ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಜುಲೈ 16, 2010

ಸೇವಾ ಪುರಾಣ -5: ಇವನು ಫುಡ್ಇನ್ಸ್ ಪೆಕ್ಟರಾ? -5: ಮುದ ನೀಡಿದ ಮೆಚ್ಚುಗೆ

ಹೊಕ್ಕಿದ್ದ ಕೆಲಸದ ಭೂತ
     ಫುಡ್ ಇನ್ಸ್ ಪೆಕ್ಟರ್ ಹುದ್ದೆಯಿಂದ ನನ್ನನ್ನು ಗುಮಾಸ್ತರ ಹುದ್ದೆಗೆ ತಳ್ಳಿದಾಗ ನನಗೆ ಉಪಯೋಗವಿಲ್ಲದ ಶಾಖೆ ಎಂದು ಕರೆಯಲಾಗುತ್ತಿದ್ದ ಆಡಿಟ್ ಶಾಖೆಯೊಂದಿಗೆ ಇನ್ನಿತರ ಸಣ್ಣ ಪುಟ್ಟ ಕೆಲಸಗಳನ್ನು ವಹಿಸಲಾಯಿತು. ನನ್ನ ದೃಷ್ಟಿಯಲ್ಲಿ ಯಾವುದೂ ಉಪಯೋಗವಿಲ್ಲದ ಶಾಖೆ ಎಂಬುದಿರಲಿಲ್ಲ. ಧೂಳು ತಿನ್ನುತ್ತಿದ್ದ ಕಡತಗಳನ್ನು ಕೊಡವಿ ವಿಲೇವಾರಿಗೆ ಕ್ರಮ ವಹಿಸಿದೆ. ಅಧೀನ ಕಛೇರಿಯವರು ನನ್ನ ಬರವಣಿಗೆಯ ಕಾಟ ತಡೆಯಲಾರದೆ ಉತ್ತರ ಕೊಡಲೇಬೇಕಾಗುತ್ತಿತ್ತು. ಬಹಳಷ್ಟು ಪ್ರಕರಣಗಳಲ್ಲಿ ಹಣವನ್ನು ತಾವೇ ಕಟ್ಟಿ ಅಥವಾ ಸಂಬಂಧಪಡದಿದ್ದವರಿಂದಲಾದರೂ ಕಟ್ಟಿಸಿ ಆಡಿಟ್ ಆಕ್ಷೇಪಣೆಗಳನ್ನು ಮುಕ್ತಾಯಗೊಳಿಸುತ್ತಿದ್ದರು. ಇದರಿಂದ ಒಳ್ಳೆಯ ಪ್ರಗತಿಯಾಯಿತು. ಒಮ್ಮೆ ರೆಕಾರ್ಡ್ ರೂಮಿನಲ್ಲಿ ಕಟ್ಟಿಟ್ಟಿದ್ದ ಗೋಣಿಚೀಲವನ್ನು ಬಿಚ್ಚಿದಾಗ ಅದರಲ್ಲಿ ಲಕ್ಷಾಂತರ ಮೌಲ್ಯದ ಪ್ಲೆಡ್ಜ್ ಮಾಡಿದ ಮತ್ತು ಮಾಡಿರದ ರಾಷ್ತ್ರೀಯ ಉಳಿತಾಯ ಪತ್ರಗಳು ಕಂಡವು. ರದ್ದಿ ತುಂಬಿದಂತೆ ತುಂಬಿದ್ದ ಅವನ್ನು ವಿವಿಧ ಕಾರಣಗಳಿಗಾಗಿ ಭದ್ರತೆಯಾಗಿ ಮತ್ತು ಇನ್ನಿತರ ಕಾರಣಗಳಿಗಾಗಿ ಪಡೆದಿದ್ದವಾಗಿದ್ದವು. ಗುಮಾಸ್ತರುಗಳು ವರ್ಗಾವಣೆಯಾದಾಗ ಮತ್ತು ಇನ್ನಿತರ ಕಾರಣಗಳಿಗೆ ಬೇರೊಬ್ಬರಿಗೆ ಛಾರ್ಜು ವಹಿಸಿಕೊಡದೆ ಹೋಗಿದ್ದಂತಹ ಕಾಗದ ಪತ್ರಗಳನ್ನು ಆರೀತಿ ತುಂಬಿಸಿಡಲಾಗುತ್ತಿತ್ತಂತೆ. ಅದನ್ನು ಕೇಳುವವರು ಯಾರೂ ಇರಲಿಲ್ಲ. ಅಂತಹ ಯಾರೂ ಕೇಳದ ಕಾಗದ ಪತ್ರಗಳನ್ನು ಅಂಗಡಿಗೆ ತೂಕಕ್ಕೆ ಹಾಕಿ ಕಾಸು ಮಾಡಿಕೊಳ್ಲುವವರೂ ಇದ್ದರು. ಉಳಿತಾಯ ಪತ್ರಗಳನ್ನೆಲ್ಲಾ ಹೊರತೆಗೆದು ವಾರಸುದಾರರನ್ನು ಗುರುತಿಸಿ ನೋಟೀಸುಗಳನ್ನು ಕಳಿಸಿ ಅವರಿಗೆ ಹಿಂತಿರುಗಿಸಿದೆ. ವಾಯಿದೆ ಮುಗಿದಿದ್ದ, ಮರೆತೇ ಹೋಗಿದ್ದ ರಾಷ್ತ್ರೀಯ ಉಳಿತಾಯ ಪತ್ರಗಳು ಅನಿರೀಕ್ಷಿತವಾಗಿ ಕೈಗೆ ಸೇರಿದಾಗ ಅವರಿಗೆ ಸಂತೋಷವಾಗುತ್ತಿತ್ತು. ಎಷ್ಟೋ ಪ್ರಕರಣಗಳಲ್ಲಿ ಸಂಬಂಧಿಸಿದವರು ಸತ್ತೇ ಹೋಗಿದ್ದು ಅವರ ವಾರಸುದಾರರಿಗೆ ತಲುಪಿಸಿದಾಗ ಅವರಿಗೆ ಆಶ್ಚರ್ಯವಾಗಿತ್ತು. 'ಸ್ಮಶಾನಕ್ಕೆ ಹೋದ ಹೆಣ, ಸರ್ಕಾರಕ್ಕೆ ಸೇರಿದ ಹಣ' ಕುರಿತ ಗಾದೆ ಅವರ ಮಟ್ಟಿಗೆ ಸುಳ್ಳಾಗಿತ್ತು. ಒಂದಾನೊಂದು ಕಾಲದಲ್ಲಿ ರದ್ದಿ ಕಾಗದಕ್ಕೆ ಸಮನಾಗಿ ಹೋಗುತ್ತಿದ್ದುದನ್ನು ತಪ್ಪಿಸಿದೆನೆಂದು, ಏನೋ ಒಳ್ಳೆಯ ಕೆಲಸ ಮಾಡಿಬಿಟ್ಟೆನೆಂದು ನನಗೆ ಸಂತೋಷವಾಗಿತ್ತು.
     ಜನರು ಏನಾದರೂ ಕೆಲಸ ಮಾಡಿಸಿಕೊಳ್ಳಲು ಬರುವವರು ಹಣ ಕೊಡಲು ಬರುತ್ತಿದ್ದುದು ಸಾಮಾನ್ಯವಾಗಿತ್ತು. ನಾನು ಅದನ್ನು ತಿರಸ್ಕರಿಸಿ ಹಣ ದಾನ ಮಾಡಬಹುದಾದ ಸಂಘ ಸಂಸ್ಥೆಗಳು, ಯೋಜನೆಗಳು, ಕಾರ್ಯಗಳ ವಿವರ ಇಟ್ಟುಕೊಂಡಿದ್ದು ಅವುಗಳಿಗೆ ಕೊಡುವಂತೆ ಸೂಚಿಸುತ್ತಿದ್ದೆ. ಹಲವರು ಲಂಚದ ಬದಲು ಒಳ್ಳೆಯ ಕೆಲಸಕ್ಕೆ ಕೊಡುತ್ತಿದ್ದೇವೆಂಬ ಭಾವನೆಯಿಂದ ಹಣ ಕಳುಹಿಸಿ ನನಗೆ ತಿಳಿಸುತ್ತಿದ್ದುದು ನನಗೆ ಸಂತೋಷ ಕೊಡುತ್ತಿತ್ತು. ಏನನ್ನೋ ಸಾಧಿಸಿಬಿಡುತ್ತಿದ್ದೇನೆ ಎಂದು ಅಂದುಕೊಳ್ಳುತ್ತಿದ್ದೆ. ಕಛೇರಿಯಲ್ಲಿ ಮತ್ತು ಹೊರಗೆ ನಾನೊಬ್ಬ ಹುಚ್ಚ, ನಾಲಾಯಕ್ ಎಂದು ಅನ್ನಿಸಿಕೊಳ್ಳುತ್ತಿದ್ದರೆ ಮನೆಯಲ್ಲಿ 'ಮನೆಗೆ ಮಾರಿ, ಪರರಿಗುಪಕಾರಿ' ಎಂಬ ಬಿರುದು ಸಂಪಾದಿಸಿದ್ದೆ.
