ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಜುಲೈ 16, 2010

ಸಾವು ಬದುಕಿದೆ ! !

ಸಾವು ಬದುಕಿದೆ ! !
     ಹೌದು, ಸಾವು ಬದುಕಿದೆ; ಬದುಕಿರುವುದು ಸಾವು ಮಾತ್ರ! ಆ ಸೃಷ್ಟಿಕರ್ತನಾದ ಬ್ರಹ್ಮ ಹುಟ್ಟುವಾಗಲೇ ಸಾವು ನಿಗದಿಸಿ ಕಳುಹಿಸುತ್ತಾನೆ. ಒಬ್ಬ ಮನುಷ್ಯ 100 ವರ್ಷ ಬದುಕಿರುತ್ತಾನೆಂದುಕೊಂಡರೆ ಆ ಕಾಲದಲ್ಲಿ ಸುಮಾರು 30x60x24x365x100 ಸಲ ಉಸಿರಾಡುತ್ತಾನೆ. ಪ್ರತಿಸಲ ಉಸಿರಾಡಿದಾಗಲೂ ಆಯಸ್ಸಿನಲ್ಲಿ ಅಷ್ಟು ಉಸಿರು ಕಡಿಮೆಯಾಗುತ್ತದೆ. ಅಂದರೆ ಆಗ ತಾನೇ ಹುಟ್ಟಿದ ಮಗು ಸಹ ಉಸಿರಾಡುತ್ತಾ ಆಡುತ್ತಾ ಸಾವಿಗೆ ಹತ್ತಿರವಾಗುತ್ತಾ ಹೋಗುತ್ತದೆ. ಆ ಉಸಿರು ಯಾವಾಗ ನಿಲ್ಲುತ್ತದೆ ಯಾರಿಗೆ ಗೊತ್ತು? ಕಣ್ತೆರೆದು ಪ್ರಪಂಚ ನೋಡುವ ಮುನ್ನವೇ ಸಾವು ಬರಬಹುದು. ತಂದೆ ತಾಯಿಯರ ಅಜಾಗರೂಕತೆ, ಅನೈತಿಕ ಸಂಬಂಧ, ದ್ವೇಶ, ಕಾಯಿಲೆ, ಅಪಘಾತ, ಪ್ರಕೃತಿ ವಿಕೋಪ, ಕುತೂಹಲ, ಆತ್ಮಹತ್ಯೆ, ಭಯೋತ್ಪಾದನೆ, ದರೋಡೆ, ಇತ್ಯಾದಿ ಯಾವುದೇ ರೂಪದಲ್ಲಿ ಸಾವು ಅರಿವು ಮೂಡುವ ಮುನ್ನವೇ ಬರಬಹುದು. 'ಈ ದೇಹದಿಂದ ದೂರನಾದೆ ಏಕೆ ಆತ್ಮನೇ, ಈ ಸಾವು ನ್ಯಾಯವೇ' ಎಂದು ಶೋಕಿಸುವಂತಿಲ್ಲ. ಏಕೆಂದರೆ ಸಾವೇ ನ್ಯಾಯ! ಬದುಕಿನ ಅನ್ಯಾಯವೇ ಸಾವಿನ ನ್ಯಾಯ!
     ಆದರೆ. . . . ಓ ದೇವರೇ, ನೀನು ಹೀಗೇಕೆ ಮಾಡಿದೆ? ಜನರು ತಾವು ಸಾಯುವುದೇ ಇಲ್ಲವೆಂದು ಭಾವಿಸುವಂತೆ ಮಾಡುವ ಯಾವ ಭ್ರಾಮಕ, ಮಾದಕ ಅಂಶವನ್ನು ಅವರಲ್ಲಿ ಸೇರಿಸಿರುವೆ? ಸಾಯುವುದು ಅವರಿಗೆ ಗೊತ್ತಿದ್ದರೆ ಬದುಕುತ್ತಿದ್ದರು. ಕೊನೆಯ ಪಕ್ಷ ಯಾವಾಗ ಸಾಯುತ್ತೇವೆಂದಾದರೂ ಗೊತ್ತಾಗಿದ್ದರೆ ಸ್ವಲ್ಪಕಾಲವಾದರೂ ಬದುಕುತ್ತಿದ್ದರು. ಬದುಕಿಯೇ ಇರುತ್ತೇವೆಂದು ಅವರು ಭಾವಿಸಿ ಸಾಯುವಂತೆ ಮಾಡಿರುವೆ! ಒಂಟೆಗಳ ಕಾಲಿಗೆ ಮಕ್ಕಳನ್ನು ಕಟ್ಟಿ ಓಟದ ಸ್ಪರ್ಧೆ ಏರ್ಪಡಿಸಿ ಆನಂದಿಸುವ ಜನರು ಇರುವಲ್ಲಿ, ಧರ್ಮದ ಹೆಸರಿನಲ್ಲಿ ಬಾಂಬುಗಳನ್ನು ಸಿಡಿಸಿ ಮಾರಣ ಹೋಮ ಮಾಡುವ ಮನೋಭಾವದವರು ಇರುವಲ್ಲಿ, ಹಣಕ್ಕಾಗಿ ಹೆತ್ತವರು, ಬಂಧುಗಳೆನ್ನದೆ ಯಾರನ್ನಾದರೂ ಕೊಲ್ಲಲು ಹಿಂಜರಿಯದವರಿರುವಲ್ಲಿ, ಅಧಿಕಾರಕ್ಕಾಗಿ ಹಣ, ಹೆಂಡ, ಖಂಡಗಳನ್ನು ಬಳಸಿ ಗೆದ್ದುಬಂದು ಅಧಿಕಾರವನ್ನು ಹಣ ಗಳಿಸುವ ಸಾಧನವಾಗಿ ಮಾಡಿಕೊಳ್ಳುವವರಿರುವಲ್ಲಿ, ದೇಶವನ್ನೆ ಮಾರಲು ಹಿಂದು ಮುಂದು ನೋಡದವರಿರುವಲ್ಲಿ ಬದುಕು ಸಾಯುತ್ತಿದೆ; ಸಾವು ಗಹಗಹಿಸಿ ನಗುತ್ತಿದೆ!
     ಟಿಪ್ ಟಾಪ್ ಯೂನಿಫಾರಮ್ ಧರಿಸಿ ಚಾಕೋಬಾರ್ ಗಳನ್ನು ಮೆಲ್ಲುತ್ತಾ ಕಾರಿನಲ್ಲಿ ಓಡಾಡುವ ಮಕ್ಕಳನ್ನು ಆಸೆಗಣ್ಣಿಂದ ನೋಡುತ್ತಾ ಮಕ್ಕಳ ಆಕಾರದ ಜೀವಗಳು ಏನಾದರೂ ಸಿಕ್ಕೀತೆಂದು ತಿಪ್ಪೆಯನ್ನು ಕೆದಕುತ್ತಿರುವಲ್ಲಿ, ಸತ್ತು ಗಂಟೆಗಳಾಗಿದ್ದರೂ ಇಂಟೆನ್ಸಿವ್ ಕೇರ್ ಯೂನಿಟ್ ನಲ್ಲಿರಿಸಿ ಕೃತಕ ಉಸಿರಾಟದ ಯಂತ್ರ ಅಳವಡಿಸಿ, ಡ್ರಿಪ್ಸ್ ಹಾಕಿ ಬಿಲ್ಲು ಎಷ್ಟು ಹೆಚ್ಚು ಮಾಡಬಹುದೆಂದು ಲೆಕ್ಕ ಹಾಕುವ ವೈದ್ಯರಿರುವಲ್ಲಿ, ನಿರ್ಗತಿಕ ವಿಧವೆಯರಿಗೆ ಮಾಸಾಶನ ಮಂಜೂರು ಮಾಡುವ ನೆಪದಲ್ಲಿ ಶೋಷಿಸುವ ನೌಕರ, ಅಧಿಕಾರಿಗಳಿರುವಲ್ಲಿ, ಕಮಿಷನ್, ಪರ್ಸೆಂಟೇಜ್ ನಿಗದಿಪಡಿಸಿ ನಂತರ ಯೋಜನೆಗಳನ್ನು ಸಿದ್ಧಪಡಿಸುವವರಿರುವಲ್ಲಿ ಬದುಕು ಚಿಕಿತ್ಸೆ ಇಲ್ಲದ ರೋಗದಂತೆ ನರಳಿ, ನರಳಿ ಸಾಯುತ್ತಿದೆ!
    ನನಗೆ ಕೂಗಿ ಕೂಗಿ ಹೇಳಬೇಕನ್ನಿಸುತ್ತಿದೆ, ರಸ್ತೆಯ ಮಧ್ಯದಲ್ಲಿ ನಿಂತು ಗಂಟಲು ಹರಿಯುವಂತೆ ಚೀರಬೇಕನ್ನಿಸುತ್ತಿದೆ! ಓ ನನ್ನ ಮಿತ್ರರೇ, ನೀವು ಸತ್ತಿದ್ದೀರಿ; ಸಾಯುತ್ತಿದ್ದೀರಿ! ಬದುಕಿದ್ದೇವೆಂಬ ಭ್ರಮೆಯಲ್ಲಿದ್ದೀರಿ! ಸಾಯುತ್ತಿರುವುದು ನಿಮಗೆ ಗೊತ್ತಾಗುತ್ತಿಲ್ಲ! ಗೊತ್ತು ಮಾಡಿಕೊಳ್ಳಿರಿ! ಸಾಯುತ್ತಿದ್ದೇವೆಂದು ನಿಮಗೆ ಗೊತ್ತಾದರೆ ಬದುಕಲು ಪ್ರಯತ್ನಿಸುವಿರಿ. ಸಾಯುತ್ತಾ ಬದುಕದಿರಿ; ಬದುಕಿ ಸಾಯಿರಿ!

2 ಕಾಮೆಂಟ್‌ಗಳು: