ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ಜುಲೈ 17, 2010

ಹೀಗೊಂದು ವರ್ಗಾವಣೆ

     ಇದು ಸುಮಾರು ಇಪ್ಪತ್ತೈದು ವರ್ಷಗಳ ಹಿಂದಿನ ಘಟನೆಯಾದರೂ ನನ್ನ ನೆನಪಿನಲ್ಲಿ ಉಳಿದಿದೆ. ನಾನಾಗ ಹೊಳೆನರಸಿಪುರದಲ್ಲಿ ಉಪತಹಸೀಲ್ದಾರನಾಗಿದ್ದೆ. ಆಗ ಕ್ಷೇತ್ರಾಭಿವೃದ್ಧಿ ಅಧಿಕಾರಿ ಕಛೇರಿ ಮತ್ತು ತಾಲ್ಲೂಕು ಅಭಿವೃದ್ಧಿ ಮಂಡಳಿ ಇತ್ತು. ಈಗ ರಾಜ್ಯ ಮಟ್ಟದ ನಾಯಕರಾಗಿರುವವರು ಆಗ ತಾಲ್ಲೂಕು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದರು. ತಿಂಗಳಿಗೆ ಒಮ್ಮೆ ನಡೆಯುವ ತಾಲ್ಲೂಕು ಅಭಿವೃದ್ಧಿ ಮಂಡಳಿ ಸಭೆಗೆ ನಾನು ಹಾಜರಾಗುತ್ತಿದ್ದೆ. ಒಮ್ಮೆ ಸಭೆ ನಡೆಯುವ 15 ನಿಮಿಷಗಳ ಮುಂಚೆ ಸಭೆ ನಡೆಯುವ ಸಭಾಂಗಣದಲ್ಲಿ ಕುಳಿತಿದ್ದೆ. ಅಧ್ಯಕ್ಷರು ಅರ್ಧ ಘಂಟೆ ತಡವಾಗಿ ಬಂದರು. ಸಭಾಂಗಣಕ್ಕೆ ಬರುವ ಮುನ್ನ ಅಧ್ಯಕ್ಷರು ಅವರ ಕೊಠಡಿಯಲ್ಲಿ ಕುಳಿತು ಕೆಲಕಾಲ ಸಮಾಲೋಚಿಸಿ ಸಭೆಗೆ ಬರುತ್ತಿದ್ದರು. ಆ ಸಮಯದಲ್ಲಿ ಅವರ ಕೊಠಡಿಯ ಹೊರಗೆ ಕ್ಷೇತ್ರಾಭಿವೃದ್ಧಿ ಅಧಿಕಾರಿಯ ಜವಾನ ನಾರಾಯಣ (ಹೆಸರು ಬದಲಿಸಿದೆ) ಗಟ್ಟಿ ಧ್ವನಿಯಲ್ಲಿ ಕೂಗಾಡುತ್ತಿದ್ದ. ಇನ್ನೊಬ್ಬ ಜವಾನ ರಂಗೇಗೌಡ ಅವನನ್ನು ಸುಮ್ಮನಿರಿಸುತ್ತಿದ್ದ. ಅವರ ನಡುವಿನ ಸಂಭಾಷಣೆ ಹೀಗಿತ್ತು:-
ರಂಗೇಗೌಡ: ಏ ಸುಮ್ಮನಿರೋ. ಒಳಗಡೆ ಅಧ್ಯಕ್ಷರು ಅವ್ರೆ.
ನಾರಾಯಣ: ಇದ್ದರೆ ಇರಲಿ ಬಿಡೋ, ಅವರೇನು ದ್ಯಾವರಾ?
ರಂ: ಏನು ಕುಡಕೊಂಡು ಬಂದಿದೀಯಾ? ಸ್ವಲ್ಪ ನಿಧಾನಕ್ಕೆ ಮಾತಾಡು. ಅವರಿಗೆ ಕೇಳುತ್ತೆ.
ನಾ: ಕುಡಿಯಾಕೆ ನೀನು ದುಡ್ ಕೊಟ್ಟಿದ್ಯಾ? ಕೇಳಿದ್ರೆ ಕೇಳ್ಲಿ ಬುಡು. ನಾನೇನು ಆಡಬಾರದ್ದು ಮಾತಾಡ್ತಿದೀನಾ?
ರಂ: ಸುಮ್ಕಿರ್ಲಾ. ಆಮ್ಯಾಕೆ ಎಡವಟ್ಟಾಯ್ತದೆ.
ನಾ: ಏನ್ಲಾ ಆಯ್ತದೆ? ನರ್ಸೀಪುರದಲ್ಲಿ ಬರೀ ಅಪ್ಪ ಮಕ್ಕಳದೇ ದರಬಾರು. ಎಲ್ಲಾ ಅವರು ಏಳ್ದಾಗೇ ನಡೀಬೇಕು.ಬಡವರ ಕಸ್ಟ ಯಾವ ನನ್ಮಗ ಕೇಳ್ತಾನೆ?