ಮುದ ನೀಡಿದ ಮೆಚ್ಚುಗೆ
     ಒಮ್ಮೆ ಅರಸಿಕೆರೆಯ ಸಿಮೆಂಟ್ ಡೀಲರ್ ನಾಗೇಂದ್ರಶೆಟ್ಟಿ ಎಂಬುವವರು ತಮ್ಮ ಸಿಮೆಂಟ್ ಪರವಾನಗಿ ನವೀಕರಣಕ್ಕೆ ಅರ್ಜಿ ಸಲ್ಲಿಸಿ ನನಗೆ ನೂರು ರೂ. ಕೊಡಬಂದಿದ್ದರು. ನಾನು ಬೇಡವೆಂದೆ. ಆ ಸಮಯಕ್ಕೆ ಸಾಹೇಬರು ನನಗೆ ಹೇಳಿಕಳಿಸಿದ್ದರಿಂದ ಛೇಂಬರಿಗೆ ಹೋಗಿ ವಾಪಸು ಬಂದಾಗ ಶೆಟ್ಟರು ಹೋಗಿದ್ದರು. ಆದರೆ ನನ್ನ ಡ್ರಾಯರಿನಲ್ಲಿ ನೂರು ರೂ. ಇತ್ತು. ಶೆಟ್ಟರೇ ಹಾಕಿಹೋಗಿದ್ದೆಂದು ಗೊತ್ತಾಯಿತು. ಶೆಟ್ಟರು ಅರಸಿಕೆರೆಯ ಜನಸಂಘದ ಸಕ್ರಿಯ ರಾಜಕಾರಣಿಯಾಗಿದ್ದರು. ನಾನು ಸಿಮೆಂಟ್ ಪರವಾನಗಿ ನವೀಕರಣವಾದ ನಂತರ ಅವರಿಗೆ ಒಂದು ಪತ್ರ ಬರೆದು "ನೀವು ಕೊಟ್ಟಿದ್ದ ಹಣವನ್ನು ಒಂದು ಸಮಾಜಸೇವಾ ಸಂಸ್ಥೆಗೆ ಕಳಿಸಿದ್ದು ರಸೀದಿಯನ್ನೂ ಪತ್ರದೊಂದಿಗೆ ಕಳಿಸಿರುವುದಾಗಿಯೂ, ನಿಮ್ಮಂತಹ ಹಿರಿಯರು ಬೇರೆಯವರಿಗೆ ಲಂಚ ಕೊಡದಿರಲು ಹೇಳುವುದು ಬಿಟ್ಟು ನೀವೇ ಲಂಚ ಕೊಡುವುದು ಎಷ್ಟರ ಮಟ್ಟಿಗೆ ಸರಿ?" ಎಂದು ಕೇಳಿದ್ದೆ. ಈ ಪ್ರಕರಣ ನಡೆದು ಎಷ್ಟೋ ತಿಂಗಳ ನಂತರ ಯಾವುದೊ ಕೆಲಸಕ್ಕೆ ಅರಸಿಕೆರೆಗೆ ಹೋಗಿದ್ದಾಗ ಶೆಟ್ಟರು ದಾರಿಯಲ್ಲಿ ಸಿಕ್ಕು ನನ್ನನ್ನು ಕರೆದುಕೊಂಡು ಅವರ ಅಂಗಡಿಗೆ ಹೋದರು. ಚಹಾ ತರಿಸಿಕೊಟ್ಟರು. ಅಂಗಡಿಯಲ್ಲಿ ಒಂದು ಪತ್ರವನ್ನು ಫ್ರೇಮ್ ಹಾಕಿಸಿ ಎಲ್ಲರೂ ನೋಡುವಂತೆ ಇಟ್ಟಿದ್ದುದನ್ನು ನನಗೆ ತೋರಿಸಿದರು. ಅದು ನಾನೇ ಅವರಿಗೆ ಬರೆದಿದ್ದ ಪತ್ರವಾಗಿತ್ತು. ನನಗೆ ನಿಜಕ್ಕೂ ಸಂತೋಷವಾಗಿತ್ತು.
