆ ಬೇಡ, ನಮ್ಮ ಅನ್ನವನ್ನು ನಾವು ಸಂಪಾದಿಸೋಣ, ವೇದ ಹೀಗೆ ಹೇಳಿದರೆ ಇಂದು ನಾವು ನೋಡುತ್ತಿರುವುದೇನು? ಮನೆಯಲ್ಲಿ ಸಮಾರಂಭ, ಪೂಜೆ ಮಾಡಿ ಹೊಟ್ಟೆ ತುಂಬಿದವರಿಗೇ ಊಟ ಹಾಕುತ್ತೇವೆ, ಹಸಿದ ಭಿಕ್ಷುಕ ಹೊರಗೆ ಬೇಡಿ ಬಂದರೆ 'ಹೋಗಲೇ' ಅಂತ ಗದರಿಸಿ ಕಳಿಸಿಬಿಡುತ್ತೇವೆ. ಇದು ದಾನ ಮಾಡುವ ರೀತಿಯಾ? ಹಸಿದವರಿಗೆ ಅನ್ನ ಹಾಕಿ, ಬಟ್ಟೆ ಇಲ್ಲದವರಿಗೆ ಬಟ್ಟೆ ಕೊಡಿ, ಮನೆಯಿಲ್ಲದವರಿಗೆ ಮನೆ ಕಟ್ಟಿಸಿಕೊಡಿ, ಇದು ಪುಣ್ಯದ ಕೆಲಸ. ಇದು ನಿಮ್ಮ ಕರ್ತವ್ಯ. ಇದು ಬಿಟ್ಟು ಸ್ವಾರ್ಥಿಗಳಾಗಿ ನಿಮ್ಮ ಅಭಿವೃದ್ಧಿ ಮಾತ್ರ ಮಾಡಿಕೊಂಡರೆ ಅದು ದೇವರು ಮೆಚ್ಚುವ ಕೆಲಸವಲ್ಲ. ಯಾವತ್ತೂ ಕೂಡ ಸ್ವಾರ್ಥಿಗೆ ತಾನು ಮಾಡುವುದು ತಪ್ಪು ಅಂತ ಅನ್ನಿಸುವುದೇ ಇಲ್ಲ. ನನ್ನ ಅನ್ನ ಸಂಪಾದಿಸಿ ತಿನ್ನುತ್ತೇನೆ, ಆ ಸಂಪಾದನೆ ಹೇಗಾದರೂ ಸರಿ, ಹತ್ತು ಜನರ ತಲೆ ಒಡೆದಾದರೂ ಸರಿ, ಅನ್ನುವುದು ಅವರ ಮಾತು. ಬೇರೆಯವರ ಶ್ರಮದ ಫಲವನ್ನು ಕಿತ್ತುಕೊಂಡು ಅನ್ಯಾಯವಾಗಿ ಹಣ ಸಂಗ್ರಹಿಸಿಟ್ಟುಕೊಳ್ಳುವವರನ್ನು ಇಂದು ಕಾಣುತ್ತಿದ್ದೇವೆ. 'ಶತಹಸ್ತ ಸಮಾಹರ ಸಹಸ್ರಹಸ್ತ ಸಂ ಕಿರ| ಕೃತಸ್ಯ ಕಾರ್ಯಸ್ಯ ಚೇಹ ಸ್ಫಾತಿಂ ಸಮಾವಹ||' - ಈ ಮಂತ್ರದ ಅರ್ಥ, ನೂರು ಕೈಗಳಿಂದ ದುಡಿ, ಸಾವಿರ ಕೈಗಳಿಂದ ದಾನ ಮಾಡು ಅಂತ. ಇದರ ಅರ್ಥ ನಿಮಗಾಗಿ ಮಾತ್ರ, ನಿಮ್ಮ ಕುಟುಂಬಕ್ಕಾಗಿ ಮಾತ್ರ ನೀವು ದುಡಿಯಬಾರದು. ಸಮಾಜದ ಹಿತವನ್ನೂ ಪರಿಗಣಿಸಬೇಕು ಎಂದು. ಈ ಮಾತು ಎಲ್ಲರಿಗೂ ಅನ್ವಯಿಸುತ್ತೆ, ಬ್ರಹ್ಮಚಾರಿ, ಗೃಹಸ್ತ, ಸನ್ಯಾಸಿ, ಎಲ್ಲರಿಗೂ ಅನ್ವಯಿಸುತ್ತೆ. ಎಲ್ಲರ ಸುಖದಲ್ಲಿ ನಮ್ಮ ಸುಖ ಇದೆ. ಸರ್ವೇಜನಾಃ ಸುಖಿನೋ ಭವಂತು. ಎಲ್ಲರೂ ಅನ್ನುವಲ್ಲಿ ನಾವೂ ಸೇರುತ್ತೇವೆ. ಎಲ್ಲರಿಗೂ ಸಿಕ್ಕಿದರೆ ನಮಗೂ ಸಿಗುತ್ತೆ, ಯಾರಿಗೂ ಸಿಗದಿದ್ದರೆ ನಮಗೂ ಇಲ್ಲ ಅಷ್ಟೆ. ಇದು ಈ ವೇದ ಮಂತ್ರದ ಅರ್ಥ. ಅರ್ಥ ಮಾಡಿಕೊಂಡು ಅನುಸರಿಸಿದರೆ ನಮ್ಮದು ಶ್ರೇಷ್ಠ ಜೀವನವಾಗುತ್ತದೆ.
**************
-ಕ.ವೆಂ.ನಾಗರಾಜ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