ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಜುಲೈ 21, 2010

ಸೇವಾ ಪುರಾಣ -7: ಸಂಕಷ್ಟದ ಸರಮಾಲೆ

ಸಂಕಷ್ಟದ ಸರಮಾಲೆ
     ಪ್ರಧಾನ ಮಂತ್ರಿಯಾಗಿದ್ದ ದಿ. ಶ್ರೀಮತಿ ಇಂದಿರಾಗಾಂಧಿಯವರು ತಮ್ಮ ಅಧಿಕಾರದ ಉಳಿವಿಗಾಗಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ವಿಚಾರದಲ್ಲಿ ಬಹಳಷ್ಟು ಪರ-ವಿರೋಧದ ಚರ್ಚೆಗಳಾಗಿವೆ. ಆ ಕುರಿತು ನನ್ನ ಅಭಿಪ್ರಾಯವನ್ನೂ ಸಹ ದಾಖಲಿಸಲು ನಾನು ಬಯಸಿಲ್ಲ. ಆದರೆ ಆ ಪರಿಸ್ಥಿತಿಯ ದುರ್ಲಾಭ ಪಡೆದು ಅನೇಕ ರೀತಿಯ ಬಹಳಷ್ಟು ಅನ್ಯಾಯಗಳು ಖಂಡಿತಾ ಜರುಗಿವೆ. ನನಗೆ ಆದ ಅನ್ಯಾಯ, ಅನುಭವಗಳನ್ನು ಮಾತ್ರ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ವಾರಕ್ಕೊಂದು ಕೇಸು
     ಜಿಲ್ಲಾಧಿಕಾರಿಯವರ ಆಪ್ತ ಸಹಾಯಕರು ನನ್ನನ್ನು ಗುಟ್ಟಾಗಿ ಕರೆದು ನಾನು ಕೂಗಾಡಿ ಹೋದ ಮೇಲೆ ಜಿಲ್ಲಾಧಿಕಾರಿಯವರು ಜಿಲ್ಲಾ ಪೋಲಿಸ್ ಸೂಪರಿಂಟೆಂಡೆಂಟರೊಂದಿಗೆ ಬಹಳ ಹೊತ್ತು ನನ್ನ ಬಗ್ಗೆ ಮಾತನಾಡಿದರೆಂದೂ ನಾನು ಹುಷಾರಾಗಿರಬೇಕೆಂದೂ ತಿಳಿಸಿದ್ದರು. ಅದಕ್ಕೆ ತಕ್ಕಂತೆ ನನ್ನ ಮೇಲೆ ವಾರ, ಹತ್ತು, ಹದಿನೈದು ದಿನಗಳಿಗೊಮ್ಮೆ ಸುಳ್ಳು ಕ್ರಿಮಿನಲ್ ಕೇಸುಗಳನ್ನು ಹಾಕಲು ಪ್ರಾರಂಭಿಸಿದರು. ಕೆಳ ಕೋರ್ಟಿನಲ್ಲಿ ಜಾಮೀನು ಸಿಕ್ಕಿದರೆ, ನನ್ನಂತೆ ತೀರ್ಪು ಬಂದರೆ ಸೆಷನ್ಸ್ ಕೋರ್ಟಿಗೆ ಸರ್ಕಾರದಿಂದ ಮೇಲುಮನವಿ ಸಲ್ಲಿಸುತ್ತಿದ್ದರು. ಅಲ್ಲೂ ನನ್ನ ಪರವಾಗಿ ಆದೇಶವಾದರೆ ಹೈಕೋರ್ಟಿನಲ್ಲಿ ಮೇಲು ಮನವಿ ಸಲ್ಲಿಸುತ್ತಿದ್ದರು. ನನಗೆ ಕೋರ್ಟುಗಳಿಗೆ ಹಾಜರಾಗಬೇಕಾದ ದಿನಾಂಕಗಳನ್ನು ನೆನಪಿಟ್ಟುಕೊಳ್ಳಲು ಒಂದು ದಿನಚರಿಯನ್ನೇ ಇಟ್ಟುಕೊಳ್ಳಬೇಕಾಯಿತು. ದಿನ ಬೆಳಗಾದರೆ ನಾನು ಮತ್ತು ನನ್ನ ತಂದೆ ಲಾಯರರ ಮನೆಗೆ ಎಡತಾಕುವುದೇ ಕೆಲಸವಾಯಿತು. ನನ್ನನ್ನು ಎಂತಹ ಭಯಂಕರ ಅಪರಾಧಿಯೆಂಬಂತೆ ಬಿಂಬಿಸಲಾಗಿತ್ತೆಂದರೆ ನಾನು ಪ್ರತಿದಿನ ಪೋಲಿಸ್ ಠಾಣೆಗೆ ಹೋಗಿ ಹಾಜರಿ ಹಾಕಿ ಬರಬೇಕಾಗಿತ್ತು. ಹಾಸನಕ್ಕೆ ಯಾರೇ ರಾಜಕೀಯ ಮುಖಂಡರು, ನೇತಾರರು ಬಂದರೆ ಅವರು ಬಂದು ಹೋಗುವವರೆಗೆ ನನ್ನನ್ನು ಇತರರೊಂದಿಗೆ ಪೋಲಿಸ್ ಠಾಣೆಯಲ್ಲಿ ಕುಳ್ಳಿರಿಸಿ ಅವರು ಹೋದ ನಂತರ ಬಿಟ್ಟು ಕಳಿಸುತ್ತಿದ್ದರು. ಹೊತ್ತಲ್ಲದ ಹೊತ್ತಿನಲ್ಲಿ ಪೋಲಿಸ್ ಜೀಪು ನನ್ನ ಮನೆಯ ಬಳಿ ಬರುವುದು, ನನ್ನನ್ನು ಕರೆದುಕೊಂಡು ಹೋಗುವುದನ್ನು ನೋಡುತ್ತಿದ್ದ ಅಕ್ಕ ಪಕ್ಕದ ಮನೆಯವರಿಗೆ ನನ್ನ ಬಗ್ಗೆ ಏನೋ ಅನ್ನಿಸುತ್ತಿತ್ತು. ಗುಸುಗುಸು ಮಾತಾಡುತ್ತಿದ್ದರು. ನಮಗೆಲ್ಲಾ ಮಾನಸಿಕವಾಗಿ ಬಹಳ ಹಿಂಸೆಯಾಗುತ್ತಿತ್ತು. ಹೀಗಾಗಿ ಒಮ್ಮೆ ಕೇಸು ಹಾಕಿದಾಗ ಜಾಮೀನು ಪಡೆಯಲು ಇಚ್ಛಿಸದೆ ಜೈಲಿನಲ್ಲೇ ಉಳಿದೆ. ಹೊರಗಿನ ವಾತಾವರಣಕ್ಕಿಂತ ಜೈಲೇ ವಾಸಿಯೆಂದು ನನಗೆ ಅನ್ನಿಸಿತ್ತು. ಅಲ್ಲದೆ ಹೊಸ ಕೇಸುಗಳಿಂದಲೂ ಪಾರಾಗಲು ಅದೂ ಒಂದು ಮಾರ್ಗವಾಗಿತ್ತು. ಹೀಗಾಗಿ ಆರು ತಿಂಗಳು ಹಾಸನದ ಜೈಲಿನಲ್ಲಿಯೇ ಇದ್ದೆ. ಆ ಪ್ರಕರಣದಲ್ಲಿ ನನ್ನ ಪರವಾಗಿ ತೀರ್ಪು ಬಂದಾಗಲೇ ಹೊರಗೆ ಬಂದಿದ್ದು. ನಾನು ಎಷ್ಟು ರೋಸಿ ಹೋಗಿದ್ದೆನೆಂದರೆ ಕೇಸುಗಳ ಭರಾಟೆಯಿಂದ ನನ್ನ ನೌಕರಿ ಹೋಗುವುದೆಂದೇ ಭಾವಿಸಿದ್ದೆ. ನನ್ನ ಸ್ನೇಹಿತರು, ಕಛೇರಿಯ ಸಹೋದ್ಯೋಗಿಗಳು ನನ್ನೊಡನೆ ಮಾತನಾಡಲೇ ಹೆದರುತ್ತಿದ್ದರು. ಎಲ್ಲಿ ಅವರನ್ನೂ ನನ್ನೊಂದಿಗೆ ಸೇರಿಸಿಬಿಡುತ್ತಾರೋ ಎಂಬ ಭಯ ಅವರಿಗೆ ಇತ್ತು. ತುರ್ತು ಪರಿಸ್ಥಿತಿ ಮುಗಿಯುವವರೆಗೆ ಮಾತನಾಡಿಸಬೇಡವೆಂದು ಕೈಮುಗಿದು ಕೇಳಿಕೊಂಡವರೂ ಇದ್ದರು. ನಾನೊಬ್ಬ ಒಂಟಿಯಾಗಿದ್ದೆ. ಹಿರಿಯ ವಕೀಲರಾದ ಶ್ರೀ ಹಾರನಹಳ್ಳಿ ರಾಮಸ್ವಾಮಿ ಮತ್ತು ಶ್ರೀ ಬಿ.