ರಂ: ಬ್ಯಾಡ ಸುಮ್ಕಿರ್ಲಾ. ಯಾಕೋ ನಿಂಗೆ ಗಾಸಾರ ಸರಿ ಇರಾಂಗ್ ಕಾಣಾಕಿಲ್ಲ.
ನಾ: ಏನ್ ಮಾಡ್ತಾರ್ಲಾ? ಟ್ರಾನ್ ಫರ್ ಮಾಡ್ತಾರೇನ್ಲಾ? ಮಾಡ್ಲಿ ಬುಡ್ಲಾ? ಅದಕ್ಕೆಲ್ಲಾ ನಾ ಯದರಾಕಿಲ್ಲ. ಆಸನ ಬುಟ್ ಯಲ್ಲಿಗಾದರೂ ಟ್ರಾನ್ ಫರ್ ಮಾಡ್ಲಿ. ಓಗ್ತೀನ್ ಕಣ್ಲಾ.
     ಒಳಗಡೆ ಅಧ್ಯಕ್ಷರು ಅಧಿಕಾರಿಗಳೊಂದಿಗೆ ಸಮಾಲೋಚಿಸುವುದನ್ನು ಬಿಟ್ಟು ಹೊರಗಿನ ಮಾತುಗಳನ್ನೇ ಕೇಳಿಸಿಕೊಳ್ಳುತ್ತಿದ್ದರು. ಬಿ.ಡಿ.ಓ.ರವರು 'ನಾರಾಯಣ ಒಳ್ಳೆಯವನೇ. ಯಾವತ್ತೂ ಹೀಗಾಡಿರಲಿಲ್ಲ. ಕುಡಕೊಂಡು ಬಂದಿದ್ದಾನೋ ಏನೋ' ಎಂದು ಸ್ವಗತದಂತೆ ಹೇಳಿದರು. ಆಮೇಲೆ ಅವರೇ ಹೊರಬಂದು ಗದರಿಸಿ ನಾರಾಯಣನನ್ನು ಗದರಿಸಿ ಕಳಿಸಿದರು. ಆಗಲೂ ನಾರಾಯಣ "ಏನಾಯ್ತದೆ ಆಗ್ಲಿ ಬುಡಿ ಸಾರ್. ಟ್ರಾನ್ ಫರ್ ಮಾಡಿದ್ರೆ ಮಾಡ್ಲಿ. ಆಸನ ಬುಟ್ ಎಲ್ ಆಕ್ತಾರೆ ಆಕ್ಲಿ, ಓಯ್ತೀನಿ" ಎನ್ನುತ್ತಲೇ ಅಲ್ಲಿಂದ ಜಾಗ ಖಾಲಿ ಮಾಡಿದ.
     ಅಧ್ಯಕ್ಷರಿಗೂ ಅಂದು ಮೂಡಿರಲಿಲ್ಲ. ಸಭೆ ಬೇಗ ಮುಕ್ತಾಯ ಕಂಡಿತು. ಸಭೆ ಮುಗಿದ ತಕ್ಷಣ ಅಧ್ಯಕ್ಷರು ಹಾಸನಕ್ಕೆ ಹೊರಟರು. ಮಧ್ಯಾಹ್ನ ನಾಲ್ಕು ಘಂಟೆ ವೇಳೆಗೆ ವಾಪಸು ಬರುವಾಗ ನಾರಾಯಣನನ್ನು ಹಾಸನಕ್ಕೆ ವರ್ಗಾವಣೆ ಮಾಡಿದ ಆದೇಶವನ್ನು ಕೈಲಿ ಹಿಡಿದುಕೊಂಡೇ ಬಂದಿದ್ದರು. ಬಿ.ಡಿ.ಓ.ರಿಗೆ ಹೇಳಿ ನಾರಾಯಣನನ್ನು ಆ ಕೂಡಲೇ ಕಛೇರಿಯಿಂದ ರಿಲೀವ್ ಮಾಡಿಸಿದರು. ಮರುದಿನ ಹಾಸನದ ಕಛೇರಿಯಲ್ಲಿ ಡ್ಯೂಟಿ ರಿಪೋರ್ಟು ಮಾಡಿಕೊಂಡು ಸಾಯಂಕಾಲ ಹೊಳೆನರಸೀಪುರಕ್ಕೆ ಬಂದ ನಾರಾಯಣ ಸೀದಾ ಅಧ್ಯಕ್ಷರ ಮನೆಗೆ ಹೋದ. ಅವರಿಗೆ ಅಡ್ಡಬಿದ್ದು "ಬುದ್ಧೀ, ತ್ಯಪ್ ತಿಳಿಬ್ಯಾಡಿ. ನಾನ್ ನಿಮ್ ಸಿಸ್ಯ. ಬಡವ. ನೆನ್ನೆ ನಾನು ಕುಡಿದಿರಲಿಲ್ಲ ಬುದ್ಧೀ. ನಂಗೆ ಆಸನಕ್ಕೇ ಟ್ರಾನ್ ಫರ್ ಬ್ಯಾಕಾಗಿತ್ತು ಬುದ್ಧೀ. ನನ್ನ ಎಂಡ್ರಿಗೆ ಉಸಾರಿಲ್ಲ. ಆಪ್ಲೇಸನ್ ಆಗಬ್ಯಾಕು. ಅದ್ಕೇ ಇಂಗ್ಮಾಡ್ದೆ. ನನ್ನ ತ್ಯಪ್ ಒಟ್ಟೆಗಾಕ್ಕಳಿ ಬುದ್ಧೀ" ಎಂದು ಹೇಳಿದಾಗ ಅಧ್ಯಕ್ಷರು ಸುಸ್ತು. "ಎಲಾ ಇವ್ನಾ!" ಅಂದುಕೊಂಡು ಸುಮ್ಕಾದರು.

1 ಕಾಮೆಂಟ್‌:

  1. ಚೇತನ್ ಕೋಡುವಳ್ಳಿ
    17JUN2010 4:48
    ಸಕತ್ ಕಣ್ರೀ

    Kavinagaraj
    17JUN2010 4:56
    ಧನ್ಯವಾದ, ಚಿಕ್ಕೂ.

    ಆಸು ಹೆಗ್ಡೆ
    17JUN2010 5:01
    ಯಾವ ಗುಂಡಿ ಒತ್ತಿದರೆ ಯಾವ ದೀಪ ಉರಿಯುತ್ತದೆ ಎನ್ನುವುದರ ಅರಿವು ನಾರಾಯಣನಿಗೆ ಚೆನ್ನಾಗಿಯೇ ಇತ್ತು.

    Kavinagaraj
    17JUN2010 5:02
    ಹೌದು, ಸುರೇಶ ಹೆಗ್ಡೆಯವರೇ.

    Ksraghavendranavada
    17JUN2010 5:07

    ಚತುರ ನಾರಾಯಣ....ಸೊಗಸಾಗಿದೆ. ನಮಸ್ಕಾರಗಳು.

    Kavinagaraj
    17JUN2010 5:11
    ಧನ್ಯವಾದ, ನಾವಡರೇ.

    Roopashree Krishnamurthy
    17JUN2010 5:31
    ಸೊಗಸಾಗಿದೆ.

    Kavinagaraj
    17JUN2010 5:44
    ಧನ್ಯವಾದ. -:)

    N ಅಂಜನ್ ಕುಮಾರ್
    17JUN2010 7:00
    ಶಕ್ತಿಯಿಂದ ಆಗದ್ದನ್ನು ಯುಕ್ತಿಯಿಂದ ಸಾಧಿಸಿದ ನಾರಾಯಣ. Necessity is the mother of invention ಎಂದು ಇದಕ್ಕೇ ಹೇಳುವುದು. ತುಂಬಾ ಚೆನ್ನಾಗಿದೆ. ನಮಸ್ಕಾರ.

