ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಜುಲೈ 16, 2010

ಅಂಚೆ ಪುರಾಣ - 3

ಅಹರ್ನಿಶಿ ಸೇವಾಮಹೇ!
     ಮೈಸೂರಿನಿಂದ ಮೂರು ತಿಂಗಳ ತರಬೇತಿ ಮುಗಿಸಿಕೊಂಡು ಹಾಸನದ ಪ್ರಧಾನ ಅಂಚೆ ಕಛೇರಿಯಲ್ಲಿ ಕರ್ತವ್ಯಕ್ಕೆ ಹಾಜರಾದಾಗ ಪೋಸ್ಟ್ ಮಾಸ್ಟರ್ ಶಾನುಭಾಗರು ನನಗೆ ಪಾರ್ಸೆಲ್ ಶಾಖೆಯಲ್ಲಿ ಕೆಲಸ ಮಾಡಲು ಆದೇಶಿಸಿದರು. ಕೆಲಸದ ಅವಧಿ ಬೆಳಿಗ್ಗೆ 6-00ರಿಂದ 10-00 ಮತ್ತು ಮಧ್ಯಾಹ್ನ 2-00 ರಿಂದ 6-00 ಆಗಿತ್ತು. ಅಂಚೆ ಕಛೇರಿಗೆ ಸಮೀಪದ ಉತ್ತರ ಬಡಾವಣೆಯಲ್ಲಿ ಒಂದು ಕೊಠಡಿಯಲ್ಲಿ ಬಾಡಿಗೆಗೆ ವಾಸವಿದ್ದ ನಾನು ಬೆಳಿಗ್ಗೆ ಪ್ರಾತರ್ವಿಧಿಗಳನ್ನು ಮುಗಿಸಿಕೊಂಡು ಬೆಳಿಗ್ಗೆ 5-30ಕ್ಕೇ ಮನೆ ಬಿಡಬೇಕಾಗಿತ್ತು. ನನ್ನ ಹತ್ತಿರ ಕೈಗಡಿಯಾರವಿರಲಿಲ್ಲ. ಬೆಳಿಗ್ಗೆ ಎಚ್ಚರವಾದಾಗ ತಡವಾಯಿತೇನೋ ಎಂದು ಗಡಿಬಿಡಿಯಿಂದ ಎದ್ದು ತಣ್ಣೀರಿನಲ್ಲಿ ಸ್ನಾನ ಮುಗಿಸಿಕೊಂಡು ನನಗೆ ಇಷ್ಟವಾಗಿದ್ದ ಇಸ್ತ್ರಿ ಮಾಡಿದ ಹತ್ತಿ ಬಟ್ಟೆಯ ಬಿಳಿಯ ಪೈಜಾಮ ಮತ್ತು ಅರ್ಧ ತೋಳಿನ ಬಿಳಿಯ ಅಂಗಿ ಧರಿಸಿಕೊಂಡು ಲಗುಬಗೆಯಿಂದ ಹೊರಬಿದ್ದೆ. ಅರ್ಧ ದಾರಿಯಲ್ಲಿ ಬೀಟ್ ಪೋಲಿಸಿನವನೊಬ್ಬ ಅಡ್ಡಗಟ್ಡಿ "ಏಯ್, ಎಲ್ಲಿಗೆ ಹೊರಟೆ?" ಎಂದು ಗದರಿಸಿ ಕೇಳಿದ. ನಾನು "ಪೋಸ್ಟಾಫೀಸಿಗೆ" ಎಂದಾಗ ನನ್ನ ಕುತ್ತಿಗೆ ಪಟ್ಟಿ ಹಿಡಿದುಕೊಂಡು "ರಾತ್ರಿ ಒಂದು ಗಂಟೆಯಲ್ಲಿ ಎಂಥ ಪೋಸ್ಟಾಫೀಸು? ನಿಜ ಹೇಳು" ಎಂದಾಗ ನನಗೆ ಭಯವಾಯಿತು. ಅಂಜುತ್ತಲೇ "ಪೋಸ್ಟಾಫೀಸು 24 ಗಂಟೆ ಕೆಲಸ ಮಾಡುತ್ತದೆ. ಇಲ್ಲದಿದ್ದರೆ ಪೋಸ್ಟು ಎಲ್ಲರಿಗೆ ಸಮಯಕ್ಕೆ ಸರಿಯಾಗಿ ಹೇಗೆ ತಲುಪುತ್ತದೆ?" ಎಂದು ಉತ್ತರಿಸಿದೆ. ನನ್ನ ಸಮಜಾಯಿಷಿ ಆತನಿಗೆ ಸರಿಯಾಗಿ ಕಂಡಿರಬೇಕು. ನಾನು ಜಾಣನೋ, ಅವನು ದಡ್ಡನೋ ಗೊತ್ತಿಲ್ಲ. ನನ್ನನ್ನು ಮೇಲೆ ಕೆಳಗೆ ನೋಡಿದ ಆತನಿಗೆ ನಾನು ಕಳ್ಳನಲ್ಲ ಎಂದು ಕಂಡಿರಬೇಕು, "ಸರಿ, ಹೋಗು" ಎಂದು ಬಿಟ್ಟ. ನಾನು 'ಬದುಕಿದೆಯಾ, ಬಡಜೀವವೇ' ಎಂದುಕೊಂಡು ಹೊರಟೆ. 'ಈ ಮಧ್ಯ ರಾತ್ರಿಯಲ್ಲಿ ಏನು ಮಾಡುವುದಪ್ಪಾ, ಈ ಪೋಲೀಸು ಬೇರೆ ಇಲ್ಲೇ ಇದ್ದಾನೆ. ವಾಪಸು ರೂಮಿಗೆ ಹೋಗುವ ಹಾಗಿಲ್ಲ' ಎಂದುಕೊಂಡು ಮುಂದೆ ಹೋಗಿ ಬಸ್ ನಿಲ್ದಾಣಕ್ಕೆ ಹೋಗಿ ಕಲ್ಲು ಬೆಂಚಿನ ಮೇಲೆ ಬೆಳಗಾಗುವವರೆಗೆ ಕುಳಿತುಕೊಂಡೆ. ಪಕ್ಕದಲ್ಲಿದ್ದವರ ವಾಚು ನೋಡಿಕೊಂಡು ಬೆಳಿಗ್ಗೆ 5-45ಕ್ಕೆ ಅಂಚೆ ಕಛೇರಿಗೆ ಹೋದೆ. ಮೊದಲ ತಿಂಗಳ ಸಂಬಳವಾಗಿ 229 ರೂಪಾಯಿ ಸಿಕ್ಕಿತು. ಅದರಲ್ಲಿ 95 ರೂ. ಕೊಟ್ಟು ಒಂದು ಟೈಮ್ ಸ್ಟಾರ್ ವಾಚು ಕೊಂಡೆ. ನನ್ನ ಖರ್ಚಿಗೆ 34 ರೂ. ಇಟ್ಟುಕೊಂಡು 100 ರೂ. ಅನ್ನು ನನ್ನ ತಂದೆಗೆ ಮನಿಯಾರ್ಡರ್ ಮಾಡಿದೆ.
ಒದಗಿದ್ದ ಗಂಡಾಂತರ
     ಒಂದು ತಿಂಗಳು ಪಾರ್ಸೆಲ್ ಶಾಖೆಯಲ್ಲಿ ನನ್ನ ಕೆಲಸ ನೋಡಿ ಮೆಚ್ಚಿದ ಪೋಸ್ಟ್ ಮಾಸ್ಟರರು ನನ್ನನ್ನು ಉಳಿತಾಯ ಖಾತೆಯಲ್ಲಿ ಕೆಲಸ ಮಾಡಲು ಹಚ್ಚಿದರು. ಉಳಿತಾಯ ಶಾಖೆಯಲ್ಲಿ ಕೆಲಸ ಮಾಡುತ್ತಾ ಒಂದೆರಡು ತಿಂಗಳಾಗಿರಬಹುದು. ಆಗ ಈಗಿನಂತೆ ಜನರು ಹಣ ಜಮಾ ಮಾಡಲು ಚಲನ್ ಬರೆದುಕೊಡಬೇಕಾಗಿರಲಿಲ್ಲ. ಪಾಸ್ ಪುಸ್ತಕದ ಒಳಗೆ ಹಣ ಇಟ್ಟು ಕೊಟ್ಟರೆ ಸಾಕಿತ್ತು. ಅಂಚೆ ಗುಮಾಸ್ತ ಹಣ ಎಣಿಸಿ 'ಡಿಪಾಸಿಟ್ ಸ್ಲಿಪ್' ಎಂದು ಕತ್ತರಿಸಿ ಇಟ್ಟಿದ್ದ ತುಂಡು ಹಾಳೆಯಲ್ಲಿ ಖಾತೆ ವಿವರ ಮತ್ತು ಹಣದ ವಿವರ ಬರೆದುಕೊಂಡು, ಪಾಸ್ ಪುಸ್ತಕದಲ್ಲಿ ಮತ್ತು ಲೆಡ್ಜರ್ ನಲ್ಲಿ ದಾಖಲೆ ಮಾಡಿ ಸಬ್ ಪೋಸ್ಟ್ ಮಾಸ್ಟರರಿಗೆ ಸಹಿಗೆ ಕಳುಹಿಸುತ್ತಿದ್ದು, ಸಬ್ ಪೋಸ್ಟ್ ಮಾಸ್ಟರರು ತಮ್ಮ ಲಾಗ್ ಪುಸ್ತಕದಲ್ಲಿ ವಿವರ ಬರೆದುಕೊಂಡು ಪಾಸ್ ಪುಸ್ತಕಕ್ಕೆ ಸಹಿ ಮಾಡಿ ವಾಪಸು ಕೊಡುತ್ತಿದ್ದರು. ದಿನದ ವ್ಯವಹಾರದ ಸಮಯ ಮುಗಿದ ನಂತರ ಗುಮಾಸ್ತರ ಮತ್ತು ಸಬ್ ಪೋಸ್ಟ್ ಮಾಸ್ಟರರ ದಾಖಲಿತ ವಿವರಗಳು ತಾಳೆಯಾದ ನಂತರ ಹಣವನ್ನು ಲೆಕ್ಕಪತ್ರ ಶಾಖೆಗೆ ಜಮಾ ಮಾಡಬೇಕಾಗಿತ್ತು. ಒಮ್ಮೆ ಒಬ್ಬರು 1000 ರೂ. ಹಣವನ್ನು ಪಾಸ್ ಪುಸ್ತಕದ ಒಳಗೆ ಇಟ್ಟು ನನಗೆ ಕೊಟ್ಟಾಗ ನಾನು ಡಿಪಾಸಿಟ್ ಸ್ಲಿಪ್ ನಲ್ಲಿ 1000 ರೂ. ಎಂದು ಬರೆದುಕೊಂಡರೂ ಪಾಸ್ ಪುಸ್ತಕದಲ್ಲಿ ಮತ್ತು ಲೆಡ್ಜರಿನಲ್ಲಿ 10000 ರೂ. ಎಂದು ಬರೆದು ಸಹಿಗೆ ಕಳಿಸಿದ್ದೆ. ಸಹಿ ಆದ ಮೇಲೆ ಪಾಸ್ ಪುಸ್ತಕ ಖಾತೆದಾರರಿಗೆ ವಾಪಸು ಕೊಟ್ಟೆ. ಮಧ್ಯಾಹ್ನ ಲೆಕ್ಕ ತಾಳೆ ನೋಡಿದರೆ 9000 ರೂ. ಕಡಿಮೆ ಬಂತು. ನಾನು ಕೈತಪ್ಪಿನಿಂದ ಬರೆದಿದ್ದೆಂದು ಹೇಳಿದರೂ ಅದನ್ನು ಒಪ್ಪುವಂತಿರಲಿಲ್ಲ. 'Customer is never wrong' ಎಂಬುದು ಅಂಚೆ ಕಛೇರಿಯ ಧ್ಯೇಯ ವಾಕ್ಯವಾಗಿತ್ತು. ವಿಷಯ ಪೋಸ್ಟ್ ಮಾಸ್ಟರರ ಗಮನಕ್ಕೆ ಹೋಯಿತು. ಅವರು ಎಲ್ಲವನ್ನೂ ಕೇಳಿ "ನಾಗರಾಜ, ನಾನೇನೂ ಮಾಡುವಂತಿಲ್ಲ. ನಿನಗೆ ಅರ್ಧ ಗಂಟೆ ಸಮಯ ಕೊಡುತ್ತೇನೆ. ಅಷ್ಟರ ಒಳಗೆ ಸರಿ ಮಾಡಿ ತೋರಿಸು. ಇಲ್ಲದಿದ್ದರೆ 9000 ರೂ. ಕಟ್ಟು. ಇಲ್ಲದಿದ್ದರೆ ಪೋಲಿಸ್ ದೂರು ಕೊಡುವುದು ಅನಿವಾರ್ಯ" ಎಂದುಬಿಟ್ಟರು. ನನಗೆ ದಿಕ್ಕು ತೋಚಲಿಲ್ಲ. ನನಗೆ ಬರುವ 229 ರೂ. ಸಂಬಳದಲ್ಲಿ 9000 ರೂ. ಕಟ್ಟಲು ಸಾಧ್ಯವೇ? ಕೆಲಸಕ್ಕೆ ಸೇರಿ 3-4 ತಿಂಗಳಾಗಿದ್ದು ನನ್ನ ಹತ್ತಿರ ಬೇರೆ ಹಣವೂ ಇರಲಿಲ್ಲ. ಲೆಡ್ಜರಿನಲ್ಲಿದ್ದ ಖಾತದಾರರ ವಿಳಾಸ ನೋಡಿಕೊಂಡು ಆ ಭಾಗದ ಪೋಸ್ಟ್ ಮ್ಯಾನ್ ರನ್ನು ಕರೆದುಕೊಂಡು ಅವರನ್ನು ಹುಡುಕಿಕೊಂಡು ಹೊರಟೆ. ಅದೃಷ್ಟಕ್ಕೆ ಸ್ವಲ್ಪ ದೂರ ಹೋಗಿದ್ದಾಗ ದಾರಿಯಲ್ಲೇ ಅವರು ಸಿಕ್ಕರು. ನಾನು "ಸ್ವಲ್ಪ ನಿಮ್ಮ ಪಾಸ್ ಪುಸ್ತಕ ಕೊಡಿ, ನೋಡಬೇಕು" ಎಂದಾಗ ಪುಣ್ಯಕ್ಕೆ ಅವರ ಅಂಗಿ ಜೇಬಿನಲ್ಲೇ ಇಟ್ಟುಕೊಂಡಿದ್ದ ಪಾಸ್ ಪುಸ್ತಕ ತೆಗೆದುಕೊಟ್ಟರು. ನಾನು ಪಾಸ್ ಪುಸ್ತಕ ಕೈಗೆ ಬಂದ ತಕ್ಷಣ ಅದರಲ್ಲಿ 1000 ರೂ. ಎಂದು ತಿದ್ದುಪಡಿ ಮಾಡಿದೆ ಮತ್ತು ಅವರಿಗೆ ವಿಷಯ ತಿಳಿಸಿದೆ. ಅವರು "ನಾನು ಪಾಸ್ ಪುಸ್ತಕ ತೆಗೆದು ನೋಡಿರಲಿಲ್ಲ. ನೋಡಿದ್ದರೆ ನಿಮಗೆ ಪಾಸ್ ಪುಸ್ತಕ ಕೊಡುತ್ತಲೇ ಇರಲಿಲ್ಲ" ಎಂದರು. ಅವರು ತಮಾಷೆಗೆ ಹೇಳಿದರೋ, ನಿಜಕ್ಕೂ ಹೇಳಿದರೋ ಗೊತ್ತಿಲ್ಲ. ಅವರನ್ನು ಕೋರಿಕೊಂಡು ಅವರನ್ನೂ ಕರೆದುಕೊಂಡು ಪೋಸ್ಟ್ ಮಾಸ್ಟರರ ಬಳಿಗೆ ಬಂದೆ. ಲೆಕ್ಕ ತಾಳೆಯಾಗಿ ನನ್ನಲ್ಲಿದ್ದ ಅಂದಿನ ಹಣವನ್ನು ಲೆಕ್ಕ ಪತ್ರ ಶಾಖೆಗೆ ಜಮಾ ಮಾಡಿದಾಗಲೇ ನಾನು ಸರಾಗವಾಗಿ ಉಸಿರಾಡಿದ್ದು. ಹಿಂದೆಯೂ ಒಮ್ಮೆ ಒಬ್ಬ ಗುಮಾಸ್ತರು ಹೀಗೆಯೇ ಮಾಡಿ 9000 ರೂ. ಕಟ್ಟಿದ್ದರಂತೆ. ಇಲಾಖಾ ವಿಚಾರಣೆಯಾಗಿ ಅವರಿಗೆ ಶಿಕ್ಷೆಯೂ ಆಗಿತ್ತಂತೆ. ಈ ಘಟನೆ ನಂತರ ನಾನು ಹುಷಾರಾಗಿ ಕೆಲಸ ಮಾಡತೊಡಗಿದೆ.
-ಕ.ವೆಂ.ನಾಗರಾಜ್.
(ಕಾಲಘಟ್ಟ: 1972) ..... ಮುಂದುವರೆಯಲಿದೆ

1 ಕಾಮೆಂಟ್‌:

  1. Ksraghavendranavada
    04JUL2010 1:26
    ಬದುಕಿದೆಯಲ್ಲಾ ಬಡಜೀವವೇ ಅನ್ನಿಸಿರಬಹುದಲ್ಲ, ಹಣ ತಾಳೆಯಾದಾಗ...
    ಕುತೂಹಲಕಾರಿಯಾಗಿದೆ. ಮು೦ದುವರೆಸಿ..
    ಧನ್ಯವಾದಗಳು.

    Kavinagaraj
    04JUL2010 1:36
    ಅಲ್ಲವೇ ಮತ್ತೆ? ಧನ್ಯವಾದ, ನಾವಡರೇ.

    ಬೆಳ್ಳಾಲ ಗೋಪೀನಾಥ ರಾವ್
    04JUL2010 1:44
    ಕವಿಯವರೇ
    ಈಗ ಅದನ್ನು ಊಹಿಸಿದರೆ ನಗು ಬಂದರೂ ಆ ದಿನದ , ಕ್ಷಣದ ಸ್ಥಿತಿ...... ಅಲ್ಲವೇ? ಚೆನ್ನಾಗಿದೆ
    ದಯವಿಟ್ಟು ಇದನ್ನೂ ಓದಿ ..http://gopinatha2010.blogspot.com/

    ನಾರಾಯಣ ಭಾಗ್ವತ
    04JUL2010 6:13
    ಕವಿನಾಗರಾಜ್ ರವರೆ ವಂದನೆಗಳು
    ಅಂಚೆ ಪುರಾಣ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ.

    ASHOKKUMAR
    05JUL2010 8:51
    ರಾತ್ರಿ ಒಂದು ಗಂಟೆಗೆ ಕಚೇರಿಗೆ ಹೊರಟ ಘಟನೆ ತಮಾಷೆಯಾಗಿದೆ... :)

    Kavinagaraj
    05JUL2010 1:30
    ಹೌದು, ಸ್ವಾಮಿ. ಈಗ ನಾನೂ ಸಹ ಇದನ್ನು ತಮಾಷೆಯ ಘಟನೆಯಾಗಿಯೇ ನೆನೆಸಿಕೊಳ್ಳುತ್ತಿರುತ್ತೇನೆ. ಘಟನೆ ನಡೆದಾಗ ಮಾತ್ರ ತಮಾಷೆಯಾಗಿರಲಿಲ್ಲ. ಮೆಚ್ಚಿದ್ದಕ್ಕೆ ಧನ್ಯವಾದಗಳು, ಅಶೋಕಕುಮಾರರೇ.

    ಆರ್.ಶರ್ಮಾ.ತಲವಾಟ
    05JUL2010 9:19
    ಎರಡೂ ಕಾಲಘಟ್ಟ ತುಂಬಾ ಸುಂದರವಾಗಿ ಮೂಡಿಬಂದಿದೆ.
    ಧನ್ಯವಾದ್ಗಳು

    ಗೋಪಾಲ್ ಮಾ ಕುಲಕರ್ಣಿ
    05JUL2010 9:32
    ತುಂಬಾ ಚೆನ್ನಾಗಿದೆ.

    ಪ್ರತ್ಯುತ್ತರಅಳಿಸಿ