ಎಸ್. ವೆಂಕಟೇಶಮೂರ್ತಿಯವರ ಸಹಾಯವನ್ನು ನಾನು ಮರೆಯಲಾರೆ. ಹೆಚ್ಚಿನ ಪ್ರಕರಣಗಳು ನನ್ನಂತೆ ತೀರ್ಮಾನವಾಗಿದ್ದರೆ ಉಳಿದ ಪ್ರಕರಣಗಳನ್ನು ತುರ್ತು ಪರಿಸ್ಥಿತಿ ಹೋದ ನಂತರ ಸರ್ಕಾರವೇ ವಾಪಸು ಪಡೆದಿತ್ತು. ಅವರುಗಳು ಯಾವುದೇ ಪ್ರಕರಣಗಳಿಗೆ ಸಂಬಂಧಿಸಿದಂತೆ ನನ್ನಿಂದ ಶುಲ್ಕ ತೆಗೆದುಕೊಳ್ಳಲು ಒಪ್ಪಲಿಲ್ಲ. ನನ್ನ ತಂದೆಯವರು ಕೋರ್ಟಿನಲ್ಲಿ ಶಿರಸ್ತೇದಾರರಾಗಿದ್ದುದು ಒಂದು ಕಾರಣವಾಗಿದ್ದರೆ, ಪ್ರಮುಖ ಕಾರಣ ತುರ್ತು ಪರಿಸ್ಥಿತಿಯ ಅನ್ಯಾಯದ ಪ್ರಕರಣಗಳ ವಿರುದ್ಧ ವಾದಿಸಿದ್ದುದು ತಮ್ಮ ಕರ್ತವ್ಯವೆಂದು ಅವರುಗಳು ಭಾವಿಸಿದ್ದುದು!
ನಮಸ್ಕಾರ ಮಾಡದಿದ್ದಕ್ಕೆ ಕೇಸು!
     ಹಾಜರಾತಿ ಹಾಕಲು ಪೋಲಿಸ್ ಠಾಣೆಗೆ ಹೋದಾಗ ರಸ್ತೆಯಲ್ಲಿ ಓಡಾಡುವಾಗ ಎದುರಿಗೆ ಸಿಗುತ್ತಿದ್ದ ಹೆಡ್ ಕಾನ್ಸ್ ಟೇಬಲ್ ಒಬ್ಬರು ನನ್ನಿಂದ ನಮಸ್ಕಾರ ನಿರೀಕ್ಷೆ ಮಾಡುತ್ತಿದ್ದರು. ನಾನು ಅವರನ್ನು ಗಮನಿಸದಂತೆ ಹೋಗುತ್ತಿದ್ದುದು ಅವರನ್ನು ಕೆರಳಿಸುತ್ತಿತ್ತೇನೋ! ನಾನು ನಮಸ್ಕಾರ ಮಾಡದಿದ್ದುದು ಅವರಿಗೆ ಸಹನೆಯಾಗುತ್ತಿರಲಿಲ್ಲವೆನ್ನುವುದು ಅವರ ವರ್ತನೆಯಿಂದ ನನಗೆ ಗೊತ್ತಾಗುತ್ತಿತ್ತು. 'ಇನ್ನೂ ಕೊಬ್ಬು ಇಳಿದಿಲ್ಲ ಮಗನಿಗೆ, ನಾನು ಇಳಿಸುತ್ತೇನೆ' ಎಂದು ನನಗೆ ಕೇಳುವಂತೆ ಹೇಳುತ್ತಿದ್ದರು. ಒಂದು ದಿನ ಸಾಯಂಕಾಲ ಪೇಟೆ ಬೀದಿಯಲ್ಲಿ ಸೈಕಲ್ಲಿನಲ್ಲಿ ಹೋಗುವಾಗ ಆ ಹೆಡ್ ಕಾನ್ಸ್ ಟೇಬಲ್ ತಮ್ಮ ಪತ್ನಿಯೊಂದಿಗೆ ಹೋಗುತ್ತಿದ್ದುದನ್ನು ನಾನು ಗಮನಿಸಿರದೆ ಅವರ ಪಕ್ಕದಲ್ಲೇ ಹಾದುಹೋದೆ. ಯಾವ ಕಾರಣಕ್ಕೋ ಹಿಂತಿರುಗಿ ನೋಡಿದರೆ ಆ ಮಹಾಶಯ ನನ್ನನ್ನು ಕೆಕ್ಕರಿಸಿ ನೋಡುತ್ತಿದ್ದ. ನಾನು ಉದ್ದೇಶ ಪೂರ್ವಕವಾಗಿ ಅವರ ಪಕ್ಕ ಹೋಗಿದ್ದೆನೆಂದು ಆತ ಭಾವಿಸಿರಬೇಕು. ನಾನು ಸುಮ್ಮನೆ ಮುಂದೆ ಹೋದೆ. ನಂತರ ಆ ವಿಷಯ ಮರೆತೇಹೋಗಿತ್ತು.

