ತಿಳಿಯಾಗಿರಲಿ ಮನ ದೋಷವಿರದಿರಲಿ
ಆನಂದ ತುಂಬಿರಲಿ ಮಂದಹಾಸವದಿರಲಿ |
ರೋಷವದು ದೂರ ವಿವೇಕ ಬಳಿಯಿರಲಿ
ಮಾನಸ ತಪದ ಫಲವೊಲಿಯಲಿ ಮೂಢ ||
ಗುರುಹಿರಿಯರ ಗೌರವವಿಸದವ ಹಾಳು
ಒಳಿತಿನಲಿ ಹುಳುಕರಸುವ ಸಂಶಯಿ ಹಾಳು
ಸಂಶಯಿಗೆ ಸುಖವಿಲ್ಲ ಇಹವಿಲ್ಲ ಪರವಿಲ್ಲ
ಪರರಿಗೂ ಅವನಿಂದ ಸುಖವಿಲ್ಲ ಮೂಢ ||
ಸುಖ ಬೇಕು ಮನುಜನಿಗೆ ದುಃಖ ಬೇಡ
ಸುಖಿಯು ಹೆಚ್ಚು ಸುಖ ಬಯಸುವನು |
ಬೇಡವೆನಿಸದ ದುಃಖಗಳೆರಗೆರಗಿ ಬರುತಿರಲು
ಸುಖವ ನಿನ್ನೊಳಗೆ ಅರಸು ಮೂಢ ||
ಲೌಕಿಕ ಸುಖಕಾಗಿ ಹೊರಗೆ ಸುತ್ತಲು ಬೇಕು
ಅಂತರಂಗದ ಸುಖಕೆ ಒಳಗೆ ಸಾಗಲು ಬೇಕು |
ಸುಖ ದುಃಖಗಳೆರಡು ಅವಳಿ ಜವಳಿಗಳು
ಒಂದು ಬಿಟ್ಟಿನ್ನೊಂದಿಲ್ಲ ಮೂಢ ||
****************
-ಕ.ವೆಂ.ನಾಗರಾಜ್.
`ಸುಖವ ನಿನ್ನೊಳಗೆ ಅರಸು' ಉತ್ತಮ ಸಾಲುಗಳ ಮೂಢನ ಕಗ್ಗ ಸರ್, ಅಭಿನ೦ದನೆಗಳು.
ಪ್ರತ್ಯುತ್ತರಅಳಿಸಿಪ್ರತಿವಂದಿಸುವೆ, ಪ್ರಭಾಮಣಿಯವರೇ.
ಪ್ರತ್ಯುತ್ತರಅಳಿಸಿ