    Kavinagaraj
    17JUN2010 9:57
    -:) ಧನ್ಯವಾದಗಳು.

    ಹೊಳೆ ನರಸೀಪುರ ಮಂಜುನಾಥ
    17JUN2010 7:05
    ನಾರಾಯಣನ ಐಡಿಯಾ ಮೆಚ್ಚುವಂಥದ್ದೇ! :)

    Kavinagaraj
    17JUN2010 9:58
    ಇಲ್ಲದಿದ್ದರೆ ಹೊಳೆನರಸಿಪುರದಲ್ಲಿ ಉಳಿಗಾಲವಿದೆಯೇ? ಧನ್ಯವಾದ, ಮಂಜುನಾಥ್.

    ವಸಂತ್ ಆರ್
    17JUN2010 10:11

    ತುಂಬಾ ಸೊಗಸಾಗಿದೆ kavinagaraj ಸರ್. ತುಂಬ ದಿನಗಳ ನಂತರ ನಿಮ್ಮ ಬರಹವನ್ನು ಓದಿದ್ದು ಚೆನ್ನಾಗಿದೆ.
    ವಸಂತ್

    Kavinagaraj
    17JUN2010 10:47
    ಧನ್ಯವಾದ, ವಸಂತ್.

    ಹರೀಶ್ ಆತ್ರೇಯ
    18JUN2010 8:20
    ಆತ್ಮೀಯ
    ನಾರಾಯಣ ರೆವರ್ಸ್ ಗೇರ್ ನಲ್ಲಿ ಹೊಡೆದ
    ಅಧಿಕಾರಿಗಳು ಬೇಸ್ತು ಹೊಡೆದರು
    ಚೆನ್ನಾಗಿದೆ ಚೆನ್ನಾಗಿದೆ
    ಹರಿ

    Kavinagaraj
    22JUN2010 11:37
    -:)

    ಸುರೇಶ್ ನಾಡಿಗ್
    18JUN2010 8:50
    ನಾಗರಾಜ್ ವರ್ಗಾವಣೆ ಕತೆ ಚೆನ್ನಾಗಿದೆ.

    Kavinagaraj
    22JUN2010 11:36
    -:)

    ಶ್ರೀಕಾoತ ಕಲಕೋಟಿ
    18JUN2010 11:34
    ಬುಧ್ಧಿವಂತ ನಾರಾಯಣ!
    ಈಗೀಗ ವರ್ಗಾವಣೆ ಆಗತಾನೆ ಇಲ್ಲಾರೀ..ಬೆಂಗಳೂರಿನಲ್ಲಿ ೧೫-೨೦ ವರ್ಷದಿಂದ ಅಲ್ಲೇ ಫೆವಿಕಾಲ್ ಅಂಟಿಸಿಕೊಂಡು ಕುತ್ತವರು ಬಹಳೇ ಇದ್ದಾರೆ.ಬೇರೆ ಕಡೆಗೆ ವರ್ಗ ಮಾಡಿದ್ರೆ ಸಿಕ್ಕಾ ಪಟ್ಟೆ ಹಣ ಸುರಿದು ಪರತ್ ಬೆಂಗಳೂರಿಗೆ.
    ಮೂರು ವರ್ಷಕ್ಕೊಮ್ಮೆ ವರ್ಗ ಮಾಡಬೇಕು ಎಂಬ ಕಾನೂನು ಇದೆ ಅಂತ ಕೇಳಿದ್ದೆ.(ಸರ್ ಎಂ ವಿ ಮಾಡಿದ್ದು ).
    ಈಗ ಅದೆಲ್ಲ ಆಗತಾನೆ ಇಲ್ಲ..ನನಗೆ ಗೊತ್ತಿರುವ ಮಟ್ಟಿಗೆ ಸಾಮಾನ್ಯ ವರ್ಗಾವಣೆ ಆಗಿ ಸುಮಾರು ೪ ವರ್ಷ ಅಂತೂ ಖಂಡಿತ ಆಗೇದ.

    Kavinagaraj
    22JUN2010 11:36
    -:)

    ಪ್ರತ್ಯುತ್ತರಅಳಿಸಿ