     ಮೇಲಿನ ಘಟನೆ ನಡೆದು ೨-೩ ದಿನಗಳಾಗಿರಬೇಕು. ಒಂದು ಭಾನುವಾರದ ದಿನ ಮಧ್ಯಾಹ್ನ ಊಟದ ಸಮಯದಲ್ಲಿ ಇನ್ನೇನು ಊಟಕ್ಕೆ ಕುಳಿತುಕೊಳ್ಳಬೇಕು ಆ ಸಮಯಕ್ಕೆ ಸರಿಯಾಗಿ ಒಬ್ಬ ಪೋಲಿಸ್ ಪೇದೆ ಬಂದು ನನ್ನನ್ನು 'ಸಾಹೇಬರು ಕರೆಯುತ್ತಿದ್ದಾರೆ,ಬರಬೇಕಂತೆ' ಎಂದು ಒತ್ತಾಯ ಮಾಡಿ ನನ್ನನ್ನು ಕರೆದುಕೊಂಡು ಹೋದ. ಮನೆಯಲ್ಲಿ ಎಲ್ಲರೂ ಊಟ ಮಾಡಿ ಬರುತ್ತಾನೆಂದು ಹೇಳಿದರೂ ಆತ ಕೇಳಿರಲಿಲ್ಲ. ದಾರಿಯಲ್ಲಿ ವಿಚಾರಿಸಿದರೆ ಆತನಿಗೆ ಏನೂ ವಿಷಯ ಗೊತ್ತಿರಲೇ ಇಲ್ಲ. ನಾನು ಠಾಣೆಯ ಒಳಗೆ ಕಾಲಿಡುತ್ತಿದ್ದಂತೆ ಒಬ್ಬ್ಬ ಧಡಿಯ ಪೇದೆ ನನ್ನ ಕುತ್ತಿಗೆ ಪಟ್ಟಿ ಹಿಡಿದು ಒಳಕ್ಕೆಳೆದು ತಳ್ಳಿದ ರಭಸಕ್ಕೆ ನಾನು ತತ್ತರಿಸಿ ಹೋಗಿ ಎದುರಿನ ಗೋಡೆಗೆ ಅಪ್ಪಳಿಸಿ ಡಿಕ್ಕಿ ಹೊಡೆದುಕೊಂಡು ಕೆಳಗೆ ಬಿದ್ದೆ. ಇನ್ನೊಬ್ಬ ನನ್ನ ಜುಟ್ಟು ಹಿಡಿದು ಮೇಲಕ್ಕೆ ಎತ್ತಿದ. ಕುರ್ಚಿಯಲ್ಲಿ ಆರಾಮವಾಗಿ ಕುಳಿತು ಇದನ್ನೆಲ್ಲಾ ನೋಡುತ್ತಿದ್ದ ಸಬ್ ಇನ್ಸ್ ಪೆಕ್ಟರರು ನನ್ನನ್ನು ಕುರಿತು 'ಯಾವತ್ತಾದರೂ ವಿಮಾನದಲ್ಲಿ ಹೋಗಿದ್ದೆಯಾ?' ಎಂದು ಕೇಳಿದರು. ನಾನು ಇಲ್ಲವೆಂದಾಗ 'ಇವನು ವಿಮಾನದಲ್ಲಿ ಹೋಗಬೇಕಂತೆ, ಹತ್ತಿಸಿರೋ' ಎಂದು ಅಪ್ಪಣೆ ಮಾಡಿದರು. ನನಗೆ ಇವರೆಲ್ಲಾ ಏಕೆ ಹೀಗೆ ಮಾಡುತ್ತಿದ್ದಾರೆಂದು ಗೊತ್ತೇ ಆಗಲಿಲ್ಲ. ಒಬ್ಬ ಪೇದೆ ನನ್ನ ಕೈಗಳನ್ನು ಹಿಂದಕ್ಕೆ ಮಾಡಿ ಹಗ್ಗದಿಂದ ಹೆಡೆಮುರಿ ಕಟ್ಟಿದ. ಅಷ್ಟರಲ್ಲಿ ಸರ್ಕಲ್ ಇನ್ಸ್ ಪೆಕ್ಟರರು ಅಲ್ಲಿಗೆ ಬಂದರು. (ಅವರು ಕೊಡಗು ಮೂಲದವರಾಗಿದ್ದು ಈ ಘಟನೆ ನಡೆದ ಸುಮಾರು ಎರಡು ವರ್ಷಗಳ ನಂತರ ಅಪಘಾತದಲ್ಲಿ ಮೃತರಾದರು.) ಅವರು ನನ್ನ ಕೈಗೆ ಕಟ್ಟಿದ್ದ ಹಗ್ಗ ಬಿಚ್ಚಿಸಿದರು. ಸಬ್ ಇನ್ಸ್ ಪೆಕ್ಟರರ ಕುರ್ಚಿಯಲ್ಲಿ ಕುಳಿತ ಅವರು ನನ್ನನ್ನುದ್ದೇಶಿಸಿ "ಏನೋ, ಚಾಕು, ಚೂರಿ ಹಾಕ್ತೀಯಾ? ನೋಡಕ್ಕೆ ಹೀಗಿದಿಯಾ, ದಾದಾಗಿರಿ ಮಾಡ್ತೀಯಾ?" ಎಂದು ಗದರಿಸಿದರು. ನಾನು "ನೋಡಿ, ನನಗೇನೂ ಗೊತ್ತಿಲ್ಲ. ವಿಷಯವೇ ತಿಳಿಯದೆ ನಾನು ಏನು ಹೇಳಲಿ?" ಎಂದಾಗ ಅವರು ಟೇಬಲ್ಲಿನ ಮೇಲೆ ಇದ್ದ ಕಾಗದ ಓದಲು ಕೊಟ್ಟರು. ಅದು ಹೆಡ್ ಕಾನ್ಸ್ ಟೇಬಲ್ ಮಹಾಶಯರು ನನ್ನ ಬಗ್ಗೆ ಕೊಟ್ಟ ದೂರಾಗಿತ್ತು. ಅದರಲ್ಲಿ 'ನಾನು ಹೆಡ್ ಕಾನ್ಸ್ ಟೇಬಲ್ಲರಿಗೆ ನನ್ನ ವಿರುದ್ಧ ಸಾಕ್ಷಿ ಹೇಳಿದರೆ ಚಾಕು ಹಾಕಿ ದೇವಿಗೆರೆಗೆ ಹಾಕುತ್ತೇನೆಂದು ಬೆದರಿಕೆ ಹಾಕಿದ್ದೇನೆಂದೂ, ತನಗೆ ರಕ್ಷಣೆ ಕೊಡಬೇಕೆಂದೂ' ಬರೆದಿದ್ದರು. (ದೇವಿಗೆರೆ ಅನ್ನುವುದು ಹಾಸನದ ಗಾಂಧಿಬಜಾರಿನಲ್ಲಿರುವ ದೇವಸ್ಥಾನದ ಕೊಳ.) ನಾನು "ಇದೆಲ್ಲಾ ಸುಳ್ಳು. ಅವರಿಗೆ ನಮಸ್ಕಾರ ಮಾಡಲಿಲ್ಲ, ಗೌರವ ಕೊಡಲಿಲ್ಲ ಎಂದು ಸುಳ್ಳು ದೂರು ಕೊಟ್ಟಿದ್ದಾರೆ, ನನಗೆ ಬುದ್ಧಿ ಕಲಿಸುತ್ತೇನೆಂದು ಹೇಳಿದ್ದಾರೆ" ಎಂದು ನಿಜ ಸಂಗತಿ ಹೇಳಿದೆ. ದೂರು ಕೊಟ್ಟ ಮಹಾಶಯ "ಮೊನ್ನೆ ನಾನು ಮತ್ತು ನನ್ನ ಹೆಂಡತಿ ಪೇಟೆಯಲ್ಲಿ ಹೋಗುವಾಗ ನನ್ನ ಹೆಂಡತಿಗೆ ಸೈಕಲ್ಲಿನಲ್ಲಿ ಡಿಕ್ಕಿ ಹೊಡೆದು ಹೋದ" ಎಂದು ಮತ್ತೊಂದು ಹಸಿಸುಳ್ಳು ಹೇಳಿದ. ಸರ್ಕಲ್ ಇನ್ಸ್ ಪೆಕ್ಟರರು ಕುರ್ಚಿಯಿಂದ ಧಡಕ್ಕನೆ ಎದ್ದು ನನಗೆ ಹೊಡೆಯಲು ಕೈ ಎತ್ತಿದಾಗ ನಾನು ಕೈ ಅಡ್ಡ ಇಟ್ಟು ತಡೆದು "ತಡೆಯಿರಿ. ಈ ದೂರಿನ ಮೇಲೆ ಕೇಸು ಹಾಕುವುದಿದ್ದರೆ ಹಾಕಿರಿ. ಹೊಡೆಯುವುದೇಕೆ? ಇರುವ ಹತ್ತು-ಹನ್ನೊಂದು ಕೇಸುಗಳ ಜೊತೆಗೆ ಈ ಕೇಸೂ ಆಗಲಿ. ಆದರೆ ಒಂದಂತೂ ನಿಜ. ಈ ಸುಳ್ಳು ದೂರಿನ ಮೇಲೆ ಕೇಸು ಹಾಕುವುದಾದರೆ ನಾನು ಈ ದೂರನ್ನು ಖಂಡಿತಾ ನಿಜ ಮಾಡುತ್ತೇನೆ. ನಾನು ಸತ್ತರೂ ಪರವಾಗಿಲ್ಲ. ಈ ಮನಷ್ಯನನ್ನು ಖಂಡಿತಾ ತೆಗೆದೇ ಸಾಯುತ್ತೇನೆ" ಎಂದು