ಲೆವಿ ಬತ್ತ ಸಂಗ್ರಹ
     ಆಗೆಲ್ಲಾ ಬತ್ತವನ್ನು ಲೆವಿ ರೂಪದಲ್ಲಿ ರೈತರಿಂದ ಸಂಗ್ರಹಿಸಲಾಗುತ್ತಿತ್ತು. ಬೆಳೆ ಕಟಾವಿಗೆ ಬರುವ ಮುಂಚೆ ಫುಡ್ ಜಮಾಬಂದಿ ನಡೆಸಲಾಗುತ್ತಿತ್ತು. ಬತ್ತ ಬೆಳೆದ ರೈತರ ವಿವರಗಳನ್ನು ಗ್ರಾಮಲೆಕ್ಕಿಗರು ನಿಗದಿತ ನಮೂನೆಗಳಲ್ಲಿ ಬರೆಯುತ್ತಿದ್ದರು. ಅದನ್ನು ತಾಲ್ಲೂಕು ಮಟ್ಟದಲ್ಲಿ ತಹಸೀಲ್ದಾರರು ಪರಿಶೀಲಿಸಿದ ನಂತರ ಜಿಲ್ಲಾ ಕಛೇರಿ ಸಿಬ್ಬಂದಿ ಬಂದು ಪರಿಶೀಲಿಸಿ ರೈತರು ಬತ್ತ ಬೆಳೆದ ವಿಸ್ತೀರ್ಣ ಆಧರಿಸಿ ರೈತರು ಕೊಡಬೇಕಾದ ಲೆವಿ ಬತ್ತದ ಪ್ರಮಾಣ ನಿರ್ಧರಿಸಲಾಗುತ್ತಿತ್ತು. ವಿವರ ಬರೆಯುವಾಗಲೇ ಗ್ರಾಮಲೆಕ್ಕಿಗರ ಮಟ್ಟದಲ್ಲೂ ಕೈಚಳಕ ನಡೆಯುತ್ತಿತ್ತು. ಜಿಲ್ಲೆಯಿಂದ ಎಷ್ಟು ಲೆವಿ ಸಂಗ್ರಹಿಸಬೇಕೆಂದು ಸರ್ಕಾರ ನಿರ್ಧರಿಸುತ್ತಿದ್ದು ತಾಲ್ಲೂಕುಗಳ ಗುರಿಯನ್ನು ಜಿಲ್ಲಾಧಿಕಾರಿಯವರು ನಿಗದಿಸುತ್ತಿದ್ದರು. ಗುರಿ ತಲುಪಲಾಗದಿದ್ದ ಸಂದರ್ಭಗಳಲ್ಲಿ ರೈತರುಗಳ ಮನೆಮನೆಗೆ ಹೋಗಿ ಜಪ್ತಿ ಮಾಡುವ ಸಂದರ್ಭಗಳೂ ಬರುತ್ತಿತ್ತು. ಬತ್ತ ಸಂಗ್ರಹಕ್ಕಾಗಿ ಕೆ.ಎಫ್.ಸಿ.ಎಸ್.ಸಿ., ಟಿ.ಎ.ಪಿ.ಸಿ.ಎಂ.ಎಸ್., ಇತ್ಯಾದಿಗಳ ಮೂಲಕ ಸಂಗ್ರಹಣಾ ಕೇಂದ್ರಗಳನ್ನು ತೆರೆಯಲಾಗುತ್ತಿತ್ತು. ಸಣ್ಣ, ಮಧ್ಯಮ ಮತ್ತು ದಪ್ಪ ಬತ್ತಗಳಿಗೆ ಸರ್ಕಾರ ಬೇರೆ ಬೇರೆ ದರಗಳನ್ನು ನಿಗದಿಸಿರುತ್ತಿತ್ತು. ರೈತರು ಸಣ್ಣ ಬತ್ತ ಬೆಳೆದಿದ್ದರೂ ದಪ್ಪ ಬತ್ತ ಖರೀದಿಸಿ ಲೆವಿ ಕೊಡುತ್ತಿದ್ದುದು ಸಾಮಾನ್ಯವಾಗಿತ್ತು. ಇದಕ್ಕೆಂದೇ ಮಧ್ಯವರ್ತಿಗಳೂ ಇರುತ್ತಿದ್ದರು. ಅಕ್ರಮಗಳು, ಲಂಚದ ವ್ಯವಹಾರ ಸಲೀಸಾಗಿ ಸಾಗುತ್ತಿತ್ತು. ಕೆಲವರು ಸಣ್ಣ ಬತ್ತವನ್ನೇ ಕೊಟ್ಟರೂ ಖರೀದಿ ಕೇಂದ್ರಗಳಲ್ಲಿ ಮತ್ತು ಸಂಗ್ರಹಣಾ ಕೇಂದ್ರಗಳಲ್ಲಿ ಅವು ದಪ್ಪ ಬತ್ತವಾಗಿ ಪರಿವರ್ತನೆ ಹೊಂದುತ್ತಿತ್ತು. ಮಧ್ಯವರ್ತಿಗಳಿಗೆ ಮತ್ತು ಆಹಾರ ಸಿಬ್ಬಂದಿಗೆ ಹಣ ಮಾಡಿಕೊಳ್ಳಲು ವಿಪುಲ ಅವಕಾಶವಿತ್ತು. ನ್ಯಾಯಬೆಲೆ ಅಂಗಡಿಗಳಲ್ಲಿ ಸಾಮಾನ್ಯವಾಗಿ ಕೆಂಪು ದಪ್ಪಕ್ಕಿಯೇ ಸಿಗುತ್ತಿದ್ದುದರ ಮೂಲ ಇದೇ ಆಗಿತ್ತು. ಹೆಚ್ಚು ಪಾಲಿಷ್ ಆಗಿರದೇ ಇರುತ್ತಿದ್ದುದರಿಂದ ಪೌಷ್ಟಿಕವಾಗಿತ್ತು ಎಂದು ಹೇಳಬಹುದಾಗಿತ್ತು!
ಗ್ರಾಮಸ್ಥರು ಕಲಿಸಿದ ಪಾಠ!
      ಮೊದಲೇ ಹೇಳಿದ್ದಂತೆ ಗುರಿ ತಲುಪಲಾಗದಿದ್ದಾಗ ಬಲವಂತದ ಲೆವಿ ವಸೂಲಿ ಮಾಡಬೇಕಾಗುತ್ತಿತ್ತು. ಇಂತಹ ಬಲವಂತದ ವಸೂಲಿಯಿಂದ ಅರಕಲಗೂಡು ತಾಲ್ಲೂಕಿನ ರೈತರು ಸಿಟ್ಟುಗೊಂಡಿದ್ದರು. ಒಮ್ಮೆ ಫುಡ್ ಅಸಿಸ್ಟೆಂಟರು ಇಬ್ಬರು ಸಿಬ್ಬಂದಿಯೊಂದಿಗೆ ಅರಕಲಗೂಡಿನ ರಾಮನಾಥಪುರಕ್ಕೆ ಲೆವಿ ವಸೂಲಿಗೆ ಹೋದಾಗ ಅಪರಾಹ್ನ ಸುಮಾರು 4-5 ಘಂಟೆಯಾಗಿತ್ತು. ರೈತರೊಂದಿಗೆ ಮಾತುಗಳು, ಚರ್ಚೆಗಳು ನಡೆದವು. ನಂತರದಲ್ಲಿ ಫುಡ್ ಅಸಿಸ್ಟೆಂಟರನ್ನು ಒಂದು ಮನೆಗೆ ಲಘು ಉಪಾಹಾರದ ಸಲುವಾಗಿ ಕರೆದೊಯ್ಯಲಾಯಿತು. ಹೊರಗೆ ಇದ್ದ ಅವರ ಜೀಪು ಡ್ರೈವರನನ್ನು ಸಾಹೇಬರಿಗೆ 'ಪಾನೀಯ'ದ ವ್ಯವಸ್ಥೆಯಿದೆಯೆಂದೂ ಅವರು ಬರುವುದು ತಡವಾಗುತ್ತಿದ್ದು ಅವರು ಹಿಂತಿರುಗಲು ಬೇರೆ ಕಾರು ಇದೆಯೆಂದೂ ತಿಳಿಸಿ ಆವನ ಕೈಗೆ ಸ್ವಲ್ಪ ಹಣ ತುರುಕಿ ಜೀಪಿನೊಂದಿಗೆ ಹಾಸನಕ್ಕೆ ಹಿಂತಿರುಗುವಂತೆ ಮಾಡಿದರು. ನಂತರ ಫುಡ್ ಅಸಿಸ್ಟೆಂಟರು ಮತ್ತು ಅವರ ಇಬ್ಬರು ಸಿಬ್ಬಂದಿಯನ್ನು ಆ ಮನೆಯಲ್ಲಿದ್ದಂತೆಯೇ ಹೊರಗಡೆಯಿಂದ ಬೀಗ ಹಾಕಿಬಿಟ್ಟರು. ಅದು ಒಂಟಿ ಮನೆಯಾಗಿದ್ದು ಕೂಗಿದರೂ ಕೇಳುವವರು ಇರಲಿಲ್ಲ. ಊರಿನವರಿಗೆ ವಿಷಯ ಗೊತ್ತಿದ್ದು ಅವರೂ ಸುಮ್ಮನಿದ್ದರು. ಆಗ ಮೊಬೈಲ್ ಫೋನೂ ಇರಲಿಲ್ಲ. ರಾತ್ರಿಯೆಲ್ಲಾ ಅವರು ಅಲ್ಲಿ ಊಟ, ನಿದ್ದೆಯಿಲ್ಲದೆ ಕಳೆಯಬೇಕಾಯಿತು. ಬೆಳಿಗ್ಗೆ ಯಾವುದೋ ಹೊತ್ತಿನಲ್ಲಿ ಹಾಕಿದ್ದ ಬೀಗ ತೆಗೆದಿದ್ದರು. ಅವರುಗಳು ಹೊರಗೆ ಬಂದು ನೋಡಿದರೆ ಅಲ್ಲಿ ಜೀಪೂ ಇರಲಿಲ್ಲ. ಜನರನ್ನು ಕೇಳಿದರೆ ತಮಗೆ ಗೊತ್ತಿಲ್ಲ, ಯಾರು ಮಾಡಿದರೋ ತಿಳಿದಿಲ್ಲ, ತಮಗೆ ಏನೂ ವಿಷಯವೇ ತಿಳಿದಿಲ್ಲ ಎಂದು ಹಾರಿಕೆ ಉತ್ತರ ಕೊಡುತ್ತಿದ್ದರು. ಮುಸಿ ಮುಸಿ ನಗುತ್ತಿದ್ದರು. ಸಾಹೇಬರು ಮತ್ತು ಅವರ ಸಿಬ್ಬಂದಿ ಬಸ್ ಹಿಡಿದು ಹಾಸನಕ್ಕೆ ಮರಳಿದರು. ನಂತರದಲ್ಲಿ ಗ್ರಾಮಸ್ಥರ ವಿರುದ್ಧ ಪೋಲಿಸ್ ದೂರು ಸಲ್ಲಿಕೆಯಾಯಿತು. ಅಂದಿನಿಂದ ಸಾಹೇಬರು ಅವರ ಪ್ಯಾಂಟ್ ಬೆಲ್ಟಿಗೆ ಎಲ್ಲರಿಗೂ ಕಾಣುವಂತೆ ರಿವಾಲ್ವರ್ ಸಿಕ್ಕಿಸಿಕೊಂಡ ನಂತರವೇ ಪ್ರವಾಸಕ್ಕೆ ಹೋಗುತ್ತಿದ್ದರು!
-ಕ.ವೆಂ.ನಾಗರಾಜ್.
(ಕಾಲಘಟ್ಟ: 1974-75) ... ಮುಂದುವರೆಯುವುದು.

1 ಕಾಮೆಂಟ್‌:

  1. ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ
    16JUL2010 10:21
    ಕವಿ ನಾಗರಾಜ್ ಅವರೇ,
    ನಿಮ್ಮ ಅನುಭವಗಳು ಒಂದಕ್ಕಿಂತ ಇನ್ನೊಂದು ರೋಚಕವಾಗಿವೆ.
    [ಅಂಗಡಿಯಲ್ಲಿ ಒಂದು ಪತ್ರವನ್ನು ಫ್ರೇಮ್ ಹಾಕಿಸಿ ಎಲ್ಲರೂ ನೋಡುವಂತೆ ಇಟ್ಟಿದ್ದುದನ್ನು ನನಗೆ ತೋರಿಸಿದರು. ಅದು ನಾನೇ ಅವರಿಗೆ ಬರೆದಿದ್ದ ಪತ್ರವಾಗಿತ್ತು. ನನಗೆ ನಿಜಕ್ಕೂ ಸಂತೋಷವಾಗಿತ್ತು.]
    ಹೌದು ... ಇದಕ್ಕಿಂತ ಹೆಚ್ಚಿನ ಸಮ್ಮಾನ ಯಾವುದಿದೆ? ನೀವೇ ಧನ್ಯರು.
    Kavi agaraj
    ನಿಜ, ಶಾಸ್ತ್ರಿಗಳೇ, ಅದನ್ನು ನೆನೆಸಿಕೊಂಡಾಗ ನನಗೂ ನಾನು ಏನೋ ಒಳ್ಳೆಯದು ಮಾಡಿದ್ದೆನೆಂದು ಅನ್ನಿಸುತ್ತಿರುತ್ತದೆ. ವಂದನೆಗಳು.

    ಮಾಲತಿ
    17JUL2010 10:44
    ನಿಜಕ್ಕು ನಿಮ್ಮ ಅನುಭವ ಓದುತಿದ್ದರೆ ಸಿನಿಮಾ ನೋಡಿದ ಅನುಭವವಾಗುತ್ತದೆ..ಹೀಗೆ ಮುಂದುವರೆಸಿ...

    Kavinagaraj
    17JUL2010 12:08
    ನಮಸ್ಕಾರ, ಮಾಲತಿಯವರೇ. ಜೀವನವೇ ಒಂದು ನಾಟಕರಂಗ ಅನ್ನುವ ಬದಲು ಸಿನೆಮಾ ಮಂದಿರ ಅನ್ನಬಹುದು. ಸಿನೆಮಾದ ಪಾತ್ರಧಾರಿಗಳು ನಾವು, ನೀವು!

    ಹೊಳೆ ನರಸೀಪುರ ಮಂಜುನಾಥ
    17JUL2010 9:19
    ಕವಿ ನಾಗರಾಜರೆ, ನಿಮ್ಮ ಒ೦ದೊ೦ದು ಅನುಭವಗಳೂ ಪ್ರಾಮಾಣಿಕತೆಯ ಬೆಲೆಯನ್ನು ಮತ್ತೆ ಮತ್ತೆ ತೋರಿಸಿ ಕೊಡುತ್ತಿವೆ. ನಿಮ್ಮ ಪತ್ರಕ್ಕೆ ಕಟ್ಟು ಗಾಜು ಹಾಕಿಸಿಟ್ಟ ಅರಸೀಕೆರೆಯ ಶೆಟ್ಟರಿಗೊ೦ದು ಹ್ಯಾಟ್ಸಾಫ್!

    ಸುರೇಶ್ ನಾಡಿಗ್
    17JUL2010 9:41
    ನಾಗರಾಜರೆ ನಿಮ್ಮ ಪೋನ್ ನಂ ಡಿಲಿಟ್ ಆಗಿದೆ. ದಯವಿಟ್ಟು ಮತ್ತೊಮ್ಮೆ ನನ್ನ
    sureshndg510@gmail.com ಕಳಿಸುತ್ತೀರಾ. ನಿಮ್ಮ ಬಳಿ ಒಂದು ಚರ್ಚೆ ಮಾಡಬೇಕಿದೆ. ಧನ್ಯವಾದಗಳು

    Vijay Pai
    17JUL2010 11:28
    ನಾಗರಾಜ ಅವರೆ..
    ತಮ್ಮ ಈ ಮಾಲಿಕೆಯ ಓದು ಆ ಕಾಲದ ಸರ್ಕಾರಿ ಕಛೇರಿಗಳ ವಾತಾವರಣವನ್ನು ತಿಳಿಸಿಕೊಡ್ತಾಯಿದೆ. ತಮ್ಮ ಅನುಭವಗಳು ರೋಚಕವಾಗಿವೆ. ಮುಂದಿನ ಕಂತುಗಳ ನಿರೀಕ್ಷೆಯಲ್ಲಿ...

    ಪ್ರತ್ಯುತ್ತರಅಳಿಸಿ