ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಸೆಪ್ಟೆಂಬರ್ 14, 2011

ಪಂ. ಸುಧಾಕರ ಚತುರ್ವೇದಿಯವರ ವಿಚಾರ ಲಹರಿ -೧


      ಶತಾಯುಷಿ ಪಂ. ಸುಧಾಕರ ಚತುರ್ವೇದಿಯವರ ಮಾತುಗಳು, ಅವರ ಶಿಷ್ಯ ಶ್ರೀ ಸುಧಾಕರ ಶರ್ಮರವರ ವಿಚಾರಗಳು, ಮಾತುಗಳನ್ನು ಕೇಳುತ್ತಾ ಹೋಗುತ್ತಿದ್ದಂತೆ ನನ್ನ ಅಂತರಂಗದ ಅನಿಸಿಕೆಗಳು ಗಟ್ಟಿಗೊಳ್ಳುತ್ತಾ ಹೋಗುತ್ತಿರುವ ಅನುಭವ ನನ್ನದು. ನಾನು ಹೊಂದಿದ್ದ ಭಾವನೆಗಳಿಗೆ ಆಧಾರ ಸಿಕ್ಕಿದ ಮತ್ತು ಅದು ಸರಿಯಾಗಿದೆ ಅನ್ನುವ ಸಂತಸ ಒಡಮೂಡುತ್ತಿದೆ. ಸತ್ಯದ ಸಂಗತಿಗಳು ಯಾರಿಂದಲೇ ಬರಲಿ - ಅವರು ಶತ್ರುಗಳೇ ಆಗಿರಲಿ - ಅದು ಸ್ವೀಕಾರಾರ್ಹ ಎಂಬ ದೃಷ್ಟಿ ಮತ್ತು ಪೂರ್ವಾಗ್ರಹವಿಲ್ಲದ ವಿಚಾರ ವಿಮರ್ಶೆಯಿಂದ ಹೊರಬರುವ ಸತ್ಯ ಸಿಹಿಯಾಗಿರುತ್ತದೆಯೆಂದು ಅಂದುಕೊಂಡಿದ್ದೇನೆ. ದಿನಾಂಕ ೧೦-೧೧-೨೦೧೧ರಂದು ಶನಿವಾರ ಸಾಯಂಕಾಲ (ಪ್ರತಿ ಶನಿವಾರ ಸತ್ಸಂಗವಿರುತ್ತದೆ) ಪಂ. ಸುಧಾಕರ ಚತುರ್ವೇದಿಯವರ ಬೆಂಗಳೂರಿನ ಜಯನಗರದಲ್ಲಿರುವ ಅವರ ಮನೆಯಲ್ಲಿ ನಡೆದ ಸತ್ಸಂಗದಲ್ಲಿ ನಾನು ಪಾಲ್ಗೊಂಡಿದ್ದು, ಅಂದು  ಅವರು ತಿಳಿಸಿದ ವಿಚಾರಗಳನ್ನು ಬರಹರೂಪದಲ್ಲಿಳಿಸಿ ನಿಮ್ಮೊಡನೆ ಹಂಚಿಕೊಳ್ಳುತ್ತಿರುವೆ.
ಸರ್ವಾಧಾರ ಪರಮಾತ್ಮ
    'ಸ್ಕಂಭೋದಾಧಾರ ಪೃಥಿವೀಮುತದ್ಯಾ . . . .' ಅಥರ್ವಣ ವೇದದ ಮಂತ್ರ ಇದು. ಪರಮಾತ್ಮನನ್ನು ಅನೇಕ ರೀತಿಯಲ್ಲಿ ವರ್ಣಿಸುವುದುಂಟು. ಇಲ್ಲಿ ಅವನನ್ನು ಕಂಬ ಎಂದು ಹೇಳಿದ್ದಾರೆ. ಭೂಲೋಕ ಪರಲೋಕಗಳನ್ನು ಕಂಬದಂತಿರುವ ಪರಮಾತ್ಮ ಎತ್ತಿ ಹಿಡಿದಿದ್ದಾನೆ ಎಂದು ಇದರ ಅರ್ಥ. ಅವನು ಎತ್ತಿ ಹಿಡಿಯದಿದ್ದರೆ ಎಲ್ಲವೂ ಛಿದ್ರ ಛಿದ್ರವೇ. ಭೂಮಿಯ ಆಕರ್ಷಣ ಶಕ್ತಿ ಸೀಮಿತ. ಎಲ್ಲಾ ಕಡೆ ವ್ಯಾಪಿಸಿಲ್ಲ. ಭೂಮಿಯ ಈ ಆಕರ್ಷಣ ಶಕ್ತಿ ಚಂದ್ರನನ್ನು ತನ್ನ ಸುತ್ತ ತಿರುಗುವಂತೆ ನೋಡಿಕೊಳ್ಳುತ್ತಿದೆ. ಈ ಆಕರ್ಷಣ ಶಕ್ತಿ ಇಲ್ಲದಿದ್ದರೆ ಚಂದ್ರ ಎಲ್ಲೋ, ನಾವು ಎಲ್ಲೋ! ಭಗವಂತನ ನಿಯಮವೇ ಹಾಗೆ. ಮನುಷ್ಯನ ನಿಯಮ ವ್ಯತ್ಯಾಸ ಆಗಬಹುದು. ಭಗವಂತನ ನಿಯಮ ವ್ಯತ್ಯಾಸವಾಗುವುದಿಲ್ಲ. 
ಒಂದು ರಾಜ್ಯಕ್ಕೆ ಹಲವರು ರಾಜರು!
     ನಾವು ಭಗವಂತನನ್ನು ಸಾರ್ವಕಾಲಿಕ, ಸಾರ್ವದೇಶಿಕ ಎಂತೆಲ್ಲಾ ಹೇಳುತ್ತೇವೆ. ನಮಗೆ ಬ್ರಹ್ಮಾಂಡ ಎಷ್ಟಿದೆ ಗೊತ್ತಿಲ್ಲ. ನಮ್ಮ ಸರ್ವ ಅನ್ನುವುದು ಚಿಕ್ಕದು. ಎಲ್ಲವನ್ನೂ ತಿಳಿಯುವುದು ನಮಗೆ ಸಾಧ್ಯವೇ ಇಲ್ಲ. ಅಷ್ಟೇ ಏಕೆ, ನಮ್ಮ ಭೂಮಿ ಬಗ್ಗೆ ತಿಳಿಯ ಹೊರಟರೆ ನಮ್ಮ ತಲೆ ತಿರುಗುತ್ತೆ. ನಮ್ಮ ಮನೆಯೇ ನಮಗೆ ಒಂದು ಪ್ರಪಂಚ. ಈ ಮನೆಯಲ್ಲೂ ಒಳಗೆ ಕುಳಿತವರಿಗೆ ಹೊರಗಿನವರು ಕಾಣುವುದಿಲ್ಲ, ಹೊರಗಿನವರಿಗೆ ಒಳಗಿರುವವರು ಕಾಣುವುದಿಲ್ಲ. ನಮ್ಮ ಪರಿಸ್ಥಿತಿ ಸಂಕುಚಿತ. ಹೀಗಿರುವಾಗ ನಾವು ಸರ್ವಜ್ಞರು ಅಂದುಕೊಂಡರೆ ಆ ಸರ್ವ ಅನ್ನುವ ಪದಕ್ಕೆ ಅರ್ಥವೇ ಇಲ್ಲ. ಯಾರೂ ಸರ್ವಜ್ಞರಲ್ಲ. ಈ ಮಾತು ಹೇಳಿದರೆ ಕೆಲವರಿಗೆ ಕೋಪ ಬರುತ್ತೆ. ಶಂಕರಾಚಾರ್ಯರು ಸರ್ವಜ್ಞರಲ್ಲವೇ, ರಾಮಾನುಜಾಚಾರ್ಯರು ಸರ್ವಜ್ಞರಲ್ಲವೇ, ಮಧ್ವರು ಸರ್ವಜ್ಞರಲ್ಲವಾ ಅನ್ನುತ್ತಾರೆ. (ಅವರು ತಮ್ಮನ್ನು ಸರ್ವಜ್ಞರು ಅಂದುಕೊಳ್ಳಲಿಲ್ಲ. ಅವರ ಅನುಯಾಯಿಗಳು ಅನ್ನುತ್ತಾರೆ.) ಇಷ್ಟೊಂದೆಲ್ಲಾ ಸರ್ವಜ್ಞರಿದ್ದರೆ ಆ ಸರ್ವನ ಗತಿಯೇನು? ಒಂದು ಭೂಪ್ರದೇಶವನ್ನು ಒಬ್ಬ ರಾಜ ಆಳಬಹುದು. ಅದೇ ೨೫ ರಾಜರು ಕಿತ್ತಾಡಿ ಆಳಿದರೆ ಆ ರಾಜ್ಯದಲ್ಲಿ ಬಾಳುವ ಪ್ರಜೆಗಳಿಗೆ ಏನು ಸುಖ? ಆದ್ದರಿಂದ ಒಬ್ಬ ನಿಯಾಮಕನನ್ನು ನಂಬಬೇಕು. ನನ್ನ ಗುರು ದೊಡ್ಡವನು, ನಿನ್ನ ಗುರು ಚಿಕ್ಕವನು ಅನ್ನುವ ಮಾತು ತಕ್ಕದ್ದಲ್ಲ. ಈಗಿನ ಕಾಲದಲ್ಲಿ ಗುರುಗಳ ಕಾಟ ಬಹಳ ಜಾಸ್ತಿ. ಕೆಲವರು ಗುರುಗಳಿಗೆ ಶಿಷ್ಯರೇ ಇಲ್ಲ. ಶಿಷ್ಯರುಗಳಿಗಿಂತ ಗುರುಗಳೇ ಜಾಸ್ತಿ ಈಗ. ಗುರು ಅಂದರೆ ಭಾರ, ದೊಡ್ಡವನು ಎಂದರ್ಥ. ಸತ್ಯವನ್ನು ಉಪದೇಶಿಸುವವನೇ ಗುರು. ಸತ್ಯ ಬಿಟ್ಟು ನಾನು ಹೇಳುವುದೇ ಸತ್ಯ ಎಂದು ತಮ್ಮ ಮನಸ್ಸಿಗೆ ಬಂದದ್ದನ್ನು ಹೇಳುತ್ತಾ ಹೋಗುತ್ತಾರೆ. ಆ ಗುರು ದೊಡ್ಡವನು, ಈ ಗುರು ಚಿಕ್ಕವನು ಅನ್ನುವುದೆಲ್ಲಾ ಇಲ್ಲ. ಸತ್ಯಮೇವ ಜಯತೇ ನಾನೃತಮ್. . . . . ದೇವಗುಣ ಸಂಪನ್ನರಿಗೆ, ದೇವಜ್ಞರಿಗೆ ಸತ್ಯ ಯೋಗ್ಯವಾದ ದಾರಿ ತೋರಿಸುತ್ತದೆ. ಸತ್ಯವನ್ನು ಆಶ್ರಯಿಸಿದರೆ ಮಾತ್ರ ಸುಖ. ಹಿಂದೆ ಮೇಷ್ಟ್ರಿಗೆ ವಿದ್ಯಾರ್ಥಿಗಳು ಹೆದರುತ್ತಿದ್ದರು. ಇಂದು ಮೇಷ್ಟ್ರೇ ಹುಡುಗರಿಗೆ ಹೆದರುತ್ತಾ ಶಾಲಾಕೊಠಡಿಗೆ ಹೋಗುತ್ತಾರೆ, ಯಾರು ಏನು ಕೀಟಲೆ ಮಾಡುತ್ತಾರೋ, ಏನು ತೊಂದರೆ ಕೊಡುತ್ತಾರೋ ಅಂತ! ಕಾಲ ಹಾಗೆ ಬಂದಿದೆ. ಅದಕ್ಕೇ ಈ ಪ್ರಪಂಚದಲ್ಲಿ ಶಾಂತಿ ಇಲ್ಲ. ಸುಖ ಶಾಂತಿ ಬೇಕೆಂದರೆ ಸತ್ಯವನ್ನು ಆಶ್ರಯಿಸಬೇಕು.
ಸತ್ಯಂ ಬ್ರೂಯಾತ್. .
     'ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನಬ್ರೂಯಾತ್ ಸತ್ಯಮಪ್ರಿಯಂ'. ಸತ್ಯ ಹೇಳಬೇಕು, ಆದರೆ ಆ ಸತ್ಯವನ್ನು ಹಿತವಾಗಿ ಹೇಳಬೇಕು, ಅಪ್ರಿಯವಾದ ಸತ್ಯ ಹೇಳಬಾರದು ಎಂದು ಇದರ ಅರ್ಥ. ಕುಂಟನನ್ನು ಕುಂಟ ಎಂದರೆ, ಕುರುಡನನ್ನು ಕುರುಡ ಎಂದರೆ ಅದು ಸತ್ಯ ಇದ್ದರೂ ಕೇಳಿಸಿಕೊಂಡವರಿಗೆ ನೋವಾಗುತ್ತದೆ. ನಮ್ಮ ಗುರುಗಳು ಹೇಳುತ್ತಿದ್ದರು, ಕುರುಡನನ್ನು ಪ್ರಜ್ಞಾಚಕ್ಷು ಎನ್ನಬೇಕು ಎಂದು. ಮಹರ್ಷಿ ದಯಾನಂದರ ಗುರು ಸ್ವಾಮಿ ವಿರಜಾನಂದರೂ ಕುರುಡರೇ. ಅವರು ನಿಜಕ್ಕೂ ಪ್ರಜ್ಞಾಚಕ್ಷುಗಳಾಗಿದ್ದರು. (ಪ್ರಾಸಂಗಿಕವಾಗಿ ಒಂದು ಕಥೆ:) ಒಬ್ಬ ಕಳ್ಳ ಒಬ್ಬ ಗುರು ಹತ್ತಿರ ಉಪದೇಶ ಕೇಳಲು ಹೋಗುತ್ತಿದ್ದ. ಸತ್ಯವನ್ನೇ ಹೇಳಬೇಕು ಎಂಬ ಗುರುಗಳ ಮಾತನ್ನು ಕೇಳಿದ ಕಳ್ಳ 'ನಾನು ನಿಜ ಹೇಳಿದರೆ ನನ್ನ ಜೀವನ ಹೇಗೆ ನಡೆಯಬೇಕು ಸ್ವಾಮಿ' ಅಂದಾಗ ಗುರು ಹೇಳಿದರು: 'ಸತ್ಯದ ಮಾರ್ಗದಲ್ಲಿ ನಡೆಯದಿದ್ದರೂ ಪರವಾಗಿಲ್ಲ, ಯಾರಾದರೂ ಕೇಳಿದರೆ ಸತ್ಯವನ್ನೇ ಹೇಳು'. ಅವನು ಒಮ್ಮೆ ದಾರಿಯಲ್ಲಿ ಹೋಗುತ್ತಿರುವಾಗ ಅವನನ್ನು ಒಬ್ಬರು ಕೇಳಿದರು: 'ಯಾವ ಕಡೆಗೆ ಪ್ರಯಾಣ?' ಕಳ್ಳ ಇಂಥವರ ಮನೆಗೆ ಕನ್ನ ಹಾಕಲು ಹೋಗುತ್ತಿದ್ದೇನೆ ಎಂದು ಸತ್ಯ ಹೇಳಿದರೆ ಅವನು ಸೀದಾ ಹೋಗುವುದು ಪೋಲಿಸ್ ಸ್ಟೇಷನ್ನಿಗೆ, ಜೈಲಿಗೆ!
ಕರ್ತವ್ಯ ಮತ್ತು ಮಾನಾಪಮಾನ
     ಪರಮಾತ್ಮ ಕಂಬದಂತೆ ಈ ಪ್ರಪಂಚ ಮತ್ತು ಆಕಾಶದಾಚೆಯಿರುವ ಪ್ರಪಂಚಗಳನ್ನೆಲ್ಲಾ ಆಧರಿಸಿದ್ದಾನೆ. ನಾವು ಸರ್ವಾಧಾರ ಪರಮಾತ್ಮನನ್ನು ಮರೆತುಬಿಡುತ್ತೇವೆ. ನಮಗೆ ಕಷ್ಟ ಬಂದಾಗ ಇನ್ನೇನಪ್ಪಾ ಗತಿ, ನಮ್ಮನ್ಯಾರು ಕಾಪಾಡುತ್ತಾರೆ ಅಂತ ಗೋಳಿಡುತ್ತೇವೆ. ಸರ್ವರಕ್ಷಕ ಅವನಿರುವಾಗ ಹೆದರುವುದು ಏಕೆ? ಹಿಂದೊಮ್ಮೆ ವಿಗ್ರಹಾರಾಧನೆ ವಿಷಯದಲ್ಲಿ ಚರ್ಚೆ ಏರ್ಪಾಡಾಯಿತು. ದಯಾನಂದರು ಒಂದು ಕಡೆ, ಕಾಶಿ ಪಂಡಿತರೆಲ್ಲಾ ಒಂದು ಕಡೆ. ಅಲ್ಲಿ ವಿಗ್ರಹಾರಾಧನೆ ವಿಷಯ ಬರಲೇ ಇಲ್ಲ. ವ್ಯಾಕರಣದ ಬಗ್ಗೆ ಕಿತ್ತಾಡಿದರು, ಆ ಸೂತ್ರ ಸರಿಯೋ ಈ ಸೂತ್ರ ಸರಿಯೋ ಅಂತ. ಎಲ್ಲಾ ಛಲ, ಕಪಟ. 