ಶಾಂತವಾಗಿ ಆದರೆ ಧೃಢವಾಗಿ ದೂರು ಕೊಟ್ಟಾತನನ್ನು ನೋಡುತ್ತಾ ಹೇಳಿದೆ. ಆತ ಬೆವೆತು ಹೋಗಿದ್ದ. ಇನ್ಸ್ ಪೆಕ್ಟರರೂ ಅವಾಕ್ಕಾಗಿದ್ದರು. ಅವರು ಸಾವರಿಸಿಕೊಂಡು "ಹೋಗಲಿ, ತಪ್ಪಾಯಿತೆಂದು ಬರೆದುಕೊಡು. ಬಿಟ್ಟುಬಿಡುತ್ತೇನೆ" ಎಂದರು. ಏನೂ ತಪ್ಪು ಮಾಡದೆ ತಪ್ಪಾಯಿತೆಂದು ಬರೆದುಕೊಡಲು ನಾನು ನಿರಾಕರಿಸಿ ಏನು ಬೇಕಾದರೂ ಮಾಡಬಹುದೆಂದು ಹೇಳಿದೆ. ಇನ್ಸ್ ಪೆಕ್ಟರರು ದೂರು ಕೊಟ್ಟಾತನನ್ನು ನೋಡಿದರು. ಅವನು ತಲೆತಗ್ಗಿಸಿ ತನ್ನ ದೂರು ಅರ್ಜಿಯನ್ನು ತೆಗೆದುಕೊಂಡು ಹೊರಗೆ ಹೋದ. ಅದೇ ಸಮಯಕ್ಕೆ ನನ್ನ ತಂದೆಯವರು ಶ್ರೀ ಹಾರನಹಳ್ಳಿ ರಾಮಸ್ವಾಮಿಯವರೊಂದಿಗೆ ಠಾಣೆಗೆ ಬಂದರು. ಇನ್ಸ್ ಪೆಕ್ಟರರು ಮೆಲ್ಲಗೆ ನನ್ನ ಕಿವಿಯಲ್ಲಿ "ಇಲ್ಲಿ ನಡೆದ ವಿಷಯ ಹೊರಗೆ ಬಾಯಿ ಬಿಟ್ಟರೆ ಹೂತುಹಾಕಿಬಿಡುತ್ತೇನೆ" ಎಂದು ಹೇಳಿ, ಶ್ರೀ ಹಾರನಹಳ್ಳಿ ರಾಮಸ್ವಾಮಿಯವರಿಗೆ 'ವಿಚಾರಣೆಗಾಗಿ ಕರೆಸಿದ್ದೆವೆಂದೂ ಕರೆದುಕೊಂಡು ಹೊಗಬಹುದೆಂದೂ' ಹೇಳಿದರು. ನಾನು ಮನೆಗೆ ಬಂದಾಗ ಸಂಜೆ ಐದು ಘಂಟೆಯಾಗಿತ್ತು. ಮನೆಯಲ್ಲಿ ಯಾರೂ ಊಟ ಮಾಡಿರಲಿಲ್ಲ. ಒಟ್ಟಿಗೇ ಊಟ ಮಾಡಿದೆವು. ನಾನು 'ಸರಿಯಾಗಿ' ಇರಬೇಕೆಂದು ಅಪ್ಪ, ಅಮ್ಮ ಬುದ್ಧಿ ಹೇಳಿದರು. ಒಂದಂತೂ ನಿಜ. ನನ್ನ ತಂದೆಯವರು ಕೋರ್ಟಿನಲ್ಲಿ ಶಿರಸ್ತೇದಾರರಾಗಿರದಿದ್ದಿದ್ದರೆ, ಶ್ರೀ ಹಾರನಹಳ್ಳಿ ರಾಮಸ್ವಾಮಿ ಮತ್ತು ಶ್ರೀ ಬಿ.ಎಸ್. ವೆಂಕಟೇಶಮೂರ್ತಿಯವರುಗಳ ಸಕಾಲಿಕ ಸಹಾಯ ದೊರೆಯದಿದ್ದಿದ್ದರೆ, ನಾನು ಹೆದರಿದ್ದರೆ ಮತ್ತು ಪರಿಸ್ಥಿತಿಯನ್ನು ಧೃಢವಾಗಿ ಎದುರಿಸದೇ ಇದ್ದಿದ್ದರೆ ಯಾವುದಾದರೂ ಸಂದರ್ಭದಲ್ಲಿ ನಾನು ಶಾಶ್ವತವಾಗಿ ಅಂಗವಿಕಲನಾಗಿರುತ್ತಿದ್ದೆ ಅಥವಾ ಈ ಲೋಕದಿಂದಲೇ ಕಣ್ಮರೆಯಾಗಿರುತ್ತಿದ್ದೆ!
-ಕ.ವೆಂ.ನಾಗರಾಜ್.

3 ಕಾಮೆಂಟ್‌ಗಳು:

  1. ಚೇತನ್ ಕೋಡುವಳ್ಳಿ
    22JUL2010 4:03
    ಸೂಪರ್
    ಮುಂದುವರೆಯಲಿ ನಾಗರಾಜವ್ರೆ

    ಸುರೇಶ್ ನಾಡಿಗ್
    22JUL2010 5:29
    nagarajare, hats off. nimma kathe Odutiddare myella bevarutte. neevu intha kastagalannu edurisiddira endu tilliyuvude illa. nimma nagu mare machutte. nanu nimma abhimani yagiddene.

    Kavinagaraj
    22JUL2010 7:31
    ಮೆಚ್ಚಿದ್ದಕ್ಕೆ ಧನ್ಯವಾದ, ಸುರೇಶ್.

    Kavinagaraj
    22JUL2010 7:30
    ಧನ್ಯವಾದ, ಮೆಚ್ಚಿದ್ದಕ್ಕೆ, ಚಿಕ್ಕೂ.

    ಬೆಳ್ಳಾಲ ಗೋಪೀನಾಥ ರಾವ್
    22JUL2010 7:48
    ನಿಜ ಕವಿಯವರೇ
    ನಿಮ್ಮ ಅನುಭವ ಕರುಳು ಹಿಂಡುವಂತಿದೆ. ಸಮಾಜ ಘಾತುಕರು ನಾಯಿಯ ಹಾಗೆ ಎಂತ ಎಲ್ಲೋ ಓದಿದ್ದೆ ನಾವು ಹೆದರಿದರೆ ನಮ್ಮನ್ನು ಹೆದರಿಸುತ್ವೆ, ಅದೇ, ನಾವು ಹಿಂದಿರುಗಿ ನಿಂತರೆ ತಾನೇ ಓಡುತ್ವೆ, ನನಗೂ ಇಂತಹ ಅನುಭವ ಆಗಿದೆ, ನಿಮ್ಮೊಡನೆ ಪ್ರಹರಿಯಲ್ಲಿ ಹಂಚಿಕೊಳ್ಳುತ್ತೇನೆ.
    ನನ್ನ ತಮ್ಮನು ಸುಮಾರು ೨೮ ದಿನಗಳಿಂದ ಅಸ್ವಸ್ಠನಾಗಿದ್ದ , ಆಸ್ಪತ್ರೆಯಲ್ಲೂ ಇದ್ದ,ನಿನ್ನೆ ತಾನೇ ಅವನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿದೆವು.
    ಅದಕ್ಕೇ ನನ್ನ ಬ್ಲಾಗ್ ಮುಂದುವರಿಸಲಾಗಲಿಲ್ಲ. ಆದರೆ ಒಂದಂತೂ ನಿಜ ಆ ಮೇಲಿನ ಶಕ್ತಿಯೆದುರಿಗೆ ಮಾನವ ಮೂಕ ಪ್ರೇಕ್ಷಕನಷ್ಟೇ.

    Kavinagaraj
    22JUL2010 9:44
    ನಮಸ್ಕಾರ ಗೋಪಿನಾಥ್. ನಿಮ್ಮ ಸಹೋದರ ಶೀಘ್ರ ಗುಣಮುಖನಾಗಲಿ ಎಂದು ಹಾರೈಸುತ್ತೇನೆ. ನಿಮ್ಮ ಮನಮುಟ್ಟುವ ಕಳಕಳಿಗೆ ಕೃತಜ್ಞನಾಗಿದ್ದೇನೆ.

    ಹೊಳೆ ನರಸೀಪುರ ಮಂಜುನಾಥ
    22JUL2010 9:40
    ಕವಿ ನಾಗರಾಜರೆ, ಆ ಇ೦ದಿರಮ್ಮ ಹೇರಿದ ತುರ್ತು ಪರಿಸ್ಥಿತಿಯಿ೦ದಾಗಿ ಹೇಗೆ ಜನಸಾಮಾನ್ಯರು ಕಷ್ಟಕೋಟಲೆಗಳನ್ನೆದುರಿಸಿದರು ಅನ್ನುವುದು ನಿಮ್ಮ ಲೇಖನಗ
    ಳಿ೦ದ ಮನದಟ್ಟಾಗುತ್ತಿದೆ. ಆ ಪರಿಸ್ಥಿತಿಯಲ್ಲೂ ನಿಮ್ಮ ಆತ್ಮವಿಶ್ವಾಸ ಕುಗ್ಗದೆ ಇದ್ದದ್ದು ಇತರರಿಗೆ ಖ೦ಡಿತ ಮಾರ್ಗದರ್ಶಿಯಾಗಿದೆ.

    Kavinagaraj
    22JUL2010 9:46
    ಆತ್ಮೀಯ ಮಂಜು, ನಿಮ್ಮ ಬೆನ್ನು ತಟ್ಟುವ ಪ್ರತಿಕ್ರಿಯೆಗೆ ಹೃತ್ಪೂರ್ವಕ ಕೃತಜ್ಞತೆಗಳು.

    Komal
    22JUL2010 9:44
    ನಾಗರಾಜರೆ, ನಿಮ್ಮ ಜೀವನದಲ್ಲಿ ಇಷ್ಟೆಲ್ಲಾ ನಡೆದಿದೆಯೇ. ಆಶ್ಚರ್ಯ ಮತ್ತು ಭಯವಾಗುತ್ತೆ. ನಿಮ್ಮ ಆತ್ಮ ಸ್ಥೈರ್ಯ ಮೆಚ್ಚಲೇಬೇಕು.
    ಧನ್ಯವಾದಗಳು

    Kavinagaraj
    22JUL2010 9:47
    ಪ್ರಿಯ ಕೋಮಲ್ ಕುಮಾರ್, ನಿಮ್ಮ ಪ್ರತಿಕ್ರಿಯಗೆ ವಂದನೆಗಳು.