'ಪ್ರತಿಮೆ ಇಲ್ಲದಿದ್ದರೆ ಮನಸ್ಸು ನಿಲ್ಲುವುದಿಲ್ಲ. ಪ್ರತಿಮಾರಾಧನೆ ಸಮರ್ಥಿಸುವ ವೇದಮಂತ್ರ ಇದು' ಎಂದು ಕೈಯಲ್ಲಿ ಬರೆದಿದ್ದ ಯಾವುದೋ ಕಾಗದವನ್ನು ಒಬ್ಬರು ದಯಾನಂದರಿಗೆ ಕೊಟ್ಟರು. ಅವರು ಅದು ಯಾವ ವೇದದ ಮಂತ್ರ ಎಂದು ನೋಡುತ್ತಿರುವಾಗ ಕಾಶಿ ಪಂಡಿತರೆಲ್ಲಾ ದಯಾನಂದರಿಗೆ ಉತ್ತರ ಕೊಡಲಾಗಲಿಲ್ಲ ಎಂದು ಎದ್ದುಬಿಟ್ಟರು. ಸಭೆಯಲ್ಲಿ ಗಲಾಟೆಯಾಯಿತು. ಪುಂಡರೂ ಅಲ್ಲಿ ಸೇರಿದ್ದು ದಯಾನಂದರ ಮೇಲೆ ಕಲ್ಲು, ಇಟ್ಟಿಗೆ ಚೂರುಗಳಿಂದ ಪ್ರಹಾರ ಮಾಡಿದರು. ಆ ಮಹಾತ್ಮ ಸಹಿಸಿಕೊಂಡು ಸ್ವಲ್ಪವೂ ಅಲುಗಾಡದೆ ಶಾಂತವಾಗಿದ್ದರು. ಶಾಸ್ತ್ರಾರ್ಥದ ಗತಿ ಹೀಗಾಯಿತು. ಸುಳ್ಳು ಗೆದ್ದಿತು. ಸತ್ಯ ಗೆಲ್ಲಲಿಲ್ಲ. ವಿಷಯ ತಿಳಿದ ಸಂತ ಈಶ್ವರ ಸಿಂಹ ಎಂಬ ಸಿಖ್ಖರ ಗುರು ದಯಾನಂದರನ್ನು ಕಾಣಲು ಬಂದರು. ದಯಾನಂದರ ಹತ್ತಿರ ಗಂಟೆಗಟ್ಟಲೇ ಮಾತನಾಡಿದರೂ ದಯಾನಂದರು ಗಲಾಟೆಯ ವಿಷಯ ಎತ್ತಲೇ ಇಲ್ಲ. ದಯಾನಂದರು ಹೊದ್ದಿದ್ದ ಶಾಲು ಜಾರಿದಾಗ ಅವರ ಎದೆಯ ಮೇಲೆ ಕಲ್ಲಿನ ಹೊಡೆತದಿಂದಾಗಿದ್ದ ದೊಡ್ಡ ಗಾಯ ಕಂಡಿತು. ಸಿಖ್ ಗುರು (ಮರುಗಿ) ವಿಚಾರಿಸಿದರು. "ಬಹಳ ಗಲಾಟೆಯಾಗಿದೆ. ಇಂದು ರಾತ್ರಿ ಕಳೆಯುವವವರೆಗಾದರೂ ಎಲ್ಲಾದರೂ ಅಡಗಿಕೊಂಡಿರುವುದು ಒಳ್ಳೆಯದು" ಎಂದು ಸಲಹೆ ಕೊಟ್ಟರು. ದಯಾನಂದರು ಹೇಳಿದರು: 'ನನ್ನ ಕರ್ತವ್ಯ ನಾನು ಮಾಡಿದ್ದೇನೆ. ಮಾನ, ಅವಮಾನಗಳಿಗೆ, ಕಷ್ಟ, ನಷ್ಟಗಳಿಗೆ ಅಂಜಿದರೆ ಸನ್ಯಾಸಿಗಳಿಗೆ ಸೇವೆ ಮಾಡಲಾಗುವುದಿಲ್ಲ. ಇಂದು ಕಲ್ಲು, ಇಟ್ಟಿಗೆಗಳಿಂದ ಹೊಡೆದಿದ್ದಾರೆ. ನಾಳೆ ಪುಷ್ಪವೃಷ್ಠಿ ಮಾಡುತ್ತಾರೆ. ಸುಖ-ದುಃಖಗಳೆರಡೂ ಕೂಡ ಆ ಭಗವಂತ ಕೊಟ್ಟ ವರದಾನ. ನಿಷ್ಠೆಯಿಂದ ಸತ್ಯ ಬಿಡದಿರುವುದೇ ನಮ್ಮ ಧರ್ಮ. ಪ್ರಪಂಚವೆಲ್ಲಾ ಎದುರಾಗಲಿ, ರಕ್ಷಿಸುವ ಪರಮಾತ್ಮ ರಕ್ಷಣೆ ಕೊಟ್ಟೇ ಕೊಡುತ್ತಾನೆ'. ಜ್ಞಾಪಕ ಇಟ್ಟುಕೊಳ್ಳಿ, ಸತ್ಯದ ದಾರಿ ಯಾವತ್ತೂ ಸುಲಭವಲ್ಲ. ಆ ದೇವರು ಎಲ್ಲರನ್ನೂ ಸಮಾನರಾಗಿ ನೋಡುತ್ತಾನೆ. ಒಳ್ಳೆಯವರನ್ನೂ ರಕ್ಷಿಸುತ್ತಾನೆ, ಕೆಟ್ಟವರನ್ನೂ ರಕ್ಷಿಸುತ್ತಾನೆ. ಭಾರತದಲ್ಲಿರುವವರು ಆಸ್ತಿಕರು (ಎನ್ನುತ್ತಾರೆ), ಅವರಿಗೂ ಅನ್ನ ಕೊಡುತ್ತಾನೆ. ರಷ್ಯದಲ್ಲಿರುವವರು ದೇವರೇ ಇಲ್ಲ ಅನ್ನುವ ನಾಸ್ತಿಕರು (ಎನ್ನುತ್ತಾರೆ), ಅವರಿಗೂ ಅನ್ನ ಕೊಡುತ್ತಾನೆ. ನೀನು ಅಂಥವನು, ಇಂಥವನು ಎಂದು ಹೊಗಳುವವರನ್ನು ಕಂಡು ಅವನೇನು ಉಬ್ಬಿ ನಾನು ದೊಡ್ಡ ದೇವರು ಅಂದುಕೊಂಡು ಹೊಗಳಿದವರಿಗೆ ದೊಡ್ಡ ಉಪಕಾರವನೇನೂ ಮಾಡುವುದಿಲ್ಲ. ಅವನನ್ನು ತೆಗಳಿದವರಿಗೆ, ಬೈದವರಿಗೆ ಸಿಟ್ಟು ಮಾಡಿಕೊಂಡು ಕೆಟ್ಟದನ್ನೂ ಮಾಡುವುದಿಲ್ಲ. ನಿಂದಾಸ್ತುತಿಗಳು ಮನುಷ್ಯರಿಗೇ ಹೊರತು ಪರಮಾತ್ಮನಿಗಿಲ್ಲ. ಹಾಗೆ ಮಾಡಿದರೆ ನಮಗೂ ಅವನಿಗೂ ಏನು ವ್ಯತ್ಯಾಸ? ಈಗ ಕೋರ್ಟುಗಳಲ್ಲಿ ಪ್ರಮಾಣ ಮಾಡಿಸುತ್ತಾರೆ: 'ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ, ನಾನು ಹೇಳುವುದೆಲ್ಲಾ ಸತ್ಯ' ಅಂತ. ಆದರೆ ಲಾಯರ್ ಹೇಳಿಕೊಟ್ಟಿರುತ್ತಾರೆ -ಸತ್ಯ ಅಂತ ಎಲ್ಲಾ ಹೇಳಿದರೆ ಕೆಡುತ್ತೀಯ, ನಾನು ಹೇಳಿಕೊಟ್ಟದ್ದೇ ಸತ್ಯ , ಅದನ್ನೇ ಹೇಳು ಅಂತ. (ನಾನು ತಮಾಷೆ ಮಾಡುತ್ತಿರುತ್ತೇನೆ) ಲಾಯರ್ ಅಂದರೆ ಲೈಯರ್ ಅಂತ! ಮಾಡುತ್ತಾ ಇರುವುದು ಹಾಗೇನೇ, ಇವತ್ತು ಇರುವುದೂ ಹಾಗೇನೇ.
. . . ಮುಂದುವರೆದಿದೆ.
**************
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