    ಹರಿಹರಪುರಶ್ರೀಧರ್
    22JUL2010 9:51
    ಸಂಪದ ಮಿತ್ರರೇ,
    ಈಘಟನೆ ನಡೆದದ್ದು ೧೯೭೫ ರ ತುರ್ತು ಪರಿಸ್ಥಿತಿಯಲ್ಲಿ. ನಾನು ೧೯೭೪ ಜೂನ್ ತನಕ ಹಾಸನದಲ್ಲಿ ಓದುತ್ತಿದ್ದವನು ನಾಗರಾಜರ ಒಡನಾಟದಲ್ಲಿದ್ದವನೇ. ಆನಂತರ ನಾನು ತುರ್ತುಪರಿಸ್ಥಿತಿಯ ಕಾಲದಲ್ಲಿ ಬೆಂಗಳೂರಿನಲ್ಲಿದ್ದೆ.ಆಗ ಈಗಿನಂತೆ ಟಿ.ವಿ.ಮಾಧ್ಯಮಗಳಿಲ್ಲ. ಪತ್ರಿಕೆಯ ಬಾಯ್ ಮುಚ್ಚಲಾಗಿತ್ತು. ತುರ್ತು ಪರಿಸ್ಥಿತಿಯ ವಿರುದ್ಧ ನಡೆಯುತ್ತಿದ್ದ ಆಂಧೋಳನದ ಸುದ್ಧಿಗಾಗಿಯೇ ಕಹಳೆ ಎಂಬ ಗುಪ್ತಪತ್ರಿಕೆ ನಡೆಯುತ್ತಿತ್ತು. ಅದರಲ್ಲಿ ಕೆಲವು ಸುದ್ಧಿ ತಿಳಿಯಬಹುದಾಗಿತ್ತು.ಆಗಿನ ಭೂಗತ ಕೆಲಸ ನೆನಸಿಕೊಂಡರೆ ಈಗಲೂ ಮೈ ನವಿರೇಳುತ್ತದೆ.ಎಂತಹಾ ಕೆಚ್ಚು! ಪ್ರತಿದಿನ ಜೈಲು ಸೇರುತ್ತಿದ್ದ ನೂರಾರು ದೇಶಭಕ್ತರು. ಸ್ವಾತಂತ್ರ್ಯಾನಂತರದ ಮೊದಲನೆಯ ಅತಿ ದೊಡ್ದ ಹೋರಾಟ.೧೯೭೫-೭೬ರ ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದ ನಂತರ ಮತ್ತೆ ಆ ದುಸ್ಸಾಹಸವನ್ನು ಯಾವ ಸರ್ಕಾರವೂ ಮಾಡಲಿಲ್ಲ. ಅಂದು ಜೈಲಿನಲ್ಲಿ ಹೋರಾಟಗಾರರಿಗೆ ಕೊಡುತ್ತಿದ್ದ ಚಿತ್ರ ಹಿಂಸೆಯನ್ನು ಇಂದು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಈಗಿನ ರೈತ ಚಳುವಳಿ ಇರಬಹುದು, ಭಾಷಾ ಚಳುವಳಿ ಇರಬಹುದು, ಯಾವುದೂ ತುರ್ತುಪರಿಸ್ಥಿತಿಯ ವಿರುದ್ಧದ ಹೋರಾಟಕ್ಕೆ ಸಾಟಿಯಲ್ಲ. ನಾಗರಾಜರು ಕಡಕ್ ವಾದಿ. ಯಾವುದನ್ನೂ ಕಾಂಪ್ರಮೈಸ್ ಮಾಡಿಕೊಳ್ಳುವ ಸ್ವಭಾವದವರಲ್ಲ.ಹೀಗಾಗಿ ತುಂಬಾ ಪೆಟ್ಟು ತಿಂದವರು.ಅಪರೂಪದಲ್ಲಿ ಅಪರೂಪದ ವ್ಯಕ್ತಿ.

    Kavinagaraj
    22JUL2010 10:11
    ಮಿತ್ರ ಶ್ರೀಧರ್, ನಿಮ್ಮ ಪ್ರತಿಕ್ರಿಯೆ ನನಗೆ ಪ್ರೇರಕ. ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  2. ಸರ್.. ನಿಜಕ್ಕೂ ಅದ್ಭುತ ಅನುಭವಗಳು ನಿಮ್ಮವು..!

    ಪ್ರತ್ಯುತ್ತರಅಳಿಸಿ
  3. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅನೇಕರನ್ನು ಜೈಲಿಗೆ ಅಟ್ಟಿದ್ದ ಬಗ್ಗೆ ಕೇಳಿದ್ದೆ. ಆದರೆ ಇಷ್ಟೆಲ್ಲಾ ಭಯಂಕರವಾಗಿ ಪೊಲೀಸರು ವರ್ತಿಸಿದ್ದರೆಂದು ತಿಳಿದಾಗ ಖೇದವಾಯಿತು...ಮನುಷ್ಯ ಕಷ್ಟದಲ್ಲಿರುವಾಗ ಎಲ್ಲರೂ ಕೆಳಗೆ ತಳ್ಳಲು ನೋಡುತ್ತಾರೆಂಬುದು ಕಟುಸತ್ಯ...ನಿಮ್ಮ ಸ್ಥೈರ್ಯ ಕಂಡು ನನಗೆ ವೀರ ಸಾವರ್ಕರ್ ಅವರ ನೆನಪಾಯಿತು...ಹಂಚಿಕೊಡದ್ದಕ್ಕಾಗಿ ಧನ್ಯವಾದಗಳು...ವಂದೇ ಮಾತರಂ

    ಪ್ರತ್ಯುತ್ತರಅಳಿಸಿ